ಆನೆ ಕುದುರೆ ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು
ಏರುತ್ತಲೇ ಹೋದ ವೇಗ, ದೂರದಿ ಕಂಡ
ಏರು ಎತ್ತರದ ಹಂಪ್ ಅರಿವಿಲ್ಲದೇ ತುಸು ತುಸುವೇ
ಇಳಿದು ನಿಂತು ಏರಿದ ವೇಗ ತುಸು ದೂರವೂ ಕ್ರಮಿಸಿಲ್ಲ ತಿರುವಿನಲ್ಲಿ ಒಟ್ಟಾರೆ
ಹದಿನೆಂಟು ಚಿಕ್ಕ ಹಂಪ್ ಗಳು, ಮತ್ತೆ ಕುಸಿದ ವೇಗ
ಛೇ! ಈ ಹಂಪ್ ಗಳಿರದಿದ್ದರೆ ಒಂದೇ ಏಟಿಗೆ ಸಾಗಿಬಿಡುತಿದ್ದೆ ಗಮ್ಯದೆಡೆಗೆ
ಎನ್ನುವ ಹುಂಬತನ ಆಗಸದಿ ಮೋಡಗಳು ಸಮುದ್ರದಿ ಮಾರುತಗಳು
ಯಾವ ಹಾದಿಯಾದರೇನು ಅಡೆತಡೆಗಳು ಯಥೇಚ್ಛವೇ
ಮುಂದಿದೆ ಕಿರು ಸರ್ಕಲ್ ಇಲ್ಲಿಂದಲೇ ಮುಂದಿನ ದಾರಿಯ ಆಯ್ಕೆ ಎಲ್ಲರೂ
ಸಾಗಿದ ಹೆದ್ದಾರಿ ಮಧ್ಯೆ ಬಿಳಿ ಪಟ್ಟಿ ಹೊಳೆಯುವ ಕಪ್ಪು ಬಣ್ಣದ ಮಿನುಗು
ಯಾವ ತಿರುವೂ ಇಲ್ಲದ ನೇರ ಹಾದಿ ದಿಟವೇ
ಪಕ್ಕದ ಹಚ್ಚ ಹಸುರ ಬೇಲಿ ಏರಿಳಿತಗಳ ಮಣ್ಣಿನ ಹಾದಿ ನೇಸರ ಕಸೂತಿ
ಬೇವಿನೆಲೆಗಳ ಮರ್ಮರ ಅರಿವಿಲ್ಲದೇ ಹೊಮ್ಮುವ ರಾಗಗಳು ಸಜೀವ ಸ್ಪರ್ಶ
ಜೀವನ ಸಮರ್ಪಣದ ಹಾದಿಯಿದು ರೂಢಿಯ ಹಾದಿಯಲ್ಲ
ಹೊರಗೆ ಸಿಡಿಯುವ ಬಿಸಿಲು ಏರುತಿರುವ ದಾಹ ಹಾದಿ ಬದಿಯಲ್ಲಿ ಕಾಣುವ
ಮರಗಳ ತುಸು ನೆರಳೇ ನಮ್ಮ ಸ್ನೇಹಗಳು ಸಿಡಿಯುವ ಬಿಸಿಲ ತಾಪದಿ ಆ
ನೆರಳಲ್ಲಿ ಹಾದು ಹೋಗುವ ಗಾಳಿ ಸವಿ ಕಂಪು ಸುಗಂಧದ ಸ್ಪರ್ಶ
ಕುಸುಮಿತ ತೋಪಿನ ಹೂವಿನ ನವಿರು ಪರಿಮಳ,
ಉರಿಬಿಸಿಲ ಪ್ರಖರತೆ ಊಹೂ ಹೆಜ್ಜೆಗಳು ನಿಲ್ಲುವ ಹಾಗಿಲ್ಲ ಮಾಡಿಕೊಂಡ
ಪಣಗಳು ಕೊಟ್ಟ ಭಾಷೆಗಳು ದೂರ ದೂರ ಪಯಣ ಸಾಗಿದೆ ಹೀಗೆ ಸಾಗುತ್ತಿದೆ
ಯಾವ ಹಾದಿಯಾದರೂ ಕೊನೆಗೆ ನಿನ್ನಲ್ಲೇ ಲೀನ ನಮ್ಮ ಆನೆ ಕುದುರೆ
ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು ನಿನ್ನ ಪ್ರತಿರೂಪ
ನಮ್ಮ ಅಂತರಾಂತ್ಮ ಅದಕೆ ನಿಷ್ಠೆಯೊಂದೇ ನಿನ್ನ ಪರಿಗಣನೆಯಾ
ಮಂಜುಳ ಡಿ ಬೆಂಗಳೂರಿನವರು
ಇಲ್ಲಿಯವರೆಗೆ ಇವರ ಮೂರು ಪುಸ್ತಕಗಳು ಪ್ರಕಟಗೊಂಡಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ