Advertisement
ಮಠದ ಕೇರಿ ಮಕ್ಕಳೂ… ಬೆಳ್ಳುಳ್ಳಿ ಫ್ರೈಡ್ ರೈಸೂ..: ಮಧುರಾಣಿ ಕಥಾನಕ

ಮಠದ ಕೇರಿ ಮಕ್ಕಳೂ… ಬೆಳ್ಳುಳ್ಳಿ ಫ್ರೈಡ್ ರೈಸೂ..: ಮಧುರಾಣಿ ಕಥಾನಕ

ಸಂಜೆಯಾಗುತ್ತಿದ್ದಂತೆ ಕೊಟ್ರಪ್ಪನೂ ಅವನ ಇಬ್ಬರು ಅವಳಿ ಮಕ್ಕಳಾದ ಮಂಗಳಮ್ಮ ಹಾಗೂ ಮಂಜುನಾಥರೂ ಮುಖ ತೊಳೆದು, ತಲೆ ಬಾಚಿ, ಹಣೆಗೆ ದೊಡ್ಡದಾಗಿ ಈಬತ್ತಿ ಪಟ್ಟುಗಳನ್ನು ಹೊಡೆದು ವ್ಯಾಪಾರಕ್ಕಾಗಿ ಟೊಂಕ ಕಟ್ಟಿ ನಿಲ್ಲುವವರು. ಮೂರೂ ಜನಕ್ಕೂ ತಲೆ ಎತ್ತಲಾಗದಷ್ಟು ಅವಿಶ್ರಾಂತ ಕೆಲಸ! ಮ್ಯಾಗಿಯ ಸೂಪರ್ ಹಿಟ್ ಗೆಲುವು ಕೊಟ್ರಪ್ಪನಿಗೆ ನವರಣೋತ್ಸಾಹ ಹುಟ್ಟಿಸಿ ಮೆಲ್ಲನೆ ಅವನು ಒಂದು ಬಾಣಲಿಗೆ ಎಣ್ಣೆ ಸುರುವಿ ಮೆಣಸಿನಕಾಯಿ ಬಜ್ಜಿ ಶುರುವಿಟ್ಟ. ಆ ಹುಡುಗರು ನಮ್ಮ ಹಾಗೆ ಖಾರದ ಬಜ್ಜಿಯನ್ನು ಬರೀ ಬಾಯಿಗೆ ತಿನ್ನುವವರಲ್ಲ ಎನ್ನುವುದು ತಿಳಿಯಲು ಅವನಿಗೆ ಒಂದು ವಾರ ಬೇಕಾಯ್ತು.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

 

ಕೊಟ್ರಪ್ಪನ ಅಂಗಡಿಗೆ ಊರಿನ ಹೊರಾವರಣದ ಕಾಲೇಜಿನ ಹುಡುಗರು ನೊಣದಂತೆ ಮುತ್ತುತ್ತಿದ್ದರು. ಉತ್ತರ ಭಾರತದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಲ್ಲಿಗೆ ಎಡತಾಕಲು ಹಲವಾರು ಕಾರಣಗಳು ಇದ್ದವು. ಒಂದು ಎಸ್ಟಿಡಿ ಬೂತ್ ಇಟ್ಟುಕೊಂಡಿದ್ದ ಅವನು ಹಲ್ದಿರಾಮ್ಸ್ ಕುರುಕಲಿನ ದೊಡ್ಡ ಸರಕನ್ನೇ ಇಟ್ಟಿದ್ದನು. ಜೊತೆಗೆ ದೋ ಮಿನಟ್ ಮ್ಯಾಗಿಯನ್ನು ಅಲ್ಲೇ ಬೇಯಿಸಿ ಬಟ್ಟಲಿಗೆ ಹಾಕಿ ಕೊಡುವ ತರಲೆ ಕೆಲಸವನ್ನೂ ಇತ್ತೀಚೆಗೆ ಶುರುವಿಟ್ಟುಕೊಂಡಿದ್ದ ಹಾಗೂ ನಮ್ಮೂರಲ್ಲಿ ಹೀಗೆ ಮಾಡಿದ ಮೊದಲಿಗನಾಗಿದ್ದ. ಇವೇ ಕಾರಣಗಳಿಂದ ಅಂಗಡಿಗೆ ದಿನೇ ದಿನೇ ಹುಡುಗರ ಬರುವಿಕೆ ಹೆಚ್ಚಾಗಿತ್ತು. ಸಂಜೆಗಳಲ್ಲಿ ಅವನ ಅಂಗಡಿ ಮುಂಗಟ್ಟು ಗಿಜಿಗುಡುತ್ತಿದ್ದುದು ಅಕ್ಕಪಕ್ಕದ ಮನೆಯವರ ಹೊಟ್ಟೆ ಕಿಚ್ಚಿಗೊಂದು ಸರಿಯಾದ ಕಾರಣವೇ ಆಗಿತ್ತು. ಮೆಲ್ನೋಟಕ್ಕೇ ಅವನ ದಿನದ ದುಡಿಮೆಯೂ ಅಂದಾಜಾಗುತ್ತಿತ್ತು.

ನಮ್ಮ ಮನೆಯ ಹಿತ್ತಲಿಗೆ ಬಂದು ಎಡಕ್ಕೆ ಹೊರಳಿದರೆ ಅವರ ಮನೆಯ ಮುಂದಿನ ಸಮಸ್ತವೂ ನಾಟಕರಂಗದಂತೆ ಗೋಚರಿಸುತ್ತಿತ್ತು. ಸಂಜೆಯಾಗುತ್ತಿದ್ದಂತೆ ಕೊಟ್ರಪ್ಪನೂ ಅವನ ಇಬ್ಬರು ಅವಳಿ ಮಕ್ಕಳಾದ ಮಂಗಳಮ್ಮ ಹಾಗೂ ಮಂಜುನಾಥರೂ ಮುಖ ತೊಳೆದು, ತಲೆ ಬಾಚಿ, ಹಣೆಗೆ ದೊಡ್ಡದಾಗಿ ಈಬತ್ತಿ ಪಟ್ಟುಗಳನ್ನು ಹೊಡೆದು ವ್ಯಾಪಾರಕ್ಕಾಗಿ ಟೊಂಕ ಕಟ್ಟಿ ನಿಲ್ಲುವವರು. ಮೂರೂ ಜನಕ್ಕೂ ತಲೆ ಎತ್ತಲಾಗದಷ್ಟು ಅವಿಶ್ರಾಂತ ಕೆಲಸ! ಮ್ಯಾಗಿಯ ಸೂಪರ್ ಹಿಟ್ ಗೆಲುವು ಕೊಟ್ರಪ್ಪನಿಗೆ ನವರಣೋತ್ಸಾಹ ಹುಟ್ಟಿಸಿ ಮೆಲ್ಲನೆ ಅವನು ಒಂದು ಬಾಣಲಿಗೆ ಎಣ್ಣೆ ಸುರುವಿ ಮೆಣಸಿನಕಾಯಿ ಬಜ್ಜಿ ಶುರುವಿಟ್ಟ. ಆ ಹುಡುಗರು ನಮ್ಮ ಹಾಗೆ ಖಾರದ ಬಜ್ಜಿಯನ್ನು ಬರೀ ಬಾಯಿಗೆ ತಿನ್ನುವವರಲ್ಲ ಎನ್ನುವುದು ತಿಳಿಯಲು ಅವನಿಗೆ ಒಂದು ವಾರ ಬೇಕಾಯ್ತು. ಹೀಗೆ ಬಜ್ಜಿ ವ್ಯಾಪಾರ ಬೋರಲು ಬಿದ್ದು ಬಾಣಲೆಯನ್ನು ಎತ್ತಿ ಮೂಲೆಗಿಟ್ಟು ಸುಮ್ಮನಾದ ಕೊಟ್ರಪ್ಪನು ಖಾರದ ಹೊಡೆತಕ್ಕೆ ಸಿಕ್ಕಿ ಬೇಸರಿಸಿಕೊಂಡಿದ್ದ ಹುಡುಗರನ್ನು ಓಲೈಸಲು ಮತ್ತೆ ಅಂಗಡಿಯೊಳಗೆ ಸೆಳೆದುಕೊಳ್ಳಲು ಈ ಬಾರಿ ಸ್ವಲ್ಪ ದುಬಾರಿಯಾದ ಹಲ್ದಿರಾಮ್ ರಸಗುಲ್ಲ ತಂದಿಟ್ಟಿದ್ದನು. ಹಸಿದ ಹೊಟ್ಟೆಯಲ್ಲಿ ಓಡಿ ಬಂದು ಮ್ಯಾಗಿ ತಿನ್ನುತ್ತಿದ್ದವರ ಬಳಿಗೆ ಮೆಲ್ಲಗೆ ಹೋಗಿ ಕಿವಿಯ ಕಡೆ ಬಗ್ಗಿ “ಇಧರ್ ಹಲ್ದಿರಾಮ್ ರಸಗುಲ್ಲಾ ಹೈ..!” ಎಂದು ಹೇಳಿ ಬರುತ್ತಿದ್ದನು.

ಶುಭ್ರ ಬಿಳಿ ದಿರಿಸಿನ ಹೆಗಲ ಮೇಲೊಂದು ಬಿಳಿಚೌಕ, ಬಿಳಿ ಹುರಿ ಮೀಸೆಯ ಕೊಟ್ರಪ್ಪನ ನಿಲುವು ಯಾರಿಗಾದರೂ ಭಯ ಗೌರವ ಹುಟ್ಟಿಸುವಂತಿತ್ತು. ಸುಮಾರು ಐವತ್ತರ ಇಳಿವಯಸ್ಸಿನ ಅವನೊಮ್ಮೆ ಗುಡುಗಿಬಿಟ್ಟರೆ ಇಡೀ ಮನೆ ನಡುಗಿ ಮೂಲೆ ಸೇರುತ್ತಿತ್ತು. ಇಂತಹ ಮಹಿಮಾನ್ವಿತನೆದುರು ಏನೂ ಮಾತನಾಡಲು ತೋಚದೆ ಹುಡುಗರು ಸಹಾ ಹುಸಿನಕ್ಕು ಇವನ ಕಿರುಕುಳ ಸಹಿಸಿ ಸಮ್ಮನಾಗುತ್ತಿದ್ದರು. ಅವನು ಕೋಪಿಸಿಕೊಂಡು ಕೆಂಡಾಮಂಡಲನಾದರೆ ಮಗಳು ಮಂಗಳಿಯನ್ನುಳಿದು ಬೇರೆ ಯಾರೂ ಅವನ ಕೋಪ ತಗ್ಗಿಸುವವರಿಲ್ಲ. ಮಗಳ ಮೇಲೆ ಇನ್ನಿಲ್ಲದ ಪ್ರೀತಿ ಅವನಿಗೆ.

ಒಬ್ಬನೇ ಮಗನಾದರೂ ಮಂಜನ ಮೂರ್ಖತನ ಕೊಟ್ರಪ್ಪನನ್ನು ಆಗಾಗ ಕೆರಳಿಸುತ್ತಿತ್ತು. ಸಿಟ್ಟು ಬಂದಾಗಲೇನಾದರೂ ಮಂಜ ಎದುರು ಹಾಯ್ದರೆ ಅಂದು ಅವನ ಕಥೆ ಮುಗಿಯುತ್ತಿತ್ತು. ಎಲ್ಲರೆದುರೇ ಹಿಡಿದು ಹಿಗ್ಗಾಮುಗ್ಗಾ ಜಾಡಿಸಿಬಿಡುವನು. ಮಂಜನ ಬಾಲಿಶ ಕೃತ್ಯಗಳ ಬಗ್ಗೆ ಕೊಟ್ರಪ್ಪನಿಗೆ ಸದಾ ತಕರಾರು, ತಾತ್ಸಾರವಿರುತ್ತಿತ್ತು. ಇವೆಲ್ಲ ಒಳಸುಳಿಗಳು ನನ್ನ ತಮ್ಮನಿಂದ ನನಗೆ ತಿಳಿದು ಬರುತ್ತಿದ್ದವು. ಮಂಜನು ವಯಸ್ಸಿನಲ್ಲಿ ನಮಗಿಂತ ಎಷ್ಟೋ ದೊಡ್ಡವನಿದ್ದರೂ ಅವನ ಬುದ್ಧಿಮತ್ತೆಗೆ ಸುಮಾರು ಹತ್ತು ವರ್ಷ ಕಿರಿಯವನಾದ ನನ್ನ ತಮ್ಮನ ಸ್ನೇಹವೇ ಸಾಕಿತ್ತು.

ಹೀಗಿರಲೊಮ್ಮೆ ಕೊಟ್ರಪ್ಪನ ರಸಗುಲ್ಲಾ ಜಾಹೀರಾತಿನಿಂದ ಬೇಸರಗೊಂಡ ಹುಡುಗನೊಬ್ಬ ಇವನು “ಹಮಾರೇ ಪಾಸ್ ರಸಗುಲ್ಲಾ ಹೈ” ಅಂದಾಗ “ಹಮೇ ಭೀ ಆಂಖೇ ಹೈ” ಅಂದು ಕೊಟ್ರಪ್ಪ ಬಾಯಿ ಮುಚ್ಚಿಸಿದ್ದನು. ಗ್ರಾಹಕರೇ ದೇವರೆಂದು ನಂಬಿದ್ದ ಕೊಟ್ರಪ್ಪನ ಅಭಿಮಾನಕ್ಕೇ ಪೆಟ್ಟು ಬಿದ್ದ ಅನುಭವ! ಆದರೂ ಬಹುಶಃ ಹಿಂದೀಭಾಷೆ ಅಪರಿಣತಿಯಿಂದ ಅವನಿಗೆ ಮಾರುತ್ತರ ಕೊಡದೆ ತೆಪ್ಪಗಾದನು. ಈ ಪ್ರಸಂಗವು ಯಾರಿಗೂ ತಿಳಿಯದೆಂದು ಅವನು ಭಾವಿಸಿ ಮಾಮೂಲಿನಂತೆ ತನ್ನ ಮೀಸೆ ಹುರಿ ಮಾಡುತ್ತ ಓಡಾಡುತ್ತಿದ್ದರೂ ಮಂಜನು ನನ್ನ ತಮ್ಮನಿಗೆ ಹೇಳಿ, ಅವನು ಕೇರಿಯ ಇತರ ಹುಡುಗರಿಗೆ ಹೇಳಿ, ಇಡೀ ದಂಡಿಗೆ ದಂಡೇ ಈ ವಿಷಯವನ್ನು ತಮಾಷೆ ಮಾಡುತ್ತಾ ಅಂಗಡಿಯ ಮುಂದೆ ಹೋಗುವಾಗ “ಜೋ ಬಿಕತಾ ಹೈ.. ವೋ ಹಮೇ ಭೀ ದಿಕತಾ ಹೈ” ಅಂದುಕೊಂಡು ಓಡಾಡುವಾಗ ಕೊಟ್ರಪ್ಪನಿಗೆ ಏನೋ ಅನುಮಾನದ ವಾಸನೆಯೊಂದು ಮೂಗಿಗೆ ಬಡಿದು ಮಂಜನ ಮೇಲೆ ಸಿಟ್ಟು ಬರುವುದು.

ಇಂತಹ ಕೆಟ್ಟ ಹರಕತ್ತುಗಳಿಂದಾಗಿಯೇ ಮಂಜನನ್ನು ಅವನು ಹಿಗ್ಗಾಮುಗ್ಗಾ ಬೈಯುವನು, ಒಮ್ಮೊಮ್ಮೆ ಹೊಡೆಯುವವನ ಕೂಡಾ. ಮಂಜನೂ ತಾನೇನು ಕಡಿಮೆಯೆಂದು ಇಂತಹ ಒಳಸುಳಿಗಳನ್ನು ಜಗತ್ತಿಗೆ ಹರಡಿ ಅಪ್ಪನಿಗೆ ಅವಮಾನ ಮಾಡಿ ಖುಷಿ ಪಡುವನು.

ಅಂಗಡಿಯ ಅಭಿವೃದ್ಧಿಗೆ ಹೊಸ ಉಪಾಯವೊಂದು ಹೊಳೆಯಲು ಕೊಟ್ರಪ್ಪನಿಗೆ ಬಹಳ ದಿನಗಳು ಹಿಡಿಯಲಿಲ್ಲ. ಬಹುಬೇಗದಲ್ಲಿ ಅವನು ಬೆಂಗಳೂರಿನ ಬೀದಿ ಅಂಗಡಿಯೊಂದರಿಂದ ಉಚ್ಚಾಟಿತನಾಗಿದ್ದ ಭಟ್ಟನೊಬ್ಬನನ್ನು ಹಿಡಿದು ತಂದು ಫ್ರೈಡ್ ರೈಸ್ ಹಾಗೂ ನೂಡಲ್ಸ್ ಶುರು ಹಚ್ಚಿದನು. ಅವನು ಬಂದು ಏನು ಮಾಡಿದನೋ ಅದು ಬೇರೆ, ಆದರೆ ಮಂಜನಿಗೆ ಸಿಗುತ್ತಿದ್ದ ಬೈಗುಳವನ್ನಂತೂ ದುಪ್ಪಟ್ಟು ಮಾಡಿದನು. ಆದರೆ ಮಂಗಳೆಯ ಸ್ಥಿತಿಯೇ ಬೇರೆ… ಅವಳು ದೋ ಮಿನಿಟ್ ಮ್ಯಾಗಿಯ ಕರ್ಮಕಾಂಡದಿಂದ ಪಾರಾಗಿದ್ದಳು. ಅಂದಿನಿಂದ ಪ್ರತಿ ದಿನ ಸಂಜೆಯೂ ಕೊಟ್ರಪ್ಪನ ಅಂಗಡಿಯಿಂದ ಏಳುತ್ತಿದ್ದ ಹೊಸ ಘಮವೊಂದು ಸುತ್ತಮುತ್ತಲಿನ ಮನೆಗಳನ್ನು ಗಾಢವಾಗಿ ವ್ಯಾಪಿಸಿ ಇತ್ತ ಮಠದ ಕೇರಿಗೂ ತಲುಪತೊಡಗಿತು.

ಐದು ಗಂಟೆ ಆಯಿತೆಂದರೆ ಬೆಂಗಳೂರು ಭಟ್ಟನ ಬಾಣಲೆ ಕೆರೆತದ ಸದ್ದಿನ ಜೊತೆಗೆ ಈ ಘಮವೂ ಸೇರಿ ಇಡೀ ವ್ಯೋಮವನ್ನೇ ವ್ಯಾಪಿಸುತ್ತಿತು. ಇದೇ ಪರಿಮಳದ ಬೆಂಬತ್ತಿ ಸಂಜೆಯಾಗುತ್ತಲೇ ನಾನೂ ಕೂಡ ಬಟ್ಟೆ ಒಗೆಯುವ ನೆಪ ಮಾಡಿ ಹಿತ್ತಿಲು ಸೇರುತ್ತಿದ್ದೆ. ಆಶ್ಚರ್ಯವೆಂದರೆ ಫ್ರೈಡ್ ರೈಸ್ ನ ಘಮವೊಂದೇ ಅಲ್ಲದೆ ಈ ಮಂಜನ ವಿಚಿತ್ರ ಹುಚ್ಚಾಟಗಳು ಆಗ ನನ್ನ ಗಮನಕ್ಕೆ ಬರತೊಡಗಿದವು.

ಒಮ್ಮೊಮ್ಮೆ ಉಟ್ಟಿದ್ದ ಪಂಚೆ ಕಚ್ಚೆ ಕಟ್ಟಿ ಕೈ ಮೇಲೆತ್ತಿ ಯಾವುದೋ ನಾಟಕದ ಡೈಲಾಗನ್ನು ಮುಖ ಕಿವುಚಿಕೊಳ್ಳುತ್ತಾ ಜೋರಾಗಿ ವದರುವನು. ಒಮ್ಮೊಮ್ಮೆ ರಾಜಣ್ಣನ ಹಾಡುಗಳನ್ನು ಅಭಿನಯ ಸಮೇತ ಹೇಳುವನು. ಹಾಗೂ ಹೀಗೂ ಯಾರೂ ಕಾಣದಿದ್ದರೆ ‘ತಳಾಂಗು ತದಿಗಿಣ ತೋಂ..’ ಎನ್ನುತ್ತಾ ಒಂದು ಕುಣಿತವನ್ನು ಹಾಕಿ ಬಿಡುವನು. ಅಪ್ಪಿತಪ್ಪಿ ಮಂಗಳಿ ಏನಾದರೂ ಆ ಕಡೆ ಸುಳಿದರೆ “ಮಂಗಳೀ… ಗೌರಿ ಪುತ್ರಿ… ನಿನ್ನ ಮನೆ ಕಾಯ್ವಾಗ… ಕೊಟ್ರನ ಕತ್ರೀ..” ಎಂದು ಜೋರಾಗಿ ಹಾಡುವವನು. ಅವಳು ಗೊಣಗುತ್ತಾ ಸುಮ್ಮನಾಗುವಳು. ತೀರಾ ಸಿಟ್ಟಿಗೆದ್ದ ದಿನ ಮೂಲೆಗೊರಗಿಸಿದ್ದ ಪೊರಕೆ ಹಿಡಿದು ಓಡಿ ಬಂದು ನಾಲ್ಕು ಚಚ್ಚುವಳು. ಒಮ್ಮೆ ಹೀಗೆ ಕಾಲ್ಕೀಳುವಾಗ ಅಚಾನಕ್ಕಾಗಿ ನಾನು ಅಲ್ಲಿ ನಿಂತಿದ್ದನ್ನು ಮಂಜ ನೋಡಿಬಿಟ್ಟನು. ನಂತರದ ದಿನಗಳಲ್ಲಿ ಬಹಳ ಜಾಗರೂಕನಾಗಿರುತ್ತಿದ್ದ ಮಂಜನು ಯಾವುದಕ್ಕೂ ಒಮ್ಮೆ ನಮ್ಮ ಹಿತ್ತಲು ಇಣುಕಿಯೇ ಮುಂದುವರಿಯುತ್ತಿದ್ದನು.

ಶುಭ್ರ ಬಿಳಿ ದಿರಿಸಿನ ಹೆಗಲ ಮೇಲೊಂದು ಬಿಳಿಚೌಕ, ಬಿಳಿ ಹುರಿ ಮೀಸೆಯ ಕೊಟ್ರಪ್ಪನ ನಿಲುವು ಯಾರಿಗಾದರೂ ಭಯ ಗೌರವ ಹುಟ್ಟಿಸುವಂತಿತ್ತು. ಸುಮಾರು ಐವತ್ತರ ಇಳಿವಯಸ್ಸಿನ ಅವನೊಮ್ಮೆ ಗುಡುಗಿಬಿಟ್ಟರೆ ಇಡೀ ಮನೆ ನಡುಗಿ ಮೂಲೆ ಸೇರುತ್ತಿತ್ತು. ಇಂತಹ ಮಹಿಮಾನ್ವಿತನೆದುರು ಏನೂ ಮಾತನಾಡಲು ತೋಚದೆ ಹುಡುಗರು ಸಹಾ ಹುಸಿನಕ್ಕು ಇವನ ಕಿರುಕುಳ ಸಹಿಸಿ ಸಮ್ಮನಾಗುತ್ತಿದ್ದರು.

ಕೊಟ್ರಪ್ಪನ ಮನೆಯಲ್ಲಿ ಈ ನೆಮ್ಮದಿ ಬಹಳ ದಿನಗಳ ಕಾಲ ಉಳಿಯಲಿಲ್ಲ. ಬೆಂಗಳೂರು ಭಟ್ಟನು ಅಂಗಡಿಯ ಗಲ್ಲಾ ದೋಚಿ ರಾತ್ರೋರಾತ್ರಿ ಊರು ಬಿಟ್ಟನು. ಫ್ರೈಡ್ ರೈಸ್ ನಿಂದ ಬಹಳಷ್ಟು ಬಣಾವು ಕಂಡಿದ್ದ ಕೊಟ್ರಪ್ಪನ ವ್ಯಾಪಾರವೂ ಹೀಗೆ ಏಕಾಏಕಿ ನೆಲಕಚ್ಚುವುದು ಸಾಧ್ಯವೇ ಇರಲಿಲ್ಲ. ಈ ಬಾರಿಯೂ ಸಹ ಮಂಜನೇ ಒಲೆಯ ಬೆಂಕಿಗೆ ಆಹುತಿಯಾದನು. ಕೊಟ್ರಪ್ಪ ಅದೇನು ತಾಕೀತು ಮಾಡಿದನೋ, ಮಂಜ ಸೌಟು ಹಿಡಿದು ಅನ್ನ ಹುರಿಯಲು ನಿಂತೇ ಬಿಟ್ಟನು. ಅಂದಿನಿಂದ ಸಂಜೆ ಐದರ ಘಮವೂ ಬದಲಾಗಿತ್ತು. ಜೀವಮಾನದಲ್ಲಿ ಒಮ್ಮೆ ಮಂಜನ ಅಂಗಡಿಯ ಹುರಿದ ಅನ್ನದ ರುಚಿ ನೋಡಲೇಬೇಕೆಂದು ನಾನೂ ನನ್ನ ತಮ್ಮನೂ ಆಗ ತೀರ್ಮಾನಿಸಿದ್ದೆವು.

ಕಾಕತಾಳೀಯವೆಂಬಂತೆ ತನ್ನ ಕೈಚಳಕದ ರುಚಿಯನ್ನು ತೋರಿಸಲು ಮಂಜನೇ ಒಮ್ಮೆ ನನ್ನ ತಮ್ಮನಿಗೆ ಸ್ನೇಹದ ಕಾಣಿಕೆಯಾಗಿ ಒಂದು ಪ್ಲೇಟ್ ಹುರಿದನ್ನವನ್ನು ಪಾರ್ಸಲ್ ಕಳುಹಿಸಿದನು. ತಂದು ತಿನ್ನುವುದಿರಲಿ, ಅವರ ಅಂಗಡಿಯ ಹುರಿಯನ್ನ ನಮ್ಮ ಮನೆಗೆ ಬಂತು ಎಂದು ಗೊತ್ತಾದರೂ ನಾವಿಬ್ಬರೂ ಮಾನಸಹಿತ ಉಳಿಯುತ್ತಿರಲಿಲ್ಲ. ಅನ್ನವನ್ನು ಹುರಿಯಬಾರದು ಅರೆಯಬಾರದು ಎಂಬ ಕಟ್ಟಪ್ಪಣೆ ಇದ್ದ ಬ್ರಾಹ್ಮಣರ ಮನೆಯ ಮಕ್ಕಳಾದ ನಾವು ಅಂದು ಜೀವನ್ಮರಣದ ಪ್ರಶ್ನೆ ಎಂಬಂತೆ ಒಂದು ಪ್ಲೇಟ್ ಫ್ರೈಡ್ ರೈಸ್ ಅನ್ನು ತಿಂದೇಬಿಡುವ ಛಾಲೆಂಜ್ ಕೈಗೆತ್ತಿಕೊಂಡೆವು. ಹಿಂಬಾಗಿಲಿನಿಂದ ಸೀದಾ ಅಟ್ಟ ಹತ್ತಿದವರೇ ಆ ಗೋಧೂಳಿ ಹೊತ್ತಿನಲ್ಲಿ ಸಂಧ್ಯಾವಂದನೆಯ ಯೋಚನೆಯನ್ನೂ ಕೈಬಿಟ್ಟು ಘಮಘಮಿಸುತ್ತಿದ್ದ ಫ್ರೈಡ್ ರೈಸ್ ಅನ್ನು ತಿಂದು ಮುಗಿಸಿದೆವು. ಈ ಮಹಾಪರಾಧವು ಯಾರಿಗೂ ತಿಳಿಯದಂತೆ ಅದೇ ಕತ್ತಲಿನಲ್ಲಿ ಆ ಸತ್ಯವನ್ನು ಸಮಾಧಿ ಮಾಡಿ ಬಂದೆವು.

ಹೀಗೆ ಆಗಾಗ ಹುರಿದನ್ನದ ಅಗ್ನಿಕಾರ್ಯ ಸದ್ದಿಲ್ಲದೇ ನಡೆಯುತ್ತಿತ್ತು. ಇದು ನಾನು ಮತ್ತು ನನ್ನ ತಮ್ಮನ ನಡುವಿನ ಅನೇಕ ಮನಸ್ತಾಪಗಳಿಗೂ ಅಲ್ಪವಿರಾಮವಾಗಿ ನಮ್ಮಿಬ್ಬರ ನಡುವೆ ಒಂದು ಒಪ್ಪಂದ ಉಳಿಸಿ ಸೋದರಸಂಬಂಧಕ್ಕೇ ಮೆರುಗಿನಂತಿತ್ತು.

ಇಂತಿಪ್ಪ ಬದುಕು ಕದಲುವ ದಿನಗಳೂ ಬಂದವು. ಅಲ್ಲಿಂದ ಕೆಲವೇ ದಿನಗಳಲ್ಲಿ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದೆವು. ನಾನು ಮದುವೆಯಾಗಿ ಬೆಂಗಳೂರು ಸೇರಿದೆ. ಗಂಡನ ಮನೆಯ ಸುಖದಲ್ಲಿ ತೇಲಿ ಹೋಗಿದ್ದ ನನಗೆ ತವರಿನ ಈ ಸಣ್ಣ ಪ್ರಸಂಗವೊಂದರ ನೆನಪಾದರೂ ಹೇಗೆ ಬರಬೇಕು? ಎಂದೋ ಒಮ್ಮೆ ಮಾತಿನ ಮಧ್ಯೆ ನಾನು ತಮ್ಮನೂ ಮಂಜನ ವಿಷಯವನ್ನು ಪ್ರಸ್ತಾಪಿಸುತ್ತಾ ‘ಮಂಗಳಿಯ ಹೆಸರಿಗೆ ಹೊಂದುವಂತೆ ಮಂಜುನಾಥ ಎನ್ನುವುದರ ಬದಲು ಮಂಗನಾಥಾ ಅಂತ ಇಡಲಿಲ್ಲ ನೋಡು ಇವನಿಗೆ’ ಎಂದು ನಕ್ಕಿದ್ದೆವು. ಕಾಲಾಂತರದಲ್ಲಿ ನಾನು ಮೊದಲ ಬಸಿರ ಭಾರ ಹೊತ್ತು ಅಮ್ಮನ ಮನೆಗೆ ಬಂದಾಗ ಹಳೆಯ ನೆನಪುಗಳೆಲ್ಲ ಒಂದೊಂದಾಗಿ ತೆರೆದುಕೊಳ್ಳತೊಡಗಿದವು.

ನನ್ನ ಆರೈಕೆಗಾಗಿಯೇ ತಮ್ಮನು ಕೆಲಸ ಬಿಟ್ಟು ನನ್ನೊಂದಿಗೆ ಊರಲ್ಲಿರಲು ಬಂದನು. ನೆರವಾಗಲು ಊರಿಂದ ಅಜ್ಜಿಯೂ ಬಂದಿದ್ದಳು. ದಿನಗಳು ಹಿತವಾಗಿಯೇ ಕಳೆಯುತ್ತಿದ್ದವು. ಹೆರಿಗೆಯ ನೋವಿನ ಗಳಿಗೆ ಅಪರಾತ್ರಿ ದಿಢೀರನೆ ಆಸ್ಪತ್ರೆ ಸೇರಿದ್ದಾಯಿತು. ರಾತ್ರಿ ಕಳೆದು ಹಗಲಾಗಿ ಮತ್ತೆ ಮರುದಿನ ರಾತ್ರಿಯಾದರೂ ಹೆರಿಗೆಯಾಗುವ ಸುದ್ದಿ ಇಲ್ಲ, ನೋವು ನಿಲ್ಲುತ್ತಿಲ್ಲ. “ಏನಾಯ್ತು ನಿನಗೆ ಚೆನ್ನಾಗಿ ಇದ್ದೆಯಲ್ಲ ಹಡೆಯೋಕೇನು ಕಷ್ಟ?” ಅಂತ ತಲೆಯ ಬಳಿ ಕೂತು ನೆತ್ತಿ ನೇವರಿಸುತ್ತಿದ್ದ ಅಮ್ಮನಂತಹ ಡಾಕ್ಟ್ರಮ್ಮ ಕೇಳಿದಾಗ ಏನು ಹೇಳಲಿ? ಯಮಯಾತನೆಯೊಂದು ಹೊಟ್ಟೆಯಿಂದ ಹೊರಟು ಇಡೀ ಮೈಯನ್ನು ಆವರಿಸುತ್ತಿತ್ತು. ನಿನ್ನೆ ರಾತ್ರಿಯಿಂದಲೂ ನಾನು ಏನೂ ತಿಂದಿರಲಿಲ್ಲ. ಡಾಕ್ಟರು ಊಟದ ವಿಷಯ ಮಾತನಾಡುತ್ತಲೇ ಹೊಟ್ಟೆಯೊಳಗಿಂದ ಸಂಕಟವೊಂದು ತೇಲಿ ಬಂದು ಜೋರಾಗಿ ಅಳುತ್ತಾ ಕೇಳಿದೆ “ನಂಗೆ ಮಂಜನಂಗಡಿಯ ಫ್ರೈಡ್ ರೈಸ್ ಬೇಕೂಊಊ..”. ಕಕ್ಕಾಬಿಕ್ಕಿಯಾದ ಅಮ್ಮ ಹಾಗೂ ಅಜ್ಜಿ ಇಬ್ಬರೂ ಮುಖ ನೋಡಿಕೊಳ್ಳುತ್ತಿದ್ದರು. ಪಕ್ಕದಲ್ಲಿ ನಿಂತಿದ್ದ ತಮ್ಮನಿಗೆ ತಡೆಯಲಾರದಷ್ಟು ನಗು ಬಂತು. ಅಷ್ಟು ಹೊತ್ತು ಗಂಭೀರವಾಗಿದ್ದ ಅವನು ಈಗ ಪಕಪಕನೆ ನಗುತ್ತಾ “ನೆನ್ನೆಯಿಂದ ಹೇಳೋಕೆ ಏನಾಗಿತ್ತೇ.. ಇರು ತರುತ್ತೀನಿ” ಎಂದವನೇ ಸರಸರನೆ ಎದ್ದು ಓಡಿದನು.

ಅರ್ಧ ಗಂಟೆಯೊಳಗೆ ಕೈಲೊಂದು ಪೊಟ್ಟಣ ಹಿಡಿದು ಬಂದ ತಮ್ಮನು ‘ತಗೋ ತಂದಿದ್ದೀನಿ, ತಿಂದು ಇನ್ನಾದರೂ ಸಮಾಧಾನವಾಗು’ ಎಂದು ನಗುತ್ತಾ ತಲೆ ನೇವರಿಸಿದನು. ಆತುರಾತುರದಲ್ಲಿ ಪೊಟ್ಟಣವನ್ನು ಬಿಚ್ಚಿದೆ. ಎಂದೂ ಯಾರಿಗೂ ತಿಳಿಯದಿದ್ದ ಒಂದು ದೊಡ್ಡ ರಹಸ್ಯವನ್ನು ನಾನು ಎಲ್ಲರೆದುರು ಬಿಚ್ಚಿಟ್ಟುಬಿಟ್ಟಿದ್ದೆ. ಆಹಾ ಅದೇ ಘಮ, ಅದೇ ಬಣ್ಣ, ಅದೇ ರುಚಿ… ನಾನು ಮತ್ತೆ ಮಗುವಾಗಿದ್ದೆ. ತಂದ ಅನ್ನವನ್ನು ಪೂರ್ತಿ ದಕ್ಕಿಸಿಕೊಳ್ಳಲಾಗದೇ ನನಗೆ ಸಮಾಧಾನವಾಗುವಷ್ಟು ತಿಂದು ನೆಮ್ಮದಿಯಾಗಿ ಮಲಗಿದೆ. ಬೆಳಗಿನ ಜಾವದ ಹೊತ್ತಿಗೆ ಸುಸೂತ್ರ ಹೆರಿಗೆಯಾಗಿದ್ದು ಡಾಕ್ಟರಿಗೆ ಮನೆಯವರಿಗೂ ಎಲ್ಲರಿಗೂ ಖುಷಿಯಾಯಿತು. ಮುದ್ದಾದ ಹೆಣ್ಣು ಮಗುವಿನ ಮುಖ ಎಲ್ಲರಿಗೂ ಎಲ್ಲವನ್ನೂ ಮರೆಸಿತ್ತು.

ನೋವಿನ ಪರ್ವಕಾಲವೊಂದನ್ನು ಮುಗಿಸಿ ನಾನು ನಗುತ್ತಿದ್ದೆ. ಆದರೆ ಆ ನಗುವಿನ ಹಿಂದಿನ ಕಾರಣ ಬರೀ ಮಗುವಾಗಿರಲಿಲ್ಲ. ಬಾಣಂತನದ ಕಾಲ ಮುಗಿಯುವವರೆಗೂ ಅನ್ನ ಎಂದರೆ ಸಾಕು ನಾನು ನನ್ನ ತಮ್ಮ ಒಬ್ಬರನ್ನೊಬ್ಬರು ನೋಡಿ ನಗುತ್ತಿದ್ದೆವು.

ಇದೆಲ್ಲ ನಡೆದು ಬಹಳ ದಿನಗಳ ನಂತರ ಒಮ್ಮೆ ನಾನು ಮತ್ತು ತಮ್ಮ ಪುರುಸೊತ್ತಿನಲ್ಲಿ ಕೂತು ಮಾತಾಡುವಾಗ ಅವನು ಅಂದಿನ ರಾತ್ರಿಯ ಹಲವು ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡನು. ಕೊಟ್ರಪ್ಪನಿಗೆ ಹೃದಯಾಘಾತವಾಗಿ ಹೋಟೆಲ್ ಕೇವಲ ಅಂಗಡಿಯಾಗಿ ಉಳಿದಿದ್ದು… ಮಂಗಳಿಗೆ ಮದುವೆಯಾಗಿ ಅವನ ಬಲಗೈ ಬಿದ್ದು ಹೋದಂತಾಗಿದ್ದು.. ಈಗ ಇಡೀ ಮನೆಯ ಜವಾಬ್ದಾರಿ ಮಂಜನ ಮೇಲೆ ಬಿದ್ದಿರಲಾಗಿ ಅವನು ಗಂಭೀರನೂ ಬುದ್ಧಿವಂತನೂ ಸುಸಂಸ್ಕೃತನೂ ಆಗಿರುವುದು… ಆದರೆ ಅಂದು ರಾತ್ರಿಯ ಪರಿಸ್ಥಿತಿ ಕೇಳಿ ಮರುಕಪಟ್ಟು ಅದು ಹೇಗೋ ಇದ್ದದ್ದರಲ್ಲೇ ಸಾಮಗ್ರಿ ಹೊಂದಿಸಿ ಮೊದಲಿನಂತಲ್ಲದಿದ್ದರೂ ತಕ್ಕಮಟ್ಟಿಗೆ ಅದೇ ರುಚಿ ಹಾಗೂ ಬಣ್ಣದ ಫ್ರೈಡ್ ರೈಸ್ ಮಾಡಿಕೊಟ್ಟದ್ದು… ಹೆರಿಗೆ ಸುಸೂತ್ರವಾಗಲು ಹಾರೈಸಿ ದೇವರ ದೂಳ್ತ ಕೊಟ್ಟು ಕಳುಹಿಸಿದ್ದು… ನಾನು ಮತ್ತೊಮ್ಮೆ ನನ್ನ ಕನಸಿನ ಬಾಲ್ಯಕ್ಕೆ ವಾಪಸ್ ಹೋಗಿಬಿಟ್ಟಿದ್ದೆ, ಮುದ್ದಾದ ಬಾಲ್ಯಕ್ಕೊಂದು ಧನ್ಯವಾದ ಹೇಳಿಕೊಂಡೆ.

ಈಗ ಬೆಳೆದ ಮಗಳು ಒಮೊಮ್ಮೆ ಫ್ರೈಡ್ ರೈಸಿಗಾಗಿ ಹಠ ಮಾಡುವಾಗ, ಸಿಕ್ಕ ಸಿಕ್ಕ ಚಾಟ್ ಗಳನ್ನೆಲ್ಲಾ ಮನೆಯವರೆಲ್ಲರೂ ಗೋಧೂಳೀ ಹೊತ್ತಿನಲ್ಲೇ ಮುಕ್ಕುವಾಗ ಇವೆಲ್ಲವೂ ನೆನಪಾಗಿ ತುಂಟ ನಗೆಯೊಂದು ತುಟಿಯಂಚಿನಲ್ಲಿ ಜಾರಿ ಹೋಗುತ್ತದೆ.

About The Author

ಮಧುರಾಣಿ

ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ