Advertisement
ಮಲಯಾಳಂ ಸಿನೆಮಾ ಸಹವಾಸ: ರೂಪಶ್ರೀ ಕಲ್ಲಿಗನೂರ್ ಅಂಕಣ

ಮಲಯಾಳಂ ಸಿನೆಮಾ ಸಹವಾಸ: ರೂಪಶ್ರೀ ಕಲ್ಲಿಗನೂರ್ ಅಂಕಣ

ಮೊದಮೊದಲು ಮಲಯಾಳಂ ಚಿತ್ರ ನೋಡುವಾಗ ಭಾಷೆಯ ಸಮಸ್ಯೆ ಕಾಡ್ತಿತ್ತು. ಸಬ್ ಟೈಟಲ್ ಗಳನ್ನು ಓದಿಕೊಳ್ಳುತ್ತಾ ಚಿತ್ರ ನೋಡುವುದು ಎಂಥಾ ಕಷ್ಟಕರವಾದ ಕೆಲಸ ಅನ್ನೋದು ಅದನ್ನ ಅನುಭವಿಸಿ ತೀರಿದವರಿಗೇ ಗೊತ್ತು. ಸಬ್ ಟೈಟಲ್ ಗಳ ಮೇಲೆ ಅವಲಂಬಿತರಾಗಿ ಸಿನಿಮಾ ನೋಡುವವರ ತಾಪತ್ರಯ ಎಂಥಾದ್ದೆಂದರೆ ಚಿತ್ರವನ್ನು ಆಸ್ವಾದಿಸುವ ಬದಲಿಗೆ, ಆ ಸಬ್ ಟೈಟಲ್ ಗಳನೊಮ್ಮೆ ಮತ್ತೆ ಚಿತ್ರವನ್ನೊಮ್ಮೆ ನೋಡುತ್ತಾ ಹೋಗುವಷ್ಟರಲ್ಲಿ, ಕತ್ತು ನೋವುಬಂದು, ಸಿನೆಮಾ ಮುಗಿದೇ ಹೋಗಿರುತ್ತೆ. ಅಷ್ಟು ಸಮಯ ನಾವು ಚಿತ್ರ ನೋಡಿದ್ವಿ ಅನ್ನೋಕಿಂತಾ ಸಬ್ ಟೈಟಲ್ ಗಳನ್ನ ಓದಿದ್ವಿ ಅಂತ ಹೇಳಿದ್ರೆ ನಮಗೇ ಒಂದಿಷ್ಟು ಸಮಾಧಾನ ದಕ್ಕಬಹುದು.
ರೂಪಶ್ರೀ ಕಲ್ಲಿಗನೂರ್ ಅಂಕಣ

 

ಟೆಸ್ಸಾ ಅವಳಾಗೇ ಆ ಮನೆಯನ್ನು ಹುಡುಕಿಕೊಂಡು ಬಂದದ್ದಲ್ಲ. ಅವಳಿಗೆ ಕಿರಿಕಿರಿ ಅನ್ನಿಸುತ್ತಿದ್ದ ಟಿಪಿಕಲ್ ಬದುಕಿನ ಕೂಪದೊಳಗಿಂದ, ಹೊರಕ್ಕೆ ಜಿಗಿಯಬೇಕೆಂಬುದು ಅವಳ ಮನಸ್ಸಿನ ಚಡಪಡಿಕೆಯಾಗಿತ್ತಷ್ಟೇ. ಆ ಸಮಯದಲ್ಲಿ ಮನೆಬಿಟ್ಟು ಆರಾಮವಾಗಿ ಸುತ್ತಾಡಬೇಕೆಂದು ಬಯಸಿದವಳು, “ಆ” ಮನೆಗೆ ಬಂದು ಸೇರುತ್ತಾಳೆ. ಅದು ಸಾಧಾರಣವಾಗಿ ಯಾರೋ ಖಾಲಿಮಾಡಿಕೊಂಡು ಹೋದಂತೆ ಕಾಣುವ ಮನೆಯಾಗಿರಲ್ಲ. ಅದರ ತುಂಬೆಲ್ಲ ಸಾವಿರ ಸಾವಿರ ಸಾಮಾನುಗಳು. ಹಳೆಯ ಪರಿಕರಗಳಿಗೆ ಕಲೆಯ ಸ್ಪರ್ಶ ಸಿಕ್ಕು ಜೀವತುಂಬಿಕೊಂಡು ನಿಂತವುಗಳವು. ಹಳೆಯ ಬೀಗದ ಕೈ, ಖಾಲೀ ಬಾಟಲಿಗಳು, ವಾಹನದ ಬಿಡಿ ಭಾಗಗಳು, ಮುರಿದ ಕುರ್ಚಿ, ಹಳೆಯ ತಗಡಿನ ಡಬ್ಬಿ… ಎಲ್ಲ ಅಂದ್ರೆ ಎಲ್ಲವಕ್ಕೂ ಅಲ್ಲಿ ಕಲೆಯ ಸ್ಪರ್ಶದಿಂದ ಮರುಜೀವ ಸಿಕ್ಕು, ನೋಡಿದವರೊಳಗೊಂದು ಜೀವಸೆಲೆಯನ್ನ ಹುಟ್ಟುಹಾಕುವಂತೆ ಮಾಡುವಂಥವಾಗಿಬಿಟ್ಟಿರುತ್ತವೆ.

ಮೊದಮೊದಲು ಟೆಸ್ಸಾಳಿಗೆ ಇವೆಲ್ಲ ಅತೀ ಎನ್ನಿಸಿದರೂ ಆಮೇಲೇ ಅದೇ ವಾತಾವರಣದ ಜೊತೆ ಮತ್ತು ಅಲ್ಲಿಯವರೆಗೂ ಗೊತ್ತಿರದೇ ಇದ್ದ ಅದರ ಕತೃವಿನ ಜೊತೆ ಒಂದು ಸಂಬಂಧ, ಪ್ರೇಮ ಬೆಳೆಯುತ್ತಾ ಹೋಗುತ್ತದೆ. ಮದುವೆ ಬೇಡ ಅಂತ ಹೇಳಿ ಮನೆಯಿಂದ ಹೊರಬಂದಿದ್ದ ಟೆಸ್ಸಾ, ಹಿಂದೆ ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಚಾರ್ಲಿಯನ್ನು ಹುಡುಕಿಹೊರಡುತ್ತಾಳೆ. ಅವನೋ ಎಲ್ಲೂ ನಿಲ್ಲದ ನಿರಂತರ ಪ್ರಯಾಣಿಕ; ಟೆಸ್ಸಾ ಅವನ ಭಾವಚಿತ್ರವನ್ನೂ ನೋಡಿದವಳಲ್ಲ. ಆದರೆ ಆ ಮನೆಯಲ್ಲಿ ತುಂಬಿತುಳುಕಿದ್ದ ಜೀವನಪ್ರೀತಿ ಮತ್ತು ಅಲ್ಲಿ ಸಿಕ್ಕ ಡೈರಿಯಲ್ಲಿನ ಚಿತ್ರಕತೆಗೆ ಮಾರುಹೋಗಿ, ಅವನೊಂದಿಗೆ ಗಾಢ ಪ್ರೇಮದಲ್ಲಿ ಬಿದ್ದು, ಅವನ್ನು ಹುಡುಕಿಕೊಂಡು ಹೊರಟುಬಿಡುತ್ತಾಳೆ.

********************

ಮೊದಲಿನಿಂದಲೂ ಸಿನಿಮಾ ನೋಡೋದಂದ್ರೆ ನನಗೆ ಅಷ್ಟಕಷ್ಟೇ. ಅದರಲ್ಲೂ ಬಹಳ ಜನಪ್ರಿಯವಾಗಿರುವ ಹೊಡಿ-ಬಡಿ-ಕಡಿ ಮತ್ತು ಪ್ರೇಮಕತೆಯ ಸುತ್ತಲೇ ಗಿರಗಿರಗಿರ ಅಂತ ಸುತ್ತೋ ಸಿನೆಮಾಗಳಂತೂ ನನಗೆ ಯಾವತ್ತೂ ರುಚಿಸಿದ್ದಿಲ್ಲ. ನಾನು ಓದಿದ ಕಲಾಶಾಲೆಗಳಲ್ಲಿ ಆಗಾಗ ಕಲಾತ್ಮಕ ಸಿನಿಮಾಗಳನ್ನು ನೋಡುತ್ತಿದ್ದೆ. ಬೇರೆಬೇರೆ ದೇಶಗಳ ಸಿನಿಮಾಗಳನ್ನು ನೋಡುತ್ತಿದ್ದ ನನಗೆ, ಅವುಗಳಲ್ಲಿ ಜಪಾನ್ ಸಿನಿಮಾಗಳು ಹೆಚ್ಚು ಇಷ್ಟವಾಗ್ತಿದ್ದವು. ಅದರಲ್ಲೂ ಅಕಿರ ಕೊರೋಸಾವಾನ “ಡ್ರೀಮ್ಸ್” ನನ್ನನ್ನ ಕಾಡುವ ಸಿನಿಮಾ. ಇಂಥವೆಲ್ಲ ಸಿನಿಮಾಗಳು ನನ್ನ ಸಿನಿಮಾ ಬಗೆಗಿನ ಅಭಿರುಚಿಯನ್ನು ಫಿಲ್ಟರ್ ಮಾಡಿದ್ದು. ಅದರ ಜೊತೆಗೆ “ಸಿನಿಮಾ ಅಂದ್ರೆ ಹೀಗಿರ್ಬೇಕು” ಅಂತ ಅನ್ನಿಸಿದ್ದು ಮಲಯಾಳಂನ ಕೆಲ ಸಿನಿಮಾಗಳನ್ನು ನೋಡಿದ ಮೇಲೆಯೇ.

ಈಗ ಅಂದ್ರೆ ಮೂರುವರ್ಷದಿಂದಷ್ಟೇ ನನಗೆ ಮಲಯಾಳಂ ಸಿನಿಮಾ ನೋಡುವ ಹವ್ಯಾಸ ಬೆಳೆದದ್ದು. ಅಲ್ಲಿಯವರೆಗೂ ಮಲಯಾಳಂ ಭಾಷೆಯ ಬಗೆಗಾಗಲೀ ಅದರ ಚಿತ್ರಗಳ ಬಗೆಗಾಗಲೀ ಯಾವ ಆಸಕ್ತಿಯೂ, ಕುತೂಹಲವೂ ಒಂದೂ ನನ್ನಲ್ಲಿ ಇರಲಿಲ್ಲ. ಆದ್ರೆ ಮಲಯಾಳಂ ಮಾತಾಡಬಲ್ಲ ಜೀವದ ಹುಡುಗನ ಸಹವಾಸಕ್ಕೆ ಬಿದ್ದದ್ದೇ, ಮಲಯಾಳಂ ಚಿತ್ರಗಳ ಸಹವಾಸಕ್ಕೂ ಬಿದ್ದಂತಾಗಿತ್ತು.


ಬೆಂಗಳೂರಲ್ಲೇ ಓದಿ -ಬೆಳೆದ ನನಗೆ ತೆಲುಗು ಮತ್ತು ತಮಿಳು ಭಾಷೆಯ ಪರಿಚಯ ಅಷ್ಟಿಷ್ಟು ಅಂತ ಇದ್ದೇಇದೆ. ಮೂರ್ನಾಲ್ಕು ಬಾರೀ ಶಾಲೆ ಬದಲಾಯಿಸಿದ್ದ ನನಗೆ ಎಲ್ಲ ಶಾಲೆಗಳಲ್ಲೂ ತಪ್ಪದೇ ತೆಲುಗು-ತಮಿಳು ಭಾಷಿಕ ಸ್ನೇಹಿತರ ಪರಿಚಯ ಸಿಕ್ಕಿದೆ. ಹಾಗಾಗಿ ಕನ್ನಡದ ಹೊರತು ನೋಡಿದ ತೆಲುಗು-ತಮಿಳು ಸಿನೆಮಾಗಳನ್ನು ನೋಡುವಾಗ ಭಾಷೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಅಷ್ಟೇನೂ ತೊಡಕಾಗಿದ್ದಿಲ್ಲ. ಆದರೆ ಅದೆರಡು ಭಾಷೆಗಳಲ್ಲಿ ಹೆಚ್ಚು ಚಿತ್ರಗಳನ್ನು ನೋಡಿದ್ದು ತಮಿಳಿನಲ್ಲೇ. ತೆಲುಗು ಚಿತ್ರಗಳಂತೂ ಯಾಕೋ ಎಲ್ಲವೂ ಒಂದೇ ಥರ ಅನ್ನಿಸಿ ಶೀಘ್ರವಾಗಿ ನನ್ನನ್ನು ಬೋರ್‍ಡಮ್ ಗೆ ನೂಕಿಬಿಡೋದ್ರಿಂದ, ಅವುಗಳ ಸಹವಾಸಕ್ಕೆ ಹೋಗೋದೇ ಇಲ್ಲ. ಹಾಗಾಗಿ ಕಲಾತ್ಮಕ ತಮಿಳು ಚಿತ್ರಗಳನ್ನು ನಾನು ಯಾವಾಗಲೂ ಇಷ್ಟಪಡುತ್ತೇವೆ. ಕಾಕಾಮೊಟೈ, ಕಾಂಜೀವರಂ, ಸಮ್ ಟೈಮ್ಸ್, ಆರುವಿಯಂಥ ಸಿನಿಮಾಗಳು ಎಂದಿಗೂ ಮರೆಯಲಾರದಂಥವು. (ಹಳೆಯ ಚಿತ್ರಗಳ ಸರಣಿಯನ್ನ ಇನ್ನೂ ಶುರುಮಾಡಿಲ್ಲ)

ಮೊದಮೊದಲು ಮಲಯಾಳಂ ಚಿತ್ರ ನೋಡುವಾಗ ಭಾಷೆಯ ಸಮಸ್ಯೆ ಕಾಡ್ತಿತ್ತು. ಸಬ್ ಟೈಟಲ್ ಗಳನ್ನು ಓದಿಕೊಳ್ಳುತ್ತಾ ಚಿತ್ರ ನೋಡುವುದು ಎಂಥಾ ಕಷ್ಟಕರವಾದ ಕೆಲಸ ಅನ್ನೋದು ಅದನ್ನ ಅನುಭವಿಸಿ ತೀರಿದವರಿಗೇ ಗೊತ್ತು. ಸಬ್ ಟೈಟಲ್ ಗಳ ಮೇಲೆ ಅವಲಂಬಿತರಾಗಿ ಸಿನಿಮಾ ನೋಡುವವರ ತಾಪತ್ರಯ ಎಂಥಾದ್ದೆಂದರೆ ಚಿತ್ರವನ್ನು ಆಸ್ವಾದಿಸುವ ಬದಲಿಗೆ, ಆ ಸಬ್ ಟೈಟಲ್ ಗಳನೊಮ್ಮೆ ಮತ್ತೆ ಚಿತ್ರವನ್ನೊಮ್ಮೆ ನೋಡುತ್ತಾ ಹೋಗುವಷ್ಟರಲ್ಲಿ, ಕತ್ತು ನೋವುಬಂದು, ಸಿನೆಮಾ ಮುಗಿದೇ ಹೋಗಿರುತ್ತೆ. ಅಷ್ಟು ಸಮಯ ನಾವು ಚಿತ್ರ ನೋಡಿದ್ವಿ ಅನ್ನೋಕಿಂತಾ ಸಬ್ ಟೈಟಲ್ ಗಳನ್ನ ಓದಿದ್ವಿ ಅಂತ ಹೇಳಿದ್ರೆ ನಮಗೇ ಒಂದಿಷ್ಟು ಸಮಾಧಾನ ದಕ್ಕಬಹುದು.

ಅದು ಸಾಧಾರಣವಾಗಿ ಯಾರೋ ಖಾಲಿಮಾಡಿಕೊಂಡು ಹೋದಂತೆ ಕಾಣುವ ಮನೆಯಾಗಿರಲ್ಲ. ಅದರ ತುಂಬೆಲ್ಲ ಸಾವಿರ ಸಾವಿರ ಸಾಮಾನುಗಳು. ಹಳೆಯ ಪರಿಕರಗಳಿಗೆ ಕಲೆಯ ಸ್ಪರ್ಶ ಸಿಕ್ಕು ಜೀವತುಂಬಿಕೊಂಡು ನಿಂತವುಗಳವು. ಹಳೆಯ ಬೀಗದ ಕೈ, ಖಾಲೀ ಬಾಟಲಿಗಳು, ವಾಹನದ ಬಿಡಿ ಭಾಗಗಳು, ಮುರಿದ ಕುರ್ಚಿ, ಹಳೆಯ ತಗಡಿನ ಡಬ್ಬಿ… ಎಲ್ಲ ಅಂದ್ರೆ ಎಲ್ಲವಕ್ಕೂ ಅಲ್ಲಿ ಕಲೆಯ ಸ್ಪರ್ಶದಿಂದ ಮರುಜೀವ ಸಿಕ್ಕು, ನೋಡಿದವರೊಳಗೊಂದು ಜೀವಸೆಲೆಯನ್ನ ಹುಟ್ಟುಹಾಕುವಂತೆ ಮಾಡುವಂಥವಾಗಿಬಿಟ್ಟಿರುತ್ತವೆ.

“ಡೈಮಂಡ್ ನೆಕ್ಲೇಸ್” ನಾನು ನೋಡಿದ ಮೊದಲ ಮಲಯಾಳಂ ಚಿತ್ರ.. ಅದನ್ನ ನೋಡುವಾಗ ಸಬ್ ಟೈಟಲ್ ಗಳು ಕೆಳಗೆ ಮೂಡುತ್ತಿದ್ದವಾದ್ರೂ, ಚಿತ್ರದ ನಿರೂಪಣಾ ಶೈಲಿ ಭಾಷೆಯ ಅವಶ್ಯಕತೆಯನ್ನು ತಳ್ಳಿಹಾಕಿತ್ತು. ಇಡೀ ಚಿತ್ರದ ತುಂಬಾ ಒಂದು ಹತ್ತುಸಲವಷ್ಟೇ ಸಬ್ ಟೈಟಲ್ ಗಳ ಮೋರೆ ಹೋಗಿದ್ದನ್ನ ಬಿಟ್ರೆ, ಮತ್ತೆ ಅವುಗಳ ಅವಶ್ಯಕತೆ ಅಷ್ಟು ಕಾಣಿಸಲಿಲ್ಲ. ಅಲ್ಲಿಂದಲೇ ನನಗೆ ಮಲಯಾಳಂ ಚಿತ್ರಗಳಲ್ಲಿ ತೀವ್ರ ಆಸಕ್ತಿ ಹುಟ್ಟಿದ್ದು.

ಒಂದೊಂದು ಚಿತ್ರದಲ್ಲಿ ಇಬ್ಬರು-ಮೂರು ಜನ ಹೀರೋಗಳು ಒಟ್ಟಿಗೆ ನಟಿಸಿದ್ದ ಚಿತ್ರಗಳೂ ಸಾಕಷ್ಟಿವೆ. (ಕನ್ನಡ ಚಿತ್ರರಂಗದಲ್ಲಿ ಹಾಗೆ ಬಹುತಾರಾಗಣದ ಚಿತ್ರಗಳನ್ನು ಮಾಡುವಷ್ಟರಲ್ಲಿ ಏನೆಲ್ಲ ಕಥೆಗಳು ಆಗಿಬಿಡುತ್ತವೆ ಅನ್ನೋದನ್ನ ನಾವೆಲ್ಲ ಕಂಡು-ಕೇಳಿದ್ದೇವೆ) ಇಡೀ ಚಿತ್ರದಲ್ಲಿ ಅವರಿದ್ದರೂ ಎರಡಿಂಚು ಬಣ್ಣ ಬಳಿದುಕೊಂಡ ಮುಖವನ್ನು ಪ್ರತೀ ಫ್ರೇಮಿನಲ್ಲೂ ಝೂಮ್ ಹಾಕಿ ತೋರಿಸಿ ನಮ್ಮ ಕಣ್ಣುಗಳನ್ನು ಮಂಜು ಮಾಡುವುದಿಲ್ಲ. ಅಂಥದ್ದರಲ್ಲಿ ಕತೆ ಅವನ ಸುತ್ತಲೇ ಕತೆ ಸುತ್ತಬೇಕು, ಹೀರೋಗಾಗಿ ಕನಿಷ್ಠ ನಾಲ್ಕೈದು ಹಾಡುಗಳು, ಒಂದು ಐಟಂ ಹಾಡು, ಮತ್ತೆರಡು ಡುಯೆಟ್ಟು ಬೇಕೆಬೇಕೆಂದಲ್ಲಿ ಈ ಸಿನಿಮಾಗಳನ್ನು ನೋಡುವುದರಿಂದ ದೂರ ಉಳಿಯುವುದು ಒಳ್ಳೆಯದು.

ನಾನು ನೋಡಿದ ಚಿತ್ರಗಳಲ್ಲಿ ಕಥೆಯೇ ಹೀರೋ ಅಂದೆನಲ್ಲ, ಅದು ನಿಜಕ್ಕೂ ಸತ್ಯ… ಯಾಕಂದ್ರೆ ಅಲ್ಲಿ ಶ್ರೀಮಂತ ಮನೆಯ ಹುಡುಗ-ಹುಡುಗಿಯ ಪ್ರೇಮದ ಬಗೆಗಾಗಲೀ, ಎಲ್ಲೋ ವಿದೇಶದಿಂದ ಹಾರಿಬಂದು, ಇಲ್ಲಿನ ಊರನ್ನು ಉದ್ಧಾರ ಮಾಡುವಂಥ ಪೊಳ್ಳುಪೊಳ್ಳೆನಿಸುವ ಕಥೆಗಳ ಸಹವಾಸಕ್ಕೆ ಅವರು ಬೀಳೋದೂ ತೀರಾ ಕಡಿಮೆಯೇ. ಒಬ್ಬ ವಯಸ್ಸಾದ ಅಜ್ಜ, ನಿರುದ್ಯೋಗಿ ಹುಡುಗ, ಸ್ಲಂಗಳಲ್ಲಿ ದಿನನಿತ್ಯ ಕಂಡುಬರುವ ಚಿತ್ರಣಗಳ ಕತೆ-ವ್ಯಥೆ, ಯಾರದ್ದೋ ಮಗನನ್ನು ತನ್ನ ಮಗನೆಂದು ಹೇಳಿಕೊಂಡು ಬರುವ ತಾಯಿ, ಬಿರಿಯಾನಿ ಹೋಟೆಲ್ ನ ಸ್ವಾಭಿಮಾನಿ ಅಜ್ಜ… ಅರೆರೆ ಎಂಥೆಂತ ಕತೆಗಳಪ್ಪ… ಇವೆಲ್ಲ ನಮ್ಮ ಸುತ್ತಲೂ ನಡೆಯೋವೇ ಅಲ್ವಾ ಅನ್ನಿಸುವಷ್ಟು ಆ ಕತೆಗಳು ನಮ್ಮನ್ನು ಆವರಿಸಿಕೊಂಡುಬಿಡುತ್ವೆ. ಹಾಗಾದಾದ ಸಬ್ ಟೈಟಲ್ ಗಳ ಅವಶ್ಯಕತೆಯೇ ಇರೋದಿಲ್ಲ. ದೃಶ್ಯವೇ ನಮ್ಮೊಟ್ಟಿಗೆ ಕೂತು ತನ್ನ ಕತೆಯನ್ನು ಹೇಳುತ್ತಿರುವಾಗ ಭಾಷೆಯ ಅಗತ್ಯವಿರುತ್ತೆಯೇ? ಈ ಸಿನಿಮಾಗಳೇಕೋ ನನಗೆ ಹಾಗೇ ಅನ್ನಿಸಿವೆ. ಅದರಲ್ಲೂ ಕೆಲವೊಂದು ಸಿನಿಮಾದ ತುಂಬೆಲ್ಲ ಹುಡುಕಾಡಿದರೂ ಒಂದೂ ಹಾಡು ಸಿಗದೇಇದ್ದರೂ, ಕತೆ ಒಂದಿಷ್ಟೂ ಬೋರ್ ಅನ್ನಿಸುವುದಿಲ್ಲ.

ಲೇಖನದ ಮೊದಲ್ಲಿ ಹೇಳಿದ ಕತೆ ಮಲಯಾಳಂನ ಚಾರ್ಲಿ ಅನ್ನೋ ಸಿನೆಮಾದ್ದು. ಇದು ನನಗೆ ತೀವ್ರವಾಗಿ ಇಷ್ಟವಾದಂಥ ಚಿತ್ರಗಳಲ್ಲೊಂದು. ಬದುಕಿಗೊಂದಷ್ಟು ಎಸ್ಸೆನ್ಸ್ ಬೇಕು, ಏನೋ ಬೇಕು.. ಏನೋ ಬೇಕು ಅಂಥ ಅನ್ನಿಸುವಾಗೊಮ್ಮೆ ಈ ಸಿನಿಮಾ ನೋಡಿ. ಆಗೊಮ್ಮೆ ಚೈತನ್ಯದ ಸ್ಪರ್ಶ ಮೈದುಂಬಿ, ಮೈಮನಗಳೆಲ್ಲ ರಿಫ್ರೆಶ್ ಆದಂತೆ ಅನ್ನಿಸೋದು ಖರೇ ಅನ್ನುವ ಮಾತು.

ಮದುವೆಯ ಬಂಧನಕ್ಕೆ ಹೆದರಿ ಮನೆಯಿಂದ ಓಡಿಹೋಗೋ ಟೆಸ್ಸಾ ಹೇಗೆ ಪ್ರೇಮದಲ್ಲಿ ಬೀಳ್ತಾಳೆ ಅನ್ನೋದು ಈ ಚಿತ್ರದಕತೆ. ಆದ್ರೆ ನಾಯಕ-ನಾಯಕಿಯರು ಭೇಟಿಯಾಗೋದು ಚಿತ್ರದ ಕೊನೇ ದೃಶ್ಯದಲ್ಲಿಯೇ! ಅಲ್ಲಿಯವರೆಗೂ ಒಬ್ಬರನ್ನೊಬ್ಬರೂ ನೋಡಿಯೂ ಇರದ ಈ ಕತೆ, ತನ್ನಲ್ಲಿನ ಲವಲವಿಕೆಗೆ, ಜೀವನ ಪ್ರೀತಿಗೆ ವಿಪರೀತ ಇಷ್ಟವಾಗುತ್ತೆ. ಕಲಾವಿದರುಗಳಿಂದ ಕೆಲಸವನ್ನ ಹೇಗೆ ತೆಗೆಯಬೇಕು ಅನ್ನೋದು ನಿರ್ದೇಶಕರಿಗೆ ಗೊತ್ತಿದ್ದಲ್ಲಿ, ಆ ಕಲಾವಿದರುಗಳ ಪ್ರತಿಭೆಯೂ ಕಾಣ ಸಿಗುತ್ತೆ. ಅದರಲ್ಲೂ ಪ್ರತೀ ಫ್ರೇಮಿನಲ್ಲೂ ಕಾಣಿಸೋ ಕಲೆಯಕೆಲಸ, ಕಲಾನಿರ್ದೇಶಕರನ್ನು ಯಾವಮಟ್ಟದಲ್ಲಿ ಬಳಸಿಕೊಳ್ಳಬಹುದು ಅನ್ನೋದನ್ನ ತೋರಿಸುತ್ತೆ. ಒಟ್ಟಾರೆ ಇಡೀ ತಂಡದ ಟೀಂ ವರ್ಕ್ ಇಡೀ ಚಿತ್ರದ ತುಂಬ ಎದ್ದು ಕಾಣಿಸುತ್ತದೆ.

ಮಲಯಾಳಂ ಚಿತ್ರರಂಗದವರಲ್ಲಿ ಒಂದಷ್ಟು ಹಳಬರನ್ನು ಹೊರತುಪಡಿಸಿ, ಹೊಸಕಲಾವಿದರು ನಿರ್ದೇಶಕರುಗಳೆಲ್ಲ, ಆಗಲೇ ತಮ್ಮ ಪ್ರೇಕ್ಷಕರ ಸಿನಿಮಾದ ಅಭಿರುಚಿಯನ್ನ ಮೇಲ್ಮಟ್ಟಕ್ಕೆ ಏರಿಸಿಟ್ಟಿದ್ದಾರೆ. ಹಾಗಾಗೇ ಅಲ್ಲಿ ಬರುವ ಬಹುತೇಕ ಚಿತ್ರಗಳೆಲ್ಲ ಇಂಥದ್ದೇ ಕತೆಯನ್ನು ಹೇಳುತ್ತ, ಬದುಕನ್ನ ನೋಡುವ ದೃಷ್ಟಿಯನ್ನ ಬದಲಾಯಿಸಲು ಸಹಕಾರಿ ಅನ್ನಿಸುತ್ತೆ ಅನ್ನೋದು ನನ್ನ ಅನಿಸಿಕೆ.

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

2 Comments

  1. ಸಂತೋಷಕುಮಾರ

    ನಿಮಗಿಷ್ಟವಾದ ಮತ್ತು ಕಡೆ ಪಕ್ಷ ನೋಡಲೇಬೇಕಾದ ಇತ್ತಿಚಿನ ಕೆಲ ಚಿತ್ರಗಳ ಪಟ್ಟಿಯನ್ನಾದರೂ ಕೊಟ್ಟಿದ್ದರೆ ಚೆನ್ನಾಗಿತ್ತು…

    Reply
  2. SRIDHAR KS

    ಪ್ರತಿಬಾರಿಯೂ ಮುಖವಿಸ್ಮಿತಗೊಳಿಸುವ ನಟ ನಟಿಯರೊಂದಿಗೆ ಕಥೆಯೊಂದಿಗೆ, ಕಣ್ಣಿಗೆ ಹಬ್ಬವೆನಿಸುವ ಛಾಯಾಚಿತ್ರದೊಂದಿಗೆ ವೈಭವೀಕರಣವಿಲ್ಲದ ಚಿತ್ರಕಥೆಯೊಂದಿಗೆ ಕೊನೆಯದಾಗಿ ನಗು, ಆನಂದ, ಸಂತೃಪ್ತಿ, ಆಶ್ಚರ್ಯ, ಕುತೂಹಲದ ಮದ್ದನ್ನು ಆಳಕ್ಕೆ ನಾಟಿ ಆ ಅನುಭವ ಮನಸ್ಸಿನಲ್ಲಿ ಗೂಡುಕಟ್ಟುವ ಹಾಗೆ ಮಾಡುವ Magic ಸಿನಿಮಾಕ್ಕಿದೆ ಅದರಲ್ಲೂ ಮಲಯಾಳಂ ಮತ್ತು ತಮಿಳು ಚಿತ್ರಗಲ್ಲಿ ಹೆಚ್ಚು. ನಿಮನ್ನು ಇನ್ನೂ ಹೆಚ್ಚಾಗಿ ಕಾಡಬಲ್ಲ ಕೆಲವು ಮಲಯಾಳಂ ಚಿತ್ರಗಳು
    Njan Prakashan
    Maheshinte Prathikaaram
    Kumbalangi Nights
    Aanandam
    Eeda
    Sudani From Nigeria
    Mayaanadhi
    ನನ್ನ ಮನಸಿನ್ನಲಿ ಮ್ಯಾಜಿಕ್ ಮಾಡಿದ ಕೆಲವು ತಮಿಳು ಚಿತ್ರಗಳು
    Kadhalum Kadandhu Pogum
    Kannathil Muthamittal
    Varanam Ayiram
    Maanagaram
    8 Thottakkal ( ಕನ್ನಡದ 8MM )
    Dhruvangal Pathinaaru

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ