Advertisement
ಮಾಳದ ಕಾಡಿಂದ ಕಂಡ ಬಾಹುಬಲಿ:ಪ್ರಸಾದ್ ಶೆಣೈ ಕಥಾನಕ

ಮಾಳದ ಕಾಡಿಂದ ಕಂಡ ಬಾಹುಬಲಿ:ಪ್ರಸಾದ್ ಶೆಣೈ ಕಥಾನಕ

(ಫೋಟೋಗಳು:ಪ್ರಸಾದ್ ಶೆಣೈ )

”ದೂರದಲ್ಲಿ ಬಿಮ್ಮನೇ ನಿಂತಿರುವ ಕುದುರೆಮುಖ ಪರ್ವತ ಶ್ರೇಣಿ, ಕುರಿಂಜೆಲ್ ಪರ್ವತದ ಬುಡದಲ್ಲಿಯೇ ಇರುವ ಪುಟ್ಟ ಮುದಿಶಾಲೆ, ಚಿತ್ಪಾವನ ಬ್ರಾಹ್ಮಣರ ಮನೆಗಳ ಮರದ ಗೇಟುಗಳಲ್ಲಿಯೂ ಹರಡಿದ ಕಾಡು ಬಳ್ಳಿ, ದೂರದಿಂದ ಬಳಕುತ್ತ ಬರುವ ಕುಳ್ಳಿ ಕುಷ್ಮಾಂಡಿನಿ ಬಸ್ಸಿನ ಗೊಗ್ಗರು ಹಾರ್ನ್, ಮೂಗಿನಲ್ಲೆಲ್ಲಾ ಹರಡಿ ಏನೋ ಮಾಡಿಬಿಡುವ ಮರಾಠೆ ತಿಂಡಿ ಕಾರ್ಖಾನೆಯ ಕಾಯಿ ಹೋಳಿಗೆ ಪರಿಮಳ, ಅಲ್ಲೇ ದಾರಿ ಮಾಡಿಕೊಂಡು ಹೋದರೆ ಜೋಗಕ್ಕಳ ತಂಗಿಯಂತೆ ಧಾರೆಯಾಗಿ ಪಶ್ಚಿಮ ಘಟ್ಟಕ್ಕೆ ಸೇರೋ ಜಲಪಾತ.”
ಪ್ರಸಾದ್ ಶೆಣೈ ಬರೆದ ಮಾಳ ಕಾಡಿನ ಕಥೆಗಳು

ದಟ್ಟರಾತ್ರಿಯ ಕನಸಲ್ಲೂ ದಿಟ್ಟನೇ ಕಾಡೋ ಊರು ಮಾಳ, ಪಶ್ಚಿಮ ಘಟ್ಟದ ಕೆಳಗಿನ ಹಸಿರ ತೊಟ್ಟಿಲು ಈ ಪುಟ್ಟ ಕನಸಿನಂತಹ ಊರು. ಕಾರ್ಕಳದಿಂದ ಬಜಗೋಳಿ ಅನ್ನೋ ಪರಿಮಳದ ಊರು ದಾಟಿದರೆ, ಒಮ್ಮೆ ಕುದುರೆಮುಖದ ಕಡೆ ಮುಖ ಮಾಡಿ ಬರಬೇಕು ಅನ್ನೋ ಆಸೆ ಜಾಸ್ತಿಯಾಗುತ್ತದೆ. ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆಮುಖ, ಹೊರನಾಡು, ಕಳಸ, ಶೃಂಗೇರಿ ದಾರಿ ಹಿಡಿದರಂತೂ ಇನ್ನೂ ಬದುಕಲ್ಲಿ ಕಾಣದೇ ಇರೋ ಕನಸುಗಳನ್ನು ಬೊಗಸೆಯಲ್ಲಿ ಅದ್ದಿಡಿದು ಆಟವಾಡಿದಂತೆ, ಇಷ್ಟು ದಿನ ಕಳಕೊಂಡ ಜಗತ್ತೊಂದು ದುತ್ತೆಂದು ಒಳಗೆಲ್ಲಾ ಮಳೆ ಹೊಯ್ದಂತೆ ಅನ್ನಿಸುತ್ತದೆ.

ಮಾಳ ಅನ್ನೋದು ಬರೀ ಊರೆಂದು ಅಂದುಕೊಳ್ಳಬೇಡಿ, ಅದು ಕರಾವಳಿಯ ಒಂದು ಪುಟ್ಟ ಊರಾದರೂ ಆಗತಾನೇ ಕೆನೆಗಟ್ಟಿದ ಮಂಜಿನಂತಹ ಸಹ್ಯಾದ್ರಿಯ ತಂಗಿ, ಹಸಿರಲ್ಲೇ ಮಿಂದು, ಹಸಿರನ್ನೇ ಸುಖಿಸುವ ಪಶ್ಚಿಮಘಟ್ಟದ ಪಚ್ಚೆ ಅಂಗಿ. ಇಲ್ಲಿನ ಯಾವ ಹಾದಿ ಹಿಡಿದರೂ ಹಸಿರ ದಾರಿ ನಮ್ಮನ್ನೇ ಕಾಯುತ್ತಿರುತ್ತದೆ.

“ಬಾ ಮಾರಾಯ ನನ್ನನ್ನು ಆಸ್ವಾದಿಸು” ಅಂತ ಪಚ್ಚೆ ಹಾದಿಗಳೇ ಕೈ ಮಾಡಿ ಕರೆಯುತ್ತದೆ. ಕೇರೆ ಹಾವಿನಂತಿರುವ ಮಾಳದ ಡಾಂಬರು ರೋಡಿನಲ್ಲಿ ನಡೆಯುತ್ತ ಹೋದರೆ ಪಶ್ಚಿಮ ಘಟ್ಟದ ಅಪರೂಪದ ಹಕ್ಕಿಗಳೆಲ್ಲ ಮಿಣಿ ಮಿಣಿ ನೋಡುತ್ತ, ನಾಚಿ ನೀರಾಗಿ ಕುದುರೆಮುಖದತ್ತ ಹಾರಿ ಹೋಗುತ್ತದೆ.

ದೂರದಲ್ಲಿ ಬಿಮ್ಮನೇ ನಿಂತಿರುವ ಕುದುರೆಮುಖ ಪರ್ವತ ಶ್ರೇಣಿ, ಕುರಿಂಜೆಲ್ ಪರ್ವತದ ಬುಡದಲ್ಲಿಯೇ ಇರುವ ಪುಟ್ಟ ಮುದಿಶಾಲೆ, ಚಿತ್ಪಾವನ ಬ್ರಾಹ್ಮಣರ ವಿಶಾಲ ಅಡಿಕೆ ತೋಟಗಳ ನೆರಳು, ಅವರ ಮನೆಗಳ ಮರದ ಗೇಟುಗಳಲ್ಲಿಯೂ ಹರಡಿದ ಕಾಡು ಬಳ್ಳಿ, ಇನ್ನೂ ಕೊಂಚ ದೂರ ಹೋದರೆ  ಪುಟ್ಟ ಬಸ್ಸು ಸ್ಟಾಪ್ ನಲ್ಲಿ ದಾರಿಯನ್ನೇ ನಿರುಕಿಸುತ್ತ ನಿಂತ ಒಂದೆರಡು ಕನಸುಗಳು, ಅವರ ಕನಸು ನನಸಾದಂತೆ ದೂರದಿಂದ ಬಳಕುತ್ತ ಬರುವ ಕುಳ್ಳಿ ಕುಷ್ಮಾಂಡಿನಿ ಬಸ್ಸಿನ ಗೊಗ್ಗರು ಹಾರ್ನ್, ಮೂಗಿನಲ್ಲೆಲ್ಲಾ ಹರಡಿ ಏನೋ ಮಾಡಿಬಿಡುವ ಮರಾಠೆ ತಿಂಡಿ ಕಾರ್ಖಾನೆಯ ಕಾಯಿ ಹೋಳಿಗೆ, ಹಾಲಿನ ಪೇಡ, ಮತ್ಯಾವುದೋ ಸಿಹಿಯ ಪರಿಮಳ, ಪರಶುರಾಮ ದೇವಸ್ಥಾನದ ಗಾಢ ಮೌನ, ಅಲ್ಲೇ ದಾರಿ ಮಾಡಿಕೊಂಡು ಹೋದರೆ ಜೋಗಕ್ಕಳ ತಂಗಿಯಂತೆ ಧಾರೆಯಾಗಿ ಪಶ್ಚಿಮ ಘಟ್ಟಕ್ಕೆ ಸೇರೋ ಜಲಪಾತ; ಅಬ್ಬಬ್ಬ! ಮಾಳವೆಂದರೆ ನಿಗೂಢ ಲೋಕ, ಮಾಯಕದ ನಾಕ.

ಮಾಳ ಅನ್ನೋದು ಬರೀ ಊರೆಂದು ಅಂದುಕೊಳ್ಳಬೇಡಿ, ಅದು ಕರಾವಳಿಯ ಒಂದು ಪುಟ್ಟ ಊರಾದರೂ ಆಗತಾನೇ ಕೆನೆಗಟ್ಟಿದ ಮಂಜಿನಂತಹ ಸಹ್ಯಾದ್ರಿಯ ತಂಗಿ, ಹಸಿರಲ್ಲೇ ಮಿಂದು, ಹಸಿರನ್ನೇ ಸುಖಿಸುವ ಪಶ್ಚಿಮಘಟ್ಟದ ಪಚ್ಚೆ ಅಂಗಿ. ಇಲ್ಲಿನ ಯಾವ ಹಾದಿ ಹಿಡಿದರೂ ಹಸಿರ ದಾರಿ ನಮ್ಮನ್ನೇ ಕಾಯುತ್ತಿರುತ್ತದೆ.

ಮಾಳದ ಬಗ್ಗೆ ಹೇಳುತ್ತ ಹೋದರೆ ಸುರಿಯುತ್ತ ಇರುವ ಮಳೆಯ ಹಾಗೇ ಹೇಳುತ್ತ ಕೂರೋಣ ಅನ್ನಿಸುತ್ತದೆ.

ಇಂತಿಪ್ಪ ಕಾಡು ದಾರಿಯಲ್ಲಿ ನಾವು ಮಾತಾಡುತ್ತ ಸಾಗಿದರೆ ಹಾಡುವ ಕಾಡ ಮೌನ ಕೇಳಿಸುವುದಿಲ್ಲ, ದೂರದ ಚಿತ್ಪಾವನರ ತೋಟದಲ್ಲಿ ಕಾಯಿಬಿದ್ದ ಚಂದಗಿನ ಸ್ವರ ಕೇಳಿಸುವುದಿಲ್ಲ, ಮುದಿ ಶಾಲೆಯಲ್ಲಿ ಕೂತು ಪ್ರಾರ್ಥನೆ ಹಾಡುವ ಮಕ್ಕಳ ಉಲಿಯು ಕಾಡುವುದಿಲ್ಲ, ಚೆಂದದಿಂದ ಬರುವ ಪುಣ್ಯಕೋಟಿಯ ಕೊರಳ ಗಂಟೆ ನಲಿಯುವುದೂ ಕೇಳಿಸುವುದಿಲ್ಲ. ನಮಗೆ ಎಲ್ಲಾ ಸ್ವರಗಳು ಕೇಳಿಸಬೇಕು, ಅದಕ್ಕೆ ದಾರಿಯಲ್ಲಿ ಮಾತಾಡಲೇಬಾರದು ಅಂತ ಪ್ರತೀ ಸಲ ನಾವು ಈ ಕಡೆ ಬಂದಾಗ ಮಾತಿಗೆ ಮುಷ್ಕರ ಹೂಡುತ್ತೇವೆ. ಮೌನವೊಂದು ಜಗತ್ತಿನ ಅತ್ಯಂತ ದೊಡ್ಡ ಮಾತು ಅನ್ನಿಸೋದು ಈ ಮಾಳದ ತಪ್ಪಲಲ್ಲಿ ಬಂದು ನಿಂತಾಗ. “ಗವ್ವೆನ್ನುವ ಮೌನ” ಈ ಸಾಲನ್ನು ಯಾವುದೋ ಕತೆಗಳಲ್ಲಿ ಓದಿದಾಗ ಇದು ಬರೀ ವರ್ಣನೆ ಅಂತ ತಿಳಿದುಕೊಂಡಿದ್ದೆ. ಆದರೆ ಮೌನವನ್ನು ಕಿವಿಗೊಟ್ಟು ಕೇಳಿದರೆ “ಗವ್ವ್ ಗವ್ವ್” ಅಂತ ಒಂದು ಸ್ವರ ನಿಜಕ್ಕೂ ಕೇಳಿಸುತ್ತದೆ ಅನ್ನೋ ಸತ್ಯದ ಅರಿವಾದದ್ದು ಮಾಳದ ಮಡಿಲಲ್ಲೇ. ಇಲ್ಲಿನ ಚಿತ್ಪಾವನರ ಮನೆಗಳನ್ನು ಹೊಕ್ಕರೆ ಕ್ಷಣಕ್ಕೊಂದು ಕತೆ ದಕ್ಕುತ್ತದೆ. ಊರು ಬಿಟ್ಟು ಅನಿವಾರ್ಯವಾಗಿ ಮಹಾನಗರಗಳ ಗೂಡು ಸೇರಿದರೂ, ಮಹಾನಗರದ ಕೊಳಚೆ ನೀರು, ವಾಸನೆಯ ಗಾಳಿಯನ್ನು ಕಂಡಾಗ, ಅಮೃತದಂತಹ ನೀರು, ಪಶ್ಚಿಮ ಘಟ್ಟದ ತಂಪಾದ ಗಾಳಿ ಕೊಡುತ್ತಿದ್ದ ಮಾಳ ಅದೆಷ್ಟು ಚೆಂದ ಅಂತನ್ನಿಸಿ ಮಾಳದ ಬಸ್ಸು ಹಿಡಿದು ಇಲ್ಲೇ ತೋಟ, ಕೃಷಿ ಮಾಡಿಕೊಂಡಿರುವೆ ಅಂತ  ಸ್ವಚ್ಛ ಸುಂದರ ಬದುಕನ್ನು ಅನುಭವಿಸಲು ಮತ್ತೆ ಮಾಳಕ್ಕೆ ಬಂದ ಯುವಕರಿದ್ದಾರೆ.

“ನಾನೂ ಅಪ್ಪನ ಜೊತೆ ಸೇರಿ ತೋಟಕ್ಕೆ ಜೊತೆಯಾಗುವೆ, ಯಾವ ಡಿಗ್ರಿಯೂ ಬೇಡ, ಈ ಕಾಡೇ ಯುನಿವರ್ಸಿಟಿ” ಅಂತ ನಿರ್ಧಾರ ಮಾಡಿದವರೂ ಇದ್ದಾರೆ. ನಾವೂ ಒಂದು ದಿನ ಮಾಳದಲ್ಲೇ ಬದುಕಬೇಕು ಅಂತ ಆಸೆ ಪಡುತ್ತ ಮಹಾನಗರದಲ್ಲೂ ಮಾಳದ ಕನಸು ಕಾಣುತ್ತಾರೆ ಇಲ್ಲಿಂದ ದೂರದ ಊರುಗಳಿಗೆ ಹಾರಿಹೋದ ಮಕ್ಕಳು.

ಇಂತಿಪ್ಪ ಕಾಡು ದಾರಿಯಲ್ಲಿ ನಾವು ಮಾತಾಡುತ್ತ ಸಾಗಿದರೆ ಹಾಡುವ ಕಾಡ ಮೌನ ಕೇಳಿಸುವುದಿಲ್ಲ, ದೂರದ ಚಿತ್ಪಾವನರ ತೋಟದಲ್ಲಿ ಕಾಯಿಬಿದ್ದ ಚಂದಗಿನ ಸ್ವರ ಕೇಳಿಸುವುದಿಲ್ಲ, ಮುದಿ ಶಾಲೆಯಲ್ಲಿ ಕೂತು ಪ್ರಾರ್ಥನೆ ಹಾಡುವ ಮಕ್ಕಳ ಉಲಿಯು ಕಾಡುವುದಿಲ್ಲ, ಚೆಂದದಿಂದ ಬರುವ ಪುಣ್ಯಕೋಟಿಯ ಕೊರಳ ಗಂಟೆ ನಲಿಯುವುದೂ ಕೇಳಿಸುವುದಿಲ್ಲ. ನಮಗೆ ಎಲ್ಲಾ ಸ್ವರಗಳು ಕೇಳಿಸಬೇಕು, ಅದಕ್ಕೆ ದಾರಿಯಲ್ಲಿ ಮಾತಾಡಲೇಬಾರದು ಅಂತ ಪ್ರತೀ ಸಲ ನಾವು ಈ ಕಡೆ ಬಂದಾಗ ಮಾತಿಗೆ ಮುಷ್ಕರ ಹೂಡುತ್ತೇವೆ.

ಒಂದು ದಿನ ಹಾಗೇ ಮಳೆ ಸುರಿದ ಸಂಜೆಯೊಂದರಲ್ಲಿ ಮಾಳದ ದಾರಿ ಹಿಡಿದು ಹೊರಟಿದ್ದೆವು. ಆ ದಿನ ರಾಧಾಕೃಷ್ಣ ಜೋಶಿ ಅನ್ನುವ ಮೇಸ್ಟ್ರು ಬದುಕಿಗೆ ಹೊಸ ಮೌನವೊಂದನ್ನು ಕಾಣಿಸಿದರು, ಆ ಮೌನದಲ್ಲೇ ಸುತ್ತಾಡಿಸಿ ಕತೆ ಹೇಳಿದರು. ಜೋಶಿಯವರ ಮನೆಯ ದಾರಿ ಸೀದಾ ಹಿಡಿದರೆ ಅದು ಕಾಡಂಚಿನ ಯಾವುದೋ ಊರಿಗೆ ಸೇರಿ ಕುದುರೆಮುಖದಲ್ಲಿ ಆವಿಯಾಗುತ್ತದೆ.

ನಾವು ಅವರ ಗೇಟಿನ ಮೇಲಿದ್ದ ಗದ್ದೆ ಮನೆ ಎನ್ನುವ ಚೆಂದದ ಹೆಸರನ್ನು ಆಸ್ವಾದಿಸುತ್ತ ನಿಂತಾಗ,  ಹಸಿರ ಬಳ್ಳಿಯಿಂದ ಚಾಚಿದ ಗೇಟನ್ನು ಹಗೂರನೇ ತೆಗೆಯುತ್ತ ಜೋಶಿಯವರು ಬಂದರು. ಯಾರು ಏನು? ಅಂತೆಲ್ಲಾ ವಿಚಾರಿಸಲು ಅವರು ಅಣಿಯಾಗುವ ಹೊತ್ತಿಗೆ ನಾವೇ ನಮ್ಮ ಪರಿಚಯ ಹೇಳಿಯಾಗಿತ್ತು. ನಾವು ಕಾಡು ಸುತ್ತೋದು ಬರೀ ಫ್ಯಾಷನ್ ಅಲ್ಲ, ಅದೊಂದು ಬದುಕಿನ ದಾರಿ, ಈಗಂತೂ ಕಾಡು ನಾಶವಾಗುತ್ತಿದೆ. ಪ್ರಾಣಿಗಳೆಲ್ಲಾ ನಾಡಿಗೆ ನುಗ್ಗುತ್ತಿದೆ. ಇದಕ್ಕೆಲ್ಲಾ ನಾವೇ ಕಾರಣ, ಈ ಕಾಡು, ಈ ಬೆಟ್ಟ, ಈ ಹಸಿರು ಹಾದಿ ನಮಗಿಂತಲೂ ಮೊದಲು ಈ ಪ್ರಾಣಿಗಳದ್ದಾಗಿತ್ತು. ನಾವೆಲ್ಲ ಇಲ್ಲಿಗೆ ಬಂದು ಕಾಡು ಕಡಿಯಲು ಶುರು ಮಾಡಿ ಅವುಗಳಿಗೂ ಈ ಕಾಡಿನ ಹಕ್ಕಿದೆ ಎನ್ನುವುದನ್ನು ಮರೆತೇ ಹೋಗಿದ್ದೇವಲ್ಲ, ಅಂತ ನಮ್ಮಲ್ಲಿರುವ ಅಸಹನೆ, ಆಕ್ರೋಶ ಎಲ್ಲವನ್ನೂ ಹೇಳುತ್ತಲೇ ಇದ್ದಾಗ, ಅವರಿಗೆ ನಮ್ಮ ಬಗ್ಗೆ ಧೈರ್ಯ ಬಂತು. ಅವರೂ ಶುರು ಮಾಡಿದರು,

“ಕಾಡನ್ನು ಭಾವನಾತ್ಮಕವಾಗಿ ನೋಡುವವರು ಯಾರೂ ಇಲ್ಲ ಮಾರಾರ್ರೆ ಈಗ, ಆದರೆ ನೋಡಿ ಇಲ್ಲಿರುವಷ್ಟು ನೆಮ್ಮದಿ ಎಲ್ಲಿಯೂ ಇಲ್ಲ, ನಾನು ನೋಡಿ, ಪುಟ್ಟದೊಂದು ತೋಟ ಮಾಡಿಕೊಂಡು, ಮಕ್ಕಳಿಗೆ ಪಾಠ ಹೇಳಿಕೊಂಡು ಆರಾಮಾಗಿ ಬದುಕುತ್ತಿರುವೆ.” ಅಂತ ನೀಳವಾದ ನಿಟ್ಟುಸಿರಿಟ್ಟರು.

ಬನ್ನಿ, ಅಂತ ಸ್ವರ್ಗದ ತುಣುಕಿನಂತೆ ಕಾಣುತ್ತಿದ್ದ ಅವರ ಚೆಂದದ ಮನೆಯೊಳಗೆ ಕರೆದುಕೊಂಡು ಹೋದರು. ಅಲ್ಲೊಂದು ವಿಚಿತ್ರವಾದ ಮೌನವಿತ್ತು, ಸಂಜೆ ಬಿಸಿಲಿನಲ್ಲಿ ಮಿನುಗುತ್ತಿದ್ದ ಅಂಗಳದ ಒಂದು ಮೂಲೆಯಲ್ಲಿ ಒಣಗಲು ಹಾಕಿದ ಅಡಿಕೆ ರಾಶಿ, ಅಲ್ಲೇ ಪುಟ್ಟದ್ದೊಂದು ತುಳಸಿ ಕಟ್ಟೆ, ಕಾಡಿನ ದಾರಿಯೆಲ್ಲ ನನಗೆ ಗೊತ್ತು ಅನ್ನುವಂತೆ ನಿಂತಿದ್ದ ಹಳೆ ಬೈಕು, ಎಲ್ಲವೂ ಸಂಜೆಗೆ ಅನೂಹ್ಯವಾದ ಗತ್ತನ್ನು ಪಡೆದಂತಿತ್ತು. ಮನೆ ಹೊಕ್ಕ ಕೂಡಲೇ ಒಂದು ವಿಧದ ತಂಪು, ಇಂಪು ಮೈಮನದ ತುಂಬಾ ಆವರಿಸಿತು.

“ನಮ್ಮ ತಂದೆಯವರು ಮಾಳದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಈಗ ಸುಮಾರು ೯೦ ವರ್ಷ ವಯಸ್ಸಾಗಿದೆ ಅವರಿಗೆ, ಶಂಕರ್ ಜೋಶಿ ಅಂತ ಹೆಸರು, ಅವರ ಬಗ್ಗೆ ಹೇಳಿದಷ್ಟು ಮುಗಿಯೋದಿಲ್ಲ. ಇಡೀ ಪಶ್ಚಿಮಘಟ್ಟದ ಕಾಡಿನ ಸದ್ದೆಲ್ಲವೂ ಅವರಿಗೆ ಗೊತ್ತು. ಇಲ್ಲಿನ ಇಂಚಿಂಚನ್ನೂ ಸುತ್ತಿದ್ದಾರೆ. ಕಾಡೆಂದರೆ ಅವರಿಗೆ ಬರೀ ಸೌಂದರ್ಯವಲ್ಲ, ಬದುಕುವ ದಾರಿ, ಕಾಡಲ್ಲೇ ಇಷ್ಟು ವರ್ಷ ಕಳೆದಿದ್ದಾರೆ, ಅವರು ಸಿಕ್ಕರೆ ನಿಮಗೆ ಸಾವಿರ ಕತೆಗಳನ್ನು ಹೇಳ್ತಾರೆ. ಅಷ್ಟೆಲ್ಲಾ ನೆನಪು ಉಂಟು ಅವರಲ್ಲಿ, ಇನ್ನೊಮ್ಮೆ ಅವರನ್ನು ಗುರ್ತಾ ಮಾಡಿಸುತ್ತೇನೆ” ಅಂತ ಭಾರೀ ಆಸೆ ಹುಟ್ಟಿಸಿದರು ಅವರ ಮಗ ಜೋಶಿಯವರು.

ಅವರ ಕುರಿತು ಬರೆದ ಹಳೆಯ ಪುಸ್ತಕವೊಂದನ್ನು ನಮಗೆ ಕೊಟ್ಟು “ಸಾವಕಾಶವಾಗಿ ಓದಿ. ಹಳೆಯ ಮಾಳ ಹೇಗಿತ್ತು ಅಂತ ಗೊತ್ತಾಗುತ್ತದೆ” ಅಂತ ಪುಸ್ತಕ ಓದುವ ಹಪಾಹಪಿಕೆ ಮೂಡಿಸಿದರು. ಆ ಮೇಲೆ ಒಂದು ತಂಬಿಗೆ ತಂಪು ತಂಪು ನೀರು ಹಾಗೂ ಒಂದು ಚಮಚ ಸಕ್ಕರೆ ಕೊಟ್ಟು, ಈಗ ಬಂದೆ ಎಂದು ಒಳಗೆ ಹೋಗಿ,

ತಿನ್ನಲು ಸಿಹಿಯಾದ ಬಾಳೆ ಹಣ್ಣೊಂದನ್ನು ಕೊಟ್ಟು, “ಹೇಗಿದೆ ಹಣ್ಣು ನಮ್ಮ ತೋಟದ್ದೇ”  ಅಂತ ಹೆಮ್ಮೆಯಿಂದ ನುಡಿದರು. ಅಂತಹ ಬಾಳೆ ಹಣ್ಣನ್ನು ನಾವು ಈ ವರೆಗೂ ತಿಂದಿರಲಿಲ್ಲವೋ? ಅಥವಾ ಮಾಳ ಕಾಡಿನ ಪರಿಮಳವನ್ನೆಲ್ಲಾ ತುಂಬಿಕೊಂಡು ಆ ಹಣ್ಣು ಇನ್ನೂ ಸಿಹಿಯಾಗಿ ಕಂಡಿತೋ? ನಮಗೆ ತಿಳಿಯದು. ಅವರ ತೋಟದಲ್ಲಿ ಅಷ್ಟೊತ್ತಿಗೆ ತೆಂಗಿನ ಮಡಲೊಂದು ಬಿದ್ದು ಸದ್ದಾಯಿತು.

“ಇಲ್ಲಿ ರಾತ್ರಿ ಕಾಟಿ ಬರುತ್ತದಾ? ನಮಗೊಮ್ಮೆ ಕಾಟಿಯನ್ನು ಹತ್ತಿರದಿಂದ ನೋಡಬೇಕಂತ ಆಸೆ” ಎಂದು ನನ್ನ ಗೆಳೆಯ ಮನೆಯ ಬಾಗಿಲಿನಿಂದ ಕಾಣುತ್ತಿದ್ದ ಅಮಿತ್ ಕಾಡಿನ ನೆತ್ತಿಯನ್ನೊಮ್ಮೆ ನೋಡುತ್ತ ಕೇಳಿದ.

“ಬರದೇ ಮತ್ತೆ? ಬಂದು ದಾಸವಾಳದ ಹೂವನ್ನೆಲ್ಲಾ ತಿನ್ನುತ್ತದೆ. ಅದಕ್ಕೆ ದಾಸವಾಳ ಎಂದರೆ ಇಷ್ಟವೇನೋ? ಬೆಳಗ್ಗೆ  ನೋಡುವಾಗ ದಾಸವಾಳವಾಗಲೀ, ಮೊಗ್ಗಾಗಲೀ ಕಾಣಿಸುವುದಿಲ್ಲ. ತಿನ್ನಲಿ ಪಾಪ, ಅವಕ್ಕೂ ಆಹಾರ ಬೇಕಲ್ಲ. ಮಾಳದಲ್ಲಿ ಕಾಟಿಗಳಿಗೆ ಬರವಿಲ್ಲ. ಕಾಟಿಗಳ ಕತೆಗಳೇ ಸಾಕಷ್ಟುಂಟು.ಆದ್ರೆ ಇಡೀ ಮಾಳದಲ್ಲಿ ಪ್ರಾಣಿಗಳು ಮತ್ತು ಮನುಷ್ಯರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಹೊರಗಿನಿಂದ ಮಾಳಕ್ಕೆ ಬರುವ ಮನುಷ್ಯರು ಪ್ರಾಣಿಗಳಿಗೆ ಹಾನಿ ಮಾಡುತ್ತಾರೆ ಬಿಟ್ಟರೆ, ಪ್ರಾಣಿಗಳು ಮನುಷ್ಯನಿಗೆ ಹಾನಿ ಮಾಡಿದ ಪ್ರಸಂಗಗಳಿಲ್ಲ. ಮಾನವನೇ ಎಷ್ಟೊಂದು ಸ್ವಾರ್ಥಿ ಅಲ್ವಾ” ಎಂದು ತೋಟದತ್ತ ನೋಡುತ್ತ ಹೇಳಿದರು.

ಬಳಿಕ ಅಂಗಳದಲ್ಲಿ ನಿಂತು ಬೆಟ್ಟದ ಮೂಲೆಯನ್ನು ದಿಟ್ಟಿಸುತ್ತ “ಅಲ್ಲಿ ದೂರದಲ್ಲಿ ಏನಾದರೂ ಕಾಣಿಸುತ್ತಿದೆಯಾ ಅಂತ ಜೋಶಿಯವರು ದೂರದ ಬೆಟ್ಟದ ಕಡೆ ಬೆರಗಿನಿಂದ ಕೈ ಮಾಡಿ ತೋರಿಸಿದರು. ನಾವು ಆ ಬೆಟ್ಟಕ್ಕೆ ಕಣ್ಣು ಕೊಡುತ್ತ ನೋಡಿದೆವು, ಅಲ್ಲಿ ಮೋಡಗಳ ತುಂಡುಗಳು ಗಾಳಿಯಲ್ಲಿ ಲೀನವಾಗುತ್ತಿತ್ತು, ಇಡೀ ಮಾಳ ಸೂರ್ಯಾಸ್ತದ ಹೊಳಪನ್ನು ಅದ್ದಿ ತೆಗೆದಂತೆ ಕಾಣುತ್ತಿತ್ತು, ಮುಗಿಲಲ್ಲಿ ಬೆಳ್ಳಕ್ಕಿಗಳು ಹಾರುತ್ತಿದ್ದವು ಬಿಟ್ಟರೆ ಬೇರೇನೂ ಕಾಣಿಸಲಿಲ್ಲ.

ಅಲ್ಲಿ ದೂರದಲ್ಲಿ ಏನಾದರೂ ಕಾಣಿಸುತ್ತಿದೆಯಾ ಅಂತ ಜೋಶಿಯವರು ದೂರದ ಬೆಟ್ಟದ ಕಡೆ ಬೆರಗಿನಿಂದ ಕೈ ಮಾಡಿ ತೋರಿಸಿದರು. ನಾವು ಆ ಬೆಟ್ಟಕ್ಕೆ ಕಣ್ಣು ಕೊಡುತ್ತ ನೋಡಿದೆವು, ಅಲ್ಲಿ ಮೋಡಗಳ ತುಂಡುಗಳು ಗಾಳಿಯಲ್ಲಿ ಲೀನವಾಗುತ್ತಿತ್ತು, ಇಡೀ ಮಾಳ ಸೂರ್ಯಾಸ್ತದ ಹೊಳಪನ್ನು ಅದ್ದಿ ತೆಗೆದಂತೆ ಕಾಣುತ್ತಿತ್ತು, ಮುಗಿಲಲ್ಲಿ ಬೆಳ್ಳಕ್ಕಿಗಳು ಹಾರುತ್ತಿದ್ದವು ಬಿಟ್ಟರೆ ಬೇರೇನೂ ಕಾಣಿಸಲಿಲ್ಲ.

“ಇಲ್ಲ, ಬೆಟ್ಟ ಬಿಟ್ಟು ಏನೂ ಕಾಣಿಸುತ್ತಿಲ್ಲ” ಎಂದೆವು.

“ನೋಡಿ, ಸರಿಯಾಗಿ ನಾನು ಬೆರಳು ಹಿಡಿದ ಕಡೆಯಿಂದ ನೋಡಿ” ಈಗ ಕಾಣಿಸುತ್ತಿದೆಯಾ? ಎಂದರು.

ನಾನು ಸೂಕ್ಷ್ಮವಾಗಿ ನೋಡಿದೆ, ದೂರದ ಮುಗಿಲ ಬಣ್ಣದ ನಡುವೆ ಒಂದು ಆಕೃತಿ  ನಿಂತಂತಿತ್ತು. ಗಾಳಿ ತೂಗಿ ಆ ಆಕೃತಿ ಅಷ್ಟೇ  ಅಲ್ಲಾಡಿ ಮಸುಕಾಗುತ್ತಿತ್ತು. ಮತ್ತೊಮ್ಮೆ ನೋಡಿದಾಗ ಎಲ್ಲವೂ ಅಸ್ಪಷ್ಟ.

“ಕಂಡಿತಾ” ಅಂದರು.

“ಹೌದು ಏನೋ ಆಕೃತಿ ನಿಂತಂತಿದೆಯಲ್ವಾ” ಅಂದೆ.

“ಅದು  ಬಾಹುಬಲಿ ಮೂರ್ತಿ” ಎಂದ ಜೋಶಿಯವರ ಕಣ್ಣಲ್ಲಿ ಹೊಳಪಿತ್ತು. ನಾವು ಅಚ್ಚರಿಯಾಗುತ್ತ ಮತ್ತೂ ದೂರ ನೋಡಿದಾಗ ಹೌದು, ಅರೆ ನೆರಳು- ಬಿಸಿಲು ಮೋಡದ ನಡುವೆ, ನಿಭಿಡಾರಣ್ಯಗಳ ನಡುವೆ ಧೀರನಾಗಿ ನಿಂತಿದ್ದ ಬಾಹುಬಲಿಯ ಬಲಭುಜ ಕಾಣಿಸಿತು. ಆ ಕ್ಷಣಕ್ಕೆ ಯಾವುದೋ ವಿಸ್ಮಯವೊಂದರ ಸಾಕ್ಷಾತ್ ದರ್ಶನವಾದಂತಾಗಿ ನಮ್ಮ ಕಣ್ಣು ನವಿರೇಳಿತು.

ಮಾಳದ ಅಗಾಧ ಕಾಡುಗಳ ನಡುವಿನಿಂದ ಕಂಡ ೨೦ ಕಿ.ಮೀ ದೂರದ ಕಾರ್ಕಳದಲ್ಲಿರುವ ಬಾಹುಬಲಿ ನಮಗೆ ಈಗ ಕನಸಲ್ಲಿ ಮೂಡೋ ಚಿತ್ರಗಳಂತೆ ಕಂಡ. ಅವನನ್ನು ನಾವು ಹತ್ತಿರದಿಂದ ಸಾವಿರ ಬಾರಿ ನೋಡಿದ್ದೇವು. ಆದರೆ ಹೀಗೆ ದೂರದಿಂದ ನೋಡಿರಲಿಲ್ಲ. ಹತ್ತಿರದಿಂದ ನೋಡುವ ನೋಟಕ್ಕಿಂತಲೂ ದೂರದಿಂದ ನೋಡುವ ನೋಟವೇ ಮೋಹಕವಾದದ್ದು, ಅದರಲ್ಲಿ ಸಿಗುವ ಉನ್ಮಾದವೇ ಬೇರೆ. ಅನ್ನೋ ಪಾಠವನ್ನು ಆ ಕ್ಷಣಕ್ಕೆ ಕಲಿಸಿದ್ದು ಮಾಳದ ಮಣ್ಣು ಮತ್ತು ಆನಂದ ಜೋಶಿಯವರು.

ಅವರೊಳಗೆ ಹೇಳಲು ನೂರಾರು ಕಾಡಿನ ಕತೆಗಳು ಇದ್ದಂತಿತ್ತು. ನಮ್ಮ ಆಸಕ್ತಿ ತಿಳಿದು ಮತ್ತೂ ಮತ್ತೂ ಹೇಳುವ ಆಸೆ ಮೂಡಿದಂತಿತ್ತು. ಅವೆಲ್ಲವನ್ನೂ ಬೆನ್ನಟ್ಟುವ ಆಸೆ ನಮಗಿದ್ದರೂ, ಇನ್ನೊಂದೂರಿಗೆ ಹೋಗಲಿರುವುದರಿಂದ ಕತೆ ಕೇಳಲು ಮತ್ತೊಮ್ಮೆ ಬರುವುದಾಗಿಯೂ, ಚೆಂದ ಚೆಂದ ಕತೆಗಳನ್ನು ನೀವು ಹೇಳಬೇಕೆಂದು ವಿನಂತಿಸುತ್ತ ಗದ್ದೆ ಮನೆಯ ಗೇಟಿನ ಬಳಿ ಬಂದಾಗ, ದೂರದ ಬೆಟ್ಟ ಸೂರ್ಯಾಸ್ತ ಕಳೆದು ಇರುಳಾಗಿ ಮಾಳ ಗವ್ವೆಂದಿತು.

“ಹೋದ ಸಲ ಬಾಹುಬಲಿಗೆ ಮಜ್ಜನವಾದಾಗ, ಮೊನ್ನೆ ಮೊನ್ನೆ ಬೆಟ್ಟದ ತೇರಾದಾಗ ನಾವು ಇಲ್ಲೇ ನಿಂತು ದೂರ ನೋಡುತ್ತ ರಾತ್ರಿ ಅಲ್ಲಿ ಅಭಿಷೇಕವಾಗುತ್ತಿರುವುದನ್ನು ಅಂದಾಜು ಮಾಡುತ್ತಿದ್ದೆವು, ಆಗ ಬೆಟ್ಟದಲ್ಲಿ ಬಣ್ಣದ ಬಲ್ಬುಗಳು ಕಾಣಿಸುತ್ತಿತ್ತು, ರಾತ್ರಿಯ ಬೆಳಕಲ್ಲಿ ಬಾಹುಬಲಿ ಅಸ್ಪಷ್ಟ ಕಾಣುತ್ತಿದ್ದ’’  ಅಂತಂದ ಜೋಶಿಯವರು ನಮ್ಮಲ್ಲಿ ದೂರ ಎನ್ನುವುದು ಅದೆಷ್ಟು ಹತ್ತಿರ ಅನ್ನೋ ಜ್ಞಾನೋದಯ ಮೂಡಿಸಿದರು.

ಅವರೊಳಗೆ ಹೇಳಲು ನೂರಾರು ಕಾಡಿನ ಕತೆಗಳು ಇದ್ದಂತಿತ್ತು. ನಮ್ಮ ಆಸಕ್ತಿ ತಿಳಿದು ಮತ್ತೂ ಮತ್ತೂ ಹೇಳುವ ಆಸೆ ಮೂಡಿದಂತಿತ್ತು. ಅವೆಲ್ಲವನ್ನೂ ಬೆನ್ನಟ್ಟುವ ಆಸೆ ನಮಗಿದ್ದರೂ, ಇನ್ನೊಂದೂರಿಗೆ ಹೋಗಲಿರುವುದರಿಂದ ಕತೆ ಕೇಳಲು ಮತ್ತೊಮ್ಮೆ ಬರುವುದಾಗಿಯೂ, ಚೆಂದ ಚೆಂದ ಕತೆಗಳನ್ನು ನೀವು ಹೇಳಬೇಕೆಂದು ವಿನಂತಿಸುತ್ತ ಗದ್ದೆ ಮನೆಯ ಗೇಟಿನ ಬಳಿ ಬಂದಾಗ, ದೂರದ ಬೆಟ್ಟ ಸೂರ್ಯಾಸ್ತ ಕಳೆದು ಇರುಳಾಗಿ ಮಾಳ ಗವ್ವೆಂದಿತು. ಕುದುರೆಮುಖ ಪರ್ವತ ಇರುಳಲ್ಲಿ ಘೋರವಾಗಿ ನಿಂತಿತ್ತು. ಕಲ್ಲು ಹಾಕಿ ಮಾಡಿದ ಕಿರಿದಾದ ತೋಟದ ದಾರಿಯಲ್ಲಿ ಬೈಕೇರಿಸಿದಾಗ ಮಾಳದ ಆ ಇರುಳೇ ನಮ್ಮನ್ನು ಪ್ರಪಾತಕ್ಕೆ ನೂಕದೇ ರಸ್ತೆಯತ್ತ ನಡೆಸಿದಂತಿತ್ತು. ಸುತ್ತಲೂ ಕತ್ತಲಲ್ಲಿ ಅಸ್ಟಷ್ಟ ಮಾಳದ ಕಾಡು ಕಂಡರೂ ನಾವಿನ್ನೂ ಕಾಣದೇ ಇರುವ ಮಾಳ ಇನ್ನೂ ಇದೆ ಅನ್ನಿಸಿತು. ಎಷ್ಟೆಂದರೂ ಕಾಡು ಅನ್ನೋದು ಮುಗಿಯದ ದಾರಿ ಅನ್ನೋದು ಮತ್ತೊಮ್ಮೆ ಅನ್ನಿಸಿತು.

ಶಂಕರ ಜೋಶಿಯವರು ಹೇಳಿದ ರೋಚಕ ಕತೆಗಳು, ಅವರ ಮಗ ರಾಧಾಕೃಷ್ಣ ಜೋಶಿ ಹೇಳಿದ ಕಾಡ ಕತೆಗಳನ್ನು ಮುಂದಿನ ಸಲ ಹೇಳುವೆ.

About The Author

ಪ್ರಸಾದ್ ಶೆಣೈ ಆರ್.‌ ಕೆ.

ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) "ಒಂದು ಕಾಡಿನ ಪುಷ್ಟಕ ವಿಮಾನ"(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.

15 Comments

  1. ಸಿಂಧು

    ಎಷ್ಟು ಚೆಂದನೆಯ ಬರಹ.
    ಮಾಳದ ಕಾಡಿನ ದೊಡ್ಡ ಮರವೊಂದಕ್ಕೆ ಜೋಕಾಲಿ ಕಟ್ಟಿ ಜೀಕಿ ಬಿಟ್ಟ ಹಾಗಾಯಿತು.
    ಒಂದು ಜೀಕಿನಲ್ಲಿ ಅಸ್ಪಷ್ಟ ಬಾಹುಬಲಿ.
    ಇನ್ನೊಂದು ಜೀಕಿನಲ್ಲಿ ದೂರದ ಕುರಿಂಜಾಲು..
    ಕನಸು ವಾಸ್ತವಗಳ ನಡುವೆ ಈ ಜೋಕಾಲಿ ಹೀಗೆ ಜೀಕುತ್ತಲೆ ಇರಲಿ. ಕಾಡ ಮೌನದ ಹಾಡು ಹಾಡುತ್ತಲೆ ಇರಲಿ.

    ನಾವು ಈ ದಾರಿಯಲ್ಲಿ ಒಂದೆರಡು ಬಾರಿ ಹಾದು ಹೋಗಿದ್ದೇವೆ. ಈ ಊರ ಬಗ್ಗೆ ಓದಿದ್ದೇನೆ. ಮ್ಯಾಪಲ್ಲಿ ನೋಡುತ್ತಿರುತ್ತೇನೆ.
    ಮುಂದಿನ ಸಲ ನೀವು ಹೋಗುವಾಗ ನಾನು ಬರಬಹುದಾ… ಮಾತನಾಡದೆ ಇರುತ್ತೇನೆ ಅಂತ ಮಾತು ಕೊಡುವೆ.

    Reply
    • ಪ್ರಸಾದ್

      ಹ ಹ ಬನ್ನಿ ಹೋಗೋಣ,ಕಾಡಲ್ಲಿ ಕೊಂಚ ಹೊತ್ತು ಕಳೆದೇ ಹೋಗೋಣ,,ತುಂಬಾ ನೋಡೋಕಿದೆ ಇಲ್ಲಿ .ಬದುಕಿಗೆ ಬೇಕಾಗಿದ್ದೆಲ್ಲಾ‌ ಸಿಗುತ್ತದೆ.

      Reply
      • Aditi

        ನಾನೂ ಬರುತ್ತೇನೆ. ಸುಮ್ಮನಿರು ವೆ… ಬದುಕಿಗೆ ಬೇಕಾದುದೇನೋ ಸಿಗುತ್ತದೇಂದಲ್ಲ, ನನಗೆ ದಕ್ಕಿದ್ದಕ್ಕಿಂತ ಎಷ್ಟು ಭಿನ್ನ ಎಂಬುದನ್ನು ಕಾಣುವ ತವಕ…. ಎಷ್ಟೆಂದರೂ ‘ ಕಾಡು ‘ ಕಾಡುವುದು ನಿಲ್ಲಿಸುವುದಿಲ್ಲ….!

        Reply
  2. ಭರತ್ ರಾಜ್ ಸೊರಕೆ

    ಲೂಲು ಟ್ರಾವೆಲ್ಸ್ ಬಳಿಕ ಲೋಕಮರೆತು ಓದಿದ್ದು ಇದೇ ಮೊದಲು ಅನ್ಸುತ್ತೆ. ಮತ್ತೆ ಮತ್ತೆ ಓದಿ ಚಪ್ಪರಿಸಬೇಕೆನಿಸುವ ಸಾಲುಗಳು.
    ಮುಂದಿನ ಬರೆಹಕ್ಕೆ ಕಾದಿದ್ದೇನೆ.

    Reply
  3. ಕೃಷ್ಣ ಕುಲಕರ್ಣಿ

    ಕೆರೆಕಟ್ಟೆ ಘಾಟಿಯ ಮೇಲೆ ದ್ವಿಚಕ್ರ ವಾಹನದಲ್ಲಿ ತಿರುಗುವುದೆಂದರೆ ರೋಮಾಂಚನ. ಜೋಷಿಯಂತವರ ಭೇಟಿ ನಮಗೂ ಆಗಬಾರದೇ ಅನಿಸುತ್ತದೆ.

    Reply
  4. Savitha

    Hello, am very happy to read information about my native.

    Reply
  5. shree harsha Phatak

    ಮಾಳದಲ್ಲಿ ಹುಟ್ಟಿ ಬೆಳೆದು ಪಟ್ಟಣ ಸೇರಿದ ನನಗೆ ಲೇಖನ ತುಂಬಾ ಇಷ್ಟವಾಯಿತು… ಹಾಗೆಯೇ ತುಂಬಾ ಕಷ್ಟವೂ ಆಯಿತು ಇಂತಹ ಸ್ವರ್ಗವನ್ನು ಬಿಟ್ಟು ಬಂದೆನಲ್ಲಾ ಎಂದು

    Reply
  6. Narendra

    Nice

    Reply
  7. arathi ghatikar

    ಸುಂದರ ಕಥಾನಕ ..ಮಳೆ ಸುರಿದಂತೆಯೇ ಚೆಂದದ ನಿರೂಪಣೆ ..ಮಾಳದ ಕಾಡಿನಲ್ಲಿ ಮೌನವಾಗಿ ಕಾಡನ್ನೆಲ್ಲಾ ಕಣ್ಣ ತುಂಬಿಕೊಳ್ಳುತ್ತಾ ಸುತ್ತಾಡಿ ಬಂದಂತಾಯಿತು !

    Reply
  8. rashmi

    where do I get a copy of Lu Lu Travels?

    Reply
  9. ಕೀರ್ತಿ ಕೋಲ್ಗಾರ್

    ಎಷ್ಟು ಚೆಂದವಾಗಿ ಕಟ್ಟಿಕೊಟ್ಟೆ ಪ್ರಸಾದ್. ಇನ್ನೂ ಆ ಮಾಳದ ಗುಂಗಿನಿಂದ ಹೊರಬರಲಾಗುತ್ತಿಲ್ಲ… ವರ್ಣನೆ ಬಹಳ ಸೊಗಸಾಗಿದೆ…

    Reply
  10. mahima sanjeev Puthran

    ಪ್ರಸಾದ್, ಯಾವುದೋ ಲೋಕದೊಳಗೆ ನಮ್ಮನ್ನು ತಿರುಗಾಡಿಸಿದಿರಿ… ಮಾಳವನ್ನೊಮ್ಮೆ ನೋಡಲೇ ಬೇಕೆಂಬ ಹುಚ್ಚು ಹಚ್ಚಿದಿರಿ, ಗದ್ದೆಮನೆಗೆ ನಾನೂ ಬರಲಾ…ಮಾತಾಡುವುದಿಲ್ಲ…ಮೌನವನ್ನು ಹೊದ್ದು ಮಣ್ಣಿನಲ್ಲಿ ಕಾಲಿಟ್ಟರು ಸದ್ದಾಗದಂತೆ ನಿಮ್ಮ ಜತೆ ನಡೆಯುವೆ. ಕರೆದೊಯ್ಯುವಿರಾ..ಆ ಮಡಿಲಿಗೆ..ಶಾಂತತೆಯ ಕಡಲಿಗೆ

    Reply
  11. S P Gadag

    ಒಂದು ಕಾಡಿನ ಪುಷ್ಪಕ ವಿಮಾನ ನನ್ನನ್ನು ಬಿಟ್ಟು ಬಿಡದೆ ಓದಿಸಿಕೊಂಡು ಹೋದ ಪುಸ್ತಕ. ಮಾಳದ ಬೆಟ್ಟ ಗುಡ್ಡಗಳಲ್ಲಿ, ಹಚ್ಚ ಹಸುರಿನ ಗಿಡ ಮರಗಳ ಮಧ್ಯೆ ನಾವೇ ಸುತ್ತಿಕೊಂಡು ಬಂದಂತ ಅನುಭವ. ಮಾಳಕ್ಕೆ ಒಮ್ಮೆಯಾದರೂ ಸುತ್ತಿ ಬರಬೇಕೆಂಬ ಆಸೆ ಹಚ್ಚಿದೆ.

    Reply
  12. Shiddanna Gadag

    ಒಂದು ಕಾಡಿನ ಪುಷ್ಪಕ ವಿಮಾನ ನನ್ನನ್ನು ಬಿಟ್ಟು ಬಿಡದೆ ಓದಿಸಿಕೊಂಡು ಹೋದ ಪುಸ್ತಕ. ಮಾಳ ದ ಹಚ್ಚ ಹಸುರಿನ ಗಿಡ ಮರಗಳ ಮಧ್ಯೆ ನಾವೇ ನಡೆದುಕೊಂಡು ಹೋದ ಅನುಭವ. ಮಾಳಕ್ಕ ಒಮ್ಮೆಯಾದರೂ ಸುತ್ತಿ ಬರಬೇಕೆಂಬ ಆಸೆ ಹಚ್ಚಿದೆ

    Reply
  13. Sathish Kumar Hirehalli

    ಒಂದು ಸುಂದರ ಸ್ಪೂರ್ತಿದಾಯಕ, ಓದುತ್ತಾ ಓದುತ್ತಾ freshness ಅನುಭವಿಸುವ ಕಥಾನಕ… ನಾವೇ ನಿಮ್ಮ ಜೊತೆ ಇದ್ದೀವೇನೋ , ನಾವೂ ಭಾಗಿಯಾಗಿದ್ದೀವೇನೋ ಅನಿಸುವ ಆಪ್ತ ಭರವಣಿಗೆ…

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ