Advertisement
ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ

ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ

ಯುವ ಕವಿಗೆ…

ನಮ್ಮ ರೂಪರೇಷೆಗಳ ಮೇಲೆ ನಂಬಿಕೆ ಬೇಡ
ಅವುಗಳನ್ನು ಮರೆತು ನಿಮ್ಮದೇ ಶಬ್ಧಗಳ ಮೂಲಕ
ಪ್ರಾರಂಭಿಸಿ ನಿಮ್ಮ ಕವಿತೆಗಳನ್ನು…
ಭೂ ಖಂಡದ ಮೇಲೆ ನೀವೇ ಮೊದಲು ನೀವೇ ಕೊನೆಯಂದು ಭಾವಿಸುತ್ತಾ…

ನಮ್ಮ ಕವಿತೆಗಳು ಕವಿತೆಗಳಲ್ಲ
ನಮ್ಮ ಹಾರಾಟದ ವಿಸ್ತರಣೆಗಳು
ನೀವು ಓದಿದಾಗಲೆಲ್ಲಾ
ನೋವೆಂಬ ಪುಸ್ತಕದ ನಮ್ಮ ತಪ್ಪುಗಳನ್ನು ಸರಿಪಡಿಸಿ

ಯಾರನ್ನೂ ನೀವು ಯಾರೆಂದು ಕೇಳಬೇಡಿ
ನಿಮಗೆ ಗೊತ್ತಿದೆ ನಿಮ್ಮ ತಾಯಿ ಯಾರೆಂದು?
ಅದರಂತೆ ತಂದೆಯೂ… ನೀವು ನೀವಾಗಿ

ಸತ್ಯ ಯಾವಾಗಲೂ ಬೆಳ್ಳಗೆ
ಕಾಗೆಯ ಕಪ್ಪು ಮಸಿಯಿಂದ ಅದರ ಮೇಲೆ ಬರೆಯಿರಿ
ಸತ್ಯ ಕೆಲವೊಮ್ಮೆ ಕಪ್ಪು
ಬೆಳಕಿನ ಮರೀಚಿಕೆಗಳಿಂದ ಅದರ ಮೇಲೆ ಬರೆಯಿರಿ

ನೀವು ರಣಹದ್ದಿನ ಜೊತೆ ಹೋರಾಡಬೇಕೆನಿಸಿದರೆ
ಮೊದಲು ಅದರ ಜೊತೆ ಅದರಷ್ಟು ಎತ್ತರ ಹಾರಿ
ನೀವು ನಿಮ್ಮಿಷ್ಟದ ಮಹಿಳೆಯ ಜೊತೆ ಪ್ರೀತಿಯಲ್ಲಿ
ಬೀಳುವುದಾದರೆ ಅವರಲ್ಲಿ ಒಬ್ಬರಾಗಿ
ನಿಮ್ಮ ಕೊನೆಯ ಬಯಸುವವರ ಜೊತೆ ಸಂಗ ಮಾಡಬೇಡಿ

ನಮ್ಮ ಯೋಚನೆಗಿಂತ ನಮ್ಮ ಜೀವನ ಕಡಿಮೆ ಅವಧಿಯದ್ದಾಗಿದೆ
ಆದರೂ ನಾವು ಕಲ್ಪನೆಯಲ್ಲಿಯೇ ಜೀವಿಸುತ್ತೇವೆ
ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವಂತೆ…

ನೀವು ಕೂಡಾ ನನ್ನ ಹಾಗೆಯೇ
ಆದರೆ ನನ್ನ ಪ್ರಪಾತ ನಿಚ್ಚಳವಾಗಿದೆ
ನಿಮ್ಮ ಮುಂದೆ ಸ್ಪಷ್ಟ ದಾರಿಗಳಿವೆ ಅವುಗಳ ರಹಸ್ಯ
ಎಂದೂ ಕೊನೆಯಾಗುವುದಿಲ್ಲ..
ಅವು ಏರುತ್ತವೆ, ಇಳಿಯುತ್ತವೆ… ಏರುತ್ತಾ ಇಳಿಯುತ್ತಾ ಸಾಗುತ್ತವೆ..

ನಿಮ್ಮ ಯೌವ್ವನದ ಕೊನೆಯನ್ನು ನೀವು
ನಿಮ್ಮ ಪಕ್ವತೆಯ ಕಾಲವೆಂದು ಭಾವಿಸುತ್ತೀರಿ
ವಿವೇಕದ ಪರಮಾವಧಿಯೆಂದು ತಿಳಿಯುತ್ತೀರಿ
ನಿಸ್ಸಂಶಯವಾಗಿ ಅದು ನಿಮ್ಮ ವಿವೇಕ
ನಾದವಿಲ್ಲದ ಶಾಂತಿಯ ವಿವೇಕ

ಕೈಯಲ್ಲಿರುವ ಸಾವಿರ ಹಕ್ಕಿಗಳೆಂದೂ
ಮರದ ಮೇಲೆ ಕುಳಿತ ಒಂದು ಹಕ್ಕಿಗೆ ಸಮವಾಗಲಾರವು
ಕಷ್ಟಕಾಲದೊಂದು ಕವಿತೆ
ಸ್ಮಶಾನದಲ್ಲಿ ಅರಳಿದ ಸುಂದರ ಹೂವಿನಂತೆ

ಉದಾಹರಣೆಯಾಗುವುದು ಕಷ್ಟದ ಕೆಲಸ
ನೀವು ನೀವಾಗಿ ನಿಮ್ಮತನ ಮೀರಿ
ಪ್ರತಿಧ್ವನಿಗಳಾಚೆ ನಿಂತುಕೊಳ್ಳಿ

ಉತ್ಸಾಹವೆನ್ನುವುದು ವಿಸ್ತಾರದ ವ್ಯಾಪ್ತಿಯಲ್ಲೂ
ಮುಕ್ತಾಯದ ದಿನಾಂಕ ಹೊಂದಿದೆ
ನಿಮ್ಮ ದಾರಿ ತಲುಪುವ ಮೊದಲೇ
ನಿಮ್ಮ ಹೃದಯದ ಬೇಗೆಯನ್ನು ಹೃದಯಕ್ಕಾದರೂ ತುಂಬಿಡಿ

ನಿಮ್ಮ ಒಲವಿಗೆಂದೂ ನೀನೆಂದರೆ ನಾನು
ನಾನೆಂದರೆ ನೀನೆಂದು ಹೇಳಬೇಡಿ ಬದಲಾಗಿ
ನಾವಿಬ್ಬರೂ ಕಳಚಿಕೊಂಡ ಮೋಡದಿಂದ ಹೊರಟ
ಇಬ್ಬರು ಅತಿಥಿಗಳೆಂದು ತಿಳಿ ಹೇಳಿ

ಶಕ್ತಿಯಿಂದ, ಕಾಯಿದೆಯಿಂದ ವಿಮುಖರಾಗಿರಿ…

ಒಂದೇ ಉಚ್ಛಾರದಲ್ಲಿ ಎರಡು ನಕ್ಷತ್ರಗಳನ್ನು ಇಡಬೇಡಿ
ಒಂದರ ಪಕ್ಕ ಒಂದು ಹೊಂದಿಸಿ ಭಾವಪೂರ್ಣತೆಗಾಗಿ
ನಮ್ಮ ಸೂಚನೆಗಳನ್ನು ನಿಖರವೆಂದು ಭಾವಿಸಬೇಡಿ
ನಮ್ಮ ಚಲನೆಯ ಕುರುಹುಗಳ ಮೇಲೆ ಮಾತ್ರ ನಂಬಿಕೆಯಿಡಿ.

ನೈತಿಕತೆ
ಕವಿ ಹೃದಯದ ಸತ್ತೊದ ಬುದ್ಧಿವಂತಿಕೆಯ ಗುಂಡಿನಂತೆ,
ಕೋಪ ಬಂದಾಗ ಗೂಳಿಯಂತಾಗಿ
ಅಶಕ್ತಗೊಂಡಾಗ ಬಾದಾಮಿ ಅರಳಿದಂತೆ ಅರಳಿ
ಪ್ರೀತಿಯಲ್ಲಿದ್ದಾಗ ಕೇವಲ ಪ್ರೀತಿಯನ್ನೇ ಧ್ಯಾನಿಸಿ
ಮುಚ್ಚಿದ ಬಾಗಿಲಗಳ ಹಿಂದೆ ಒಲುಮೆ ಗೀತೆ ಹಾಡಿ

ಪ್ರಾಚೀನ ಕವಿಯ ಇರುಳಿನಂತೆ ಈ ರಸ್ತೆಗಳು
ಸಮತಲ ಮತ್ತು ಉಬ್ಬುಗಳು, ಪರ್ವತಗಳು, ನದಿಗಳು, ಕಣಿವೆಗಳು
ನಿಮ್ಮ ಕನಸು ಅಳತೆ ಮಾಡುವಷ್ಟು ನಡೆಯಿರಿ
ಲಿಲ್ಲಿ ಹೂ ಅಥವಾ ಸೆರೆಮನೆ ನಿಮ್ಮನ್ನು ಹಿಂಬಾಲಿಸಲಿ

ನನಗೆ ನಿಮ್ಮ ಕಾರ್ಯಗಳ ಕಾಳಜಿಯಿಲ್ಲ
ನನಗೆ ಮಕ್ಕಳ ಸಮಾಧಿಗಳ ಮೇಲೆ ನೃತ್ಯ ಮಾಡುವವರ
ಹೊಕ್ಕಳಿನಲ್ಲಿ ಕ್ಯಾಮೇರಾ ಅಡಗಿಸುವವರ ಬಗ್ಗೆ ಚಿಂತೆಯಾಗಿದೆ

ನೀವು ನನ್ನನ್ನು ನಿರಾಶೆಗೊಳಿಸುವುದಿಲ್ಲ
ನೀವು ಇತರರಿಂದ ದೂರ ಉಳಿದರೆ
ಅದರಲ್ಲೂ ನನ್ನಿಂದ ದೂರ ಉಳಿದರೆ
ಯಾವುದು ನನ್ನದರ ಸದೃಶ್ಯವಲ್ಲವೋ ಅದು ಅತೀ ಸುಂದರ

ಇನ್ನೂ ಮುಂದೆ ನಿಮ್ಮನ್ನು ಕಾಪಾಡುವುದೆಂದರೆ ಕೇವಲ ತಿರಸ್ಕೃತ ಭವಿಷ್ಯ ಮಾತ್ರ..

ಮೇಣದ ಬತ್ತಿ ದು:ಖದಲ್ಲಿ ಕರಗಿ
ಕಣ್ಣೀರು ಸುರಿಸುತ್ತಿದ್ದರೆ ವ್ಯಥೆ ಪಡಬೇಡಿ
ಅದರಿಂದ ಹೊರಟ ಬೆಳಕು ದಿವ್ಯತೇಜ
ನೀವು ದು:ಖದಲ್ಲಿ ಕರಗಿದಾಗ, ಸುಡುತ್ತಿರುವಾಗ
ನಿಮ್ಮಿಂದ ಹೊರಟ ಬೆಳಕು ಸಾಕ್ಷಾತ್ಕಾರದ ಬೆಳಕು
ಕೆಲವರಾದರೂ ನಿಮ್ಮ ಬೆಳಕಿನಲ್ಲಿ ಸಾಕ್ಷಾತ್ಕಾರಗೊಂಡಾರು
ನಿಮ್ಮ ಬಗ್ಗೆ ಯೋಚಿಸಿ, ನನ್ನ ಬಗ್ಗೆಯಲ್ಲ
ಎಲ್ಲ ಪದ್ಯಗಳು ಅಪೂರ್ಣ ಬರೆದಿಟ್ಟವು
ಚಿಟ್ಟೆಗಳು ಮಾತ್ರ ಅವುಗಳನ್ನು ಪೂರ್ಣಗೊಳಿಸುತ್ತವೆ

ಪ್ರೀತಿಯಲ್ಲಿ ಉಪದೇಶ ಬೇಡ, ಅದೊಂದು ಅನುಭವ
ಕವಿತೆಯಲ್ಲಿ ಸಲಹೆ ಬೇಡ ಅದೊಂದು ಪ್ರತಿಭೆ

ಕೊನೆಯಂತೂ ಅಲ್ಲ ಆದರೂ ನಿಮಗೊಂದು ಸಲಾಮ್…

ಮೆಹಬೂಬ ಮುಲ್ತಾನಿ ಬೆಳಗಾವಿಯವರು
ಚಿಕ್ಕದಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರು
ಕತೆ, ಕವಿತೆ ಬರೆಯುವುದು ಮತ್ತು ಅನುವಾದ ಇವರ ಆಸಕ್ತಿಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ashfaq peerzade

    ಕದಡಿದ ಕಾವ್ಯ ಮೊರೆತ…

    Reply
  2. Bi

    ಆಪ್ತ ಅನುವಾದ..

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ