Advertisement
ರವಿಶಂಕರ ಪಾಟೀಲ ಬರೆದ ಈ ದಿನದ ಕವಿತೆ…

ರವಿಶಂಕರ ಪಾಟೀಲ ಬರೆದ ಈ ದಿನದ ಕವಿತೆ…

ಜತನ

ನಡೆದುದು
ನುಡಿದುದು
ಭವಕ್ಕೆ ಬಂದುದು ಈ ಬಾಳು
ಹಾಳು ಮೂಳು
ಏಳು ಬೀಳು
ಹೆಣ್ಣು ಹೊನ್ನು ಮಣ್ಣು
ಬದುಕು ಎನ್ನಲಾಗಿದೆ ಇವನ್ನು
ಬೀಜ ಮೊಳಕೆಯಾಗಿ ಮರವಾಗಿ ಕಾಯಾಗಿ
ಲೋಕ ವಿಲವಿಲ ಹಸಿವೆಂದು ಒದ್ದಾಡಿ

ತಲೆದಿಂಬಿಗೆಂದು ಇಟ್ಟುಕೊಂಡ ಕೈ ಬೆಳಗಾಗುವವರೆಗೂ ಜೋಮು ಜೋಮು
ಸರ್ವಜ್ಞನ ಸಾಲುಗಳೇ ಧರ್ಮದೇಟುಗಳು ಸರ್ವರಿಗೂ
ನನ್ನ ಮತ್ತು ಅವಳ ಜೀರ್ಣಕ್ರಿಯೆಗಳೆರಡಕ್ಕೂ ಒಂದೇ ಹೆಸರು
ಊರಲ್ಲೆಲ್ಲೂ ಮೂಸುವವರಿಲ್ಲಾ ಸತ್ತ ಶವಗಳನ್ನು
ಪ್ರೀತಿ ಪ್ರೇಮ ಎಂಬುವೆಲ್ಲಾ ಬರೀ ಹಳೆ ಕಾಲದ ಕಥೆಗಳು
ತಲೆಯೊಳಗೆ ಅನಿರ್ದಿಷ್ಟ ಕಾಲಾವಧಿಯ ಚಳವಳಿ
ವಾರ್ತಾ ಓದುವವನ ಬಾಯೊಳಗೆ ಹೆಣ್ಣು ಸೊಳ್ಳೆ ಮತ್ತು
ಗಂಟಲು ಕೆರೆತ

ನೆನ್ನೆ ಒಂದು ಊರಿತ್ತು
ಎಷ್ಟು ಚಂದ ಇತ್ತು
ನೆನ್ನೆ ಒಂದು ಮಾತಿತ್ತು
ಎಷ್ಟು ಅರ್ಥವಿತ್ತು
ಇಂದು ಬೆಳಕು ಹರಿದರೆ ನೆನ್ನೆಯ ಸಾವು

ಹೊಟ್ಟೆಗಾಗುವ ಮಾತಲ್ಲ ಬಿಡೀ ಸತ್ಯವೆಂದರೆ
ಅಮೃತವೆನ್ನುತ್ತಾರೆ ಬಲ್ಲವರು
ಯಾರು ನೋಡಿದ್ದಾರೆ?
ನಮಗೆ ಗೊತ್ತಿರುವುದು ಒಂದೇ
ಜೀವನಾಮೃತ
ಅಲ್ಲಮ ಬಸವನದ್ದು

ದಾರಿದ್ರ್ಯ ಎಂದರೇನು ಬೇರೆ ಕೇಳಿ?
‘ಮನೋದಾರಿದ್ರ್ಯ’ ಒಂದು ದೊಡ್ಡ ದಾರಿದ್ರ್ಯ ಎಂದು ಏಟ್ಸ್ ಕವಿ ಹೇಳಿಲ್ಲವೇ?
ಮತ್ತೆ ಕೇಳುತ್ತೀರೆ?
ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ
ಏನಿತ್ತು ಅಕ್ಕನ ಕನಸಲ್ಲಿ?
ಗೋವುಗಳೇ ಗೊರವನೇ ಅಡಕೇ ತೆಂಗೇ
ಅಲ್ಲಲ್ಲ…
ಗುಲಾಬಿ ತೋಟದ ಒಂದು ಊರು…
ಒಂದು ಚಿಕ್ಕ ಊರು
ಮಾಲಿಯೇ ಕಳ್ಳ
ಕಳ್ಳನೇ ಮಾಲಿ
ಆ ತೋಟಕ್ಕೆ
ಊರು ಮಾಲಿ ತೋಟ ಕಳ್ಳ ಎಲ್ಲವೂ ಕನಸಿಗೆ ಬಂದು ಕನಸಿಗೇ ಹೋದವು
ಹಾಗಾದರೆ ಕನಸಿಗೇನು ಕೊಬ್ಬೇ?
ಹೌದು ಭಾರೀ ಕೊಬ್ಬು ಬಿಡಿ ಅದಕ್ಕೆ
ಕನಸಿಗೆ
ನಂಬಬೇಡಿ ಅದನ್ನೆಂದೂ ನೀವು
ಅದೊಂದು ಸುಳ್ಳು
ಹೀಗೆ ಬಂದು ಹೀಗೆ ಹೋಗುತ್ತದೆ ಬೆಳಕು ಹರಿಯುವ ಮುನ್ನ

ಕ್ರಿಯೆಯಷ್ಟು ತಾವು

ಏರಿ ಇಳಿದು
ಇಳಿದು ಏರಿ
ಸುತ್ತಿ ಬಳಸಿ
ಬಳಸಿ ಸುತ್ತಿ
ಉಳಿದುದು ಅಂಗೈಹೂಸು

ಭಾವಿ ಹಾರಿ ಸತ್ತವರು ಕೋಟಿ
ಬಾಯ್ಮಾತಿಗೆ ಬೇಲಿ ಹಾರಿದವರು ಕೋಟಿ
ಆಕೆಯ ಪ್ರೀತಿಯೊಂದು ಸಾವಿರ ವರ್ಷಗಳ ಆಯಸ್ಸು ನನಗೆ

ನಗೆಪಾಟಲು ಯಾರಿಗಿಲ್ಲ ಹೇಳಿ?
ದೇಶದ ಪ್ರಥಮ ಪ್ರಜೆಯೂ ಹೊರತಲ್ಲ ಅದರಿಂದ
ಅವರವರ ದುಃಖಗಳು ಅವರವರ ಅಂಗೈ ಕಣ್ಣುಗಳಿಗೆ ಬಂದು ಕೂಡಬೇಕು;

‘ಸೊರಗಿದನಂತೆ ಮೂಳ’ ‘ಚನ್ನಾಗಿ ತಿನ್ನಬೇಕಲ್ಲ’
‘ಹುಡುಗಿಯ ನೆನಪಿನಲ್ಲಿ ಕೊರಗಿದನಂತೆ’
‘ಗಂಡನ ಮನೆಗೆ ನಡೆಯಲಾರಂಭಿಸಿ ಆಕೆ ಹಡೆದಳಂತೆ ಎರಡೆರಡು ’
‘ಅಳುತ್ತಾನೆ ಇನ್ನೂ; ಮೂಳ’
‘ಅಳುತ್ತಾನೆ’

ರವಿಶಂಕರ ಪಾಟೀಲ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರದವರು.
ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು.
ಸಣ್ಣಕತೆ ಪದ್ಯ ಆಸಕ್ತ ಸಾಹಿತ್ಯ ಪ್ರಕಾರಗಳು.
“ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ