Advertisement
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಎರಡು ಹೊಸ ಕವಿತೆಗಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಎರಡು ಹೊಸ ಕವಿತೆಗಳು

ಉಳಿದದ್ದೇ ಇಷ್ಟು

ಬೆಳಕು ಕಮ್ಮಿಯಾಗುತ್ತಿದ್ದ ಒಂದು ಸಂಜೆ
ಏನನ್ನೋ ಹುಡುಕುವಾಗ
ಫಕ್ಕನೆ ಕೈಗೆ ದಕ್ಕಿದ್ದು ಇದು.
ಅರೇ! ಮರೆತೇ ಬಿಟ್ಟಿದ್ದೆ.
ಯಾವತ್ತು ಕೊನೆಯ ಸಲ
ಮುಚ್ಚಳ ತೆರೆದು ಗ್ಲಾಸಿಗಿಳಿಸಿದ್ದು?
ಜೊತೆಗಿದ್ದವರಾರು?
ಸುಖವೋ ದುಃಖವೋ?

ಗ್ಲಾಸ್ ಗೆ ಇಳಿಯುವ ಮೊದಲು
ಗುಟ್ಟುಗಳನ್ನು ಯಾವ ಶೀಶೆಯೂ
ಬಿಟ್ಟುಕೊಡುವುದಿಲ್ಲ;
ಬೆರೆಸುವ ಬೆರೆಯುವ ಕಲೆ
ಒಮ್ಮೆ ಗೊತ್ತಾದರೆ ಸಾಕು,
ಉಳಿದದ್ದು ಬಯಲು.

ನೆನಪಿಸಿಕೊಳ್ಳಬೇಕಿದೆ ಈಗ ಎಲ್ಲವನ್ನು.
ಸರಿಯಾಗಿ ನೆನಪಾದರೆ
ಮತ್ತೆ ಜೋಡಿಸುತ್ತೇನೆ ಕಳೆದ ಕೊಂಡಿಗಳನ್ನು.

ಎಷ್ಟೋ ವರ್ಷಗಳ ದಾಹವೊಂದು
ಇನ್ನೂ ಹಾಗೆಯೇ ಉಳಿದುಕೊಂಡಿದೆ.
ಕಾಲಕ್ಕೂ ಸಿಗದೆ
ಭಾವಕ್ಕೂ ದಕ್ಕದೆ
ಎದೆಯಲ್ಲಿಯೇ ನಿಂತು ಹೆಪ್ಪುಗಟ್ಟಿದೆ.

ಅಬ್ಬಾ ಹೊರಗೆ ಎಂಥಾ ಮಳೆ!
ವರ್ಷದ ಕೊನೆಯ ಮಳೆ ಇರಬೇಕು
ಒಂದೇ ಸಮನೆ ಸುರಿಯುತ್ತಿದೆ.
ಒಂದಂತೂ ಸತ್ಯ;
ಈ ರಾತ್ರಿ ಕಳೆದು ಬರುವ ಬೆಳಕಿಗೆ
ಮತ್ತೆ ಮೋಡ ಕಟ್ಟೀತೆಂಬ ಆತಂಕವಿಲ್ಲ.

ಹಾಂ!
ಮುಚ್ಚಳ ಕಳೆದು ಹೋದ ಶೀಶೆ ಅದು.
ಇನ್ನೂ ಹಾಗೆಯೇ ಬಿಟ್ಟರೆ
ಸುಮ್ಮನೆ ಆರಿಹೋಗುತ್ತದೆ;
ಯಾರ ಪಾಲಿಗೂ ಸಿಗದೆ.

ಬಾ ಹತ್ತಿರ,ಇನ್ನೂ ಹತ್ತಿರ
ಇಂದಾದರೂ ಒಟ್ಟಿಗೆ ಕೂತು
ನೋವುಗಳ‌ ನೀಗಿಕೊಳ್ಳೋಣ;
ನಾನೊಂದಿಷ್ಟು
ಮತ್ತೆ ನೀನೊಂದಿಷ್ಟು,
ಗುಟುಕು ಗುಟುಕಾಗಿ ಹೀರಿಕೊಳ್ಳೋಣ.

ಲೋಕಾಂತ

ಕೆಳಗಿನ ಅಂತಸ್ತಿನ ಮನೆಯಲ್ಲಿ
ಜೋರಾಗಿ ಅಳುವ ಮಗುವಿನ ಸದ್ದು,
ಸುಮ್ಮನೆ ಕುಳಿತಿದ್ದ ನನ್ನ ಕಿವಿಗೂ ಬಿದ್ದು
ಒಂದರೆ ಕ್ಷಣ ವಿಚಲಿತವಾಯ್ತು ಮನಸ್ಸು.
ಅಪ್ಪಳಿಸಿ ಬಂದ ಗಂಡು ಸದ್ದು,
ದಢಾರನೇ ಬಾಗಿಲು ಹಾಕಿದ ಸದ್ದು.
ಆಳದ ಗುಹೆಯಿಂದ ಹೊರಬಿದ್ದ ಹಾಗೆ
ಮತ್ತೆ ಕ್ಷೀಣವಾದರೂ ಅಳುವಿನ ಸದ್ದು,
ಕಣ್ಣು ಮಾತ್ರ ನೋಟ ಹೊರಡಿಸಿತು.

ಪಕ್ಕದ ಖಾಲಿ ಸೈಟ್ ನಲ್ಲಿ ಅರ್ಧ ಕಟ್ಟಿದ ಗೋಡೆಯ ಮೇಲೆ ಕಲ್ಲಿಟ್ಟು, ನೂಲು ಹಿಡಿಯುತ್ತಿರುವ ವ್ಯಕ್ತಿಯ ಕಿವಿಗೂ ಬಿದ್ದಿರಬಹುದಾ ಈ ಕೂಗು?
ತರಕಾರಿ ಗಾಡಿ ಮನೆಯೆದುರು ಬಂದು ಆಗಲೇ ಬಹಳ ಹೊತ್ತಾಯಿತು,
ಸೊಪ್ಪು, ತರ್ಕಾರಿ
ಬೀಟ್ರೋಟ್ ಟೊಮ್ಯಾಟೊ…
ಯಾವುದೇ ಏರಿಳಿತವಿಲ್ಲದ ಸಹಜ ಕೂಗು.
ರಸ್ತೆಯ ತುಂಬಾ ನಡೆಯುತ್ತಿರುವುದು ನಿತ್ಯ ವ್ಯಾಪಾರ.

ತಟ್ಟಿದಂತೆ ಕಾಣಲಿಲ್ಲ ಯಾರಿಗೂ
ತನ್ನ ಹೊರತಾದ ಬೇರೆ ಸದ್ದು!
ತನ್ನದೇ ಗುಂಗಲ್ಲಿ ಸಾಗುವ ಲೋಕ
ಕ್ರೌರ್ಯಕ್ಕೂ ಹೊರಗಾಯಿತೇ?
ಅರಳುವ ಹೂವಿಗೂ
ಕಣ್ಣಿಲ್ಲ
ನರಳುವ ಕೂಗಿಗೂ
ಕಿವಿಯಿಲ್ಲ.

ನನ್ನ ಕಿವಿಯಲ್ಲಿ ಮಾತ್ರ ಹೆಚ್ಚಾಯಿತು
ಮತ್ತೆ ಮತ್ತೆ ಮಗುವಿನ ಕೂಗು?

ಎಲ್ಲಿಲ್ಲದ ಸಿಟ್ಟಿನಿಂದ ಧಡಬಡನೇ
ಕೆಳಗಿಳಿದು ಬಾಗಿಲು ಬಡಿದೆ,
ಲೋಕದ ಭಾರವೆಲ್ಲಾ
ಈಗ ಹೆಗಲ ಮೇಲೆ!
ತೆರೆದ ಬಾಗಿಲ ಮಂದೆ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಅದೇ ಗಂಡುದನಿಯ ಆಸಾಮಿ,
ಇನ್ನೂ ಉಮ್ಮಳಿಸಿ ಅಳುತ್ತಿರುವ ಮಗು;
ಮತ್ತು
ಕೆನ್ನೆ ಮೇಲೆ ಮೂಡಿದ್ದ ನಾಲ್ಕು ಬೆರಳು!

“ಇಲ್ವೇನ್ರಿ ನಿಮಗೆ ಕರುಳು?
ಹೊಡಿತೀರಲ್ರೀ ಹೀಗೆ ಮಗೂನ?
ನಾಚಿಕೆ ಆಗಲ್ವಾ?”

ದಬಾಯಿಸಿದರೂ,
ಮಾತಿರದೆ ಸುಮ್ಮನೇ ನೋಡುತ್ತಾ ನಿಂತ ಗಂಡಸು
ಮತ್ತು ಅವನ ಮೌನ;
ಪ್ರತಿಭಟಿಸುವುದನ್ನೇ ಮರೆತ ಲೋಕದ
ಪ್ರತಿರೂಪದಂತಿತ್ತು!

ಸಿಟ್ಟು ನೆತ್ತಿಗೇರಿ ಅಂತಃಕರಣ ಬಹುವಾಗಿ ಉಕ್ಕಿ,
ಮಗುವನ್ನು ಎತ್ತಿಕೊಳ್ಳಲು ಚಾಚಿದರೆ ಕೈ;
ಓಡಿ ಹೋಗಿ ತನ್ನ ಅಪ್ಪನನ್ನೇ ಬಾಚಿ ತಬ್ಬಿಕೊಂಡಿತು ಮಗುವಿನ ಎರಡೂ ಕೈ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು.
ಈಗ ಮಂಗಳೂರು ವಾಸಿ
ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು
ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ