Advertisement
ರಾಜರಥದಲ್ಲಿ ವಿರಾಜಮಾನರಾದ ಭುವನಮ್ಮನ ಕತೆ

ರಾಜರಥದಲ್ಲಿ ವಿರಾಜಮಾನರಾದ ಭುವನಮ್ಮನ ಕತೆ

‘ನಮ್ಮನೆಯವನಿಗೆ ಊಟಾನು ನಾನೇ ತಿನಿಸಬೇಕು. ತಿಂಡಿನೂ ನಾನೆ ತಿನಿಸಬೇಕು. ಅವ್ನ ಪ್ರತಿ ಕೆಲ್ಸನೂ ನಾನೇ ಮಾಡಿಕೊಡಬೇಕು. ಸದಾ ನನ್ ಹಿಂದೇನೆ ಸುತ್ತುತ್ತಾ ಇರುತ್ತೆ ಅಸಾಮಿ. ಪ್ರೀತಿ ವಿಷಯಕ್ಕೆ ಬಂದಾಗ ಒಂದು ಎಳ್ಳಷ್ಟೂ ಕೂಡ ಕಡಿಮೆ ಮಾಡಿಲ್ಲ. ನನ್ನನ್ನು ಜೀವಕ್ಕೆ ಜೀವಕ್ಕಿಂತ ಪ್ರೀತಿಸ್ತಾರೆ. ಆ ವಿಷ್ಯದಲ್ಲಿ ನಾನು ತುಂಬಾ ತುಂಬಾ ಪುಣ್ಯವಂತೆ.’ಎಂದು ಮಿಂಚುಗಣ್ಣಾಗಿ ಆಕೆ ಹೇಳಿದ್ದು ಇಂದಿಗೂ ನೆನಪಿದೆ.  ‘ಆದ್ರೆ ದುಡ್ಡಿನ ಜವಾಬ್ದಾರಿ ಅಂದ್ರೆ ಉಹೂ ಎಂದುಬಿಡುತ್ತಾರೆ’  ಎಂದು ಆಕೆ ಸೇರಿಸಿದರು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ ಬರಹ
 

 

‘ತಾಯೆ, ಕನ್ನಡಾಂಬೆ! ಏನಿವತ್ತು? ಹೋಟ್ಲಿಂದ ಟಿಫಿನ್ ತಂದಿದಿರಾ? ಯಾಕೆ ಮನೇಲಿ ಯುದ್ಧವೇ ಮಾತೆ?’ ಎಂದು ನಾಟಕೀಯ ಶೈಲಿಯಲ್ಲಿ ಕೇಳಿದಾಗ ಅವರು ವಿಷ್ಣು ದರ್ಶಿನಿಯಿಂದ ಕಟ್ಟಿಸಿಕೊಂಡು ಬಂದಿದ್ದ ಇಡ್ಲಿ ವಡೆಯನ್ನು ಹೊಟ್ಟಿಗಿಳಿಸಿಕೊಳ್ಳುತ್ತಾ ‘ಹೂ ಕಣಪ್ಪ. ನಿನ್ನೆ ರಾತ್ರಿಯಿಂದ ಅಡುಗೆ ಇಲ್ಲ ಮನೇಲಿ. ಬೆಳಿಗ್ಗೆನು ಅಡುಗೆ ಮಾಡಕ್ ಮನಸ್ ಬರ್ಲಿಲ್ಲ. ಅದ್ಕೆ ಹೋಟ್ಲಿಂದ ತಂದೆ. ಒಂದೊಂದ್ ಸಲ ಬೇಜಾರಾಗತ್ತಪ್ಪ ಆ ಬೇವರ್ಸಿಯಿಂದ’ ಎಂದು ಡೈಲಾಗಿಗೆ ಹೊಂದುವಂತೆ ಮುಖ ಸಣ್ಣಗೆ ಮಾಡಿ ಹೇಳಿಮುಗಿಸಿ ವಡೆಯ ಚೂರನ್ನು ಸಾಂಬಾರಲ್ಲಿ ಅದ್ದಿ ಬಾಯಿಗಿಟ್ಟುಕೊಂಡು ಕಣ್ಣುಮುಚ್ಚಿ ವಡೆಯ ರುಚಿಯನ್ನು ಆಸ್ವಾದಿಸಿದರು.

‘ಅಂದ್ರೆ ನಿನ್ನೆ ರಾತ್ರಿ ಉಪವಾಸ ಇದ್ರಾ?’

‘ಅಯ್ಯೋ, ಅವನಿಗೋಸ್ಕರ ಯಾವಳು ಉಪವಾಸ ಇರ್ತಾಳೆ? ಕೆಲ್ಸ ಮುಗ್ಸಿ ನನ್ನ ರಾಜರಥದಲ್ಲಿ ಅಡಿಗಾಸ್ ಗೆ ಹೋಗಿ ಗಡದ್ದಾಗಿ ಎರಡು ಮಸಾಲೆ ದೋಸೆ ತಿಂಕಂಡು ಮನೆಗೋಗಿ ಅಡುಗೆ ಮಾಡಲ್ಲ ಅಂತ ಹೇಳಿ ಮನಿಕ್ಕಂದೆ. ಅವ್ನು ಪಾಪ ನಾನೂ ಊಟ ಮಾಡಿಲ್ಲ ಅಂತ ಅಂದುಕೊಂಡ. ನಮ್ಮನೆಯವರಿಗೆ ಹಾಗೆ ಮಾಡಿದ್ರೇನೇ ಬುದ್ಧಿ ಬರದು ಸುಮ್ನಿರಪ್ಪಾ.’ ಎಂದು ಗೆಲುವಿನ ನಗೆ ಬೀರುತ್ತಾ ತಿಂಡಿಯನ್ನು ಮುಗಿಸಿದ್ದರು.

‘ಭಲೇ ಭಲೇ! ಭುವನೇಶ್ವರಿ ದೇವಿಯವರೇ! ನಿಮ್ಮ ಚತುರತೆಗೆ ಮೆಚ್ಚಿದೆವು.’ ಎಂದಾಗ ಉಳಿದ ಸಹೋದ್ಯೋಗಿಗಳೆಲ್ಲರೂ ಗೊಳ್ಳೆಂದು ನಕ್ಕರು.

ಅವರಿದ್ದದ್ದೆ ಹಾಗೆ. ಜಾಣೆ. ಬದುಕಿನ ಪ್ರತಿಯೊಂದು ಘಳಿಗೆಗಳನ್ನು ಸೆಲೆಬ್ರೇಟ್ ಮಾಡುವವರು. ಕಷ್ಟ ಏನು ಮನಷಂಗೆ ಬರದೆ ಮರಕ್ಕಾ ಬತ್ತತೆ? ಎಂದು ಹೇಳಿ ನಕ್ಕು ಹಗುರಾಗುವವರು. ನಮ್ಮ ಕಥಾನಾಯಕಿ ಭುವನೇಶ್ವರಿದೇವಿಯವರಿಗೆ ಸುಮಾರು ಐವತ್ತರ ಆಸುಪಾಸು. ನಾನು ಕೆಲಸ ಮಾಡುತ್ತಿದ್ದ ಆ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಸಂಸ್ಥೆಯ ಎಲ್ಲಾ ಒಳಸುಳಿಗಳು ಅಲ್ಲಿರುವ ಮಾಲೀಕರ ಸಣ್ಣತನಗಳು ಅವು ಪ್ರಕಟವಾಗುವ ಸಂದರ್ಭಗಳು, ಅವರ ವೀಕ್ನೆಸ್ಸುಗಳ ಆದಿಯಾಗಿ ಅವರಿಗೆ ಎಲ್ಲಾ ಗೊತ್ತಿದ್ದವು. ಅವರು ಆ ಸಂಸ್ಥೆಯಲ್ಲಿ ಕನ್ನಡ ಕಲಿಸುತ್ತಿದ್ದರು. ಬೆಂಗಳೂರಿನಂತಹ ಶಹರದಲ್ಲಿ ಬೇರೆ ರಾಜ್ಯಗಳಿಂದ ಬದುಕು ಕಟ್ಟಿಕೊಳ್ಳಲು ಬರುವವರು ಹೆಚ್ಚಿರುವುದರಿಂದ ಮತ್ತು ಕನ್ನಡ ಮಾತ್ರ ಕಲಿಯುವುದರಿಂದ ಅನ್ನ ಸಿಗಲ್ಲ ಅನ್ನುವ ಧೋರಣೆಯಿಂದ ಒಂದು ಭಾಷಾ ವಿಷಯವಾಗಿ ಮಾತ್ರ ಅದರಲ್ಲೂ ದ್ವಿತೀಯವೋ ತೃತೀಯ ಭಾಷೆಯೋ ಆಗಿ ಕಲಿಸಲು ಹೊರಟರು ಸಹ ಕನ್ನಡ ಮಾತೃಭಾಷೆಯಲ್ಲದ ಮಕ್ಕಳಿಗೆ ಅದು ಕಬ್ಬಿಣದ ಕಡಲೆಯಾಗಿಯೇ ಕಾಣುತ್ತಿತ್ತು. ಹೀಗಿರುವ ಪರಿಸ್ಥಿತಿಯಲ್ಲಿ ಪ್ರತಿವರ್ಷವೂ ಲಿಪಿಯಿಂದ ಹಿಡಿದು ಹಳಗನ್ನಡ ಪದ್ಯಗಳವರೆಗೂ ಸರಾಗವಾಗಿ ಮಾತನಾಡಬಲ್ಲಷ್ಟು ಹಂತದವರೆಗೂ ಕನ್ನಡ ಕಲಿಸುವ ಹೊಣೆಗಾರಿಕೆ ಹೊತ್ತಿದ್ದರು. ಹೀಗೆ ಕಲಿಸುವಾಗ ಸಾಮ, ಭೇದ, ದಂಡ ಈ ಮೂರು ಪ್ರಯೋಗಗಳು ಕೂಡ ಮಕ್ಕಳ ಮೇಲಾಗುತ್ತಿದ್ದವು. ಮಕ್ಕಳು ಈ ಪ್ರಯೋಗಕ್ಕೆ ಎಷ್ಟು ಒಗ್ಗಿಕೊಂಡಿರುತ್ತಿದ್ದರೆಂದರೆ ‘ಮಿಸ್, ಇನ್ನೊಂದ್ ಬಾರ್ಸಿ ಮಿಸ್’ ಎಂದು ಹಿರಿ ವಿದ್ಯಾರ್ಥಿಗಳು ಬಂದು ಇವರನ್ನು ತಮಾಷೆ ಮಾಡುತ್ತಾ ಕನ್ನಡ ಕಲಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದರು. ಆಗೆಲ್ಲಾ ಅವರ ಕಣ್ಣಲ್ಲಿ ಸಣ್ಣಗೆ ನೀರಾಡುತ್ತಿತ್ತು. ಇತ್ತೀಚಿಗೆ ಫೋನ್ ಮಾಡಿದಾಗ ‘ದಂಡಪ್ರಯೋಗವಿಲ್ಲದೆ ಕನ್ನಡ ಕಲಿಸುವ ಹೊಸ ಮೆಥಡ್ಸ್ ಅನುಸರಿಸ್ತಾ ಇದಿನಪ್ಪ’ ಅಂದಿದ್ದರು.

ಕುಳ್ಳಗೆ ಗುಂಡಗೆ ಇದ್ದ ಅವರು ಪ್ರತಿದಿನ ತಿಳಿಬಣ್ಣದ ಕಾಟನ್ ಸೀರೆಗಳನ್ನ, ಆಗಾಗ ಅವರಿಷ್ಟದ ಮೈಸೂರ್ ಸಿಲ್ಕ್ ಸೀರೆಗಳನ್ನು ಉಟ್ಟುಕೊಂಡು ಬರುತ್ತಿದ್ದರು. ಬಲಗೈಯಲ್ಲಿ ವಾಚು, ಎಡಗೈಯಲ್ಲಿ ಎರಡು ಹಸಿರು ಬಳೆ ಜೊತೆಗೆರಡು ಬಂಗಾರದ ಬಳೆಗಳನ್ನು ಹಾಕಿಕೊಂಡು ಬರುತ್ತಿದ್ದರು. ಒಂಟಿ ಜಡೆಯ ಮೇಲೆ ಮೊಳಗಾತ್ರದ ದುಂಡುಮಲ್ಲಿಗೆ ದಂಡೆ, ವಾರಕ್ಕೊಮ್ಮೆ ಗುಲಾಬಿ ಹೂ ಮುಡಿದು ಆರ್ಮಿ ಯೂನಿಫಾರ್ಮಿನ ಬಣ್ಣದ ಅವರ ಸ್ಕೂಟಿ ಎಂಬ ರಾಜರಥದ ಮೇಲೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಅವರ ಗಂಡ ಸ್ವಯಂ ನಿವೃತ್ತಿ ಪಡೆದ ಆರ್ಮಿ ಆಫೀಸರ್ ಆಗಿದ್ದರಿಂದ ಅವರಿಗೆ ಸೇನೆಯ ಮೇಲೆ ದೇಶ ಕಾಯುವ ಸೈನಿಕರ ಮೇಲೆ ವಿಶೇಷ ಗೌರವವಿತ್ತು. ಅದರ ಅಭಿವ್ಯಕ್ತಿಯಾಗಿ ಅವರ ರಾಜರಥ ಆರ್ಮಿ ಯೂನಿಫಾರ್ಮಿನ ಬಣ್ಣ ಹೊಂದಿತ್ತು. ಅವರ ಗಂಡ ಸದ್ಯಕ್ಕೆ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕೆಲಸಕ್ಕೆ ಸೇರಿದ ದಿನದಿಂದ ನನ್ನ ಅಕ್ಕನಂತಾಗಿ ಬಿಟ್ಟಿದ್ದ ಅವರು ಆಗಾಗ ಮಂಡಕ್ಕಿ ವಗ್ಗರಣಿಯನ್ನು ತಂದುಕೊಡುತ್ತಾ ‘ಇವತ್ತು ನಮ್ಮನೆಯವರು ಇರ್ಲಿಲ್ಲ ಕಣಪ್ಪಾ. ಅದಕ್ಕೆ ನಿಮಿಗೂ ಒಂದು ಬಾಕ್ಸ್ ತಗಬಂದೆ.’ ಎಂದು ಕಾಳಜಿ ವಹಿಸುತ್ತಿದ್ದರು. ‘ನನ್ನ ಗಂಡನಿಗೆ ಬಾಳ ಅನುಮಾನ. ಅದಿಕ್ಕೆ ಅವ್ನಿಗೆ ಯಾಕೆ ಅವಕಾಶ ಮಾಡಿಕೊಡಬೇಕು ಅಂತ.’ ಅನ್ನುತ್ತಿದ್ದರು. ಅವರು ಯಾವ ಪುರುಷ ಸಹೋದ್ಯೋಗಿಗಳ ನಂಬರನ್ನು ಕೂಡ ಸೇವ್ ಮಾಡಿ ಇಟ್ಟುಕೊಳ್ಳುತ್ತಿರಲಿಲ್ಲ. ಮನೆಗೆ ಹೋದ ತಕ್ಷಣ ಯಾವ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಯಾವುದೇ ಸಭೆ ಸಮಾರಂಭಗಳಿಗೆ ಹೋಗಬೇಕಾದಾಗಲೂ ‘ನಿಮಗೆ ಗೊತ್ತಲ್ಲ. ನಮ್ಮನೆಯವರ ವಿಷಯ?’ ಎಂದುಬಿಡುತ್ತಿದ್ದರು. ನನಗಂತೂ ಒಮ್ಮೊಮ್ಮೆ ಇವರು ತಮ್ಮ ಮನೆಯವರನ್ನು  ಇರಿ, ಇದಕ್ಕೊಂದು ಪುರಾವೆ ಕೊಟ್ಟುಬಿಡುತ್ತೇನೆ.

‘ಅಯ್ಯೋ, ಅವನಿಗೋಸ್ಕರ ಯಾವಳು ಉಪವಾಸ ಇರ್ತಾಳೆ? ಕೆಲ್ಸ ಮುಗ್ಸಿ ನನ್ನ ರಾಜರಥದಲ್ಲಿ ಅಡಿಗಾಸ್ ಗೆ ಹೋಗಿ ಗಡದ್ದಾಗಿ ಎರಡು ಮಸಾಲೆ ದೋಸೆ ತಿಂಕಂಡು ಮನೆಗೋಗಿ ಅಡುಗೆ ಮಾಡಲ್ಲ ಅಂತ ಹೇಳಿ ಮನಿಕ್ಕಂದೆ. ಅವ್ನು ಪಾಪ ನಾನೂ ಊಟ ಮಾಡಿಲ್ಲ ಅಂತ ಅಂದುಕೊಂಡ. ನಮ್ಮನೆಯವರಿಗೆ ಹಾಗೆ ಮಾಡಿದ್ರೇನೇ ಬುದ್ಧಿ ಬರದು ಸುಮ್ನಿರಪ್ಪಾ.’ ಎಂದು ಗೆಲುವಿನ ನಗೆ ಬೀರುತ್ತಾ ತಿಂಡಿಯನ್ನು ಮುಗಿಸಿದ್ದರು.

ಪ್ರತಿ ಭಾನುವಾರ ಗಂಡ ಹೆಂಡತಿ ಇಬ್ಬರೂ ಹೋಟೆಲ್ಲಿಗೆ ಹೋಗಿ ಊಟ ಮಾಡಿಕೊಂಡು ಬಂದದ್ದಾಗಿಯೂ, ಸಿನಿಮಾಕ್ಕೆ ಹೋಗಿದ್ದಾಗಿಯೂ ಅಥವಾ ತುಮಕೂರಿನ ಬಳಿಯಿರುವ ದೊಡ್ಡಮ್ಮನ ದೇವಸ್ಥಾನಕ್ಕೋ, ಸಿದ್ಧಗಂಗಾ ಮಠಕ್ಕೋ, ಹುಬ್ಬಳ್ಳಿಯ ಸಿದ್ಧಾರೂಢರ ಸನ್ನಿಧಿಗೋ, ಮೈಸೂರು ಅರಮನೆಗೋ ಗಂಡ ಹೆಂಡತಿ ಇಬ್ಬರೇ ಹಾಯಾಗಿ ಹೋಗಿ ಬರುತ್ತಿದ್ದರು. ಆ ಕಥೆಗಳನ್ನು ರಸವತ್ತಾಗಿ ಹೇಳುತ್ತಿದ್ದರು. ನಾನೊಮ್ಮೆ ತಡೆಯಲಾರದೆ ‘ಏನ್ ಮೇಡಂ ನೀವು? ಸಾರು ಇಷ್ಟ್ ಜೀವ ಅದಾರೆ ನಿಮ್ಯಾಲೆ. ನೀವೇ ಸುಮ್ ಸುಮ್ನೆ ಅವರ ಮೇಲೆ ಅನುಮಾನದ ಹಣೆಪಟ್ಟಿ ಹಚ್ಚುತ್ತಿರಿ ಅನ್ಸತ್ತೆ’ ಎಂದು ಕೇಳಿಬಿಟ್ಟಿದ್ದೆ. ಅದಕ್ಕವರು ‘ಇಲ್ಲ, ಕಣಪ್ಪ. ಅವರಿಗೆ ಅನುಮಾನದ ಖಾಯಿಲೆ ಇರೋದು ನಿಜ. ಆದ್ರೆ ನನ್ನನ್ನು ಜೀವಕ್ಕೆ ಜೀವಕ್ಕಿಂತ ಪ್ರೀತಿಸ್ತಾರೆ. ಸದಾ ನನ್ ಹಿಂದೇನೆ ಸುತ್ತುತ್ತಾ ಇರುತ್ತೆ ಅಸಾಮಿ. ನಮ್ಮನೆಯವನಿಗೆ ಊಟಾನು ನಾನೇ ತಿನಿಸಬೇಕು. ತಿಂಡಿನೂ ನಾನೆ ತಿನಿಸಬೇಕು. ಅವ್ನ ಪ್ರತಿ ಕೆಲ್ಸನೂ ನಾನೇ ಮಾಡಿಕೊಡಬೇಕು. ಪ್ರೀತಿ ವಿಷಯಕ್ಕೆ ಬಂದಾಗ ಒಂದು ಎಳ್ಳಷ್ಟೂ ಕೂಡ ಕಡಿಮೆ ಮಾಡಿಲ್ಲ. ಆ ವಿಷ್ಯದಲ್ಲಿ ನಾನು ತುಂಬಾ ತುಂಬಾ ಪುಣ್ಯವಂತೆ.’ಎಂದು ಮಿಂಚುಗಣ್ಣಾಗಿ ಹೇಳಿದ್ದು ಇಂದಿಗೂ ನೆನಪಿದೆ. ಮುಂದುವರೆದು ‘ಆದ್ರೆ ದುಡ್ಡಿನ ಜವಾಬ್ದಾರಿ ಅಂದ್ರೆ ಉಹೂ. ಅವನ ಹತ್ತಿರ ಮನೆಬಾಡಿಗೆಗೆ ಕಿರಾಣಿಗೆ ದುಡ್ಡು ಇಸ್ಕಣಕೆ ಜೀವ ಹೋಗುತ್ತಪ್ಪ.’ ಹಾಗೆಯೇ ಎಂದು ಸೇರಿಸುವುದನ್ನು ಮರೆಯುವುದಿಲ್ಲ. ‘ಇರಾದೊಂದು ಜೀವ್ನ. ಅದ್ನ ಯಾಕೆ ಟೆನ್ಶನ್ ಮಾಡಿಕಂಡ್ ಸಾಯದು. ಇಬ್ರಿದೀವಿ. ಖುಷ್ ಖುಷಿಯಾಗಿ ಇರಾಣ ಬಿಡೆ ಅಂತಾನಪ್ಪ ನಮ್ಮನೆಯವನು.’ ಎಂದು ಮುಗುಳ್ನಗುತ್ತಾರೆ. ಆಗ ಅವರ ಕೆನ್ನೆ ಕೆಂಪಾಗಿರುತ್ತದೆ.

ಆದರೆ ಪಿಸುಮಾತಿನ ಮಂದ್ರ ಸ್ವರದಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ಹಂಚಿಕೊಂಡ ವಿಷಯಗಳು ಕೂಡ ಒಂದು ಸರಳರೇಖೆಯಲ್ಲಿ ಜೋಡಿಸಿಡಲಾಗದ ಚುಕ್ಕಿಗಳ ಜಾಲದಲ್ಲಿ ನನ್ನನ್ನು ನೂಕಿಬಿಟ್ಟಿವೆ. ಮಕ್ಕಳಿಲ್ಲದ ಕೊರಗು ಅವರನ್ನ ಆಗಾಗ ಕಾಡಿದೆ. ಮಕ್ಕಳಿಲ್ಲ ಅಂತಾನೆ ಎರಡನೇ ಮದುವೆ ಅಂತೆ… ಎನ್ನುವ ಮಾತುಗಳಿಗೆ ಕನಲಿದ್ದು ಕಂಡಿದ್ದೇನೆ.

‘ಕೆಲಸ ಬಿಟ್ಟರೆ ನಾನು ಸಾಕುತ್ತೇನೆ… ನೀನು ಕೆಲ್ಸ ಬಿಡು. ಸಾಕಲಿಲ್ಲ ಅಂದ್ರೆ ನೋಡು. ಆಗ ಮಾತಾಡು. ಅಲ್ಲಾ, ನೀನು ದುಡಿದ ದುಡ್ಡನ್ನು ಏನು ಮಾಡ್ತಿಯಾ? ಮನೆ ನಡೆಸು’

‘ಕನ್ನಡ ಕನ್ನಡ ಅಂತೀವಿ. ಭಾಷೆ ಕಲಿಸೋರಿಗೆ ಬೆಲೆನೇ ಇಲ್ಲ. ಇಲ್ಲಿ ಬರೊ ಸಂಬಳ ಯಾವ್ದಕ್ಕೂ ಸಾಕಾಗಲ್ಲ. ಅದಿಕ್ಕೆ ಮನೆಗೋಗಿ ಒಂದು ನಾಲ್ಕು ಮಕ್ಕಳಿಗೆ ಮನೆಪಾಠ ಮಾಡದು.’

‘ಯಾರಿಗೂ ಯಾರೂ ಆಗಲ್ಲಪ್ಪ. ಅದಿಕ್ಕೆ ನಾನು ಆ ದೇವ್ರತ್ರ ಒಳ್ಳೆ ಆರೋಗ್ಯ ಕೊಟ್ಟುಬಿಟ್ರೆ ಸಾಕು ಅಂತಾನೆ ಕೇಳಿಕೊಳ್ತೀನಿ. ಉಳಿದದ್ದನ್ನೆಲ್ಲಾ ನಾನು ನಿಭಾಯಿಸ್ತೀನಿ ಅನ್ನೋ ಶಕ್ತಿ ನಂಗೈತೆ.’

‘ಟೀವಿ, ಫ್ರಿಡ್ಜ್ ಎಲ್ಲಾ ಸೆಕೆಂಡ್ ಹ್ಯಾಂಡಿಗೆ ಮಾರಿಬಿಡ್ತಿನಪ್ಪ. ಸುಮ್ನೆ ಪ್ರಯೋಜನ ಇಲ್ಲ.’

‘ಚೀಟಿ ದುಡ್ಡು ಕಟ್ಟುತ್ತಾ ಇದೀನಿ. ಇನ್ನೊಂದೆರಡು ವರ್ಷ. ಆಮೇಲೆ ಮನೆ ಒಂದು ಲೀಝ್ಗೆ ಹಾಕಿಸಿಕೊಂಡು ಬಿಟ್ರೆ ನೆಮ್ಮದಿ. ನಂದು ಅಂತ ಒಂದು ಸೂರಾಗತ್ತೆ. ಆಮೇಲೆ ಇರೋವರೆಗೂ ಯಾರೂ ನನ್ನನ್ನು ಮನೆ ಬಿಟ್ಟು ಹೋಗು ಅನ್ನಲ್ಲ.’

‘ಈವತ್ತು ನಮ್ಮನೆಯವನು ಟೀವಿ ಒಡೆದು ಹಾಕ್ಯನೆ. ಇನ್ನೊಂದಿಷ್ಟ್ ದಿನ ಟೀವಿ ಬಂದ್. ಸುಮ್ನೆ ರೇಡಿಯೋ ತಗಳೋದೆ ಒಳ್ಳೇದು.’

‘ಅಪ್ಪನಿಗೆ ಕಣ್ಣು ಆಪರೇಷನ್ ಮಾಡಿಸಿದೆ.’

‘ನನ್ನ ಪಾಲಿನ ಆಸ್ತಿ ಕೇಳಿಬಿಡೋಣ ಅಂತ ಅನಿಸಿತ್ತು. ಆದ್ರೆ ಅಣ್ಣನಿಗೆ ಇರ್ಲಿ ಅಂತ ಬಿಟ್ಟುಬಿಟ್ಟೆ.’

‘ಧಾರವಾಡಕ್ಕೆ ಹೋದ್ರೆ ಪೇಡಾ ತಗಂಬರ್ರಿ. ಅದೂ ಬಾಬು ಸಿಂಗ್ ಠಾಕುರ್ ಪೇಡಾನೆ ಆಗ್ಲಿ. ಛೆ, ಏನಪ್ಪ. ಧಾರವಾಡಕ್ಕೆ ಓಗಿ ಅಂಗೆ ಬರೋದ? ಮರಿಬೇಡ್ರಿ ಮತ್ತೆ.’

ಇಂಥ ಸಾಲುಗಳನ್ನೆಲ್ಲ ಹೇಳಿ ಏನು ಹೇಳಿದಂತಾಯಿತು? ಅವರ ನಿಜದ ಹೆಸರು ಭುವನೇಶ್ವರಿಯಲ್ಲ. ಕನ್ನಡ ನುಡಿಯನ್ನೇ ನಂಬಿ ಬದುಕಿ ಕಟ್ಟಿಕೊಳ್ಳುವ, ಪುರುಷರ ಅಧಿಪತ್ಯ ಸ್ಥಾಪನೆಯ ಅಹಂಕಾರದ ಬಲೂನಿಗೆ ತಮ್ಮದೇ ಪುಟ್ಟ ಸೂಜಿ ಮೊನೆ ತಾಕಿಸುವ ಚಾಣಕ್ಷತೆವುಳ್ಳವರು, ತವರಿಗಾಗಿ, ಪ್ರೀತಿಸಿದವರಿಗಾಗಿ, ಕುಟುಂಬಕ್ಕಾಗಿ ತಮ್ಮ ಅಸ್ಮಿತೆಯ ಗುಲಗಂಜಿಯಷ್ಟನ್ನು ತ್ಯಾಗ ಮಾಡಿಯೂ, ಮತ್ತೆ ಅದನ್ನು ಪುನಃ ಪಡೆದುಕೊಳ್ಳುವ ಧೀರೆಯಾಗಿಯೂ, ಬದುಕನ್ನು ಇನ್ನಿಲ್ಲದಂತೆ ಪ್ರೀತಿಸುವ ಅಪ್ಪಟ ಮನುಷ್ಯಳಾಗಿಯೂ, ‘ಬದುಕಿದ್ದು… ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ’ ಎನ್ನುವ ಲಂಕೇಶರ ಅವ್ವಳ ಮುಂದುವರಿಕೆಯಾಗಿಯೂ ನನಗೆ ಭುವನೇಶ್ವವರಿಯಂತಹ ಅದೆಷ್ಟೋ ಅಕ್ಕಂದಿರು ತಾಯಂದಿರು ಕಾಣುತ್ತಾರೆ. ಕನ್ನಡ ಪಾಠಗಳ ಕೊನೆಯಲ್ಲಿ ಬರುವ ಸಾರಾಂಶದಂತಿರುವ ಈ ಕೊನೆಯ ಪ್ಯಾರಾದ ಚೌಕಟ್ಟನ್ನು,ಅದರ ಕ್ಲೀಷೆಯನ್ನು ಪ್ರತಿ ಕ್ಷಣ ಮೀರುತ್ತಿರುತ್ತಾರೆ ಕೂಡ ಎನ್ನುವ ಪ್ರಜ್ಞೆ ಸದಾ ಇದೆ. ನನಗೀಗಲೂ ನಮ್ಮ ಕಥಾನಾಯಕಿ ತಾಯಿ ಭುವನೇಶ್ವರಿಯನ್ನು ನೆನೆಸಿಕೊಂಡಾಗಲೆಲ್ಲ ಅವರು ಪಾಠ ಮುಗಿಸಿ ಸಂಸ್ಥೆಯ ಆವರಣದ ಆಚೆ ಬಂದು ತಮ್ಮ ರಾಜರಥದ ಬಳಿ ತೆರಳಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹೆಲ್ಮೆಟ್ಟನ್ನು ಧರಿಸಿ ವಿರಾಜಮಾನರಾಗಿ ಕೂತು ಗಾಳಿಯ ಸೀಳಿ ‘ಕೀ ಕೀನ್..’ ಎಂದು ಹಾರ್ನ್ ಒತ್ತುತ್ತಾ ಮನೆಗೆ ಧಾವಿಸುವ ದೃಶ್ಯವೇ ನೆನಪಿಗೆ ಬರುತ್ತದೆ. ಅವರು ಹಾಗೆ ಅವಸರದಲ್ಲಿ ವೇಗವಾಗಿ ಹೋಗುವುದು ಮನೆಪಾಠಕ್ಕೆ ಬರುವ ಪುಟಾಣಿ ಮಕ್ಕಳು ಕಾಯುತ್ತಿರಬಹುದು ಎಂದು. ಮನೆಗೆ ಬರುವ ಎಲ್ಲರೂ ಮಕ್ಕಳೇ ಮಹಾತಾಯಿಗೆ!

About The Author

ದಾದಾಪೀರ್ ಜೈಮನ್

ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ 'ಪರ್ದಾ & ಪಾಲಿಗಮಿ' ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch  ಅವರ 'ಬ್ಯಾರೆನ್ ಲ್ಯಾಂಡ್' ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.

1 Comment

  1. ಕುಸುಮಾ ಗದಗ.

    ಬದುಕಿನ ಪ್ರೀತಿಯನ್ನು ಹೆಚ್ಚಿಸುವ ಲೇಖನ. ಕಥಾನಾಯಕಿ ನಮ್ಮ ಮೆಚ್ಚಿನ ಲೇಖಕಿ ಭುವನೇಶ್ವರಿ ಹೆಗಡೆ. ನಿಮ್ಮ ಬರಹಕ್ಕೆ ಅಭಿನಂದನೆ .

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ