Advertisement
ವಲಸಿಗರ ಹಬ್ಬ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ವಲಸಿಗರ ಹಬ್ಬ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ದಕ್ಷಿಣ ಭೂಗೋಲದಲ್ಲಿರುವ ಆಸ್ಟ್ರೇಲಿಯ ವಲಸಿಗರಿಂದ ತುಂಬಿದ ನಾಡಲ್ಲವೆ? ೧೭ನೇ ಶತಮಾನದಲ್ಲಿ ಬಂದಿಳಿದವರಿಂದ ಹಿಡಿದು ಈಗೀಗ ಬಂದಿಳಿಯುತ್ತಿರುವ ಹಲವರಿಗೆ ಮೊದಲು ಅನುಭವಕ್ಕೆ ಬರುವುದೇ ಇದು ದಕ್ಷಿಣನಾಡು ಎನ್ನುವ ಸಂಗತಿ. ಚಳಿಯಿರಬೇಕಾದ ಡಿಸೆಂಬರ್‌ನಲ್ಲಿ ಬೇಸಿಗೆ, ಬೇಸಿಗೆಯ ಜೂನ್ ತಿಂಗಳಲ್ಲಿ ಚಳಿಗಾಲ. ಸಿಂಕಿನ ತೂಬಿನಲ್ಲಿ ನೀರು ತಾನೇ ತಾನಾಗಿ ಸುರುಳಿ ಸುತ್ತಿ ಕಾಣೆಯಾಗುವುದು ಉತ್ತರ ಭೂಗೋಲದ ವಿರುದ್ಧ ದಿಕ್ಕಲ್ಲಿ ಎಂಬ ಮಿತ್ ಬೇರೆ! ಇದೆಲ್ಲಾ ಹೊರಜಗತ್ತಿನ ವಿಷಯಗಳಾಯಿತು. ಇನ್ನು ದಕ್ಷಿಣ ಭೂಗೋಲದಲ್ಲಿ ಜನರ ನೆನಪುಗಳಿಗೇನಾಗುತ್ತದೆ, ಕನಸುಗಳಿಗೇನಾಗುತ್ತದೆ ಎಂದು ಯಾರೂ ಗಣನೆಗೆ ತೆಕ್ಕೊಂಡು ರಿಸರ್ಚ್ ಮಾಡಿಲ್ಲ. ಹಾಗಾಗಿ ಅದರ ಬಗ್ಗೆ ಗೊತ್ತಿಲ್ಲ!

ಅದೇನೇ ಇರಲಿ, ಇಲ್ಲಿ ವಲಸಿಗರು ನಡೆಸುವ ಹಬ್ಬ ಹರಿದಿನಗಳ ಕಡೆ ಕೊಂಚ ಗಮನ ಹರಿಸಿ. ಇಂಡಿಯಾದಲ್ಲಿ ಚಳಿಗಾಲದ ಹಿನ್ನೆಡೆ ಸೂಚಿಸುತ್ತಾ, ಪೈರು ಮನೆಗೆ ಬರುವ ಸಂಕ್ರಾಂತಿ ಇಲ್ಲಿ ಚಳಿಗಾಲದ ಮುನ್ನಡೆಯಲ್ಲಿ ಆಚರಿಸಬೇಕು. ಸೂರ್ಯ ಉತ್ತರಕ್ಕೆ, ದಕ್ಷಿಣದ ನಮ್ಮ ತಲೆಯ ಮೇಲಿಂದ ವಾರೆಯಾಗಿ ಹೋಗುತ್ತಿರುವಾಗ. ಆದರೂ ನಮ್ಮ ಸೃಜನಶೀಲ ಜಾಣೆ ಹೆಂಗಸರು ಎಲ್ಲಿಂದಲೋ ಕಬ್ಬು ಸಂಪಾದಿಸುತ್ತಾರೆ, ಎಲ್ಲಿಂದಲೋ ಎಳ್ಳು ನಿಭಾಯಿಸುತ್ತಾರೆ. ಬೀರಿಕೊಂಡು ಸಂತೋಷಪಡುತ್ತಾರೆ. ಹಾಗೆಯೇ ಯುಗಾದಿಯ ವಸಂತದ ಉಲ್ಲಾಸ ಇಲ್ಲಿ ಚಳಿಗಾಲದ ಹೊಸ್ತಿಲಲ್ಲಿ ನಡೆಯುತ್ತದೆ. ಆದರೂ ಹೇಗೋ ಬೇವು ಬೆಲ್ಲ ಎಣ್ಣೆನೀರು ಮನೆಗಳಲ್ಲಿ ಬಿಡದೆ ನಮ್ಮನ್ನು ಆವರಿಸುತ್ತದೆ.

ಈ ಮಾತು ಬರೇ ಇಂಡಿಯಾದವರಿಗೆ ಸಲ್ಲುವುದಷ್ಟೇ ಅಲ್ಲ. ೧೭ನೇ ಶತಮಾನದಲ್ಲೇ ಬಂದಿಳಿದು ಇದನ್ನು ಆಸ್ಟ್ರೇಲಿಯ ಎಂದು ನಾಮಕರಣ ಮಾಡಿದ ಬಿಳಿಯರ ಪಾಡೂ ಅಷ್ಟೆ. ಬೆಂಕಿಗೂಡಿನ ಬಳಿ ಸಾಕ್ಸ್ ನೇತು ಹಾಕುವುದು ಚಳಿಗಾಲದಲ್ಲಿ ಕಾಲು ಬೆಚ್ಚಗಿಡುವದಕ್ಕಾಗಿ. ಅದು ಕ್ರಿಸ್ಮಸ್ ಹಬ್ಬದ ಒಂದು ಪ್ರತಿಮೆ. ಅದು ಬೇಸಿಗೆಯ ಬಿಸಿಲಿಗೆ ಸುಡುವ ನೆಲದ ಈ ನಾಡಲ್ಲಿ ಏನು ಮಾಡುತ್ತಿದೆ? ಹಾಗೆಯೇ ಹಿಮಾಚ್ಛಾದಿತ ಫಿರ್‍ ಮರ ಇಲ್ಲಿ ಹೇಗೆ ಅವತರಿಸುತ್ತದೆ? ಬೆಚ್ಚಗಿಡುವ ಕೆಂಪು ಕಂಬಳಿಯಂತ ಉಡುಗೆ ತೊಟ್ಟ ಸಾಂಟಾ ಕ್ಲಾಸ್ ಇಲ್ಲಿ ಯಾಕೆ? ಏನೇ ಕೇಳಿದರೂ, ಸಂಕ್ರಾಂತಿ, ಯುಗಾದಿ, ದೀಪಾವಳಿ, ಕ್ರಿಸ್ಮಸ್‌ ಹಬ್ಬಗಳ ಅಲ್ಲಿಯ ಎಲ್ಲ ಪ್ರತಿಮೆಗಳು ಇಲ್ಲೂ ಇವೆ. ತಮ್ಮ ತಮ್ಮ ಪಾಡಿಗೆ, ತಮ್ಮ ತಮ್ಮ ಜಾಗದಲ್ಲಿ.

ನೀವು ಈ ವಿಪರ್ಯಾಸಗಳನ್ನು ನೋಡಿ ನಗುವ ಮುಂಚೆ ಒಂದು ಗಂಭೀರವಾದ ವಿಚಾರ ಹೇಳಿಬಿಡುವೆ. ಇವೆಲ್ಲಾ ಎಷ್ಟೇ ವಿಪರ್ಯಾಸವಾದರೂ ವಲಸಿಗರಿಗೆ ಬೇಕೇ ಬೇಕಾದ ಸಂಗತಿಗಳು. ತಮ್ಮ ಮೂಲನಾಡಿನ ಆಚಾರ ವಿಚಾರಗಳನ್ನು ನೆನಪಿಸುವುದಕ್ಕಾಗಿ ಈ ಹಬ್ಬಗಳ ಆಚರಣೆ ಎಂಬುದು ಮೇಲ್ಪದರವಷ್ಟೆ. ಅದಕ್ಕಿಂತ ಆಳದ ಇನ್ನೊಂದು ಅನಿವಾರ್ಯವಿದೆ. ಬಿಳಿಯರ ಈ ಸಮಾಜದಲ್ಲಿ ಸಣ್ಣಪುಟ್ಟ ಸಮುದಾಯಗಳಾಗಿ ನಾವು ಉಳಿದುಕೊಳ್ಳುತ್ತೇವೆ. ಆ ಮೂಲಕವಾಗಿ ಸಮಾಜದೊಡನೆ ಒಂದು ಸಂಪರ್ಕ ಸಾಧಿಸಿಕೊಳ್ಳುತ್ತೇವೆ. ಹಾಗಾಗಿಯೇ ಇವೆಲ್ಲಾ ಸಮಾಜದಲ್ಲಿ ವಲಸಿಗರು ತಮ್ಮ ಸಮುದಾಯದ ಚಹರೆಯನ್ನು ಉಳಿಸಿಕೊಳ್ಳಲು ಪಡುವ ಪ್ರಯತ್ನಗಳು ಎಂದು ಕಾಣುತ್ತದೆ. ಸಮುದಾಯಕ್ಕೆ ಅನಿವಾರ್ಯವಾದ ಈ ಪ್ರಯತ್ನಗಳೆಲ್ಲಾ ವಯ್ಯಕ್ತಿಕದಲ್ಲಿ ಕೂಡ ಕೆಲಸ ಮಾಡುತ್ತವೆ. ಮನದಲ್ಲಿ ಎತ್ತೆತ್ತಲೋ ಯಾವುಯಾವುದಕ್ಕೋ ಕೊಂಡಿ ಬೆಸೆದು ದಿಗ್ಭ್ರಮೆ ಹುಟ್ಟಿಸುತ್ತದೆ. ಅದರ ಬಗ್ಗೆ ಇನ್ನು ಯಾವಾಗಲಾದರೂ ಹೇಳುತ್ತೇನೆ.

ಇನ್ನು ಎಷ್ಟೋ ಆಚಾರ ಅನಾಚಾರ ಅಪಚಾರಗಳ ನಡುವೆಯೂ ಉಸಿರು ಹಿಡಿದು ಉಳಿದುಕೊಂಡ ಮೂಲನಿವಾಸಿಗಳಾದ ಅಬಾರಜಿನಿಗಳಿಗೆ ದಿನನಿತ್ಯವೂ ಹಬ್ಬವೇ, ದಿನನಿತ್ಯವೂ “ಹರಿ” ದಿನವೇ!

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ