Advertisement
ವಸ್ತಾರೆ  ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ

ವಸ್ತಾರೆ ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ

ಚಂದ ಅಂದರೇನು? -ಒಮ್ಮಿಂದೊಮ್ಮೆಗೆ ಈ ಪ್ರಶ್ನೆ ಎದುರಾದರೆ ಉತ್ತರಿಸುವುದು ಬಲು ಕಷ್ಟ. ನಮ್ಮ ನಿಲುಕುಗಳಿಗೆ ಒದಗುವ ಎಷ್ಟೆಲ್ಲ ಅನುಭವಗಳಿಗೆ ಆಗಿಂದಾಗ್ಗೆ ಈ ‘ಚಂದ’ದ ಲಗತ್ತು ಹಚ್ಚುತ್ತೇವೆ. ‘ರೋಜ’ಅದಿಂದ ಮೊದಲುಗೊಂಡು ಇತ್ತೀಚಿನ ‘ಗುರು’ವಿನವರೆಗಿನ ಎಷ್ಟೆಷ್ಟೋ ರೆಹಮಾನ್-ಗುನುಗುಗಳಿಗೆ, ಹಣೆಯಲಿ ಬರೆಯದ ನಿನ್ನ ಹೆಸರನು ಹೃದಯದಿ ನಾನೇ ಕೊರೆದಿರುವೆ… -ಅನ್ನುವಂಥ ಕಾಯ್ಕಿಣಿ ಸಾಲುಗಳಿಗೆ, ಮೊಮೆಂಟರಿ ಲ್ಯಾಪ್ಸ್ ಆಫ್ ರೀಸನ್ (ತರ್ಕದ ಹಂಗಾಮೀ ರದ್ದು?) -ಅಂತೊರಲುವ ಪಿಂಕ್‌ಫ್ಲಾಯ್ಡ್ ಬೀಟುಗಳ ಲಯಕ್ಕೆ, ಇಲ್ಲೆಲ್ಲೋ ಕಾಂಕ್ರೀಟಿನಲ್ಲಿ ಮೊಳೆತ ಚಿಗುರುಗೆಂಪು ಅಭೀಪ್ಸೆಗೆ, ಬೋಳು ಗೋಡೆಯ ಮೇಲೆ ಎಲ್ಲಿಂದಲೋ ಬಿಸಿಲುಗೋಲು ಚೆಲ್ಲಿ ತಳೆದ ನೆರಳಿಗೆ, ವರಸೆ ವರಸೆಗಳನ್ನು ತೊಳೆದ ಬೆಳಕುಗಳ ಹೊರಳಿಗೆ, ಧ್ಯಾನದಲ್ಲೆಲ್ಲೋ ಹಾಗೇ ಫಲಿಸಿಬಿಡುವ ರಾಮಾನುಜನ್ ಪದ್ಯಕ್ಕೆ, ಎಣಿಸುವಷ್ಟೇ ಗೆರೆಗಳಿದ್ದು ಎಣಿಕೆ ಮೀರಿ ಮಿಗುವ ಆರ್‍ಕೆ ಲಕ್ಷ್ಮಣ್ ವ್ಯಂಗ್ಯಕ್ಕೆ, ಸಂದಣಿಯ ಮರದಲ್ಲಿ ಗಲಗಲವೆಂದ ಗೆಲ್ಲುಗಳ ಹಸಿರಿಗೆ, ಅಲ್ಲೇ ಒಳಗಿಂದೆಲ್ಲೋ ಕೇಳಿದ ಕುಹೂವಿಗೆ, ಮೊದಲ ಪುಳಕದ ನೆನಪಿಗೆ, ಸುಖಸ್ಖಲನದ ಬಿಸುಪಿಗೆ… -ಹೀಗೆ ಎಷ್ಟೆಷ್ಟಕ್ಕೋ ಚಂದ ಅನ್ನುತ್ತೇವೆ. ಹಾಗಾದರೆ ಚಂದ ಅಂತಂದರೇನು? ಬಡಿಸಿದೆಲೆ ಮೇಲೆ ಹಬೆಯಾಡುವ ರುಚಿಕಟ್ಟೆ? ಸುರಗಿ ಮೊಗ್ಗಿನ ಗಂಧವೆ? ಉನ್ಮಾದಿತ ಸ್ಪರ್ಶವೆ?… ದರ್ಶನವೆ? ಶ್ರವಣವೆ? ಮನನವೆ? ಅಥವಾ ಈ ಒಟ್ಟಾರೆ ಮನದಟ್ಟೇ? ಇಲ್ಲಾ- ಚಂದವೆಂದರೊಂದು ಸರಂಜಾಮೇ?

ಬರೇ ನಾದವಿರುವ, ಪದವೇ ಇಲ್ಲದ ಆಲಾಪವನ್ನು ಕೇಳಿದಾಗಲೊಮ್ಮೊಮ್ಮೆ ಹಾಗೇ ಕೇಳುತ್ತಲೇ ಇರಬೇಕೆನಿಸುತ್ತದೆ. ಅದನ್ನೇ ಸುಶ್ರಾವ್ಯವೆನ್ನುತ್ತೇವೆ. ಆ ಸಂಗೀತಕ್ಕೆ ಆಗ ಮಾತು ಅಡಚಣೆಯೆನಿಸುತ್ತದೆ. ಮೌನ ಸಂಪನ್ನವೆನಿಸುತ್ತದೆ. ತಲೆದೂಗುತ್ತೇವೆ. ಅವಾಕ್ಕಾಗುತ್ತೇವೆ. ಆ ಕ್ಷಣದ ‘ಟ್ರಾನ್ಸ್’ನಲ್ಲಿ ಇನ್ನೇನೂ ಇಲ್ಲವೆನ್ನುವ ಹಾಗೆ ನಿರಾಕಾರವಾಗುತ್ತೇವೆ. ಮೈ ಮರೆಯುತ್ತೇವೆ. ಚಂದ ಅನ್ನುತ್ತೇವೆ! ಗುಡ್ಡದ ನಡುವೆ ಎದ್ದು ಬರುವ ಸೂರ್ಯ, ತಿಳಿ ಮೋಡದಲ್ಲಿ ತೇಲುವ ಚಂದ್ರ, ನಿಯಾನುಗಳ ಪ್ರಭೆಯಿರದ ಊರಾಚೆಯ ನೀರವ, ಕತ್ತಲು… ಇವೆಲ್ಲ ಎಷ್ಟು ಚಂದ!! ಹೀಗಿದ್ದಲ್ಲಿ ಚಂದ ಅನ್ನುವುದು ನಮ್ಮ ಮನಸ್ಸಿನ ಎಟುಕುಗಳ ಅನುಭವವಷ್ಟೇ ಅಂತಾಯಿತು. ಅಲಿ ಅಲಿ ಅಲಿ ಅಲಿ ಅಂತ ಕಟ್ಟಾ ಹುಚ್ಚೆಬ್ಬಿಸಿ ಮನವಲೆಸುವ ಫತೇ ಅಲಿ ಖಾನ್‌ನ ಸೂಫೀ ಧಾಟಿಯೋ- ಭೀಕರ ಕಾಂಕ್ರೀಟು ಗೋಡೆಗಳಲ್ಲೂ ಚೆಲುವು ಚೆಲ್ಲುವ ಕಾರ್ಲೋ ಸ್ಕಾಪಾನ ಊಹೆಯ ಗೆರೆಗಳೋ- ತುಮ್ಹಾರೀ ಅಮೃತಾದ ನಿವೇದನೆಯ ಒದ್ದೆ ಒದ್ದೆ ಕಕುಲಾತಿಯೋ- ಇವೆಲ್ಲ ಚಂದ ಅನಿಸುವುದು ನಾವು ಅವನ್ನು ಹಾಗೆ ಅನುಭವಿಸಿರುದಷ್ಟೇ ಕಾರಣ. ಈ ಅನುಭವವನ್ನು ತಳೆಯುವಂತಹ ನಮ್ಮ ಮನಸ್ಸಿನ ಅನುವು, ಅಣಿಗಳೂ ಅಷ್ಟೇ ಮುಖ್ಯ.

ಆದರೆ ಹೊಸಕಾಲದ ‘ವಸ್ತು’ನಿಷ್ಠ ಮೂರ್ತತೆಯ ಚುಕ್ಕಾಣಿ ಹಿಡಿದ ನಾವೆಷ್ಟೋ ಮಂದಿ ಚಂದ ಅನ್ನುವುದೆಲ್ಲ ದೃಶ್ಯಜನ್ಯ ಅಂದುಕೊಂಡಿದ್ದೇವೆ. ನಮ್ಮ ಎಚ್ಚರದ ಮಗ್ಗುಲಿನ- ಮುಂಬದಿ, ಹಿಂಬದಿ, ಎಲ್ಲ ಬದಿ-ಬದುಗಳೆಲ್ಲವಕ್ಕೂ ಎಂಥದೋ ಚಂದದ ತಾಕೀತು ಮಾಡುತ್ತೇವೆ. ಗೋಡೆಗೆ ದಂಗು ಬಡಿಯುವ ಬಣ್ಣ ಬಳಿದು, ದುಬಾರೀ ಎಮ್ಮೆಫ್ ಹುಸೇನೊಂದನ್ನು ನೇತು ಹಾಕಿ ಅದೇ ‘ಚಂದ’ದ ಫರಮಾನು ಮಾಡುತ್ತೇವೆ. ಚಂದ ಕಾಣುತ್ತದೆಂದು ಅಡುಗೆಮನೆಯಲ್ಲಿರಬೇಕಾದ ಕೆಲ್ವಿನೇಟರನ್ನು ಊಟದ ಮನೆಯಲ್ಲಿಡುತ್ತೇವೆ. ಅದರ ಮೇಲೆ ಪಿಂಗಾಣಿಯ ದಾನಿಯಿಟ್ಟು ಗಿಲೀಟಿನ ಹೂದೂಗುತ್ತೇವೆ. ಅದರ ಮೇಲೆ ಮೇಣದ ಇಬ್ಬನಿಯೂ ಇದ್ದಂತಿದೆ. ಫ್ಯಾಕ್ಟರೀಮೇಡ್ ಪೀಟರಿಂಗ್ಲೆಂಡ್‌ಗಳು ಈಚೀಚೆಗೆ ಸಾಧಾರಣವೆನಿಸಿ ಹೇಳಿ ಮಾಡಿಸಿದ ಮನೀಷ್ ಮಲ್ಹೋತ್ರಾನನ್ನೋ, ರಿತು ಭೇರಿಯನ್ನೋ ತೊಡುತ್ತೇವೆ. ಈಚೆಗೆ ಯೂರೋಪಿನ ಅನನ್ಯ ‘ಪ್ರಾದ’ವನ್ನೂ ತೊಟ್ಟು ಬೀಗಿದ್ದೇವೆ. ಮಣಿಕಟ್ಟಿಗೆ ಎಸ್ಪಿರಿಟ್. ಕಣ್ಣಿಗೆ ರೇಬಾನ್. ಕಾಲಿಗೆ ಲೀ-ಕೂಪರ್… ಇವೆಲ್ಲ ಚಂದ ಕಾಣುತ್ತವೆ. ಮನೆ ಕಟ್ಟುವಾಗ ಮತ್ತದೇ ‘ಚಂದ’ಕ್ಕೆಂದೇ ಊರಿನ ಹೆಸರುವಾಸೀ ನಿಷ್ಣಾತರನ್ನು ಬಳಸಿಕೊಳ್ಳುತ್ತೇವೆ. ನಮ್ಮ ಮೋಜಿನ ಪಾರ್‍ಟಿಗಳಲ್ಲಿ ಹೆಸರಾಂತ ಹೆಸರುಗಳ ದಾಳದ ಗರ ಬಿದ್ದರೆ ನಮಗೆಷ್ಟು ಚಂದ!!

ಇನ್ನು ಊರಿನ ವಿಷಯಕ್ಕೆ ಬಂದರೆ- ಚಂದ ತೋರಲಿಕ್ಕೆಂದೇ, ತೋರಿಸಲಿಕ್ಕೆಂದೇ ಇರುವ ಸೃಜನಶೀಲರ ಪಡೆಯೇ ಇಲ್ಲಿದ್ದಂತಿದೆ. ಆರ್ಕಿಟೆಕ್ಟುಗಳು, ಒಳಾಂಗಣ ವಿನ್ಯಾಸಕರು, ಲ್ಯಾಂಡ್‌ಸ್ಕೇಪ್ ತಜ್ಞರು, ಉತ್ಪನ್ನ ವಿನ್ಯಾಸಕರು, ಗ್ರಾಫಿಕ್ ಡಿಸೈನರುಗಳು, ಲೈಟಿಂಗ್ ಧುರೀಣರು, ವೆಬ್ ವಿನ್ಯಾಸಕರು… ಇವರೆಲ್ಲ ತಂತಮ್ಮ ಕೆಲಸಗಳ ನಡುವೆ ತಮ್ಮ ಸೃಷ್ಟಿಗಳು ಚಂದವಿರಬೇಕೆಂದು ದುಡಿಯುತ್ತಾರೆ. ಊರು, ಸೂರು ಚಂದವಿರಬೇಕೆಂಬುದು ಎಲ್ಲರಿಗೂ ಹೆಚ್ಚುವರಿ ಕಾಳಜಿಯೇ ಇದ್ದಂತಿದೆ. ಅಥವಾ ಅದು ಈ ಎಲ್ಲರ ವೃತ್ತಿಪರ ಮುಲಾಜೇ ಆಗಿದೆಯೇನೋ…. ಅನುದಿನವೂ ಸಂತೆಯ ಹಾಗೆ ಮಂದಿಯನ್ನು ಕಲೆಸುವ ಊರಿನ ಪೇಟೆಗಳಲ್ಲಿ ಬರೇ ಚಂದದ ಉಸ್ತುವಾರಿಯ ಈ ಎಲ್ಲ ಮಂದಿ ಒಟ್ಟಾಗಿ ದುಡಿದಂತಿದೆ. ಹಗಲು ಮರೆಸುವಷ್ಟು ನಿಯಾನು ಚೆಲ್ಲಿ ನಮ್ಮ ಕಟ್ಟಿರುಳುಗಳನ್ನು ಬೆಳಗಿದ್ದಾರೆ. ಬೀದಿಗಳಲ್ಲಿ ಕೋರೈಸುವ ಬೆಳಕು ಕಟ್ಟಿದೆ. ಬೆಳಕು ಝಗಮಗದ ಬೆಡಗಾಗಿದೆ. ಇಂಥ ಒಂದು ಬೀದಿಯನ್ನು ಹೊಕ್ಕರೆ ಈ ಮುಂದಾಳುಗಳ ಯಾವ ಶಿಸ್ತು ಎಲ್ಲಿ ಸುರುಗೊಂಡು ಎಲ್ಲಿ ಮುಗಿಯುತ್ತದೆ ಅಂತ ನೇರ ತಿಳಿಯುವುದಿಲ್ಲ. ಅಷ್ಟು ಒಗ್ಗಟ್ಟಿದ್ದಂತಿದೆ ಈ ಶಿಸ್ತುಗಳಿಗೆ. ಗೋಡೆಗಳೆಲ್ಲ ಗಾಜಾಗಿವೆ.  ಮುಚ್ಚೆಲ್ಲ ಬಿಚ್ಚಿಕೊಂಡಿವೆ. ಎಲ್ಲ ಯಾವುದೋ ಜಾಹಿರಾತಿನಂತಿದೆ. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಮಾಹಿತಿಯಿದೆ. ಕಟ್ಟಡಗಳೇ ಪಠ್ಯವಾಗಿವೆ. ಒಂದೊಂದು ಕಟ್ಟಡವೂ, ಅದರ ಮೇಲಿನ ಬರೆಹ ಬರೆಹವೂ, ಫಲಕ ಫಲಕವೂ ತನ್ನಷ್ಟಕ್ಕೆ ತಾನೇ ಚಂದವಿದ್ದಂತಿದೆ. ಚಂದ ಕಾಣಿಸಲಿಕ್ಕೆ ತಕ್ಕಷ್ಟು ಮನಸನ್ನೂ, ಬೆವರನ್ನೂ, ಎಲ್ಲಕ್ಕಿಂತ ಕೋಟಿ ಕೋಟಿ ದುಡ್ಡನ್ನೂ ಹೂಡಿದಂತಿದೆ. ಒಂದೊಂದು ‘ಫೋರಮ್ಮೂ’, ಅದರ ಬದಿಯ ‘ಗ್ಲೋಬಸ್ಸೂ’, ಆಚೆಯ ‘ಫೌಂಟನ್‌ಹೆಡ್ಡೂ’, ಇನ್ನೂ ಅತ್ತಲ ಹಾಳುಮೂಳೂ ಯಾವುದೂ ಕಮ್ಮಿಯಿಲ್ಲ. ಒಂದೊಂದೂ ಇನ್ನಷ್ಟು ‘ಚಂದ’ ಕಾಣಲಿಕ್ಕೆಂದೇ ತನ್ನ ಅದಿಬದಿಗಳನ್ನು ಮೀರಿ ಸೆಣಸುತ್ತಿದೆ. ಮೈಯೆಲ್ಲ ಗಾಜಾಗಿದೆ. ಗಾಜೆಲ್ಲ ಮಾಹಿತಿ-ಫಲಕವಾಗಿದೆ. ಇಂಥ ವಿನೂತನ ಅಂದ‘ಚಂದ’ದ ತರಾತುರಿಯಲ್ಲಿ ಬೀದಿಗೆ ಬೀದಿಯೇ, ಊರಿಗೆ ಊರೇ ಬದಲಾಗಿಬಿಟ್ಟಿದೆ.

ಆದರೆ ಇಷ್ಟೆಲ್ಲ ಬಿಡಿ ಬಿಡಿ ಚಂದಗಳನ್ನು ಕಟ್ಟಿಕೊಂಡಿರುವ ಊರಿನ ಇಡಿ ಮಾತ್ರವೇಕೋ ಎಲ್ಲೋ ಹದ ತಪ್ಪಿದಂತಿದೆ! ಅಲ್ಲಿಗೂ ಇಲ್ಲಿಗೂ ನಡುವಿರುವ ‘ಚಂದ’ದ ಸಮೀಕರಣವೇಕೋ ಚಂದವಿಲ್ಲ. ನಮ್ಮ ಸೌಧಗಳ ಒಳಗೆ, ಹೊರಗೆ ನಾವು ಕಾಣುವ, ಕಾಣಿಸುವ ಎಲ್ಲದರಲ್ಲೂ ಈ ‘ಚಂದ’ವನ್ನು ಹೊಂದಲು ವೃಥಾ ಹೆಣಗುತ್ತೇವೆ. ಅಂದದ ಎಲಿವೇಷನ್ ಎಂದು ಗೋಡೆಗಳಿಗೆ ಇಲ್ಲದ್ದು ಸಲ್ಲದ್ದು ಹೊದೆಸುತ್ತೇವೆ. ನೆಲಕ್ಕೆ ಆಮದು ತಂದು ಮಿರುಗುವುದನ್ನು ಹಾಸುತ್ತೇವೆ. ಗಾಜಿನ ಮೇಲೆ ಪರಿಷ್ಕೃತ ತಿಳಿನೀಲಿಯನ್ನೋ, ಕಡುಗೆಂಪನ್ನೋ ತೆಳ್ಳಗೆ ಇಳಿಬಿಡುತ್ತೇವೆ. ಪ್ರತಿಮೆಗಳು, ಫಲಕಗಳು, ಹಾಸುಗಳು… ಒಂದೇ ಎರಡೇ. ಒಂದೊಂದರಲ್ಲೂ ಚಂದದ ಕಾರುಬಾರೇ ಇದೆ. ಇವೆಲ್ಲ ಒಗ್ಗೂಡಿ ಆಗುವ ಚಂದದ ‘ಛಂದ’ದ ಬಗ್ಗೆ ನಮಗೆ ಗೊಡವೆಯಿದ್ದಂತಿಲ್ಲ. ಹೀಗೆ ಚಂದವೂ, ಛಂದವೂ ಇರಬೇಕಾದ ಊರಿನಲ್ಲಿ ಅವಶ್ಯವೆನಿಸುವ ಬದುಕುಗಳ ಜೀವಂತಿಕೆಯೇ ಅರೆಯೆನಿಸಿದರೂ ನಮ್ಮ ಖಾಸಗೀ ಖಾಯೀಷುಗಳ ಚಕಾರವಿಲ್ಲ. ಚಂದದ ಹಕ್ಕು ಚಲಾಯಿಸಲಿಕ್ಕೆಂದೇ ಆದ ಯಾವುದೂ ಮುದವೆನಿಸುತ್ತಿಲ್ಲ.

*  *
ಪೀಟರ್ ಝುಮ್‌ಥಾರ್ ಎಂಬ ಸ್ವಿಸ್ಸ್ ಆರ್ಕಿಟೆಕ್ಟ್ ‘ದಿ ಹಾರ್ಡ್‌ಕೋರ್ ಆಫ್ ಬ್ಯೂಟಿ’ ಎಂಬ ವಾದವನ್ನು ಮಂಡಿಸುತ್ತಾನೆ. ಚೆಲುವಿನ ಒಳತಿರುಳು! ಅವನ ಪ್ರಕಾರ ಪ್ರಕೃತಿಯಲ್ಲಿ ಚಂದ ಅನ್ನುವುದು ತಂತಾನೇ ಆಗಿರುವುದರ ಗುಣವಿಶೇಷ. ಅದು ಯಾವುದೇ ಸಹಜ ಪ್ರಕೃತಿಗೆ ನಾವು ಹಚ್ಚುವ ವಿಶೇಷಣ ಅಷ್ಟೆ. ಅದು ಒಂದು ವಸ್ತುವನ್ನು ಚಂದ ತೋರಿಸಲಿಕ್ಕೆಂದೇ ಮಾಡಿರುವ ವಿಶೇಷ ಪರಿಶ್ರಮದ ಫಲವಲ್ಲ. ಹಕ್ಕಿಯ ಗೂಡಾಗಲೀ, ಹವಳದ ಮೆಳೆಯಾಗಲೀ. ಶಂಖುವಾಗಲೀ ಚಂದ ತೋರಲಿಕ್ಕೆಂದೇ ಆದವುಗಳಲ್ಲ. ಚಂದ ತೋರುವುದು ಅವುಗಳ ಸಹಜ ಸ್ವಭಾವ ಅಷ್ಟೆ. ಗುಡ್ಡದ ಬದಿಯ ಸೂರ್ಯ, ಕೊಳಕ್ಕೆ ಬಿದ್ದ ಚಂದ್ರ, ಘಟ್ಟದ ಹಸಿರು, ಮೇಲಿನ ಬಯಲು… ಇವೆಲ್ಲ ಹುಲು ಮಾನುಷ ಕೈ-ಚಳಕಗಳಿಲ್ಲದೆ ತಂತಾವೇ ಚಂದವಿವೆ.

ತನ್ನಿಂತಾನೇ ಸ್ವಾಭಾವಿಕವಾಗಿ ಆದ ಯಾವುದಕ್ಕೂ ಸೌಂದರ್ಯವಿದ್ದೇ ಇರುತ್ತದೆ. ಅರಳುವ ಮೊಗ್ಗು ತನ್ನ ಸೊಬಗನ್ನು ಘೋಷಿಸಿಕೊಳ್ಳಲೆಂದು ಅರಳುವುದಿಲ್ಲ. ಸೊಗಸು ಅದರ ಗುಣ. ತಂತಾನೇ ಬರೆಸಿಕೊಳ್ಳುವ ಸಾಲು ಸುಲಭವಾಗಿ ಪದ್ಯವಾಗುತ್ತದೆ. ‘ಭೃಂಗದ ಬೆನ್ನೇರಿ ಬರುವ ಕಲ್ಪನಾವಿಲಾಸ’ಕ್ಕೆ ಕವಿ ಅಗತ್ಯವಿರುವಷ್ಟೇ ಮಾತು ಹಚ್ಚುತ್ತಾನೆ. ಇಲ್ಲಿ ಪದಗಳ ಶಬ್ದಗುಣವೆಲ್ಲ ತಂತಾನೇ ಆದಂತಿದೆ. ಪದಬಂಧ ಹೆಚ್ಚೂ ಇಲ್ಲ. ಕಡಿಮೆಯೂ ಇಲ್ಲ. ಅನುಭವಿಸಿದ್ದನ್ನು ಮೀರುವ ಭಾವುಕತೆಯನ್ನು ವೃಥಾ ಹೂಡುವುದಿಲ್ಲ. ಹಾಗಾದಾಗ ಪದ್ಯ ನಮ್ಮ ಎಣೆಗಳನ್ನು ದಾಟಿಸುತ್ತದೆ. ಮನಸ್ಸು ತಟ್ಟಿ ಮಿಡಿಸುತ್ತದೆ… ಆಗುಂಬೆಯ ಒಂದು ಸಂಜೆ ಈವರೆಗೆ ಕಂಡ ಸಂಜೆಗಳಿಗಿಂತ ಹೆಚ್ಚು ನೆನಪಿನಲ್ಲುಳಿಯುತ್ತದೆ. ಕೆಮೆರಾದ ಫ್ರೇಮಿನಲ್ಲಿ ನೀವು ಸೆರೆ ಹಿಡಿದ ಚಿತ್ರವನ್ನು ನೋಡಿದಾಗಲೆಲ್ಲ ನಿಮ್ಮ ಮನಸೂ ನೆನಪು ಮೆಲುಕಿ ಅದರ ಚೌಕಟ್ಟನ್ನು ಮೀರಿದ ಹಳಹಳಿಕೆಯಾಗಿತ್ತದೆ. ಹಳೆಯ ತಲೆಮಾರಿನಿಂದ ಬಂದಿರುವ ಈಳಿಗೆಮಣೆ, ಮೆಟ್ಟುಗತ್ತಿ, ಅಡಿಕೆಯ ಕತ್ತರಿ, ಕಡೆಗೋಲು, ತಪ್ಪಲೆಗಳು… ಇವೆಲ್ಲ ತಾವು ಆಗಿ ಬರುವ ಉದ್ದೇಶವನ್ನು ಮೀರಿಯೂ ಮೀರದ ಸೊಬಗನ್ನು ತೋರುತ್ತವೆ. ಈಳಿಗೆಯ ಕೊಂಕು ನವಿಲನ್ನು ನೆನಪಿಸಿದರೆ ಅದಕ್ಕೆ ಸಹಜವಾಗಿ ನವಿಲಿನ ಚಿತ್ತಾರವನ್ನು ಅನುಕರಿಸುವ ಸಾಧ್ಯತೆ ಇದೆ. ಅದನ್ನು ಮಾಡಿದ ಕಲಾವಿದ ಈ ಸಾಧ್ಯತೆಯನ್ನು ಅದರ ಅದರ ನೈಜ ಕೊಂಕಿನಿಂದಾಗಿ ದುಡಿಸಿಕೊಂಡಿದ್ದಾನೆ. ನೀರಿನ ಹೂಜಿಯ ಕಂಠಕ್ಕೆ ಕೊಕ್ಕರೆಯ ಕೊರಳಿನಂತೆ ತೋರುವ ಸಹಜ ಸಂಭವವಿದೆ. ಅದೇ ಕಲೆಯಾಗುವಾಗ ಬಕದ ಕೊರಳಾಗುತ್ತದೆ. ಇಲ್ಲಿ ಒಂದೊಂದೂ ತಂತಾವೇ ಆಗಿದೆ. ಇವಾವುವೂ ಆಗಬೇಕೆಂದೇ ಆದವುಗಳಲ್ಲ. ಚಂದ ತೋರಲಿಕ್ಕೆಂದೇ ಆಗಿ ತೋರಿಕೊಳ್ಳುವುದಿಲ್ಲ.

ಸಾಮಾನ್ಯವಾಗಿ ಮನುಷ್ಯ ಬುದ್ಧಿಗಳ ನಿಲುಕಿನಿಂದಾದ ಆವಿಷ್ಕಾರ, ಪರಿಷ್ಕರಣೆ, ಸಂಸ್ಕರಣೆ -ಈ ಮೊದಲಾದವುಗಳು ಕೈ ಮಾಡಿರುವ ಎಲ್ಲವುಗಳಲ್ಲಿ ಸೊಬಗಿಗೆ ಈಚೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಅವುಗಳಲ್ಲಿ ಸೊಗಸು ಸಾಧಿಸಲಿಕ್ಕೆಂದೇ ಪ್ರಯತ್ನಪೂರ್ವಕ ಪಿತೂರಿ ಇರುತ್ತದೆ. ಅಂದಚಂದವನ್ನು ಹೊಂಚುವ ಗುರಿಯಿರುತ್ತದೆ. ಈ ನಿಟ್ಟಿನಲ್ಲಿ ಹೊಸಕಾಲದ ‘ನಾಗರಿಕತೆ’ ದೃಶ್ಯ-ಸಂವಹನೆ ಎನ್ನುವ ಕ್ಷೇತ್ರವನ್ನೇ ಕಟ್ಟಿ ಬೆಳೆಸಿದೆ. ಇವತ್ತಿನ ಹೊಸ ಊರಿನ ದ್ರಷ್ಟಾರರಲ್ಲಿ ಈ ಹಿಂದೆ ಹೇಳಿದ ವಿನ್ಯಾಸಕರ ಪೀಳಿಗೆಯೇ ಇದೆ. ಇವರಿಗೆ ನಮ್ಮ ಕಣ್ಣಿಗೊದಗುವ ಎಲ್ಲವನ್ನೂ ಮೇಲು ಪದರದಲ್ಲಿ ‘ಚಂದ ಕಾಣಿಸುವ’ ಹೊಣೆಯಿದೆ. ಇಷ್ಟಿದ್ದೂ ಒಂದು ಮೇಲುಕೋಟೆಯೋ, ಒಂದು ಬಾದಾಮಿಯೋ, ಒಂದು ಆಗುಂಬೆಯೋ- ಇಷ್ಟೆಲ್ಲ ಧುರೀಣರು ದುಡಿದು ‘ಚಂದ’ದಿಂದ ಕಟ್ಟಿರುವ ಈ ಬೃಹನ್ನಗರಿಯ ಜತೆ ತನ್ನ ಸಹಜ ಅಂದದಿಂದ ಸೆಡ್ಡು ಹೊಡೆದರೆ ಅಚ್ಚರಿಯೇನಲ್ಲ!

About The Author

ನಾಗರಾಜ ವಸ್ತಾರೆ

ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ