Advertisement
ವಾಸುದೇವ ನಾಡಿಗ್ ಬರೆದ ದಿನದ ಕವಿತೆ

ವಾಸುದೇವ ನಾಡಿಗ್ ಬರೆದ ದಿನದ ಕವಿತೆ

ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ವಾಸುದೇವ ನಾಡಿಗ್ ಬರೆದ ಕವಿತೆ.

ಕವಿತೆಗೆ

ನೆಚ್ಚಿಕೊಂಡು ಕೂತಿದ್ದೇನೆ
ನಿನ್ನನು
ಪ್ರಾಣಧಾರಣೆ ಮಾಡಲಾಗದ
ಕವಿತೆಯೇ,
ಕಂಡ ವಸ್ತುಗಳೊಳಗೆಲ್ಲ ಹೊಕ್ಕು
ಉಕ್ಕಿಸುವ ಭಾವ
ನನ್ನದಲ್ಲ ಎನಿಸುತಿರುವಾಗ
ಹೇಗೆ ನೆಚ್ಚಲಿ
ನಿನ್ನ
ಪ್ರಾಣಧಾರಣೆ ಮಾಡಲಾಗದ
ಕವಿತೆಯೇ

ತುಂಬು ಗರ್ಭಿಣಿಯ ನಾಟಕ
ಮೋಡ
ತೊಟ್ಟು ನೀರ ತೊಟ್ಟಿಕ್ಕಿಸುತ್ತಿದೆ
ಗಾಳಿಗೆ
ಹೆದರಿ ಕಕ್ಕಾಬಿಕ್ಕಿ ಬಾಗಿಲ
ಹಿಂದೆ
ಅಪ್ರಾಪ್ತ ಕ್ಷಣಗಳನ್ನು
ಜಪಿಸಿದೆ
ಯಾವ ಕಾಲಗರ್ಭದ ಶಾಪವೋ
ಅಕಾಲ ಪಾತಗಳಲಿ
ಗರ್ಭ ಅಶಕ್ತವಾಗಿದೆ!

ಪಕಳೆ ಅಗಲಿಸುವುದು
ಬೀಜಕ್ಕ ಬೇರ
ಪೋಣಿಸುವುದು
ನೋವುಗಳು ನುಸುಳದಂತೆ
ಹೃದಯದ ಗೋಡೆ
ಎತ್ತರಕ್ಕೇರಿಸುವುದು
ಸಾಧ್ಯವಾಗದು
ಕವಿತೆಯೇ
ನಿನ್ನನೇ ನೆಚ್ಚಿಕೊಂಡು
ಕೂತಿದ್ದೇನೆ.

ಮುಚ್ಚಲಾರದ ರೆಪ್ಪೆಗಳು
ನಡುವೆ
ಅಸೀಮ ಕಡಲು
ದಕ್ಕಿದ ಭಾವದಲೆಗಳು
ಪರಕೀಯವಾಗಿ ಕಾಡಲು
ನಿನ್ನನೇ
ನೆಚ್ಚಿಕೊಂಡು ಕೂತಿದ್ದೇನೆ
ಪ್ರಾಣಧಾರಣೆ ಮಾಡಲಾಗದ
ಕವಿತೆಯೇ.

About The Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ