Advertisement
ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ… ವೈಶಾಲಿ ಸ್ವಗತ

ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ… ವೈಶಾಲಿ ಸ್ವಗತ

“ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ…” ಎಷ್ಟೊಂದು ವರ್ಷಗಳ ಮೇಲೆ ಚಿಕ್ಕಂದಿನಲ್ಲಿ ಓದಿದ ಶಾಲೆಯ ಪದ್ಯ ಈಗ ದಿಢೀರನೆ ನೆನಪಾಗಿತ್ತು.  ಚಿಕ್ಕ ಒಳ ರಸ್ತೆಯೊಂದರಲ್ಲಿ ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಕೊಂಡಾಗ ಹಾಗೆಯೇ ಕಣ್ಣು ಪಕ್ಕದ ವಿದ್ಯುತ್ತಂತಿಯ ಮೇಲೆ ಸಾಗಿ, ಸಾಲಾಗಿ ಕುಳಿತ ಗೀಜಗನಂತೆ ಕಾಣುವ ಹಕ್ಕಿ ಸಾಲುಗಳು ಬಿಸಿಲಿಗೆ ಹೊಳೆಯುತ್ತಾ, ಈಗಷ್ಟೇ ಚಿಗುರುತ್ತಿರುವ ಮರಗಳ ಎಲೆಹಸಿರಿನ ಹಿನ್ನೆಲೆಯಲ್ಲಿ ಮೋಹಕವಾಗಿ ಕಾಣಿಸುತ್ತಿದ್ದವು. ಆದರೂ ಆ ಪದ್ಯದ ಸಾಲೇಕೆ ನೆನಪಾಯಿತೋ. ಒಂದುಕ್ಷಣ ಆ ಪದ್ಯದ ನೋವು, ವಿಷಾದ, ಕ್ರೂರಜಗತ್ತೆಲ್ಲ ನೆನಪಾಗಿ ಹಿಂಸೆಯಾಯಿತು. ಈಗ ಆ ಪದ್ಯದ ಸಾಲುಗಳೆಲ್ಲ ಏನೂ ನೆನಪಿಲ್ಲ ಮೊದಲಿನ ಸಾಲನ್ನು ಬಿಟ್ಟು. ಆದರೂ ಆ ಪದ್ಯದ ಬಗ್ಗೆ “ಅಯ್ಯೋ ಪಾಪ” ಎನ್ನುವಂಥ ಭಾವನೆಯೊಂದು ಉಳಿದುಬಿಟ್ಟಿದೆ.

ಆಗ ವಾದಕ್ಕೆ ನಿಂತಿದ್ದು ನನ್ನ ತಾರ್ಕಿಕ ಬುದ್ಧಿ. “ಅಯ್ಯೋ ಮಳ್ಳಿ. ಲೈನಿನ ಮೇಲೆ ಕುಳಿತ ಕಾಗೆ ಸಾಯಬೇಕೆಂದರೆ ಅದು ಅಷ್ಟು ಸುಲಭದಲ್ಲಿ ಸಾಧ್ಯವೇ? ಸ್ವಲ್ಪ ಯೋಚಿಸು…”  ಹೌದಲ್ಲ.. ಪದ್ಯದ ಭಾವನೆ, ಗೂಢಾರ್ಥ, ಸಂದೇಶ ಎಂದೆಲ್ಲ ಸರ್ವ ಸಾಧ್ಯತೆಗಳನ್ನೂ ಬದಿಗಿಟ್ಟು ಬರೇ ಶಬ್ದಸಾಹಿತ್ಯದ, ಆ ಸಂದರ್ಭದ ಪ್ರಾಯೋಗಿಕ ವಿಶ್ಲೇಷಣೆ ಮಾಡಿದರೆ, ಲೈನಿನ ಮೇಲೆ ಹೀಗೆ ಕುಳಿತುಕೊಳ್ಳುವ ಚಿಕ್ಕಪುಟ್ಟ ಹಕ್ಕಿಗಳೆಲ್ಲ ಸುಮ್ಮನೆ ಸಾಯುವುದು ಸಾಧ್ಯವೇ ಇಲ್ಲ. ಹಕ್ಕಿಗಳೇಕೆ, ಒಂದೇ ವಿದ್ಯುತ್ತಂತು ಹಿಡಿದುಕೊಂಡು ಗಾಳಿಯಲ್ಲಿ ನಾನು ಜೋತುಬಿದ್ದರೂ ಸಾಯುವುದಿಲ್ಲ, ಹಾಗಿದ್ದಲ್ಲಿ ಆ ಕಾಗೆ ವಿದ್ಯುದಾಲಿಂಗನವಾಗಿ ಸತ್ತದ್ದು ಹೇಗೆ?  ಅಷ್ಟರಲ್ಲಿ ಹಿಂದಿನವ ಹಾರ್ನ್ ಹಾಕಿ ಗದರಿಸುತ್ತಿದ್ದ. ದಡಬಡನೆ ಮುಂದುವರಿದು ಡ್ರೈವ್ ಮಾಡತೊಡಗಿದರೂ ತಲೆಯಲ್ಲಿ ವಿದ್ಯುದಾಲಿಂಗನಕೆ… ಎಂಬ ಸಾಲೇ ಗಿರಕಿ ಹೊಡೆಯುತ್ತಿತ್ತು.  ಹೌದು.. ಈ ಸಾಲು ನನಗೆ ಮೊದಲಬಾರಿಗೆ ವಿದ್ಯುತ್ತು.. ಸರ್ಕೀಟು ಎಂದೆಲ್ಲ ಕಲಿಯುವಾಗ ಯಾಕೆ ನೆನಪಿಗೆ ಬರಲಿಲ್ಲ? ಉತ್ತರ ತಿಳಿದಿಲ್ಲ.

ಈಗಂತೂ ಆ ಕಾಗೆಯ ಮರಣದ ಹಿಂದಿನ ರಹಸ್ಯ ಭೇದಿಸುವ ಪ್ರೇರಣೆಯಾಗಿದೆ. ಒಂದೋ.. ಆ ಕಾಗೆ ಅಲೌಕಿಕವಾದ ಬೃಹದಾಕಾರವಾದ ರೆಕ್ಕೆಗಳುಳ್ಳ ಒಂದು ತಂತಿಯ ಮೇಲೆ ಕುಳಿತರೆ ಇನ್ನೊಂದು ತಂತಿ ಅದರ ರೆಕ್ಕೆಗೋ, ಮೈಯ ಯಾವುದೋ ಭಾಗಕ್ಕೋ ತಗಲುವಂತಿದ್ದರೆ, ಆಗ ವಿದ್ಯುತ್ ಸರ್ಕಿಟ್ ಪೂರ್ಣಗೊಂಡು ಕಾಗೆ ಕಮರಿ ಹೋಗುತ್ತದೆ. ಹಾಗಾಗಿ ಕವಿಕಂಡ ಕಾಗೆ ಅಂತ ಕಾಗೆಯೇನೂ ಆಗಿರುವುದು ಅಸಾಧ್ಯ. ಹೀಗೆ ಸಾಯುವ ಹಕ್ಕಿಗಳೆಲ್ಲ ಹೆಚ್ಚಾಗಿ ವಿಸ್ತಾರದ ರೆಕ್ಕೆಯುಳ್ಳ ಇಲ್ಲವೇ ದೊಡ್ಡಗಾತ್ರದ ದೃಷ್ಟಿಮಂದ ಜಾತಿಯ ಹಕ್ಕಿಗಳು. ಕಾಗೆಯಂಥ ಚಿಕ್ಕ ಗಾತ್ರದ ಪಕ್ಷಿಗಳು ವಿದ್ಯುದಾಲಿಂಗನವಾಗಿ ಸಾಯುವ ಸಾಧ್ಯತೆ ಕಡಿಮೆಯೇ. ಹಾಗಿದ್ದಲ್ಲಿ ಸಾಮಾನ್ಯ ಕಾಗೆ ಸತ್ತಿದ್ದು ಹೇಗೆ? ಹಾರಿಬಂದು ಕಣ್ಣು ಕಾಣದೆ ಎರಡು ವಿದ್ಯುತ್ತಂತಿಗಳಿಗೆ ಒಟ್ಟಿಗೆ ಬಡಿದುಕೊಂಡಿರಬೇಕು. ಇಲ್ಲ ಅದು ಕುಳಿತಾಗ ಅದರ ಮೈ ಗ್ರೌಂಡ್ ಆಗಿರುವ ಟ್ರಾನ್ಸ್ಫಾರ್ಮಾರ್ ಕಂಬಕ್ಕೋ ಇಲ್ಲ ಇನ್ನೊಂದು ಲೈನಿಗೋ ತಾಕಿರಬೇಕು.  ಇವೆರಡೂ ಸಂದರ್ಭದಲ್ಲಿ ಲೈನುಗಳು ಅಷ್ಟು ಹತ್ತಿರದಲ್ಲಿ ಎಳೆದಂಥವಾಗಿರಬೇಕು. ಆಗ ಅದು ಕಾವ್ ಎನ್ನುವುದರೊಳಗೆ ಕಂಬದ ಫ್ಯೂಸಿನ ಜೊತೆ ಅದರ ಜೀವವೂ ಹಾರಿಹೋಗಿರುತ್ತದೆ. ಆಗ ಆ ಪದ್ಯದಲ್ಲಿ ಬರುವಂತೆ ಜನರ್ಯಾರೂ ಅದರ ಬಗ್ಗೆ ಮರುಕಪಡದೆ.. “ದರಿದ್ರ ಕಾಗೆ ಕಾಲದಲ್ಲಿ ಕರೆಂಟಿಲ್ಲ” ಎಂದು ಬೈದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಆದರೆ ನನಗೆ ನೆನಪಿರುವಮಟ್ಟಿಗೆ ಆಪದ್ಯದ ಮುಂದಿನ ಸಾಲು “…ತಪ್ಪು ಮಾಡದ ವ್ಯಕ್ತಿ ಶಿಕ್ಷೆ ಅನುಭವಿಸುವ ಹಾಗೆ” ಅಂತೇನೊ ಬರುತ್ತೆ.  ಅಂದರೆ ಕಾಗೆ ಯಾವ ತಪ್ಪಿಲ್ಲದೆಯೂ ಮೋಸ ಹೋದಂತಾಗಿ ಅನ್ಯಾಯವಾಗಿ ಸತ್ತು ಹೋಗಿರಬೇಕು. ಅಂದರೆ ಅದು ತಾನು ಯಾವಾಗಲೂ ಕುಳಿತುಕೊಳ್ಳುವ ಲೈನಿನ ಮೇಲೆ ಅವತ್ತೂ ಹೋಗಿ ಕುಳಿತುಕೊಂಡಿದೆ ಆದರೆ ಮುಂದೆಲ್ಲ ಹರಿಚಿತ್ತ. ಅಂದರೆ ಅದು ಕುಳಿತ ಲೈನಿನ ಹಿಂದಿನ ಲೈನ್ ಹರಿದುಬಿದ್ದು ಗ್ರೌಂಡ್ ಆಗಿ ಲೈವ್ ವಯರ್ ಆಗಿರಬೇಕು.  ಇಲ್ಲವೇ ಜೋರಾಗಿ ಗಾಳಿ ಬೀಸಿ ಒಂದು ಲೈನ್ ಇನ್ನೊಂದು ಲೈನಿಗೆ ತಾಗಿ ಅದೇ ಸಮಯಕ್ಕೆ ಪವರ್ ಔಟೇಜಿನ ಜೊತೆ ಅದೂ ಔಟಾಗಿರಬೇಕು.  ಇವೆಲ್ಲ ಸಾಧ್ಯತೆಗಳಿಗೂ ಒಂದೇ ಆಧಾರವೆಂದರೆ ಲೈನುಗಳು ಅಷ್ಟು ಒಂದಕ್ಕೊಂದು ತಾಗುವಷ್ಟು ಹತ್ತಿರದಲ್ಲಿ ಇರಬೇಕು. ಹೇಗೆ ಇರಲು ಸಾಧ್ಯ? ಕೆಟ್ಟ ಇಂಜಿನಿಯರು ಹಾಕಿಕೊಟ್ಟ ಡಿಸೈನಿಗೆ ಅತಿಕೆಟ್ಟ ಲೈನ್ಮನ್ ಗಳು ಎಳೆದ ಲೈನಾದರೆ ಮಾತ್ರ ಸಾಧ್ಯ ಎಂದು ಈ ಎಲ್ಲ ಸಾಧ್ಯತೆಗಳನ್ನು ಹೊಡೆದುಹಾಕಬೇಕು ಎಂದುಕೊಳ್ಳುವಾಗ ನೆನಪಾಗಿದ್ದು ನನ್ನ ಬಾಲ್ಯದ ಘಟನೆಗಳು.

ಇನ್ನೇನು ಮಳೆ ಸುರು ಎನ್ನುವಾಗ ಕರೆಂಟ್ ಢಮಾರ್. ಆಗ ಕೆಇಬಿಗೆ ಕರೆ ಮಾಡಿ ನಮ್ಮ ಧಮಕಿ “ಏನ್ರೀ.. ಪವರ್ ಕಟ್ ಟೈಮ್ ಅಲ್ಲ ಎನಿಲ್ಲ, ಮತ್ಯಾಕ್ರೀ ಕರೆಂಟಿಲ್ಲ?” “ಅಯ್ಯೋ ನಿಮ್ಮ ಏರಿಯ ಲೈನ್ ಸರಿ ಇಲ್ಲ.. ಜೋರಾಗಿ ಗಾಳಿ ಬಂದ್ರೆ ಲೈನ್ ಒಂದಕ್ಕೊಂದು ತಾಗಿ.. ಕಂಬದ ಫ್ಯೂಸ್ ಹೋಗಿ ಕರೆಂಟ್ ಹೋಗುತ್ತೆರೀ”  ಗಾಳಿಗೆ ಕಂಬ ಮುರಿದುಬಿದ್ದು ಕರೆಂಟಿಲ್ಲ, ಫ್ಯೂಸ್ ಹೋಯಿತು ಅಂದ್ರೆ ಸರಿ, ಲೈನ್ ತಾಗುತ್ತೆ ಒಂದಕ್ಕೊಂದು ಎಂದು ಗೊತ್ತಿದ್ದೂ. ಬರೀ ಹೊಸ ಫ್ಯೂಸ್ ಹಾಕಿ ಹೋಗುತ್ತಿದ್ದರೆ ಹೊರತು.. ಲೈನ್ ಸರಿ ಮಾಡುತ್ತಿರಲಿಲ್ಲ. ಇವತ್ತು ಹಾಕಿದ ಫ್ಯೂಸ್ ನಾಳೆಯ ಗಾಳಿಗೆ ಮತ್ತೆ ಸುಟ್ಟುಹೋಗಿರುತ್ತಿತ್ತು.  ಪಾಪ ಎಷ್ಟು ಕಾಗೆಗಳು ಸಾಯಬೇಕೋ? ಅಂದರೆ.. ಆ  ಕಾಗೆ ಗ್ಯಾರಂಟಿ ಮಳೆಗಾಲದ ಸಮಯದಲ್ಲಿ ನಮ್ಮೂರಲ್ಲೇ ಎಲ್ಲೋ ಸತ್ತಿದೆ ಅನಿಸುತ್ತಿದೆ.

ಆಗ ಮತ್ತೊಂದು ಕುತೂಹಲ, ಈ ರೀತಿ ಸಾಯುವ ಹಕ್ಕಿಗಳು ಇರಬಹುದೇ? ಅಂತ ಕಾಗೆಯೇನಾದರೂ ಇದ್ದೀತೆ? ಅಂತರ್ಜಾಲದ ಅಗಾಧ ಒಡಲನ್ನು ಭೇದಿಸಿ ಹೊರತೆಗೆದಾಗ ಸಿಕ್ಕ ಮಾಹಿತಿಗಳು ಇನ್ನೂ ಕುತೂಹಲಕಾರಿಯಾಗಿದ್ದವು.  ಅಮೆರಿಕದಲ್ಲಿ ವರ್ಷದ ಸುಮಾರು ೧೦% ಪವರ್ ಔಟೇಜುಗಳು ಹಕ್ಕಿಗಳು ಬಂದು ಬಡಿಯುವುದರಿಂದಾಗಿ ಆಗುತ್ತವೆ. ಅಮೆರಿಕಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ, ವಿದ್ಯುತ್ತಂತಿ ಅಥವಾ ವಿದುತ್ ಕಂಬಕ್ಕೆ ಬಡಿದು ಪಕ್ಷಿಗಳು ಸತ್ತರೆ.. ವಿದ್ಯುತ್ ಕಂಪನಿಗೆ ಮಿಲಿಯನ್ ಡಾಲರಿನವರೆಗೂ ದಂಡ ವಿಧಿಸಬಹುದು. ಸತ್ತ ಪಕ್ಷಿ ರಾಷ್ಟ್ರಪಕ್ಷಿ “ಬಾಲ್ಡ್ ಈಗಲ್” ಆಗಿದ್ದರೆ ಅಥವಾ ಅಳಿವಿನಂಚಿನಲ್ಲಿರುವ, ಇಲ್ಲವೆ ವಲಸೆ ಬರುವ ಪಕ್ಷಿಗಳಾಗಿದ್ದರೆ ದಂಡದ ವೆಚ್ಚವೂ ಹೆಚ್ಚು. ಎಂಟುನೂರಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳನ್ನು ಸಂರಕ್ಷಣಾ ಕಾಯ್ದೆಯಡಿ ಗುರುತಿಸಲಾಗಿದೆ. ಬಹಳಷ್ಟು ಗೂಬೆ, ಹದ್ದು, ಗಿಡುಗಗಳು ವಿದ್ಯುದಾಲಿಂಗನಕೆ ಆಹುತಿಯಾಗುತ್ತವೆ.  ಈ ಹಕ್ಕಿಗಳಿಗೆ ಎತ್ತರದಲ್ಲಿರುವ ಪವರ್ ಲೈನುಗಳು, ಮೇಲೆ ಕುಳಿತು ತಮ್ಮ ಬೇಟೆಯನ್ನು ಅವಲೋಕಿಸಲು, ಕಂಬಗಳ ಮೇಲೆ ಗೂಡು ಕಟ್ಟಲು ಅನುಕೂಲವಾಗಿ ತೋರುತ್ತವೆ.  ಈ ಬಗೆಯ ಹಕ್ಕಿಗಳ ರೆಕ್ಕೆಯಗಲ ಸುಮಾರು ೮ ಅಡಿಗಳಷ್ಟಿರುವುದರಿಂದ ಅವು ೨ ಲೈನಿನ ಮಧ್ಯೆ ಸುಲಭವಾಗಿ ಸರ್ಕಿಟ್ ಸಂಪೂರ್ಣಗೊಳಿಸಿ ಇಹಯಾತ್ರೆ  ಮುಗಿಸಿಬಿಡುತ್ತವೆ. ಹಾಗಾಗಿ ವಿದ್ಯುತ್ ಸೇವೆ ಕಲ್ಪಿಸುವ ಎಲ್ಲ ಕಂಪನಿಗಳು ಇಂಥ ಪಕ್ಷಿಸಂಕುಲದ ಸಾಂದ್ರತೆಯಿರುವಲ್ಲಿ ವಿದ್ಯುತ್ ತಂತಿಗಳನ್ನು ೮ ಅಡಿಗಳಿಗಿಂತಲೂ ಹೆಚ್ಚಿನ ಅಂತರವಿಟ್ಟು ಎಳೆಯಬೇಕು. ಟ್ರಾನ್ಸ್ಫಾರ್ಮಾರ್ ಕಂಬಕ್ಕೆ ಹಕ್ಕಿಗಳಿಗೆ ಅನುಕೂಲವಾಗುವಂತೆ ಪ್ಲಾಸ್ಟಿಕ್ ಬಿಳಲುಗಳಂತ ಲೂಪ್ಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಕಂಬದ ಮೇಲೆ ಬಂದಿಳಿದ ಇಂಥ ಹಕ್ಕಿ ಒಂಚೂರು ಲೈನಿಗೆ ತಾಕಿದರೂ “ಕಂಬ ಮುರಿದು.. ಡಿಂಬ ಬಿದ್ದು.. ” ಆಗಿಬಿಡುತ್ತದೆ.  ಇಷ್ಟಾದರೂ ಒಟ್ಟೂ ಈ ವಿದ್ಯುತ್ ವ್ಯವಸ್ಥೆಯಿಂದಾಗಿ ಅಮೇರಿಕ ಒಂದರಲ್ಲೇ ವರ್ಷಕ್ಕೆ ಸರಾಸರಿ ೧೩೦-೧೭೪ ಮಿಲಿಯನ್ ಹಕ್ಕಿಗಳು ಎಲೆಕ್ಟ್ರಿಕ್ಯುಟ್ ಆಗಿ ಸಾಯುತ್ತವೆ. ಅಂದರೆ ಇಂಥ ಯಾವ ಮುಂಜಾಗ್ರತೆಯೂ ಇಲ್ಲದ ನಮ್ಮ ದೇಶದಲ್ಲಿ ಎಷ್ಟು ಹಕ್ಕಿಗಳು ಸಾಯಬಹುದು?  ಅಯ್ಯೋ.. ಸತ್ತ ಮನುಷ್ಯರ ಲೆಕ್ಕವೇ ನಮ್ಮ ಸರಕಾರಕ್ಕಿಲ್ಲ.. ಇನ್ನು ಹಕ್ಕಿಗಳ ಲೆಕ್ಕ ಎಲ್ಲ ಎಲ್ಲಿ ಇಟ್ಟಾರು? ಅಂಥಾದ್ದರಲ್ಲಿ ನಮ್ಮ ಕಾಗೆ ಪಾಪ ಯಾವ ಲೆಕ್ಕ?

ಆದರೂ ಈ ಪವರ್ ಲೈನಿನ ಗೋಜಲಿನಲ್ಲಿ ನನ್ನ ತಲೆಯಿಂದ “ವಿದ್ಯುದಾಲಿಂಗನಕೆ …” ಲೈನು ಮಾತ್ರ ಹೊರಬರುವ ಸೂಚನೆ ಕಾಣುತ್ತಿಲ್ಲ.  ಕಾಗೆ ಸಂಕುಲ ಯಾವುದೋ ಹೆಗ್ಗಣವೊಂದನ್ನು ಹರಿದು ತಿನ್ನುತ್ತಿರುವಾಗ ವಿದ್ಯುತ್ತಂತಿ ಮುರಿದುಬಿದ್ದು ಕಾಗೆಗಳೆಲ್ಲ ಹುರಿದಂತೆ… ಜೋರುಮಳೆಯಲ್ಲಿ ಲೈನಿನಿಂದ ಕಾಗೆಗಳೆಲ್ಲ ತೊಪತೊಪನೆ ಉದುರಿಬಿದ್ದಂತೆ.. ಏನೇನೆಲ್ಲ ಚಿತ್ರಣ ಮೂಡಿಬಂದು ವಿಚಿತ್ರ ತಳಮಳವಾಗುತ್ತಿದೆ. ನಿಮ್ಮ ಬಳಿ ಆ ಪದ್ಯದ ಪೂರ್ಣಪಠ್ಯವಿದ್ದಲ್ಲಿ ದಯವಿಟ್ಟು ಕಳಿಸಿಕೊಡಿ. ಆ ಪದ್ಯವನ್ನು ಇನ್ನೊಮ್ಮೆ ಸಂಪೂರ್ಣ ಓದಿದಾಗಲಾದರೂ ಸಮಾಧಾನ ಸಿಗಬಹುದೇನೋ.

ಎಡಿಸನ್ ಆತ್ಮ ಸದ್ಯ ಬಚಾವಾದೆ ಎಂದು ಚಿಟಿಕೆ ಹೊಡೆಯುತ್ತಿದ್ದರೆ, ಪಾಪ.. ಅಲ್ಟರ್ನೇಟ್ ಕರೆಂಟ್ ಕಂಡುಹಿಡಿದ ತಪ್ಪಿಗೆ ಟೆಸ್ಲ ಆತ್ಮ ಏನೇನೆಲ್ಲ ಪಾಪ ಹೊತ್ತುಕೊಳ್ಳಬೇಕೋ.

About The Author

ವೈಶಾಲಿ ಹೆಗಡೆ

ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.

1 Comment

  1. Thara

    This is very relatable, we had this poem when we were in 9th, and i remember this quite often…….

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ