Advertisement
ಶುಭಾ ಎ.ಆರ್ (ದೇವಯಾನಿ)  ಬರೆದ ಎರಡು ಹೊಸ ಕವಿತೆಗಳು

ಶುಭಾ ಎ.ಆರ್ (ದೇವಯಾನಿ) ಬರೆದ ಎರಡು ಹೊಸ ಕವಿತೆಗಳು

ಬೇಲಿಗಳ ದಾಟುವುದು

ತುಟಿಬೇಲಿ ದಾಟಿ
ಹೊರಬಿದ್ದ ನಗುವೊಂದು
ಹಾಗೇ ಅಲೆದಾಡಲು ಹೋಯಿತು
ತರಚಿದ ಮೈ ಕೈಗಳ
ನೇವರಿಸಿ ಸಂತೈಸಿ
ಗಾಳಿಗೆದೆಯೊಡ್ಡಿ ನಿಂತಿತು

ಹಾಗೆ ನೋಡಿದರೆ ಎಷ್ಟೊಂದು
ಬೇಲಿಗಳಿವೆ ಇಲ್ಲಿ
ದಾಟಿ ಬರಲಾಗದೆ ಸೊರಗುವ
ಮುಗುಳುಗಳಿವೆ
ಬೇಲಿ ದಾಟಲೂ ಬೇಕು
ಮುಳ್ಳುಗಳು ತಾಗದೆ ಗೀರದೆ
ಉಪಾಯವಾಗಿ ನುಣುಚಿಕೊಳುವ
ಛಾತಿ ಧೈರ್ಯ ಬಂಡತನ
ಹೀಗೆ ಏನಾದರೆನ್ನಿ

ಹೌದು ಯಾರು ಹಾಕಿದರು ಈ
ಇಷ್ಟೆಲ್ಲ ಬೇಲಿಗಳ
ಗರಗಸದ ಮುಳ್ಳುಗಳ ಪೋಣಿಸಿ
ನಿಜವಾಗಲು ಅವರಿಗೆ
ಗೊತ್ತಿಲ್ಲ ಎಲ್ಲ
ಎಲ್ಲ ಬೇಲಿಗಳನೂ ದಾಟಬಹುದು
ಒಳದನಿಗೊಂದು ಏಣಿ ಸಿಕ್ಕರೆ

ತುಟಿಬೇಲಿ ದಾಟಿದ
ನಗುವೊಂದು ಹಾಗೇ
ಅಲೆದಾಡಲು ಹೋಯಿತು
ಬರಿದೆ ಬೇಲಿಗಳ ನೋಡಿ
ತರಚಿದ ಮೈಕೈಗಳ ಜಾಡಿಸಿತು
ರೆಕ್ಕೆಮೂಡಿಸಿಕೊಂಡು
ಹಾಗೇ ಹಾರಿಹೋಯಿತು
ಬೇಲಿಗಳು ಹಾಗೇ ಉರುಳಿದವು
ಈಗ ಅಲ್ಲೆಲ್ಲ ಹೂಗಳದೇ ಮುಗುಳು

ಇಬ್ಬಂದಿ

ಉರಿವ ಜ್ವಾಲೆಗೂ ಕಸಿವಿಸಿ
ಎಣ್ಣೆ ಬತ್ತಿ ಮತ್ತೆ ಹಣತೆ ಹಂಗು
ಗಾಳಿಗೆ ನುಲಿದಾಗಲೆಲ್ಲ
ಕಾಡುವ ಅಭದ್ರತೆ
ಬೆಳಕಿನಳಲ ದನಿ ಕೇಳುವುದಿಲ್ಲ

ಹರಿವ ನೀರಿಗೂ ಭಯವಿದೆ
ಗುಪ್ತಗಾಮಿನಿಯಾಗಿಸುವ
ಭೂಮಿಯ ಸಂಚಿಗೆ
ಕಳವಳಿಕೆಗೆ ಸಾಂತ್ವನವಿಲ್ಲ
ನದಿಯ ಕಣ್ಣೀರು ಕಾಣುವುದಿಲ್ಲ

ಮಿಡಿವ ನಾಡಿಗೂ ಆತಂಕವಿದೆ
ಗರಣೆಗಟ್ಟುವ ಧಮನಿಗಳ
ಕುತಂತ್ರಕೆ ಹೃದಯವೂ
ಜೊತೆಯಾಗಿ ನೋವ ಬಿತ್ತಿದರೆ
ನಾಡಿ ಬಿಕ್ಕಿದ್ದಕ್ಕೆ ಸಾಂತ್ವನದ ಕೈಗಳಿಲ್ಲ

ಕಣ್ಣಹನಿಗೂ ಮುಜುಗರವಿದೆ
ತೆರೆದ ರೆಪ್ಪೆಗಳು ಬಾಗಿಲ ಹಾಕಿ
ಒಳಗಿದ್ದರೆ ಹೊರಲಾರದ ಭಾರ
ಹೊರ ಹರಿದರೆ ದುರುಗುಟ್ಟವ ಜಗ
ಕಣ್ಣೀರಿನ ಕಣ್ಣೀರು ಹೊರಹರಿಯುವುದಿಲ್ಲ

ಬದುಕಿಗೂ ಆಯಾಸವಿದೆ
ಬೆನ್ನುಹತ್ತಿದ ವಿಧಿಗೆ ಜೂಟಾಟ
ಗೆದ್ದರೂ ಮುಗಿಯದ ಓಟ
ಸೋತರೆ ಸೂತ್ರ ಹರಿದ ಪಟ
ನಕ್ಕಂತೆ ನಟಿಸಿದ್ದು ತಿಳಿವ ಜಗವಿಲ್ಲ

ಶುಭಾ ಎ.ಆರ್ (ದೇವಯಾನಿ) ಬೆಂಗಳೂರು ನಿವಾಸಿ
ಇಪ್ಪತ್ತೆರಡು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಲೇಜು ದಿನಗಳಿಂದ ಬರೆವಣಿಗೆಯ ಹವ್ಯಾಸವಿರೋ ಇವರ ಕತೆ, ಕವಿತೆ ಮತ್ತು ಪ್ರಬಂಧಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
“ಧರೆಯನುಳಿಸುವ ಬನ್ನಿರಿ”  ಮೂರು ವೈಜ್ಞಾನಿಕ ನಾಟಕಗಳು ಪ್ರಕಟಗೊಂಡಿವೆ.
ಪ್ರಸ್ತುತ ರಾಜಾಜಿನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ನಾಗರಾಜ್ ಹರಪನಹಳ್ಳಿ

    ಮನೋಜ್ಞ ಕವಿತೆಗಳು

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ