Advertisement
ಶೆಟ್ಟರ ಸ್ರೀಕಾಂತಿಯೂ.. ಐತಾಳರ ಶಾರದಮ್ಮನವರೂ..: ಮಧುರಾಣಿ  ಕಥಾನಕ

ಶೆಟ್ಟರ ಸ್ರೀಕಾಂತಿಯೂ.. ಐತಾಳರ ಶಾರದಮ್ಮನವರೂ..: ಮಧುರಾಣಿ ಕಥಾನಕ

ಪೋಲಿಸು ಕಂಪ್ಲೇಂಟು ಕೊಟ್ಟಾಯಿತು. ಸ್ಥಳಕ್ಕೆ ಬಂದ ಪೋಲೀಸರು ಮಹಜರು ಮುಗಿಸಿ ‘ಕಳ್ಳನನ್ನು ಯಾರು ನೋಡಿದಿರಿ’ ಎಂದರು. ಅಪ್ಪನಿಗಾದ ಅವಮಾನದ ನೋವು ಅವರ ಕಣ್ಣಲ್ಲೇ ಕಂಡಿದ್ದ ನಾನು, ‘ನಾನು ನೋಡಿದೀನಿ ಸಾರ್.’ ಅಂತ ಒಪ್ಪಿಕೊಂಡೆ. ನನ್ನ ಜೊತೆಗೆ ಎದುರು ಮನೆ ಶಾರದಮ್ಮನೂ ನೋಡಿದ್ದಾರೆಂದು ದೊಡ್ಡ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಿ ಅಪ್ಪನ ಮರ್ಯಾದೆಗೆ ಬೆನ್ನು ಕೊಟ್ಟವಳಂತೆ ಹಿರಿಹಿರಿ ಹಿಗ್ಗಿದೆ. ‘ಏನಮ್ಮಾ ಪುಟ್ಟ ಹುಡುಗಿ ನೀನು, ನಾಳೆ ಕಳ್ಳನನ್ನು ಹಿಡಿದರೆ ಗುರುತಿಸ್ತೀಯಾ? ಸ್ಟೇಷನ್ನಿಗೆ ಬರ್ತೀಯಾ?’ ಅಂದರು ಕಾನ್ಸ್ಟೆಬಲ್ ಗಳು. ಈಗ ವಿಚಾರ ಮನೆಯದ್ದಷ್ಟೇ ಅಲ್ಲ, ನನ್ನ ಮಾನಾಪಮಾನದ್ದೂ ಆಗಿಹೋಯಿತು.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

 

ಐತಾಳರಿಗೆ ಯಾವಾಗಲೂ ವ್ಯವಹಾರದ ಗಮನ. ಹೋಟೇಲು ಹಾಗೂ ದೋಸೆ ಎರಡನ್ನು ಬಿಟ್ಟರೆ ಅವರು ಪ್ರೀತಿಸುತ್ತಿದ್ದ ಮೂರನೆಯ ವಸ್ತು ಅವರ ಮಲಗುವ ಕೋಣೆ ಹಾಗು ಹೆಂಡಿರು ಮಕ್ಕಳು. ಇಷ್ಟೇ ಅವರ ಚಿಕ್ಕ ಪ್ರಪಂಚದ ದೊಡ್ಡ ಭಾಗ. ಈ ಮೂರು ಮಕ್ಕಳ ಸುಖೀ ಕುಟುಂಬದ ಯಜಮಾನತಿ ಶಾರದಮ್ಮನದು ಯಾವಾಗಲೂ ನಗು ಮೊಗ. ಇಬ್ಬರು ಹೆಣ್ಣು ಒಂದು ಗಂಡು ಸಂತಾನ ಕೂಡಾ ಅಪ್ಪ ಅಮ್ಮನಂತೆಯೇ ತಿಳಿನಗುವಿನ ಕಡಿಮೆ ಮಾತಿನ ಹೆಚ್ಚು ಕಾರ್ಯಶ್ರದ್ಧೆಯವು. ನಾವು ‘ಅಕ್ಕಾ..’ ಎಂದು ರಾಗವಾಗಿ ಮಾತಿಗಿಳಿದರೆ ಒಂದೋ ಎರಡೋ ಹಿತವಾದ ಮಾತಾಡಿ ಒಳಕ್ಕೆ ಹೋಗಿಬಿಡುವರು. ಕೇರಿಯ ಬಾವಿಕಟ್ಟೆ ಬಳಿ ಮಡಿನೀರಿಗೆ ಬರುವಾಗ ಇನ್ನೂ ಅತೀ ಸಂಕೋಚದವರು. ನಾನು ಇದೆಲ್ಲಾ ಕಂಡೂ ಕಾಣದವಳಂತೆ ಹರಟೆ ಕೊಚ್ಚುವದನ್ನೇ ಬದುಕಾಗಿಸಿಕೊಂಡವಳಂತೆ ಒಂದೇ ಸಮನೆ ಮಾತಾಡುತ್ತಿದ್ದೆ. ಅವರು ನನ್ನ ಹತ್ತಿರ ತುಸು ಹೆಚ್ಚೇ ಮಾತಾಡುವರು.

ಶಾರದಮ್ಮನವರು ಮಧ್ಯಾಹ್ನ ನಾಲ್ಕರ ಹೊತ್ತಿಗೆ ಕೆಲಸವೆಲ್ಲಾ ಮುಗಿಸಿ ಕೃಷ್ಣಾ… ಮುಕುಂದಾ.. ಎನ್ನುವ ಉದ್ಗಾರದೊಂದಿಗೆ ಬಂದು ಹೊರ ಪಡಸಾಲೆಯ ಮೇಲೆ ಕುಳಿತರೆಂದರೆ ಅಂದಿನ ದಿನ ಸುಸಂಪನ್ನ. ಜೊತೆಗೆ ಸದಾ ಜೊತೆಗಿರುತ್ತಿದ್ದ ಸಾರು ಕಲಕುವ ಸೌಟು! ಸ್ವಲ್ಪ ಧಡೂತಿ ದೇಹದ ಈಕೆಗೆ ಬೆನ್ನು ಕೆರೆವಾಗ ಕೈ ಎಟಕುತ್ತಿರಲಿಲ್ಲವಾಗಿ ಈ ಸೌಟು ಅವರ ಸ್ವಾವಲಂಬನೆಯ ದ್ಯೋತಕವಾಗಿ ಸದಾ ಅವರೊಡನಿರುತ್ತಿತ್ತು. ಮಕ್ಕಳಾದ ನಮಗೆ ಅವರು ಹಾಗೆ ಸೌಟಿನಿಂದ ಬೆನ್ನು ಕೆರೆಯುವುದು ನೋಡಲು ಅದೇನೋ ಮೋಜು. ಇಂತಹ ಇನ್ನೂ ಹತ್ತು ಹಲವು ಸೃಜನಶೀಲ ಉಪಾಯಗಳು ಶಾರದಮ್ಮನವರನ್ನು ಒಂಥರಾ ಹೆಣ್ಮಕ್ಕಳ ಪಡೆಯ ಲೀಡರಾಗಿಸಿತ್ತು. ಇನ್ನು ರಾತ್ರಿ ಐತಾಳರು ಹೊಟೇಲು ಬಾಗಿಲು ಹಾಕಿ ಬರುವ ತನಕವೂ ಇವರ ಪಟ್ಟಾಂಗ ಕಟ್ಟೆಯ ಮೇಲೆ ಅವಿರತವಾಗಿ ಸಾಗುತ್ತಿರುತ್ತಿತ್ತು. ಅತ್ತಿತ್ತಲ ಮನೆಯ ಹೆಂಗಳೆಯರ ಸಂಜೆಗಳು ಹೀಗೇ ರಾತ್ರಿಯಾಗುತ್ತಿದ್ದವು. ನಾನು ಅತ್ತ ಬೀದಿಗೆ ಆಡಲೂ ಇಳಿಯಲಾಗದ ಇತ್ತ ಇವರ ನಡುವೆ ಕೂತು ಗಾಸಿಪ್ ಕೂಡಾ ಮಾಡಲು ಬಾರದ ನಡು ವಯಸ್ಸಿನ ಹುಡುಗಿಯಾಗಿದ್ದೆ.

ಇದಿಷ್ಟೂ ತಿಳಿದಿರಲೆಂದು ಹೇಳಿದೆನೇ ಹೊರತು ಅಸಲು ವಿಷಯಕ್ಕೆ ಈಗ ಬರೋಣ. ಅದು ಬೇಸಿಗೆ ರಜೆಯ ಕಾಲ. ನಮ್ಮ ಮನೆಯಲ್ಲೂ ನೆಂಟರಿಷ್ಟರು ಹೊಕ್ಕು ಹೊರಡುತ್ತಿದ್ದ ಸುಭಿಕ್ಷ ಕಾಲ. ಸೋದರ ಮಾವನ ಮಗಳೂ ಅವಳ ಮಕ್ಕಳೂ ಒಂದು ವಾರದ ಭರ್ಜರಿ ರಜೆ ಮುಗಿಸಿ ಊರಿನ ಕಡೆ ಹೊರಟು ನಿಂತಿದ್ದರು. ಕರೆದೊಯ್ಯಲು ಬೆಳಗ್ಗೆಯೆ ಊರಿನಿಂದ ಬಂದಿದ್ದ ಭಾವಯ್ಯನು ಆ ಸಂಜೆ ಅಳಿಯ ಠೀವಿಯಲ್ಲಿ ಅಪ್ಪನೊಂದಿಗೆ ಅಂಗಳದಲ್ಲಿ ನಿಂತು ಮಾತು ಪೋಣಿಸುತ್ತಿದ್ದನು. ಹೊರಬಾಗಿಲ ಬಳಿ ಆಕಾಶವನ್ನೊಮ್ಮೆ ದಿಗಂತವನ್ನೊಮ್ಮೆ ತಾನು ನಿಂತು ಪಾವನವಾಗಿದ್ದ ಭೂಮಿಯನ್ನೊಮ್ಮೆ ಗಹನವಾಗಿ ನೋಡುತ್ತಿದ್ದನು. ಇದ್ದಕ್ಕಿದ್ದಂತೆ ಅಡುಗೆಮನೆಯಲ್ಲಿ ಅವರ ಬೀಳ್ಕೊಡುಗೆಗೆ ಬರಿ ಬೋಂಡ ಮಾಡಿದರೆ ಸಾಕೊ? ಅಥವಾ ಸಿಹಿಕರಣೆನೂ ಬೇಕೊ ಎಂಬ ಜಿಜ್ಙಾಸೆ ಹುಟ್ಟಿ ಅಮ್ಮ ‘ರೀ….’ ಎಂದರಚಿ ಅಪ್ಪ ಅಡುಗೆ ಮನೆಗೆ ಓಡಿದರು. ಅದೇ ಸಮಯಕ್ಕೆ ಅಕ್ಕನು ‘ಏನ್ರೀ….’ ಎಂದು ಭಾವನನ್ನು ಹುಡುಕುತ್ತಾ ಅಂಗಳಕ್ಕೆ ಬಂದಳು. ಅವಳ ಬಾಲಂಗೋಚಿಯಂತೆ ನಾನೂ ಅವಳ ಹಿಂದೆ ಬಂದೆ. ಹೀಗೆ ಅಂಗಳ ಇಣುಕಿದೆವೊ ಇಲ್ಲವೋ, ರಸ್ತೆಯ ಎಡತುದಿಯಿಂದ ಜೋರಾಗಿ ಬೈಕಿನಲ್ಲಿ ಹಾದು ಬಂದ ಕಿಡಿಗೇಡಿಯೊಬ್ಬ ಅಕ್ಕನ ಕುತ್ತಿಗೆಗೆ ಕೈ ಹಾಕಿ ಅವಳ ಎರಡೆಳೆಯ ಮಾಂಗಲ್ಯದ ಸರವನ್ನು ಕ್ಷಣಾರ್ಧದಲ್ಲಿ ಹಾರಿಸಿ ಪರಾರಿಯಾಗಿಬಿಟ್ಟ. ನಮಗೆ ಏನಾಯಿತೆಂದು ಅರಿವಿಗೆ ಬರುವಷ್ಟರಲ್ಲಿ ಎದುರು ಮನೆಯ ಪಡಸಾಲೆಯಲ್ಲಿ ಪ್ರತಿಷ್ಠಿತರಾಗಿದ್ದ ಐತಾಳರ ಶಾರದಮ್ಮನವರು ‘ಕಳ್ಳಾ.. ಕಳ್ಳಾ..’ ಎಂದು ಬೊಬ್ಬಿರಿದರು. ಆದರೂ ಪ್ರಯೋಜನವಾಗಲಿಲ್ಲ. ಎರಡೇ ನಿಮಿಷದಲ್ಲಿ ಮನೆಯ ಮುಂದಿನ ಸುಂದರ ಸಂಜೆಯ ಚಿತ್ರಣವೇ ಬದಲಾಗಿ ಹೋಗಿತ್ತು.

ಅಕ್ಕ ಒಂದೇ ಸಮನೆ ಮುಸಿಮುಸಿ ಅಳುತ್ತಿದ್ದಳು. ಇಡೀ ಮನೆಯೇ ಒಂದು ದೊಡ್ಡ ಕಳಂಕ ಹೊತ್ತ ಮೌನ ಧರಿಸಿತ್ತು. ಭಾವನು ಬಾಯಲ್ಲಿ ಹಣೆಬರಹದ ಮಾತಾಡುತ್ತಾ ನಾವೇ ಕಳ್ಳರೇನೋ ಎಂಬಂತೆ ಬಲು ಹೀನವಾಗಿ ನಮ್ಮೆಡೆಗೆ ಕುಹಕ ದೃಷ್ಟಿಯೊಂದನ್ನು ಆಗಾಗ ಎರಚುತ್ತಿದ್ದರು. ಪೋಲಿಸು ಕಂಪ್ಲೇಂಟು ಕೊಟ್ಟಾಯಿತು. ಸ್ಥಳಕ್ಕೆ ಬಂದ ಪೋಲೀಸರು ಮಹಜರು ಮುಗಿಸಿ ‘ಕಳ್ಳನನ್ನು ಯಾರು ನೋಡಿದಿರಿ’ ಎಂದರು. ಅಪ್ಪನಿಗಾದ ಅವಮಾನದ ನೋವು ಅವರ ಕಣ್ಣಲ್ಲೇ ಕಂಡಿದ್ದ ನಾನು, ‘ನಾನು ನೋಡಿದೀನಿ ಸಾರ್.’ ಅಂತ ಒಪ್ಪಿಕೊಂಡೆ. ನನ್ನ ಜೊತೆಗೆ ಎದುರು ಮನೆ ಶಾರದಮ್ಮನೂ ನೋಡಿದ್ದಾರೆಂದು ದೊಡ್ಡ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಿ ಅಪ್ಪನ ಮರ್ಯಾದೆಗೆ ಬೆನ್ನು ಕೊಟ್ಟವಳಂತೆ ಹಿರಿಹಿರಿ ಹಿಗ್ಗಿದೆ. ‘ಏನಮ್ಮಾ ಪುಟ್ಟ ಹುಡುಗಿ ನೀನು, ನಾಳೆ ಕಳ್ಳನನ್ನು ಹಿಡಿದರೆ ಗುರುತಿಸ್ತೀಯಾ? ಸ್ಟೇಷನ್ನಿಗೆ ಬರ್ತೀಯಾ?’ ಅಂದರು ಕಾನ್ಸ್ಟೆಬಲ್ ಗಳು. ಈಗ ವಿಚಾರ ಮನೆಯದ್ದಷ್ಟೇ ಅಲ್ಲ, ನನ್ನ ಮಾನಾಪಮಾನದ್ದೂ ಆಗಿಹೋಯಿತು. ಸುಮ್ಮನಿರಲಾದೀತೇ..!? ‘ಬರ್ತೇನೆ ಸರ್.. ನಾನ್ಯಾಕೆ ಹೆದರಲಿ? ನೀವು ಅಕ್ಕನ ಸರ ಕೊಡಿಸಿ ಅಷ್ಟೇ. ಅವಳು ಅಳೋದು ನಂಗೆ ನೋಡಕಾಗ್ತಿಲ್ಲ.’ ಅಂದೆ. ಇಡೀ ಕುಟುಂಬದಲ್ಲೇ ನನ್ನ ರೇಂಜು ಕೊಂಚ ಏರಿಹೋಯಿತು! ಇದರ ಪರಿವೆಯೇ ಇರದ ಪೋಲೀಸರು ಏನೇನೋ ಬರೆದುಕೊಂಡು ಸುಧಮ್ಮನ ಬಳಿಗೂ ಹೋಗಿ ಏನೇನೋ ಕೇಳಿಕೊಂಡು ‘ಏ… ಅವನೇ ಕಣೋ ಇವನು. ಎಲ್ಲ ಕಡೆ ಇದೇ ರೀತಿ, ಇದೇ ಕೇಸು’ ಎಂದು ಗೊಣಗುತ್ತಾ ಹೊರಟುಹೋದರು. ಈ ಕಡೆ ಅಕ್ಕ ಭಾವರೂ ಗೊಣಗುತ್ತಾ ಊರಿಗೆ ಹೊರಟು ಹೋದರು.

ಅಷ್ಟರಲ್ಲೇ ಒಂದು ದಿನ ಸ್ಟೇಷನ್ನಿನಿಂದ ಬುಲಾವು ಬಂದೇಬಿಟ್ಟಿತು. ‘ಕಳ್ಳ ಸಿಕ್ಕಿದ್ದಾನೆ ಈಗಲೇ ಬಂದು ಗುರುತಿಸಿ!’. ತಲೆಯಲ್ಲಿ ನಕ್ಷತ್ರ ಕಾಣುವುದರ ಸಾಕ್ಷಾತ್ ಅನುಭವವಾಯಿತು. ಮನೆಯಲ್ಲಿ ಎಲ್ಲರೂ ಗರ್ವದಿಂದ ನನ್ನನ್ನೇ ನೋಡುತ್ತಿದ್ದರೆ ಕೆಂಡ ಹಾಯುವ ದೇವರಿನಂತೆ ನಾನು ಎದ್ದು ಹೊರಟೆ. ಹೇಗೋ ಮೆಲ್ಲಗೆ ಅಪ್ಪನ ಕೈ ಹಿಡಿದು ಹೋಗಿ ದೂರದಿಂದಲೇ ಅವನನ್ನು ಗುರುತಿಸಿದೆ. ಅವನ ಹೆಸರು ಶೆಟ್ಟರ ಸ್ರೀಕಾಂತನೆಂದೂ, ಚಟಕ್ಕಾಗಿ ಕದಿಯುವ ಒಳ್ಳೇ ಮನೆಯ ಹುಡುಗನೇ ಹೊರತು ಹೊಟ್ಟೆ ಪಾಡಿಗಾಗಿ ಅಲ್ಲವೆಂದೂ ಹೆದರುವ ಅಗತ್ಯವಿಲ್ಲದ ಪುಟಗೋಸಿ ಕಳ್ಳನೆಂದೂ ನಿಮ್ಮ ಸರ ಸಿಗುವುದರಲ್ಲಿ ಅನುಮಾನವೇ ಇಲ್ಲವೆಂದೂ ಒಂದು ಸಣ್ಣ ಯಕ್ಷಗಾನ ಕಥಾ ಪ್ರಸಂಗವನ್ನೇ ದಫೇದಾರರು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು. ಅದನ್ನು ಮೆಚ್ಚಿದಂತೆ ನಟಿಸಿದ ಅಪ್ಪನು ಅವರಿಗೆ ಸಲ್ಲಿಸಬೇಕಾದ ಕಾಣಿಕೆಯನ್ನು ಸಲ್ಲಿಸಿ ‘ಅಷ್ಟು ಮಾಡಿ ಸರ್’ ಎಂದರು. ತತ್ಪರಿಣಾಮ ಮೂರೇ ದಿನದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಬಂದು ಕೋರ್ಟಿನಲ್ಲಿ ಸಾಕ್ಷಿ ಹೇಳಬೇಕೆಂದು ನೋಟೀಸು ಬಂತು. ನಾನೊಂದು ಕೆಲಸಕ್ಕೆ ಬಾರದ ಸಾಕ್ಷಿಯಾಗಿದ್ದೆ. ಈಗ ನನ್ನ ಜೊತೆ ಐತಾಳರ ಶಾರದಮ್ಮನೂ ಸಾಕ್ಷಿ ಹೇಳಲು ಕೋರ್ಟಿಗೆ ಬರಬೇಕಿತ್ತು. ಇಲ್ಲದಿದ್ದರೆ ಕಳ್ಳನ ಕಡೆ ವಕೀಲರು ಮಹಾನ್ ಪ್ಲಾನುಗಾರನೆಂದೂ ಸಾಕ್ಷಿ ಬಲವಾಗಿಲ್ಲವೆಂದು ಅವನನ್ನು ಬಿಡುಗಡೆ ಮಾಡಿಸಿಬಿಡುವ ಭಯವಿದೆಯೆಂದೂ ದಫೇದಾರರು ಹೆದರಿಸಿದ್ದರು.

ಸ್ವಲ್ಪ ಧಡೂತಿ ದೇಹದ ಈಕೆಗೆ ಬೆನ್ನು ಕೆರೆವಾಗ ಕೈ ಎಟಕುತ್ತಿರಲಿಲ್ಲವಾಗಿ ಈ ಸೌಟು ಅವರ ಸ್ವಾವಲಂಬನೆಯ ದ್ಯೋತಕವಾಗಿ ಸದಾ ಅವರೊಡನಿರುತ್ತಿತ್ತು. ಮಕ್ಕಳಾದ ನಮಗೆ ಅವರು ಹಾಗೆ ಸೌಟಿನಿಂದ ಬೆನ್ನು ಕೆರೆಯುವುದು ನೋಡಲು ಅದೇನೋ ಮೋಜು. ಇಂತಹ ಇನ್ನೂ ಹತ್ತು ಹಲವು ಸೃಜನಶೀಲ ಉಪಾಯಗಳು ಶಾರದಮ್ಮನವರನ್ನು ಒಂಥರಾ ಹೆಣ್ಮಕ್ಕಳ ಪಡೆಯ ಲೀಡರಾಗಿಸಿತ್ತು.

ಅಮ್ಮ ಅಂಜುತ್ತಲೇ ನೋಟೀಸು ಹಿಡಿದು ಶಾರದಮ್ಮನ ಬಳಿಗೆ ಹೋದರು. ಕೆಲವೇ ನಿಮಿಷಗಳಲ್ಲಿ ಇದ್ದಕ್ಕಿದ್ದಂತೆ ಶಾರದಮ್ಮನ ಮನೆಯ ಅಂಗಳದಿಂದ ಜೋರು ಅಳುವೂ ಕೂಗಾಟವೂ ಕೇಳಿಬಂತು. ಭಯಗೊಂಡ ನಾವು ಓಡಿ ಹೋಗಿ ನೋಡಿದರೆ, ಬಲಗೈಯಲ್ಲಿ ಸೌಟನ್ನೂ ಎಡಗೈಯಲ್ಲಿ ಸೆರಗು ಬಳಸಿ ಮೂಗನ್ನೂ ಹಿಡಿದಿದ್ದ ಶಾರದಮ್ಮನು ಏರು ದನಿಯಲ್ಲಿ ಅಳುತ್ತಿದ್ದರು. ಬಿಕ್ಕುಗಳ ಮಧ್ಯೆ ಆಗಾಗ ಸುಧಾರಿಸಿಕೊಂಡು “ಇದೆಯಾ ನೀವು ಸ್ನೇಹಕ್ಕೆ ಕೊಡೂ ಬೆಲೆ..? ಮನ್ಷತ್ವಕ್ಕೆ ಬೆಲೆ ಇಲ್ಯಾ..? ಮರ್ಯಾದಸ್ತರನ್ನ ಹೀಗೆ ಕೋರ್ಟಿಗೆ ಎಳೆಯುದಾ..? ಯಜಮಾನ್ರು ಕೇಳಿದ್ರೆ ಏನಂಬ್ರು..? ಊರ್ಕಡೆ ಮತ್ತೆ ಮುಖ ತೋರಿಸ್ಲಿಕ್ಕಾದ್ದಾ..?” ಎಂಬ ಕಚ್ಚಾ ನಾಡ ಬಾಂಬುಗಳಂತಹ ವಾಕ್ಯಗಳನ್ನು ಎಸೆಯುತ್ತಿದ್ದರು. ದಿಗ್ಭ್ರಮೆಗೊಂಡು ನಿಂತಿದ್ದ ಅಮ್ಮನಿಗೆ ತಾನೇನೋ ಡಕಾಯಿತಿಯಂತೆ ಭಾಸವಾಗುತ್ತಿತ್ತು. ತನ್ನ ಮನೆಯ ಮರ್ಯಾದೆಯೂ ಕೋರ್ಟು ಪಾಲಾದದ್ದು ನೆನೆದು ಕಣ್ಣು ಮೂಗು ಒದ್ದೆಯಾದವು. ಅಷ್ಟರಲ್ಲಿ ಅಪ್ಪ ಹೋಗಿ ಪರಿಸ್ಥಿತಿಯನ್ನು ಹತೋಟಿಗೆ ತಂದು ಹೋಟೇಲಿಗೆ ಫೋನು ಹಚ್ಚಿ ಐತಾಳರನ್ನು ಕರೆಸಿದರು. ಅವರು ಬಂದು ಇನ್ನೇನ್ನೇನು ನೋಡಲಿಕ್ಕಿದೆಯೋ ಎಂದು ನಾವು ಭಯಭೀತರಾದೆವು.

ಐತಾಳರ ಮೂರೂ ಸಂತಾನಗಳು ನಮ್ಮನ್ನು ಕೆಕ್ಕರಿಸಿ ನೋಡುತ್ತಿದ್ದವು. ನಾವು ಸಿಕ್ಕಿಬಿದ್ದ ದರೋಡೆಕೋರರಂತೆ ಕೈಕಟ್ಟಿ ತಲೆ ತಗ್ಗಿಸಿ ನಿಂತಿದ್ದೆವು. ಮಾನಧನರಂತೆ ಐತಾಳರು ಹತ್ತು ನಿಮಿಷಗಳಲ್ಲಿ ಚಿತ್ತೈಸಿದರು. ಒಂದು ದೊಡ್ಡ ಬಯಲಾಟ ಮುಗಿಸಿ ಶಾರದಮ್ಮನವರನ್ನು ಒಪ್ಪಿಸಿದ್ದಾಯಿತು. ಐತಾಳರು ನಮ್ಮನ್ನೆಲ್ಲಾ ಅವರ ಕುಟುಂಬದ ನೆಮ್ಮದಿ ಕೆಡಿಸಿದ ಕ್ಷುದ್ರ ರಾಕ್ಷಸರಂತೆ ಕಡೆಗಣ್ಣಿನಲ್ಲಿ ನೋಡಿ ‘ಆಯ್ತಲ್ಲ ರಾಯರೇ, ನಾಳೆ ಒಂದು ದಿನ ಮಾತ್ರ ಬರುದು ಇವಳು. ಮತ್ತೆ ಕರೀಬೇಡಿ.’ ಅಂದು ಎದ್ದರು. ಅಲ್ಲಿಗೆ ಶಾರದಮ್ಮನ ಸೊರಬರದ ಮಧ್ಯೆಯೇ ಒಂದು ಸಿಟ್ಟಿಂಗು ಸಾಂಗವಾಗಿ ಮುಗಿಯಿತು.

ಮರುದಿನ ಬೆಳಗು ಶಾರದಮ್ಮ ಯಾವತ್ತಿನಂತೆ ಒಂದು ಹಳೇ ಸೀರೆಯನ್ನು ಮೈ ತುಂಬಾ ಹೊದ್ದು ಎಣ್ಣೆ ತೀಡಿದ ಕುರುಳನ್ನು ಗೊಂಡೆ ಕಟ್ಟಿ ಕೈಲೊಂದು ಚೀಲ-ಛತ್ರಿ ಹಿಡಿದು ಹೊರಟರು. ಕೋರ್ಟು ಬಾಗಿಲು ದಾಟುವಾಗ ಗಳಗಳನೆ ಅತ್ತರು, ಹಣೆ ಹಣೆ ಚಚ್ಚಿಕೊಂಡರು. ಸುತ್ತಲಿದ್ದ ರೌಡಿಗಳು ಕಳ್ಳಕಾಕರ ಮನೆಯವರು ಹಾಗೂ ಇತರೇ ನ್ಯಾಯಸಂತ್ರಸ್ತರಿಗೆ ಇದೇನೆಂದು ತಳ-ಬುಡ ತಿಳಿಯಲಿಲ್ಲ. ವಕೀಲ ಸಮುದಾಯಕ್ಕೆ ಸಮುದಾಯವೇ ದಂಗು ಬಡಿದು ನೋಡುತ್ತಿತ್ತು. ಜಡ್ಜು ಹೌಹಾರಿಬಿಟ್ಟರು. ಇದೇನೋ ಯಡವಟ್ಟಾಯಿತಲ್ಲಾ.. ಹೆಣ್ಣೆಂಗಸನ್ನು ಹೀಗೆ ನಡೂ ಕೋರ್ಟಿನಲ್ಲಿ ಅಳಿಸಿ ನೋಡಬಹುದೇ… ಪಾಪ ಈ ವಯಸಲ್ಲಿ ವಿಚ್ಛೇದನ ಕಷ್ಟ… ತರಲೇ ಜನ, ಪಾಪ ಆಸ್ತಿ ವಿವಾದಕ್ಕೆ ಈಕೇನ ಕೋರ್ಟಿಗೆ ಎಳೀಬೇಕಿತ್ತೇ.. ಹೀಗೆ ಹತ್ತು ಹಲವು ಭಾವಗಳು ಸುತ್ತಲೂ. ಕಾರಕೂನರು ನಮ್ಮ ಇಕ್ಕಟ್ಟಿನ ಸ್ಥಿತಿ ನೋಡಿ ದಫೇದಾರರ ಜೊತೆಗೆ ಸಂಧಾನ ಮಾಡಿಕೊಂಡು ನಮ್ಮನ್ನೇ ಮೊದಲು ಒಳಗೆ ಕರೆದರು.

ಕಟಕಟೆಗೆ ಹೋದರೋ ಇಲ್ಲವೋ ಮತ್ತೆ ಮೊದಲಿಗಿಂತಲೂ ಜೋರಾಗಿ ಬೊಬ್ಬಿಡಲು ಶುರುವಿಟ್ಟ ಶಾರದಮ್ಮ, “ಅಯ್ಯೋ ಕಳ್ಳಾ ಕಳ್ಳಾ.. ಇವನೇ ಇವನೇ..” ಎಂದು ಕೋರ್ಟಿನ ಹಳೇ ಬಿಲ್ಡಿಂಗ್ ಬಿದ್ದು ಹೋಗುವಂತೆ ಕಿರುಚಿದರು. ಜಡ್ಜಿಗೆ ಕಸಿವಿಸಿಯಾಗಿ ಬೆಳಬೆಳಗ್ಗೆ ತಲೆನೋವು ಪಾರ್ಟಿ ಅನಿಸಿತೋ ಏನೋ ‘ಕರ್ಕೊಂಡೋಗ್ರೀ ಈಕೇನಾ’ ಅಂತ ಕಿರುಚಿದರು. ಆದರೆ ನಮ್ಮ ಕೆಲಸವಾಯಿತು. ಕೋರ್ಟಿನಿಂದ ಹೊರಗೆ ಕಾಲಿಡುತ್ತಿದ್ದಂತೇ ಬಂದ ಕಂಟಕ ನಿವಾರಣೆಯಾಗಿ ಭಯಂಕರ ಸಂತಸಗೊಂಡ ಶಾರದಮ್ಮನವರು ಅಮ್ಮನನ್ನು ತಬ್ಬಿ “ಸಧ್ಯ ಮುಗೀತಲ್ರೀ.. ನಿಮ್ ಹೆಣ್ಣಿನ ಸರ ಸಿಕ್ರೆ ಸಾಕ್. ನಾ ಬತ್ತೆ..” ಅಂತನ್ನುತ್ತಾ ನಮ್ಮ ಧನ್ಯವಾದಕ್ಕೂ ಕಾಯದೇ ತಮ್ಮ ಗಂಡನ ಹೊಟೇಲಿನ ಕಡೆಗೆ ಹೆಜ್ಜೆ ಹಾಕಿದರು. ನಗುನಗುತ್ತಾ ಹೊರಟುಹೋದ ಅವರನ್ನು ಅರಗಿಸಿಕೊಳ್ಳಲಾಗದ ನಾವು ಬೆಪ್ಪನೆ ನೋಡುತ್ತಾ ನಿಂತೇ ಬಿಟ್ಟೆವು.

ಕೆಲಕಾಲ ಕಳೆದು ಸರ ಸಿಕ್ಕಿತು. ಮುಕ್ಕಾಗದೇ ಅದೇ ಸರವನ್ನು ಕೊಡಿಸಿಕೊಟ್ಟುದರಲ್ಲಿ ಯಕ್ಷಗಾನ ವೀರ ದಫ಼ೇದಾರರ ಪಾತ್ರ ದೊಡ್ಡದು. ಬಿಡುಗಡೆಗೊಂಡ ಮೇಲೆ ಸ್ರೀಕಾಂತಿಯು ಒಂದೆರಡು ಬಾರಿ ಪಕ್ಕದ ಬೀದಿಯಲ್ಲಿ ಓಡಾಡುತ್ತಿದ್ದನೆಂಬ ಗುಮಾನಿ ಹತ್ತಿ ನಾನೇ ಖುದ್ದು ಸ್ಟೇಷನ್ನಿಗೆ ಕರೆ ಮಾಡಿ ತಿಳಿಸಿದ್ದೆ. ಆಮೇಲೆ ನಮ್ಮ ಮಠದ ಕೇರಿಗೆ ಅವನ ಕಾಟ ತಪ್ಪಿತು. ಅಪ್ಪನ ಮಾನ, ಭಾವನ ಸುಮ್ಮಾನ, ನನ್ನ ಅಭಿಮಾನ ಎಲ್ಲಾ ಉಳಕೊಂಡವೆಂದು ಮತ್ತೆ ಹೇಳಬೇಕಾಗಿಲ್ಲ. ಉಳಿಯದೇ ಹೋದದ್ದೆಂದರೆ ಅಮ್ಮ ಹಾಗೂ ಶಾರದಮ್ಮನ ನಿಕಟ ಸ್ನೇಹ. ಸೌಟು ಹಂಚಿಕೊಂಡು ಬೆನ್ನು ತುರಿಸುತ್ತಾ ಗಂಟೆಗಟ್ಟಲೇ ತಮ್ಮ ನಜದೀಕಿನಲ್ಲಿ ದಾದಾಗಿರಿ ಮಾಡುತ್ತಿದ್ದ ಈ ಇಬ್ಬರು ಸ್ವಾವಲಂಬಿ ಸಬಲೆಯರು ಈಗ ಕಣ್ಣಿಗೆ ಕಣ್ಣು ಬೆರೆತರೆ ತಲೆ ತಗ್ಗಿಸಿ ಒಳನಡೆಯುತ್ತಿದ್ದರು. ಐತಾಳರು ಮಾತ್ರ ಕರ್ಮಯೋಗಿಯಂತೆ ಯಾವೊಂದು ತಕರಾರಿಲ್ಲದೇ “ಹೋಯ್. ರಾಯರು.. ಆಪೀಸಾ” ಎಂದು ಎದುರಾದ ದಿನ ತಪ್ಪದೇ ಅಪ್ಪನನ್ನು ವಿಚಾರಿಸಿಕೊಳ್ಳುತ್ತಿದ್ದರು.

ಕೆಲವು ದಿನಗಳ ಭವಿಷ್ಯದಲ್ಲಿ ನಡೆದ ಐತಾಳರ ಮೊದಲ ಹೆಣ್ಣು ಸಂತಾನದ ಮದುವೆ ಕಾರ್ಯಕ್ರಮಕ್ಕೆ ಅಪ್ಪ ಅಮ್ಮನಿಗೆ ಮೊದಲ ಆಹ್ವಾನ ಬರುವ ಮೂಲಕ ಎದುರುಬದುರು ಮನೆಯ ಶಾಶ್ವತ ಸ್ನೇಹ ಇನ್ನೂ ಉಸಿರಾಡುತ್ತಿರುವ ಸತ್ಯವನ್ನು ಖುದ್ದು ಸಾರಿದ್ದು ಮಾತ್ರ ಶಾರದಮ್ಮನವರೇ..

About The Author

ಮಧುರಾಣಿ

ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ