Advertisement
ಶ್ರದ್ಧೆಯ ಮೂಲ ಎಲ್ಲಿದೆ?

ಶ್ರದ್ಧೆಯ ಮೂಲ ಎಲ್ಲಿದೆ?

ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್‌ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ. ಯಾರು ಹೇಳಿದ್ದರು ಅವರಿಗೆ ಹೀಗೆ ಮಾಡಲು? ಮಾಡದಿದ್ದರೆ ಕೇಳುವವರಾರು? ಆ ಶ್ರದ್ಧೆಯ ಮೂಲ ಎಲ್ಲಿದೆ?
ಗಿರಿಜಾ ರೈಕ್ವ ಬರೆಯುವ ಪ್ರವಾಸ ಅಂಕಣ “ದೇವಸನ್ನಿಧಿ”ಯಲ್ಲಿ ಹೊಸ ಬರಹ

ರಾಣಿ ಕಿ ವಾವ್‌ ಗುಜರಾತಿನ ಪಾಟನ್‌ ನಲ್ಲಿರುವ ಅದ್ಭುತ ಕೆತ್ತನೆಗಳ ಬಾವಿ. ರಾಜಸ್ಥಾನ ಹಾಗೂ ಗುಜರಾತಿನಲ್ಲಿ ನೀರಿನ ಅಭಾವವಿರುವುದರಿಂದ ಬಾವಿಗಳನ್ನು ಕಲಾತ್ಮಕವಾಗಿ, ಬಹಳ ಕಾಲ ನೀರನ್ನು ಶೇಖರಿಸುವ ಹಾಗೆ ಮೆಟ್ಟಿಲು ಮೆಟ್ಟಿಲಾಗಿ ಕಟ್ಟುತ್ತಾರೆ. ರಾಣಿಯೊಬ್ಬಳು ತನ್ನ ಅಳಿದ ಪತಿಯ ನೆನಪಿಗೆ ಕಟ್ಟಿಸಿದ್ದರಿಂದ ಇದನ್ನು ರಾಣಿ ಕಿ ವಾವ್‌ ಎನ್ನುತ್ತಾರೆ. ವಾವ್‌ ಎಂದರೆ ಗುಜರಾತಿ ಭಾಷೆಯಲ್ಲಿ ಬಾವಿ. ಬಾವಿ ಅನ್ನುವುದಕ್ಕಿಂತಲೂ ನನ್ನ ಆಸ್ತಿಕ ದೃಷ್ಟಿಯಲ್ಲಿ ಅದೊಂದು ತಲೆಕೆಳಗಾದ ದೇವಾಲಯ. ಇದೊಂದು ಯುನೆಸ್ಕೋ ತಾಣ. ನಿಮ್ಮ ಹತ್ತಿರ ಇರುವ ಹೊಸ ನೂರು ರೂಪಾಯಿಯ ನೋಟು ತೆಗೆದು ನೋಡಿ. ಅಲ್ಲೇ ಇದೆ ರಾಣಿ ಕಿ ವಾವ್. ಇಂಥದ್ದೊಂದು ಬಾವಿ ಜನ ನಿತ್ಯ ನಡೆದಾಡುವ, ಆಟವಾಡುವ ಜಾಗದ ಕೆಳಗೆ ಇದೆ ಅನ್ನೋದೇ ಅನೇಕ ವರ್ಷಗಳು ಯಾರಿಗೂ ತಿಳಿದಿರಲಿಲ್ಲ. ೧೯೭೦ ರ ಈಚೆಗೆ ಅಚಾನಕ್ಕಾಗಿ ಸ್ಥಳೀಯರಿಗೆ ಕಂಡುಬಂದ ಮೇಲೆ, ಆರ್ಕಿಯಾಲಜಿ ಇಲಾಖೆಯವರು ಅತ್ಯಂತ ಸ್ತುತ್ಯಾರ್ಹವಾದ ಕೆಲಸ ಮಾಡಿ ಅಪೂರ್ವವಾದ ಈ ಪಾರಂಪರಿಕ ತಾಣವನ್ನು ಕಾಪಾಡಿಕೊಂಡಿದ್ದಾರೆ. 65 ಮೀ X 20 X28 ಮೀ ಇರುವ ಇದು ಹಲವು ಮಾಳಿಗೆಗಳ ಕೆಳಗೆ ಇಳಿದಂತೆ ದೇವದೇವಿಯರ ಪ್ರಪಂಚಕ್ಕೆ ತೆರೆದುಕೊಳ್ಳುತ್ತದೆ. ನಿಜವಾದ ಬಾವಿ ಇರುವ ಭಾಗದ ಒಳ ಮೈ ತುಂಬಾ ಅಪ್ಸರೆಯರು, ನಾರಾಯಣ, ಶಿವ, ಪಾರ್ವತಿಯರ ನೂರಾರು ಶಿಲ್ಪಗಳಿವೆ. ಮೆಟ್ಟಿಲು ಇಳಿಯುವ ಪ್ರತಿ ಹಂತದಲ್ಲೂ ನಾರಾಯಣ ಹಾಗೂ ವಿಷ್ಣುವಿನ ಹಲವು ಅವತಾರಗಳ ಭಾವದುಂಬಿದ ಕೆತ್ತನೆಗಳು ನಿಜಕ್ಕೂ ಮೈದಳೆದು ಬಂದಂತೆ ತೋರುತ್ತವೆ.

ಈಗ ನಾನು ಹೇಳ ಹೊರಟಿರುವುದು ಅದಲ್ಲ. ಅಲ್ಲಿಯ ದೈವಿಕ ಭಾವಕ್ಕೆ ಮನಸೋತು ಒಂದೆಡೆ ಕುಳಿತಿದ್ದೆ. ಆರು ಗಂಟೆಯಾಗಿತ್ತು. ಸೂರ್ಯ ಮುಳುಗುತ್ತಿದ್ದ. ಅಲ್ಲಿದ್ದ ಪ್ರವಾಸಿಗರು ಹೊರಡುತ್ತಿದ್ದರು. ಅಲ್ಲಿಯ ತನಕ ನನ್ನ ಫೋಟೋ ತೆಗೆದುಕೊಡುತ್ತಿದ್ದ ಸೆಕ್ಯುರಿಟಿ ಒಬ್ಬ ಚಪ್ಪಲಿ ಬಿಟ್ಟು ಮೇಲಿನ ಮಜಲಿಗೆ ಹೋದ. ಆತನಿಗೆ ಎಲ್ಲಿ, ಯಾವ ಭಂಗಿಯಲ್ಲಿ ನಿಂತರೆ ಫೋಟೋ ಚೆನ್ನಾಗಿ ಬರುತ್ತೆ ಅಂತ ಚೆನ್ನಾಗಿ ಗೊತ್ತಿತ್ತು. ಮಳೆಗಾಲದಲ್ಲಿ ಹೇಗಿರುತ್ತೆ, ಚಳಿಗಾಲದಲ್ಲಿ ಹೇಗಿರುತ್ತೆ ಅಂತ ವರ್ಣನೆ ಮಾಡ್ತಾ ಇದ್ದ. ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್‌ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ. ಯಾರು ಹೇಳಿದ್ದರು ಅವರಿಗೆ ಹೀಗೆ ಮಾಡಲು? ಮಾಡದಿದ್ದರೆ ಕೇಳುವವರಾರು? ಆ ಶ್ರಧ್ಧೆಯ ಮೂಲ ಎಲ್ಲಿದೆ?

ಲಿಟಿಗೇಶನ್ ನಲ್ಲಿ ಇರುವ ದೇವಾಲಯ ಅಂತ ಗೊತ್ತಿದ್ದರಿಂದ ಹಾಗೂ ಅಲ್ಲಿ ಒಳಗೆ ಯಾರನ್ನೂ ಬಿಡುವುದಿಲ್ಲ ಅಂತ ತಿಳಿದಿದ್ದರಿಂದ ಸ್ವಲ್ಪ ಅಳುಕಿನಿಂದಲೇ ಅಲ್ಲಿಗೆ ಹೋದೆ. ಮಟಮಟ ಮಧ್ಯಾಹ್ನ. ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಬೇರೊಂದು ಸದ್ದಿರಲಿಲ್ಲ. ಅಲ್ಲಿ ಸೆಕ್ಯೂರಿಟಿ ಗಾರ್ಡ್ ಇರಬಹುದು ಅಂತ ಯಾರೋ ಹೇಳಿದ್ದರಿಂದ ಹಿಂದೆ ಮುಂದೆ ನೋಡುತ್ತಾ ನಿಂತಿದ್ದೆ. ಗೇಟ್ ತೆಗೆದಿತ್ತು. ಒಳ ಹೋದೆ. ಹಳೆ ಪ್ಯಾಂಟ್ ಶರ್ಟ್ ಧರಿಸಿದ್ದ, ಕುರುಚಲು ಗಡ್ಡದ ವ್ಯಕ್ತಿಯೊಬ್ಬ ಒಂದು ಪ್ಲ್ಯಾಸ್ಟಿಕ್ ಬಕೆಟ್‌ನಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಒಹೋ ಇವನೇ ಇಲ್ಲಿಯ ಸೆಕ್ಯೂರಿಟಿ ಇರಬೇಕೆಂದುಕೊಂಡು ಫೋಟೋ ತೆಗೆಯಬಹುದೇ ಎಂದು ಕೇಳಿದೆ. ಅವನು ನನಗೆ ಗೊತ್ತಿಲ್ಲ. ಈಗೊಬ್ಬರು ಬರ್ತಾರೆ ಅವರನ್ನೇ ಕೇಳಿ ಎನ್ನುತ್ತಾ ಪಾಳು ಬಿದ್ದಂತಿದ್ದ ದೇಗುಲದೊಳಗೆ ಹೋದ. ನನಗೆ ಇವನು ಸೆಕ್ಯುರಿಟಿಯೋ ಅಲ್ಲವೋ ಅಂತಾನೂ ತಿಳಿಯಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಓಡಾಡುತ್ತ ಇದ್ದು ಅವನು ಹೋದ ಗುಡಿಯೊಳಗೆ ಇಣುಕಿದೆ. ಆತ ಅಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾ, ಮಗುವಿನ ತಲೆ ನೇವರಿಸುವಂತೆ ಲಿಂಗದ ತಲೆ ಸವರುತ್ತ ಕುಳಿತು ಬಿಟ್ಟಿದ್ದ. ನಾನು ಇಣುಕುತ್ತಿರುವ ಅರಿವೂ ಅವನಿಗಿರಲಿಲ್ಲ. ತನ್ನ ಲೋಕದಲ್ಲಿ ಕಳೆದು ಹೋಗಿದ್ದ. ಆಚೆ ಬಂದು ಸಿಕ್ಕಿದ್ದೇ ಚಾನ್ಸ್ ಅನ್ನುತ್ತಾ ಫೋಟೋ, ವಿಡಿಯೋ ಮಾಡಿಕೊಳ್ತಾ ಹೋದೆ. ಸ್ವಲ್ಪ ಸದ್ದಾದರೂ ಯಾರೋ ಬಂದರು ಅನ್ನುವ ಭಯದಲ್ಲೇ ಇದ್ದೆ.

ಸುಮಾರು ಒಂದು ಗಂಟೆಯ ನಂತರ ಆ ವ್ಯಕ್ತಿ ಹೊರ ಬಂದು ಬ್ಯಾಗಿನಿಂದ ಗೋಧಿಕಾಳುಗಳನ್ನು ತೆಗೆದು ಎರಚಿದ. ಪಾರಿವಾಳಗಳು ಹಿಂಡು ಹಿಂಡಾಗಿ ಬಂದವು. ಸ್ವಲ್ಪ ಹೊತ್ತು ಪಾರಿವಾಳಗಳಿಗೆ ಉಣ್ಣಿಸಿ ಆ ವ್ಯಕ್ತಿ ನನ್ನ ಇರವನ್ನು ನೋಡದಂತೆ ಹೊರಟು ಹೋದ.

ದಾಳಿಯಿಂದ ಉಳಿದಿರುವ ಒಂದೆರಡು ಶಿವಲಿಂಗಗಳ ಮೇಲೆ ಹೊಸ ಹೂವಿತ್ತು. ನಿತ್ಯಪೂಜೆ ನಡೆಯುವ ಹಾಗೆ ಅಲ್ಲಿನ ದೀಪಗಳ ಎಣ್ಣೆಯ ವಾಸನೆ ಹಾಗೇ ಇತ್ತು.

ಅದು ಗುಜರಾತಿನಲ್ಲಿರುವ ರುದ್ರಮಹಾಲಯ ದೇವಾಲಯ. ಹಿಂದೂಗಳ ಹೆಮ್ಮೆಯ ಮೂರು ಅಂತಸ್ತಿನ ಭವ್ಯವಾದ ಶಿವನ ದೇವಾಲಯ. ಶತಶತಮಾನಗಳ ದಾಳಿಗಳಿಂದ ಅಲ್ಪಸ್ವಲ್ಪ ಉಳಿದುಕೊಂಡಿರುವ ಭಾಗ. ನೂರಾರು ವರ್ಷಗಳು ಮಸೀದಿಯಾಗಿದ್ದು, ಈಗ ಸರಕಾರ ಹಿಂದೂ ಮುಸ್ಲಿಂ ಇಬ್ಬರಿಗೂ ಪೂಜೆಗೆ ಕೊಡದೆ ೪೦ ವರ್ಷಗಳಿಂದ ಸೆಕ್ಯೂರಿಟಿ ಇಟ್ಟು ಕಾಪಾಡುತ್ತಿರುವ ಜಾಗ. ಕೆಲ ವರ್ಷಗಳ ಹಿಂದಿನ ತನಕ ಯಾರಿಗೂ ಅದನ್ನು ನೋಡಲೂ ಬಿಡುತ್ತಿರಲಿಲ್ಲ.

ಅಂತ ಜಾಗದಲ್ಲಿ ಈ ರುದ್ರ ಮತ್ತು ಅವನಿಗೆ ಈ ಭಕ್ತನ ಸೇವೆ. ಯಾವ ಕೋರ್ಟು, ಸರಕಾರದ ಕಾನೂನೂ ಅವನ ವೈಯಕ್ತಿಕ ಭಕ್ತಿಗೆ ಅಡ್ಡಿಮಾಡಿದಂತೆ ಕಾಣಲಿಲ್ಲ. ಅವನು ಯಾವ ಕ್ರಾಂತಿ ಮಾಡಿದಂತೆಯೂ ಇರಲಿಲ್ಲ. ಕಾನೂನು ಕಟ್ಟಳೆಗಳನ್ನು ಮೀರಿದ, ತೀರಾ ಸಹಜವಾದ ಭಕ್ತಿ ಮಾತ್ರ ಅಲ್ಲಿತ್ತು.

ಆತ ಅಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾ, ಮಗುವಿನ ತಲೆ ನೇವರಿಸುವಂತೆ ಲಿಂಗದ ತಲೆ ಸವರುತ್ತ ಕುಳಿತು ಬಿಟ್ಟಿದ್ದ. ನಾನು ಇಣುಕುತ್ತಿರುವ ಅರಿವೂ ಅವನಿಗಿರಲಿಲ್ಲ. ತನ್ನ ಲೋಕದಲ್ಲಿ ಕಳೆದು ಹೋಗಿದ್ದ. ಆಚೆ ಬಂದು ಸಿಕ್ಕಿದ್ದೇ ಚಾನ್ಸ್ ಅನ್ನುತ್ತಾ ಫೋಟೋ, ವಿಡಿಯೋ ಮಾಡಿಕೊಳ್ತಾ ಹೋದೆ.

ಇತ್ತೀಚೆಗೆ ಗುಜರಾತಿನ ಜೈನ ತೀರ್ಥ ಕ್ಷೇತ್ರವಾದ ತಾರಂಗ್‌ ಬೆಟ್ಟಕ್ಕೆ ಹೋಗಿದ್ದೆ. ಬೆಟ್ಟದ ಮೇಲೆ ಸುಂದರವಾದ ಅಜಿತನಾಥ ತೀರ್ಥಂಕರನ ಸುಂದರವಾದ ದೇವಾಲಯವಿದೆ. ದೇವಾಲಯದ ತನಕವೂ ಕಾರಿನ ದಾರಿ. ಅಲ್ಲಿ ಸುತ್ತಲೂ ೩-೪ ಸಣ್ಣ ಜೈನ, ಬೌದ್ಧ ದೇಗುಲಗಳಿವೆ. ಅವನ್ನು ತಲುಪಲು ೩೦ ನಿಮಿಷಗಳ ಸಣ್ಣ ಟ್ರೆಕ್‌ ಮಾಡಬೇಕು. ನಾನು ಬೆಟ್ಟ ಹತ್ತಿ ಉಸ್ಸಪ್ಪಾ ಅಂತ ಸುಧಾರಿಸಿಕೊಳ್ಳುತ್ತಾ ಕುಳಿತಿದ್ದೆ. ಸಾಯಂಕಾಲದ ೪ ಗಂಟೆ ಆದರೂ ಬಿಸಿಲಿನ ಝಳ ಚುರುಗುಟ್ಟುತ್ತಿತ್ತು. ಕೆಳಗಿನಿಂದ ಹತ್ತಿ ಬರುವವರು ನಾನು ಕುಳಿತಲ್ಲಿಂದ ಕಾಣಿಸುತ್ತಾ ಇದ್ದರು. ಅಲ್ಲೊಂದು ೫೦ರ ಪ್ರಾಯದ ಜೋಡಿ. ಹೆಂಡತಿಗೆ ಕಾಲಿನಲ್ಲಿ ಏನೋ ಸಮಸ್ಯೆ. ಕುಂಟುತ್ತಾ ಇದ್ದಾರೆ. ಆದರೂ ಗಂಡನ ಕೈ ಹಿಡಿದು ನಿಧಾನಕ್ಕೆ ಬೆಟ್ಟ ಹತ್ತುತ್ತಿದ್ದಾರೆ. ಬಹುಶಃ ಅವರ ವೇಗ ನೋಡಿದರೆ ಒಂದು ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡಿರಬಹುದು. ಹಾಗೇ ಹೇಗೋ ನಿಭಾಯಿಸಿಕೊಂಡು ಹೆಜ್ಜೆ ಹಾಕುತ್ತಾಇದ್ದರು. ಬೆಟ್ಟದ ಮೇಲಿದ್ದದ್ದು ಒಂದು ಸಣ್ಣ ಗುಡಿ ಅಷ್ಟೇ. ಅದನ್ನು ನೋಡಲು ಇಷ್ಟು ಕಷ್ಟ ಪಡಬೇಕಾ?

ಸಾಮಾನ್ಯ ನಮ್ಮ ದೇಶದಲ್ಲಿ ತೀರ್ಥಕ್ಷೇತ್ರಗಳು ಸುಲಭವಾಗಿ ತಲುಪಲಾಗದ ದುರ್ಗಮ ದಾರಿಯಲ್ಲೋ, ಇಲ್ಲ, ಎತ್ತರದ ಬೆಟ್ಟದ ಮೇಲೋ ಇರುತ್ತವೆ. ಹಾಗಾದರೆ ಬರೀ ಯುವ, ಶಕ್ತ, ಒಳ್ಳೇ ದೇಹಾರೋಗ್ಯ ಕಾಪಾಡಿಕೊಂಡಿರುವವರು ಮಾತ್ರ ಅಲ್ಲಿಗೆಲ್ಲಾ ಹೋಗುತ್ತಾರಾ? ನಾನು ನೋಡಿದ ಹಾಗೆ ಕೈಯಲ್ಲಿ ಆಗದವರು, ಡಯಾಬಿಟಿಸ್‌, ಬಿಪಿ ಇರುವವರು, ಕೆಮ್ಮು ದಮ್ಮು, ಅಸ್ತಮಾ ಇರುವವರು, ನಡೆಯಲು ಆಗದವರೂ ಬರುತ್ತಾರೆ. ಢೋಲಿಯಲ್ಲಿ ಕುಲುಕಾಡುತ್ತಾ, ಕುದುರೆ ಮೇಲೆ ಓಲಾಡುತ್ತಾ, ಬೆತ್ತದ ಬುಟ್ಟಿಯನ್ನು ಮಗುವಿನ ಹಾಗೆ ಆತು ಕುಳಿತು ಅಂತೂ ಇಂತೂ ಹೇಗೋ ಮಾಡಿ ಅಲ್ಲಿಗೆ ತಲುಪುತ್ತಾರೆ. ಕಾಸಿಗೆ ಕಾಸು ಕೂಡಿಟ್ಟು ಬರುತ್ತಾರೆ. ಯಾಕೆ? ಹರಕೆ ಹೊರಲು ಬೆಟ್ಟ ಹತ್ತುತ್ತಾರೆ. ಹರಕೆ ತೀರಿಸಿ ಗುಡ್ಡಇಳಿಯುತ್ತಾರೆ. ಯಾಕೆ? ಅಂಥದೇನಿದೆ ಅಲ್ಲಿ? ಒಂದು ಬೆಟ್ಟ, ದೇವಾಲಯ, ಕೆಲವು ಕಡೆ ತೀರಾ ಒಂದು ಕಲ್ಲೋ, ಕೊಳವೋ ಇರುತ್ತದೆ. ಅದಕ್ಯಾಕೆ ಅಷ್ಟು ಪ್ರಯಾಸ ಪಡಬೇಕು?

ನಾನೊಮ್ಮೆ ಚೆಕ್‌ ರಿಪಬ್ಲಿಕ್‌ ದೇಶದ ಪ್ರಾಗ್‌ ನಗರದಲ್ಲಿದ್ದೆ. ಅದು ೨೦ ನೇ ಶತಮಾನದ ಪ್ರಸಿದ್ಧ ಕಾದಂಬರಿಕಾರ ಕಾಫ್ಕಾನ ಊರು. ಪ್ರಾಗ್‌ ನಗರದ ತುಂಬಾ ಹರಡಿಕೊಂಡ ಕಾಫ್ಕಾನ ಬದುಕಿನ ತುಣುಕುಗಳ ಹಿಂದೆ ಅಲೆಯುತ್ತಿದ್ದೆ. ಅವನ ಸಮಾಧಿಯ ಜಾಗ ನೋಡೋಕೆ ಅಂತ ಒಂದು ಸ್ಮಶಾನಕ್ಕೆ ಹೋಗಿದ್ದೆ. ನಾನು ಹೋದಾಗ ಸಂಜೆ ಐದರ ಮಳೆ ಆಗ ತಾನೆ ನಿಂತಿತ್ತು. ಟ್ರೈನ್‌ ಸ್ಟೇಶನ್‌ ಇಂದ ಕೇವಲ ೨೦೦ ಮೀಟರ್‌ ನಲ್ಲೇ ಇತ್ತು ಶ್ಮಶಾನ. ಅದರ ಒಳಗೆ ಹೋದ ಮೇಲೆ ಅಲ್ಲಿ ವಿಚಾರಿಸಿದಾಗ ಕಾಫ್ಕಾನ ಸಮಾಧಿ ಇನ್ನೂ ಒಳಗೆ ಇದೆ. ಒಂದಷ್ಟು ದೂರ ನಡಿಬೇಕು ಅಂದರು. ಸುತ್ತಲೂ ಸಮಾಧಿಗಳು. ಮಳೆ ಬಂದಿದ್ದರಿಂದ ಜನ ಯಾರೂ ಕಾಣಿಸಲಿಲ್ಲ. ಸ್ವಲ್ಪ ಭಯ ಆಯ್ತು. ತಕ್ಷಣ ತಾನೇತಾನಾಗಿ ಲಲಿತಾಸಹಸ್ರನಾಮ ಹೇಳಿಕೊಳ್ಳೋಕೆ ಶುರು ಮಾಡಿದ್ದೆ ನನಗೇ ಗೊತ್ತಿಲ್ಲದೆ. ಭಯ ಆದಾಗ ಹೇಳಿಕೋ ಎಂದಿದ್ದ ತಾತನ ಮಾತು ಆಳವಾಗಿ ಬೇರೂರಿತ್ತು. ಹೇಳಿಕೊಳ್ಳುತ್ತಾ ಹೋದಂತೆ ನನ್ನೊಳಗಿನ ದಿಗಿಲು ಕರಗಿ ಆ ಜಾಗದಲ್ಲಿ ಧೈರ್ಯ ಹುಟ್ಟಿತು. ಕಾಫ್ಕಾನ ಸಮಾಧಿಯನ್ನು ತಲುಪಿ ಸೆಲ್ಫಿ ತೆಕ್ಕೊಂಡು ಬಂದೆ.

*****

ಈ ಶ್ರದ್ಧೆಯ ವಲಯ ನಾವು ಆಧುನಿಕರು ಭಾವಿಸಿರುವುದಕ್ಕಿಂತಲೂ ಬಹಳ ಆಳವಾದದ್ದು. ನಮಗೇ ಅರಿವಿಲ್ಲದೆ ನಮ್ಮ ಅಸ್ತಿತ್ವದ ಒಂದು ಭಾಗವಾಗಿರುತ್ತೆ. ನಾವು ಹೊಸ ಓದು, ವೈಚಾರಿಕತೆಗೆ ಒಳಗಾಗಿ ಅದರ ಪೊರೆ ಕಳಚಿಕೊಳ್ಳಲು ಒದ್ದಾಡುತ್ತಲೇ ಇರುತ್ತೇವೆ. ಬೇರೆಯವರ ಕಣ್ಣಿಗೆ, ವಿಶ್ಲೇಷಣೆಗೆ ತಕ್ಕಂತೆ ನಮ್ಮ ವ್ಯಕ್ತಿತ್ವವನ್ನು ನಾಜೂಕುಗೊಳಿಸಿಕೊಳ್ಳಲು ತಿಣುಕುತ್ತೇವೆ. ಆದರೂ ಅದು ಸಮಯ ಸಂದರ್ಭ ನೋಡಿಕೊಂಡು ಬತ್ತಲಾರದ ಗಂಗೆಯ ಹಾಗೆ ನಮ್ಮ ಮನಸ್ಸಿನಲ್ಲಿ ಚಿಮ್ಮಿ ಬರುತ್ತದೆ.

ಮೊದಲ ಘಟನೆಯಲ್ಲಿ ನೋಡಿದಂತೆ ಆ ಸೆಕ್ಯುರಿಟಿಗೆ ಊದುಗಡ್ಡಿ ಹಚ್ಚುವ ಯಾವ ದರ್ದು ಇಲ್ಲದಿದ್ದರೂ ಆ ಉಸಾಬರಿಗೆ ಅವನು ತನ್ನನ್ನು ತಾನು ಒಳಗು ಮಾಡಿಕೊಳ್ಳುತ್ತಾನೆ. ನಮ್ಮ ಪಾಲಿಗೆ ಉಸಾಬರಿ, ಅವನ ಪಾಲಿಗೆ ಶ್ರದ್ಧೆ. ಸ್ಮಾರಕ ಕಾಯಲೆಂದು ಅವನನ್ನು ಮೇಲಿನವರು ನೇಮಿಸಿದ್ದರೆ ಇವನು ಜೀವಂತ ದೇವತಾಸ್ಥಾನದ ಅರ್ಚಕನಾಗಿಬಿಟ್ಟಿದ್ದಾನೆ.

ಈ ಎಲ್ಲಾ ಜಾಗಗಳಲ್ಲೂ ಸರಕಾರಿ ವ್ಯವಸ್ಥೆ ಉಳಿಸಲು ಪ್ರಯತ್ನಿಸುತ್ತಿರುವುದು ಕಲಾತ್ಮಕ ಪರಂಪರೆಯನ್ನು. (ಹೆರಿಟೇಜ್) ಆದರೆ ಜನ ಉಳಿಸಿಕೊಂಡು ಬರುತ್ತಿರುವುದು ಕಲೆ, ಕಾನೂನಿನ ನಿಯಮಗಳನ್ನು ಮೀರಿದ ಭಾವಾತೀತ ಸುಂದರ ನಂಬಿಕೆಯ ಲೋಕವೊಂದನ್ನು. ಇದನ್ನು ಸಂಪ್ರದಾಯ ಎಂದು ಅವರು ಗುರುತಿಸುತ್ತಾರೆ.

ಕೊನೆಗೂ ಭಾರತವೆಂಬ ಈ ಅದ್ಭುತ ಉಳಿದಿರುವುದು ಈ ಪೂಜ್ಯ ಭಾವನೆ, ನಾನು ಇದರ ಅರ್ಚಕ, ಭಕ್ತ, ಭಕ್ತೆ ಎಂಬ ಅಲೌಕಿಕ ಭಾವದಿಂದ. ಪರಂಪರೆಯ ಈ ಅಮೃತ ವಾಹಿನಿಯನ್ನು ಉಳಿಸಿಕೊಂಡು ಬಂದಿರುವ ಅಪರೂಪದ ಪದ, ಭಾವ,ಮಂತ್ರ, ಸಂಕಟ, ಭರವಸೆ ಇವೆಲ್ಲವುಗಳ ಒಟ್ಟು ರೂಪವೇ ಶ್ರದ್ಧೆ. ಪರಂಪರೆ ಯಾವುದನ್ನು ಹದ್ದು ಎನ್ನುತ್ತದೋ ಅದನ್ನು ಶ್ರದ್ಧೆ ಗರುಡ ಎಂದು ಪೂಜಿಸುತ್ತದೆ. ಹೊರಗಿನ ಸರಕಾರಗಳು ಬಂದರೂ ಹೋದರೂ ಜನಸಾಮಾನ್ಯರನ್ನು ಪೊರೆಯುತ್ತಿರುವ ಇಂತಹ ಭಕ್ತಿ ಶ್ರದ್ಧೆಗಳೇ ನಮ್ಮ ದೇಶದ ಜೀವಾಳ.

About The Author

ಗಿರಿಜಾ ರೈಕ್ವ

ಗಿರಿಜಾ ರೈಕ್ವ ವೃತ್ತಿಯಲ್ಲಿ ಕಾರ್ಪೋರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿಸ್ ಉದ್ಯೋಗಿ. ಅಲೆದಾಟ, ತಿರುಗಾಟ, ಹುಡುಕಾಟ ಆಸಕ್ತಿ ಮತ್ತು ರಂಗಭೂಮಿಯಲ್ಲಿ ಒಲವು ಹೊಂದಿದ್ದಾರೆ.

3 Comments

  1. ramesh pattan

    ಅತ್ಯುತ್ತಮ ಲೇಖನ
    ರಮೇಶ ಪಟ್ಟಣ. ಕಲಬುರಗಿ

    Reply
    • Girija

      Thanks

      Reply
  2. ಲಕ್ಷ್ಮಿ

    ತುಂಬಾ ಚೆನ್ನಾಗಿ ಶ್ರದ್ಧೆ, ಭಕ್ತಿ, ನಮ್ಮ ನಂಬಿಕೆ ಬಗ್ಗೆ ತಿಳಿಸುತ್ತಾ ನಮ್ಮ ದೇಶದ ಅಪರೂಪದ ದೇವಸ್ಥಾನ ವಾಸ್ತುಶಿಲ್ಪಗಳನ್ನೂ ಪರಿಚಯಿಸಿರುವ ಪರಿ ಚೆಂದ. ನಿಮ್ಮ ಮುಂದಿನ ಬರಹಕ್ಕೆಕುತೂಹಲದಿಂದ ಕಾಯುತ್ತಿದ್ದೇನೆ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ