Advertisement
ಶ್ರೀಕೃಷ್ಣ ಎನ್. ಬುಗಟ್ಯಾಗೋಳ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

ಶ್ರೀಕೃಷ್ಣ ಎನ್. ಬುಗಟ್ಯಾಗೋಳ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

ಬಹಳಷ್ಟು ಕೈಲಾಸ ಯಾತ್ರೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಓದಿದ್ದೇನೆ. ನಿರ್ಜೀವ ವರ್ಣನೆ ಹಾಗೂ ಭಕ್ತಿಯ ಪರಾಕಾಷ್ಟೆಯನ್ನಷ್ಟೇ ನಾವಿಲ್ಲಿ ಕಾಣುತ್ತಿರುವುದು. ಆದರೆ ‘ನಾ ಕಂಡ ಕೈಲಾಸ’ ಪುಸ್ತಕದಲ್ಲಿ ಭಕ್ತಿಯ ಉತ್ತುಂಗದಲ್ಲಿ ಉಳಿದ್ದನ್ನೆಲ್ಲ ಮರೆಮಾಚುವ ಮೂಢತನವಿಲ್ಲ. ಇದ್ದುದನ್ನು ಇದ್ದಹಾಗೇ ದಾಖಲಿಸುವ, ಕೆಲವೊಮ್ಮೆ ಇದನ್ನು ಸ್ವಲ್ಪ ಮರೆಮಾಚಬಹುದಿತ್ತೇನೋ ಎಂದು ಓದುಗರೇ ಅಂದುಕೊಳ್ಳುವಷ್ಟರ ಮಟ್ಟಿಗೆ ಎಲ್ಲವೂ ಖುಲ್ಲಾಂಖುಲ್ಲ. ಆದರೆ ಎಲ್ಲಿಯೂ ಯಾತ್ರೆಯ ಚಿಕ್ಕ ಚಿಕ್ಕ ವಿವರಣೆಗಳನ್ನೂ ಬಿಡದಂತೆ ನಿಖರವಾಗಿ ದಾಖಲಿಸಿದ್ದಾರೆ.
ಶ್ರೀಕೃಷ್ಣ ಎನ್. ಬುಗಟ್ಯಾಗೋಳ ಬರೆದ ‘ನಾ ಕಂಡ ಕೈಲಾಸ’ ಪ್ರವಾಸ ಕಥನದ ಕುರಿತು ಶ್ರೀದೇವಿ ಕೆರೆಮನೆ ಬರಹ

 

ಕೈಲಾಸ ಮಾನಸ ಯಾತ್ರೆಯ ಕುರಿತು ಈಗಾಗಲೇ ಬಹಳಷ್ಟು ಪುಸ್ತಕಗಳು ಬಂದಿವೆ. ಕೈಲಾಸ ಪರ್ವತದ ಯಾತ್ರೆಗೆ ಹೋಗಿಬಂದ ಬಹಳಷ್ಟು ಜನ ಇದರ ಕುರಿತು ಬರೆದಿದ್ದಾರೆ. ಅದರಲ್ಲೂ ಸಾಹಿತ್ಯದ ಕಡೆ ಒಲವಿರುವ ಬಹಳಷ್ಟು ಜನ ತಮ್ಮ ಮೊದಲ ಬರವಣಿಗೆಯನ್ನು ಪ್ರಾರಂಭಿಸಿದ್ದೇ ಕೈಲಾಸದ ಯಾತ್ರೆಯ ಕುರಿತು ಬರೆಯುವುದರಿಂದ. ಅಂತೆಯೇ ಶ್ರೀಕೃಷ್ಣ ಎನ್ ಬುಗಟ್ಯಾಗೋಳ ಬರೆದಿರುವುದೂ ಕೂಡ ಮೊದಲ ಸಲವೇ. ಆದರೆ ಎಲ್ಲಿಯೂ ವಿಷಯ ತಪ್ಪದಂತೆ ತಮ್ಮ ನೆನಪಿನ ಆಳದಿಂದ ಪ್ರತಿಯೊಂದನ್ನೂ ಹೆಕ್ಕಿ ತೆಗೆದು ಮರು ನಿರೂಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನವು ಇದನ್ನು ಚಂದದ ಬಣ್ಣದ ಚಿತ್ರಗಳೊಂದಿಗೆ ಮುದ್ರಿಸಿ ಓದುಗರಿಗೆ ತಲುಪಿಸಿದೆ.

ಬಹಳಷ್ಟು ಕೈಲಾಸ ಯಾತ್ರೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಓದಿದ್ದೇನೆ. ನಿರ್ಜೀವ ವರ್ಣನೆ ಹಾಗೂ ಭಕ್ತಿಯ ಪರಾಕಾಷ್ಟೆಯನ್ನಷ್ಟೇ ನಾವಿಲ್ಲಿ ಕಾಣುತ್ತಿರುವುದು. ಆದರೆ ‘ನಾ ಕಂಡ ಕೈಲಾಸ’ ಪುಸ್ತಕದಲ್ಲಿ ಭಕ್ತಿಯ ಉತ್ತುಂಗದಲ್ಲಿ ಉಳಿದ್ದನ್ನೆಲ್ಲ ಮರೆಮಾಚುವ ಮೂಢತನವಿಲ್ಲ. ಇದ್ದುದನ್ನು ಇದ್ದಹಾಗೇ ದಾಖಲಿಸುವ, ಕೆಲವೊಮ್ಮೆ ಇದನ್ನು ಸ್ವಲ್ಪ ಮರೆಮಾಚಬಹುದಿತ್ತೇನೋ ಎಂದು ಓದುಗರೇ ಅಂದುಕೊಳ್ಳುವಷ್ಟರ ಮಟ್ಟಿಗೆ ಎಲ್ಲವೂ ಖುಲ್ಲಾಂಖುಲ್ಲ. ಆದರೆ ಎಲ್ಲಿಯೂ ಯಾತ್ರೆಯ ಚಿಕ್ಕ ಚಿಕ್ಕ ವಿವರಣೆಗಳನ್ನೂ ಬಿಡದಂತೆ ನಿಖರವಾಗಿ ದಾಖಲಿಸಿದ್ದಾರೆ.

(ಶ್ರೀಕೃಷ್ಣ ಎನ್. ಬುಗಟ್ಯಾಗೋಳ)

ಯಾತ್ರೆಯ ಸಮಯದಲ್ಲಿ ನರೇಶ ಎಂಬ ಗುಜರಾತಿ ದಂಪತಿಗಳು ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಗಳಾಗಿದ್ದವರಾದರೂ ಅವರಿಗೆ ಒಮ್ಮೆಯೂ ಕನ್ನಡ ಮಾತನಾಡಬೇಕಾದ ಪ್ರಸಂಗ ಬರಲೇ ಇಲ್ಲವಂತೆ ಎಂಬುದನ್ನು ತೀರಾ ಬೇಸರಿಂದ ದುಗುಡದಿಂದ ಹೇಳಿಕೊಳ್ಳುತ್ತಾರೆ ಕೃಷ್ಣ. ನಾವು ಕನ್ನಡಿಗರು ಅದೆಷ್ಟು ಉದಾರಿಗಳು. ಹದಿನೈದು ವರ್ಷಗಳಿಂದಲೂ ಬೆಂಗಳೂರಿನಲ್ಲಿದ್ದೂ ಕನ್ನಡವನ್ನು ಒಂದು ಸಲವೂ ಮಾತನಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದವರು ಎಂದು ತಕ್ಷಣ ಅನ್ನಿಸಿಬಿಡುತ್ತದೆ.

ಕೈಲಾಸ ಪರ್ವತಕ್ಕೆ ಯಾತ್ರೆ ಹೊರಡುವ ಮುನ್ನ ಮಾಡಬೇಕಾದ ವೀಸಾ, ಪಾಸ್ ಪೋರ್ಟ್ ವಿವರಣೆಗಳಿಂದ ಹಿಡಿದು ಟ್ರಾವೆಲ್ ಏಜನ್ಸಿಯವರ ಮೋಸದ ತನಕವೂ ಪ್ರತಿಯೊಂದು ವಿವರವೂ ಇಲ್ಲಿ ದಾಖಲಾಗಿದೆ. ಹೀಗಾಗಿ ಮುಂದೆ ಯಾತ್ರೆಗೆ ಹೋಗುವವರಿಗೆ ಬೇಕಾದ ಅತ್ಯುತ್ತಮ ಗೈಡ್ ನಂತೆ ಈ ಪುಸ್ತಕ ರಚಿತವಾಗಿದೆ.

ಕೈಲಾಸ ಮಾನಸ ಯಾತ್ರೆಯಲ್ಲಿ ನ್ಯಾಲಮ್ ಎನ್ನುವ ಟಿಬೇಟಿನ ಕೊನೆಯ ಸ್ಥಳದ ಬಗ್ಗೆ ನೀಡಿರುವ ವಿವರಣೆ ಗಮನ ಸೆಳೆಯುವಂತಿದೆ. ನ್ಯಲಮ್ ಎಂದರೆ ನರಕ ಎಂದರ್ಥವಂತೆ. ಕೈಲಾಸ ಎಂಬ ಸ್ವರ್ಗ ಸದೃಶ ಸ್ಥಳವನ್ನು ನೋಡಬೇಕೆಂದರೆ ನರಕದ ದರ್ಶನ ಅನಿವಾರ್ಯ. ಒಂದಿಷ್ಟೂ ಅನುಕೂಲವಿಲ್ಲದ ನ್ಯಾಲಮ್ ನಲ್ಲಿ ಮನಬಂದಂತೆ ಹಣ ಸುಲಿಯುವ ಬಗ್ಗೆ ಕೂಡ ಲೇಖಕರು ವಿವರವಾಗಿ ಬರೆಯುತ್ತಾರೆ.

ಕೋಶಿ ಎಂಬ ಬಿಹಾರದ ‘ಕಣ್ಣೀರು’ ಎಂಬ ಅರ್ಥ ಬರುವ ಒಂದೇ ನದಿಯ ಎರಡು ಬದಿಗಳ ವ್ಯತ್ಯಾಸದ ಬಗ್ಗೆ ಲೇಖಕರ ವಿವರಣೆ ಅದ್ಭುತವಾಗಿದೆ. ಕೋಶಿಯ ಒಂದು ಬದಿಯಲ್ಲಿ ಏನೇನೂ ಅನುಕೂಲವಿಲ್ಲದ, ರಸ್ತೆ ಕೂಡ ಸರಿಯಾಗಿಲ್ಲದ ಟಿಬೇಟ್ ಇದೆ. ಇನ್ನೊಂದು ಕಡೆ ಅದ್ಭುತವಾದ ರಸ್ತೆ ವ್ಯವಸ್ಥೆಯನ್ನು ಹೊಂದಿದ ಸುಸಜ್ಜಿತ ಕಟ್ಟಡಗಳನ್ನು ಹೊಂದಿರುವ ಸುಂದರ ಹಳ್ಳಿಯ ಚೀನಾವಿದೆ. ಅತಿಹೆಚ್ಚು ಚಳಿ ಇರುವ ನ್ಯಾಲಮ್ ಸಮುದ್ರಮಟ್ಟದಿಂದ ೧೨೩೦೦ ಅಡಿ ಎತ್ತರವಿದೆ. ಕೈಯ್ಯಲ್ಲಿ ಹಿಡಿದ ವಸ್ತು ಕೆಳಗೆ ಬಿದ್ದರೂ ಗೊತ್ತಾಗದಷ್ಟು ಕೈ ಮರಗಟ್ಟುತ್ತದೆಯೆಂದ ಮೇಲೆ ಮೂಗಿನಿಂದ ಹರಿದ ಸಿಂಬಳ ಅಲ್ಲಲ್ಲಿಯೇ ಹಿಮಮಣಿಯಾಗಿ ಮೂಗಿನಿಂದ ಕೆಳಗೆ ಜೋತಾಡುತ್ತ ಹೆಪ್ಪುಗಟ್ಟಿದ್ದನ್ನೂ ಹೇಳುತ್ತಾರೆ.

ನಾವು ಕನ್ನಡಿಗರು ಅದೆಷ್ಟು ಉದಾರಿಗಳು. ಹದಿನೈದು ವರ್ಷಗಳಿಂದಲೂ ಬೆಂಗಳೂರಿನಲ್ಲಿದ್ದೂ ಕನ್ನಡವನ್ನು ಒಂದು ಸಲವೂ ಮಾತನಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದವರು ಎಂದು ತಕ್ಷಣ ಅನ್ನಿಸಿಬಿಡುತ್ತದೆ.

ತೀರಾ ವಾಸ್ತವಕ್ಕೆ ಹತ್ತಿರವಾಗಿ ಬರೆದಿದ್ದರೂ ಎಲ್ಲಿಯೂ ಭಕ್ತಿಗೆ ಚ್ಯುತಿ ಬರದಂತೆ ಲೇಖಕರು ಎಚ್ಚರಿಕೆ ವಹಿಸಿದ್ದಾರೆ. ನಮಗೆ ಹೇಗೆ ಶಿವನ ವಾಸಸ್ಥಾನವಾದ ಕೈಲಾಸ ಪರ್ವತ ಶ್ರೇಷ್ಠ ಎನ್ನಿಸಿಕೊಳ್ಳುತ್ತದೆಯೋ ಹಾಗೆಯೇ ಟಿಬೇಟಿಯನ್ನರಿಗೂ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಪವಿತ್ರವೇ. ಟಿಬೇಟಿಯನ್ನರು ಅನುಸರಿಸುವ ಬೌದ್ಧ ಧರ್ಮದ ಪ್ರಕಾರ ಮಾನಸ ಸರೋವರ ಬುದ್ಧನ ಜನ್ಮ ವೃತ್ತಾಂತದೊಂದಿಗೆ ಬೆಸೆದುಕೊಂಡಿದೆ. ಬುದ್ಧನ ತಾಯಿಯನ್ನು ಕರೆತಂದು ದೇವತೆಗಳು ಈ ಸರೋವರದಲ್ಲಿ ಸ್ನಾನ ಮಾಡಲು ಬಿಡುತ್ತಾರೆ. ಆ ಮಹಾನ್ ತಾಯಿ ಶುದ್ಧ ಮನಸ್ಸಿನಿಂದ ಸ್ನಾನ ಮಾಡಿ ಶುದ್ಧಳಾಗಿ ಮೇಲೇಳುತ್ತಿದ್ದಂತೆ ಕೈಲಾಸ ಪರ್ವತದ ಕಡೆಯಿಂದ ಐರಾವತದ ಕಡೆಯಿಂದ ಓಡಿಬಂದು ತನ್ನ ಗರ್ಭವನ್ನು ಪ್ರವೇಶಿಸುವುದನ್ನು ಕಾಣುತ್ತಾಳೆ. ಇದರಿಂದಾಗಿ ಮಾನಸ ಸರೋವರದ ಸುತ್ತಲೂ ಒಂಭತ್ತು ಬೌದ್ಧ ಪ್ರಾರ್ಥನಾ ಮಂದಿರಗಳಿವೆ. ಬೌದ್ಧ ಧರ್ಮೀಯರು ಕಾಲ್ನಡಿಗೆಯಿಂದಲೇ ಮಾನಸ ಸರೋವರವನ್ನು ಪ್ರದಕ್ಷಿಣೆಗೈಯ್ಯುತ್ತಾರೆ. ಜೈನರ ಭವಾವಳಿಗಳ ಪ್ರಕಾರ ಇದು ಜೈನರಿಗೂ ಪವಿತ್ರ ಸ್ಥಳ. ಹೀಗಾಗಿ ಹಿಂದುಗಳಷ್ಟೇ ಅಲ್ಲದೇ ಬೌದ್ಧರು, ಜೈನರೂ ಇಲ್ಲಿ ಪವಿತ್ರ ಯಾತ್ರೆಗೆಂದು ಬರುತ್ತಾರೆ ಎಂಬುದನ್ನು ಶ್ರದ್ಧಾ ಭಕ್ತಿಗಳಿಂದ ಹೇಳುತ್ತಾರೆ. ಇದರೊಟ್ಟಿಗೆ ಹೋಮ ನಡೆದ ನಂತರವಷ್ಟೇ ಪಕ್ಕದಲ್ಲಿಯೇ ಹಿಮಚ್ಛಾದಿತವಾಗಿರುವ ಕೈಲಾಸ ಪರ್ವತ ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುದನ್ನೂ ಅಷ್ಟೇ ಭಕ್ತಿಯಿಂದ ಒಪ್ಪಿಕೊಳ್ಳುತ್ತಾರೆ.

ಮಾನಸ ಸರೋವರದ ನಂತರ ರಾಕ್ಷಸ ಸ್ಥಳ ಎಂಬ ಸರೋವರವೊಂದಿದೆ. ಅಲ್ಲಿ ಸ್ನಾನ ಮಾಡಿ ರಾವಣನು ಶಿವನನ್ನು ಕುರಿತು ತಪಸ್ಸನ್ನು ಆಚರಿಸಿದನಂತೆ. ಇದು ವಿಕಾರವಾಗಿದ್ದು ವಿಲಕ್ಷಣವಾಗಿದೆ ಎನ್ನುತ್ತಾರೆ. ಅದರ ನೀರೂ ಸೋಕಬಾರದು ಎಂಬುದು ಸ್ಥಳೀಯರ ಹಾಗೂ ಹಿಂದುಗಳ ನಂಬಿಕೆ. ನಿಶೆ ಮತ್ತು ನೆರಳು ಆವರಿಸಿಕೊಂಡಿರುವ ಈ ಸರೋವರಕ್ಕೆ ಕೈಲಾಸ ಪರ್ವತದಲ್ಲಿ ಹುಟ್ಟುವ ನದಿಗಳೆಲ್ಲ ಬಂದು ಸೇರುತ್ತವೆಯಾದರೂ ಯಾವ ಜೀವಿಯೂ ಈ ಸರೋವರದ ಬಳಿ ಸುಳಿಯದ ವಿಲಕ್ಷಣತೆಯನ್ನು ಲೇಖಕರು ವಿವರಿಸಿದ್ದಾರೆ.

ಎಣ್ಣೆಗಲಸು ಕಾಡಿಗೆಯ ಬಣ್ಣದವ ನೀನು ನಗದ ತುದಿಗೆ
ಕೋರೆ ಹಲ್ಲಗೆರೆಯಂತೆ ಕೊರೆದ ಕೈಲಾಸ ಕೀಳು ಬದಿಗೆ

ಬೆಳಿಗ್ಗೆ ಬೆಳಿಗ್ಗೆ ಕೈಲಾಸ ಪರ್ವತವನ್ನು ಕಂಡು ವರ್ಣಿಸುವ ಲೇಖಕರು ಕಾಳಿದಾಸನ ಮೇಘದೂತ ಮಹಾಕಾವ್ಯದಲ್ಲಿ ಹೇಳುತ್ತಾನೆ. ಲೇಖಕರು ಪುಸ್ತಕದುದ್ದಕ್ಕೂ ಮೇಘದೂತ ಕಾವ್ಯದಲ್ಲಿ ಬರುವ ಮಾನಸ ಸರೋವರ ಹಾಗೂ ಕೈಲಾಸ ಪರ್ವತದ ವರ್ಣನೆಯನ್ನು ಹೇಳುತ್ತ ಹೋಗುತ್ತಾರೆ. ಒಂದೆಡೆ
ಜಂಬೂದ್ವೀಪ; ಸಮಸ್ತಾನಾಮೇತಾಷಾಂ ಮಧ್ಯಸಂಸ್ಥಿತ;//
ತಯ್ಯಾಪಿ ಮೇರುರ್ಮೈತ್ರೇಯ ಮಧ್ಯೇ ಕನಕಪರ್ವತ?/
ಎನ್ನುವ ಶ್ರೀ ವಿಷ್ಣು ಪುರಾಣದ ಶ್ಲೋಕವನ್ನೂ ಉದ್ಘರಿಸುತ್ತಾರೆ.

ಇಲ್ಲಿ ಲೇಖಕರು ಕೈಲಾಸ ಪರ್ವತದ ಕುರಿತಾಗಿ ತಮ್ಮ ಮನಸ್ಸಿನೊಂದಿಗೆ ಮಾತನಾಡುವ ಒಂದು ವಿಶಿಷ್ಟವಾದ ಅಧ್ಯಾಯವಿದೆ. ಅದು ಇಡೀ ಪುಸ್ತಕಕ್ಕೆ ಮೆರಗು ನೀಡಿದಂತೆ ಕಳಶಪ್ರಾಯವಾಗಿದೆ. ತಮ್ಮ ಮನಸ್ಸಿನೊಂದಿಗೇ ಮಾತನಾಡುತ್ತ ತಮ್ಮ ಮನಸ್ಸನ್ನು ಗುರುವಾಗಿ ಇಟ್ಟುಕೊಂಡು ಇಡೀ ಕೈಲಾಸ ಪರ್ವತದ ಕುರಿತಾಗಿ ಭಾರತದ ಪುರಾಣಗಳಲ್ಲಿ ಇರುವ ನಂಬಿಕೆಯನ್ನು ಹೇಳುತ್ತಾರೆ. ಇಡೀ ಪುಸ್ತಕವೇ ಈ ಒಂದು ಅಧ್ಯಾಯದಿಂದಾಗಿ ಕಳೆಗಟ್ಟಿದೆ.


ಕೈಲಾಸದ ಪರಿಕ್ರಮಣ, ಅಲ್ಲಿ ಸಿಗುವ ತಮ್ಜು ಮತ್ತವಳ ಮನಕಲಕುವ ಕಥೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅವರ ದಾಂಪತ್ಯಗೀತ ಇಡೀ ಪುಸ್ತಕವನ್ನು ನೀರಸವಾದ ಪ್ರವಾಸ ಕಥನ ಅಥವಾ ಕೈಲಾಸ ಮಾನಸದ ಬರಡು ವಿವರಣೆಗಳಿಂದ ಹೊರತುಪಡಿಸಿ ಜೀವ ತುಂಬುವಲ್ಲಿ ಯಶಸ್ವಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಪುಸ್ತಕದಲ್ಲಿ ಬರುವ ಬಣ್ಣಬಣ್ಣದ ಚಿತ್ರಗಳು ಪುಸ್ತಕದ ಜೀವಂತಿಕೆಯನ್ನು ಹೆಚ್ಚಿಸಿದೆ. ಸುಮಾರು ಎಂಟು ಹತ್ತು ತಿಂಗಳು ಈ ಪುಸ್ತಕಕ್ಕಾಗಿ ಕಷ್ಟಪಟ್ಟಿದ್ದೇನೆ ಅಕ್ಕ ಎನ್ನುತ್ತ ಇಷ್ಟೆಲ್ಲ ಮುತುವರ್ಜಿ ವಹಿಸಿ ಇಡೀ ಪುಸ್ತಕವನ್ನು ಅಕ್ಷರ ಮಂಟಪದ ಮೂಲಕ ಪ್ರಕಟಿಸಿದ ಚೇತನ ಕಣಬೂರರಿಗೂ ನನ್ನ ಅಭಿನಂದನೆಗಳು ಸಲ್ಲುತ್ತವೆ.

About The Author

ಶ್ರೀದೇವಿ ಕೆರೆಮನೆ

ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.

3 Comments

  1. Dinesh Thambad

    ಕೈಲಾಸ ಪರ್ವತ ಕಣ್ಮುಂದೆ ಕಟ್ಟಿದಂತೆ ಅನುಭವ ಆಯಿತು. ನಿಮ್ಮ ಬರಹದ ಪ್ರತಿಯೊಂದು ಸೂಕ್ಷ್ಮ ವಿಚಾರ ನಮಗೆ ಇಲ್ಲಿ ಕಾಣುತ್ತದೆ. ನಿಮ್ಮ ವಿಮರ್ಶೆ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು. ಪ್ರವಾಸ ಕಥನದ ಪುಸ್ತಕಗಳನ್ನು ಓದುವ ಹವ್ಯಾಸ ನನಗೆ ಮೊದಲಿನಿಂದಲೂ ಅಂಟಿಕೊಂಡಿದೆ ಗೆಳೆಯ ಗಿರೀಶನ ವಾರದ ಸಾಪ್ತಾಹಿಕ ಪುರವಣಿಯಲ್ಲಿ ಅವನ ಪ್ರವಾಸ ಕಥನ ಲೇಖನ ಓದಿರುವ ರೂಢಿ. ಹಾಗೂ ದೇಶ ಸುತ್ತು, ಕೋಶ ಓದು ಎಂಬ ಸಮಾಧಾನ ಬಹಳ ಪ್ರೀತಿ ನೀಡುತ್ತದೆ ಆ ಪ್ರದೇಶದಲ್ಲಿ ನಮ್ಮ ಕಲ್ಪನಾ ಲೋಕವನ್ನು ಒಯ್ಯುತ್ತದೆ…. ಟ್ರೇಲರ್ ಮಾತ್ರ ಬರೆದ ನೀವು ಪುಸ್ತಕ ಓದಿ ಮುಗಿಸಿದ ಮೇಲೆ ನಮಗೆ ಅದರ PDF file ಅಥವಾ ಪುಸ್ತಕ ಖರೀದಿ ರೂನಪದಲ್ಲ ನಾನು ಖರೀದಿ ಮಾಡುವೆ. Thank you again

    Reply
  2. Syed faizulla

    ಕೆರೆಮನೆಜಿ ಉತ್ತಮವಾಗಿ ಬರೆದಿದ್ದೀರಿ ಥ್ಯಾಂಕ್ಸ್

    Reply
  3. Shivananda K

    Very Interesting comments about the bookbook

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ