Advertisement
ಶ್ರೀದೇವಿ ಕೆರೆಮನೆ ಪುಸ್ತಕದ ಕುರಿತು ಸುಜಾತ ಲಕ್ಷ್ಮೀಪುರ ಬರೆದ ಲೇಖನ

ಶ್ರೀದೇವಿ ಕೆರೆಮನೆ ಪುಸ್ತಕದ ಕುರಿತು ಸುಜಾತ ಲಕ್ಷ್ಮೀಪುರ ಬರೆದ ಲೇಖನ

ಅವರವರ ಭಾವಕ್ಕೆ ಎನ್ನುತ್ತಲೇ ನಮ್ಮ ಮೂಗಿನ ನೇರಕ್ಕೆ ಅನ್ಯರನ್ನು ಕಂಡಿರಿಸುವ ಮನೋಭಾವ ಪರಿಚಯದ ಆರಂಭದ ಪುಟ್ಟ ಲೇಖನವೇ ಸಂಜೆ, ಆಪ್ತರೊಡನೆ ಮಾತುಕತೆಯಾಡುತ್ತಾ ಪರಸ್ಪರ ತಿಳಿವಳಿಕೆ ಹಂಚಿಕೊಳ್ಳುತ್ತಾ ವನದಲ್ಲಿ ಸುತ್ತಾಡಿದ ಭಾವ ಮೂಡಿಸುತ್ತದೆ. ಒತ್ತಡದ ಸುಳಿಯಲ್ಲಿ ಮಕ್ಕಳನ್ನು ದೂಡುವ ಶಿಕ್ಷಣ ವ್ಯವಸ್ಥೆಯ ಅನಾವರಣದೊಂದಿಗೆ ಪೋಷಕರನ್ನೂ ತರಾಟೆ ತೆಗೆದುಕೊಳ್ಳಲು ಲೇಖನ, ಕೌನ್ಸಿಲಿಂಗ್ ಮೂಲಕ ಬದುಕು ಬದಲಾಗಿಬಿಡುವ ಭ್ರಮೆ ಬೇಡವೆಂದರೂ ಕೌನ್ಸಿಲಿಂಗ್ ಹೊರಗಿನಿಂದನೋ ಅಥವಾ ನಮ್ಮ ಒಳಗೆಯೋ ನಮ್ಮನ್ನು ಬದಲಾವಣೆ ಕಡೆಗೆ ಕರೆದೊಯ್ಯುವುದಂತೂ ಸತ್ಯ.
ಶ್ರೀದೇವಿ ಕೆರೆಮನೆ ಬರೆದ “ವರ್ತಮಾನದ ಉಯ್ಯಾಲೆ” ಅಂಕಣ ಬರಹಗಳ ಪುಸ್ತಕದ ಕುರಿತು ಡಾ. ಸುಜಾತ ಲಕ್ಷ್ಮೀಪುರ ಬರೆದ ಲೇಖನ

 

ಕನ್ನಡ ಸಾಹಿತ್ಯ ವಲಯದಲ್ಲಿ ಈಗಾಗಲೇ ತಮ್ಮದೇ ಆದ ವಿಶಿಷ್ಟ ಬರವಣಿಗೆಯೊಂದಿಗೆ ಕವಿಯಿತ್ರಿ, ಅಂಕಣ ಬರಹಗಾರ್ತಿ, ಲೇಖಕಿ ಎಂದು ಗುರುತಿಸಿಕೊಂಡಿರುವ ಶ್ರೀದೇವಿ ಕೆರೆಮನೆ ಅವರ “ವರ್ತಮಾನದ ಉಯ್ಯಾಲೆ” ಅಂಕಣ ಬರಹಗಳ ಸಂಗ್ರಹ. ವಿಭಿನ್ನ ವಸ್ತು ವೈವಿಧ್ಯತೆಯಿಂದ ಕೂಡಿದ ಇಪ್ಪತೈದು ಲೇಖನಗಳು ಈ ಸಂಕಲನದಲ್ಲಿವೆ. ಇಲ್ಲಿನ ಲೇಖನಗಳು ಲೇಖಕಿಯ ಜೀವನಾನುಭವದಿಂದ ಹದಗೊಂಡು, ವ್ಯಕ್ತಿ ವಿಶಿಷ್ಟ ಮನೋಭಾವದ ಮೂಲಕ ರೂಪುತಳೆದ ಸಮಾಜಮುಖಿ ಚಿಂತನೆಗಳಾಗಿವೆ. ಅಂಕಣ ಬರಹ ನಿರ್ದಿಷ್ಟ ಸ್ಥಳಾವಕಾಶದಲ್ಲೆ ಅರಳಬೇಕಾದ ಅರಿವಿನ ಪುಷ್ಪವಾಗಿರುವುದರಿಂದ ಬಹುದೊಡ್ಡ ಸಾಂಸ್ಕೃತಿಕ ಚರ್ಚೆಗೆ ಒಳಗಾಗಬಹುದಾದ ಇಲ್ಲಿನ ಹಲವು ವಿಷಯಗಳು ಅಂತಹ ಗಾಂಭೀರ್ಯತೆಯನ್ನು ಬಿಟ್ಟುಕೊಡದೇ ಸರಳ ಸುಲಲಿತ ಸಂವಾದದಂತೆ ಆಪ್ತವಾದ ಶೈಲಿಯಲ್ಲಿ ಓದುಗರನ್ನು ಸೆಳೆಯುತ್ತವೆ.

ಅವರವರ ಭಾವಕ್ಕೆ ಎನ್ನುತ್ತಲೇ ನಮ್ಮ ಮೂಗಿನ ನೇರಕ್ಕೆ ಅನ್ಯರನ್ನು ಕಂಡಿರಿಸುವ ಮನೋಭಾವ ಪರಿಚಯದ ಆರಂಭದ ಪುಟ್ಟ ಲೇಖನವೇ ಸಂಜೆ, ಆಪ್ತರೊಡನೆ ಮಾತುಕತೆಯಾಡುತ್ತಾ ಪರಸ್ಪರ ತಿಳಿವಳಿಕೆ ಹಂಚಿಕೊಳ್ಳುತ್ತಾ ವನದಲ್ಲಿ ಸುತ್ತಾಡಿದ ಭಾವ ಮೂಡಿಸುತ್ತದೆ. ಸಾಂಸ್ಕೃತಿಕ ಶ್ರೀಮಂತ ಭಾರತವು ಅನುಕರಣೀಯವಾದರೆ, ಅತ್ಯಾಚಾರದಲ್ಲೂ ಮುನ್ನೆಲೆಗೆ ಭಾರತದ ಹೆಸರು ಬರುವುದೆಂದರೆ ಏನನ್ನೋಣ?! ಒತ್ತಡದ ಸುಳಿಯಲ್ಲಿ ಮಕ್ಕಳನ್ನು ದೂಡುವ ಶಿಕ್ಷಣ ವ್ಯವಸ್ಥೆಯ ಅನಾವರಣದೊಂದಿಗೆ ಪೋಷಕರನ್ನೂ ತರಾಟೆ ತೆಗೆದುಕೊಳ್ಳಲು ಲೇಖನ, ಕೌನ್ಸಿಲಿಂಗ್ ಮೂಲಕ ಬದುಕು ಬದಲಾಗಿಬಿಡುವ ಭ್ರಮೆ ಬೇಡವೆಂದರೂ ಕೌನ್ಸಿಲಿಂಗ್ ಹೊರಗಿನಿಂದನೋ ಅಥವಾ ನಮ್ಮ ಒಳಗೆಯೋ ನಮ್ಮನ್ನು ಬದಲಾವಣೆ ಕಡೆಗೆ ಕರೆದೊಯ್ಯುವುದಂತೂ ಸತ್ಯ.

(ಶ್ರೀದೇವಿ ಕೆರೆಮನೆ)

ತಲೆಮಾರುಗಳ ನಡುವಿನ ಅಂತರ, ತಲ್ಲಣಕ್ಕೆ ಕಾರಣವಾಗುತ್ತಲೆ ಹಿರಿಯರ ಆತ್ಯಾವಲೋಕನ ಮತ್ತು ಕಿರಿಯರು ಪರಂಪರೆಯೊಂದಿಗೆ ಬೆಸೆದುಕೊಳ್ಳಬಹುದಾದ ಆರೋಗ್ಯಕರ ವಿಚಾರಗಳನ್ನು ಚಿಂತಿಸುವ ಲೇಖನ, ಮಾಧ್ಯಮಗಳು ಶೋಷಿತರ ದನಿ ಆಗಬೇಕು. ಅವುಗಳೇ ಶೋಷಣೆ ಗೈದರೆ ಹೇಗೆ!?.. ಬದುಕು ಬವಣೆಯೇ… ಎಂದು ಕೇಳುತ್ತಲೇ ಸಾವಿಗೆ ಶರಣಾಗುತ್ತಿರುವ ಮಕ್ಕಳ ಮನೋಭಾವ ಮತ್ತು ಸಾಮಾಜಿಕ ಪರಿಸರವನ್ನು ತಿಳಿದು, ಬದುಕಿನೆಡೆಗೆ ಅವರನ್ನು ಸೆಳೆವ ಕೆಲಸಗಳಾಗಬೇಕೆಂಬ ಅರಿವಿನ ಲೇಖನ, ಮಕ್ಕಳ ದಿನಾಚರಣೆ ಕೇವಲ ಆಚರಣೆ ಎಂದಷ್ಟೇ ಆಗದೆ, ಇಂದು ಮಕ್ಕಳನ್ನು ಕಾಡುತ್ತಿರುವ ದುಷ್ಟಶಕ್ತಿಗಳಿಂದ ರಕ್ಷಿಸುವ, ಅವರ ಸಮಸ್ಯೆಗಳತ್ತ ಗಮನ ನೀಡಿ, ಮಕ್ಕಳ ಭವಿಷ್ಯ ಕಾಪಾಡುವ ಹೊಣೆ ನಮ್ಮೆಲ್ಲರದೆನ್ನುವ ಜವಾಬ್ದಾರಿ ಮಾತುಗಳು, ಹಾಗೆಯೆ ಮಹಿಳಾ ದಿನಾಚರಣೆ ಕೂಡ ಹೆಣ್ಣುಮಕ್ಕಳ ಬಗೆಗಿನ ಕಾಳಜಿಗೆ ಸೆಳೆಯುವುದು.. ಇವೆಲ್ಲವೂ ಅತ್ಯಂತ ಎಚ್ಚರಿಕೆಯಿಂದ ಲೇಖಕಿಯ ನಿತ್ಯ ಅನುಭವದ ವಿವರಗಳೊಂದಿಗೆ ವಿಚಾರಾತ್ಮಕವಾಗಿ ಕಟ್ಟಿಕೊಡತ್ತಾ ಲೇಖಕಿ ಓದುಗರನ್ನೂ ವಿಚಾರಕ್ಕೆ ಹಚ್ಚುವ ಮೂಲಕವೇ ಓದಿಸಿಕೊಳ್ಳುತ್ತವೆ.

ಲೇಖಕಿ ಶಿಕ್ಷಕಿಯೂ ಆಗಿರುವುದರಿಂದ ಮಕ್ಕಳ ಸಮಸ್ಯೆ ಕುರಿತು ಮಾತನಾಡುವಾಗ ವಸ್ತುನಿಷ್ಠತೆಯ ಜೊತೆಗೆ ಸಾತ್ವಿಕ ಸಿಟ್ಟನ್ನೂ ತೋರುತ್ತಾರೆ.

ತಿನ್ನಲು ಹಕ್ಕಿದೆ ಬಿಸಾಡಲು ಅಲ್ಲಾ.. ಎನ್ನುತ್ತಲೇ ಆಹಾರದ ಮೌಲ್ಯವನ್ನು ಬಿತ್ತುವ, ಸಹನೆ ಶಕ್ತಿಯೆಂಬುದು ನಿಜ. ಆದರೆ, ಅದು ದೌರ್ಬಲ್ಯ ಕೂಡ ಆಗಬಹುದಾದ ಅಪಾಯದ ಕಡೆ ಸೆಳೆಯುವ ಲೇಖನ ಹಾಗು ಪುಸ್ತಕ ಓದುವ ಸುಖ, ಸ್ನೇಹವೆಂಬ ಆಸ್ತಿ, ಪೆನ್ನಿನ ಸೇತುವೆ ಮೊದಲಾದ ಲೇಖನಗಳು ಲೇಖಕಿಯ ವೈಯಕ್ತಿಕ ಬದುಕಿನ ಪುಟಗಳನ್ನು ತೆರೆದಿಡುತ್ತಲೇ ಆ ವಿಷಯದ ಬಗೆಗೆ ಆಪ್ತವಾಗಿ ಬದುಕಿನ ಸತ್ಯವನ್ನು ಪ್ರಾಮಾಣಿಕವಾಗಿ ಬಿಚ್ಚಿಟ್ಟಿವೆ. ಲೇಖಕಿಯು ಬರಹವನ್ನು ಯಾಂತ್ರಿಕಗೊಳಿಸದೆ ಆಪ್ತರೊಂದಿಗಿನ ಮಾತುಕತೆಯಂತೆ ಬರೆಯಬಲ್ಲರೆಂಬುದೇ ಈ ಅಂಕಣ ಬರಹಗಳ ವಿಶಿಷ್ಟತೆಯೂ ಆಗಿದೆ.

ಹೀಗೆ ಒಂದೊಂದು ಬರಹವು ಓದುಗರೊಂದಿಗೆ ಮಾತಿಗೆಳೆಯುತ್ತಲೇ ಲೇಖಕಿಯ ಜೀವನಾನುಭವದ ಅಭಿವ್ಯಕ್ತಿಯಾಗಿ ಸಾಗುತ್ತಾ ಸಾಮಾಜಿಕ ಔನ್ನತ್ಯವನ್ನು ಪಡೆದಿವೆ.

ಕೊನೆಯ ಲೇಖನ. ಹೌದು, ನಾನೊಂದು ಹೆಣ್ಣು ಎಂಬುದು ಲೇಖಕಿಯೇ ಅನುಭವಿಸಿದ ಹೆಣ್ಣಿನ ಬವಣೆಗಳನ್ನು ಚರ್ಚಿಸುತ್ತಲೆ… ನಾನೀಗ ತಲೆ ಎತ್ತಿ ಹೇಳಬಲ್ಲೆ… ಹೌದು, ನಾನೊಂದು ಹೆಣ್ಣೆಂಬ ಆತ್ಮವಿಶ್ವಾಸ ಮತ್ತು ದಿಟ್ಟತನವನ್ನು ಶಿಕ್ಷಣ ಮತ್ತು ಬರವಣಿಗೆ ನೀಡಿದ ಎಂಬ ಸಂಗತಿಯ ಮಹತ್ವದ ಲೇಖನವಾಗಿ, ಹೆಣ್ಣುಮಕ್ಕಳಲ್ಲಿ ಶಕ್ತಿ ತುಂಬಿ, ಹೌದು ನಾನೊಂದು ಹೆಣ್ಣೆಂದು ಹೆಮ್ಮೆಯಿಂದ ಹೇಳಿಬಿಡುವಂತೆ ಮಾಡಿಬಿಡಬಲ್ಲದಾಗಿದೆ.

ವರ್ತಮಾನದ ತವಕ ತಲ್ಲಣಗಳೊಂದಿಗೆ ಪ್ರಜ್ಞಾಪೂರ್ವಕವಾಗಿ ಜೀಕುತ್ತಾ, ಆರೋಗ್ಯಕರವಾದ ವಿಚಾರಗಳಿಂದ ನಮ್ಮ ನಡುವಿನ ಸಮಸ್ಯೆಗಳೊಂದಿಗೆ ಮುಖಾಮುಖಿಯಾಗುವ ಇಲ್ಲಿನ ಬಿಡಿ ಬಿಡಿ ಲೇಖನಗಳು ಓದುಗರೊಂದಿಗೆ ಆಪ್ತವಾಗಿ ಸಂವಾದಿಸಬಲ್ಲ ಗುಣವುಳ್ಳವಾಗಿವೆ. ಒಂದೇ ಉಸಿರಿಗೆ ಓದಿಸಿಕೊಂಡರೂ, ಚಪ್ಪರಿಸಿದ ಪೆಪ್ಪರ್ಮೆಂಟಿನ ಸ್ವಾದ ನಾಲಿಗೆಯ ಮೇಲೆ ಒಂದಷ್ಟು ಹೊತ್ತು ಉಳಿದು ಮನಸ್ಸಿಗೆ ಮುದ ನೀಡುವಂತೆ, ಓದುಗರ ಬುದ್ಧಿಭಾವಕೋಶವನ್ನು ಸ್ಪರ್ಶಿಸಿ, ಚಿಂತನೆಗೆ ದೂಡುವ ಗಟ್ಟಿತನವನ್ನು ಇವು ಹೊಂದಿವೆ. ಹಾಗೆಂದೇ ಈ ಲೇಖನಗಳು ಅಮೂಲ್ಯವಾದ ಹಾಗೂ ಸಾಮಾಜಿಕ ಜವಾಬ್ದಾರಿಯ ಹೊಣೆಗಾರಿಕೆಯನ್ನೂ ನಿಭಾಯಿಸಿದ ಬರಹಗಳಾಗಿ ಬಹುಕಾಲ ಉಳಿಯಬಲ್ಲವು ಎಂದು ನನ್ನ ಅನ್ನಿಸಿಕೆ.

ಈ ಅಂಕಣ ಬರಹಗಳ ಓದಿನಿಂದ, ವಿಚಾರಗಳ ಸಂತೆಯಲ್ಲಿ ತಿರಗಾಡಿ, ಒಂದಷ್ಟು ಅರಿವಿನ ಕಣಗಳನ್ನು ಆಯ್ದು ಮೆದ್ದು ಮೆಲುಕು ಹಾಕುತ್ತಿರುವ ಅನುಭವವಾಗುತ್ತಿದೆ.

About The Author

ಡಾ. ಸುಜಾತ ಲಕ್ಷ್ಮೀಪುರ

ಡಾ. ಸುಜಾತ ಲಕ್ಷ್ಮೀಪುರ ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

3 Comments

  1. ಸುಜಾತಾ ಲಕ್ಮನೆ

    ಉತ್ತಮ ವಿಮರ್ಶೆ. ಸೊಗಸಾದ ಲೇಖನ..

    Reply
  2. DINESH ThamBAD

    ಪ್ರೇರಣೆ ನೀಡುವಂತಹ ಲೇಖನ

    Reply
  3. ಸುಜಾತ ಲಕ್ಷ್ಮೀಪುರ

    ಪ್ರಕಟಿಸಿದ ಕೆಂಡ ಸಂಪಿಗೆಗೆ ಧನ್ಯವಾದಗಳು..??

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ