Advertisement
ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ

ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ

ಮುಚ್ಚಿದ ಕಣ್ಣಿನೊಳಗೆ
ಜಗದ ಆಗುಹೋಗುಗಳನ್ನೆಲ್ಲ
ಕಾಣುವ ತಪಸಿಗೆ
ಮಾತನಾಡುವುದೂ ನಿಷಿದ್ಧ
ಹೆಜ್ಜೆಯ ಸದ್ದಿಗೊಮ್ಮೆ
ಢಮ ಢಮ ಡಮರುಗವ ಧನಿಸಿ
ಭೂಮಂಡಲವನ್ನೆ ನಡುಗಿಸುವ ಸುಬಗ
ಮರುಕ್ಷಣವೇ ಗಂಡು ದನಿಗೆ
ಇಂಪು ಸೇರಿಸಿ
ಹೆಜ್ಜೆಗೆ ನವಿರು ಆವಾಹಿಸಿ
ಜಗವನ್ನೇ ಮರೆಸುವ ನಿರಾಕಾರಿ

ಅಲ್ಲೆಲ್ಲೋ ಕಡಲೊಳಗೆ ಮಿಂಚು ನುಸುಳಿ
ನೀರೆಲ್ಲ ಧಗಧಗನೆ ಕುದಿದು
ಆವಿಯಾಗುವ ಸುದ್ದಿಯನ್ನು
ಹೊತ್ತು ತಂದ ಗಾಳಿಯೂ
ಕೆಂಡದಂತೆ ಸುಡುತ್ತಿದೆ
ಅವನ ಊರಿಂದ ಹಾದು ಬಂದಿರಬೇಕು
ಹಮ್ಮು, ಬಿಗುಮಾನಗಳೆಲ್ಲ
ಗಾಳಿಗೂ ಅಂಟಿ ಕಾಡೆಲ್ಲ ಕುದಿದು
ಗಿಡ ಮರಗಳೆಲ್ಲ ಬಣಬಣ

ಕಾಡಿನಂಚಿಂದ ತೇಲಿ ಬಂದ
ಧೂಮದ ವಾಸನೆ
ಹೊತ್ತುರಿದ ಒಣ ಎಲೆಗಳು
ಉರಿಯಲಾಗದ ಹಸಿ ಎಲೆಗಳು
ಚಟಪಟಿಸುವ ಹೊತ್ತಿನಲ್ಲಿ
ರುದ್ರತಾಂಡವದ ರಭಸದ ಹೆಜ್ಜೆಯನ್ನಿಡುವ
ಶಂಭುವಿನ ಆರ್ಭಟಕೆ ಮದ್ದಳೆ
ಭೋರ್ಗರೆದು ಚರ್ಮ ಬಿರಿದು
ದಿಗಂತವನ್ನೂ ಮೀರಿ
ಒಂದಾದ ಭೂಮಿ ಆಕಾಶ
ಮೆತ್ತಗೆ ಮೊಳಕೆಯೊಡೆದ ಬೀಜದೊಳಗೆ
ಅವನದ್ದೇ ಅಂಶ

ಚಂಡೆಯ ಮೇಲಿನ ಬೆರಳು ಮೃದುವಾಗಿ
ಪಾದದ ನುಲಿತಕ್ಕೆ ಗೆಜ್ಜೆ ದನಿ ಸೇರಿಸಿದರೂ
ಅವನು ದಿಟ್ಟಿ ಸೇರಿಸುವುದಿಲ್ಲ
ನೋಟ ಮಾತ್ರದಿಂದಲೇ ಸೆಳೆದು
ಆಪೋಷಣಗೈಯ್ಯಬಹುದಾದ ಹೆಣ್ಣಿನ ಮೋಹಕ್ಕೆ
ನಿರಾಕಾರಿ ಗಡಗಡ ನಡುಗುತ್ತಿದ್ದಾನೆ
ಸುಳಿಮಿಂಚು ಮೈಯ್ಯ ಸುತ್ತು ಬಳಸಿ
ಕಣ್ಣಕಿಡಿಯಲಿ ಕುಂಡಲಿನಿಯ ಕೆಣಕಿ
ವ್ಯೋಮದುದ್ದಕ್ಕೂ ಆವರಿಸಿದ
ಕಾಳ್ಗಿಚ್ಚಿನೊಳಗಿನ ಎಳೆಯ ಗಿಡದಂತೆ
ಗತಶಿರವ ಧರಿಸುವ ಚಾಣಾಕ್ಷ.

ಮೈತುಂಬ ಉರಿವ ಬೆಂಕಿಯ ಧರಿಸಿ
ನೆಪಕೊಂದು ಕಮಂಡಲ ಹಿಡಿದು
ನೆತ್ತಿ ತಂಪಾಗಿಸುವ ಕಾರಣವಿಟ್ಟು
ಬಳಿ ಸಾರಿದವಳಿಗೂ ಅರಿವಿದೆ
ಕಾಳ್ಗಿಚ್ಚು ಕಾಡನಾವರಿಸುವ ಪರಿ
ಆದರೆ ಹರಿವ ಗಂಗೆಯ ಸುಡಲಾಗದ ಸತ್ಯ

ಗೆಲ್ಲುವುದು ಯಾರೆಂಬುದೇ
ಸಧ್ಯದ ಅತಿ ದೊಡ್ಡ ಪ್ರಶ್ನೆ
ಕಾಳ್ಗಿಚ್ಚೋ, ಬಿಗುಮಾನವೋ
ಇವೆರಡನ್ನೂ ಮೀರಿದ ಜಿನತ್ವವೋ
ಎಲ್ಲವನ್ನೂ ಮೀರಿದ ಮಹಾ ಮಿಲನದ
ಉತ್ತುಂಗದ ನಿಟ್ಟುಸಿರಿನೊಳಗಿನ ಬೆವರ ಹನಿಯೋ

 

ಕವಯತ್ರಿ ಶ್ರೀದೇವಿ ಕೆರೆಮನೆ ಮೂಲತಃ ಅಂಕೋಲಾದವರು
ಈಗ ಕಾರವಾರದ ಚಿತ್ತಾಕ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ.
ಒಟ್ಟೂ ಹತ್ತು ಪುಸ್ತಕಗಳು ಪ್ರಕಟಗೊಂಡಿವೆ.
ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ