Advertisement
ಸಗ್ಗಕ್ಕೆ ಮದಿರೆಯ ಕಿಚ್ಚು ಹಚ್ಚುತ್ತಿರುವ ಕಿರಂ:ತರೀಕೆರೆ ಬರಹ

ಸಗ್ಗಕ್ಕೆ ಮದಿರೆಯ ಕಿಚ್ಚು ಹಚ್ಚುತ್ತಿರುವ ಕಿರಂ:ತರೀಕೆರೆ ಬರಹ

ಕಿರಂ ಮಾನವೀಯ ಪ್ರೀತಿಗೂ, ಕಾವ್ಯದ ಹುಚ್ಚಿಗೂ ಹೆಸರಾಗಿರುವಂತೆ ಪಾನಪ್ರಿಯತೆಗೂ ಖ್ಯಾತರಾಗಿದ್ದರಷ್ಟೆ. ಅವರಲ್ಲಿ ಸಹಜವಾಗಿದ್ದ ಪ್ರೀತಿ ಮತ್ತು ಕಾವ್ಯಪ್ರೇಮಗಳು, ಈ ನಿಶೆಯಲ್ಲಿ ಉಕ್ಕಿಹರಿಯುತ್ತಿದ್ದವು.

ನಾವೆಲ್ಲ ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ ಆರಂಭವಾದಾಗ, ಹೊಸಪೇಟೆಯ ಯಾವಯಾವುದೊ ಗಲ್ಲಿಗಳಲ್ಲಿ ವಾಸವಾಗಿದ್ದೆವು. ನಾನು ಮತ್ತು ಬಾನು, ಎರಡು ಮೂರು ದಿನ ಒಟ್ಟಿಗೆ ರಜೆ ಬರಲು, ಊರಿಗೆ ಹೋಗಲು ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದೆವು. ಡಿಸೆಂಬರಿನ ಚಳಿ. ರಾತ್ರಿ 11 ಗಂಟೆ ಆಗಿತ್ತು. ಬಸವೇಶ್ವರ ನಗರದ ಒಂದು ಮನೆಯಲ್ಲಿದ್ದ ಕಿರಂ, ಪಾನಗೋಷ್ಠಿ ಮುಗಿಸಿಕೊಂಡು, ಮೈಮೇಲೆ ಒಂದು ಶಾಲನ್ನು ಎಳೆದುಕೊಂಡು, ತೂಗಾಡುತ್ತ ಬಸ್ ಸ್ಟ್ಯಾಂಡಿನ ಮೂಲಕ ಹಾದು, ಬಸವೇಶ್ವರ ನಗರದಲ್ಲಿದ್ದ ತಮ್ಮ ಮನೆಗೆ ಹೊರಟಿದ್ದರು. ನಾನಿದ್ದವನು `ಇದು ಮಾತಾಡುವ ಸಮಯವಲ್ಲ’ ಎಂದುಕೊಂಡು ಅಡಗಲು ಯತ್ನಿಸಿದೆ. ಆದರೆ ಅವರು ನನ್ನನ್ನು ಹೇಗೊ ಪತ್ತೆ ಮಾಡಿ, ಹತ್ತಿರ ಬಂದು, `ಶರಣು ಶರಣಾರ್ಥಿ ಶಿಶುನಾಳ ಸಾಹೇಬರಿಗೆ’ ಎಂದು ನೆಲವನ್ನು ಮುಟ್ಟಿ ನಮಸ್ಕಾರ ಮಾಡಿದರು. ನಾನೂ ಮುಂದೆ ಬಂದು ನಾಟಕೀಯವಾಗಿ ನೆಲವನ್ನು ಮುಟ್ಟಿ ನಮಸ್ಕರಿಸಿದೆ. `ಏನ್ರೀ, ಬಚ್ಚಕೋತಿರೇನ್ರಿ?’ ಎಂದು ಗದರಿಸಿ, `ಎಲ್ಲಿಗೆ ಹೊರಟಿದ್ದೀರಿ?’ ಎಂದರು. `ಬೆಂಗಳೂರಿಗೆ’ ಎಂದೆ. ಬಾನುವನ್ನು ಅವರು ಮಗಳಂತೆ ಪ್ರೀತಿಸುತ್ತಿದ್ದರು. `ನಿಮ್ಮನ್ನು ಬಸ್ಸುಹತ್ತಿಸಿಯೇ ಹೋಗುತ್ತೇನೆ’ ಎಂದು ನಿಂತರು. `ನೀವು ನಡೀರಿ ಸಾರ್, ರಾತ್ರಿ ಸುಮಾರು ಹೊತ್ತಾಗಿದೆ’ ಎಂದರೂ ಕೇಳಲಿಲ್ಲ. ಬಸ್ ನಿಲ್ದಾಣದಲ್ಲಿ ಆ ದಿನ ಯಾಕೋ ಏನೋ ಪ್ರಯಾಣಿಕರ ಜಂಗುಳಿ. ಎರಡು ಮೂರು ಬಸ್ಸುಗಳು ಬಂದರೂ ಸೀಟು ಸಿಗಲಿಲ್ಲ. ನಾನು ಟವೆಲ್ಲನ್ನು ಹಿಡಿದು ಬಾವುಟದಂತೆ ಹಾರಿಸುತ್ತ ಬಸ್ಸು ಬಂದೊಡನೆ ಕಿಟಕಿಗಳ ಬಳಿ ಹೋಗಿ, ಸೀಟುಹಿಡಿಯಲು ಯತ್ನಿಸುತ್ತಿದ್ದೆ. ಕಿರಂ ಇನ್ನೊಂದು ಕಡೆಯಿಂದ ಸೀಟುಹಿಡಿಯಲು ಯತ್ನಿಸುತ್ತಿದ್ದರು. ಕಡೆಗೆ ಗಂಗಾವತಿಯಿಂದ ಸೂಪರ್ ಡಿಲಕ್ಸೊಂದು ಬಂದಿತು. ಅದು ತುಂಬಿ ತುಳುಕುತ್ತಿತ್ತು. ಕಿರಂ ಈ ಸಲ ಮುಂಭಾಗದ ಚಕ್ರದ ಮೇಲೆ ಕಾಲಿಟ್ಟು ಡ್ರೈವರ್ ಬಾಗಿಲಿನಿಂದ ಒಳಗೆ ನುಸುಳಿದವರೇ, ತಮ್ಮ ಶಾಲನ್ನು ಡ್ರೈವರ ಹಿಂದುಗಡೆ ಇರುವ ಎರಡು ಸೀಟುಗಳ ಮೇಲೆ ಹಾಸಿ, ಕಿಟಕಿಯೊಳಗಿಂದ ತಲೆಹಾಕಿ ನಮ್ಮನ್ನು ಕೈಬೀಸಿ ಕರೆದರು. ನಮ್ಮ ಬ್ಯಾಗುಗಳನ್ನು ಕಿಟಕಿ ಮೂಲಕ ಇಸಿದುಕೊಂಡು ಸೀಟಿನ ಮೇಲಿಟ್ಟರು. ನಾವು ಹೋಗಿ ಕುಳಿತೆವು. ಆದರೆ ಅವು ರಿಸರ್ವಾಗಿದ್ದ ಸೀಟುಗಳು. ಸೀಟುಗಳ ಮಾಲಕರು ಮೂತ್ರಕ್ಕೆಂದು ಕೆಳಗೆ ಇಳಿದು ಹೋಗಿದ್ದರು. ಕಂಡಕ್ಟರ್ ನಮ್ಮನ್ನು ನೋಡಿ ಎಬ್ಬಿಸಿದನು. ಮೇಷ್ಟರಿಗೆ ಭಯಂಕರ ಸಿಟ್ಟು ಬಂದಿತು. `ಏ ರಹಮತ್ ಕೂತ್ಕೊಳ್ರಿ. ಏಳಬ್ಯಾಡ್ರಿ’ ಎಂದು ಅಪ್ಪಣೆ ಮಾಡಿ, ಕಂಡಕ್ಟರ್ ಜತೆ ಜಗಳಕ್ಕೆ ನಿಂತರು. ಅವು ರಿಸರ್ವಾಗಿರುವ ಸೀಟುಗಳೆಂದರೂ ಕೇಳಲಿಲ್ಲ. `ಹೆಂಗಯ್ಯ ಎಬ್ಬಿಸಿದೆ? ಇವರು ಕನ್ನಡದ ವಿಮರ್ಶಕ. ಯಾವ್ಯಾವುದೊ ದೂರದ ಊರಿಂದ ಬಂದು ವಿಶ್ವವಿದ್ಯಾಲಯದಲ್ಲಿ ಕನ್ನಡದ ಕೆಲ್ಸ ಮಾಡ್ತಿದೀವಿ. ನಿಮಗೆ ಎರಡು ಸೀಟು ಕೊಡೋಕೆ ಆಗಲ್ವೇ? ಎಮ್ಮೆಲ್ಲೆ ಸೀಟುಗಳು ಎಲ್ಲಿದಾವೆ?’ ಎಂದು ವಾದ ಆರಂಭಿಸಿದರು. ಆ ಕಂಡಕ್ಟರಿಗೆ ವಿಮರ್ಶಕ ಎಂದರೆ ಅರ್ಥವಾಗಲಿಲ್ಲ. ಅವನು ನನ್ನತ್ತ ನೋಡುತ್ತ `ನಿಮಗೆ ಗೊತ್ತಾಗಲ್ವೇನ್ರಿ ಸೀಟಿಲ್ಲ ಅಂದರೆ. ರಿಸವೇರ್ಶನ್ ಸೀಟಿವು. ತಲೆ ತಿನ್ನಬ್ಯಾಡ್ರಿ. ಇಳೀರಿ’ ಎಂದು ಹೇಳಿದ. ನಾವು ಕೆಳಕ್ಕಿಳಿದೆವು. ಮೇಷ್ಟರಿಗೆ ರೋಷಾವೇಶ ಬಂದಿತು. `ಅವರನ್ನ ಯಾಕೆ  ಕೆಳಗಿಳಿಸಿದೆ? ಬಸ್ಸನ್ನು ಹೆಂಗೆ ಮುಂದಕ್ಕೆ ಬಿಡ್ತೀಯಾ ನೋಡೀನಿ’ ಎಂದು ಬಸ್ಸಿನ ಮುಂದೆ ಧರಣಿ ಆರಂಭಿಸಿದರು. ಜನರೆಲ್ಲ ಬಸ್ಸಿನ ಮುಂದೆ ಹಾವಾಡಿಗರ ಆಟಕ್ಕೆ ನೆರೆದಂತೆ ಸುತ್ತುವರೆದು ಮಂಡಲ ಮಾಡಿದರು. ನಾನು ಮೇಷ್ಟ್ರಿಗೆ ಸಮಾಧಾನ ಮಾಡುತ್ತ `ಸಾರ್ ನಾನು ಬೇರೆ ಬಸ್ಸಿಗೆ ಹೋಗ್ತೀನಿ’ ಎಂದರೂ ಕೇಳಲಿಲ್ಲ. ಇದೇ ಬಸ್ಸಿಗೆ ಹೋಗಬೇಕು ಎಂದು ಹಠ ಮಾಡುತ್ತಿದ್ದಾರೆ. ಬಸ್ಸು ಹೊರಡಲು ಟೈಮಾಗುತ್ತಿತ್ತು. ಅಷ್ಟರಲ್ಲಿ ಡ್ರೈವರ್ ಕಂಡಕ್ಟರ್ ಕಿವಿಯಲ್ಲಿ ಏನೋ ಹೇಳಿದನು. ಆಗ ಕಂಡಕ್ಟರ್ `ಸದ್ಯ ಹತ್ಕೊಳ್ರಿ. ಮುಂದೆ ಎರಡು ಸೀಟು ಖಾಲಿಯಾಗುತ್ತೆ’ ಎಂದು ನಮ್ಮನ್ನು ಹತ್ತಿಸಿಕೊಂಡನು. ಬಸ್ಸು ಹೊರಟಿತು. ಮೇಷ್ಟರು ನಮಗೆ ಸ್ವರ್ಗದಲ್ಲಿ ಸೀಟು ದೊರಕಿಸಿ ಕೊಟ್ಟ ಸಂತೋಷದಲ್ಲಿ ಕೈಬೀಸಿದರು. ಪ್ರಯಾಣಿಕರು ಹಗರಣಕ್ಕೆ ಕಾರಣವಾದ ನಮ್ಮನ್ನು ದುರುದುರು ನೋಡತೊಡಗಿದರು. ನಾವು ಅವರಿಗೆ ಸುಮ್ಮನೆ ಬೆನ್ನುಕೊಟ್ಟು ನಿಂತುಬಿಟ್ಟೆವು. ಆದರೆ ಬೆಂಗಳೂರಿನ ತನಕ ಯಾವ ಸೀಟುಗಳೂ ಖಾಲಿಯಾಗಲಿಲ್ಲ.

ಚಿತ್ರ: ನೇತ್ರರಾಜು

ಇನ್ನೊಂದು ಪಾನಗೋಷ್ಠಿ. ಅದು ಬಹುಶಃ ನಮಗೆ ಮೂರು ತಿಂಗಳ ಬಳಿಕ ವಿಶ್ವವಿದ್ಯಾಲಯದಿಂದ ಮೊದಲನೇ ಸಂಬಳ ಬಂದ ದಿನ. ಭರ್ಜರಿ ಪಾನಗೋಷ್ಠಿ ಮಾಡಿದೆವು. ಮೇಷ್ಟರ ಮಾತು ಮಾತು ಮಾತು! ತಮಾಶೆ. ನಗುವಿನಲ್ಲಿ ಮೂರು ನಾಲ್ಕು ಗಂಟೆ ಕಳೆದವು. ಒಳಗೆ ಹೋದ ಅವ್ವ ಕೆಲಸ ಮಾಡತೊಡಗಿ ಕಣ್ಣು ಎಳೆಯಲಾರಂಭಿಸಿದವು. ಆದರೆ ಮೇಷ್ಟರ ಮಾತು ನಿಲ್ಲುತ್ತಿಲ್ಲ. ಮತ್ತೆ ಪೆಗ್ಗುಗಳಿಗೆ ಆರ್ಡರ್ ಮಾಡುತ್ತಿದ್ದಾರೆ. 12 ಗಂಟೆಯಾಗುತ್ತ ಬಂದಿತು. ಬಾರು ಮುಚ್ಚುವ ಹೊತ್ತು. ಮೇಷ್ಟರು ಆ ಹೊತ್ತಿನಲ್ಲಿ ಬ್ಯಾಗಿಗೆ ಕೈಹಾಕಿ `ಕುಮಾರವ್ಯಾಸ ಭಾರತ’ ತೆಗೆದು ಯಾವುದೊ ಒಂದು ಪದ್ಯ ಓದಬೇಕೆಂದು ಹುಡುಕಿದರು. ಪದ್ಯ ಸಿಕ್ಕಿತು. ಬಾರಿನ ಮಂದಬೆಳಕಿನಲ್ಲಿ ಅಕ್ಷರಗಳು ಕಾಣುತ್ತಿಲ್ಲ. ಆದರೂ ಓದುವುದನ್ನು ಬಿಡುತ್ತಿಲ್ಲ. `ಏ ಲೈಟ್ ಹಾಕಯ್ಯ. ಕಾವ್ಯ ಓದುವಾಗ ಬೆಳಕು ಹಾಕಬೇಕು ಅಂತ ಗೊತ್ತಿಲ್ಲವೇನಯ್ಯಾ!’ ಎಂದು ವೈಟರನಿಗೆ ಜೋರು ಮಾಡಿದರು. ಅವನು ಹೋಗಿ ಮ್ಯಾನೇಜರನ್ನು ಕರೆದುಕೊಂಡು ಬಂದ. ಮ್ಯಾನೇಜರು ಇಲ್ಲಿ ಲೈಟು ಹಾಕಲು ಸಾಧ್ಯವಿಲ್ಲ. ಇಲ್ಲಿ ಲಾಂಜಿಗೆ ಬನ್ನಿ ಬೆಳಕಿದೆ ಎಂದರೂ ಮೇಷ್ಟರು ಕೇಳಲಿಲ್ಲ. ಇಲ್ಲಿಗೇ ದೀಪದ ವ್ಯವಸ್ಥೆ ಮಾಡಬೇಕೆಂದು ಹಠ ಮಾಡಿದರು. ನಾವು ಕೂಡ `ಎಷ್ಟು ದೊಡ್ಡ ವಿದ್ವಾಂಸರು ಅವರು. ಒಂದು ಬಲ್ಬ್ ಹಾಕೋಕೇ ಆಗೋಲ್ವೇನ್ರಿ?’ ಎಂದು ದನಿಗೂಡಿಸಿದೆವು. ಅವನು ಬೇರೆ ಹೋಲ್ಡರಿಗಿದ್ದ ಮಂದದೀಪ ತೆಗೆದು ಬೆಳಕಿನ ದೀಪ ಹಾಕಿದನು. `ಆಹಾ ಪ್ರಾತಃಕಾಲದಲಿ ಬೆಳಗಿನ ದಾಹ!’ ಎಂದು ಹೇಳಿ ಐದಾರು ಪದ್ಯ ಓದಿ ಮುಗಿಸಿ ವಿವರಿಸಿದರು. ನಮ್ಮನ್ನು ವೈಟರುಗಳು ಏನೊ ಮಾಡಿ ಹೊರಗೆ ಹಾಕುವಾಗ ರಾತ್ರಿ ಒಂದು ಗಂಟೆ.

ಇಂತಹ ಹಲವಾರು ಘಟನೆಗಳನ್ನು ನೆನೆಸಿಕೊಂಡು ಹೇಳಬಹುದು. ಮೇಷ್ಟರು ರಾತ್ರಿಯ ಪಾನಗೋಷ್ಠಿಗಳಲ್ಲಿ ಅತಿ ಮಾಡುತ್ತಿದ್ದರು. ಆ ಅತಿಯಲ್ಲಿ ಅವರ ಅನೇಕ ಒಳನೋಟಗಳು ಬಾಣಬಿರುಸುಗಳಲ್ಲಿ ಹಾರುವ ಬೆಳಕಿನ ಕಿಡಿಗಳಂತೆ ಚಿಮ್ಮುತ್ತಿದ್ದವು. ಎಷ್ಟೋ ಸಲ ಅವರ ರಂಪಾಟದಿಂದ ಪಾರ್ಟಿಗಳು ಕೆಟ್ಟುಹೋಗುತ್ತಿದ್ದುದೂ ಉಂಟು. ಅವರ ಪಾನಗೋಷ್ಠಿಗಳಲ್ಲಿ ಸಾಮಾನ್ಯವಾಗಿ ಮೂರು ಸಂಗತಿಗಳಿರುತ್ತಿದ್ದವು. 1. ತಮಗೆ ಬೇಕಾದವರ ಮೇಲೆ ಪ್ರೀತಿಯ ಮಳೆಯನ್ನು ಸುರಿಸುವುದು ಅರ್ಥಾತ್ ಕರಡಿಪ್ರೀತಿ. 2. ತಮಗೆ ಇಷ್ಟವಾದ ಕವಿಯ ಕಾವ್ಯವನ್ನು ಕುರಿತು ಚರ್ಚಿಸುವುದು ಅರ್ಥಾತ್ ಕಾವ್ಯೋತ್ಸವ. 3. ತಮಗೆ ಬೇಡವಾದವರನ್ನು ಆವಾಹಿಸಿ ಅವರನ್ನು ಬಗೆಬಗೆಯಲ್ಲಿ ಗೇಲಿ ಮಾಡಿ ಚುಚ್ಚಿ ನಗಿಸುವುದು ಅರ್ಥಾತ್ ಶತ್ರುಸಂಹಾರ. ಮೇಷ್ಟರ ಕೆಲವು ಶಿಷ್ಯರು, ಅವರನ್ನು ಪ್ರೀತಿಸುತ್ತ, ವಿದ್ವತ್ತಿನಲ್ಲಿ ಅಲ್ಲದಿದ್ದರೂ ಕುಡಿತದಲ್ಲಿ ಅನುಕರಿಸಿದ್ದುಂಟು. ಇದು ನನ್ನೊಬ್ಬ ಸ್ನೇಹಿತರಲ್ಲಿ ಎಲ್ಲಿತನಕ ಹೋಯಿತೆಂದರೆ, ಅವರು ಮಾತಾಡುವಾಗ ಮೇಷ್ಟರಂತೆಯೇ ಬೆರಳು ಹೊಸೆಯುವುದನ್ನೂ ಕಲಿತರು. ತಮ್ಮ ಕುಡಿತವನ್ನು ಸಮರ್ಥಿಸಿಕೊಳ್ಳುವುದಕ್ಕೆ `ನೋಡಿ. ಮೇಷ್ಟರು ಅಷ್ಟೊಂದು ಕುಡೀತಾರೆ. ಇನ್ನೂ ಹೆಂಗಿದ್ದಾರೆ?’ ಎಂದು ಹೇಳುವುದನ್ನೂ ರೂಢಿಸಿಕೊಂಡರು.

ಇಂತಹವರ ತರ್ಕಕ್ಕೆ ಪುರಾವೆ ಒದಗಿಸುವಂತೆ, ಮೇಷ್ಟರು ಚಂದವಾಗಿ ಓಡಾಡಿಕೊಂಡಿದ್ದರು. ಈಚೆಗೆ ಅವರ ಕೆನ್ನೆಗಳು ಹೊಳೆಯುತಿದ್ದವು. ಯೌವನ ಬರುತ್ತಿದೆಯೇನೊ ಅನಿಸುತ್ತಿತ್ತು. ಅವರು ಪಂಪನಂತೆ ಕುರುಳ್ಗರ ಸವಣ. ತಮ್ಮ ಕೊಂಕಾಗಿ ಇಳಿಬಿದ್ದ ತಲೆಕೂದಲು ಅತ್ತಿತ್ತ ಹೊಯ್ದಾಡುವಂತೆ ಕೊರಳನ್ನು ಸಟ್ಟನೆ ತಿರುಗಿಸುತ್ತ ಮಾತಾಡುವಾಗ, ಮೋಡಿಕಾರನಂತೆ ಕಾಣುತ್ತಿದ್ದರು. ಮೂರು ತಿಂಗಳ ಹಿಂದೆ ಅನಿಸುತ್ತದೆ. ಮೇಷ್ಟರಿಗೆ ಬೆಂಗಳೂರಿನಲ್ಲಿ `ಗ್ರಾಮಭಾರತ’ ಎಂಬ ಸಂಘಟನೆಯವರು ಅಭಿನಂದನ ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿದ್ದವರು ಹೆಚ್ಚಿನವರು ಸಾಹಿತ್ಯದವರಲ್ಲ. ಕಾಮರ್ಸ್ ವಿಜ್ಞಾನ ಇತ್ಯಾದಿ ವಿಷಯಗಳಲ್ಲಿ ಅಧ್ಯಾಪಕರು. ತೀರ್ಥಹಳ್ಳಿ ಕಡೆಯವರು. ಅವರಿಗೆ ಕಿರಂ ಮೇಲೆ ಅಭಿಮಾನ. ಅಭಿನಂದನ ಭಾಷಣ ಮಾಡಲು ನಾನು ಹಂಪಿಯಿಂದ ಹೋಗಿದ್ದೆ. ಸಭೆಯ ಅಧ್ಯಕ್ಷತೆಯನ್ನು ಅನಂತಮೂರ್ತಿಯವರು ವಹಿಸಿದ್ದರು. ನಮ್ಮ ಕಾಲದ ಇಬ್ಬರು ಶ್ರೇಷ್ಠ ಅಧ್ಯಾಪಕರು ಒಟ್ಟಿಗೆ ನೋಡುತ್ತ ನನಗೆ ಸಂತೋಷವಾಗಿತ್ತು. ಕಿರಂ ಅವರನ್ನು ನಾನು ನೋಡಿದ್ದು ಅದೇ ಕೊನೆ. ಅನಂತಮೂರ್ತಿಯವರು ತಮ್ಮ ಭಾಷಣದಲ್ಲಿ, ‘ಕಿರಂ ಕಾವ್ಯದ ಹುಚ್ಚಿನಿಂದ ನಮನ್ನೆಲ್ಲ ಬೆಳೆಸಲಿ, ಆದರೆ ಸ್ವಲ್ಪ ಕುಡಿತ ಕಡಿಮೆ ಮಾಡಲಿ’ ಎಂದು ಹೇಳಿದರು. ಆ ಸಭೆಯಲ್ಲಿ ಅವರ ಕುಡಿತದ ಬಗ್ಗೆ ಪ್ರಸ್ತಾಪ ಬೇಡವಾಗಿತ್ತೇನೊ, ಕಿರಂ ಅವರಿಗೆ ಇದು ಬೇಸರ ತಂದಿರಬಹುದೇನೊ ಎಂದು ನನಗೆ ಶಂಕೆ. ಆದರೆ ಕಡೆಗೆ ಮಾತಾಡಿದ ಕಿರಂ, ಅನಂತಮೂರ್ತಿಯವರ ಸಲಹೆ ಕೊಟ್ಟ ಜವಾಬೊ ಎನ್ನುವಂತೆ, ಪಂಪನ ಕಾವ್ಯ ತೆಗೆದು ಅದರಿಂದ ಸ್ವರ್ಗದ ವರ್ಣನೆಯಿರುವ ಭಾಗವನ್ನು ಓದಿದರು. ಅದರಲ್ಲಿ ಇದ್ದುದು ಸ್ವರ್ಗದಲ್ಲಿ ಎಷ್ಟು ಬಗೆಯ ಮದ್ಯಗಳಿವೆ ಎಂಬುದರ ವರ್ಣನೆ!

ಕಿರಂಗೆ ಸನ್ಮಾನ.... (ಚಿತ್ರ: ರಾಜಶೇಖರ ಕಿಗ್ಗ)ಕಾರ್ಯಕ್ರಮ ಮುಗಿದ ಬಳಿಕ ತೀರ್ಥಗೋಷ್ಠಿಯಿತ್ತು. ನನಗೆ ಬಸ್ಸು ಹಿಡಿಯುವುದಿತ್ತು. ಮೇಷ್ಟರ ಕಾರು ಹೋಟೆಲಿಗೆ ಬರುವುದರೊಳಗೆ ಒಂದು ಪೆಗ್ಗು ವಿಸ್ಕಿ ಕುಡಿದು, ಗಬಗಬ ತಿಂದವನೇ ಬಸ್ಸ್ಸುನಿಲ್ದಾಣಕ್ಕೆ ಓಡಿಬಂದೆ. ರಾಜಹಂಸ ಹೊರಟುಹೋಗಿತ್ತು. ಏನೋ ಮಾಡಿ, ಬ್ಯಾಗನ್ನು ಕಿಟಕಿಯಿಂದ ತೂರಿಸಿ ಡ್ರೈವರ್ ಹಿಂಬದಿಯ ಸೀಟನ್ನು ವೇಗದೂತದಲ್ಲಿ ಹಿಡಿದೆ. ಮೇಷ್ಟರ ಜತೆ ಪಾನಸೇವನೆಯ ಕೊನೆಯ ಅವಕಾಶವನ್ನು ಕಳೆದುಕೊಂಡೆನಲ್ಲ ಎಂದು ಹಳಹಳಿಸುತ್ತ ಊರು ಮುಟ್ಟಿದೆ.

ಮೇಷ್ಟರು ಸ್ವರ್ಗಕ್ಕೇನಾದರೂ ಹೋಗಿದ್ದರೆ, ಬಹುಶಃ ಪಂಪನ ಕಾವ್ಯದಲ್ಲಿ ಬಣ್ಣನೆಗೊಂಡಿರುವ ಸ್ವರ್ಗಕ್ಕೇ ಹೋಗಿರಬಹುದು. ಅಲ್ಲಿ ಪಂಪನ ಜತೆ ಕುಡಿದು ಮಾತಾಡುತ್ತಲೂ, `ಆದಿಪುರಾಣ’ ಓದಬೇಕು ಬೆಳಕು ಹಾಕ್ರಿ ಎಂದು ಜೋರು ಮಾಡುತ್ತಲೂ ಇರಬಹುದು. ನಾವೂ ಬಂದು ಸೇರುವ ತನಕ ಅವರು ಅಲ್ಲಿ ಕಾವ್ಯ ಓದಿಕೊಂಡಿರಲಿ. ಆದರೆ ಸ್ವಲ್ಪ ಕುಡಿತ ಕಡಿಮೆ ಮಾಡಲಿ.

About The Author

ರಹಮತ್ ತರೀಕೆರೆ

ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ