Advertisement
ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು

ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು

ಎತ್ತರವಾಗುವುದೆಂದರೆ

ಎತ್ತರ ಮುಗಿಲ ಕಣ್ಣು
ಹಾರಿದವನಿಗೂ ಎತ್ತರ
ಬಾನೆತ್ತರ ಬಾನೇರುವ ಬಾನಾಡಿಗೂ ಎತ್ತರ
ಸೊಲ್ಲಿನ ಪದ ಗಲ್ಲುಗಲ್ಲೆಂದ ಮನಸಿನ ಹದ
ಮಾತಿಗಿಂತಲು ಎತ್ತರ

ನಾನು ಹಳ್ಳ ನೀನು ದಡ ಅವನೆ ಎಲ್ಲಾ ಎನ್ನು
ಪ್ರಶಾಂತವಾದ ಕಣ್ಣಿಗೆ ಮುದ
ನನ್ನದೇನು ಇಲ್ಲ ನಾನು ಕಣ ಎನ್ನು
ನೀನು ಧ್ಯಾನಕಿಂತ ಎತ್ತರ

ಕೊಡುವ ಕೈ ಹಸಿದವನ ಕಾಣುವ ಕಣ್ಣು
ಸಂತೈಸುವ ನಾಲಗೆ
ಬಿದ್ದವನ ಎತ್ತುವ ಕೈಗಳು
ಕಷ್ಟಕೆ ಹೆಗಲುಕೊಡುವ ಮನಸ್ಸುಗಳು
ಪೂಜಿಸುವ ದೇವರಿಗಿಂತಲು ಎತ್ತರ

ತನ್ನ ಸುತ್ತಲ ಸಮೂಹದ ನಗುವೆ ಸಂಪತ್ತು
ಎನ್ನುವವನ ಹೃದಯ
ಕೋಟಿ ಪುಣ್ಯಕಿಂತಲು ಎತ್ತರ

ಬಡವನ ಗುಡಿಸಲಲ್ಲಿ ಮಿನುಗುವ ದೀಪ
ಕಣ್ಣಿಗೆ ಬೆಳಕು ಮತಿಗೆ ತಿಳಿವು
ಕಂಡವನು ದಾರ್ಶನಿಕ
ಬಾಳಿದವನು ಅವನಿಗಿಂತಲೂ ಎತ್ತರ

ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ

ಹೆಣ್ಣು ಗಂಡು ಜೀವ ಜೀವದ ನೆರಳು ಬೆಳಕು
ಖಗ, ಮೃಗ, ಗಿಡ, ಮರ, ಜಂತು – ಸಂತುಗಳಲ್ಲಿ
ಆತ್ಮದ ನಡೆಗೆ ಡಿಂಭದ ವೇಷ
ನುಡಿಸಿದವನು ಮಾಂತ್ರಿಕ, ನಡೆಸುವವನ ಕಂಡವರಿಲ್ಲ
ಬದುಕಿನ ನಾಟಕದ ಈ ಎಲ್ಲಾ ಅವತಾರಗಳಿಗೆ
ಎಡೆಗೊಡದೆ ಕಾಯಕದಲಿ ನಿಂತವನು
ಅನಂತ ಶಕ್ತನಿಗೂ ಮಾದರಿಯಲಿ ಎತ್ತರ

ಪರಾತ್ಪರತೆಯಲಿ ಪವಡಿಸುವವನು
ಕವಿಯ ನಡೆಗೂ ನುಡಿಗೂ ಹತ್ತಿರ
ಅನುಭವಿಸಿ ನುಡಿಯುವವನು ಅನುಭಾವಿಗೂ ಎತ್ತರ

ಮರೆತರೆ ಕೆಸರು ಅರಿತರೆ ಮತ್ತೆ ಅಲ್ಲೇ ಕಮಲ
ಪಾಡಿಗೆ ತಕ್ಕ ಹಾಡು.,
ಹರಿಯುವ ನದಿಯಲಿ ನಗುವ ಮೀನಿನಂತೆ.
ಎತ್ತರವೆಂದರೆ ಸ್ವಚ್ಚನೀರಲಿ ಕಂಡ ಮುಖ

ಪಂಚವರ್ಣದ ಹಂಸ

ಖಾಲಿ ದೋಣಿಯೊಂದು
ನಿನ್ನ ಕಾದು ಕೂತು
ನನಗೆ ಕಣ್ಣ ಸನ್ನೆ ಮಾಡಿದೆ.

ಜೋಡಿ ಹುಡುಕಿ ಹುಡುಕಿ
ನಮ್ಮ ಹೊತ್ತು ತಿರುಗಿ
ಸಂಸಾರ ಸಾರಮಾಡಿ ಸಾಗರವ ದಾಟಬೇಕಿದೆ
ಎಂದು ನನ್ನ ಕಿವಿಗೆ ಹೇಳಿದೆ.

ಪಂಚವರ್ಣದ ಹಂಸ ಜೊಡಿ ಮಾಡಿಕೊಂಡು
ಸಲಿಲದಲ್ಲಿ ಸಲುಗೆ ಮಾಡಿದೆ
ನಮ್ಮ ಕಥೆಗೆ ತನ್ನ ಒಲವ ಬೆಸುಗೆ ಮಾಡಿ
ತೇಲೊ ಆಸೆ ಮನದಿ ಮೂಡಿದೆ

ಕತ್ತಲಲ್ಲಿ ನಿನ್ನ ಚಂದ್ರನಂತೆ ಕಂಡು
ನನ್ನ ಕೂಗಿ ಕೂಗಿ ಕರೆದಿದೆ
ಸೌಂದರ್ಯ ರಾಶಿ ಹಾಲು ಉಕ್ಕಿದಂತೆ
ನನ್ನ ಬೊಗಸೆ ಹಿಡಿಯಲೇಳಿದೆ

ತಾನು ತನನ ಹಾಡಿ
ಮುತ್ತು ಮಳೆಯ ಕರೆಸಿ
ನಿನಗೆ ಸೀರೆಮಾಡಿ ಉಡಿಸಲೇಳಿದೆ

ನಾಚಿಕೆಯ ಕವಿತೆ ಬರೆದು ನೀರಿನಲ್ಲಿ ತೇಲಿಬಿಟ್ಟು
ಇಬ್ಬರನ್ನೆ ಹಗಲುಮಾಡಿ ಸಾಗರವನೆ ರಾತ್ರಿ ಮಾಡಿ
ತಾನು ನಿರಾಳವಾಗಿ ಸಾಗಿದೆ

ದೂರ ದೂರಿನಲ್ಲಿ ನಮಗೆ ಗೂಡು ತೋರಿ.
ತಾನು ನೀರಿನಲ್ಲಿ ನಿಂತು ದಡವ ಸೇರಿದವರ ನೋಡಿ
ಚಿಟ್ಟೆ ಹಾರಿದಂಗೆ ಹಾರಿ ಹೃದಯಕೊಂದು
ಹೊಸ ಭಾಷೆ ಕಲಿಸಿದೆ.

ಕವಿ ಸತ್ಯಮಂಗಲ ಮಹದೇವ ಅವರು ತುಮಕೂರು ಜಿಲ್ಲೆಯ ಸತ್ಯಮಂಗಲದವರು
ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ತಿಯಾಗಿರುವ ಇವರು ಬಿ.ಎನ್.ಇ.ಎಸ್ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಭಾವತೀರದ ಹಾದಿಯಲ್ಲಿ’, ‘ಹೆಜ್ಜೆ ಮೂಡಿದ ಮೇಲೆ’, ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಇವರ ಪ್ರಕಟಿತ ಸಂಕಲನಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ