Advertisement
ಸಮುದ್ಯತಾ ರಾಜೇಶ್‌ ಬರೆದ ಈ ದಿನದ ಕವಿತೆ: ಪಾವಿತ್ರ್ಯತೆಯ ದಡದಲ್ಲಿ..

ಸಮುದ್ಯತಾ ರಾಜೇಶ್‌ ಬರೆದ ಈ ದಿನದ ಕವಿತೆ: ಪಾವಿತ್ರ್ಯತೆಯ ದಡದಲ್ಲಿ..

ಪಾವಿತ್ರ್ಯತೆಯ ದಡದಲ್ಲಿ..

ಅಮ್ಮ ಕುಡಿಯುವ ನೀರು ತರಲು ಹೋಗುತ್ತಿದ್ದುದೇ ಅಲ್ಲಿ..
ಅಕ್ಕನೂ ಒಮ್ಮೊಮ್ಮೆ ಜೊತೆಗೆ..
ನಾನು ಮೀನುಗಳನ್ನು ನೋಡಿ
ಕಣ್ಣರಳಿಸುವಾಗ ಅಕ್ಕ ಬಿಗಿಯಾಗಿ
ಕೈಹಿಡಿದಿರುತ್ತಿದ್ದಳು….

ಅಕ್ಕ, ಅಣ್ಣ ಮತ್ತು ನಾನು ಆಡುತ್ತಿದ್ದುದು,
ಬಣ್ಣದ ವಿಧ ವಿಧದ ದೋಣಿ ಬಿಡುತ್ತಿದ್ದದ್ದು ಅಲ್ಲಿ…
ಒಮ್ಮೆ ನಾನು ಜಾರಿಬಿದ್ದಿದ್ದೆ..
ಹರಿವಿಗೆ ಸಿಲುಕುವ ಮೊದಲು ಅಣ್ಣ ಎತ್ತಿದ್ದ..

ಅಪ್ಪ ಕರೆದುಕೊಂಡು‌ ಹೋಗಿ
ಈಜು ಕಲಿಸಿದ್ದೂ ಅಲ್ಲಿಯೇ..
ಇನ್ನೊಮ್ಮೆ ಬಿದ್ದುಬಿಡುವೆನೇನೋ
ಎಂಬ ಭಯಕ್ಕೆ…
ಆಮೇಲೆ‌ ಈಜಿದ್ದೇನೆ ಹರಿವಿನುದ್ದಕ್ಕೂ
ಬಹಳ ಸಲ..

ಅವನನ್ನು ಮೊದಲು ಕಂಡದ್ದೂ ಅಲ್ಲೇ..
ಅವನ ತಾಯಿ ಅಲ್ಲಿ ಪೂಜೆ ಮಾಡಲು ಬಂದಿದ್ದರು….
ನಾನು ಗೆಳತಿಯರೊಡನೆ ನೀರಾಟವಾಡುತ್ತಿದ್ದೆ…
ನೀರಿಗೆ ಬಂದವರು ಮನೆ ತನಕ ಬಂದಿದ್ದು ಆಮೇಲಿನ ಕತೆ…

ಅವನ ಜೊತೆ ಕೈಹಿಡಿದು ನಡೆದಿದ್ದು,
ಮೀನುಗಳು ಆಟವಾಡಲು ಕಾಲು ಇಳಿ ಬಿಟ್ಟು
ಕೂತದ್ದೂ ಅಲ್ಲೇ
ನೀರಲ್ಲಿ ಹೆಸರು ಬರೆಯಬಾರದಂತೆ
ನಾವು ಬರೆದಿದ್ದೇ ಆ ಶುದ್ಧ ಹರಿವಿನಲ್ಲಿ…

ವಾರಗಳಿಂದ ಮಾಯವಾದ ಅವನು
ಮೊನ್ನೆ ತೇಲಿಬಂದಿದ್ದ ದಡಕ್ಕೆ…
ಕಳೆದ ವಾರ ಅಕ್ಕನೂ ತೇಲಿಬಂದಿದ್ದಳು..
ಪಕ್ಕದ ಬೀದಿಯ ಅತ್ತೆಯೂ..
ಬರುತ್ತಲೇ ಇದ್ದರು ಇನ್ನಷ್ಟು ಜನ..
ದಡದುದ್ದಕ್ಕೂ…

ಸಮುದ್ಯತಾ ರಾಜೇಶ್ ಮೂಲತಃ ಸುಳ್ಯ ತಾಲೂಕಿನ ಕುಕ್ಕುಜಡ್ಕದವರು, ಸದ್ಯ ಬೆಂಗಳೂರು ವಾಸಿ 
ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ ನಂತರ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ  ವಿಷಯ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ
ಕವಿತೆ, ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ