Advertisement
ಸಹ್ಯಾದ್ರಿ ನಾಗರಾಜ್: ಮಳೆ ಕಾವ್ಯಶಾಲೆ

ಸಹ್ಯಾದ್ರಿ ನಾಗರಾಜ್: ಮಳೆ ಕಾವ್ಯಶಾಲೆ

‘ಮುಗಿಲು ಅಳುತ್ತಿದೆ ನನ್ನ ಬದಲು’ ಎಂದು ನಮ್ಮನ್ನು ನಾವೇ ಸಮಾಧಾನಿಸಿಕೊಂಡರೂ ಅದ್ಯಾಕೋ ಈ ಮೊದಲ ಮಳೆ ಒಮ್ಮೊಮ್ಮೆ ರೇಜಿಗೆ. ಮೋಡಗಳಿಗೆ ಗಾಳ ಹಾಕಿ ನಿಲ್ಲಿಸಿ ಆಕಾಶಕ್ಕೊಂದು ದೂರು ಬಿಸಾಕುವ ಉಮೇದು ನಮಗೆ. ಆದರೂ ಗುಲ್ ಮೊಹರ್ ನ ಕೆಂಪುಕೆಂಪಾದ ಕಂಪು ಮಾಯವಾಗುವ ಮುನ್ನವೇ ಮಣ್ಣವಾಸನೆಯ ಕೀಲಿ ತೆಗೆದು ಮತ್ತೇರಿಸುವ ಪ್ರಕೃತಿಯ ಮನ್ಸೂನ್ ಮ್ಯಾಜಿಕನ್ನು ಬೇಡ ಎನ್ನಲಾದೀತೇ!

ಆಷಾಢದ ಮಳೆಯಂತೆ ಬರೀ(ಒಂದೇ ತೆರನಾದ)ಮಾತಿಗಷ್ಟೇ ಗಂಟುಬೀಳೋದು ಬೇಡ. ಜನವರಿಯಲ್ಲಿ ಸುರಿಯುವ ಸಂಜೆಮಳೆ, ಜೂನ್ ನಲ್ಲಿ ಬೆರಗಿನ ಚಿತ್ತಾರ ಮೂಡಿಸುವ ಬಿಸಿಲುಮಳೆ, ಹುಚ್ಚು ಹಿಡಿದಂತೆ ನರ್ತಿಸುವ ಒನಕೆಮಳೆ, ಮಾದಕ ನೃತ್ಯವನ್ನು ಪ್ರಾಕ್ಟೀಸು ಮಾಡುವ ಸೋನೆಮಳೆ…. ಹೀಗೆ ವೆರೈಟಿ-ವೆರೈಟಿ ಇರುವಾಗ ಜಸ್ಟ್ ಮಾತ್ ಮಾತಲ್ಲಿ ಅಂದ್ರೆ ಸಿಕ್ಕಾಪಟ್ಟೆ ಬೋರು! ಕಾವ್ಯಶಾಲೆಯಲ್ಲಿ ಸೆರೆಹೊಡೆದ ಒಂದಷ್ಟು ಹೂಗಳು ಇಲ್ಲಿವೆ ನೋಡಿ….

ನಿನಗೆಂದೇ ಅರಳಿದ
ನನ್ನೆದೆವನದ ಕೆಂಗುಲಾಬಿಗಳನ್ನು
ಹಳ್ಳದ ದಂಡೆಯಲಿ ಬಚ್ಚಿಟ್ಟಿದ್ದೇನೆ:
ನಾಳೆ ಮೊದಲ ಮಳೆಯಂತೆ
ಹುಡುಕಿಕೋ ನೋಡುವಾ….!

ಮೊದಲ ಮಳೆಯಲಿ ತೋಯ್ದ
ಅವನ ಪ್ರೇಮಪತ್ರಗಳೀಗ
ಇನ್ನಷ್ಟು ಸ್ವಚ್ಛ..!

ಮಳೆಬಿಲ್ಲನ್ನು ಕೂರಿಸಿಕೊಂಡು
ಮಳೆಹನಿಯೊಂದು
ಕಳೆದ ಜನುಮದ ಕಥೆ ಹೇಳುತಿತ್ತು:
ಮೊದಲ ಮಳೆಯಲಿ ಅವತ್ತು
ಅವಳನ್ನು ಹುಡುಕುತ್ತಾ
‘ಸೂರ್ಯಕಾಂತಿ’ಯೊಳಗೆ
ಕಳೆದುಹೋದೆ.

ಮೊದಲ ಮಳೆಯಲಿ
ಅವಳೊಟ್ಟಿಗೆ
ಮಲ್ಲಿಗೆ ಬಿಡಿಸಿ ಮುಗಿಸಿದಾಗ
ಬಿಡಿಸಲಾಗದ ಮಲ್ಲಿಗೆಯೊಂದು
ಕಣ್ಣೆದುರಿತ್ತು.

ಮೊದಲ ಮಳೆಯ
ಥಂಡಿಯೊಳಗೆ
ಸೌತೆಗೆ ಖಾರ ಸವರಿ
ಚಪ್ಪರಿಸಿಕೊಂಡು ಮೆಲ್ಲುವ
ಅವಳ ಸೊಗಸುಗಾರಿಕೆಯನ್ನು
ಬೇಸಿಗೆಯಲಿ ನೆನಪಿಸಿಕೊಳ್ಳುತ್ತೇನೆ-
ಎದೆ ತಂಪು..!
ಜೊತೆಯಾಗಿ ನಡೆಯುವ
ಸಿಹಿಗನಸನ್ನು ನನಸಾಗಿಸಿದ
ಮೊದಲ ಮಳೆಗೂ
ಅವಳ ಕೊಡೆಗೂ
ಧನ್ಯವಾದ ಹೇಳಿಬಿಡಲೇ?!

ಮೊದಲ ಮಳೆ ತಂದ
ನೆಲದ ನರುಗಂಪಿನೊಲವಿನಲಿ
ಅರಳಿದ ಮಲ್ಲಿಗೆಗಳು
ಅವಳ
ಕಪ್ಪು ಕೊಡೆಯ ಅಡಿಯಲ್ಲೂ
ಬೆಳ್ಳಗೆ ನಗುತ್ತಿದ್ದವು.

ಕನ್ಯೆಯರ ಕೆನ್ನೆಮೇಲೆ
ಚೆಲುವಿನ ಮುತ್ತು ಪೋಣಿಸುವ
ಮೊದಲ ಮಳೆಗೂ
ನನಗೂ
ಅಷ್ಟಕ್ಕಷ್ಟೆ..!

ಮೊದಲ ಮಳೆಗೆ
ಬಣ್ಣ ಹಚ್ಚಲೆಂಬಂತೆ
ಸಾಲು ಸಾಲು
ಗುಲ್ ಮೊಹರ್ ಮರಗಳು
ಕುಂಚ ಹರವಿಕೊಂಡು ಕುಂತಿವೆ-
ಆಕಾಶಕ್ಕೆ ಹೊಟ್ಟೆಕಿಚ್ಚು..!

ಮೊದಲ ಮಳೆಯ
ಬರಸೆಳೆಯುವ ಪ್ರೀತಿಗೆ
ತೂಕಡಿಸುತ್ತಿದ್ದ
ಹೊಸನದಿ ಗಾಬರಿ..!

ಮೊದಲ ಮಳೆಯ
ಪಿರಿಪಿರಿಯೊಳಗೂ
ಅವಳು ಸಿಗುತ್ತಾಳೆ ಅಂದೊಡನೆ
ಮಲ್ಲಿಗೆ ಅರಳುತ್ತದೆ;
ಗಿಡದಲ್ಲಷ್ಟೇ ಅಲ್ಲ
ಎದೆಯಲ್ಲೂ..!

About The Author

ಸಹ್ಯಾದ್ರಿ ನಾಗರಾಜ್

ಊರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಂದಿ. ಓದಿದ್ದೆಲ್ಲ ಶಿವಮೊಗ್ಗ. ಬದುಕು ಕಟ್ಟಿಕೊಂಡದ್ದು ಬೆಂಗಳೂರಿನಲ್ಲಿ. ಒಂದಷ್ಟು ಕಾಲ ಪತ್ರಕರ್ತ. ಸದ್ಯ, ಗಿಡ-ಮರ, ಹೂವಿನೊಟ್ಟಿಗೆ ಸರಾಗ ಉಸಿರಾಡುತ್ತಿರುವ ಗಾರ್ಡನ್ ಡಿಸೈನರ್. ಪ್ರವಾಸ, ಗಾರೆ ಕೆಲಸ, ಸಿನಿಮಾ, ಫೋಟೊಗ್ರಫಿ ಹುಚ್ಚು. ಕ್ರೈಸ್ಟ್ ಕಾಲೇಜು ಕನ್ನಡ ಸಂಘದಿಂದ ಐದು ಬಾರಿ ಕವಿತೆಗೆ, ಎರಡು ಬಾರಿ ಕತೆಗೆ ಬಹುಮಾನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ