Advertisement
ಸುಧಾ ಆಡುಕಳ ಕಥಾಸಂಕಲನಕ್ಕೆ ಡಾ. ಎಲ್.ಸಿ. ಸುಮಿತ್ರಾ ಮಾತುಗಳು

ಸುಧಾ ಆಡುಕಳ ಕಥಾಸಂಕಲನಕ್ಕೆ ಡಾ. ಎಲ್.ಸಿ. ಸುಮಿತ್ರಾ ಮಾತುಗಳು

‘ಹೊಳೆ’ ಕಥೆಯಲ್ಲಿ ಕಾಡುನಾಶದಿಂದ ಹೊಳೆ ಬತ್ತಿಹೋಗುವ ಪರಿಸರದ ಚಿಂತನೆಯಿದೆ. ‘ಸತ್ಯದ ಬದುಕು’ ವ್ಯಕ್ತಿ ಸ್ವಾತಂತ್ರ್ಯವನ್ನು ಕೌಟುಂಬಿಕ ಸಂಬಂಧಗಳು ಮೊಟಕು ಮಾಡುವ, ನಿಯಂತ್ರಿಸುವ ರೀತಿಯನ್ನು ಹೇಳುತ್ತಲೇ ಅಲಕಾ ಎಂಬ ಹುಡುಗಿ ಮನೆಯಲ್ಲೂ, ಕೆಲಸ ಮಾಡುವ ಜಾಗೆಯಲ್ಲೂ ಹೇಗೆ ಒಂದು ಪರಿಕರವಾಗಿ ಬಳಸಲ್ಪಡುತ್ತಾಳೆ… ಕೊನೆಗೆ ಹೇಗೆ ಅವಳು ಭಾವನಾತ್ಮಕ ಬಂಧಗಳಿಂದ ಹೊರಬರುವ ಬಗೆಯನ್ನು ಚಿತ್ರಿಸುತ್ತದೆ. ‘ಕಥೆಯನ್ನರಸುತ್ತಾ’ ಎಂಬ ಕಥೆ ಹೊಸಬಗೆಯ ನಿರೂಪಣೆಯನ್ನು ಹೊಂದಿದೆ.
ಸುಧಾ ಆಡುಕಳ ಅವರ ಚೊಚ್ಚಲ ಕಥಾಸಂಕಲನ ‘ಒಂದು ಇಡಿಯ ಬಳಪʼದ ಕುರಿತು ಡಾ. ಎಲ್.ಸಿ. ಸುಮಿತ್ರಾ ಅಭಿಪ್ರಾಯ

 

ಪ್ರಕಾಶಕರು ಕಳಿಸಿಕೊಟ್ಟ ಎರಡು ಹಸ್ತಪ್ರತಿ ಸಂಕಲನದಲ್ಲಿ “ಒಂದು ಇಡಿಯ ಬಳಪ” ಈ ಹಸ್ತಪ್ರತಿ ಕಥೆಗಳು, ವಸ್ತು, ಭಾಷೆ ಹಾಗೂ ನಿರೂಪಣೆ ದೃಷ್ಟಿಯಿಂದ ಹೆಚ್ಚು ತೀವ್ರವಾಗಿದೆ. ಸೃಜನಶೀಲತೆಯಿಂದ ಕೂಡಿದ ಅಭಿವ್ಯಕ್ತಿಗಳನ್ನು ಹೊಂದಿದ ಈ ಕತೆಗಳು ಸುಲಭವಾಗಿ ಓದಿಸಿಕೊಳ್ಳುತ್ತವೆ.

(ಸುಧಾ ಆಡುಕಳ)

ಶೀರ್ಷಿಕೆಯ ಕತೆ “ಒಂದು ಇಡಿಯ ಬಳಪ” ಹೆಣ್ಣಿನ ಬದುಕಿಗೆ ಒಂದು ರೂಪಕವಾಗಿದೆ. ಕಥೆಯ ನಿರೂಪಕಿಗೆ ಒಂದು ಇಡಿಯ ಬಳಪ ಬಾಲ್ಯದಲ್ಲಿ ಸಿಗುವುದಿಲ್ಲ. ಸಿಕ್ಕರೂ ದಕ್ಕಿಸಿಕೊಳ್ಳಲು ಕಷ್ಟವಾದ ಸನ್ನಿವೇಶ. ಈ ಕಥೆಯ ದೇವಿ ಹಾಗೂ ಸ್ವತಃ ನಿರೂಪಕಿ ನಾರಿ ಜಗತ್ತಿನ ಕಷ್ಟ ನಿಷ್ಟುರಗಳಿಗೆ ಪ್ರತೀಕವಾಗಿದ್ದಾರೆ. “ಹಾರಲು ಆಗಸವಿಲ್ಲದ ಜಾಗದಲ್ಲಿ ರೆಕ್ಕೆಗಳಿಂದ ಏನೂ ಉಪಯೋಗವಿಲ್ಲವೆಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅವಶ್ಯಕತೆಯಿಲ್ಲದ ರೆಕ್ಕೆಗಳನ್ನು ಹೊತ್ತು ತಿರುಗುವುದೊಂದು ಕಷ್ಟ ಅನ್ನಿಸತೊಡಗಿತು.” ಇಂತಹ ವಾಕ್ಯಗಳು ಈ ಕತೆಗಳ ಧ್ವನಿಸೌಂದರ್ಯವನ್ನು ಹೆಚ್ಚಿಸಿವೆ. ದೇವಿಯನ್ನು ಮೈಮೇಲೆ ಬರಿಸಿಕೊಳ್ಳುವುದು ಶೋಷಿತ ಹೆಣ್ಣುಮಕ್ಕಳು ಕಷ್ಟದಿಂದ ಪಾರಾಗಲು ಬಳಸುವ ಮಾರ್ಗ. ಹಾಗೆ ಬಹಿರಂಗದಲ್ಲಿ ದೇವಿ ಎಂದು ಹೆಣ್ಣನ್ನು ವೈಭವೀಕರಿಸಿ ಅಂತರಂಗದಲ್ಲಿ ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಎರಡು ಮುಖವನ್ನು ‘ಒಂದು ಇಡಿಯ ಬಳಪ’ ಹಾಗೂ ‘ದೇವೀರಮ್ಮ’ ಎಂಬ ಕಥೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

‘ಪಾರಿಜಾತ’ ಕಥೆ ಎರಡು ತಲೆಮಾರಿನ ಹೆಣ್ಣಿನ ದನಿಗಳನ್ನು ಒಳಗೊಂಡಿದೆ. ‘ಮೊಳಕೆ’ ಕತೆಯಲ್ಲಿ ಹೆಂಡತಿ ಮೊಳಕೆಯೊಡೆದ ಆಲೂವನ್ನು ನೆಟ್ಟು ಗಿಡ ಬೆಳೆಸಲು ತೆಗೆದಿಟ್ಟಿರುತ್ತಾಳೆ. ಗಂಡ ಮೊಳಕೆಯನ್ನು ಕೊಯ್ದು ಕುಕ್ಕರಿನಲ್ಲಿ ಬೇಯಿಸಿರುತ್ತಾನೆ. ಬೇಡದೇ ಇರುವ ಮಗುವನ್ನು ಮೊಳಕೆಯಲ್ಲಿಯೇ ಇಲ್ಲವಾಗಿಸುವ ಮನಸ್ಥಿತಿಗೆ ಇದೊಂದು ರೂಪಕವಾಗಿದೆ. ‘ಗೆಳತಿ ಭಾನುಮತಿ’ ಕಥೆಯಲ್ಲಿ ಪುರಾಣದ ಭಾನುಮತಿಯ ಪಾತ್ರದ ಮೂಲಕ ವರ್ತಮಾನದ ಹೆಣ್ಣಿನ ಕಥೆಯನ್ನು ಹೇಳಿದ್ದಾರೆ. ಹೆಣ್ಣಿನ ಲೈಂಗಿಕ ನಿಷ್ಠೆಯನ್ನು ಸಂಶಯಿಸುವುದರ ಮೂಲಕ ಅವಳನ್ನು ನಿಯಂತ್ರಿಸುವುದು ನಮ್ಮ ಸಮಾಜದ ಹಳೆಯ ತಂತ್ರ.

(ಎಲ್.ಸಿ. ಸುಮಿತ್ರಾ)

‘ಹೊಳೆ’ ಕಥೆಯಲ್ಲಿ ಕಾಡುನಾಶದಿಂದ ಹೊಳೆ ಬತ್ತಿಹೋಗುವ ಪರಿಸರದ ಚಿಂತನೆಯಿದೆ. ‘ಸತ್ಯದ ಬದುಕು’ ವ್ಯಕ್ತಿ ಸ್ವಾತಂತ್ರ್ಯವನ್ನು ಕೌಟುಂಬಿಕ ಸಂಬಂಧಗಳು ಮೊಟಕು ಮಾಡುವ, ನಿಯಂತ್ರಿಸುವ ರೀತಿಯನ್ನು ಹೇಳುತ್ತಲೇ ಅಲಕಾ ಎಂಬ ಹುಡುಗಿ ಮನೆಯಲ್ಲೂ, ಕೆಲಸ ಮಾಡುವ ಜಾಗೆಯಲ್ಲೂ ಹೇಗೆ ಒಂದು ಪರಿಕರವಾಗಿ ಬಳಸಲ್ಪಡುತ್ತಾಳೆ… ಕೊನೆಗೆ ಹೇಗೆ ಅವಳು ಭಾವನಾತ್ಮಕ ಬಂಧಗಳಿಂದ ಹೊರಬರುವ ಬಗೆಯನ್ನು ಚಿತ್ರಿಸುತ್ತದೆ. ‘ಕಥೆಯನ್ನರಸುತ್ತಾ’ ಎಂಬ ಕಥೆ ಹೊಸಬಗೆಯ ನಿರೂಪಣೆಯನ್ನು ಹೊಂದಿದೆ. ಅಂತೆಯೇ ನೀಲಿಯ ಜಗತ್ತು ಎಂಬ ಕಥೆ ಒಂಟಿ ಹೆಣ್ಣಿನ ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.

ಈ ಸಂಕಲನದ ಕಥೆಗಳಲ್ಲಿ ಪ್ರಯೋಗಶೀಲತೆಯಿದೆ. ಅಭಿವ್ಯಕ್ತಿಯ ತೀವ್ರತೆಯಿದೆ. ಕಥೆ ಬರೆಯುವವರಿಗೆ ಸಾಮಾನ್ಯವಾಗಿ ಇರುವ ಕಥೆ ಹೇಳಿ ಮುಗಿಸಬೇಕು ಎಂಬ ಆತುರತೆ ಇಲ್ಲಿಲ್ಲ. ಒಂದು ಗಮನ ಸೆಳೆಯುವ ಸಂಕಲನ ಇದು. ಅದೂ ಮೊದಲ ಬಾರಿ ಕಥಾ ಸಂಕಲನ ಹೊರತರುತ್ತಿರುವ ಸ್ಪರ್ಧೆಗೆ ಬಂದ ಹಸ್ತಪ್ರತಿ ಇದು. ಕಥೆ ಬರೆದವರ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

 

(ಕೃತಿ: ಒಂದು ಇಡಿಯ ಬಳಪ (ಕಥಾ ಸಂಕಲನ), ಲೇಖಕರು: ಸುಧಾ ಆಡುಕಳ, ಪ್ರಕಾಶಕರು:ಮೈತ್ರಿ ಪ್ರಕಾಶನ, ಪುಟಗಳು: 100, ಬೆಲೆ: 120/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ