Advertisement
ಸುಷ್ಮಿತಾ ಶೆಟ್ಟಿ ಬರೆದ ಎರಡು ಹೊಸ ಕವಿತೆಗಳು

ಸುಷ್ಮಿತಾ ಶೆಟ್ಟಿ ಬರೆದ ಎರಡು ಹೊಸ ಕವಿತೆಗಳು

೧. ನಾವಿಬ್ಬರು ಒಬ್ಬರನೊಬ್ಬರು ತಾಕದೇ

ನಾವಿಬ್ಬರು ಒಬ್ಬರನೊಬ್ಬರು ತಾಕದೇ
ಎಲ್ಲಿಗೋ ಹಾದು ಹೋಗುವಾಗ
ಅದೇ ನೆಪದಲ್ಲಿ ಅಲ್ಲಿಯೇ
ಮುಖಾಮುಖಿಯಾಗಿ ಕೂತು

ಬೆಳಗೇ ರಾತ್ರಿಯಾಗಿ ಒಲಿದು
ಸೇರಲೊಂದು ನಭವು ಸಿಕ್ಕು
ಅರಿತ ಮೌನ ಒಪ್ಪಿಗೆಯಂತೆ
ಬೆರೆತ ಬಣ್ಣದ ನಗುವ ನಕ್ಕು

ಹೊರಗೆಲ್ಲೋ ನೀ ತಾಕದೆ
ಹೋದ ಶಬ್ದಕ್ಕೆ ನಾ ಕಾದ
ಮಾರನೇದಿನ ನೀ ತಾಕಿದ
ಜುಮ್ಮಿಗೆ ಕಣ್ಣರಳಿಸಿದ್ದ ನೆನೆಸಿ

ನನ್ನೊಳಗೆ ಹ್ರಸ್ವವಾಗಿ ಕೂಡಿದ್ದು
ನೀ ಸಿಕ್ಕು ದೀರ್ಘವಾಗಿ
ಪದದ ಸಲುಗೆಯೇ ಪ್ರೇಮವಾಗಿ
ಕಲಿತ ಹಾಡೆಲ್ಲಾ ನಿನಗೆ ಹಾಡಿ

ಒಪ್ಪಿಸುವುದೆಲ್ಲ ಆದ ಮೇಲೆ
ಪರದೆಯಲ್ಲಿ ಜಾಗವಿರದೆ
ಒಳಗು ಕೂಡ ತುಂಬಿ ಬಂದ
ಮಾತನೆಲ್ಲಾ ಹೇಳ ಕೊಡದೆ

ಇಳಿದು ಹೋದ ಬಿಸಿಯ ಹನಿಗೆ
ಆಳ ಶಬ್ದ ನೆಪವ ಕೊಟ್ಟು
ಭಾವ ಸೆಣಸಿ ಮಳೆಯು ಒಡೆದು
ಒಲುಮೆಯುಳಿದು ತಂಪಾದದ್ದು

ಯಾರು?

 

 

 

 

 

೨. ಜ್ವರದ ನೆಪಕೆ…

ಒಳಗೆ ಒಂದಿಷ್ಟು ಕಾವು
ಜ್ವರ ಪರೀಕ್ಷಿಸಿದವರೇ ಹೇಳಿದರೆನಿಸುತ್ತದೆ
ಅಲ್ಲಲ್ಲಿ ಏರುತ್ತಿರುವ ಬಿಸಿಯ ಜೊತೆಗೆ
ಎಡೆಯಲ್ಲಿಣುಕುವ ನೋವು
ಅದನ್ನೇ ಖಾತ್ರಿ ಮಾಡಿರಬೇಕು
“ಅದೇ ಆ ಕಂದು ಡಬ್ಬಿಯಲ್ಲಿನ ಮಾತ್ರೆ
ಈಗಷ್ಟೇ ಮಾಡಿಟ್ಟ ಹುರಿಯಕ್ಕಿ ಗಂಜಿ
ಬೇಗೆಯನ್ನೆಲ್ಲ ಇಳಿಸಿಬಿಡುತ್ತದೆ”
ಹೊರಗ್ಯಾರದೋ ಮಾತು ಕೇಳಿಸಿದಂತಿತ್ತು
ಒಳಗಿನ ಮೌನ ಮಾತ್ರ ತಣ್ಣಗಾಗಿರಬೇಕು
ಆಗಿಂದ ನಾನಿಲ್ಲೇ ಕುಳಿತು ದಿಟ್ಟಿಸುತ್ತಿದ್ದದ್ದು
ಬಹುಶಃ ಸಂದಿಯಿಂದ ಬಂದ ಬೆಳಕನ್ನಷ್ಟೆ
ಆದರೂ, ನೀನೇ ಇರಬೇಕು ಬಾಗಿಲಾಚೆ
ಆಗಾಗ ಸರಿದಾಡುತ್ತಿದ್ದದ್ದು‌
ಈಗ ಸದ್ದಿಲ್ಲದೆ ಸ್ತಬ್ಧವಾಗಿರುವುದು
ಸರಕ್ಕನೆ ಬಾಗಿಲೆಳೆದು ಹೋದವರ ಹಿಂದೆ
ಬೇನೆಯೊಂದು  ಹೊರಟಿರಬೇಕು
ಪಕ್ಕದ ಕೋಣೆಯಲ್ಲೂ ಈಗ ದೀಪವೇರಿರಬೇಕು
ಸಂದಿಯೊಂದು ನೋವಿನಿಂದ ಖಾಲಿ
ಎಂದೆನಿಸಿ ಕಣ್ಮುಚ್ಚಿದ್ದು ಆಗಲೇ
ಬೆವರಿಳಿದು ಕಾಲದ ಮೇಲೆ ಕಣ್ಬಿಟ್ಟಾಗಲೇ
ಮಾತು, ಮತ್ತು, ದೀಪವಾರಿದ್ದು
ಅನಿಸಿದ್ದು ನಾನೆಲ್ಲೋ ಕನಸಿರಬೇಕೆಂದೆ
ಇಡಿಯಾಗಿ ಆಗಿರಲಿಕ್ಕೂ ಇಲ್ಲವೆಂತೆನಿಸಿಯೂ
ಒಳಗಿದ್ದ ‘ಜ್ವರ’ದ ನೆಪಕ್ಕೆ ತಣ್ಣಗಾಗಿರಬೇಕು
 ಮಣಿಪಾಲದಲ್ಲಿರುವ ಸುಷ್ಮಿತಾ ಶೆಟ್ಟಿ ಓದಿದ್ದು ಪತ್ರಿಕೋದ್ಯಮ. ಸಾಹಿತ್ಯದಲ್ಲಿ ಆಸಕ್ತಿ ಮತ್ತು ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ.
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ