Advertisement
ಸೋಕಿದ ಕಹಿಯನ್ನು ಒಳಗಿಳಿಸಿಕೊಳ್ಳದೆ, ಸಿಹಿಯನಷ್ಟೇ ಹಂಚುತ್ತಾ….

ಸೋಕಿದ ಕಹಿಯನ್ನು ಒಳಗಿಳಿಸಿಕೊಳ್ಳದೆ, ಸಿಹಿಯನಷ್ಟೇ ಹಂಚುತ್ತಾ….

೫೭ ವರ್ಷಗಳ ತಮ್ಮ ಬದುಕಿನ ಪಯಣದ ಬಗ್ಗೆ ಅವರ ಮಾತಿನಲ್ಲಿ ಸಂತೃಪ್ತಿಯಿತ್ತು. ಸವಾಲು, ಸಮಸ್ಯೆ, ಸಣ್ಣತನ, ಮೋಸ, ರಾಜಕೀಯಗಳ ಬಗ್ಗೆ ಒಂದು ಶಬ್ದವನ್ನೂ ವ್ಯಯಿಸದೆ, ತಮ್ಮ ಜ್ಞಾನ, ಉದಾತ್ತ ವಿಚಾರಗಳು, ಸಕಾರಾತ್ಮಕ ಸಂಗತಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅಲ್ಲಿ ಕೃತಕತೆಗೆ, ಕೃತ್ರಿಮಕ್ಕೆ ಆಸ್ಪದವೇ ಇರಲಿಲ್ಲ. ಅವರೊಳಗಿನ ಶುದ್ಧ ಆನಂದವನ್ನು ಸುತ್ತ ಪಸರಿಸುವ ಬೆಳಕಿನ ನದಿಯಂತೆ ಹರಿದರು. ಮಾತಾಡಿದರು. ನೃತ್ಯ ಮಾಡಿದರು. ಅದೊಂದು ಅನಿರ್ವಚನೀಯ ಅನುಭವ. ಬದುಕನ್ನು ಸಂಭ್ರಮಿಸುವುದಕ್ಕೆ ಅವರಿಗೆ ಮಿಗಿಲಾದ ಉದಾಹರಣೆ ಸದ್ಯಕ್ಕೆ ನನ್ನ ಕಣ್ಣ ಮುಂದಿಲ್ಲ.
ಎಸ್. ನಾಗಶ್ರೀ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣ

ಯುಗಾದಿ ಎಂದರೆ ತಿಳಿಹಸಿರು ಮಾವಿನೆಲೆ, ಕಹಿಘಮದಲ್ಲೂ ಹಿತ ಸುರಿವ ಹೂಮುಡಿದ ಬೇವು, ಪ್ರತಿ ಮನೆಯ ಮುಂದಿನ ತೋರಣ, ಬಣ್ಣಬಣ್ಣದ ರಂಗೋಲಿ, ಹರಳೆಣ್ಣೆ ಅಭ್ಯಂಜನ, ಮೊದಲ ಮಾವಿನಕಾಯಿ ಚಿತ್ರಾನ್ನ, ಹೋಳಿಗೆಯೂಟ, ಹೊಸಬಟ್ಟೆಯ ಸರಭರ, ಅಮ್ಮನ ಅಂಕೆ ಮೀರಲು ಕೆಲವೇ ದಿನ ಬಾಕಿ ಎಂದು ತೋರುವ ಅಜ್ಜಿಮನೆಯ ಹಾದಿಗೆ ಹತ್ತಿರದ ಸಮಯ, ಬೇಸಿಗೆಯ ಚುರುಕು ಬಿಸಿಲು, ಹಗುರ ಮೈಮನ, ತಾರಸಿಯ ಮೇಲೆ ಚಾಪೆ ಹಾಸಿ ಅಂಗಾತ ಮಲಗಿ ನಕ್ಷತ್ರವೆಣಿಸುವ ಕಾಲ, ಮನೆಮುಂದಿನ ಹೊಂಗೆ ಮರದ ಜೋಕಾಲಿ, ಹಿತ್ತಲ ಪಾತಿಯಲ್ಲಿ ಬಣ್ಣಬಣ್ಣದ ಹೂವು, ಕಲ್ಲಂಗಡಿ ಮಾವು ದ್ರಾಕ್ಷಿ ಎನ್ನುತ್ತಾ ಹಣ್ಣಿನ ಮೋಹಕ್ಕೆ ಮೈಯೆಲ್ಲ ಬಾಯಿ, ಕಥೆ ಕವಿತೆ ನಾಟಕ ಶಿಬಿರದ ಹೊಸ ಗೆಳೆಯರ ಸ್ನೇಹಕ್ಕೆ ರಹದಾರಿ…. ಒಂದು ಮತ್ತೊಂದು ಎಂದು ಅಕ್ಷಯ ನೆನಪುಗಳ ಜಾತ್ರೆ ಹೊರಡಿಸುವ ಪ್ರತಿ ಹಬ್ಬಕ್ಕೂ ಬಾಲ್ಯದ ನೆನಪುಗಳೇ ಕೈಮರವಾಗುವುದು ಸೋಜಿಗವೋ? ಸಹಜವೋ? ಅಂತೂ ಯುಗಾದಿ ಬಂದಿದೆ.

“ಯುಗಾದಿ, ದೀಪಾವಳಿ ಮಾಡ್ಕೊಂಡು ತಿನ್ನುವ ಹಬ್ಬಗಳು ನೋಡು. ವಾರ ಹದಿನೈದು ದಿನದ ಮುಂಚಿನಿಂದ ಮನೆಯ ಒಳಹೊರಗೆ ಒಪ್ಪ ಮಾಡಿದರೆ, ಅವತ್ತು ಮಕ್ಕಳಿಗೆ ಅಭ್ಯಂಜನ, ಹೊಸಬಟ್ಟೆಯ ಸಂಭ್ರಮ ಪೂರೈಸಿ, ಬಗೆಬಗೆಯ ಅಡುಗೆ ಮಾಡಿ ತಿಂದು ಸಂತೋಷಪಡುವುದು. ನಿತ್ಯಪೂಜೆಗಿಂತ ಇನ್ನು ಕಾಲುಗಂಟೆ ಹೆಚ್ಚು ದೇವರ ಮುಂದೆ ಕೂತರೆ ಮುಗಿಯಿತು. ಬೇರೆ ವ್ರತಗಳ ಹಾಗೆ ಪುರುಸೊತ್ತಿಲ್ಲದೆ ಚಕ್ರ ಸುತ್ತಬೇಕಿಲ್ಲ. ಮದುವೆಗೆ ಮುಂಚೆ ಎಲ್ಲ ಹಬ್ಬವೂ ಒಂದೇ. ತಲೆ ಮೇಲೆ ಜವಾಬ್ದಾರಿ ಬಿದ್ದಾಗ ನನ್ನ ಮಾತಿನ ಅರ್ಥ ತಿಳಿಯುತ್ತೆ. ಬೇರೆ ಹಬ್ಬದಲ್ಲೂ ಸಡಗರ, ಸಂಭ್ರಮ ಇರತ್ತೆ. ಆದರೆ ಅದನ್ನು ಹಾಯಾಗಿ ಅನುಭವಿಸುವ ವ್ಯವಧಾನ ಕಡಿಮೆ.” ಅನ್ನುತ್ತಿದ್ದ ಅಮ್ಮನ ಮಾತು ಅನುಭವಕ್ಕೆ ಬರುವ ದಿನಗಳಿವು.

ಆಚರಣೆಯ ಹಿಂದುಮುಂದಿನ ಚಾಕರಿಗೆ ಹಿಂಜರಿದು, ಹಬ್ಬದ ನೆಪದಲ್ಲಿ ಮೈದುಂಬುವ ಸಂಭ್ರಮವನ್ನು ತಪ್ಪಿಸಿಕೊಳ್ಳುವುದು ಹೇಗೆ? ಈ ಸಲ ಹೆಚ್ಚು ಕೆಲಸ ಹಚ್ಚಿಕೊಳ್ಳುವುದಿಲ್ಲ ಎನ್ನುತ್ತಲೇ ಇದೊಂದು ತಾನೆ, ಅದನ್ನು ಮರೆತರೆ ಹೇಗೆ, ಅಯ್ಯೋ ವರ್ಷಾವಧಿ ಹಬ್ಬ ಅಚ್ಚುಕಟ್ಟಾಗಿ ನೆರವೇರಲಿ ಬಿಡು ಎಂದು ಯಾವುದಕ್ಕೂ ಕೊರೆ ಮಾಡದೆ ಮುನ್ನಡೆಸಿಕೊಂಡು ಬಂದ ಹಿಂದಿನ ತಲೆಮಾರು ನಮ್ಮನ್ನು ಪ್ರೇರೇಪಿಸುತ್ತದೆ‌. ಹರಳೆಣ್ಣೆ – ಸೀಗೆಪುಡಿಯ ಜಾಗದಲ್ಲಿ ಕೊಬ್ಬರಿಎಣ್ಣೆ- ಶ್ಯಾಂಪೂ, ಹೋಳಿಗೆಯ ಬದಲಿಗೆ ಪಾಯಸ, ಇಡೀ ತೋರಣ ಕಟ್ಟಲಾಗದಿದ್ದರೂ ಕೊನೆಯೆರಡು ಸಿಕ್ಕಿಸಿ, ಹಬ್ಬಕ್ಕೆ ಹತ್ತುದಿನ ಮುಂಚೆ ಆನ್ ಲೈನಲ್ಲಿ ತರಿಸಿದ ಹೊಸಬಟ್ಟೆ ಧರಿಸಿ, ದೇವರಿಗೆ ಕೈಮುಗಿದು ಪಚ್ಚೆನಿಸದ ಹಾಗೆ ಕಾಲಕ್ಕೆ ತಕ್ಕಂತೆ ವಿಧಿವಿಧಾನ ಬದಲಿಸಿದರೂ ಹಬ್ಬವನ್ನು ಮರೆಯಲಾಗುವುದಿಲ್ಲ. ಯಾವ ಕಾಲದೊಂದಿಗೂ ಹೋಲಿಸಿಕೊಳ್ಳದೆ, ಇರುವುದನ್ನು ಸಂತೃಪ್ತಿ, ವಿನೀತಭಾವದಿಂದ ಎದುರುಗೊಳ್ಳುವುದಷ್ಟೇ ನಮ್ಮ ಪಾಲಿನದು. ಅದೇನಿದ್ದರೂ ಯುಗಾದಿಯಂತಹ ಹಬ್ಬ ಮೂಲದಲ್ಲಿ ಸ್ಫುರಿಸುವ ಸಕಾರಾತ್ಮಕ ಭಾವವನ್ನು ಮಾತ್ರ ಸ್ನಿಗ್ಧವಾಗಿ ಮನದುಂಬಿಕೊಳ್ಳಬೇಕು. ಅದರಲ್ಲಿ ಈ ಲಘುವಾಗಿಸುವ ಚೌಕಾಸಿಗೆ ಅವಕಾಶವಿರಕೂಡದು.

ಚಳಿಗಾಲದಲ್ಲಿ ತರಗೆಲೆಗಳ ಮಧ್ಯೆ ಒಂಟಿಯಾಗಿ ನಿಂತ ಬೋಳುಮರ ಒಂದೆರಡು ತಿಂಗಳಲ್ಲಿ ಎಳೆಚಿಗುರಿನೊಂದಿಗೆ ಕಂಗೊಳಿಸಿ, ಹೂಹಣ್ಣುಗಳಿಂದ ತೊನೆದು ಕಳೆದುಕೊಂಡಿದ್ದರ ಬಗ್ಗೆ ಖೇದವಿಲ್ಲದೆ ಮತ್ತೆ ಮತ್ತೆ ಚಿಗುರಿ ಚೆಲುವಾಗಿ ಮೌನವಾಗಿ ಕಲಿಸುವ ಪಾಠಕ್ಕೆ ತೋರುಬೆರಳಿಟ್ಟು ತೋರಿದಂತೆ ಈ ಯುಗಾದಿ. ಬೇವು-ಬೆಲ್ಲದ ಬದುಕಿನಲ್ಲಿ ಆಶಾವಾದವನ್ನು ಬಿಟ್ಟುಕೊಡದೆ ಸುಖದುಃಖದ ಚಕ್ರದ ಬಗ್ಗೆ ಸಮಚಿತ್ತದ ನೋಟ ಕಲಿಸುವ ಗುರು.

ಈ ಬಾರಿ ಗುರುವಿನ ಸ್ಥಾನದಲ್ಲಿ ಯುಗಾದಿಗೆ ನಾಲ್ಕಾರು ದಿನದ ಮುಂಚೆ ಒಂದು ಸನ್ನಿವೇಶವಿತ್ತು. ಹುಟ್ಟಿದಾರಭ್ಯ ಮುಟ್ಟಿದ ಎಲ್ಲದರಲ್ಲೂ ಚಿನ್ನದ ಬೆಳೆ ತೆಗೆದ ಸಾಧಕರೊಬ್ಬರ ಸಂದರ್ಶನ. ಕಲೆ, ವಿಜ್ಞಾನ, ಪುರಾತತ್ವಶಾಸ್ತ್ರ, ಭರತನಾಟ್ಯ ಹೀಗೆ ಅವರ ಆಸಕ್ತಿಯ ಹರಹು ವಿಸ್ತಾರವಾದದ್ದು. ಆಸಕ್ತಿಯೊಂದಿಗೆ ಶ್ರದ್ಧೆ, ಪರಿಶ್ರಮ, ಉತ್ತಮ ಕೌಟುಂಬಿಕ ಹಿನ್ನಲೆ, ಜೊತೆಗಿರುವವರ ಸಹಕಾರ, ವ್ಯಕ್ತಿತ್ವದ ಪ್ರಕಾಶವೂ ಸೇರಿ ಅವರು ಏರಿರುವ ಎತ್ತರ ಸಾಮಾನ್ಯರಿಗೆ ಕನಸಿನ ಮಾತೇ ಸರಿ. ವಿದ್ಯೆ, ಕಲೆ, ಸೌಂದರ್ಯ, ಹಣ, ಅಂತಸ್ತು, ಅಧಿಕಾರ, ಸಾಮಾಜಿಕ ಮನ್ನಣೆ, ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗರಿ ಎಲ್ಲವನ್ನೂ ವಿಸ್ಮಯಗೊಳಿಸುವಷ್ಟು ಸೊಗಸಾಗಿ ಅಂತರ್ಗತ ಮಾಡಿಕೊಂಡಿರುವ ಅವರು ಮನಸೆಳೆದಿದ್ದು ಸಣ್ಣಸಣ್ಣ ಸಂತೋಷಗಳನ್ನು ಆಸ್ವಾದಿಸುವ ರೀತಿಯಿಂದ. ಒಳ್ಳೆಯ ಹಾಡು, ಹಳೆಕಾಲದ ಸಂಗೀತ ವಾದ್ಯ, ರಾತ್ರಿಯ ನೀರವತೆ, ಭರತನಾಟ್ಯಕ್ಕೆ ಪೂರಕವೆನಿಸಿದ ವಿಶಾಲ ಪ್ರಾಂಗಣ, ಒಳ್ಳೆಯ ಚಹಾ, ಗರಿಗರಿ ಬಿಸ್ಕೆಟ್ಟು, ಹೊಸ ಭಾಷೆ, ಚಟಪಟ ಮಾತಾಡುವ ನಿರೂಪಕರು… ಹೀಗೆ ಜೊತೆಯಿದ್ದ ಮೂರು ಗಂಟೆಯಲ್ಲಿ ಅವರ ಅನುಭವಕ್ಕೆ ಬಂದ ಪ್ರತಿ ಸಣ್ಣ ವಿಷಯವನ್ನೂ ತುಂಬು ಉತ್ಸಾಹದಲ್ಲಿ ತಮ್ಮದಾಗಿಸಿಕೊಂಡು ಸಂಭ್ರಮಿಸಿದರು. ೫೭ ವರ್ಷಗಳ ತಮ್ಮ ಬದುಕಿನ ಪಯಣದ ಬಗ್ಗೆ ಅವರ ಮಾತಿನಲ್ಲಿ ಸಂತೃಪ್ತಿಯಿತ್ತು. ಸವಾಲು, ಸಮಸ್ಯೆ, ಸಣ್ಣತನ, ಮೋಸ, ರಾಜಕೀಯಗಳ ಬಗ್ಗೆ ಒಂದು ಶಬ್ದವನ್ನೂ ವ್ಯಯಿಸದೆ, ತಮ್ಮ ಜ್ಞಾನ, ಉದಾತ್ತ ವಿಚಾರಗಳು, ಸಕಾರಾತ್ಮಕ ಸಂಗತಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅಲ್ಲಿ ಕೃತಕತೆಗೆ, ಕೃತ್ರಿಮಕ್ಕೆ ಆಸ್ಪದವೇ ಇರಲಿಲ್ಲ. ಅವರೊಳಗಿನ ಶುದ್ಧ ಆನಂದವನ್ನು ಸುತ್ತ ಪಸರಿಸುವ ಬೆಳಕಿನ ನದಿಯಂತೆ ಹರಿದರು. ಮಾತಾಡಿದರು. ನೃತ್ಯ ಮಾಡಿದರು. ಅದೊಂದು ಅನಿರ್ವಚನೀಯ ಅನುಭವ. ಬದುಕನ್ನು ಸಂಭ್ರಮಿಸುವುದಕ್ಕೆ ಅವರಿಗೆ ಮಿಗಿಲಾದ ಉದಾಹರಣೆ ಸದ್ಯಕ್ಕೆ ನನ್ನ ಕಣ್ಣ ಮುಂದಿಲ್ಲ.

ಜೀವನದಲ್ಲಿ ಜವಾಬ್ದಾರಿ, ಸವಾಲು, ಕಷ್ಟನಷ್ಟಗಳು ಹೆಗಲೇರಿದ ಮಾತ್ರಕ್ಕೆ ಬದುಕುವುದನ್ನೇ ಮರೆತು, ದಂದುಗದಲ್ಲೇ ನೊಂದು, ನಂಜು ಕಾರಬೇಕಿಲ್ಲ. ಸಂಭ್ರಮಿಸಲು ದೊಡ್ಡ ದೊಡ್ಡ ಕಾರಣಗಳೇ ಆಗಬೇಕಿಲ್ಲ. ಘನತೆಯನ್ನು ಬಿಟ್ಟುಕೊಡದೆಯೂ ಮುಗ್ಧವಾಗಿ, ಸಹಜವಾಗಿ ಸಂಭ್ರಮಿಸಬಹುದು ಎಂದು ತೋರಿದ ಸನ್ನಿವೇಶ ಅದಾಗಿತ್ತು.

ಪ್ರತಿವರ್ಷವೂ ಯುಗಾದಿ ಹೊಸದೊಂದು ಹಾಳೆಯನ್ನು ಕೈಗಿಟ್ಟು ನಿನಗಿಷ್ಟ ಬಂದ ಚಿತ್ರ ಬರೆದು, ಬಣ್ಣತುಂಬು ಎಂದು ಹೇಳಿ ಹೋದ ಹಾಗನ್ನಿಸುತ್ತೆ. ಈ ಬಾರಿಯ ಯುಗಾದಿ ಸೋಕಿದ ಕಹಿಯನ್ನು ಒಳಗಿಳಿಸಿಕೊಳ್ಳದೆ, ವ್ಯಕ್ತಿತ್ವದ ಸಿಹಿಯನ್ನು ಸಂಭ್ರಮದಿಂದ ಹಂಚುವುದನ್ನು ಕಲಿಸಲು ಬಂದ ಗುರುವಿನಂತಿದೆ. ಈ ವರ್ಷ ಹರ್ಷದ ಚಿತ್ತಾರ ಅರಳಿಸುವ ಆಶಯವಿದೆ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.

About The Author

ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

2 Comments

  1. Amulya S

    ಮತ್ತೊಂದು ಸುಂದರ ಲೇಖನ😃. ಪ್ರತಿ ಯುಗಾದಿಯು ನಮ್ಮ ಕೈಗೆ ಹೊಸ ಹಾಳೆಯೊಂದನ್ನು ಇಟ್ಟು ಹೋಗುತ್ತದೆಂಬ ಕಲ್ಪನೆಯೇ ಅದ್ಭುತ.👏👏👏 ಹೌದು. ಅದರಲ್ಲಿ ನಾವು ಬರೆದುಕೊಂಡ ಚಿತ್ರ ಚಂದವಾಗಿದ್ದರೆ, ಈ ವರ್ಷ ಬೆಲ್ಲವೇ ಹೆಚ್ಚಿತ್ತು ಎಂದೋ, ಚಿತ್ರ ಕಲಿಸಿ ಹೋಗಿದ್ದರೆ ಈ ಸಲ ಬೇವಾಯಿತು ಮುಂದೆ ಸಿಹಿ ಸಿಹಿ ಬೆಲ್ಲ ಎಂದು ಹುರಿದುಂಬಿಸುತ್ತಾ, ಉತ್ತೇಜಿಸುತ್ತಾ ಹೊಸ ಕನಸು, ಚೈತನ್ಯ ತುಂಬುವ ಹಬ್ಬ. ನಿಮ್ಮ ಅಮ್ಮನ ಮಾತು ಸರಿಯೇ ಸರಿ. ಇದು ಮಾಡಿಕೊಂಡು,ಕೈ ತುಂಬಾ ತೆಗೆದುಕೊಂಡು, ಬಾಯಿತುಂಬಾ ತಿಂದುಂಡು ತಣಿಯುವ ಹಬ್ಬ.

    Reply
  2. Sowmya.

    ತುಂಬ ಸೊಗಸಾಗಿದೆ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ