Advertisement
ಹಾರುವ ಭಯದ ಕುರಿತು ವೈಶಾಲಿ ಹೆಗಡೆ

ಹಾರುವ ಭಯದ ಕುರಿತು ವೈಶಾಲಿ ಹೆಗಡೆ

ಮೊನ್ನೆ ಕನ್ನಡತಿ ಸಹೋದ್ಯೋಗಿಯೊಬ್ಬಳು ಇತ್ತೀಚಿಗೆ ಹೀಗೆ ವಿಮಾನಗಳು ಬೀಳುವುದು ಜಾಸ್ತಿ ಅಲ್ಲವ? ಕಳೆದ ತಿಂಗಳಷ್ಟೇ ಒಂದು ವಿಮಾನ ಬಿದ್ದಿತ್ತಲ್ಲವ? ಎಂದಳು.  ಅದೇನೋ ಹೌದು. ಇತ್ತೀಚಿಗೆ ವಿಮಾನಗಳು ಬೀಳುವುದೂ ಹೆಚ್ಚು, ಯಾಕೆಂದರೆ ಹಾರುವ ಸಂಖ್ಯೆಗಳೂ ಹೆಚ್ಚು. ಮುಂಚೆಲ್ಲಾ ಮುಂದುವರಿದ ದೇಶಗಳಲ್ಲಿನ ಸೌಕರ್ಯವಾಗಿದ್ದ ಈ ಹಾರಾಟ ಸಾಧನ ಈಗ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಸರ್ವೇ ಸಾಮಾನ್ಯವಾದ ಸಾರಿಗೆ ವಿಧಾನವಾಗಿದೆ. ಹಾಗಾಗಿ ಬೀಳುವ ಸಂಖ್ಯೆಯೂ ಹೆಚ್ಚು ಅಷ್ಟೇ ಎಂದು ನಾನು ನನ್ನನ್ನೇ  ಸಮಾಧಾನಿಸಿಕೊಳ್ಳುವಂತೆ ಅವಳಿಗೆ ಹೇಳಿದರೂ, ವಿಮಾನ ಹತ್ತುವಾಗ ನಡುಗುವ ಹೆಜ್ಜೆ ಮಾತ್ರ ಮತ್ತೂ ನಡುಗುತ್ತದೆ. ಸಪ್ಟೆಂಬರ್ ೧೧ರ ದುರಂತದ ನಂತರ ವಿಮಾನ ಹತ್ತಿ ಇಳಿಯುವವರೆಗೂ ವಿಚಿತ್ರ ಭಯಮಿಶ್ರಿತ ಉದ್ವೇಗ ಆವರಿಸಿಕೊಂಡಿರುತ್ತಿತ್ತು. ವಿಮಾನ ಟೇಕ್ ಆಫ್ ಆಗುವಾಗ ಅರಿವಿಲ್ಲದಂತೆಯೇ.. ಏನೇನೋ ಮಂತ್ರಪಠಣ ನಡೆದಿರುತ್ತಿತ್ತು. ಘಟನೆಯ ತೀವ್ರತೆ ಹಳಸುತ್ತ ಬಂದಂತೆ ಮನದ ಭಯವೂ ಮಾಸುತ್ತ ಬಂದಿತು. ಈಗ ಇನ್ನೊಮ್ಮೆ ಆ ಬಗೆಯ ಸಾವಿನ ಸುಳಿಯಲ್ಲಿ ಸಿಲುಕಬಹುದಾದ ಭಯ ಇಲ್ಲಿನ ಅನಿವಾಸಿ ಭಾರತೀಯರೆಲ್ಲರಲ್ಲೂ ವಿವಿಧ ರೆಂಜ್ ಗಳಲ್ಲಿ ಕಾಣುತ್ತಿದೆ. ಅಲ್ಲಲ್ಲಿ ವಿಮಾನಗಳು ಉರಿದು ಬೀಳುವಾಗ ಪದೇ ಪದೇ ಹಾರಾಡುವ ದೂರದೇಶದ ನಮ್ಮಂಥ ಪ್ರಯಾಣಿಕ ಮನಸ್ಸುಗಳು ವಿಚಲಿತಗೊಳ್ಳುತ್ತವೆ. ಗಾಳಿಯಲ್ಲಿ ಜರುಗಿಬಿಡಬಹುದಾದ ದುರ್ಘಟನೆಯ ಹೆಚ್ಚಿನ ಅಸಹಾಯಕತೆ, ತೀವ್ರತೆ ವಿಮಾನಪ್ರಯಾಣವನ್ನು ಯಾವಾಗಲೂ ಕೊಂಚ ಉದ್ವೇಗಕಾರಿಯಾಗಿಸಿಯೇ ಇವೆ.

ಆದರೆ ಇಂಥ ಭಯಂಕರ ಸಂಗತಿಗಳು ಕಣ್ಮುಂದೆ ನಡೆದಾಗ ಮನೆ ತಲುಪುವವರೆಗಿನ ಮುಗಿಯದ ಉದ್ವೇಗವೆ ಹಿಂಸೆಯಾಗಿಬಿಡುತ್ತದೆ.  ವಿಮಾನ ಏರುವಾಗಿನಕಿಂತ ಇಳಿಯುವಾಗ ನನಗೆ ಭಯ ಹೆಚ್ಚು. ಅದೇ ರನ್ವೆಗಳ ಮೇಲೆ ಬೆಣ್ಣೆ ಮೇಲೆ ಇಳಿದಂತೆ ಲ್ಯಾಂಡಿಂಗ್ ಮಾಡುವ  ಚಾಕಚಕ್ಯ ಪೈಲಟ್ ಗಳಿಗೆ “ವೆರಿ ನೈಸ್ ಲ್ಯಾಂಡಿಂಗ್” ಎಂದು ಪ್ರಯಾಣದ ಕೊನೆಯಲ್ಲಿ ಭೇಷ್ ಎಂದು ಹೇಳಿದ್ದಿದೆ. ಅದೇ ರೀತಿಯಲ್ಲಿ ಎತ್ತಿ ಕುಕ್ಕಿದಂತೆ ವಿಮಾನ ಇಳಿಸುವ ಹುಂಬರನ್ನೂ ದುರುಗುಟ್ಟಿ ನೋಡಿ ಇಳಿದಿದ್ದೇನೆ. ಹಾಗಾಗಿ ಆ ಬಗೆಯಲ್ಲಿ ಕುಕ್ಕಿಸಿಕೊಂಡು ಇಳಿಯುವಾಗ ವಿಮಾನ ಹೊತ್ತಿಹೋದರೆ… ರನ್ ವೆ  ತಪ್ಪಿದರೆ ಎಂದು ಯಾವಾಗಲೂ ಆಗುವ ಭಯ ಇನ್ನು ಮುಂದೆ ಪ್ರಯಾಣಿಸುವಾಗ ಹೇಗಾದರೂ ಸರಿ, ಒಟ್ಟಿನಲ್ಲಿ ಜೀವಹಾನಿಯಾಗಿಸದೆ ಇಳಿಸಿದರೆ ಸಾಕು ಎಂದು ಪ್ರಾರ್ಥಿಸಿಕೊಳ್ಳುವಲ್ಲಿ ಬಂದು ನಿಲ್ಲುತ್ತದೆಯೇನೋ.

ಪ್ರಯಾಣಿಸುವಾಗೆಲ್ಲ ಎಷ್ಟೆಲ್ಲಾ ಬಾರಿ ಹಾರಿದ್ದಾಗಿದೆ, ಅದೇ ಸುರಕ್ಷಾ ಸೂತ್ರಗಳು, ಅವೇ ಸೂಚನೆಗಳು, ನಿಯಮಗಳು ಹೇಳಿದ್ದೆ ಹೇಳುತ್ತಾರೆ ಬಿಡು ಎಂದು ನಾನು ಅಸಡ್ಡೆಯಲ್ಲಿ ಪುಸ್ತಕ ಹಿಡಿದೋ, ಮಕ್ಕಳಿಗೆ DVD ಹಾಕಿಕೊಡುತ್ತಲೋ ಕೂತುಬಿಡುತ್ತೇನೆ. ಆದರೆ ನನ್ನ ಸ್ವಭಾವದ ತದ್ವಿರುದ್ಧ ಅತೀ ಜಾಗರೂಕ ನನ್ನ ಗಂಡ ಎಮರ್ಜೆನ್ಸಿ ಬಾಗಿಲುಗಳೆಲ್ಲಿ, ಒಕ್ಸಿಜನ್ ಮಾಸ್ಕ್ ಎಲ್ಲಿಂದ ಬೀಳುತ್ತದೆ, ನೀರಿಗೆ ಬಿದ್ದರೆ ಅವರು ತೇಲುವ ಸಾಧನವಾಗಿ ಸೀಟಿನ ಕುಶನ್ ಎಂದು ಹೇಳಿದರೋ, ಅಥವಾ ಮಕ್ಕಳಿಗೆ ಬೇರೆ ಜೀವರಕ್ಷಕ ತೇಲುಕವಚಗಳನ್ನು ಒದಗಿಸುತ್ತಾರೋ, ಭೂಮಿಯ ಮೇಲೆ ನಡೆಯುವದಕ್ಕಿಂತಲೂ ಹೆಚ್ಚಿನ ಆತ್ಮವಿಶ್ವಾಸ ತನ್ನ ಈಜಿನ ಮೇಲಿರುವ ಅವನು ಅಟ್ಲಂಟಿಕ್ ಮಹಾಸಾಗರದಲ್ಲಿ ಬಿದ್ದರೆ ಭಾರೀ ಚಳಿ, ಅರಬೀ ಸಮುದ್ರದಲ್ಲಾದರೆ ಚಿಕ್ಕ ಮಕ್ಕಳಿಬ್ಬರನ್ನೂ ಹಿಡಿದುಕೊಂಡು ಈಜಿಬಿಡಬಲ್ಲೆ, ಸುಮಾರಾಗಿ ಈಜುಬರುವ ನನಗೆ ಹೇಗೋ ಬದುಕಿಕೊಳ್ಳುವಷ್ಟು ಈಜುತ್ತೀ ತಾನೇ ಎಂದೆಲ್ಲ ಕೇಳಿ ಇತ್ಯಾದಿ ವಿವರಗಳನ್ನು ಪ್ರತಿ ಬಾರಿಯೂ ಖಚಿತಪಡಿಸಿಕೊಳ್ಳುತ್ತಾನೆ. ಪ್ರಯಾಣದಲ್ಲಿ ಕೊಂಚ ಟರ್ಬುಲನ್ಸ್ ಇದ್ದರೂ, ಮಕ್ಕಳನ್ನು ಭದ್ರವಾಗಿ ಅವಚಿಕೊಳ್ಳುತ್ತಾನೆ. ಏನಾಗುತ್ತಿದೆ ಎಂದು ಗಗನಸಖಿಯರಲ್ಲಿ ಇಪ್ಪತ್ತು ಸಾರಿ  ಕೇಳುತ್ತಾನೆ. ಇವನ್ನೆಲ್ಲ ಅಣಕಿಸುತ್ತ ನಾನು.. ಸುಮ್ನೆ ಕೂತ್ಕೋ ಅತಿಯಾಯಿತು ನಿಂದು ಎಂದುಬಿಡುತ್ತಿದ್ದೆ. ಅದು ಬರೀ ಒಂದು ಗಂಟೆಯ ಪ್ರಯಾಣವಾಗಲಿ ಇಲ್ಲ ಒಂದು ದಿನದ ಪ್ರಯಾಣವಾಗಲಿ ಭಯ ಒಂದೇ. ಅದರಲ್ಲೂ ನಾನು ಮಕ್ಕಳು ಅಷ್ಟೇ ಅವನನ್ನು ಬಿಟ್ಟು ಪ್ರಯಾಣಿಸುವಾಗ ಆ ಭಯ ಇನ್ನೂ ಹೆಚ್ಚು.

ಭಾರತದಲ್ಲಿ ಒಂದು ವಾರ ಹೆಚ್ಚು ಉಳಿಯುತ್ತೇನೆ ಹೇಗೂ ರಜ ಇದೆ.. ನಾನು ಒಂದು ವಾರ ಮುಂಚೆ ಹೊರಡುತ್ತೇನೆ ಇಲ್ಲವೇ ನೀನು ಮುಂಚೆ ವಾಪಾಸ್ ಹೋಗು ಎಂದೆಲ್ಲ ಹೇಳಿದರೂ ಜಗ್ಗುವುದಿಲ್ಲ. ಕಾರಣ ಇಷ್ಟೇ ನೀವೆಲ್ಲ ಪ್ರಯಾಣಿಸುವ ವಿಮಾನಕ್ಕೇನಾದರೂ ಆದರೆ? ನಿಂಗೆ ಸರಿಯಾಗಿ ಈಜು ಬರುವುದಿಲ್ಲ. ಅಥವಾ ಎಲ್ಲ ಭಸ್ಮವಾಯಿತು ಎಂದೇ ಇಟ್ಟುಕೋ.. ನಾನೊಬ್ಬನೇ ಹೇಗೆ ಇರುವುದು.. ಸತ್ತರೆ ಎಲ್ಲ ಒಟ್ಟಿಗೆ ಸಾಯುವ. ಇಂಥ ನೆಗೆಟಿವಿಟಿಯ ಪೂರ್ವತಯಾರಿ ಎಂದಾದರೆ ಬೇಡವೆಂದರೂ ಹಾರುವ ಹೆದರಿಕೆ ಹುಟ್ಟಿಬಿಡುತ್ತದೆ. ಆದರೆ ಮೊನ್ನಿನ ಸಂದರ್ಭಗಳಂತಲ್ಲಿ ನನ್ನ ಅಸಡ್ದೆಗೂ, ಅವನ ಮುಂಜಾಗರೂಕತೆಗೂ ಯಾವ ವ್ಯತ್ಯಾಸವೂ ಇಲ್ಲವೇನೋ.

ಮೊದಲಬಾರಿ ವಿಮಾನದಲ್ಲಿ ಪ್ರಯಾಣಿಸುವಾಗ ಮನಸ್ಸಿನ ತುಂಬಾ ಇದ್ದದ್ದು ಹಾರಾಟದ ಸಂಭ್ರಮ. ಎದುರುಗೊಳ್ಳಲು ಕಾಯುತ್ತಿದ್ದವನ ಸೇರುವ ಹಂಬಲ. ಹೊಸನೆಲದ ಹೊಸಜೀವನದ ಕನಸುಗಳು. ಭಯದ ಸಣ್ಣ ಸೆಳಕೂ ಮನದಲ್ಲಿರಲಿಲ್ಲ. ಜವಾಬ್ದಾರಿಗಳು ಹೆಚ್ಚಿದಂತೆ,  ಮೋಹಪಾಶ ಬಿಗಿದುಕೊಳ್ಳುತ್ತ ಹೋದಂತೆ ಹಾರುವ ಲೋಹದ ಹಕ್ಕಿಯ ಬಣ್ಣದ ರೆಕ್ಕೆಯ ಎಡೆಯಲ್ಲೆಲ್ಲೋ ಬೇಡವಾದದ್ದು ಇದ್ದು ಕಾಡಿದರೆ ಎಂದು ಅವ್ಯಕ್ತ ಶಂಕೆಯೂ ಹೆಚ್ಚುತ್ತ ಹೋಗುತ್ತಿದೆ. ಪುರಾವೆಯಂತೆ ಅಲ್ಲಲ್ಲಿ ಒಡೆದುಬೀಳುತ್ತಿರುವ ವಿಮಾನಗಳ ಸುದ್ದಿಗಳು. ಹೇಗೆ ನಮ್ಮ ದೇಹಶಕ್ತಿಯಿಂದ ನಡೆಯುತ್ತೇವೋ, ನೀರಿನಲ್ಲಿ ಈಜುತ್ತೇವೋ, ಹಾಗೆ ಗಾಳಿಯಲ್ಲಿ ತೇಲಲು ಬಂದಿದ್ದರೆ, ವಾಯುಸಂಚಾರದ ಭಯದ ತೀವ್ರತೆ ಕೂಡ ಬಸ್ ಪ್ರಯಾಣದಷ್ಟೇ ಇರುತ್ತಿತ್ತೇನೋ.  ಆದರೆ ಈ ಬಾರಿ ಏನ್ ಎಚ್ -೧೭ರಲ್ಲಿ ಹೋದಾಗ ರಸ್ತೆ ಸಂಚಾರದ ಭಯವೂ ವಾಯುಯಾನದ ಭಯಕ್ಕೆ ಸರಿಗಟ್ಟಿತ್ತು, ಆ ಮಾತು ಬೇರೆ. ಲಟಾರಿ ಬಸ್ಸುಗಳು, ರಸ್ತೆಗಳು, ಹಳೆ ಪಾರ್ಟುಗಳನ್ನೇ ಇನ್ನೆಲ್ಲೋ ಉಪಯೋಗಿಸುವ ಮೆಕ್ಯನಿಕ್ಕುಗಳನ್ನು ಚಿಕ್ಕಂದಿನಿಂದಲೂ ನೋಡಿ ಬೆಳೆದಿರುವ ನನಗೆ ನಮ್ಮ ವ್ಯವಸ್ಥೆ ವಿಮಾನ, ನಿಲ್ದಾಣ, ತಾಂತ್ರಿಕತೆಯ ವಿಷಯಗಳಲ್ಲಿ ಹೆಚ್ಚಿನ ಗುಣಮಟ್ಟವನ್ನು ಕಾದುಕೊಳ್ಳುತ್ತದೆ ಎಂದು ಖಂಡಿತಾ  ನಂಬಿಕೆಯಿಲ್ಲ. ಭಾರತದ ಒಳ ವಿಮಾನ ಪ್ರಯಾಣ ಮತ್ತೂ ಆತಂಕಕಾರಿ ಅನುಭವ. ನೂರಾರು ಕ್ಯರಿಯರ್ ಗಳಿರುವ ಇಂದಿನ ಪೈಪೋಟಿಯ ಯುಗದಲ್ಲಿ ಲಾಭವೊಂದೆ ಉದ್ದೇಶವಾಗಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಮ್ಮನ್ನೆಲ್ಲ ಎಲ್ಲೆಲ್ಲಿಗೆ ತಲುಪಿಸಿಬಿಡುತ್ತಾರೋ.

ಈ ಭಯಗಳನ್ನು ಕಡೆಗಣಿಸುವುದೇ ನಾನು ಕಂಡುಕೊಂಡ ಉಪಾಯ, ಪಲಾಯನವಾದ. ಆಗುವುದು ಆಗೇ ತೀರುತ್ತದೆ, ಕೊಲ್ಲುವವನಿಗಿಂತ ಕಾಯುವವ ದೊಡ್ಡವನು ಎಂದು ನಿರುಮ್ಮಳವಾಗಿಬಿಡುತ್ತೇನೆ. ಎಲ್ಲ ಆತಂಕಗಳಿಗೂ ಉದಾಸೀನ ಮಾಡಿ ಉಫ್ಫ್ ಎಂದುಬಿಡುತ್ತೇನೆ. ನನ್ನೂರ ಹಿತ್ತಲಲ್ಲೇ ಕರಟಿಹೋದ ಆ ವಿಮಾನದಲ್ಲಿ ಎಷ್ಟೆಲ್ಲಾ ಅಪ್ಪ ಅಮ್ಮ ತಮ್ಮ ಮಕ್ಕಳನ್ನು ಅವಚಿಕೊಂಡರೋ, ಎಷ್ಟೊಂದು ಮಕ್ಕಳು ಅಪ್ಪ ಅಮ್ಮನನ್ನು ನೆನೆದರೋ, ಗಂಡಹೆಂಡತಿಯರು ಗಟ್ಟಿಯಾಗಿ ಕೈಹಿಡಿದುಕೊಂಡರೋ, ಏನೂ ಆಗುವುದಿಲ್ಲ ಎಲ್ಲ ಸರಿಯಾಗುತ್ತದೆ ಎಂದು ಒಬ್ಬರನ್ನೊಬ್ಬರು ಸುಳ್ಳೇ ಸಮಾಧಾನಿಸಿದರೋ, ಅಥವಾ ಏನೊಂದು ಯೋಚಿಸುವುದರೊಳಗೆ ಎಲ್ಲ ಮುಗಿದುಹೊಯಿತೋ. ನಮ್ಮ ಹಿಡಿತದಲ್ಲಿಲ್ಲದ ಆಗುಹೋಗುಗಳ ಬಗ್ಗೆ ಎಷ್ಟು ಚಿಂತಿಸಿದರೂ ಜಗತ್ತು ನಿಲ್ಲುವುದಿಲ್ಲ. ಸಾವಿನ ಮನೆಯ ಮೂಲೆಯಲ್ಲೂ ಕಾಲ ಸುಮ್ಮನೆ ಕುಳಿತಿರುವುದಿಲ್ಲ. ಏನೆಲ್ಲಾ ಬಗೆಯಲ್ಲಿ ಭವಿಷ್ಯದ ಕನಸುಗಳನ್ನು ಕಸೂತಿ ಹಾಕುವ ಬದುಕು ಎಷ್ಟೊಂದು ಕ್ಷಣಿಕ! ನಮ್ಮ ನಿಯಂತ್ರಣವೇ ಇಲ್ಲದ ಈ ಜೀವದ ಬಗ್ಗೆ ಎಷ್ಟೊಂದು ಆಸೆ! ಹಾಗೆಂದು ಕೈಚೆಲ್ಲಿ ಕೂತರೆ ಎಲ್ಲಿದೆ ಜೀವನ! ಉರಿದುಬಿದ್ದ ವಿಮಾನಗಳನ್ನು ನೋಡುತ್ತಲೇ ಮತ್ತಷ್ಟು ವಿಮಾನಗಳು ಹಾರುತ್ತವೆ ಪ್ರಿಯರನ್ನು ನೋಡುವ ಇನ್ನಷ್ಟು ಕನಸುಗಳನ್ನು ಹೊತ್ತೊಯ್ದು. ಅಲ್ಲೆಲ್ಲೋ ಕಾಯುತ್ತವೆ ಇನ್ನೊಂದಿಷ್ಟು ಕಾತರದ ಕಣ್ಣುಗಳು.

About The Author

ವೈಶಾಲಿ ಹೆಗಡೆ

ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ