Advertisement
ಹಿರೇಹಡಗಲಿಯ ಕಲ್ಲೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಹಿರೇಹಡಗಲಿಯ ಕಲ್ಲೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸುಪರ್ದಿಗೊಳಪಟ್ಟಿರುವ ಕಲ್ಲೇಶ್ವರ ದೇವಾಲಯವು ಇದೀಗ ಸುಸ್ಥಿತಿಯಲ್ಲಿ ಕಂಗೊಳಿಸುವಂತಾಗಿದೆ. ಇದೊಂದು ದ್ವಿಕೂಟಾಚಲ ದೇವಾಲಯ. ಆವರಣದೊಳಗೆ ಕಾಲಿರಿಸುತ್ತಿರುವಂತೆಯೇ ಮಂಟಪವೊಂದು ಕಾಣುತ್ತದೆ. ಇಲ್ಲಿ ದೊಡ್ಡದೊಂದು ನಂದಿಯ ದರ್ಶನವಾಗುತ್ತದೆ. ಘಂಟಾಮಾಲೆ, ಗೆಜ್ಜೆಯ ಸರಗಳು, ಕಂಕಣಾದಿಗಳಿಂದ ಶೋಭಿಸುತ್ತ ಶಿವನ ದೇಗುಲಕ್ಕೆ ಅಭಿಮುಖವಾಗಿ ಕುಳಿತ ನಂದಿಯ ಈ ಕಪ್ಪುಕಲ್ಲಿನ ವಿಗ್ರಹ ಮುದ್ದಾಗಿದೆ. ಮಂಟಪದ ಕಂಬಗಳು ವಿಶಿಷ್ಟ ಚಾಲುಕ್ಯಶೈಲಿಗನುಗುಣವಾಗಿ ತಿರುಗಣೆಯ ಕೆತ್ತನೆಯೊಡನೆ ಕೆಳಭಾಗದ ಚೌಕದೊಳಗೆ ವಿವಿಧಶಿಲ್ಪರೂಪಗಳಿಂದಲೂ ಶೋಭಿಸುತ್ತವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂರನೆಯ ಕಂತು

 

ಕಲ್ಯಾಣದ ಚಾಲುಕ್ಯ ಅರಸರೂ ಅವರ ಅಧಿಕಾರಿಗಳೂ ತಮ್ಮ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಶಿವದೇಗುಲಗಳನ್ನೇ ಕಟ್ಟಿಸಿದಂತೆ ತೋರುತ್ತದೆ. ದೇವಾಲಯವನ್ನು ಕಟ್ಟಿಸಿದವರ ಹೆಸರನ್ನೇ ಅಲ್ಲಿನ ಶಿವನ ಹೆಸರಿಗೂ ವಿಶೇಷಣವಾಗಿ ಜೋಡಿಸುವ ರೂಢಿಯಿದ್ದಿತು. ಸೂಡಿಯ ಪ್ರಾಂತ್ಯವನ್ನಾಳಿದ ಅಕ್ಕಾದೇವಿ ಕಟ್ಟಿಸಿದ ದೇಗುಲದ ಶಿವನು ಅಕ್ಕೇಶ್ವರನೆಂದು ಹೆಸರು ಪಡೆದದ್ದು ಒಂದು ಉದಾಹರಣೆ. ಆದರೆ, ಜನಮನದಿಂದ ದೇವಾಲಯ ನಿರ್ಮಾತೃಗಳ ಹೆಸರು ಮರೆಯುತ್ತಿರುವಂತೆಯೇ ಈ ಬಗೆಯ ವಿಶೇಷಣಗಳೂ ಅರ್ಥ ಕಳೆದುಕೊಳ್ಳುತ್ತವೆ. ಅಂಥ ಸಂದರ್ಭದಲ್ಲಿ ಕಲ್ಲುಮಹೇಶ್ವರನೆಂಬ ಸಾಮಾನ್ಯಹೆಸರು ಪ್ರಚಲಿತವಾಗಿ ಕಲ್ಮೇಶ್ವರ ಎಂದು ಭ್ರಂಶವಾಗಿ ಕೊನೆಗೆ ಕಲ್ಲೇಶ್ವರನ ಹೆಸರಿನೊಡನೆ ನೆಲೆಗೊಳ್ಳುತ್ತದೆ. ಹೂವಿನ ಹಡಗಲಿಯ ಆಸುಪಾಸಿನಲ್ಲಿ ಚಾಲುಕ್ಯಕಾಲದ ಇಂಥ ಹಲವು ಕಲ್ಲೇಶ್ವರ ಗುಡಿಗಳನ್ನು ಕಾಣಬಹುದು.


ಹೂವಿನ ಹಡಗಲಿಯಿಂದ ಹದಿನೈದು ಕಿಮೀ ದೂರದಲ್ಲಿರುವ ಹಿರೇ ಹಡಗಲಿಯಲ್ಲೂ ಒಬ್ಬ ಕಲ್ಲೇಶ್ವರನು ನೆಲೆಸಿದ್ದಾನೆ. ಹನ್ನೊಂದನೆಯ ಶತಮಾನದ ಮಧ್ಯಭಾಗದಲ್ಲಿ ಕಲ್ಯಾಣ ಚಾಲುಕ್ಯರ ದೊರೆಯಾಗಿದ್ದ ತ್ರೈಲೋಕ್ಯಮಲ್ಲದೇವನ ಅಮಾತ್ಯ ದೇಮರಸನು ಈ ದೇವಾಲಯವನ್ನು 1057ರಲ್ಲಿ ಕಟ್ಟಿಸಿದನು. ರೂಢಿಯಂತೆ ಆತನ ಹೆಸರಿನಿಂದಲೇ ಈ ಗುಡಿಯನ್ನು ದೇಮೇಶ್ವರ ದೇವಾಲಯವೆಂದು ಕರೆಯಲಾಯಿತು. ಕಾಲಾಂತರದಲ್ಲಿ ಕಲ್ಲೇಶ್ವರನ ಹೆಸರೇ ಗಟ್ಟಿಯಾಗಿ ಉಳಿಯಿತು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸುಪರ್ದಿಗೊಳಪಟ್ಟಿರುವ ಕಲ್ಲೇಶ್ವರ ದೇವಾಲಯವು ಇದೀಗ ಸುಸ್ಥಿತಿಯಲ್ಲಿ ಕಂಗೊಳಿಸುವಂತಾಗಿದೆ. ಇದೊಂದು ದ್ವಿಕೂಟಾಚಲ ದೇವಾಲಯ. ಆವರಣದೊಳಗೆ ಕಾಲಿರಿಸುತ್ತಿರುವಂತೆಯೇ ಮಂಟಪವೊಂದು ಕಾಣುತ್ತದೆ. ಇಲ್ಲಿ ದೊಡ್ಡದೊಂದು ನಂದಿಯ ದರ್ಶನವಾಗುತ್ತದೆ. ಘಂಟಾಮಾಲೆ, ಗೆಜ್ಜೆಯ ಸರಗಳು, ಕಂಕಣಾದಿಗಳಿಂದ ಶೋಭಿಸುತ್ತ ಶಿವನ ದೇಗುಲಕ್ಕೆ ಅಭಿಮುಖವಾಗಿ ಕುಳಿತ ನಂದಿಯ ಈ ಕಪ್ಪುಕಲ್ಲಿನ ವಿಗ್ರಹ ಮುದ್ದಾಗಿದೆ. ಮಂಟಪದ ಕಂಬಗಳು ವಿಶಿಷ್ಟ ಚಾಲುಕ್ಯಶೈಲಿಗನುಗುಣವಾಗಿ ತಿರುಗಣೆಯ ಕೆತ್ತನೆಯೊಡನೆ ಕೆಳಭಾಗದ ಚೌಕದೊಳಗೆ ವಿವಿಧಶಿಲ್ಪರೂಪಗಳಿಂದಲೂ ಶೋಭಿಸುತ್ತವೆ.

ನಂದಿಮಂಟಪದ ಹಿಂಭಾಗದಲ್ಲಿ ಚಿಕ್ಕ ದೇಗುಲ. ಲಲಾಟದಲ್ಲಿ ಗಜಲಕ್ಷ್ಮಿಯನ್ನು ಹೊಂದಿದ ಸೊಗಸಾದ ಬಾಗಿಲವಾಡ. ವಜ್ರ, ಹೂಬಳ್ಳಿ, ಸ್ತಂಭ, ನರ್ತಕಿಯರನ್ನು ಸೂಕ್ಷ್ಮವಾಗಿ ಮೂಡಿಸಿರುವ ಪಟ್ಟಿಕೆಗಳು. ಗುಡಿಯಲ್ಲಿ ಸೂರ್ಯದೇವನ ವಿಗ್ರಹವಿದೆ. ಪೀಠಭಾಗದಲ್ಲಿ ಸಪ್ತಾಶ್ವಗಳನ್ನೂ ಸೂರ್ಯನ ಅಕ್ಕಪಕ್ಕಗಳಲ್ಲಿ ಉಷೆಪ್ರತ್ಯುಷೆಯರನ್ನೂ ಕಾಣಬಹುದು.

ಮುಖ್ಯದೇವಾಲಯದ ಬಾಗಿಲವಾಡದ ಕೆತ್ತನೆ ಇನ್ನಷ್ಟು ಸೊಗಸಿನದು. ಗಜಲಕ್ಷ್ಮಿ ಪ್ರತ್ಯೇಕ ಮಂಟಪದಲ್ಲಿರುವಂತೆ ಮುಂಚಾಚಿದ ಲಲಾಟಭಾಗ. ವಜ್ರ, ನಾಗ-ನಾಗಿಣಿ, ಹೂಬಳ್ಳಿಗಳಲ್ಲಿ ಗಂಧರ್ವರು, ಸ್ತಂಭ, ಗಾಯಕನರ್ತಕಿಯರೇ ಮೊದಲಾದವರು ಆರು ಪಟ್ಟಿಕೆಗಳಲ್ಲಿ ಚಿತ್ರಿತವಾಗಿರುವ ಬಗೆ ಈ ಮಾದರಿಯ ಅತ್ಯುತ್ತಮ ಬಾಗಿಲವಾಡಗಳ ಕೆತ್ತನೆಗೆ ಸಮವೆನ್ನಿಸುವಂತಹುದು. ಒಳಗುಡಿಯಲ್ಲಿರುವ ವಿಗ್ರಹಗಳು ಅಧ್ಯಯನಶೀಲರಿಗೆ ಆಸಕ್ತಿ ಮೂಡಿಸುವಂಥವು.

ಚತುರ್ಭುಜ ಗಣಪತಿಯು ಎಡಗಾಲನ್ನು ಮಡಿಚಿಕೊಂಡು ಕುಳಿತ ಭಂಗಿ ಮೋಹಕವಾಗಿದೆ. ಕಿರೀಟಕ್ಕೆ ಬದಲು ಶಿರೋಭೂಷಣವನ್ನು ತೊಟ್ಟ ಗಣೇಶನ ಕಿವಿಯ ಪದರಗಳೂ ಕಾಣುವಂತೆ ಚಿತ್ರಿಸಿರುವ ಪರಿ ಅನನ್ಯ. ಕೇಶವ ಹಾಗೂ ಮಹಿಷಮರ್ದಿನಿಯರ ಶಿಲ್ಪಗಳು ಭಗ್ನವಾಗಿವೆ. ಇಲ್ಲಿಯೇ ವೀರಭದ್ರ ಹಾಗೂ ಸಪ್ತಮಾತೃಕೆಯರ ಶಿಲ್ಪಗಳೂ ಇವೆ. ಸ್ಥಾನಕ ಭಂಗಿಯಲ್ಲಿರುವ ಶಿವಪಾರ್ವತಿಯರ ವಿಗ್ರಹದ ಕೇಶ ಹಾಗೂ ವಸ್ತ್ರವಿನ್ಯಾಸ ಗಮನಸೆಳೆಯುವಂತಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗವು ನಾಲ್ಕೈದು ಸ್ತರಗಳಷ್ಟು ಎತ್ತರವಾದ ಪಾಣಿಪೀಠದ ಮೇಲಿದೆ. ಶಿವನಿಗೆ ಅಭಿಮುಖವಾಗಿ ಅಂತರಾಳದಲ್ಲಿ ಚಿಕ್ಕದೊಂದು ನಂದಿಯ ವಿಗ್ರಹವೂ ಇದೆ. ಗರ್ಭಗುಡಿಯ ಬಾಗಿಲಿಗೆ ಹೊಂದಿಕೊಂಡಂತೆ ಉತ್ತಮ ಕೆತ್ತನೆಯುಳ್ಳ ಪಟ್ಟಿಕೆಗಳೂ, ಜಾಲಂದ್ರಗಳೂ ತೋರಣಗಳೂ ಕಂಡುಬರುತ್ತವೆ.

ದೇಗುಲದ ಹೊರಭಿತ್ತಿಯ ತುಂಬ ಅಲಂಕರಣಗಳಿರುವಂತೆ ಭಾಸವಾಗುತ್ತದೆ. ಕೆಲವೆಡೆ ಕಟ್ಟಡದ ಕೆಳಭಾಗದಿಂದಲೇ ಕೀರ್ತಿಮುಖದ ಅಲಂಕರಣದೊಳಗೆ ಶಿಲ್ಪಗಳನ್ನು ರಚಿಸಿದೆ. ಒಳಹೊರಗೆ ಚಾಚಿಕೊಂಡ ಪಟ್ಟಿಕೆಗಳ ಮೇಲಕ್ಕೆ ನಡುಭಿತ್ತಿಯಲ್ಲಿ ಕಿರುಗೋಪುರಗಳನ್ನೂ ಕೀರ್ತಿಮುಖದ ಅಲಂಕಾರಗಳನ್ನೂ ಅಳವಡಿಸಿದೆ. ಅಲ್ಲಲ್ಲಿ ಮಂಟಪಗಳನ್ನು ರಚಿಸಿ ಕಿರುಸೂರುಗಳನ್ನೂ ಕಲ್ಪಿಸಿದೆ. ಈ ಗೂಡುಗಳಲ್ಲಿ ಹಿಂದೆ ದೇವತಾಶಿಲ್ಪಗಳಿದ್ದಿರಬಹುದು. ಶಿಖರ ಮೂಲರೂಪದಲ್ಲಿ ಉಳಿದಿಲ್ಲವಾದರೂ ಸ್ತೂಪಿ, ಕಳಶಗಳು ಸುಸ್ಥಿತಿಯಲ್ಲಿವೆ. ನಾಲ್ಕೈದು ಸ್ತರಗಳ ಚಾಲುಕ್ಯಶೈಲಿಯ ಶಿಖರಕ್ಕೊಂದು ರೂಪಕೊಡಲು ಇಲಾಖೆಯವರು ಶ್ರಮಿಸಿದ್ದಾರೆ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಶಿಖರದ ಕೀರ್ತಿಮುಖಗಳಲ್ಲಿ ಹಲವು ದೇವತಾಮೂರ್ತಿಗಳಿವೆ. ಈ ಕೀರ್ತಿಮುಖ ವಿನ್ಯಾಸಗಳು ಸೂರಂಚಿನ ಕೈಪಿಡಿಯಲ್ಲೂ ಮುಂದುವರೆದಿದ್ದು ಕೈಪಿಡಿಯು ಕೆಳ ಅಂಚಿನಲ್ಲಿ ಅರಳಿದ ತಾವರೆಯ ಹೂವಂತೆ ವಿನ್ಯಾಸಗೊಂಡಿರುವುದೊಂದು ವಿಶೇಷ.

ಹಿರೇ ಹಡಗಲಿಗೆ ಬರುವವರು ಇಲ್ಲೇ ಒಂಬತ್ತು ಕಿಮೀ ದೂರದಲ್ಲಿರುವ ಮಾಗಳ ಗ್ರಾಮದ ಪುರಾತನ ದೇವಾಲಯಗಳನ್ನೂ ನೋಡಿಕೊಂಡು ಬರಬಹುದಾಗಿದೆ.

About The Author

ಟಿ.ಎಸ್. ಗೋಪಾಲ್

ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ