Advertisement
ಹುಲಿ ಚಿರತೆಗಳ ಹುಡುಕಾಡುತ್ತ ಕಬಿನಿ ಅರಣ್ಯದಲ್ಲಿ..

ಹುಲಿ ಚಿರತೆಗಳ ಹುಡುಕಾಡುತ್ತ ಕಬಿನಿ ಅರಣ್ಯದಲ್ಲಿ..

ಸಫಾರಿಯ ಹುಮ್ಮಸ್ಸು ಎಲ್ಲರಲ್ಲಿಯೂ ಇತ್ತು. ಗಾಡಿಯಲ್ಲಿ ಕುಳಿತವರಲ್ಲಿ ಒಂದಷ್ಟು ಜನ ಆಗಲೇ “ಟೈಗರ್… ಟೈಗರ್…” ಎಂಬ ಜಪ ಮಾಡಲು ಆರಂಭಿಸಿದ್ದರು. ನಾವು ಕುಳಿತಿದ್ದ ಗಾಡಿ ಕಾಡ ಗೇಟಿನ ಒಳಗೆ ನುಗ್ಗಿ ಕಾಲು ಕಿಲೋಮೀಟರ್‌ ಸಾಗಿತ್ತಷ್ಟೇ.. ದೂರದಲ್ಲಿ ಚಿರತೆಯೊಂದು ಕಾಣಿಸಿತು. ಗಾಡಿ ಅದರತ್ತ ಮೆಲ್ಲಗೆ ತೆರಳಿ ನಾವೆಲ್ಲ ಅದನ್ನು ಕಣ್ಣು-ಕ್ಯಾಮರಾ ಕಣ್ಣಿನೊಳಗೆ ತುಂಬಿಕೊಳ್ಳಬಹುದೇನೋ ಅಂತ ಆಸೆಪಟ್ಟುಕೊಳ್ಳುವಷ್ಟರಲ್ಲಿ ಗಾಡಿಯ ಚಾಲಕ ಅತೀ ಉತ್ಸಾಹದಲ್ಲಿ ಗಾಡಿ ಅದರತ್ತ ಚಲಾಯಿಸಿದ. ವನ್ಯಜೀವಿ ದರ್ಶನಕ್ಕಾಗಿ ಪ್ರವಾಸ ಹೊರಟ ಅನುಭವವನ್ನು ನವಿರಾಗಿ ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್

 

ಕಾಣಿರೇ… ನೀವು ಕಾಣಿರೇ…

ಈ ಕೋವಿಡ್‌ ಅಲೆಯ ಭಯಭೀತಿಯ ದಿನಗಳಲ್ಲಿ ಸರಿಯಾಗಿ ಎಲ್ಲೂ ಓಡಾಡಲಾಗದೇ, ಕಳೆದ ವಾರ ಸಫಾರಿಗೆ ಹೋಗುವ ಯೋಜನೆಯೊಂದು ಸಿದ್ಧವಾದಾಗ, ನಾನೂ ಇರುವುದೆಲ್ಲ ಬಿಟ್ಟು ಎನ್ನುವಂತೆ ಎದ್ದು ಹೊರಟಿದ್ದೆ. ನಾಗರಹೊಳೆ ಟೈಗರ್‌ ರಿಸರ್ವ್‌ನ ಕಬಿನಿ ಫಾರೆಸ್ಟ್‌ನಲ್ಲಿ ಬೆಳಗ್ಗಿನ ಸಫಾರಿ ಆರಂಭವಾಗೋದು ೬ ಗಂಟೆಗೆ. ನಾವು ಉಳಿದುಕೊಂಡಿದ್ದ ಲಾಡ್ಜು ಅದರಿಂದ ಸುಮಾರು ಹದಿನೈದು ಕಿಮಿ ದೂರದಲ್ಲಿತ್ತು. ಹಾಗಾಗಿ ಬೆಳಗ್ಗೆ ೪.೧೫ ಕ್ಕೆ ಎದ್ದು ಸಿದ್ಧವಾಗಿ ಕಾಕನಕೋಟೆ ಸೆಂಟರ್‌ಗೆ ತೆರಳಿದೆವು. ಅಲ್ಲಿ ತಲುಪಿ ಕಾರಿನಿಂದಿಳಿದು, ಚಳಿ ಚೂರು ಮೈಗೆ ತಾಕಿದಾಗಲೇ, ಸಫಾರಿಗೆ ಹೋಗುವ ಉತ್ಸಾದಲ್ಲಿ ಎತ್ತಿಟ್ಟುಕೊಂಡಿದ್ದ ಶ್ರಗ್ಗನ್ನು ಲಾಡ್ಜಿನಲ್ಲೇ ಮರೆತು ಬಂದಿದ್ದೀನಿ ಅಂತ ಖಾತ್ರಿಯಾಯಿತು. ಆದರೂ ಇದು ನನ್ನ ಎರಡನೇ ಸಲದ ಸಫಾರಿಯಾದ್ದರಿಂದ ಪ್ರಾಣಿಗಳನ್ನು ಕಾಡಿನಲ್ಲೇ ನೋಡುವ ಖುಷಿಗೆ ಹಾಗೂ ಸ್ನೇಹಿತರ ಗುಂಪಿನಲ್ಲಿ ನಡೆಯುತ್ತಿದ್ದ ಮಾತು ಕತೆಗಳ ನಡುವಲ್ಲಿ ಚಳಿ ಅಷ್ಟೊಂದು ಬಾಧಿಸಲಿಲ್ಲ. ಆರು ಗಂಟೆಗೂ ಮುಂಚೆಯೆ ಬಂದು ನಿಂತಿದ್ದ ಕ್ಯಾಂಟರ್‌ ನಲ್ಲಿ ಬಹುತೇಕ ಸೀಟುಗಳು ಭರ್ತಿಯಾಗಿದ್ದವು. ಹಿಂದಿನ ಎರಡು ವಾರಗಳಲ್ಲಿ ವೀಕೆಂಡ್‌ ಕರ್ಫ್ಯೂ ಇದ್ದ ಕಾರಣ ಹಲವಾರು ಮಂದಿ ಕೆಲಸಗಳಿಗೆ ರಜೆಯನ್ನು ಹಾಕಿಯೇ, ಪ್ರಾಣಿಗಳನ್ನು ಕಂಡು, ಮನ ಹಗುರಾಗಿಸಿಕೊಳ್ಳಲು ಬಂದಿದ್ದರು. ಬಂದವರಲ್ಲಿ ಬಹುತೇಕ ಜನ ಯುವಕರು ಮತ್ತು ಛಾಯಾಗ್ರಾಕರೇ ಇದ್ದರು.

ಗಾಡಿಯಲ್ಲಿ ಕುಳಿತವರಲ್ಲಿ ಒಂದಷ್ಟು ಜನ ಆಗಲೇ “ಟೈಗರ್… ಟೈಗರ್…” ಎಂಬ ಜಪ ಮಾಡಲು ಆರಂಭಿಸಿದ್ದರು. ನಾವು ಕುಳಿತಿದ್ದ ಗಾಡಿ ಕಾಡ ಗೇಟಿನ ಒಳಗೆ ನುಗ್ಗಿ ಕಾಲು ಕಿಲೋಮೀಟರ್‌ ಸಾಗಿತ್ತಷ್ಟೇ.. ದೂರದಲ್ಲಿ ಚಿರತೆಯೊಂದು ಕಾಣಿಸಿತು. ಗಾಡಿ ಅದರತ್ತ ಮೆಲ್ಲಗೆ ತೆರಳಿ ನಾವೆಲ್ಲ ಅದನ್ನು ಕಣ್ಣು-ಕ್ಯಾಮರಾ ಕಣ್ಣಿನೊಳಗೆ ತುಂಬಿಕೊಳ್ಳಬಹುದೇನೋ ಅಂತ ಆಸೆಪಟ್ಟುಕೊಳ್ಳುವಷ್ಟರಲ್ಲಿ ಗಾಡಿಯ ಚಾಲಕ ಅತೀ ಉತ್ಸಾಹದಲ್ಲಿ ಗಾಡಿ ಅದರತ್ತ ಜೋರಾಗಿ ಚಲಾಯಿಸಿದ್ದೇ, ಅದು ಪಟಕ್ಕನೇ ಪೊದೆಗೆ ನುಗ್ಗಿ ಮರೆಯಾಗಿ ಹೋಯಿತು. ಈಗ ಡ್ರೈವರ್‌ ವಿರುದ್ಧ ಹಲ್ಲು ಕಟಿಯುವವರ ಸಂಖ್ಯೆ ಜಾಸ್ತಿಯಿದ್ದರೂ, ಹುಲಿ ನೋಡಬೇಕೆಂಬ ಆಸೆಯಲ್ಲಿ, ಅವನನ್ನು ಮನಸ್ಸಲ್ಲಿ ಕ್ಷಮಿಸಿದ್ದರು.

ಸಫಾರಿಗೆ ಬಂದು ಅಭ್ಯಾಸವಿರುವವರು ಹೆಚ್ಚಾಗಿ ಹುಲಿಯನ್ನು ನೋಡುವ ಆಸೆಯಿಂದಲೇ ಗಾಡಿ ಏರಿರುತ್ತಾರೆ. ಆದರೆ ಮೊದಲಸಲ ಬರುವವರ ಮನಸ್ಥಿತಿ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಅವರಿಗೆ ಕಂಡದ್ದೆಲ್ಲವೂ ಸಂತೋಷ ನೀಡುತ್ತದೆ. ಹಾಗಾಗಿ ನಮ್ಮ ಗಾಡಿಯಲ್ಲಿ ಜೊತೆಗಿದ್ದವರೆಲ್ಲ ಬಹುತೇಕ ಜನಕ್ಕೆ ಸಫಾರಿಗೆ ಬಂದು ಛಾಯಾಗ್ರಹಣ ಮಾಡುವುದೇ ಹವ್ಯಾಸವಾದ್ದರಿಂದ ಅವರೆಲ್ಲ ಹುಲಿ ನೋಡಲು, ಹಸಿದ ಹುಲಿಗಳಾಗಿಹೋಗಿದ್ದರು!

ಚಿರತೆ ಕೈತಪ್ಪಿಹೋದ ಜಾಗದಿಂದ ಗಾಡಿ ಮತ್ತಷ್ಟು ದೂರ ಚಲಿಸಿದ್ದೇ ಡ್ರೈವರ್‌ಗೆ ಬಂದ ಮೊಬೈಲ್‌ ಕರೆಯಲ್ಲಿ ಹುಲಿಯ ಇರುವಿನ ಸುಳಿ ಸಿಕ್ಕು, ಇನ್ನಷ್ಟು ಮುಂದಕ್ಕೆ ಗಾಡಿ ಚಲಾಯಿಸಿದರು. ಆದರೆ ಹಾದಿಯ ನಡುವೆ ಸಿಕ್ಕ ಅರಣ್ಯ ಇಲಾಖೆಯವರು “ಅಲ್ಲೇ ಬತೈತೆ ನೋಡಿ ಸಾ…” ಎಂದು, ಹಿಂದಕ್ಕೆ ಕೈಮಾಡಿ ತೋರಿಸಬೇಕೇ.  ಗಾಡಿ ಈಗ ರೊಯ್ಯರೊಯ್ಯನೇ ಹಿಮ್ಮುಖವಾಗಿ ಚಲಿಸಿ, ಒಂದಷ್ಟು ಹಿಂದಕ್ಕೆ ಬಂದು ನಿಂತಾಗ, ಅವರು ಹೇಳಿದ್ದ ದಿಕ್ಕಿನತ್ತ ಎಲ್ಲರ ಕಣ್ಣುಗಳು ನೆಟ್ಟವು. ಛಾಯಾಗ್ರಾಹಕರಂತೂ ತಮ್ಮ ಕಾಲು, ಮುಕ್ಕಾಲು ಮಾರಿನಷ್ಟು ಉದ್ದದ ಲೆನ್ಸುಗಳನ್ನು ಬಿಗಿದುಕೊಂಡು, ಕ್ಯಾಮರಾಗಳನ್ನು ಕೊರಳಿಗೆ ಜೋತು ಹಾಕಿಕೊಂಡು, ಹುಲಿಗಾಗಿ ಕಣ್ಣು ಮಿಟುಕಿಸದೇ ಕಾಯುತ್ತಿದ್ದರು. ಅಲ್ಲಿದ್ಯಾ.. ಇಲ್ಲಿದ್ಯ… ಅಲ್ಲಿಂದ ಬರ್ಬಹುದಾ… ಅಥವಾ ಇಲ್ಲಿಂದಲಾ… ಹೀಗೆ ಗುಸುಗುಸು ಮಾತು.. ಈಗ ಬಂತು ಹುಲಿ… ಆಗ ಬಂತು ಹುಲಿ… ಎಲ್ಲರ ಕನವರಿಕೆಯೂ ಒಂದೇ… ಹುಲಿ ಬಂತಾ… ಹುಲಿ ಬಂತಾ… ಆದರೆ ನಾವು ಗಾಡಿಯನ್ನು ನಿಲ್ಲಿಸಿಕೊಂಡ ಹಾದಿಯೇ ಪ್ರಾಣಿಯ ನೀರು ಕುಡಿಯುವ, ಅಥವಾ ರಸ್ತೆ ದಾಟಲು ಬಳಸುವ ಹಾದಿಯಾದರೆ, ಆ ಪ್ರಾಣಿಗಳು ನಾವು ಹೊರಡುವವರೆಗೂ ಹೊರಗೆ ಬರುವುದಿಲ್ಲ. ಹೀಗೆ ನಾವು ಅವುಗಳನ್ನು ಕಾಣುವ ಉತ್ಸಾಹದಲ್ಲಿ ಅವುಗಳ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಮಾಡುವ ಸಂದರ್ಭವೂ ಇರುತ್ತದೆ.

ಹಾಗೆ ನಿಂತು ಕಾಯಲಾರಂಭಿಸಿ ಹತ್ತಿಪ್ಪತ್ತು ನಿಮಿಷ ಕಳೆದರೂ ಹುಲಿಯ ಸುಳಿವಿಲ್ಲ ಎನ್ನುವಾಗ ಎಲ್ಲರ ಮಾತಿನಲ್ಲೂ ಉಸಿರಾಟದ ಏರಿಳಿತದಲ್ಲೂ ಹತಾಶ ಭಾವ ಕಾಣುತ್ತಿತ್ತು. ಹಿನ್ನೆಲೆಯಲ್ಲಿ ನವಿಲಿನ ಕೂಗೊಂದು ಆಗಾಗ ಕೇಳಿಸುತ್ತಿತ್ತು. ಹುಲಿ ನೋಡುವುದಷ್ಟೇ ನನ್ನ ಗುರಿಯಾಗಿರಲಿಲ್ಲವಾದ್ದರಿಂದ, ಸುತ್ತ ಏನೆಲ್ಲ ಸಿಕ್ಕಬಹುದೋ, ಅವೆಲ್ಲವನ್ನೂ ನೋಡಿಬಿಡೋಣ ಎಂದು ಕಣ್ಣು ಹಾಯಿಸಿದಷ್ಟು ಕಾಣುವ ಮರಗಿಡಗಳ ಸಂದಿಗೊಂದಿಗಳನ್ನೂ ಬಿಡದೆ ನನ್ನ ಕಣ್ಣುಗಳು ಅಲೆಯುತ್ತಿದ್ದವು. ಅಷ್ಟರಲ್ಲಿ ನಾವು ಮೊದಲು ನಿಂತು ವಾಪಾಸ್ಸಾಗಿದ್ದ ಜಾಗದಿಂದ ಹುಲಿಯ ಘರ್ಜನೆ ಕೇಳಿಸಿತು ನೋಡಿ… ತಕ್ಷಣ ಡ್ರೈವರ್‌ ಜೊತೆ ಗಾಡಿಯಲ್ಲಿ ಕೂತ ಎಲ್ಲರೂ ಕಾರ್ಯಪ್ರವೃತ್ತರಾಗಿ, ಸರಳವಾಗಿ ಒಂದು ಗಾಡಿಯಷ್ಟೇ ಹೋಗಲು ಜಾಗವಿದ್ದ ಹಾದಿಯಲ್ಲಿ, ಲೆಫ್ಟು… ಒಂಚೂರ್‌ ರೈಟು… ಸ್ಟಡೀ… ಎಂದೆಲ್ಲ ಹೇಳಿ ರಿವರ್ಸ್‌ ಗೇರಿನಲ್ಲಿ ಗಾಡಿಯನ್ನು ಅದೇ ಜಾಗದಲ್ಲಿ ತಂದು ನಿಲ್ಲಿಸಲಾಯ್ತು. ಅಮೇಲೆ ಮತ್ತೊಂದು ಸುತ್ತಿನ ಕಾಯುವಿಕೆ. ಗಾಡಿಯಲ್ಲಿದ್ದವರೆಲ್ಲ ಹುಲಿಯ ದರ್ಶನಕ್ಕೆ ಕಣ್ಣು ದೊಡ್ಡದು ಮಾಡಿಕೊಂಡು, ಕಾದು ಕುಳಿತಿರುವಾಗ ಬುಲ್‌ಬುಲ್‌ಗಳು, ಕಾಜಾಣ, ಕೋಗಿಲೆ, ಗ್ರೀನ್ ಇಂಪೀರಿಯಲ್‌ ಪಿಜಿಯನ್ (Green Imperial Pegion) ಜೊತೆ ನೀಲಿ ರೇಷ್ಮೇ ಸೀರೆಯಂಥ ಮೈ ಹೊದ್ದ, ಗುರುತಿಸಲಾಗದೇ ಹೋದ ಹಕ್ಕಿಗಳೆಲ್ಲ, ತಮ್ಮ ಪಾಡಿಗೆ ತಾವು ಅತ್ತಿತ್ತ ಹಾರುತ್ತ, ಸದ್ದು ಬಂದಕಡೆ ಕತ್ತು ತಿರುಗಾಡಿಸುತ್ತ ಕೂತಿದ್ದವು. ಹಿಂದೆ ಕುಳಿತಿದ್ದ ಜನರಲ್ಲಿ ಗುಸುಗುಸು… ನಿಜ್ವಾಗ್ಲೂ ಇಲ್ಲೇ ಸೌಂಡು ಕೇಳಿದ್ದಾ…? ಛೇ.. ನಾವು ಮಿಸ್‌ ಮಾಡ್ಕೊಂಡ್ವಿ… ಅದೀಗ ಬರಲ್ಲ ಅನ್ಸತ್ತೆ… ಸಾಕಷ್ಟು ಹೊತ್ತು ಕಾದರೂ ಅಲ್ಲೆಲ್ಲೋ ತನ್ನ ಪಾಡಿಗೆ ತಾನಿದ್ದ ಹುಲಿಗೆ, ನಾವಿದ್ದ ಕಡೆಗೆ ಹೆಜ್ಜೆ ಹಾಕಲು ಮನಸ್ಸು ಬಾರದೇ, ನಮ್ಮ ಗಾಡಿ ತನ್ನ ವಿಧಿಯನ್ನು ಹಳಿದುಕೊಂಡು ಅಲ್ಲಿಂದ ಜಾಗ ಖಾಲಿಮಾಡಿತು.

ಮುಂದೆ ಸಫಾರಿಗೆ ಮೀಸಲಿಟ್ಟ ಬಹುತೇಕ ಜಾಗಗಳಲ್ಲಿ ಗಾಡಿ ನಮ್ಮನ್ನು ಸುತ್ತಾಡಿಸಿಕೊಂಡು ಬಂದಿತು. ಕಾಡುಕೋಳಿ, ಜಿಂಕೆ, ನವಿಲು ಮತ್ತೆ ಮತ್ತೆ ಕಂಡವು. ಆದರೆ ಹಿಂದೆಮುಂದೆ ಸಿಗುತ್ತಿದ್ದ ಬೇರೆ ಗಾಡಿಗಳ ಜೊತೆಗಿನ ಸಂಭಾಷಣೆಯಲ್ಲಿ ಹುಲಿಯ ಯಾವುದೇ ಸುಳಿವು ಕಾಣದಾಗಿ, ಇದೀಗ ಎಲ್ಲರೂ ಠುಸ್ಸಾಗಿ ಕುಳಿತ ಹೊತ್ತಿಗೆ ಸಮಯ ೭.೩೦ ನಿಮಿಷವಾಗಿತ್ತು. ಸೂರ್ಯ ಕೆಂಪನೆ ಪ್ರಜ್ವಲಿಸುತ್ತಿದ್ದರೂ, ಕುಳಿರ್ಗಾಳಿಗೆ ಮೈಗೆ ತಾಕುತ್ತಿದ್ದ ಅವನ ಬಿಸುಪು ಹಿತವೆನ್ನಿಸುತ್ತಿತ್ತು. ಇನ್ನಷ್ಟು ಮತ್ತಷ್ಟು ಸೂರ್ಯನನ್ನು ತಬ್ಬಿಕೊಳ್ಳುವ ಬಯಕೆಯಾಗುತ್ತಿತ್ತು.

ಮುಂದೆ ಪ್ರಾಣಿಗಳು ನೀರು ಕುಡಿಯಲೆಂದು ಬರುವ ಕೆರೆಯ ಬಳಿ ಒಂದಿಷ್ಟು ಹೊತ್ತು ಕಾಯುವ ಯೋಚನೆಯಿಂದಲೇ ಗಾಡಿ ನಿಂತುಕೊಂಡಿತು. ಬಹುತೇಕರ ಉತ್ಸಾಹದ ಬಲೂನು ಅದಾಗಲೇ ಠುಸ್ಸಾಗಿ ಹೋಗಿದ್ದರೂ, “ಈಗ ಕಂಡ್ರೂ ಕಾಣಬಹುದೆಂಬ” ಆಶಯವಂತೂ ಎಲ್ಲರ ಎದೆಯ ಮೂಲೆಯಲ್ಲಿತ್ತು. ಹಾಗಾಗಿ ಸತತ ಮುಕ್ಕಾಲು ಗಂಟೆಗಳ ಕಾಲ, ಕೆರೆ ದಂಡೆಯ ಅಂಚಿಗೆ ಗಾಡಿಯಲ್ಲಿದ್ದ ಮೈಮನಸ್ಸುಗಳು ಆತುಕೊಂಡು ಕುಳಿತಿದ್ದವು. ಧ್ಯಾನಸ್ಥ ಭಂಗಿಯಲ್ಲಿ ಒಬ್ಬಂಟಿಯಾಗಿ ಕುಳಿತ ಆಮೆ, ಬೇಟೆಯ ಮೂಡಿನಲ್ಲಿ ನೀರಿಗೆ ಮತ್ತೆಮತ್ತೆ ಹಾರಾಡುತ್ತಿದ್ದ ಮಿಂಚುಳ್ಳಿ, ಪಾಂಡ್‌ ಹೆರಾನ್‌ ಹಕ್ಕಿ ಅಲ್ಲಲ್ಲೇ ಇದ್ದುದರಿಂದ ಅವುಗಳ ಚಟುವಟಿಕೆಗಳು ನೋಡುಗರ ಮನಸ್ಸನ್ನು ಚಲನೆಯಲ್ಲಿಟ್ಟದ್ದವು. ಆದರೂ ಎಷ್ಟು ಹೊತ್ತು ಕಾದರೂ ಆ ಸಫಾರಿಯಲ್ಲಿ ಹುಲಿ ಸಿಗಲೇ ಇಲ್ಲ… ಗಾಡಿ ಹೊರಟು ಕೊನೆಗೆ ತಿರುವು ಬರುವ ಮುಂಚೆ ಹಿರಿಯಾನೆಯೊಂದು ಕಣ್ಣಿಗೆ ಬಿತ್ತು.. ನೆಲ ತಾಕುವಷ್ಟು ಉದ್ದನೆಯ ಬಲಿಷ್ಟ ಕೋರೆ ಹೊಂದಿದ್ದ ಅದು, ತನ್ನ ಎದುರಿನ ರಸ್ತೆಯಲ್ಲಿ ಎರಡು ಗಾಡಿಗಳು ಬಂದು ನಿಂತದ್ದೇ, ವಾಪಾಸ್ಸು ಮರಗಳ ನಡುವೆ ಹೊರಟು ಹೋಯಿತು. ಹಾಗಾಗಿ ಅದನ್ನು ಸೆರೆಹಿಡಿಯಲು ಹೊರಬಂದಿದ್ದ ಕ್ಯಾಮರಾಗಳು ಮುಖಮುಚ್ಚಿಕೊಂಡು ಸುಮ್ಮನೆ ಕುಳಿತವು.

ಬಂದಾ… ಬಂದಾ… ಹುಲಿರಾಯ…

ಅದಾಗಲೇ ಹಿಂದಿನ ರಾತ್ರಿಯೇ ನಮಗೆ ಹೆಗ್ಗಡದೇವನಕೋಟೆಯ (ಎಚ್.ಡಿ. ಕೋಟೆ)ಯ ಅರಸು ಮೆಸ್‌ನ ಊಟದ ರುಚಿ ಗೊತ್ತಾಗಿದ್ದರಿಂದ, ಸಫಾರಿ ಮುಗಿದಾಗ ಬೆಳಗ್ಗಿನ ಉಪಹಾರಕ್ಕೆ ಅಲ್ಲಿಗೇ ನಮ್ಮ ಗಾಡಿಗಳು ತಿರುಗಿಕೊಂಡಿದ್ದವು. ಇಡ್ಲಿ, ಮಸಾಲೆ ವಡೆ, ರೈಸ್‌ಬಾತ್‌, ಅಕ್ಕಿ ರೊಟ್ಟಿ ಇಷ್ಟನ್ನು ತಿಂದು ಒಬ್ಬೊಬ್ಬರೂ ಹೆಬ್ಬಾವುಗಳಾಗಿಹೋಗಿದ್ದೆವು. ಹಾಗಾಗಿ ಮಧ್ಯಾಹ್ನಕ್ಕೆ ಊಟ ರುಚಿಸದೇ ಮಜ್ಜಿಗೆ, ಲಸ್ಸಿಯಲ್ಲಿ ಹೊಟ್ಟೆಯನ್ನು ಸಮಾಧಾನಿಸಿ, ಮೂರು ಗಂಟೆಯ ಸಫಾರಿಗೆ ಸಿದ್ಧವಾದೆವು.

ಸಂಜೆ ಬಾನಿನಂಚಿನಲ್ಲಿ 

ಬೆಳಗ್ಗೆ ಹುಲಿಯ ಒಂದು ನೋಟಕ್ಕೆ ಎಲ್ಲರೂ ಹುಚ್ಚರಂತೆ ಅಲೆದಾಡಿ, ಕೊನೆಗೆ ಮಾತಿಲ್ಲದೇ ಗಾಡಿ ಇಳಿದುಕೊಂಡು ಹೋದದ್ದು ನನಗೀಗ ಸ್ಪಷ್ಟವಾಗಿ ನೆನಪಾಗುತ್ತಿತ್ತು. ನಾವು ಮನುಷ್ಯರು ಹಣಬಲದಿಂದ, ನಮ್ಮ ವರ್ಚಸ್ಸಿನ ಪ್ರಭಾವದಿಂದ ಬೇರೆ ಏನನ್ನಾದರೂ ನಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದು. ಆದರೆ ಪ್ರಕೃತಿಯೊಟ್ಟಿಗೆ ನಮ್ಮದೇನೂ ನಡೆಯುವುದಿಲ್ಲ. ಅದರ ಹಾದಿಯಲ್ಲಿ ನಾವು ಹೋಗಬೇಕಷ್ಟೇ. ಅದೃಷ್ಟವಿದ್ದರೆ ಹುಲಿ, ಚಿರತೆ ಎಲ್ಲ ಸಿಗಬಹುದು, ಇಲ್ಲದೇ ಹೋದರೆ, ಕೊನೆಗೆ ಜಿಂಕೆ, ನವಿಲು, ಕಾಡುಕೋಳಿ ನೋಡಿಕೊಂಡು ಬರಬೇಕು ಅಷ್ಟೇ. ನಮ್ಮ ಯಾವುದೇ ಪ್ರತಿಷ್ಠೆ ಪ್ರಭಾವಗಳು ಇಲ್ಲಿ ನಡೆಯೋದಿಲ್ಲ. ಪ್ರಸಾದ ಸಿಕ್ಕಷ್ಟೇ ಸ್ವೀಕರಿಸಬೇಕು.

ಇದು ಸಂಜೆಯ ಸಫಾರಿಯಾದ್ದರಿಂದ, ನಾವು ಹೆಚ್ಚಿಗೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಈ ಹೊತ್ತು ಪ್ರಾಣಿಗಳು ತಿಂದುಂಡು, ತಮ್ಮ ಪಾಡಿಗೆ ಇದ್ದಲ್ಲಿ ವಿಶ್ರಮಿಸುತ್ತಾ ಕಾಲಕಳೆಯುವ ಹೊತ್ತು. ಹೆಚ್ಚು ಚಟುವಟಿಕೆಯಿರುವುದಿಲ್ಲ. ಹಾಗಾಗಿ ನಮ್ಮ ಗಾಡಿ ಕೊರೆದಿಟ್ಟ ರಸ್ತೆಯಲ್ಲಿ ತನ್ನ ಚಕ್ರಗಳನ್ನು ತಿರುಗಿಸಿಕೊಂಡು ಮುಂದೆ ಮುಂದೆ ಹೋಗುವಾಗ, ಕಾಡು ಮಾತ್ರ ಬಿಮ್ಮನೆ ನಿಂತುಕೊಂಡಿತ್ತು. ಗಾಳಿಯೂ ಅಷ್ಟಾಗಿ ಇರಲಿಲ್ಲ. ಮರಗಿಡಗಳೆಲ್ಲ ‘ಸ್ಟ್ಯಾಚೂʼ ಕೊಟ್ಟವರಂತೆ ನಿಂತುಕೊಂಡಿದ್ದವು. ಮುಂದೆಮುಂದೆ ಹೋದಂತೆ ಲಂಗೂರ್‌ಗಳ ಗುಂಪು ಅಲ್ಲಲ್ಲಿ ಕಾಣಿಸುತ್ತಿದ್ದವು. ನಮ್ಮ ವಾಹನ ಬಂದ ಸದ್ದಿಗೆ ಗುಂಪಿನಲ್ಲಿದ್ದ ಮಂಗಗಳೆಲ್ಲ ಹೆದರಿಕೊಂಡು ಚಂಗನೆ ಅಕ್ಕಪಕ್ಕದ ಮರಗಳಿಗೆ ಹಾರಿಹೋದರೆ, ಒಂದು ಮಧ್ಯಮ ವಯಸ್ಸಿನ ಲಂಗೂರ್‌ ಮಾತ್ರ ಮಧ್ಯಾಹ್ನದ ಬೇಸರಕ್ಕೆ ಅರ್ಧ ಒಣಗಿದ ಬಿದ್ದ ಮರದ ಮೇಲೆ ಕೂತು ಅದನ್ನು ಮೇಲೆ ಕೆಳಗೆ ಮಾಡುತ್ತ ಕಾಲಕಳೆಯುತ್ತಿತ್ತು. ಕೆಲಸವಿಲ್ಲದ ಮಧ್ಯಾಹ್ನ ಅದಕ್ಕೂ ಬೇಸರವೇ…

ಮುಂದೆ ಸಾಗುತ್ತ, ರಸ್ತೆಯ ಬದಿಯಲ್ಲಿ ಒಂದು ಕಲ್ಲುಮಂಟಪ ಸಿಕ್ಕು ಅಲ್ಲಿ ಆಗಾಗ ಚಿರತೆ ಬಂದು, ಅದರ ಮೇಲೆ ಕೂರುತ್ತದೆ ಎಂದು ಕೇಳಿಯೆ ಮೈಯೆಲ್ಲ ರೋಮಾಂಚನವಾಯ್ತು. ಆಹಾ.. ಇಷ್ಟು ಹತ್ತಿರದಿಂದ ಚಿರತೆಯನ್ನು ನೋಡಬಹುದಾದರೆ ಎಂಥಹ ಅದೃಷ್ಟ.. ನಮಗೂ ಇವತ್ತು ಆ ಅದೃಷ್ಟ ಸಿಗಬಹುದಾ.. ಇಲ್ಲವಾ ಎಂದು ಎಲ್ಲರೂ ಮನಸ್ಸಿನಲ್ಲಿ ಲೆಕ್ಕಹಾಕಿಕೊಳ್ಳುವಾಗ ಗಾಡಿ ಮತ್ತೊಂದಷ್ಟು ದೂರಕ್ಕೆ ನಮ್ಮನ್ನು ಕರೆದುಕೊಂಡು ಬಂದಿತ್ತು.

ಮುಂದೆ ಬಂದಿದ್ದೇ ನಮ್ಮ ಜೊತೆಯಿದ್ದ ಹರೀಶಣ್ಣ, “ನಿಲ್ಸಿನಿಲ್ಸಿ.. ಗಾಡಿ ನಿಲ್ಸಿ” ಅಂತ ಗಾಡಿಯನ್ನು ನಿಲ್ಲಿಸಲು ಹೇಳಿದರು. ಅವರು ಗಾಡಿಯ ಹಿಮ್ಮುಖವಾಗಿ ಕತ್ತು ಮೇಲೆತ್ತಿ ಮರವನ್ನು ನೋಡಲಾರಂಭಿಸಿದಾಗ, ಗಾಡಿಯಲ್ಲಿದ್ದ ನಾವೆಲ್ಲರೂ ಏನಿರಬಹುದೆಂದು ಚಕ್ಕನೇ ಅವರು ದೃಷ್ಟಿನೆಟ್ಟ ದಿಕ್ಕಿನತ್ತ ಕಣ್ಣುಹಾಯಿಸಿದೆವು.

ಒಂದು ಬೃಹತ್‌ ಮರದ ಕೊಂಬೆಯ ಮೇಲೆ ಕ್ರೆಸ್ಟೆಡ್‌ ಹಾಕ್‌ ಈಗಲ್ (Crested hawk-eagle (or Changeable hawk-eagle) ಒಂದು ಕೂತು ಹಿಡಿದ ಬೇಟೆಯೊಂದನ್ನು ಕಿತ್ತುಕಿತ್ತು ತಿನ್ನುತ್ತಿರುವುದು ಕಾಣಿಸಿದ್ದೇ ಎಲ್ಲರು ವಾವ್…ವಾವ್… ಎನ್ನುತ್ತ ತಮ್ಮ ಕ್ಯಾಮರಾಗಳನ್ನು ಅದರತ್ತ ನೆಟ್ಟರು. ಕೆಳಗಿನಿಂದ ಬರಿಗಣ್ಣಿನಲ್ಲೇ ಕ್ರೆಸ್ಟೆಡ್‌ ಹಾಕ್‌ ಈಗಲ್ ನ ಸೌಂದರ್ಯ ಸುಮಾರು ಕಾಣಿಸುತ್ತಿತ್ತು. ನೋಡಿದರೆ ಬಹಳ ಬ್ರೈಟ್‌ ಹಾಗೂ ಚೂಪು ನೋಟದ ಹಳದಿ ಕಣ್ಣಗುಡ್ಡೆಯ ಮೇಲೆ ಕಂದು ಚುಕ್ಕೆ, ತಲೆಯ ಮೇಲೆ ಅಲ್ಲಾಡುವ ಅದರ ಜುಟ್ಟು (crest) ಬಹಳ ಬೇಗ ನೋಡುಗರನ್ನು ಸೆಳೆದುಬಿಡುತ್ತದೆ. ಅದು ತನ್ನ ಕಾಲುಗಳಲ್ಲಿ ಹಿಡಿದಿಟ್ಟುಕೊಂಡು ತಿನ್ನುತ್ತಿದ್ದ ಬೇಟೆಯ ಗುರುತನ್ನು ಬರಿಗಣ್ಣಿನಲ್ಲಿ ಗುರುತಿಸಲು ಅಸಾಧ್ಯವಾಗಿತ್ತು. ಹಾಗಾಗಿ ಕ್ಯಾಮರಾದ ಲೆನ್ಸ್‌ಅನ್ನು ಝೂಮ್‌ಮಾಡಿ ನೋಡಿದಾಗ, ಅದಕ್ಕೆ ಇವತ್ತಿನ ಮಧ್ಯಾಹ್ನಕ್ಕೆ ಹಾವುರಾಣಿಯ ಭೋಜನ ಎನ್ನುವುದು ತಿಳಿಯಿತು.

ಗಾಡಿ ಅದರತ್ತ ಮೆಲ್ಲಗೆ ತೆರಳಿ ನಾವೆಲ್ಲ ಅದನ್ನು ಕಣ್ಣು-ಕ್ಯಾಮರಾ ಕಣ್ಣಿನೊಳಗೆ ತುಂಬಿಕೊಳ್ಳಬಹುದೇನೋ ಅಂತ ಆಸೆಪಟ್ಟುಕೊಳ್ಳುವಷ್ಟರಲ್ಲಿ ಗಾಡಿಯ ಚಾಲಕ ಅತೀ ಉತ್ಸಾಹದಲ್ಲಿ ಗಾಡಿ ಅದರತ್ತ ಜೋರಾಗಿ ಚಲಾಯಿಸಿದ್ದೇ, ಅದು ಪಟಕ್ಕನೇ ಪೊದೆಗೆ ನುಗ್ಗಿ ಮರೆಯಾಗಿ ಹೋಯಿತು.

ಮತ್ತಷ್ಟು ದೂರ ಬಂದದ್ದೇ ನಮ್ಮ ವಾಹನದಲ್ಲಿ ಕುಳಿತಿದ್ದ ಛಾಯಾಗ್ರಾಹಕ ಸ್ನೇಹಿತರು ಬಲಗಡೆ ನೋಡುತ್ತಾ, ಕ್ಯಾಮರಾ ಹಿಡಿದು, ಅಲರ್ಟ್‌ ಆದರು. ಈಗ ಏನಾದರೂ ನಮ್ಮ ಕಣ್ಣಿಗೆ ಬೀಳುವ ಸೂಚನೆ ಸಿಕ್ಕಿತು. ನೂರು ಮೀಟರ್‌ ದೂರದಲ್ಲಿದ್ದ ಎತ್ತರದ ಮರದಲ್ಲಿ ಬಿಳಿ ಹೊಟ್ಟೆಯ ಮರಕುಟಿಗ (White-bellied woodpecker) ಕಂಡು, ಹಿರಿಹಿರಿ ಹಿಗ್ಗಿದೆ. ಇದು ಬಹಳ ಅಪರೂಪದ ಪಕ್ಷಿ… ನಮ್ಮನೆಯ ಹತ್ತಿರ ಕಂಡದ್ದು ಇದನ್ನೇ. ಮತ್ತೊಮ್ಮೆ ಈ ಹಕ್ಕಿಯನ್ನು ನೋಡಲು ಸಿಕ್ಕು ಖುಷಿಯಾಯಿತು. ಅದು ತನ್ನ ಬಲಿಷ್ಟ ಕೊಕ್ಕಿನಿಂದ ಕಟಕಟನೇ ಮರಕ್ಕೆ ಹೊಡೆಯುವ ಸದ್ದು ಎಷ್ಟು ಜೋರೆಂದರೆ ಆ ಸದ್ದು ಒಂದು ಕಿಲೋಮೀಟರ್ ದೂರದವರೆಗೂ ಕೇಳಿಸುವುದಂತೆ! ಇರಬೇಕು ಮತ್ತೆ… ಎಷ್ಟು ಜೋರು ಸದ್ದದು.. ಅಬ್ಬಾ ಎಂದುಕೊಂಡೆ.

ಹೀಗೆ ಮರಕುಟಿಗ ಹಕ್ಕಿಯನ್ನು ನೋಡಿ ಮುಂದೆ ಬರುತ್ತಲೇ, ಸುತ್ತಲ ವಾತಾವರಣದಲ್ಲಿ ಹುಲಿಯ ಇರುವಿನ ಸುಳಿವು ಎಲ್ಲರಿಗೂ ಮೆಲ್ಲಗೆ ಸಿಗಲಾರಂಭಿಸಿತು. ಹಾಗಾಗಿ ನಾವಿದ್ದ ವಾಹನ ಅಲ್ಲಲ್ಲಿ, ಎರಡು ಮೂರು ಕಡೆ ಕಾಯುತ್ತ ಸುಮಾರು ಹೊತ್ತು ನಿಂತುಕೊಂಡಿತು. ನಮ್ಮ ಹಾಗೆಯೇ ಬೇರೆ ಎರಡು ವಾಹನಗಳು ನಮ್ಮ ಹಿಂದೆ ಮುಂದೆ ಅತ್ತಿಂದಿತ್ತ ಓಡಾಡುತ್ತಿದ್ದವು. ನಮ್ಮ ಗಾಡಿ, ನಾವು ಬಂದ ಹಾದಿಯಲ್ಲಿ ಹುಲಿ ಸಿಕ್ಕಬಹುದೆಂದುಕೊಂಡು, ಈಗಿದ್ದ ಜಾಗದಿಂದ ಒಂದಷ್ಟು ಹಿಂದೆ ಹೋದಮೇಲೆ, ಅಲ್ಲಿ ಹತ್ತು ನಿಮಿಷಗಳ ಕಾಲ ಕಾದು ನೋಡಿದೆವು… ಹುಲಿ ಅಲ್ಲಿರುವ ಸೂಚನೆಯನ್ನು ಸುತ್ತಮುತ್ತಲ್ಲು ಅಲ್ಲಲ್ಲಿ ಇದ್ದ ಜಿಂಕೆಗಳು ನಮಗೆ ಅಲಾರಾಂ ಕಾಲ್‌ಗಳನ್ನು ಕೊಡುತ್ತಿದ್ದವು.. ಹಾಗಾಗಿ ಅಲ್ಲಿಂದ ಹೊರಗೆ ಬರಬಹುದಾ… ಇಲ್ಲಿಂದ ಹೊರಬರಬಹುದಾ ಎಂದು ಮೂರು ಗಾಡಿಗಳು ಒಂದೊಂದು ಜಾಗದಲ್ಲಿ ಹುಲಿ ನೋಡುವ ಪಟ್ಟು ಹಿಡಿದು ನಿಂತುಕೊಂಡವು. ಹತ್ತು ನಿಮಿಷ ಕಳೆದದ್ದೇ, ನಮ್ಮ ಮುಂದೆ ಇದ್ದ ಗಾಡಿಯಿಂದ ನಮಗೆ ಸಿಗ್ನಲ್‌ ಬಂದದ್ದೇ ನಮ್ಮ ವಾಹನದ ಡ್ರೈವರ್… ಚೇ… ಎಂದು ಸ್ಟೀರಿಂಗಿಗೆ ಗುದ್ದಿ… ರಾಕೆಟ್‌ ಸ್ಪೀಡಿನಲ್ಲಿ ರಿವರ್ಸ್‌ ಗೇರು ಹಾಕಿ, ನಾವು ಮೊದಲು ನಿಂತಿದ್ದ ಜಾಗದತ್ತಲೇ ವಾಹವನ್ನು ತಂದು ನಿಲ್ಲಿಸಿದಾಗ ಇವತ್ತು ನಮ್ಮೆಲ್ಲರ ಅದೃಷ್ಟ ಚೆನ್ನಾಗಿರಬಹುದೆಂದು ಅನ್ನಿಸಿತು.

ನಮ್ಮ ಹಿಂದೆ ಮುಂದೆ ಒಂದೊಂದು ವಾಹನ… ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಮರಗಳ ಹಿಂದಿನ ಪೊದೆಯಲ್ಲಿ ಕಣ್ಣುಗಳನ್ನು ನೆಟ್ಟು ಹುಲಿಯ ದರ್ಶನಕ್ಕೆ ಕಾದು ಕುಳಿತಿದ್ದೆವು… ಅಷ್ಟೂ ಹೊತ್ತು ಬರುತ್ತಿದ್ದ ಕಚಪದ ಸದ್ದೆಲ್ಲ ಕ್ಷಣದಲ್ಲೇ ಅಡಗಿಹೋಗಿ, ಇಡೀ ಕಾಡೇ ಹುಲಿಯ ಆಗಮನಕ್ಕೆ ಸಜ್ಜಾದಂತೆ ವಾತಾವರಣ ಅಲ್ಲಿ ನಿರ್ಮಾಣವಾಗಿಹೋಗಿತ್ತು.. ಅಲ್ಲಿಯವರೆಗೆ ದೂರದಿಂದ ಕೇಳಿಸುತ್ತಿದ್ದ ಜಿಂಕೆಗಳ ಅಲಾರಾಂ ಕಾಲ್‌ಗಳು ಈಗ ಹತ್ತಿರ ಹತ್ತಿರಕ್ಕೆ ಕೇಳಿಸುತ್ತಿತ್ತು ಅಷ್ಟರಲ್ಲಿ…. ಮೆಲ್ಲಗೆ ಗಿಡಗಂಟೆಗಳ ಪೊದೆಯನ್ನು ಸೀಳಿಕೊಂಡು ಸುಮಾರು ಮೂರು ವರ್ಷದ, ಬಲಿಷ್ಠ ಹುಲಿಯೊಂದು ಹೊರಬರುತ್ತಿದ್ದರೆ, ಎಲ್ಲರೂ ಬಾಯಿಬಿಟ್ಟುಕೊಂಡು ಕ್ಷಣ ಸ್ತಂಬೀಭೂತರಾಗಿ ಅದನ್ನು ನೋಡಲಾರಂಭಿಸಿದ್ದೆವು. ಅದರ ವಜ್ಜೆ ಮೈ… ಹಳದಿ, ಬಿಳಿ, ಕಪ್ಪು ಪಟ್ಟಿಗಳು, ನಡಿಗೆಯಲ್ಲೂ ನೋಟದಲ್ಲೂ ಅನಾಯಾಸವಾಗಿ ತೋರುವ ಗಾಂಭೀರ್ಯ. ಅಬ್ಬಬ್ಬಾ… ಇದೇ ದೃಶ್ಯಕ್ಕಲ್ಲವೇ ಎಲ್ಲರೂ ಹುಲಿಹುಲಿ ಎಂದು ಜಪಿಸುವುದು.. ಹಾಗೆ ಅಂದುಕೊಳ್ಳುವಷ್ಟರಲ್ಲಿ ಸುತ್ತಮುತ್ತಲಿದ್ದ ಕ್ಯಾಮೆರಾಗಳು ಚಕಚಕಚಕ ಎಂದು ತಮ್ಮ ಕಾರ್ಯನಿರ್ವಹಿಸಲಾರಂಭಿಸಿದವು.

ಹಾಗೆ ಪೊದೆಯಿಂದ ಹೊರಬಂದದ್ದು ಇಪ್ಪತ್ತೈದು ಮೀಟರ್‌ ಮುಂದಕ್ಕೆ ನಡೆದುಬಂದು, ಹಗೂರವಾಗಿ ಕೆಳಗೆ ಕುಳಿತುಕೊಂಡಿತು. (ಬಹುತೇಕ ಛಾಯಾಗ್ರಾಹಕರಿಗೆ ಹುಲಿ ಒಂದು ಅದ್ಭುತವಾದ ಸರಕು ಆದ್ದರಿಂದ ಅದಕ್ಕಾಗಿ ಮಾತ್ರವೇ ಅವರ ಜಪ…) ಅತ್ತಿತ್ತ ನೋಡುತ್ತ, ಮೈ ನೆಕ್ಕಿಕೊಳ್ಳುತ್ತ ತನ್ನದೇ ಲೋಕದಲ್ಲಿ ಕಳೆದುಹೋಗಿದ್ದ ಹುಲಿ, ನೆಲಕ್ಕೆ ಬೆನ್ನು ಆನಿಸಿ ಅತ್ತಿತ್ತ ಹೊರಳುವಾಗಂತೂ, ನಮ್ಮದೇ ಮನೆಯ ಬೆಕ್ಕು ಮಧ್ಯಾಹ್ನ ಭರ್ಜರಿ ಊಟ ಹೊಡೆದು, ಹೊರಗೆ ಮೆಟ್ಟಿಲ ಮೇಲೆ ಕೂತು ಮೈಕೈ ನೆಕ್ಕಿಕೊಳ್ಳುತ್ತ ಕುಳಿತುಕೊಳ್ಳುವಷ್ಟೇ ಮುದ್ದಾಗಿ ಮುಗ್ಧವಾಗಿತ್ತು ಆ ದೃಶ್ಯ. ನನಗೆ ಕ್ಯಾಮರೆದಲ್ಲಿ ಅದನ್ನು ಸೆರೆಹಿಡಿಯುವುದಕ್ಕಿಂತ ನೇರವಾಗಿ ಅದರ ದೇಹಭಾಷೆಯನ್ನು ಗಮನಿಸಬೇಕೆಂಬ ಆಸೆಯಿತ್ತು. ಹಾಗಾಗಿ, ಪುಟ್ಟದೊಂದು ವಿಡಿಯೋ ಮಾಡಿದ್ದೇ, ಗಲ್ಲಕ್ಕೆ ಕೈ ಹಚ್ಚಿ ಮಧ್ಯಾಹ್ನದ ತಿಳಿ ತಂಗಾಳಿ ಬೀಸುವ ಹೊತ್ತಿನಲ್ಲಿ ಹುಲಿಯ ಮುಂದೆ ಕೂತು ಅದನ್ನು ನೋಡುತ್ತಲೇ ಕುಳಿತೆ. ಹಾಗೆ ಹುಲಿಯ ಕುರಿತು ಹಲವಾರು ವಿಚಾರಗಳು ಹಾದು ಹೋದವು.

ಹುಲಿ ಅಥವಾ ಯಾವುದೇ ಪ್ರಾಣಿಯಾಗಿರಲಿ ಅವುಗಳ ತಂಟೆಗೆ ನಾವು ಹೋಗದಿದ್ದಲ್ಲಿ  ಮನುಷ್ಯರ ಮೇಲೆ ಅವುಗಳು ದಾಳಿ ಮಾಡುವುದು ವಿರಳವೇ. ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸಿದವರ ಪ್ರಕಾರ ಹುಲಿಯ ಬೇಟೆಯ ಪಟ್ಟಿಯಲ್ಲಿ ಮನುಷ್ಯನಿಗೆ ನಿಜಕ್ಕೂ ಜಾಗವಿಲ್ಲ. ದಷ್ಟಪುಷ್ಟವಾದ ಹುಲಿ, ಕಾಡಿನಲ್ಲಿ ಮನುಷ್ಯನ ಇರುವನ್ನು ಗುರುತು ಹಚ್ಚಿದರೆ ತಾನಾಗೇ ಹಿಂದೆಸರಿದು ಹೋಗಿಬಿಡುತ್ತದಂತೆ. ಸ್ವತಃ ಅವುಗಳಿಗೇ ಮನುಷ್ಯರ ಭಯವಿದೆ. ಮುಪ್ಪಾಗಿ, ಹಲ್ಲುಗಳೆಲ್ಲ ಉದುರಿ, ಗಾಯಗೊಂಡು, ಬಹಳ ಕ್ಷೀಣಗೊಂಡ ಹುಲಿಗಳು ಕಾಣಸಿಗುತ್ತವೆ.  ಅದರಲ್ಲೂ ಕಾಡಂಚಿನ ಸ್ಥಳಗಳಲ್ಲಿ ಮನುಷ್ಯ ಮತ್ತು ಹುಲಿಯ ಭೇಟಿ, ಬೇಟೆ ಏರ್ಪಡುತ್ತದೆ. ಅಷ್ಟೇ. ಇಲ್ಲವಾದಲ್ಲಿ ಸಫಾರಿಯ ಜಾಗಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಅರಣ್ಯ ಇಲಾಖೆಯವರಿಗೆ ಹೇಗೆ ಧೈರ್ಯಬರಬಹುದು?

ಮನುಷ್ಯನಲ್ಲಿ ಮಾತ್ರವೇ ಉಂಡ ಮೇಲೆ ನಾಳೆ, ನಾಡಿದ್ದಿಗೆ, ಮುಂದಿನ ಪೀಳಿಗೆಗೆ ತನ್ನ ಸಂಪಾದನೆಯನ್ನು ಉಳಿಸಿ, ಬೆಳೆಸಬೇಕೆಂಬ ಆಸೆ-ದುರಾಸೆಗಳೆಲ್ಲ ನೆಲೆಸಿರೋದು. ಪ್ರಾಣಿ ಲೋಕದಲ್ಲಿ ಹಾಗಲ್ಲ. ಹಸಿವಾದಾಗ ಉಸಿರುಹಿಡಿದುಕೊಂಡು ಬೇಟೆಯನ್ನು ಅಟ್ಟಿಸಿಕೊಂಡು ಹೋಗಿ ತಿನ್ನಬೇಕು. ಕೆಲವೊಮ್ಮೆ ಪ್ರಾಣಿಗಳಿಗೆ ಬೇಟೆಗಳು ಸಿಗದೇ ದಿನಗಳೇ ಉರುಳಿ ಉಪವಾಸ ಬೀಳುತ್ತವೆ. ಆದರೆ ಬೇಟೆಯಾಡದೇ ಅವುಗಳಿಗೆ ಬೇರೆ ವಿಧಿಯಿಲ್ಲ.

ದುಂಡು ಮಲ್ಲಿಗೆ.. ಬಾ ಮೆಲ್ಲಗೆ…

ಬೆಳಗ್ಗಿನ ಮತ್ತೊಂದು ಸಫಾರಿಗೆ ಹೋದಾಗ, ಅವತ್ತಿನ ಚಳಿಗೆ ನಾವು ‘ಕುಲ್ಫಿ’ಯಾಗುವುದೊಂದು ಬಾಕಿ. ಗಾಡಿ ಮೆಲ್ಲನೇ ಮುನ್ನಡೆಯುತ್ತಿದ್ದರೆ ಮೈಮೇಲೆ ತಣ್ಣೀರನ್ನೆ ರಪರಪ ಎರಚಿದಂತಿತ್ತು.. ಹೊಟ್ಟೆಗೆ ಒಂಚೂರೂ ಕಾಫಿಯನ್ನಾದ್ರೂ ಇಳಿಸಿಕೊಂಡು ಬಂದಿದ್ದರೆ ಒಳ್ಳೆಯದಿತ್ತೇನೋ ಅನ್ನಿಸತೊಡಗಿತು.

ಈ ಸಲದ ಸಫಾರಿಯಲ್ಲಿ ನಮಗೆ ಹೆಚ್ಚೇನೂ ಸಿಗುವಂತೆ ತೋರಲಿಲ್ಲ. ಅರ್ಧ ಸಫಾರಿ ಮುಗಿದಾಗ, ತೀರಾ ಖಾಲಿ ಕೈಯಲ್ಲಿ ಹೋಗುತ್ತೀವೇನೋ ಅನ್ನಿಸತೊಡಗಿತ್ತು. ನಡುವೆ ಒಂದು ಒಳ್ಳೆಯ ಗಾತ್ರದ ಕಸ್ತೂರಿ ಮೃಗವೊಂದು ಕಂಡಿತು. ಸಾಕಷ್ಟು ದೂರದಲ್ಲಿದ್ದ ಅದು ನಮ್ಮ ಗಾಡಿ ನಿಂತ ಕ್ಷಣದಿಂದ ನಮ್ಮನ್ನೇ ನೋಡುತ್ತಿತ್ತು. ನಮ್ಮ ವಾಹನದಲ್ಲಿದ್ದ ಛಾಯಾಗ್ರಾಹಕರು ಹತ್ತು ಹದಿನೈದು ನಿಮಿಷ ಅದರ ಛಾಯಾಗ್ರಹಣದಲ್ಲಿ ಮಗ್ನವಾಗಿದ್ದರು. ಪುಟ್ಟ ಕೆರೆಯೊಂದರ ಮುಂದೆಯೇ ಅದು ನಿಂತುಕೊಂಡಿದ್ದರಿಂದ ಫ್ರೇಮು ಚನ್ನಾಗಿತ್ತು. ಅಕ್ಕ ಪಕ್ಕ ಇದ್ದ ಉದ್ದುದ್ದ ಮರಗಳು, ಹಸಿರು ಹಾಸು, ಮಂಜುಮಂಜು ವಾತಾವರಣದಲ್ಲಿ ಒಂದೊಂದೇ ಫೋಟೋಗಳು ಕ್ಲಿಕ್‌ ಆಗುತ್ತಿದ್ದವು.

ಇದೆಲ್ಲ ಆಗಿ ಮುಂದೆ ಬಂದದ್ದೇ ಒಂದುಕಡೆ ನಮ್ಮ ವಾಹನವನ್ನು ನಿಲ್ಲಿಸಲಾಯ್ತು. ಮರುಕ್ಷಣ ನಮ್ಮೆದುರಿಗೆ ಇನ್ನೊಂದು ಗಾಡಿಯೂ ಬಂದು ನಿಂತುಕೊಂಡಿತು. ಮುಂದೆ ಎಡಗಡೆಗೆ ಒಂದು ಸಣ್ಣ ಕೆರೆಯಿದ್ದು ಅಲ್ಲಿಗೆ ಯಾವುದೋ ಪ್ರಾಣಿ ಬರುವ ಸುಳಿವು ಸಿಕ್ಕು, ವಾಹನ ಚಾಲಕರು ತಮ್ಮ ಗಾಡಿಗಳನ್ನು ಅಲ್ಲಿ ನಿಲ್ಲಿಸಿಕೊಂಡಿದ್ದರು.

ಕೆಲವೇ ಕ್ಷಣಗಳಲ್ಲಿ, ನಮ್ಮ ಬಲಭಾಗದಲ್ಲಿ ಗುಂಡುಗುಂಡು ದುಂಡುಮಲ್ಲಿಗೆಯಂಥಾ ಹದಿಹರೆಯದ ವಯಸ್ಸಿನ ಗಂಡಾನೆಯೊಂದು ಗಿಡಗಳ ಪೊದೆಯನ್ನು ಸೀಳಿಕೊಂಡು ಹೊರಬಂದು ಸುಮ್ಮನೇ ನಿಂತುಕೊಂಡಿತು. ಏಷ್ಯಾದ ಆನೆಗಳು ನಿಜಕ್ಕೂ ಮುದ್ದು.. ಎಷ್ಟು ಚಂದದ್ದು ಇದು, ಆನೆ ಅನ್ನುವ ದೈತ್ಯ ಪ್ರಾಣಿ.

ಈ ದುಂಡು ಮಲ್ಲಿಗೆ ಎರಡೆರಡೇ ಹೆಜ್ಜೆ ಹಿಂದೆ ಹೋಗಿ ಮುಂದೆ ಬಂದು ಒಂದು ಕಡೆ ನಿಂತಾಗ, ಒಟ್ಟು ಮೂರು ಗಾಡಿಗಳಲ್ಲಿದ್ದ ಛಾಯಾಗ್ರಾಹಕರಿಗೂ ಕಾಣಿಸುವಂತೆ ರಸ್ತೆಯನ್ನು ತಲುಪಿತ್ತು. ತನ್ನ ಕಾಲುಗಳನ್ನೊಮ್ಮೆ ಹಿಂದಕ್ಕೂ ಮುಂದಕ್ಕೂ ಅಲ್ಲಾಡಿಸುತ್ತ ಆ ಕಡೆ ಈ ಕಡೆ ನೋಡುತ್ತಿದ್ದರೆ, ಛಾಯಾಗ್ರಾಹಕರು ಹಿಗ್ಗುತ್ತ ಕ್ಯಾಮರಾಗಳನ್ನು ಚಕಚಕ ಎನ್ನಿಸುತ್ತಿದ್ದರು. ಒಂದಷ್ಟು ಹೊತ್ತು ಹಾಗೇ ನಿಂತವನು ರಸ್ತೆ ದಾಟಿ ನೀರು ಕುಡಿಯಲು ಕೆರೆಗೆ ಹೋಗಬೇಕಿತ್ತು. ಆದರೆ ಹೋಗಲೋ ಬೇಡವೋ ಎಂಬ ಅನುಮಾನದಲ್ಲಿ, ಉದ್ವೇಗಕ್ಕೆ ಒಳಗಾಗಿ, ಸೊಂಡಿಲನ್ನು ಬಾಯಲ್ಲಿಟ್ಟುಕೊಂಡು ಅಲ್ಲೇ ನಿಂತುಕೊಂಡಿತು. ಆಮೇಲೆ ಮನಸ್ಸು ಬದಲಾಯಿಸಿ ಕೆರೆಗೆ ಇಳಿದು, ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನಿಂತುಕೊಂಡು ಬೇಕೋ ಬೇಡವೋ ಎನ್ನುವಂತೆ ಅರೆಮನಸ್ಸಿನಲ್ಲಿ ನೀರು ಕುಡಿದು, ಮೇಲೆಬರುವಾಗ ಚೂರು ಅವಸರದಲ್ಲಿ ದಂಡೆಯನ್ನು ಹತ್ತಿ, ರಸ್ತೆ ದಾಟಿ ಹಿಂದಕ್ಕೆ ತಿರುಗಿ ನಿಂತಿತು. ಬಾಲ ಎತ್ತಿ, ಒಂದೇ ಸಲ ಘೀಳಿಟ್ಟು, ಗಿಡಗಂಟೆಗಳ ಪೊದೆಯೊಳಗೆ ಹೋಗಿ ನಿಂತುಕೊಂಡಿತು. ಏನೋ ಅರೆಮನಸ್ಥಿತಿ ಮತ್ತೆ ತಿರುಗಿ ನೋಡಿ, ಸಾಕಷ್ಟು ಹೊತ್ತು ಅಲ್ಲೇ ಮರದ ಕೊಂಬೆಯನ್ನೆಳೆದುಕೊಂಡು ತಿನ್ನುತ್ತಾ ನಿಂತುಕೊಂಡಿತು.

ಆನೆಗಳು ಬಹಳ ಸೂಕ್ಷ್ಮ ಪ್ರಾಣಿಗಳು. ಅವುಗಳಿಗೆ ದೂರದಲ್ಲಿ ನೆಲದ ಮೇಲೆ ನಡೆಯುವ ಕಂಪನಗಳು ಸ್ಪಷ್ಟವಾಗಿ ತಿಳಿಯುತ್ತದಂತೆ. ಹಾಗಾಗಿಯೇ ರಸ್ತೆಯಲ್ಲಿ ಈ ಆನೆ ಕಂಡ ಸುದ್ದಿ ಸಿಕ್ಕ ಎರಡು ಜೀಪಿನವರು ಜೋರಾಗಿ ನಾವಿದ್ದ ಜಾಗದತ್ತ ವಾಹನ ಚಲಿಸಿಕೊಂಡು ಬರುತ್ತಿದ್ದರಿಂದಲೇ, ಆನೆ ಗಾಬರಿಗೊಂಡು ಇರಿಸುಮುರುಸಾದವರಂತೆ ವರ್ತಿಸುತ್ತಿತ್ತು. ಪ್ರಾಣಿಗಳದ್ದು ಮುಗ್ಧ ಲೋಕ. ಹಸಿವಾದಾಗ ಊಟ, ಬಾಯಾರಿದಾಗ ನೀರು, ಉಂಡಾದ ಮೇಲೆ ನಿದ್ದೆ. ಇಷ್ಟೇ ಅವುಗಳ ಪ್ರಪಂಚ. ಇಡೀ ಪ್ರಪಂಚವನ್ನು ಸುತ್ತಲು ಹಾತೊರೆಯುವ ನಾವು ಪ್ರಾಣಿಗಳ ಪ್ರಪಂಚಕ್ಕೆ ಅಡ್ಡಲಾಗಿ ನಿಂತುಕೊಂಡಾಗಲೇ ಸಮಸ್ಯೆಗಳು ಏರ್ಪಡುವುದು…

ಹೀಗೆ ಈ ಪ್ರವಾಸದ ಕೊನೆಯ ಸಫಾರಿಯಲ್ಲಿ ಆನೆಯ ದೇಹಭಾಷೆ, ಅದರ ದೈನಂದಿನ ಚಟುವಟಿಕೆಗಳು ಮತ್ತೂ ಅದರ ಭಾವನೆಗಳನ್ನು ಹತ್ತಿರದಿಂದ ಕಾಣಲು ಅವಕಾಶ ದೊರೆತದ್ದರಿಂದ ಸಫಾರಿಗೆ ಹೋದದ್ದಕ್ಕೂ ಸಾರ್ಥಕವೆನ್ನಿಸಿತು.

(ಫೋಟೋಗಳು: ವಿಪಿನ್‌ ಬಾಳಿಗಾ)

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

4 Comments

  1. Dr K B SuryaKumar

    ಬಹಳ ಸುಂದರ ಬರಹ. ಸಫಾರಿಯ ವಿವರಣೆ ತುಂಬಾ ಚೆನ್ನಾಗಿದೆ. ಕೆಲವು ವರ್ಷಗಳ ಹಿಂದೆ ನಾನು ಭಾಂದವಾಗಡ್ ಅರಣ್ಯದಲ್ಲಿ ಹುಲಿಯ ಹಿಂದೆ ಹೋದದ್ದನ್ನು ನೆನಪಿಸಿತು.. ಅಲ್ಲಂತು ಹುಲಿ ಗಾಂಭೀರ್ಯದಿಂದ ನಮ್ಮ ಜಿಪ್ಸಿ ಯ ಪಕ್ಕದಲ್ಲೇ ಹೋದಾಗ ಕಂಡ ಚಿತ್ರಣ ಅವಿಸ್ಮರಣೀಯ…. ಸಫಾರಿ ಯ ವಿವರಣೆ ಅಚ್ಚು ಕಟ್ಟಾಗಿ ಬಂದಿದೆ. ಇನ್ನಷ್ಟು ಇಂತಹ ಕಥನಗಳು ಬರಲಿ

    Reply
    • Roopashree KP

      ಖಂಡಿತವಾಗಿ ಬರೆಯುತ್ತೇನೆ ಸರ್.. ಧನ್ಯವಾದಗಳು ನಿಮಗೆ..

      Reply
  2. Keshav Kulkarni

    ಸೊಗಸಾದ ಪ್ರವಾಸ ಕಥನ. ಪ್ರವಾಸ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. – ಕೇಶವ

    Reply
    • ರೂಪಶ್ರೀ ಕಲ್ಲಿಗನೂರ್

      ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ…

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ