Advertisement
ಶ್ರೀ ತಲಗೇರಿ ಬರೆದ ಎರಡು ಹೊಸ ಪದ್ಯಗಳು

ಶ್ರೀ ತಲಗೇರಿ ಬರೆದ ಎರಡು ಹೊಸ ಪದ್ಯಗಳು

ಗೇರು ಸೊನೆ…

ಜಗತ್ತು ಸಣ್ಣದಂತೆ, ಎಲ್ಲಿ ಹುಡುಕಲಿ ನಿನ್ನ !
ಬೇಲಿ ಆಚೆಗೆ ಮಣ್ಣು ಕೆದರುತ್ತಕೂತಂತೆ
ಉದುರಿ ಬಿದ್ದ ಗೋಡೆ ಹಿಂದೆ ಅಡಗಿ ನಿಂತಂತೆ
ಇನ್ನೊಂದೆರಡು ತಾಸಲ್ಲಿ ಊರ ಗೂಡಂಗಡಿಯಿಂದ
ಶೇಂಗಾ ಬೀಜ ತಂದು ಹಂಚಿದಂತೆ ಭಾವಿಸುವೆ..
ಗೆಳೆಯಾ, ಇದು ಕೇವಲ ಅನಿಸಿಕೆ ಮಾತ್ರ.. !

ಬಿಂಬಿ ಬಾಲಕ್ಕೆ ದಾರ ಕಟ್ಟಿ ಚಪ್ಪಾಳೆ ತಟ್ಟಲು
ಹುಡುಕುತಿಹೆಯೇನು ದಾರದುಂಡೆ ..
ಮೀನು ಹಿಡಿಯಲು ಅವಳೆಯಲ್ಲಿ
ಖಾಲಿಯಿದೆ ವಸ್ತ್ರದ ಇನ್ನೊಂದು ತುದಿ..
ಇರಬೇಕಿತ್ತು ನೀನು ನಗರದ ಗದ್ದಲದಿ ಕಳೆಯದೇ..

ಕಚ್ಚಾರಸ್ತೆಯ ಮೈಯ ತುಂಬಾ ಎಮ್ಮೇಟಿಹೀರೋ
ಗಾಡಿಯ ಟೈರು ಓಡಿಸಲು ಮತ್ತೆ ಕೋಲು ಹಿಡಿದು
ಹುಣಸೇಮರ ಹತ್ತಿ ಒಮ್ಮೊಮ್ಮೆ ಕಲ್ಲು ಹೊಡೆದು
ಬೇಸಿಗೆಯ ಮಾವಿನ ಹಣ್ಣಿಗೆ ಗುರಿಯಿಟ್ಟು
ಯಾರದೋ ಮನೆಯ ಹೆಂಚು ಒಡೆಯಲು
ಸಿಗಬೇಕಿತ್ತು ನೀನು ಅವಸರದ ಗಾಳಿಗೆ ಸೋಕದೇ..

ಪುಡಿಮಣ್ಣ ಕೆದರುತ್ತ ಗುಬ್ಬಿ ಮರಿಯ ಕರೆಯಲು
ದಪ್ಪನೆಯ ಮೋಡವಿರಲಿ ತಿಳಿನೀಲ‌ ಆಗಸವಿರಲಿ
ಹಾರಿಹೋದ ಬೆಳ್ಳಕ್ಕಿಗೆ ಚಪ್ಪಾಳೆ ತಟ್ಟಿ
ಬೆಳ್ಳಕ್ಕಿ ಬೆಳ್ಳಕ್ಕಿನಂಗೊಂದ್ ಉಂಗ್ರಕೊಡೇ, ಅನ್ನಲು
ಮೆತ್ತಿಕೊಳಲು ಕೈಕೈಗೆ ಗೇರು ಸೊನೆಯ
ಬರಬೇಕಿತ್ತು ನೀನು ಊರ ವಿಳಾಸವ ಮರೆಯದೇ..

ಹೊಗೆ ವಿಮಾನದ ಅವಶೇಷಕ್ಕೆ ವಯಸ್ಸು ನಿರ್ಧರಿಸಿ
ಕಾಗದದ ದೋಣಿ‌ ವಿಮಾನಗಳ ಕಾರ್ಖಾನೆಯಿಡಲು
ಅರ್ಧ ಮೈ ತೋಯಿಸಲು ಇಬ್ಬರೂ ಜಡಿಮಳೆಯಲ್ಲಿ
ಬರೆದುಕೊಳಲು ರಾತ್ರಿ ಕಂಡ ಯಕ್ಷ ಪಾತ್ರದ ಮೀಸೆ
ತರಬೇಕಿತ್ತು ನೀನು ಆಗಷ್ಟೇ ಸುಟ್ಟು ಕಪ್ಪಾದ
ಕಟ್ಟಿಗೆಯ ತುಂಡೊಂದನು ನಮ್ಮ ಚೌಕಿಮನೆಗೆ..

ಗೆಳೆಯಾ, ಜಗತ್ತು ಸಣ್ಣದಂತೆ, ಎಲ್ಲಿ ಹುಡುಕಲಿ‌‌ ನಿನ್ನ
ಹತ್ತಿರವೇ ಇದ್ದು ಕಳೆದುಕೊಂಡ ಆ ಹಳೆಯ’ನನ್ನ’..!

ಒಂದು ಕೋಣೆಯ ಹೆಜ್ಜೆ…

ಮುಸ್ಸಂಜೆಯೇನಲ್ಲ, ನೆರಳೊಂದು
ಮಲಗಿತ್ತು ಊರ ಪೂರ ಹರಡಿ..
ಹೊಕ್ಕೇನು ಪರಿಚಯವಿರದ ಕಟ್ಟಡದ
ಕೋಣೆಯ ದೀಪವೊಂದು ಆರಿರಲಿಲ್ಲ;
ಇನ್ನೂರು ಮಾರುಗಳ ದೂರದಲ್ಲಿ…
ತಿಳಿಯಲಿಲ್ಲ ಗಂಟೆ ಎರಡೋ ಮೂರೋ
ಇಲ್ಲಾ, ಅದರ ಮೇಲೆ ಮತ್ತರ್ಧವೋ…

ತಾಸುಗಳಾದವು ಯಾರೂ ಕೇಳದ
ಮುದುಕಿಯೊಬ್ಬಳು ಕವಳ ಕುಟ್ಟಿ ಮಲಗಿ..
ನೆರಿಗೆ ಎದ್ದಿರಬಹುದು
ಕೆಂಪು ದೀಪದ ಕೆನ್ನೆ ತಿಕ್ಕಿ..!
ಮಲಗಿಹರು ಸೊಳ್ಳೆ ಪರದೆ ಎಳೆದು
ಹೂವಾಡಗಿತ್ತಿ ಮತ್ತು ಪರಿವಾರ
ಎರಡು ಗಂಟೆ ಮುಚ್ಚಿದ
ಅಂಗಡಿಯ ಮಡಿಲಲ್ಲಿ..
ಯಾರಿರಬಹುದು ದೀಪ ಆರಿಸದೇ ಇದ್ದವರು
ಇಲ್ಲಾ , ಮಧ್ಯ ರಾತ್ರಿ ಎದ್ದವರು..

ಮನೆಯ ಯಜಮಾನಗೆ ಹೊಟ್ಟೆನೋವೇ?
ಹಟಕ್ಕೆ ಬಿದ್ದಿಹಳೇ ಮೊಲೆ ಹಾಲಿಗಾಗಿ
ಮೂರನೇ ಮಗಳ ಮೊದಲನೇ ಮಗಳು..
ತಿಗಣೆಯೊಂದು ಸಂಸಾರ ನಡೆಸಿತ್ತೇ
ಕಲೆಯಿಲ್ಲದ ಚಾದರದ ಅಡಿಯಲ್ಲಿ ಇಷ್ಟು ದಿನ..
ಇಲ್ಲಾ ಕಿರಿ ಮಗನ ಖಾಯಂ ಚಟವಿರಬಹುದೇ
ಮಲಗುವುದು ರಾತ್ರಿ ಪೂರ ದೀಪ ಆರಿಸದೇ..

ಹುಡುಕುತ್ತಿರಬಹುದೇ ತಾತ ತನ್ನ ಗೀರಿ‌ನ‌ ಚಾಳೀಸು
ಕುಡಿಯುವುದ ಮರೆತು ಎರಡು ಚಮಚ ಔಷಧಿ..
ಇಷ್ಟಿಷ್ಟೇ ಹತ್ತಿರವಾಗುವ ಸಾವು ನೋಡಲು
ಮಧ್ಯಮ ವರ್ಗದ ಮಧ್ಯದ ಮಗನಿಗೆ ಭಯವೇ..
ನಾನೇಕೆ ಕುಳಿತಿದ್ದೇನೆ ಅಪರಾತ್ರಿ ಜಗದ ಮಾತಿಗಾಗಿ..
ಹೊರನಡೆಯುವವರು ಯಾರಿರಬಹುದೀಗ
ಕಟ್ಟಡದ ಸಮಗ್ರ ಶಿಸ್ತಿನಲ್ಲಿ ಎದ್ದು ಕೂತವರಲ್ಲಿ.. !
ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ
ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ..

ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು.
ಸದ್ಯಕ್ಕೆ ಬೆಂಗಳೂರಿನ ನಿವಾಸಿ
ಸಾಫ್ಟ್‌ವೇರ್‌ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ