Advertisement
ಓದುಗರ ಹುಡುಕಾಟದಲ್ಲಿರುವುದು ಕಾದಂಬರಿಯ ಕೇಂದ್ರ

ಓದುಗರ ಹುಡುಕಾಟದಲ್ಲಿರುವುದು ಕಾದಂಬರಿಯ ಕೇಂದ್ರ

“ಕಾದಂಬರಿಯ ಕೇಂದ್ರದ ಶಕ್ತಿ ಇರುವುದು ಸ್ವತಃ ಅದರಲ್ಲಿ ಅಲ್ಲ, ಬದಲಿಗೆ ಓದುಗರಾಗಿ ನಾವು ನಡೆಸುವ ಅದರ ಹುಡುಕಾಟದಲ್ಲಿ. ಸಮತೋಲ ಮತ್ತು ವಿವರಗಳನ್ನುಳ್ಳ ಕಾದಂಬರಿ ಓದುತ್ತ ನಾವು ಅದರ ಕೇಂದ್ರವನ್ನು ಯಾವ ಖಚಿತ ಅರ್ಥದಲ್ಲೂ ಕಂಡುಕೊಳ್ಳುವುದಿಲ್ಲ, ಆದರೂ ಅದನ್ನು ಕಂಡೇವು ಅನ್ನುವ ಭರವಸೆಯನ್ನೂ ಬಿಡುವುದಿಲ್ಲ. ಕಾದಂಬರಿಯ ಕೇಂದ್ರ ಮತ್ತು ಅರ್ಥ ಓದುಗನಿಂದ ಓದುಗನಿಗೆ ಬದಲಾಗುತ್ತವೆ. ಕಾದಂಬರಿಯ ಕೇಂದ್ರವನ್ನು ಚರ್ಚೆ ಮಾಡುವಾಗ ನಾವು ಬದುಕನ್ನು ಕುರಿತ ನಮ್ಮ ದೃಷ್ಟಿಯನ್ನು ಚರ್ಚಿಸುತ್ತೇವೆ”
ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಭಾಷಣ ಮಾಲಿಕೆಯ ಕೊನೆಯ ಕಂತು.

ಕಾದಂಬರೀ ಪ್ರಕಾರದ ಬೆಳವಣಿಗೆಯನ್ನು ವಿಶ್ಲೇಷಿಸುವ ವಿಮರ್ಶಕರು ಮತ್ತು ಚರಿತ್ರೆಕಾರರು ಕಲ್ಪಕತೆ-ಕಾದಂಬರಿಗಳ ಅಧ್ಯಯನದಲ್ಲಿ ಕಾಲ, ದೇಶ, ಪ್ರತಿನಿಧೀಕರಣಗಳನ್ನು ಪರಿಶೀಲಿಸುತ್ತಾರೆ. ಆದರೆ ಕೇಂದ್ರವೆಂಬ ಕಲ್ಪನೆಗೆ ಅವರು ಹೆಚ್ಚು ಗಮನ ನೀಡಿಲ್ಲ. ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳಲ್ಲಿ ಕೇಂದ್ರವೆನ್ನುವುದು ಕಾದಂಬರಿಯ ಪೋಷಕ ಶಕ್ತಿ, ನಿರೂಪಣೆಯ ತಂತುಗಳ ಫೋಕಸ್ ಅನ್ನುವ ಹಾಗೆ ಎದ್ದು ಕಾಣುತ್ತಿರಲಿಲ್ಲ ಆ ಕಾಲದ ಕಾದಂಬರಿಗಳಲ್ಲಿ ಪ್ಲೇಗಿನಂಥ ಅನಾಹುತ (ಅಲೆಸ್ಸಾಂಡ್ರ ಮಾನ್ಝೊನಿಯ ದಿ ಬೆಟ್ರಾಥ್ಡ್), ಯುದ್ಧ (ಯುದ್ಧ ಮತ್ತು ಶಾಂತಿ), ಕೃತಿಗೆ ಹೆಸರು ನೀಡಿರುವ ಪ್ರಮುಖ ಪಾತ್ರ, ಆಕಸ್ಮಿಕಗಳು (ಯೂಜೀನ್ ಸ್ಯೂ ಕೃತಿಗಳು), ರಸ್ತೆಯಲ್ಲಿ ನಡೆಯುವ ಕಸ್ಮಿಕ ಭೇಟಿ (ವಿಕ್ಟರ್ ಹ್ಯೂಗೋ, ಲೆ ಮಿಸರಬಲ್) ಇಂಥವು ಪಾತ್ರಗಳನ್ನು ಒಟ್ಟಿಗೆ ತಂದು ಕಾದಂಬರಿಯ ವಿವಿಧ ಭಾಗಗಳ ನಡುವೆ ಸಂಬಂಧ ಕಲ್ಪಿಸುತ್ತಿದ್ದವು. ಇಪ್ಪತ್ತನೆಯ ಶತಮಾನದಲ್ಲಿ ಫಾಕ್ನರ್ ನಂಥ ಲೇಖಕ ಬಗೆಬಗೆಯ ನಿರೂಪಣಾ ತಂತ್ರಗಳನ್ನು ರೂಪಿಸಿದ ಮೇಲೂ ಸಾಹಿತ್ಯ ವಿಮರ್ಶೆಯು ಕೇಂದ್ರವೆಂಬ ಕಲ್ಪನೆಯನ್ನು ಪರಿಶೀಲಿಸಲು ಹಿಂಜರಿದಿವೆ. ಅಂತರಂಗ-ಬಹಿರಂಗ, ತೋರಿಕೆ ಮತ್ತು ವಾಸ್ತವ, ವಸ್ತು-ಭಾವ, ಒಳಿತು-ಕೆಡುಕು ಇಂಥ ಸರಳ ದ್ವಂದ್ವಾತ್ಮಕ ವಿರೋಧವನ್ನು ವಿರಚನಾವಾದೀ ಸಿದ್ಧಾಂತಗಳು ತಿರಸ್ಕರಿಸಿದ್ದೂ ಇದಕ್ಕೆ ಕಾರಣವಿರಬಹುದು.

ವೈಲ್ಡ್ ಪಾಮ್ಸ್ ಕಾದಂಬರಿಯನ್ನು ಬೋರೆಸ್ ಸ್ಪಾನಿಶ್ ಭಾಷೆಗೆ ಅನುವಾದಿಸಿದ ಮೇಲೆ ಲ್ಯಾಟಿನ್ ಅಮೆರಿಕದ ಲೇಖಕರು ಅದೇ ಜಾಡಿನ ಹಲವು ಕೃತಿ ರಚಿಸಿದರು, ಕೇಂದ್ರದ ಅನ್ವೇಷಣೆಯೇ ಓದಿನ ಸುಖ ಎಂಬಂತೆ ಮಾಡಿದರು. ಜೂಲಿಯೋ ಕೊರಟ್ಸಾರ್ ನ ಹಾಪ್ ಸ್ಕಾಚ್ (1963), ಮಿಲನ್ ಕುಂದೇರ ನ ಅನ್ ಬೇರಬಲ್ ಲೈಟ್ನೆಸ್ ಆಫ್ ಬೀಯಿಂಗ್ (1984), ಜೂಲಿಯನ್ ಬಾರ್ನೆಸ್ ನ ಹಿಸ್ಟರಿ ಆಫ್ ದಿ ವಲ್ರ್ಡ್ ಇನ್ 10 1/2 ಚಾಪ್ಟರ್ಸ್ (1989) ಕೆಲವು ಉದಾಹರಣೆಗಳು. ಇಂಥ ಕೃತಿಗಳು ಆಸಕ್ತಿ ಕೆರಳಿಸಿ ಅನೇಕ ಭಾಷೆಗಳಿಗೆ ಅನುವಾದಗೊಂಡವು. ಜಗತ್ತಿನಾದ್ಯಂತ ಇದ್ದ ನನ್ನಂಥ ಎಳೆಯ ಕಾದಂಬರಿಕಾರರಿಗೆ ಪಾಠ ಕಲಿಸಿದವು. ಅದು ಹಿಂದಿನಿಂದಲೂ ಗೊತ್ತಿದ್ದ ಪಾಠ—ಕಾದಂಬರಿಯೊಳಕ್ಕೆ ಏನನ್ನು ಬೇಕಾದರೂ ಸೇರಿಸಬಹುದು, ಪಟ್ಟಿ, ಕ್ಯಾಟಲಾಗು, ರೇಡಿಯೋ ನಾಟಕ, ವಿಚಿತ್ರ ಪದ್ಯ ಮತ್ತು ಟೀಕು, ವಿವಿಧ ಕಾದಂಬರಿಗಳ ಆಯ್ದ ಭಾಗ, ಚರಿತ್ರೆ ಮತ್ತು ವಿಜ್ಞಾನದ ಇತಿಹಾಸ ಕುರಿತ ಪ್ರಬಂಧ, ತತ್ವಾಶಾಸ್ತ್ರ ಬೋಧನೆ, ವಿಶ್ವಕೋಶದಂಥ ತೀರ ಸಣ್ಣ ಪುಟ್ಟ ವಿವರಗಳು… ಮನಸ್ಸಿಗೆ ಬಂದ ಏನು ಬೇಕಾದರೂ ಕಾದಂಬರಿಯಲ್ಲಿ ಸಲ್ಲುತ್ತದೆ ಅನ್ನುವ ಪಾಠ. ಪಾತ್ರ ವೈಚಿತ್ರ್ಯಕ್ಕಾಗಿ, ತಮ್ಮ ವ್ಯಕ್ತಿತ್ವದ ಮೇಲೆ ಕಾದಂಬರಿ ಪ್ಲಾಟು ಬೆಳಕು ಚೆಲ್ಲುತ್ತದೆ ಅನ್ನುವ ಕಾರಣಕ್ಕಾಗಿ ಓದುವ ಬದಲು ಇಂದಿನ ಓದುಗರು ಬದುಕಿನ ವಿನ್ಯಾಸವನ್ನು ಕುರಿತ ಚಿಂತನೆಯ ಸಲುವಾಗಿ ಕಾದಂಬರಿ ಓದುತ್ತಾರೆ.

ನನ್ನ ಕಾದಂಬರಿ ಬ್ಲಾಕ್ ಬುಕ್ ನ ಪಾತ್ರವೊಂದು ದಿನ ಪತ್ರಿಕೆಯ ಅಂಕಣಕಾರನ ಕೆಲಸವನ್ನು ವರ್ಣಿಸುವ ರೀತಿ ಕಾದಂಬರಿ ಲೇಖನಕ್ಕೂ ಹೊಂದುವ ಹಾಗಿದೆ: ಕಾದಂಬರಿ ಬರೆಯುವ ಕಲೆ ಎಂದರೆ ಮುಖ್ಯ ಸಂಗತಿಗಳು ತೀರ ಸಾಮಾನ್ಯ ಅನಗತ್ಯ ಅನ್ನುವ ಹಾಗೆ, ಅಮುಖ್ಯ ಸಂಗತಿಗಳು ತೀರ ಪ್ರಸ್ತುತ ಅನ್ನುವ ಹಾಗೆ ಬರೆಯುವ ಕಲೆ. ಈ ತತ್ವಕ್ಕೆ ಅನುಸಾರವಾಗಿ ರಚನೆಗೊಂಡ ಕಾದಂಬರಿಯನ್ನು ಓದುವವರು ಕೇಂದ್ರಕ್ಕಾಗಿ, ಯಾವುದು ಮುಖ್ಯ ಯಾವುದು ಅಲ್ಲ ಅನ್ನುವುದು ತಿಳಿಯುವುದಕ್ಕಾಗಿ ಪ್ರತಿ ಪ್ಯಾರಾ, ಪ್ರತಿ ವಾಕ್ಯವನ್ನೂ ಹುಡುಕಬೇಕು. ನಾವು ಪ್ರಬುದ್ಧ ಕಾದಂಬರಿಕಾರರಾಗಿದ್ದರೆ, ಅಂದರೆ ನಮ್ಮ ನಿರೂಪಣಾ ವಿಧಾನಗಳ ಬಗ್ಗೆ ಪ್ರಜ್ಞೆ ಇರುವವರಾದರೆ, ಓದುಗರು ಕೃತಿಯ ರೂಪವನ್ನು ಗಮನಿಸಿ ಕೇಂದ್ರವನ್ನು ಕಲ್ಪಿಸಿಕೊಳ್ಳುತ್ತಾರೆ ಅನ್ನುವುದು ಗೊತ್ತಿರುತ್ತದೆ. ಸೃಷ್ಟಿಕರ್ತ ಮತ್ತು ಕಲಾವಿದನಾಗಿ ಕಾದಂಬರಿಕಾರನ ಉನ್ನತ ಸಾಧನೆ ಎಂದರೆ ಕಾದಂಬರಿಯ ರೂಪವನ್ನು ಒಗಟಿನ ಹಾಗೆ ರೂಪಿಸುವುದು. ಆ ಒಗಟಿನ ಉತ್ತರವೇ ಕಾದಂಬರಿಯ ಕೇಂದ್ರವನ್ನು ತೋರುತ್ತದೆ. ತೀರ ಮುಗ್ಧ ಓದುಗನೂ ಕೂಡ ಒಗಟಿನ ಉತ್ತರವೇ ಕಾದಂಬರಿಯ ಕೇಂದ್ರದ ಸೂಚನೆ ಎಂದು ತಿಳಿಯುತ್ತಾನೆ. ಸಾಹಿತ್ಯಕ ಕಾದಂಬರಿಯಲ್ಲಿ ಕೊಲೆಗಾರ ಯಾರು ಎಂದು ಊಹಿಸುವುದು ಒಗಟಲ್ಲ, ಬದಲಾಗಿ ಕಾದಂಬರಿಯ ನಿಜ ವಸ್ತುವುದನ್ನು ಹುಡುಕುವುದೇ ಕೇಂದ್ರವಾಗಿರುತ್ತದೆ. ಈ ಮಟ್ಟದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಕಾದಂಬರಿ ತಲುಪುವುದಕ್ಕೆ ಸಾಧ್ಯವಾದರೆ ಆಗ ನಿರೂಪಣೆಯ ರೂಪ ಅತಿ ಹೆಚ್ಚಿನ ಕುತೂಹಲ ಕೆರಳಿಸುತ್ತದೆಯೇ ಹೊರತು ನಿರೂಪಣೆಯ ವಿಷಯವಲ್ಲ.

ಮನಸ್ಸಿಗೆ ಬಂದ ಏನು ಬೇಕಾದರೂ ಕಾದಂಬರಿಯಲ್ಲಿ ಸಲ್ಲುತ್ತದೆ ಅನ್ನುವ ಪಾಠ. ಪಾತ್ರ ವೈಚಿತ್ರ್ಯಕ್ಕಾಗಿ, ತಮ್ಮ ವ್ಯಕ್ತಿತ್ವದ ಮೇಲೆ ಕಾದಂಬರಿ ಪ್ಲಾಟು ಬೆಳಕು ಚೆಲ್ಲುತ್ತದೆ ಅನ್ನುವ ಕಾರಣಕ್ಕಾಗಿ ಓದುವ ಬದಲು ಇಂದಿನ ಓದುಗರು ಬದುಕಿನ ವಿನ್ಯಾಸವನ್ನು ಕುರಿತ ಚಿಂತನೆಯ ಸಲುವಾಗಿ ಕಾದಂಬರಿ ಓದುತ್ತಾರೆ.

ಕಾಲ್ವಿನೋ 1970ರಲ್ಲಿ ತೀವ್ರವಾಗ್ವಾದಕ್ಕೆ ಕಾರಣವಾದ ಪ್ರಬಂಧ ಬರೆದ. “ದಿ ನಾವೆಲ್ ಆಸ್ ಅ ಸ್ಪೆಕ್ಟಕಲ್” ಎಂಬ ಪ್ರಂಬಧದಲ್ಲಿ ಆ ಕಾಲದ ಕಾದಂಬರಿಗಳಲ್ಲಿ ಆಗುತಿದ್ದ ಬದಲಾವಣೆಗಳನ್ನು ವಿವರಿಸಿದ. ‘ಕಾದಂಬರಿ ಅಥವಾ ಪ್ರಾಯೋಗಿಕ ಸಾಹಿತ್ಯವು ಕಾದಂಬರಿಯ ಸ್ಥಾನವನ್ನು ಆಕ್ರಮಿಸಿದೆ; ತನ್ನ ಪುಟಗಳಾಚೆ ಇರುವ ಕಥೆಯನ್ನು ಅವಲಂಬಿಸಬಾರದು ಅನ್ನುವುದು ಅದರ ಮೊದಲ ನಿಯಮ; ಬರವಣಿಗೆಯ ಪ್ರಕ್ರಿಯೆಯನ್ನು ಅನುಸರಿಸುವುದಷ್ಟೇ ಓದುಗನ ಕೆಲಸ’ವಾಗಿದೆ ಎಂದ. ಕಾದಂಬರಿಯ ರೂಪವೆಂದರೆ ಒಟ್ಟಾರೆ ದೃಷ್ಟಿ, ಓದುಗನು ಕಾದಂಬರಿಯ ಲ್ಯಾಂಡ್ ಸ್ಕೇಪಿನಲ್ಲಿ ಮಗ್ನನಾಗಿರುವಾಗ ಬಿಡಿ ಮರಗಳು ಒಟ್ಟಾರೆ ಕಾಡಿನ ರೂಪವನ್ನು ಮರೆ ಮಾಡಿರುತ್ತವೆ, ಕಾದಂಬರಿಯ ಕೇಂದ್ರವನ್ನು ಹುಡುಕಿಕೊಳ್ಳುವುದೇ ಓದುಗರ ಕೆಲಸವೆಂದಾಗುತ್ತದೆ.

ತನ್ನ ಮುಗ್ಧ ಮನಸ್ಥಿತಿಯಿಂದ ಪೂರಾ ದೂರವಾಗಿ ಪ್ರಬುದ್ಧನಾಗಿರುವ ಕಾದಂಬರಿಕಾರನು ತನ್ನ ಕಾದಂಬರಿಯನ್ನು ತಾನೇ ಓದುಗನ ದೃಷ್ಟಿಯಿಂದ ಓದಬಲ್ಲವನಾಗಿರುತ್ತಾನೆ. ಹೊರೇಸ್ ಹೇಳಿದ ಹಾಗೆ ಈ ಧೋರಣೆಯು ನಾವೇ ಮಾಡಿರುವ ಲ್ಯಾಂಡ್ ಸ್ಕೇಪ್ ಚಿತ್ರವನ್ನು ನಾವೇ ಎರಡು ಹೆಜ್ಜೆ ಹಿಂದೆ ಸರಿದು ಹೊಸ ದೃಷ್ಟಿಕೋನದಿಂದ ನೋಡಿ, ಮತ್ತೆ ಹತ್ತಿರ ಬಂದು ನೋಡಿ, ಆಮೇಲೆ ಹಿಂದೆ ಸರಿದ ಹಾಗೆ. ಅಂದರೆ ಚಿತ್ರವನ್ನು ನೋಡುತ್ತಿರುವ ವ್ಯಕ್ತಿ ಬೇರೆ ಯಾರೋ ಅನ್ನುವ ಹಾಗೆ ನಟಿಸಬೇಕಾಗುತ್ತದೆ. ನಾವು ಯಾವುದನ್ನು ಕೇಂದ್ರವೆನ್ನುತ್ತೇವೋ ಅದು ನಾವೇ ಮಾಡಿದ ರಚನೆ ಅನ್ನುವುದು ಜ್ಞಾಪಕಕ್ಕೆ ಬರುತ್ತದೆ. ಕಾದಂಬರಿ ಬರೆಯುವುದೆಂದರೆ— ಬದುಕಿನಲ್ಲಿ, ಲೋಕದಲ್ಲಿ ಇಲ್ಲದ ಕೇಂದ್ರವನ್ನು ಸೃಷ್ಟಿ ಮಾಡಿ ಅದನ್ನು ಶಬ್ದಗಳ ಲೋಕದಲ್ಲಿ ಬಚ್ಚಿಡುವುದು. ಓದುಗರ ಜೊತೆ ಕಾಲ್ಪನಿಕ ಚೆಸ್ ಆಟದಲ್ಲಿ ತೊಡಗುವುದು.

ಕಾದಂಬರಿಯನ್ನು ಓದುವುದೆಂದರೆ ಇದೇ ಕೆಲಸವನ್ನು ವಿರುದ್ಧ ದಿಕ್ಕಿನಿಂದ ಮಾಡಿಕೊಂಡು ಬರುವುದು. ಓದುಗನಿಗೂ ಲೇಖಕನಿಗೂ ನಡುವೆ ಇರುವುದು ಕಾದಂಬರಿಯ ಪಠ್ಯ ಮಾತ್ರ. ಅದೇ ಒಂದು ಥರದ ಚೆಸ್ ಬೋರ್ಡು. ಪ್ರತಿಯೊಬ್ಬ ಓದುಗನೂ ಪಠ್ಯವನ್ನು ತನ್ನದೇ ರೀತಿಯಲ್ಲಿ ದೃಶ್ಯಗೊಳಿಸಿಕೊಳ್ಳುತ್ತಾನೆ, ತನಗೆ ಇಷ್ಟ ಬಂದಲ್ಲಿ ಕೇಂದ್ರವನ್ನು ಹುಡುಕುತ್ತಾನೆ.

ಆದರೂ ಇದು ಮನಬಂದಂತೆ ಆಡುವ ಆಟವಲ್ಲ. ನಮ್ಮಪ್ಪ, ಅಮ್ಮ ಹೇಳಿಕೊಟ್ಟ ಮರ್ಯಾದೆ, ನಮಗೆ ಪಾಠ ಕಲಿಸಿದ ಶಾಲೆ, ನಮ್ಮ ಧರ್ಮ ಮಾಡಿರುವ ಬೋಧೆ, ನಮ್ಮ ಪುರಾಣ, ಸಂಪ್ರದಾಯ, ನಮಗೆ ಪ್ರಿಯವಾದ ಚಿತ್ರ, ನಾವು ಓದಿರುವ ಒಳ್ಳೆಯ, ಕೆಟ್ಟ ಕಾದಂಬರಿ, ಪತ್ರಿಕೆಯ ಮಕ್ಕಳ ವಿಭಾಗದಲ್ಲಿ ದಾರಿ ಹುಡುಕಿ ಎಂದು ಕೊಟ್ಟಿರುವ ಚಕ್ರವ್ಯೂಹದ ಚಿತ್ರ ಇವೆಲ್ಲವೂ ಕೇಂದ್ರವೆನ್ನುವುದೊಂದಿದೆ, ಅದನ್ನು ನಾವು ಹೇಗೆ ಹುಡುಕಬೇಕು, ಎಲ್ಲಿ ಹುಡುಕಬೇಕು ಅನ್ನುವುದನ್ನು ಹೇಳಿಕೊಟ್ಟಿವೆ. ಈ ಎಲ್ಲ ಶಿಕ್ಷಣದ ಫಲಿತಾಂಶವಾಗಿ ಮತ್ತು ಪ್ರತಿಕ್ರಿಯೆಯಾಗಿ ಕೂಡಾ ಕಾದಂಬರಿಯ ಬರವಣಿಗೆ ಮತ್ತು ಓದು ಸಾಗುತ್ತದೆ.

ಸಾಹಿತ್ಯಕ ಕಾದಂಬರಿ ಓದುವುದಕ್ಕೆ ಶುರು ಮಾಡಿದ ಮೇಲೆ, ಲೋಕವನ್ನು ವಿಭಿನ್ನ ಪಾತ್ರಗಳ ಕಣ್ಣಿನಿಂದ ಕಾಣಲು ಶುರು ಮಾಡಿದ ಮೇಲೆ ‘ಒಂದೇ ಕೇಂದ್ರವಿರುವುದಕ್ಕೆ ಸಾಧ್ಯವಿಲ್ಲ’ ಎಂಬ ಸತ್ಯ ನನಗೆ ಸ್ಪಷ್ಟವಾಯಿತು. ಮನಸ್ಸು ಮತ್ತು ಭೌತಿಕದೇಹ, ಮನುಷ್ಯ ಮತ್ತು ನಿಸರ್ಗ, ತರ್ಕ ಮತ್ತು ಕಲ್ಪನೆ, ಇವೆಲ್ಲ ಡೆ ಕಾರ್ಟೆಯ ತತ್ವಜ್ಞಾನದ ಲೋಕದಲ್ಲಿ ಪ್ರತ್ಯೇಕವಾಗಿರಬಹುದೇ ಹೊರತು ಕಾದಂಬರಿಯ ಲೋಕದಲ್ಲಿ ಅಲ್ಲ. ಆಧುನಿಕ ರಾಷ್ಟ್ರ ಪ್ರಭುತ್ವಗಳು ಒಂದೇ ಕೇಂದ್ರವನ್ನು ಬಯಸುತ್ತವೆ, ಎಲ್ಲವನ್ನೂ ನಿಯಂತ್ರಿಸಲು ಬಯಸುವ ಒಂದೇ ಕೇಂದ್ರವಿರಬೇಕೆಂದು ಬಯಸುತ್ತವೆ. ಆದರೆ ಕಾದಂಬರಿಯ ಓದು ಹೀಗಲ್ಲ. ಕೃತಿಯು ಚಿತ್ರಿಸುವ ಒಟ್ಟಾರೆ ಲೋಕದ ಮೇಲೆ ತೀರ್ಮಾನ ಘೋಷಿಸುವುದಕ್ಕಿಂತ ಮಿಗಿಲಾಗಿ ಆ ಲೋಕದ ಅಸ್ಪಷ್ಟ ಮೂಲೆಯನ್ನು, ಪ್ರತಿಯೊಬ್ಬ ವ್ಯಕ್ತಿಯನ್ನು, ಆ ಲೋಕದ ಪ್ರತಿಯೊಂದೂ ಬಣ್ಣ, ನೆರಳು, ಛಾಯೆಗಳನ್ನು ಅನುಭವಿಸುವುದು ಇದೆಯಲ್ಲ ಅದು ಕಾದಂಬರಿಯ ಓದು. ಕಾದಂಬರಿ ಓದುವಾಗ ಎಲ್ಲವನ್ನೂ ತಾರ್ಕಿಕವಾಗಿ ಗ್ರಹಿಸುವುದಕ್ಕಿಂತ ಎಲ್ಲವನ್ನೂ ಸ್ಪಷ್ಟವಾದ ವಿವರವಾದ ಚಿತ್ರಗಳಾಗಿಸಿಕೊಳ್ಳುವುದಕ್ಕಾಗಿ, ಈ ಚಿತ್ರಗಳ ಗ್ಯಾಲರಿಯಲ್ಲಿ ನಮ್ಮದೇ ಜಾಗಮಾಡಿಕೊಳ್ಳುವುದಕ್ಕಾಗಿ, ಪ್ರತಿಯೊಂದೂ ಪ್ರಚೋದನೆಗೆ ನಮ್ಮ ಸಂವೇದನೆಗಳನ್ನು ತೆರೆದಿಟ್ಟುಕೊಳ್ಳುವುದಕ್ಕಾಗಿ ನಮ್ಮ ಶ್ರಮ ವಿನಿಯೋಗಿಸುತ್ತೇವೆ.

ಅಂದರೆ, ಕೇಂದ್ರವನ್ನು ಕಂಡುಕೊಳ್ಳುವ ಭರವಸೆಯೇ ನಮ್ಮ ಮನಸ್ಸು ಇಂದ್ರಿಯಗಳನ್ನು ಚುರುಕಾಗಿರುವಂತೆ ಪ್ರಚೋದಿಸುತ್ತದೆ, ಕಥೆಯ ಲೋಕದಲ್ಲಿ ನಾವೂ ಸೇರಿಹೋಗುವಂತೆ ಕಲ್ಪನೆಯನ್ನು ಉದ್ದೀಪಿಸುತ್ತದೆ. ಭರವಸೆ ಅನ್ನುವ ಮಾತನ್ನು ಗಂಭೀರವಾಗಿ ಬಳಸಿದ್ದೇನೆ. ಕಾದಂಬರಿಯನ್ನು ಓದುವ ಕ್ರಿಯೆಯು ಲೋಕದಲ್ಲಿ ಕೇಂದ್ರವಿದೆ ಎಂದು ನಂಬಲು ಬಯಸುವ ಪ್ರಯತ್ನವಾಗಿರುತ್ತದೆ. ಮಹಾನ್ ಕಾದಂಬರಿಗಳು, ಅನ್ನಾ ಕರೆನೀನ, ಸರ್ಚ್ ಆಫ್ ಲಾಸ್ಟ್ ಟೈಮ್, ದಿ ಮ್ಯಾಜಿಕ್ ಮೌಂಟನ್, ದಿ ವೇವ್ಸ್ ನಂಥವು, ಅನಿವಾರ್ಯ ಕೃತಿಗಳು, ಯಾಕೆಂದರೆ ಲೋಕಕ್ಕೆ ಒಂದು ಕೇಂದ್ರವಿದೆ, ಅರ್ಥವಿದೆ ಎಂಬ ಸ್ಪಷ್ಟವಾದ ಮಾಯೆಯನ್ನು ಅವು ಸೃಷ್ಟಿಸುತ್ತವೆ. ಕಾದಂಬರಿಗಳ ಪುಟ ತಿರುಗಿಸಿದ ಹಾಗೆ ಇಂಥ ನಮ್ಮ ಭಾವಕ್ಕೆ ಪೋಷಣೆ ದೊರೆಯುತ್ತದೆ. ಪತ್ತೇದಾರಿ ಕಥೆಯಲ್ಲಿ ಕಳೆದು ಹೋಗುವ ವಜ್ರಕ್ಕಿಂತ ಅಮೂಲ್ಯವಾದದ್ದು “ದಿ ಮ್ಯಾಜಿಕ್ ಮೌಂಟನ್” ನಂಥ ಕಾದಂಬರಿ ಬದುಕಿನ ಬಗ್ಗೆ ಕೊಡುವ ತಿಳಿವು. ಇಂಥ ಕಾದಂಬರಿಯನ್ನು ಒಮ್ಮೆ ಓದಿ ಮುಗಿಸಿದ ಮೇಲೆ ಮತ್ತೆ ಇನ್ನೊಮ್ಮೆ ಓದಲು ಬಯಸುತ್ತೇವೆ. ಕಾದಂಬರಿಯ ಕೇಂದ್ರ ನಮಗೆ ಅರಿವಾಗಿದೆ ಎಂದಲ್ಲ, ಕಾದಂಬರಿಯು ನಮ್ಮಲ್ಲಿ ಮೂಡಿಸುವ ಭರವಸೆಯ ಭಾವವನ್ನು ಮತ್ತೊಮ್ಮೆ ಅನುಭವಿಸುವ ಸಲುವಾಗಿ. ಕಾದಂಬರಿಯ ಎಲ್ಲ ಪಾತ್ರ,ಅವುಗಳ ದೃಷ್ಟಿಕೋನವನ್ನು ಅನುಸರಿಸಿ ಪದಗಳನ್ನು ಚಿತ್ರಗಳಾಗಿ ಪರಿವರ್ತಿಸಿಕೊಳ್ಳಲು ಶ್ರಮಿಸುತ್ತೇವಲ್ಲ ಅದೇ ಮಹಾನ್ ಕಾದಂಬರಿಯಲ್ಲಿ ಒಂದು ಕೇಂದ್ರ ಮಾತ್ರ ಇರುವುದಿಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇದನ್ನು ಸಿದ್ಧಾಂತದ ಮೂಲಕವಲ್ಲ ಓದಿನ ಅನುಭವದ ಮೂಲಕ ಅರಿಯುತ್ತೇವೆ. ಮಹಾನ್ ಕಾದಂಬರಿಗಳನ್ನು ಓದುವ ಮೂಲಕ ಆಧುನಿಕ ಸೆಕ್ಯುಲರ್ ವ್ಯಕ್ತಿ ಬದುಕಿನ ಅರ್ಥದ ಗಹನತೆಯನ್ನು ಕಾಣಬಹುದು. ಲೋಕಕ್ಕೆ ಮಾತ್ರವಲ್ಲ ನಮ್ಮ ಮನಸಿಗೂ ಒಂದಕ್ಕಿಂತ ಹೆಚ್ಚು ಕೇಂದ್ರಗಳಿವೆ ಅನ್ನುವುದನ್ನು ತಿಳಿಯುತ್ತೇವೆ.

ತನ್ನ ಮುಗ್ಧ ಮನಸ್ಥಿತಿಯಿಂದ ಪೂರಾ ದೂರವಾಗಿ ಪ್ರಬುದ್ಧನಾಗಿರುವ ಕಾದಂಬರಿಕಾರನು ತನ್ನ ಕಾದಂಬರಿಯನ್ನು ತಾನೇ ಓದುಗನ ದೃಷ್ಟಿಯಿಂದ ಓದಬಲ್ಲವನಾಗಿರುತ್ತಾನೆ. ಹೊರೇಸ್ ಹೇಳಿದ ಹಾಗೆ ಈ ಧೋರಣೆಯು ನಾವೇ ಮಾಡಿರುವ ಲ್ಯಾಂಡ್ ಸ್ಕೇಪ್ ಚಿತ್ರವನ್ನು ನಾವೇ ಎರಡು ಹೆಜ್ಜೆ ಹಿಂದೆ ಸರಿದು ಹೊಸ ದೃಷ್ಟಿಕೋನದಿಂದ ನೋಡಿ, ಮತ್ತೆ ಹತ್ತಿರ ಬಂದು ನೋಡಿ, ಆಮೇಲೆ ಹಿಂದೆ ಸರಿದ ಹಾಗೆ.

ನಾವು ಕಾದಂಬರಿಯನ್ನು ಓದುತ್ತ ಬೇರೆ ಬೇರೆ ಕ್ರಿಯೆಗಳನ್ನು ನಿರ್ವಹಿಸುತ್ತೇವೆ. ಭಿನ್ನ ಮನೋಧರ್ಮ ಮತ್ತು ನೈತಿಕತೆಯುಳ್ಳ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ನಡೆಸುವ ಪ್ರಯತ್ನಪಡುತ್ತೇವೆ; ಏಕ ಕಾಲದಲ್ಲೇ ಪರಸ್ಪರ ವಿರುದ್ಧ ನಿಲುವುಗಳನ್ನು ನಂಬುವ ಸಾಮರ್ಥ್ಯ ತೋರುತ್ತೇವೆ; ಭಿನ್ನ ನಿಲುವು ನಮ್ಮವೇ ಎಂಬಂತೆ ಗುರುತಿಸಿಕೊಂಡೂ ಅಸ್ಥಿರರಾಗದೆ ಇರುತ್ತೇವೆ. ಸಂದಿಗ್ಧಮಯವಾದ ಹಲವು ಕೇಂದ್ರಗಳಿರುವ ಕಾದಂಬರಿಗಳನ್ನು ಓದುತ್ತ ಕೇಂದ್ರವೊಂದನ್ನು ಹುಡುಕುತ್ತಿರುವಾಗ ನಮ್ಮ ಮನಸ್ಸು ಒಮ್ಮೆಗೇ ಹಲವು ಸಂಗತಿಗಳನ್ನು ನಂಬಬಲ್ಲದು ಅನ್ನುವ ಅರಿವು ಮೂಡುತ್ತದೆ; ನಮ್ಮ ಮನಸ್ಸಿಗಾಗಲೀ ಲೋಕಕ್ಕಾಗಲೀ ನಿಜವಾಗಿ ಒಂದು ಕೇಂದ್ರವಿಲ್ಲ ಅನ್ನುವುದು ತಿಳಿಯುತ್ತದೆ. ಲೋಕವನ್ನು ಅರ್ಥಮಾಡಿಕೊಳ್ಳಬೇಕೆಂಬ ಆಸೆಗೆ ರಾಜಕೀಯ ಮುಖವಿದೆ ಅನ್ನುವುದು ನಮಗೆ ಗೊತ್ತಿರುವ ಹೊತ್ತಿನಲ್ಲೇ ಕೇಂದ್ರವನ್ನು ವಿರೋಧಿಸುವ ಪ್ರವೃತ್ತಿಯೂ ಇರುತ್ತದೆ. ಸಾಹಿತ್ಯಕ ಕಾದಂಬರಿಯು ಸ್ಪಷ್ಟತೆ ಮತ್ತು ಸಂದಿಗ್ಧತೆ, ನಿಯಂತ್ರಣ ಮತ್ತು ವ್ಯಾಖ್ಯಾನ ಸ್ವಾತಂತ್ರ್ಯ, ಸಂರಚನೆ ಮತ್ತು ವಿರಚನೆಗಳ ವಿಶಿಷ್ಯ ಸಮತೋಲವನ್ನು ಸಾಧಿಸುತ್ತವೆ. ಇಂಥ ದ್ವಂದ್ವಕ್ಕದ ಓದುಗರಲ್ಲೂ ಪ್ರಾಮಾಣಿಕ ಪ್ರತಿಸ್ಪಂದನ ಮೂಡುತ್ತದೆ. ‘ಮರ್ಡರ್ ಆನ್ ದಿ ಓರಿಯೆಂಟ್ ಎಕ್ಸ್ ಪ್ರೆಸ್’ ಕಾದಂಬರಿ ತೀರ ಸ್ಪಷ್ಟವಾದ ಕೇಂದ್ರವಿರುವ, ‘ಫಿನಿಗನ್ಸ್ ವೇಕ್’ ಅರ್ಥವಿರಬಹುದಾದ ಯಾವುದೇ ಕೇಂದ್ರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಕಾದಂಬರೀ ಮಾದರಿಗಳಾಗಿ ಕಾಣುತ್ತವೆ. ಯಾವ ಓದುಗರನ್ನು ಉದ್ದೇಶಿಸಿದೆ ಕಾದಂಬರಿ, ಯಾವಾಗ ಹೇಗೆ ನುಡಿಯುತ್ತದೆ, ಯಾವ ವಿಷಯಗಳನ್ನು ನಿರ್ವಹಿಸುತ್ತದೆ ಇವೆಲ್ಲವೂ ಕಾಲ ಕ್ರಮದಲ್ಲಿ ಬದಲಾಗುತ್ತವೆ, ಅಂದರೆ ಕಾದಂಬರಿಯ ಕೇಂದ್ರವೂ ಬದಲಾಗುತ್ತದೆ.

‘ದಿ ಡೆವಿಲ್ಸ್’ ಬರೆಯುತ್ತಿರುವಾಗ ದಾಸ್ತೆಯೇವ್ಸ್ಕಿ ಕಥೆಗೆ ಹೊಸ ಕೇಂದ್ರವೊಂದು ರೂಪುಗೊಳ್ಳುತ್ತಿರುವ ಬಗ್ಗೆ ಅನುಭವಿಸಿದ ಆನಂದೋದ್ರೇಕವನ್ನು ಆಗಲೇ ಹೇಳಿದೆ. ಈ ಅನುಭವ ಎಲ್ಲ ಕಾದಂಬರಿಕಾರರದ್ದೂ ಹೌದು. ಬರೆಯುತ್ತಿರುವಾಗಲೇ ನಮ್ಮ ಪುಸ್ತಕದ ಅರ್ಥದ ಆಳದ ಅರಿವು ನಮಗಾಗುತ್ತಿರುತ್ತದೆ. ಬರೆದು ಮುಗಿಸಿದ ಕೃತಿಯಲ್ಲಿ ಎಷ್ಟೆಲ್ಲ ಅರ್ಥ ಶ್ರೀಮಂತಿಕೆ ಇರುತ್ತದೆನ್ನುವ ಅರಿವೂ ಮೂಡುತ್ತದೆ. ಆಗಲೇ ಬರೆದದ್ದನ್ನು ಈ ಹೊಸ ಕೇಂದ್ರದ ಬೆಳಕಿನಲ್ಲಿ ಪರಿಷ್ಕರಿಸುತ್ತೇವೆ. ನನ್ನ ಮಟ್ಟಿಗೆ ಬರೆಯುವುದೆಂದರೆ ಇದು—ಹೊಸ ಭಾಗ, ದೃಶ್ಯ, ವಿವರ, ಪಾತ್ರಗಳ ಸೇರ್ಪಡೆ, ಹೊಸ ದನಿಗಳನ್ನು ಸೇರಿಸುವ, ಇರುವ ಕೆಲವು ದನಿಗಳನ್ನು ಇಲ್ಲವಾಗಿಸುವ, ಬರೆಯಲು ತೊಡಗಿದಾಗ ಕಲ್ಪಿಸಿಕೊಂಡೂ ಇರದಿದ್ದ ಅನೇಕ ಸಂಗತಿಗಳನ್ನು ಸೇರಿಸುವ ಕೆಲಸ, ಇಂಥ ಬರವಣಿಗೆ ಕುರಿತು ಟಾಲ್ಸ್ ಟಾಯ್ ಮಾತಾಡುತ್ತ ಒಮ್ಮೆ ನಿಯಮವೊಂದನ್ನು ಹೀಗೆ ಹೇಳಿದ ಎಂದು ಎಲ್ಲೋ ಓದಿದ್ದೇನೆ: ‘ಕಾದಂಬರಿಯ ನಾಯಕ ತೀರ ಕೆಟ್ಟವನಾದರೆ ಒಂದಿಷ್ಟು ಒಳ್ಳೆಯತನ ಸೇರಿಸಬೇಕು, ತೀರ ಒಳ್ಳೆಯವನಾದರೆ ಒಂದಿಷ್ಟು ಕೆಟ್ಟತನ ಸೇರಿಸಬೇಕು.’ ಇದೇ ಧೋರಣೆಯಲ್ಲಿ ಇಂಥದೇ ನನ್ನ ಮಾತು ಸೇರಿಸಬೇಕು ಅನ್ನಿಸುತ್ತದೆ. ಕೇಂದ್ರವು ತೀರ ಸ್ಪಷ್ಟವಾಗಿದ್ದರೆ ಅದನ್ನು ಬಚ್ಚಿಡಬೇಕು, ಕೇಂದ್ರವು ತೀರ ಅಸ್ಪಷ್ಟವಾಗಿದ್ದರೆ ಒಂದಿಷ್ಟು ತೋರ್ಪಡಿಸಬೇಕು.

ಕಾದಂಬರಿಯ ಕೇಂದ್ರದ ಶಕ್ತಿ ಇರುವುದು ಸ್ವತಃ ಅದರಲ್ಲಿ ಅಲ್ಲ, ಬದಲಿಗೆ ಓದುಗರಾಗಿ ನಾವು ನಡೆಸುವ ಅದರ ಹುಡುಕಾಟದಲ್ಲಿ. ಸಮತೋಲ ಮತ್ತು ವಿವರಗಳನ್ನುಳ್ಳ ಕಾದಂಬರಿ ಓದುತ್ತ ನಾವು ಅದರ ಕೇಂದ್ರವನ್ನು ಯಾವ ಖಚಿತ ಅರ್ಥದಲ್ಲೂ ಕಂಡುಕೊಳ್ಳುವುದಿಲ್ಲ, ಆದರೂ ಅದನ್ನು ಕಂಡೇವು ಅನ್ನುವ ಭರವಸೆಯನ್ನೂ ಬಿಡುವುದಿಲ್ಲ. ಕಾದಂಬರಿಯ ಕೇಂದ್ರ ಮತ್ತು ಅರ್ಥ ಓದುಗನಿಂದ ಓದುಗನಿಗೆ ಬದಲಾಗುತ್ತವೆ. ಕಾದಂಬರಿಯ ಕೇಂದ್ರವನ್ನು ಚರ್ಚೆ ಮಾಡುವಾಗ ನಾವು ಬದುಕನ್ನು ಕುರಿತ ನಮ್ಮ ದೃಷ್ಟಿಯನ್ನು ಚರ್ಚಿಸುತ್ತೇವೆ. ಇವೇ ಟೆನ್ಶನ್ನಿನ ಪಾಯಿಂಟುಗಳು, ಕಾದಂಬರಿ ಓದುವ ಹಾಗೆ ಒತ್ತಾಯಿಸುವಂಥವು ಮತ್ತು ಈ ಪ್ರಶ್ನೆಗಳೇ ನಮ್ಮ ಕುತೂಹಲ ಉಳಿಸಿಕೊಳ್ಳುತ್ತವೆ. ಪಾತ್ರ ಮತ್ತು ಲೇಖಕನ ಬಗ್ಗೆ ಆತುರದ ತೀರ್ಮಾನಕ್ಕೆ ಬರದಂತೆ ತಡೆಯುತ್ತವೆ.

ನಮ್ಮ ನೈತಿಕ ತೀರ್ಮಾನವನ್ನು ಅಮಾನತ್ತಿನಲ್ಲಿಡುವುದರಿಂದ ಕಾದಂಬರಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ಮಾತು ಕಾಲ್ರಿಜ್ ನ ‘ಅಪನಂಬಿಕೆಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡುವುದು’ ಎಂಬ ಹೇಳಿಕೆಯನ್ನು ನೆನಪಿಸಬೇಕು. ಆತ ಅದ್ಭುತ ರಮ್ಯ ಸಾಹಿತ್ಯದ ಸೃಷ್ಟಿ ಸಾಧ್ಯವಾಗಬೇಕಾದರೆ ಇಂಥ ಮನಸ್ಥಿತಿ ಅಗತ್ಯವೆಂದು ಹೇಳಿದ್ದ. ಆ ಮಾತು ಹೇಳಿ ಎರಡು ಶತಮಾನ ಕಳೆದಿವೆ. ಕಾದಂಬರಿಯ ಕಲೆ ಕಾವ್ಯ ಮತ್ತು ಇತರ ಪ್ರಕಾರಗಳನ್ನು ಅಂಚಿಗೆ ಸರಿಸಿದೆ, ಜಗತ್ತಿನ ಬಹು ಮುಖ್ಯ ಸಾಹಿತ್ಯ ಪ್ರಕಾರವಾಗಿದೆ. ದಿನನಿತ್ಯದ ಸಾಮಾನ್ಯ ವಿವರಗಳಲ್ಲಿ ಬರವಣಿಗೆಯ ಅಸಾಮಾನ್ಯ ಗಹನ ಕೇಂದ್ರವನ್ನು ಅರಸುತ್ತ, ಇಂಥ ವಿವರಗಳನ್ನು ಮರು ಸಂಯೋಜಿಸುತ್ತ ಕಾದಂಬರಿಕಾರರು ಈ ಯಶಸ್ಸು ಪಡೆದಿದ್ದಾರೆ.

ತನ್ನ ಗೆಳೆಯ ವರಡ್ಸ್ ವರ್ತ್ ಬೇರೆಯ ಪರಿಣಾಮ ಬಯಸಿದ; ಆತ ದಿನ ನಿತ್ಯದ ಬದುಕಿಸ ಸಂಗತಿಗಳಿಗೆ ಹೊಸ ಚೆಲುವು ನೀಡಿ, ಸಂಪ್ರದಾಯದಿಂದ ಜಡಗೊಂಡ ಮನಸ್ಸನ್ನು ಎಚ್ಚರಗೊಳಿಸಿ ನಮ್ಮ ಸುತ್ತಲ ಜಗತ್ತಿನ ಚೆಲುವನ್ನು ಗಮನಿಸುವಂತೆ ಮಾಡಿ ಅತಿಮಾನುಷತೆಯ ಭಾವ ಉದ್ದೀಪಿಸಲು ಬಯಸಿದ ಎನ್ನುತ್ತಾನೆ ಕಾಲ್ರಿಜ್. ಟಾಲ್ಸ್ ಟಾಯ್, ದಾಸ್ತೆಯೇವ್ಸ್ಕಿ, ಪ್ರೌಸ್ಟ್, ಮನ್ ಇಂಥ ಮಹಾನ್ ಲೇಖಕರೆಲ್ಲ ಇದೇ ಕಾರ್ಯವನ್ನು ಕಾದಂಬರಿಯಲ್ಲಿ ಸಾಧಿಸಿದರು.

ಅನ್ನಾ ರೈಲಿನಲ್ಲಿ ಕಾದಂಬರಿ ಓದುವುದನ್ನು ನಿಲ್ಲಿಸಿ ಕಿಟಕಿಯಾಚೆ ನೋಡುವುದನ್ನು ಚಿತ್ರಿಸುವುದಕ್ಕೆ, ಅವಳು ನೋಡಿದ್ದೆಲ್ಲ ಅವಳ ಮೂಡ್ ಚಿತ್ರಿಸುವ ಹಾಗೆ ಮಾಡುವುದಕ್ಕೆ ಟಾಲ್ಸ್ ಟಾಯ್ ನನ್ನು ಕಾದಂಬರಿ ಕಲೆಯ ಮೂಲ ಇಬ್ಬಂದಿಗಳೇ ಪ್ರೇರಿಸಿದವು.. ಅನ್ನಾ ಯಾವ ಕಾದಂಬರಿ ಹಿಡಿದಿದ್ದಳು, ಯಾವ ನಿರೂಪಣೆ ಅವಳನ್ನು ಅಷ್ಟು ಬಲವಾಗಿ ಸೆಳೆದಿತ್ತು, ಅವು ನಮಗೆ ತಿಳಿಯುವುದು ಸಾಧ್ಯವೇ ಇಲ್ಲ. ಆದರೆ ಟಾಲ್ಸ್ಟಾಯ್ ನಿರ್ಮಿಸಿರುವ ಕಾದಂಬರಿಯ ಲೋಕದೊಳಕ್ಕೆ ನಾವು ಅಡಿ ಇಡಲು, ಅನ್ವೇಷಿಸಲು ನೆರವಾಗುವ ಸಲುವಾಗಿ ಅನ್ನಾ ಪುಸ್ತಕ ಓದದೆ ರೈಲಿನ ಕಿಟಕಿಯಾಚೆ ನೋಡುವುದು ಅಗತ್ಯ. ಅನ್ನಾಳ ನೋಟದ ಮೂಲಕ ಇಡೀ ಕಾದಂಬರಿಯ ಲೋಕ ನಮ್ಮೆದುರು ಕಾಣುತ್ತದೆ. ಅವಳ ನೋಟದ ಮೂಲಕ ನಾವು 1870ರ ದಶಕದ ರಶಿಯಾ ನೋಡುತ್ತೇವೆ. ಅನ್ನಾಗೆ ನಾವು ಕೃತಜ್ಞರಾಗಿರಬೇಕು—ತನ್ನ ಕೈಯಲ್ಲಿದ್ದ ಕಾದಂಬರಿಯನ್ನು ಅನ್ನಾ ಓದಲಾಗಲಿಲ್ಲ, ಆದ್ದರಿಂದಲೇ ನಾವು ಅನ್ನಾ ಕರೆನೀನ ಕಾದಂಬರಿ ಓದುವುದಕ್ಕೆ ಸಾಧ್ಯವಾಗಿದೆ.

(ಮುಗಿಯಿತು)

About The Author

ಓ.ಎಲ್. ನಾಗಭೂಷಣ ಸ್ವಾಮಿ

ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ