Advertisement
ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ:ಫಾತಿಮಾ ರಲಿಯಾ ಅಂಕಣ

ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ:ಫಾತಿಮಾ ರಲಿಯಾ ಅಂಕಣ

ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ, ಇವೆಲ್ಲದರ ಮಧ್ಯೆಯೂ ಬದುಕಿನ ಉತ್ಸಾಹವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡ, ಮಧ್ಯೆ ಹೈಸ್ಕೂಲ್ ದಾಟಿ ಕಾಲೇಜಿಗೆ ಕಾಲಿಟ್ಟೆವು.
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.

 

ರಾತ್ರಿಯ ಮೂರನೇ ಜಾವದಲ್ಲಿ ದೂರದ ಕಡಲಿನ ಭೋರ್ಗರೆತ ಕೇಳಿತೆಂದರೆ ಸಾಕು ಸುಮ್ಮನೆ ಎದ್ದು ಕೂತುಬಿಡುತ್ತೇನೆ ನಾನು. ಸದ್ದಾಗದಂತೆ ಬಾಲ್ಕನಿಯಿಂದ ಕೆಳಗೆ ಜಿಗಿದು ಯಾರಿಗೂ ಹೇಳದೇ ಕಡಲಿನೆಡೆಗೆ ಹೋಗಿ ತೀರದ ಪೂರ್ತಿ ಸುಸ್ತಾಗುವಷ್ಟು ನಡೆಯಬೇಕು, ಇನ್ನು ಒಂದು ಹೆಜ್ಜೆಯೂ ಮುಂದಿಡಲಾರೆ ಅನ್ನುವಷ್ಟು ನಡೆಯುತ್ತಲೇ ಇರಬೇಕು, ಕೊನೆಗೆ ಸುಸ್ತಾಗಿ ಮರಳ ಮೇಲೆ ಬಿದ್ದು ನಿದ್ದೆ ಹೋಗಬೇಕು, ಆ ರಾತ್ರಿಯ ಶೀತಲ ಗಾಳಿ ಕೆನ್ನೆ ಸವರಿದಂತೆಲ್ಲಾ ಯಾವುದೋ ಕನವರಿಕೆಯಲ್ಲಿದ್ದಂತೆ ಮಗ್ಗುಲು ಬದಲಾಯಿಸಬೇಕು, ನಡು ನಡುವೆ ಎಚ್ಚರಾದಾಗೆಲ್ಲಾ ಯಾರಿಗೂ ಕೇಳಿಸದ ಕಡಲಿನ ಸಂಗೀತಕ್ಕೆ ಕಿವಿಗೊಡಬೇಕು, ಅನಾದಿಕಾಲದಿಂದಲೂ ಇಲ್ಲೇ ವಾಸ್ತವ್ಯವಾಗಿದ್ದೇವೆ ಎಂಬಂತೆ ಪೋಸ್ ಕೊಡುವ ಮರಿ ಏಡಿಗಳನ್ನು ಕಾಲ ಮೇಲೆ ಹತ್ತಿಸಿಕೊಂಡು ಕಚ್ಚಿಸಿಕೊಳ್ಳುವ ವಿಚಿತ್ರ ಸುಖ ಅನುಭವಿಸಬೇಕು, ಜೇಬಿನ ಪೂರ್ತಿ ಮರಳು ತುಂಬಿಕೊಂಡು ದೂರ ಹೋಗಿ ಮನೆಕಟ್ಟಬೇಕು, ಇಲ್ಲದ ಕಡಲಿನ ದೆವ್ವವನ್ನು ಕಲ್ಪಿಸಿಕೊಂಡು ಸುಳ್ಳೇ ಸುಳ್ಳು ಹೆದರಬೇಕು ಅಂತೆಲ್ಲಾ ಅಂದುಕೊಳ್ಳುತ್ತೇನೆ.

ಹೀಗೆ ಅನ್ನಿಸಿದಾಗೆಲ್ಲಾ ಒಂದೋ ಪಕ್ಕದಲ್ಲಿ ಪವಡಿಸಿರುವ ಗಂಡನನ್ನು ಎಬ್ಬಿಸಿ ‘ಗಂಟೆ ಎಷ್ಟಾಯ್ತು’ ಅಂತ ಕೇಳಿ ಮತ್ತೆ ಮಲಗಲು ಪ್ರಯತ್ನಿಸುತ್ತೇನೆ ಇಲ್ಲ, ಕಾಣದ ಕಡಲಿಗೆ ಬಯ್ಯುತ್ತಾ ಮತ್ತೆ ಕೌದಿ ಎಳೆದುಕೊಳ್ಳುತ್ತೇನೆ. ಆಷಾಢದ ಆ ರಾತ್ರಿಯೂ ಗಂಡನನ್ನು ಎಬ್ಬಿಸಲಾ ಅಥವಾ ಸುಮ್ಮನೆ ಮಲಗಿಕೊಳ್ಳಲಾ ಎಂಬ ಗೊಂದಲದಲ್ಲಿರುವಾಗಲೇ ಮೊಬೈಲ್ ಬೀಪ್ ಎಂದಿತ್ತು. ತೆರೆದು ನೋಡಿದರೆ ಜೀವದ ಗೆಳತಿಯ ಮೆಸೇಜ್. “ನನಗೆ ಮತ್ತೆ ಲವ್ ಆಗಿದೆ ಕಣೇ, ಈ ಬಾರಿ ಮಾತ್ರ ಸೀರಿಯಸ್ ಲವ್” ಅಂತಿತ್ತು. ಕಳೆದ ಬಾರಿ ಲವ್ ಬ್ರೇಕ್ ಆದಾಗ ಇದೇ ಗೆಳತಿ ಇನ್ಮುಂದೆ ಜಾತಕ ನೋಡದೇ ಲವ್ ಮಾಡೋದೇ ಇಲ್ಲ, ಜಾತಕ ಕೂಡಿ ಬಂದರಷ್ಟೇ ಪ್ರೀತಿ, ಮದುವೆ ಇತ್ಯಾದಿ ಅಂದದ್ದು ನೆನಪಾಗಿ, ಎಷ್ಟನೇ ಬಾರಿ ನಿನಗೆ ಸೀರಿಯಸ್ ಲವ್ ಆಗ್ತಿರೋದು? ಅಂತ ಮೆಸೇಜ್ ಕುಟ್ಟಬೇಕು ಅಂದುಕೊಂಡೆ. ಆದರೆ ದೂರದ ಕಡಲಿನ ಮೊರೆತ, ಕಿವಿಯ ಪಕ್ಕದಲ್ಲೇ ಗುಂಯ್ ಗುಡುವ ಸೊಳ್ಳೆ, ಅಪರಾತ್ರಿಯ ಅವಳ ಲವ್ ಎಲ್ಲಾ ಸೇರಿ ಒಂದು ರೀತಿಯ ರೇಜಿಗೆ ಹುಟ್ಟಿಸಿ ಅವಳನ್ನು ನಾಳೆ ವಿಚಾರಿಸಿಕೊಂಡರಾಯಿತು ಎಂದು ಸುಮ್ಮನೆ ಮಲಗಿದೆ.

ಮೊದಲೇ ಹೇಳಿದಂತೆ ಅವಳಿಗೆ ಪ್ರೀತಿಯಾಗೋದು, ಬ್ರೇಕ್ ಅಪ್ ಆಗೋದು, ಎರಡು ದಿನ ಅಳೋದು, ಮೂರನೇ ದಿನ ಇನ್ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ, ಯಾರ ಕನಸಲ್ಲೂ ಇನ್ಮುಂದೆ ಹೋಗುವುದೇ ಇಲ್ಲ ಅಂತೆಲ್ಲಾ ಪ್ರತಿಜ್ಞೆ ಮಾಡುವುದು, ಮತ್ತೆ ಪ್ರೀತಿಯಾಗುವುದೆಲ್ಲಾ ಹೊಸತಲ್ಲ. ಉಕ್ಕಿ ಹರಿಯುವ ಜೀವನ ಪ್ರೀತಿ, ಅವಳ ತುಂಟತನ, ಆಪ್ತತೆ ಉಕ್ಕಿಸುವ ಮಾತು, ಮುಗ್ಧ ಮುಖಭಾವ, ಬದುಕನ್ನು ಉತ್ಕಟತೆಯಿಂದ ಬದುಕಬೇಕು ಎನ್ನುವ ಮನೋಭಾವ ಎಂಥವರ ಎದೆಯಲ್ಲೂ ಪ್ರೀತಿ ಹುಟ್ಟಿಸಬಲ್ಲದು. ತಿಳಿ ಬಣ್ಣವನ್ನು ಇಷ್ಟಪಟ್ಟು ಧರಿಸುವ ಅವಳ ಬದುಕಿನ ಆಯ್ಕೆಯೂ ತಿಳಿಗೊಳದಷ್ಟೇ ಪ್ರಶಾಂತವಾಗಿರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹೊಟ್ಟೆ ಕಿಚ್ಚಾಗುವಷ್ಟು ಚಂದದ ಪ್ರೇಮ ಕವಿತೆ ಬರೆಯುವ, ಸದಾ ನಗುವ, ನಗಿಸುವ, ಚೈತನ್ಯದ ಚಿಲುಮೆಯಂತಿರುವ, ಸಣ್ಣ ಸ್ವರದಲ್ಲಿ ಭಾವಗೀತೆ ಹಾಡಿಕೊಳ್ಳುವ, ಒಪ್ಪವಾಗಿ ರಂಗೋಲಿ ಹಾಕುವ ಅವಳು ನನಗೆ ಹೈಸ್ಕೂಲಿನಿಂದಲೂ ಜೀವದ ಗೆಳತಿ.

ಕಳೆದ ಬಾರಿ ಲವ್ ಬ್ರೇಕ್ ಆದಾಗ ಇದೇ ಗೆಳತಿ ಇನ್ಮುಂದೆ ಜಾತಕ ನೋಡದೇ ಲವ್ ಮಾಡೋದೇ ಇಲ್ಲ, ಜಾತಕ ಕೂಡಿ ಬಂದರಷ್ಟೇ ಪ್ರೀತಿ, ಮದುವೆ ಇತ್ಯಾದಿ ಅಂದದ್ದು ನೆನಪಾಗಿ, ಎಷ್ಟನೇ ಬಾರಿ ನಿನಗೆ ಸೀರಿಯಸ್ ಲವ್ ಆಗ್ತಿರೋದು? ಅಂತ ಮೆಸೇಜ್ ಕುಟ್ಟಬೇಕು ಅಂದುಕೊಂಡೆ.

ಅಂಕಗಣಿತಕ್ಕೂ ಬದುಕಿಗೂ ಯಾವುದೋ ಸಂಬಂಧ ಇದೆ ಅಂತ ಅಂಕೆಗಳಲ್ಲಿ ಮುಳುಗುತ್ತಿದ್ದ ನಾನು ಮತ್ತು ಗಣಿತವನ್ನೇ ನಖಶಿಖಾಂತ ದ್ವೇಷಿಸುತ್ತಿದ್ದ ಅವಳು ನಡುವೆ ಒಂದಿಷ್ಟು ಖಾಸಗಿ ಇಷ್ಟಾನಿಷ್ಟಗಳು… ನಾವಿಬ್ಬರೂ ಗೆಳತಿಯರಾಗಿದ್ದು ಹೇಗೆ ಅನ್ನುವುದು ಇವತ್ತಿನವರೆಗೂ ಬಗೆಹರಿಯದ ಮಿಸ್ಟರಿ. ನಮ್ಮಿಬ್ಬರ ಅಭಿರುಚಿಯಲ್ಲಿ ಸಾಮ್ಯತೆ ಇದ್ದುದು ಜಿದ್ದಿಗೆ ಬಿದ್ದವರಂತೆ ಕವಿತೆ ಓದುವುದರಲ್ಲಿ ಮಾತ್ರ. ಹಾಗಿದ್ದರೂ ನಾವಿಬ್ಬರೂ ಪರಸ್ಪರರ ಕ್ರೈಂಗಳಲ್ಲಿ ಸಮಾನ ಪಾಲುದಾರರು. ಆಟ, ಪಾಠ, ತುಂಟಾಟ, ಹಾಡು, ಕವಿತೆ, ಆ ವಯಸ್ಸಿನ ಭಾವದೇರಿಳಿತಗಳು, ಸುಲಭವಾಗಿ ಅರ್ಥವಾಗದ ದೈಹಿಕ ಬದಲಾವಣೆಗಳು, ಯೌವ್ವನಕ್ಕೆ ಹೊರಳಿಕೊಳ್ಳುವ ಬದುಕು, ಅಪಾಯಕಾರಿಯಲ್ಲದ ಕ್ರಶ್, ಹೆಸರಿಲ್ಲದ ಕೆಲವು ಇನ್ಫ್ಯಾಚುಯೇಷನ್ಸ್ ಎಲ್ಲವುಗಳ ನಡುವೆ ಅವಳಂತಹ ಜೀವನ್ಮುಖಿ ಹುಡುಗಿಗೆ ಪ್ರೀತಿಯಾಗಲು ಎಷ್ಟು ಹೊತ್ತು?

ಅತ್ತ ಅವಳ ಬದುಕಲ್ಲಿ ಸದ್ದಿಲ್ಲದೆ ಪ್ರೇಮ ಚಿಗುರೊಡೆಯುತ್ತಿದ್ದರೆ ಇತ್ತ ನನಗೆ ಅವಳ ಪ್ರೀತಿಯನ್ನು ನಾನು ಓದಿರುವ ಕೆಲವು ಜನಪ್ರಿಯ ಕಾದಂಬರಿಗಳ ಪಾತ್ರಗಳೊಂದಿಗೆ ಹೋಲಿಸಿ ನೋಡುವ ಉಮೇದು. ಅವಳಿಗೂ ಕೆಲವು ಪುಸ್ತಕಗಳನ್ನು ಓದಲು ಕೊಟ್ಟು ‘ಹೀಗೆಲ್ಲಾ ಇದ್ಯಾ?’ ಅಂತ ಕುತೂಹಲದಿಂದ ಕೇಳಿದ್ದೂ ಇದೆ. ಆಗೆಲ್ಲಾ ಅವಳು ನಕ್ಕು ಸುಮ್ಮನಾಗುತ್ತಿದ್ದರೆ ನನ್ನ ಕಲ್ಪನೆಯ ರೆಕ್ಕೆಗಳಿಗೆ ಮತ್ತೊಂದಿಷ್ಟು ಗರಿಗಳು ಸೇರಿಕೊಳ್ಳುತ್ತಿದ್ದವು.

ಶುದ್ಧ ಹುಡುಗಾಟ ಮತ್ತು ಭಾವುಕತೆಯ ಸಮಾಗಮದ ಒಂದು ಸುಂದರ ಘಳಿಗೆಯಲ್ಲಿ ಅವಳ ಬದುಕಿನೊಳಗೆ ಕಾಲಿಟ್ಟ ಪ್ರೀತಿ ಎಂಬ ಮಾಯಾ ವಿದ್ಯೆ ನನ್ನ ಯೋಚನೆಗಳನ್ನೂ ಬದಲಾಯಿಸಲು ಹೆಚ್ಚಿನ ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ಅಪ್ಪಟ ರೈತನ ಮಗ ಮತ್ತು ಮೀರಾಳಿಗಿಂತಳೂ ಚೆಂದಗೆ ಹಾಡಿಕೊಳ್ಳುತ್ತಿದ್ದ ಹುಡುಗಿ… ಕೃಷ್ಣನಿಗೂ ಅಸೊಯೆಯಾಗುವಂತಿತ್ತು ಜೋಡಿ. ಮಧ್ಯೆ ಅವರ ಪ್ರೀತಿಗೆ, ಮುನಿಸಿಗೆ, ಹುಸಿ ಕೋಪಕ್ಕೆ, ಜಗಳಗಳಿಗೆ ಮಧ್ಯವರ್ತಿಯಾಗಿ ನಾನು. ಬದುಕು ತುಂಬಾ ಸುಂದರವಾಗಿತ್ತು.

ಹೀಗಿರುವ ದಿನಗಳಲ್ಲೇ ಅವನ ಹಟ್ಟಿಗೆ ಒಂದು ಹೊಸ ಎತ್ತು ಸೇರಿಕೊಂಡಿತು. ಅವನು ತುಂಬು ಸಂಭ್ರಮದಿಂದ ಎತ್ತನ್ನೂ, ಅದರ ಮುಗ್ಧತೆಯನ್ನೂ, ಅದಕ್ಕಿಡಬಹುದಾದ ಹೆಸರನ್ನೂ ಹೇಳಿಕೊಳ್ಳುತ್ತಿದ್ದರೆ ನಮ್ಮಿಬ್ಬರ ತಲೆಯಲ್ಲಿ ಹೊಸ ಯೋಚನೆಯೊಂದು ಓಡುತ್ತಿತ್ತು. ಕೆಲವು ವಾರಗಳಷ್ಟು ಹಿಂದೆ ಊರ ಹೊರಗೆ ಆಯೋಜಿಸಿದ್ದ ಕಂಬಳ, ಓಡುತ್ತಿದ್ದ ಎತ್ತುಗಳು, ಅದರ ಸಾರಥಿಯ ಗತ್ತು ಗೈರತ್ತುಗಳು ನಮ್ಮಲ್ಲೂ ಎತ್ತು ಓಡಿಸುವ ಆಸೆ ಹುಟ್ಟಿಸಿದ್ದವು. ಈಗ ಅನಾಯಾಸವಾಗಿ ನಮ್ಮ ಆಸೆ ಕೈಗೂಡುತ್ತದೆ ಅಂದರೆ ಯಾಕೆ ಅವಕಾಶ ಕಳೆದುಕೊಳ್ಳಬೇಕು ಅನ್ನಿಸಿ ನಮ್ಮ ಯೋಚನೆಯನ್ನು ಅವನ ಮುಂದಿಟ್ಟೆವು. ಮೊದ ಮೊದಲು ನಮ್ಮ ವಿಚಿತ್ರ ಬೇಡಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರೂ ಕೊನೆಗೆ ಸಂಜೆ ಮೂರರ ಒಳಗೆ ಎತ್ತನ್ನು ಅವನಿಗೆ ಮರಳಿಸಬೇಕು ಅನ್ನುವ ಕರಾರಿನೊಂದಿಗೆ ನಮ್ಮ ಬೇಡಿಕೆಗೆ ಮಣಿದ.
ಮುಂದಿನ ಭಾನುವಾರ ಸ್ಪೆಶಲ್ ಕ್ಲಾಸ್ ನೆಪದಲ್ಲಿ ನಾವಿಬ್ಬರು ಶಾಲೆಯ ಕಾಲುದಾರಿಯ ಪಕ್ಕದಲ್ಲಿನ ಕೆಸರುಗದ್ದೆಯಲ್ಲಿ ಸೇರುವುದೆಂದೂ, ಅವನು ಮೀಯಿಸುವ ನೆಪದಲ್ಲಿ ಎತ್ತನ್ನು ಅಲ್ಲಿಗೆ ಕರೆದುಕೊಂಡು ಬರುವುದೆಂದೂ ನಿರ್ಧಾರವಾಯಿತು. ಹಾಗೆ ನಿರ್ಧರಿಸಿಕೊಂಡ ಮೇಲೆ ಇಡೀ ದಿನ ನಮ್ಮ ಯೋಚನೆಗಳಲ್ಲಿ ನಾವು ಮಾಡಲಿರುವ ಹೊಸ ಸಾಹಸದ ರೂಪು ರೇಷೆಗಳಷ್ಟೇ ಓಡಾಡುತ್ತಿದ್ದವು. ಆ ಭಾನುವಾರ ಕಾಲುದಾರಿಯಲ್ಲಿ ನಾವಿಬ್ಬರೂ ಸೇರುತ್ತಿದ್ದಂತೆ ಪ್ರೇಮಿಯ ಕೋರಿಕೆ ಪೂರೈಸುತ್ತಿರುವ ಹೆಮ್ಮೆಯಿಂದ ಅವನೂ ಎತ್ತು ಕರೆದುಕೊಂಡು ಬಂದು ಬಿಟ್ಟ.

ಅವನು ಎತ್ತಿನ ಬಗ್ಗೆ ವರ್ಣಿಸುತ್ತಿದ್ದಾಗ ನಮ್ಮಷ್ಟೇ ಎತ್ತರ ಇರಬಹುದೇನೋ ಅಂತ ಅಂದುಕೊಂಡಿದ್ದ ನಮ್ಮ ನಿರೀಕ್ಷೆ ಅದರ ಗಾತ್ರ, ಎತ್ತರ, ಕೋಡು ನೋಡಿದಾಗಲೇ ಸುಳ್ಳಾಗಿತ್ತು. ಆದರೆ ಎತ್ತು ಓಡಿಸುವ ಹುಚ್ಚು ಎಲ್ಲಾ ನಿರೀಕ್ಷೆಗಳಿಗಿಂತಲೂ ಎತ್ತರದಲ್ಲಿದ್ದುದರಿಂದ ಅವನನ್ನು ಕಳುಹಿಸಿ ನಾವು ಓಡಿಸಲು ಸಿದ್ಧರಾದೆವು. ಆ ಹೊತ್ತು ಯಾವ ಧೈರ್ಯದ ಭೂತ ನಮ್ಮೊಳಗೆ ಹೊಕ್ಕಿತ್ತೋ ಗೊತ್ತಿಲ್ಲ, ಮೆಲ್ಲಗೆ ಅದರ ಬಾಲ ಹಿಡಿದೆಳೆದೆ, ಹಿಂದಿನಿಂದ ಪ್ರೋತ್ಸಾಹಿಸಲು ಗೆಳತಿಯ ಚಪ್ಪಾಳೆ.

ಅಂಕಗಣಿತಕ್ಕೂ ಬದುಕಿಗೂ ಯಾವುದೋ ಸಂಬಂಧ ಇದೆ ಅಂತ ಅಂಕೆಗಳಲ್ಲಿ ಮುಳುಗುತ್ತಿದ್ದ ನಾನು ಮತ್ತು ಗಣಿತವನ್ನೇ ನಖಶಿಖಾಂತ ದ್ವೇಷಿಸುತ್ತಿದ್ದ ಅವಳು ನಡುವೆ ಒಂದಿಷ್ಟು ಖಾಸಗಿ ಇಷ್ಟಾನಿಷ್ಟಗಳು… ನಾವಿಬ್ಬರೂ ಗೆಳತಿಯರಾಗಿದ್ದು ಹೇಗೆ ಅನ್ನುವುದು ಇವತ್ತಿನವರೆಗೂ ಬಗೆಹರಿಯದ ಮಿಸ್ಟರಿ. ನಮ್ಮಿಬ್ಬರ ಅಭಿರುಚಿಯಲ್ಲಿ ಸಾಮ್ಯತೆ ಇದ್ದುದು ಜಿದ್ದಿಗೆ ಬಿದ್ದವರಂತೆ ಕವಿತೆ ಓದುವುದರಲ್ಲಿ ಮಾತ್ರ.

ಅವನು ಗದ್ದೆಯಂಚು ತಲುಪುವ ಮುನ್ನವೇ ನಾನು ಎತ್ತು ಎಳೆದ ರಭಸಕ್ಕೆ ಮೈಮೇಲಿಡೀ ತರಚು ಗಾಯ ಮಾಡಿಕೊಂಡು ಮತ್ತೊಂದು ಗದ್ದೆಗೆ ಬಿದ್ದಿದ್ದೆ. ಮಂಡಿಯ ಮೇಲೆ ತರಚು ಗಾಯಗಳಾಗಿವೆ ಅಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಛಳ್ಳೆಂದ ಎಡಗೈಗೆ ಆಚೀಚೆ ಸರಿಸಲೂ ಆಗದಷ್ಟು ನೋವು. “ಅಮ್ಮಾ” ಎಂದೆ, ಓಡಿ ಬಂದ ಗೆಳತಿ ನನ್ನನ್ನು ಎಬ್ಬಿಸಿ ಮನೆಗೆ ಕರೆದುಕೊಂಡು ಬಂದಳು. ಶಾಲೆಯಲ್ಲಿ ಕೈ ಮುರಿದುಕೊಂಡಿದ್ದೇನೇನೋ ಅಂದುಕೊಂಡ ಅಪ್ಪ ಕೈಗೆ ಬ್ಯಾಂಡೇಜ್ ಹಾಕಿಸಿ ಮನೆಗೆ ಕರೆತಂದರು. ನಾವು ಕಂಬಳದ ಸಾರಥಿಗಳಾಗಬಹುದಾಗಿದ್ದ ಅಪರೂಪದ ಅವಕಾಶ ತಪ್ಪಿಸಿದ ಎತ್ತಿನ ಮೇಲೆ ಅಸಾಧ್ಯ ಕೋಪ ನನಗೆ. ಕೈಗೆ ಏರಿಸಿಕೊಂಡ ಸಿಮೆಂಟ್ ಬ್ಯಾಂಡೇಜನ್ನು ನೋಡುವಾಗೆಲ್ಲಾ ಆ ಕೋಪ ಮತ್ತಷ್ಟು ಜಾಸ್ತಿಯಾಗುತ್ತಿತ್ತು.

ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ, ಇವೆಲ್ಲದರ ಮಧ್ಯೆಯೂ ಬದುಕಿನ ಉತ್ಸಾಹವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡ, ಮಧ್ಯೆ ಹೈಸ್ಕೂಲ್ ದಾಟಿ ಕಾಲೇಜಿಗೆ ಕಾಲಿಟ್ಟೆವು.
ಆ ಹೊತ್ತಿಗಾಗುವಾಗ ಅವಳ ಪ್ರೀತಿ ತೆಳುವಾಗತೊಡಗಿತು, ಅವನಿಗೂ ಇದು ಕೈಗೂಡುವಂಥದ್ದಲ್ಲ ಅಂತ ಅನಿಸಿತೋ ಏನೋ, ಒಬ್ಬರಿಗೊಬ್ಬರು ಬೈದುಕೊಳ್ಳದೆ ಇಬ್ಬರೂ ದೂರಾದರು. ಈ ಮಧ್ಯೆ ಒಂದು ವಿಚಿತ್ರ ತಿರುವಿನಲ್ಲಿ ನನ್ನಮ್ಮ ಸ್ತನ ಕ್ಯಾನ್ಸರ್ ಎಂಬ ದುರಂತಕ್ಕೆ ಮುಖಾಮುಖಿಯಾದರು. ಆಸ್ಪತ್ರೆ, ಅದರ ವಿಚಿತ್ರ ವಾಸನೆ, ಅಸಹನೀಯ ಮೌನ, ತಾಳಿಕೊಳ್ಳಲಾಗದ ನಿಟ್ಟುಸಿರು, ಕಾರಣವಿಲ್ಲದೆ ಅಲ್ಲಿಂದಿಲ್ಲಿಗೆ ಸಂಚರಿಸುವ ಅನಾಥ ಭಾವ, ನಡುವೆ ನನ್ನೆಲ್ಲಾ ನೋವುಗಳಿಗೆ ಹೆಗಲಾಗಿ ನಿಲ್ಲುತ್ತಿದ್ದ ಗೆಳತಿ ಒಂದು ದಿನ ಸಂಕಟ ತಡೆಯಲಾಗದೆ ‘ಅಮ್ಮ ಬದುಕುತ್ತಾರೇನೇ?’ ಎಂದು ಕೇಳಿದಳು. ನಾನು ‘ಬದುಕಲೇ ಬೇಕು, ಬದುಕುತ್ತಾರೆ’ ಎಂದು ಎದ್ದು ಬಂದೆ. ಅಮ್ಮ ಬದುಕಿದರು, ಅವಳು ನನಗೆ ಮತ್ತಷ್ಟು ಹತ್ತಿರವಾದಳು.

ಮುಂದೆ ಓದು, ಉದ್ಯೋಗ, ಮದುವೆ, ಸಂಸಾರ ಅಂತೆಲ್ಲಾ ನಮ್ಮಿಬ್ಬರ ದಾರಿ ಕವಲೊಡೆದರೂ ನಮ್ಮ ಆತ್ಮೀಯತೆಯಲ್ಲಿ ಯಾವ ದೂರವೂ ತಲೆದೋರಿರಲಿಲ್ಲ. ಆದರೆ ಆಷಾಢದ ಆ ರಾತ್ರಿ ಅವಳು ಮಾಡಿದ್ದ ಮೆಸೇಜ್ ನಲ್ಲಿದ್ದ ‘ಸೀರಿಯಸ್ ಪ್ರೀತಿ’ ನಿಜಕ್ಕೂ ಗಂಭೀರ ಪ್ರೀತಿಯೇ. ಇವಳು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಕೆಲಸ ಉತ್ತರ ಭಾರತದ ಹುಡುಗ ಅವನು. ಇವಳಿಗಿಂತ ಎರಡು ವರ್ಷ ಕಿರಿಯ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತ ಅವಳೆಷ್ಟೇ ಹೇಳಿಕೊಂಡರೂ ನನಗೊಂದು ಅಳುಕು ಇದ್ದೇ ಇತ್ತು. ಅವನ ಪ್ರೀತಿ, ಮನೆಯವರು ಒಪ್ಪಿದರೂ ಒಪ್ಪದಿದ್ದರೂ ಒಟ್ಟಿಗೆ ಬದುಕುತ್ತೇವೆ ಅನ್ನುತ್ತಿದ್ದಾಗ ಅವನ ಮಾತಿನಲ್ಲಿರುತ್ತಿದ್ದ ದೃಢತೆ, ಅವಳೆಡೆಗೆ ಅವನಿಗಿದ್ದ ಕಾಳಜಿ ಎಲ್ಲಾ ನೋಡುವಾಗ ನನ್ನ ಅಳುಕು ಸುಳ್ಳಾಗಲಿದೆ ಎಂದು ನನಗೂ ಅನಿಸುತ್ತಿತ್ತು. ಹಾಗಾಗಲಿ ಎಂದು ನಾನು ಕಾಣದ ದೇವರಲ್ಲಿ ಕೇಳಿಕೊಳ್ಳುತ್ತಲೂ ಇದ್ದೆ.

ಈಗ ಋತುಗಳು ತಿರುಗಿಬಿದ್ದಿವೆ, ಆಷಾಢದಲ್ಲಿ ಚಿಗುರಿದ ಪ್ರೀತಿಗೆ ಕಾರ್ತಿಕದಲ್ಲಿ ಒಪ್ಪಿಗೆಯ ಮೊಹರು ಬೀಳಲಿ ಎಂದು ಎರಡೂ ಮನೆಯವರ ಮುಂದೆ ಮದುವೆ ಪ್ರಸ್ತಾಪ ಇಡುವುದೆಂದು ಒಂದು ಬೆಳಗ್ಗೆ ಇಬ್ಬರೂ ನಿರ್ಣಯಿಸಿದರು ಮತ್ತು ಆ ನಿರ್ಣಯದಂತೆ ನಡೆದುಕೊಂಡರು ಕೂಡ. ಇವಳ ಮನೆಯಲ್ಲಿ ಸುಲಭವಾಗಿ ಒಪ್ಪಿಗೆ ಸಿಗಲಿಲ್ಲ, ಹಾಗೆ ಸುಲಭವಾಗಿ ಸಿಗುತ್ತದೆ ಎನ್ನುವ ನಿರೀಕ್ಷೆ ಅವಳಿಗೆ ಇರಲೂ ಇಲ್ಲ. ಆದರೆ ಹೇಗಾದರೂ ಒಪ್ಪಿಸಿಯೇನು ಎನ್ನುವ ನಂಬಿಕೆ ಇತ್ತು, ಹಾಗೆ ಒಪ್ಪಿಸಿದಳು ಕೂಡ. ಆದರೆ ಅವನ ಮನೆಯಲ್ಲಿ ಯಾವ ಬೃಹನ್ನಾಟಕ ನಡೆಯಿತೋ ಗೊತ್ತಿಲ್ಲ, ಒಂದೆರಡು ದಿನಗಳು ಕಳೆದ ಮೇಲೆ ‘ಲೆಟ್ಸ್ ಬ್ರೇಕಪ್’ ಅನ್ನುವ ಮೆಸೇಜ್ ಬಂತು.


ಯಾವುದು ಆಗಬಾರದು ಅಂದುಕೊಂಡಿದ್ದೆನೋ ಮತ್ತೆ ಅವಳ ಬದುಕಲ್ಲಿ ಅದೇ ಘಟಿಸಿತ್ತು. ಏನು ಮಾತಾಡಲಿ, ಹೇಗೆ ಮಾತಾಡಲಿ ಅನ್ನುವ ನೂರು ಅನುಮಾನದ ಮೂಟೆಗಳನ್ನು ಹೊತ್ತುಕೊಂಡೇ ಅವಳಿಗೆ ಕರೆ ಮಾಡಿದರೆ ಅವಳು ಎಂದಿನ ತಣ್ಣನೆಯ ಧ್ವನಿಯಲ್ಲಿ ‘ಅವ್ನ ಮನೇಲಿ ಒಪ್ಲಿಲ್ಲಂತೆ ಕಣೇ’ ಅಂದ್ಳು. ನನಗೆ ಗೊತ್ತಿರುವ ವಿಷಯವೇ ಆಗಿದ್ದರೂ ಇಷ್ಟು ಸಹಜವಾಗಿ ಅವಳದನ್ನು ಸ್ವೀಕರಿಸುತ್ತಾಳೆ ಅಂತ ಅನಿಸಿರಲಿಲ್ಲ. “ಮುಂದೇನು?”, “ಏನಾಗಬೇಕೋ ಅದೇ ಆಗುತ್ತದೆ. ಬಗಲಲ್ಲೊಂದು ಕೊಳ್ಳಿ ಸದಾ ಇಟ್ಟುಕೊಂಡು ನಡೆಯುವವಳಿಗೆ ಬೆಳಕಿಗಾಗಿ ಕಂದೀಲು ಹುಡುಕಬೇಕಾಗಿ ಬರುವುದಿಲ್ಲ” ಅಂದಳು. ಪ್ರೇಮ ಕವಿತೆ ಬರೆಯುತ್ತಿದ್ದವಳ ಬದುಕು ಅವಳಿಗೇ ಗೊತ್ತಾಗದಂತೆ ನವ್ಯ ಕಾವ್ಯವೊಂದನ್ನು ಬರೆಯಲು ಶುರು ಹಚ್ಚಿತು. ನಾನು ಕಾವ್ಯದೊಳಗೆ ಕಳೆದುಹೋಗಲು ತಯಾರಾಗುತ್ತಿದ್ದೇನೆ.

About The Author

ಫಾತಿಮಾ ರಲಿಯಾ

ಇನ್ನೂ ಅರ್ಥವಾಗದ ಬದುಕಿನ ಬಗ್ಗೆ ತೀರದ ಬೆರಗನ್ನಿಟ್ಟುಕೊಂಡೇ ಕರಾವಳಿಯ ಪುಟ್ಟ ಹಳ್ಳಿಯಲ್ಲಿ ಬೆಳೆಯುತ್ತಿರುವವಳು ನಾನು, ಬದುಕು ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಕಲಿಯುವಷ್ಟು ವಿಧೇಯ ವಿದ್ಯಾರ್ಥಿನಿ. ಪುಸ್ತಕಗಳೆಂದರೆ ಪುಷ್ಕಳ ಪ್ರೀತಿ. ಓದು ಬದುಕು, ಬರಹ ಗೀಳು ಅನ್ನುತ್ತಾರೆ ಫಾತಿಮಾ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ