ಮಿಣುಕು ದೀಪದ ಹುಳುಗಳು
ಹೆಜ್ಜೆ ಊರಲು ಸಾದ್ಯವಾಗದ
ತಗ್ಗುದಿಣ್ಣೆಗಳ ನಡುವೆ
ರಸ್ತೆಯ ಗುರುತೇ ಸಿಗದಷ್ಟು ತಿರುವುಗಳು
ಕಾಲು ಮಡಚಿಕೊಂಡು ಬಿದ್ದ
ಎಲೆಗಳ ದನಿಯೊಳಗೆ
ನೆಲದ ಪಿಸುಮಾತಿನ ಸಂಚಾರ
ದೀಪದ ಬುಡ್ಡೆಯಾಗಿ
ಗೋಚರಿಸುವ ಚುಕ್ಕಿಗಳ ಹೊಕ್ಕಳಿಗೆ
ಗತ್ತಿನಿಂದ ಸುರುಳಿ ಸುತ್ತಿದ
ಮೋಡದ ಮಾಯಾ ಬಜಾರು
ನಾಲಿಗೆ ಚಾಚಿ ಮೈ ಕೆಬರುವ
ಕತ್ತಲ ಇರಿತದಲಿ
ಕಾಣದ ಗವಿಯ ಹೊಕ್ಕ
ಮಿಣುಕು ದೀಪದ ಹುಳುಗಳು
ಸಾಲು ದೀಪದ ನದಿಯಾಗಿವೆ
ಚಂದಿರನ ಜೋಗುಳದಲಿ
ಕರಗಿ ಕಣ್ಣೀರಾದ
ಮೋಡದ ಹೊಕ್ಕಳೀಗ
ನಿದ್ದೆ ಬಾರದ ರೆಪ್ಪೆಗಳ ನೆರಳಿನಡಿ
ಇರುವೆಗಳ ನಿಟ್ಟುಸಿರಿನಂತೆ
ಮಿಂಚಿನ ನಡುವೆ
ಮಣ್ಣಿನ ಗೋಡೆಯಲಿ ದಿಕ್ಕುಕಾಣದ
ದೀಪದ ರೆಕ್ಕೆಯೊಂದು
ಮೊಲೆಗಳಾಗಿ ಮೂಡಿವೆ ಹಸಿದ ಹೆಜ್ಜೆಯ
ಕಾಯ ಮಾಯದ ದಿನಚರಿಗಳಲಿ
ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’ ಇವರ ಪ್ರಕಟಿತ ಕವನ ಸಂಕಲನ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ತುಂಬಾ ಚನ್ನಾಗಿದೆ ಸರ್