Advertisement
ಶ್ರೀರಾಮ್ ಡೈರಿ-ಗೆಂಟ್ ಕೋಟೆಯಲ್ಲಿ ಕೋಕಾಕೋಲಾ

ಶ್ರೀರಾಮ್ ಡೈರಿ-ಗೆಂಟ್ ಕೋಟೆಯಲ್ಲಿ ಕೋಕಾಕೋಲಾ

ಗೆಂಟಿನ ಸ್ಟೇಷನ್‍ನಲ್ಲಿ ಇಳಿದಾಗ ಅಲ್ಲಿಂದ ಮನೆಗೆ ಟ್ಯಾಕ್ಸಿ ತೆಗೆದು ಹೋಗಬಹುದು ಅನ್ನಿಸಿತು. ಎರಡು ದೊಡ್ಡ ಸೂಟ್‍ಕೇಸು, ಒಂದು ಲ್ಯಾಪ್‍ಟಾಪ್ ಬ್ಯಾಗು ಹೊತ್ತು ಟ್ರಾಂನಲ್ಲಿ ಹೋಗುವುದು ಕಿರಿಕಿರಿ ಅನ್ನಿಸಿದರೂ, ಹ್ಯಾನ್ಸ್ ಮಾತ್ರ ಟ್ರಾಮಿನಲ್ಲೇ ಹೋಗೋಣವೆಂದ. ಟ್ರಾಮಿನಲ್ಲೂ ಬಸ್ಸಿನಲ್ಲೂ ಪ್ರವೇಶಮಾಡುತ್ತಿದ್ದ ಹಾಗೆಯೇ ಟಿಕೇಟನ್ನು ಕೊಳ್ಳಬೇಕು. ಸಾಧಾರಣವಾಗಿ ಎಲ್ಲರ ಬಳಿಯೂ ಮೊದಲೇ ಕೊಂಡ ಟಿಕೇಟಿರುತ್ತದೆ. ಅದನ್ನು ಯಂತ್ರದೊಳಕ್ಕೆ ತೂರಿಸಿದರೆ ಅಂದಿನ ಯಾನದ ಮೊಬಲಗು ಅದರಲ್ಲಿ ನಮೂದಾಗುತ್ತದೆ. ಒಂದು ಟಿಕೇಟನ್ನು ತೂರಿಸಿದಾಗ ಅದು ಒಂದಿಷ್ಟು ದೂರಕ್ಕೆ ಮತ್ತು ಸಮಯಕ್ಕೆ ವ್ಯಾಲಿಡ್ ಆಗಿರುತ್ತದೆಂದು ಹ್ಯಾನ್ಸ್ ಹೇಳಿದ. ಉದಾಹರಣೆಗೆ ಆ ಟ್ರಾಮಿನಿಂದ ಇಳಿದು ಬೇರೆ ದಾರಿಯ ಟ್ರಾಂ ಹಿಡಿದರೂ, ಟಿಕೇಟಿನಿಂದ ಮೊಬಲಗನ್ನು ಕತ್ತರಿಸುವುದಿಲ್ಲವಂತೆ. ಆದರೆ ಅದೇ ಟಿಕೇಟನ್ನು ಎರಡು ಬಾರಿ ತಕ್ಷಣಕ್ಕೆ ತೂರಿಸಿದರೆ ಇಬ್ಬರು ಪ್ರಯಾಣಿಕರಿಗೆ ತಕ್ಕ ಮೊಬಲಗನ್ನು ಕತ್ತರಿಸುತ್ತದೆ. ಪ್ರೋಗ್ರಾಂನಲ್ಲಿ ಈ ರೀತಿಯ ಟೈಂ ಸಂಬಂಧಿತ ಕೋಡನ್ನು ಬರೆದಿರಬಹುದು ಅಂತ ಹ್ಯಾನ್ಸ್ ಹೇಳಿದ. ರೈಲು ಟಿಕೇಟು ಇಷ್ಟು ವಿಕಸಿತಗೊಂಡಿಲ್ಲ. ಹತ್ತೋ ಇಪ್ಪತ್ತೋ ಟ್ರಿಪ್ಪುಗಳಿಗಾಗುವ ರೈಲು ಟಿಕೇಟನ್ನು ನೀವು ಕೊಂಡು ಇಟ್ಟುಕೊಳ್ಳಬಹುದು. ಪ್ರತಿಬಾರಿ ರೈಲು ಹತ್ತುವಾಗಲೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರೆಂದು ಟಿಕೇಟಿನ ಮೇಲೆ ಬರೆಯಬೇಕು. ಇಬ್ಬರು ಆ ಟಿಕೇಟಿನ ಮೇಲೆ ಪ್ರಯಾಣ ಮಾಡುತ್ತಿದ್ದರೆ ಎರಡುಬಾರಿ. ಈ ಕೆಲಸವನ್ನು ರೈಲು ಹತ್ತುವ ಮೊದಲೇ ಮಾಡಬೇಕು. ಇಲ್ಲವಾದರೆ ಜುಲ್ಮಾನೆ. ಎಷ್ಟೋ ಆಸಕ್ತಿಕರ ಪದ್ಧತಿಗಳು ಈ ದೇಶದಲ್ಲಿವೆ.

ಮುಂಜಾನೆ ಎದ್ದಕೂಡಲೇ ಹ್ಯಾನ್ಸ್ ನಾಷ್ಟಾಕ್ಕೆ ಹೊರಗೆ ಹೊಗೋಣವೆಂದ. ಎಲ್ಲಿ ಹೋದರೂ ಮಧ್ಯಾಹ್ನ ಎರಡರ ಒಳಗೆ ವಾಪಸ್ಸಾಗಬೇಕು. ಯಾಕೆಂದರೆ ಮನೆಯ ಮುಂದೆ ಪಾರ್ಕ್ ಮಾಡಿರುವ ಹ್ಯಾನ್ಸ್ ಕಾರಿನ ಪಾರ್ಕಿಂಗ್ ಸಮಯ ಮುಗಿದುಹೋಗುತ್ತದೆ. ನಂತರ ಮತ್ತೆ ಅದಕ್ಕೆ ಟೋಕನ್ ತೆಗೆದು ಕಾರಿನ ಗಾಜಿನಲ್ಲಿ ಕಾಣಿಸುವಂತೆ ಇಡಬೇಕು. ಅವನ ಅಪಾರ್ಟ್‍ಮೆಂಟಿನ ಮುಂದೆಯೇ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದ್ದರೂ ಈ ಹಣವನ್ನು ಕಟ್ಟಬೇಕಾಗಿತ್ತು. ಕಾರಣ: ಅಪಾರ್ಟ್‍ಮೆಂಟಿನ ಒಳಗೆ ಅವನಿಗೆ ಪಾರ್ಕಿಂಗ್ ಸದುಪಾಯವಿರಲಿಲ್ಲ. ಆದರೆ ಪಾರ್ಕಿಂಗಿಗೆ ಟಿಕೇಟು ನೀಡುವ ಯಂತ್ರಕ್ಕೂ ಟ್ರಾಮಿನ ಟಿಕೆಟ್ ಕಬಳಿಸುವ ಯಂತ್ರದಂತೆಯೇ ಬುದ್ಧಿಯಿದೆಯಂತೆ. ರಾತ್ರಿಯ ಹೊತ್ತು ಮತ್ತು ಭಾನುವಾರಗಳಂದು ಪಾರ್ಕಿಂಗ್ ಮುಫತ್ತು. ಹೀಗಾಗಿ ಮಾರನೆಯ ದಿನ ಭಾನುವಾರವೂ ಸೇರಿದಂತೆ ಸೋಮವಾರ ಮುಂಜಾನೆಯವರೆಗೂ ಅವನು ಒಂದೇ ಟಿಕೆಟ್ಟಿನಲ್ಲಿ ಕಾಲಹರಣ ಮಾಡಬಹುದಿತ್ತು. ಕೆನಡಾಕ್ಕಿಂತ ಈ ಸಿಸ್ಟಂ ವಾಸಿ, ಅಲ್ಲಿ ಭಾನುವಾರಗಳೂ ಹಣ ಕಟ್ಟಬೇಕು ಅಂತ ಹ್ಯಾನ್ಸ್ ಹೇಳಿದ.

ನಮ್ಮ ಸಿಸ್ಟಂ ಬಗ್ಗೆ ನಾನು ಮಾತಾಡಲಿಲ್ಲ. ಬೆಂಗಳೂರಿನ ನನ್ನ ಮನೆಯ ರಸ್ತೆಯಲ್ಲಿ ಎದುರಿಗೆ ನರ್ಸಿಂಗ್ ಹೋಮ್ ಇದೆ, ಅದೇ ರಸ್ತೆಯಲ್ಲಿ ಟ್ಯಾಕ್ಸಿ ಕಂಪನಿಯ ಮಾಲೀಕನ ಮನೆಯಿದೆ [ಅವನ ಕಂಪನಿ ಎಲ್ಲ ಸಾಫ್ಟ್ ವೇರ್ ಕಂಪನಿಗಳಿಗೂ ಟ್ಯಾಕ್ಸಿ ಮತ್ತು ಮಿನಿಬಸ್ ಸರ್ವೀಸನ್ನು ಒದಗಿಸುತ್ತನದೆ]. ಒಂದು ದೊಡ್ಡ ರೋಡ್‍ಲೈನಿನ ಆಫೀಸು ಪಕ್ಕದ ರಸ್ತೆಯಲ್ಲಿದೆ. ಹಾಗೂ ಅನೇಕ ಲಾರಿ ಕಂಪನಿಗಳ ಕಾರ್ಯಾಲಯಗಳು ಆಜುಬಾಜಿನಲ್ಲಿವೆ. ಎಲ್ಲರೂ ತಮ್ಮತಮ್ಮ ವಾಹನಗಳನ್ನು ಅಲ್ಲಿ ನಿಲ್ಲಿಸುವುದು ಜನ್ಮಸಿದ್ಧ ಹಕ್ಕೆಂದು ಭಾವಿಸಿದ್ದಾರೆ. ಹೀಗಾಗಿ ನನ್ನ ಮನೆಯೊಳಕ್ಕೆ ನನ್ನ ಕಾರನ್ನೇ ತರುವುದು ದುಸ್ತರವಾದ ಮಾತಾಗಿಬಿಡುತ್ತದೆ! ಹಾಗೂ ವಾಹನ ಚಾಲನೆಯಿಂದಲೇ ಜೀವನ ನಡೆಸುವ ಇವರು ಯಾರೂ ಪಾರ್ಕಿಂಗ್ ಕಟ್ಟುವುದಿಲ್ಲ. ಗೇಟಿನ ಮುಂದಿನ ಜಾಗವನ್ನು ಪಾರ್ಕ್ ಮಾಡದೇ ಖಾಲಿ ಬಿಡಬೇಕೆಂಬ ಕಾಳಜಿಯೂ ಹೆಚ್ಚಿನ ಜನರಿಗಿರುವುದಿಲ್ಲ. ಎಷ್ಟೋಬಾರಿ ಕೂಗಾಡೋಣವೆಂದರೆ, ಎದುರಿನ ನರ್ಸಿಂಗ್ ಹೋಮಿಗೆ ಬಂದ ಪೇಷೆಂಟುಗಳಾಗಿರುತ್ತಾರೆ.. ನಮ್ಮ ಸಮಸ್ಯೆಗಳ ಸಂದರ್ಭವೇ ಬೇರೆ. ಇದನ್ನು ಹ್ಯಾನ್ಸ್ ಗೆ ಹೇಳಿ ಕರುಬುವುದಕ್ಕಿಂತ ಅವನ ಸಮಸ್ಯೆಯನ್ನು ಕೇಳುವುದೇ ಮೇಲನ್ನಿಸಿತು.

ಹೊರಕ್ಕೆ ನಾಷ್ಟಾಕ್ಕೆ ಹೋಗುವುದೆಂದರೆ ಮತ್ತೆ ಬ್ರೆಡ್ಡು, ಮಿಠಾಯಿ ತಿನ್ನುವುದು. ಡೆನಿಷ್ ಪೇಸ್ಟ್ರಿ, ಕ್ರೊಸಿಯಾಂಗಳನ್ನೆಲ್ಲ ಬಿಟ್ಟು ಟೋಸ್ಟ್ ತಿಂದೆ. ಕಡು ಕಪ್ಪು ಎಕ್ಸ್ ಪ್ರೆಸೋ ಕಾಫಿಯ ದಟ್ಟ ರಸವನ್ನು ಹೀರಿದೆ. ಕಾಫಿಯ ಜೊತೆ ಸಕ್ಕರೆಯ ಎರಡು ಕ್ಯೂಬುಗಳು, ಮತ್ತು ಚಾಕೊಲೇಟು ಬಂತು. ನಮಗೆ ನೀಡಿದ ಸಕ್ಕರೆಯ ಕ್ಯೂಬುಗಳನ್ನು ತಯಾರಿಸುವವನಿಗೆ ಪೇಟೆಂಟ್ ಇದೆಯಂತೆ. ಸಕ್ಕರೆ ಕ್ಯೂಬು ತಯಾರಿಸುವುದಕ್ಕೆ ಪೇಟೆಂಟ್?– ಹೌದು, ಅದು ಆ ಕ್ಯೂಬು ಕರಗುವ ರೀತಿಗೆ ಸಂಬಂಧಿಸಿದ್ದು!! ಕಾಫಿಯಲ್ಲಿ ಹುಯ್ದ ತಕ್ಷಣ ಅದು ತನೇತಾನಾಗಿ ಎಲ್ಲದಿಕ್ಕಿನಲ್ಲೂ ಪಸರಿ ಕರಗುತ್ತದೆ. ಚಮಚಾದಲ್ಲಿ ಕರಗಿಸುವ ಕೆಲಸವಿಲ್ಲ. ಚಮಚಾಗಿರಿ ಬೇಡವನ್ನುವ ಈ ಟೆಕ್ನಾಲಜಗೂ ಪೇಟೆಂಟೇ??

ಹ್ಯಾನ್ಸ್ ಗೆ ತನ್ನ ಹೊಸ ಐಡೆಂಟಿಟಿ ಕಾರ್ಡನ್ನು ಪಡೆಯಬೇಕಿತ್ತು. ಹೊಸ ಕಾರ್ಡಿನಲ್ಲಿ ಹೆಚ್ಚಿನ ಸೆಕ್ಯೂರಿಟಿ ಇದೆಯಂತೆ. ಹೀಗಾಗಿ ಹ್ಯಾನ್ಸ್ ಬೆಲ್ಜಿಯಂ ದೇಶದ ನಾಗರೀಕ ಅನ್ನುವುದಕ್ಕೆ ಹೊಸ ಪುರಾವೆ ಸಿಕ್ಕಂತಾಗುತ್ತದೆ. ಅದರಿಂದ ಅನೇಕ ಉಪಯೋಗಗಳಿವೆ ಎಂದು ಹ್ಯಾನ್ಸ್ ಹೇಳಿದ, ಮತ್ತು ತುಸು ಹೊತ್ತಿನಲ್ಲೇ ಆ ಕಾರ್ಡಿನ ಉಪಯೋಗವೂ ನನಗೆ ಕಾಣಿಸಲಿತ್ತು. ನಮ್ಮ ಅಸ್ತಿತ್ವವನ್ನು ಸಾಬೀತು ಮಾಡಲು ನಮ್ಮಲ್ಲೆ ಅನೇಕ ಮಾರ್ಗಗಳಿವೆ! ಎಲೆಕ್ಷನ್ ಐಡೆಂಟಿಟಿ, ಪ್ಯಾನ್ ಕಾರ್ಡು, ಡ್ರೈವಿಂಗ್ ಲೈಸೆನ್ಸು, ಪಾಸ್‍ಪೋರ್ಟು. ಆದರೆ ಇದು ಯಾವುದೂ ನಿಮ್ಮಲ್ಲಿ ಇಲ್ಲವೆಂದರೆ ಹೊಸದಾಗಿ ಇವನ್ನು ಆರ್ಜಿಸುವುದು ಎಷ್ಟು ಕಷ್ಟ ಅಲ್ಲವೇ? ಎಲ್ಲಕ್ಕೂ ಒಂದು ಮೂಲ ದಾಖಲೆ ಬೇಕು. ಆ ದಾಖಲೆಯನ್ನು ಸಂಪಾದಿಸುವುದು ಹೇಗೆ? ಡ್ರೈವಿಂಗ್ ಲೈಸೆನ್ಸ್ ಬೇಕೆಂದರೆ ಅದಕ್ಕೆ ಎಪ್ಲೈ ಮಾಡಲು ವಿಳಾಸದ ದಾಖಲೆ ಬೇಕು. ಟೆಲಿಫೋನ್ ಬಿಲ್ಲು ನಡೆಯುತ್ತದೆ. ಆದರೆ ಟೆಲಿಫೋನ್ ಕನೆಕ್ಷನ್ ಬೇಕಿದ್ದರೆ, ಐಡೆಂಟಿಟಿ ಬೇಕು. ಅದಕ್ಕೆ ಮತ್ತೆ ಮೇಲಿನ ಯಾವುದಾದರೂ ನಾಲ್ಕು!! ಈ ಚಕ್ರವ್ಯೂಹದಲ್ಲಿ ಪ್ರವೇಶಿಸುವುದು ಹೇಗೆ?? ಹಿಂದೆ ಎಲೆಕ್ಷನ್ ಐಡಿ ಕಾರ್ಡುಗಳನ್ನು ಕೊಡುವಾಗ ನಾನೂ ಹೋಗಿ ಸ್ಲೇಟ್ ಹಿಡಿದು ಕೈದಿಯಂತೆ ನನ್ನ ಚಿತ್ರ ತೆಗೆಸಿಕೊಂಡಿದ್ದೆ. ನಮ್ಮ ಕ್ಯಾಂಪಸ್ಸಿನವರೆಲ್ಲಾ ಒಬ್ಬರ ನಂತದ ಒಬ್ಬರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡೆವು. ಒಂದು ತಿಂಗಳ ನಂತರ ಕಾರ್ಡು ಬಂತು. ಹೆಸರು ಯಾವುದೋ, ಮನೆ ನಂಬರ್ ಯಾವುದೋ, ಮತ್ತು ಎಲಕ್ಕಿಂತ ಗಮ್ಮತ್ತಿನ ವಿಷಯವೆಂದರೆ ಕ್ಯಾಂಪಸ್ಸಿನ ಅಷ್ಟೂ ಹೆಂಗಸರು ಡಾ.ವಾಸ್ವಾನಿ ಯ ಹೆಂಡಂದಿರಾಗಿಬಿಟ್ಟಿದ್ದರು! ಎಲ್ಲರ ಕಾರ್ಡಿನಲ್ಲೂ ಪತಿಯ ಹೆಸರು ವಾಸ್ವಾನಿ.. ಕ್ಯಾಂಪಸ್ಸಿನ ಶ್ರೀಕೃಷ್ಣರಾಗಿ ವಾಸ್ವಾನಿ ವಿಜೃಂಭಿಸಿದರು!! ಅವರು ದ್ರೌಪದಿಯ ಪುಲ್ಲಿಂಗವಾದ್ದರಿಂದ ಅವರನ್ನು ದ್ರೌ-ಪತಿ ಅಂತ ಕರೆಯಬಹುದಾಗಿತ್ತೇ ಎಂದು ವೈಎನ್ಕೆಯವರ ಆತ್ಮ ಕೇಳುತ್ತಿದೆ!!

ಹ್ಯಾನ್ಸ್ ನ ಕಾರ್ಡು ಪಡೆಯುವುದಕ್ಕೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಅವನಾಡಿದ ಭಾಷೆ ನನಗೆ ಅರ್ಥವೇ ಆಗಲಿಲ್ಲ. ಬ್ರಸಲ್ಸ್ ನಂತಹ ಪುಟ್ಟ ದೇಶದಲ್ಲೂ ಭಾಷೆಗೆ ಸಂಬಂಧಿಸಿದ ಭಾವನೆಗಳು ಜೋರಾಗಿವೆ. ಫ್ಲೆಮಿಷ್ ಮೂಲದವರು ಅವರ ನಾಡೆಂದು ಪರಿಗಣಿಸುವುದು ಫ್ಲಾಂಡರ್ಸ್ ಪ್ರಾಂತವನ್ನು. ಇದಲ್ಲದೇ ಫ್ರೆಂಚ್ ಮಾತನಾಡುವವರೂ ಸುಮಾರಷ್ಟು ಮಂದಿ ಇದ್ದಾರೆ. ಕೆಲವೇ ಜರ್ಮನ್ ಮೂಲದವರು. ಫ್ಲಮಿಷ್ ಮೂಲದವರಿಗೂ ಫ್ರೆಂಚ್ ಮಾತನಾಡುವವರಿಗೂ ಜಟಾಪಟಿ. ಬೆಲ್ಜಿಯಂ ಅನ್ನುವುದೇ ಒಂದು ಕೃತಕ ರಾಷ್ಟ್ರ – ಒಂದು ಭಾಗವನ್ನು ಫ್ರಾಂಸ್ ನಲ್ಲಿ ಮತ್ತೊಂದನ್ನು ನೆದರ್‍ಲೆಂಡ್ ನಲ್ಲಿ ಸೇರಿಸಬೇಕು ಅನ್ನುವುದನ್ನು ಪ್ರತಿಪಾದಿಸುವವರು ಒಂದು ಕಡೆ, ಫ್ಲೆಮಿಷ್ ಮೂಲದ ಫ್ಲಾಂಡರ್ಸ್ ಗೆ ಸ್ವಾಯತ್ತತೆ ಕೊಡಬೇಕು ಅನ್ನುವ ಮಾತು ಮತ್ತೊಂದು ಕಡೆ. ನಾನು ಬ್ರಸಲ್ಸ್ ಮತ್ತು ಗೆಂಟ್ ನಲ್ಲಿದ್ದಾಗ ಅಲ್ಲಿ ಸರಕಾರವೇ ಇರಲಿಲ್ಲವಂತೆ! ೨೦೦೭ರಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ೧೯೬ ದಿನಗಳ ಕಾಲ ಉಸ್ತುವಾರಿ ಸರಕಾರ ಆಡಳಿತ ನಡೆಸಿತ್ತು! ಮಾರನೆಯ ದಿನ ಸಂಜೆ ಬ್ರೂಜ್‍ಗೆ ನನ್ನನ್ನು ಕರೆದೊಯ್ದ ಹ್ಯಾನ್ಸ್ ಹೇಳಿದ: “ಇಲ್ಲಿಂದ ಕೊಂಡೊಯ್ಯಬೇಕಾದ ನೆನಪಿನ ಕಾಣಿಕೆಗಳನ್ನು ಯೋಚಿಸಿ ಆಯ್ದುಕೋ. ಬೆಲ್ಜಿಯನ್ ಬಾವುಟವಿರುವ ಟೀಷರ್ಟನ್ನು ತೆಗೆದುಕೋ, ಮುಂದಿನ ಬಾರಿ ನೀನು ಬರುವ ವೇಳೆಗೆ ಈ ದೇಶವೇ ಇಲ್ಲದಿರಬಹುದು!” ಆದರೂ ಇಂಥ ಒಂದು ದೊಡ್ಡ ತಗಾದೆ ಆ ದೇಶದಲ್ಲಿದೆ ಅಂತ ನನಗೆ ಹ್ಯಾನ್ಸ್ ಜೊತೆ ಮಾತನಾಡುವವರೆಗೂ ತಿಳಿದಿರಲಿಲ್ಲ. ಒಂದು ದೇಶವೇ ಕುಸಿಯುತ್ತಿರುವಾಗ ಒಂದು ಬಂದ್ ಇಲ್ಲ, ಒಂದು ದಿನವೂ ಕಲ್ಲೆಸೆದದ್ದಿಲ್ಲ, ಲಾಠಿ ಚಾರ್ಜ್ ಇಲ್ಲ.. ಇಂದೆಂಥಹ ದೇಶ?? ವಿಪರ್ಯಾಸದ ಮಾತೆಂದರೆ ಐಕ್ಯತೆಯ ಮಾತಾಡುವ ಯುರೋಪಿಯನ್ ಕೂಟದ ರಾಜಧಾನಿ ಬ್ರಸಲ್ಸ್! ದೇಶದ ಒಂದು ಭಾಗ ನೆದರ್ಲೆಂಡಿಗೆ, ಮತ್ತೊಂದು ಫ್ರಾಂಸಿಗೆ ಸೇರಿದರೆ, ಕೂಟದಲ್ಲಿ ಒಂದು ದೇಶ ಕಡಿಮೆಯಾಗಬಹುದೆಂಬ ಖುಷಿ ಬ್ರಸಲ್ಸ್ ನಲ್ಲಿರಬಹುದೇ?

ಅಲ್ಲಿಂದ ಗೆಂಟ್‍ನ ಅನೇಕ ಜಾಗಗಳಿಗೆ ಹ್ಯಾನ್ಸ್ ನನ್ನನ್ನು ಕರೆದೊಯ್ದ. ದೊಡ್ಡ ಚರ್ಚೊಂದನ್ನು ತೋರಿಸಿದ, ನಡೆದು ಹೋಗಿ ಒಂದು ನಿಜಕ್ಕೂ ಅದ್ಭುತ ಕಾಫಿಯನ್ನು ಕೊಡಿಸಿದ. ದಾರಿಯಲ್ಲಿ ಮಾತಾಡುತ್ತಾ ಹ್ಯಾನ್ಸ್ ಹೇಳಿದ ಒಂದು ವಿಷಯ ನನಗೆ ಆಶ್ಚರ್ಯವುಂಟುಮಾಡಿತು. ನಾನು ವಿಪರೀತ ಛಳಿ ಎನ್ನುವ ಮಾತಾಡಿದ್ದಕ್ಕೆ ಹ್ಯಾನ್ಸ್ ಹೇಳಿದ್ದು.. “ಈ ಪ್ರಾಂತ್ಯದಲ್ಲಿ ತಾಪಮಾನ ೨೬ ಡಿಗ್ರಿ ದಾಟಿದರೆ ಹೀಟ್ ವೇವ್ ಅಂತ ಪ್ರಕಟಿಸಿ, ಸ್ಕೂಲುಗಳಿಗೆ ರಜಾ, ಮತ್ತು ಆಫೀಸುಗಳಿಂದ ಬೇಗ ಮನೆಗೆ ಹೋಗುವ ಪರವಾನಗಿ ಕೊಡುತ್ತಾರೆ”!!

ಗೆಂಟ್ ಪುಟ್ಟ ನಗರ. ಅಲ್ಲಿ ಸಣ್ಣ ರಸ್ತೆಗಳು. ಪುಟ್ಟ ಕಾರುಗಳು. ನಡೆದಾಡಿಯೇ ಊರು ಸುತ್ತಬಹುದು. ವೆನಿಸ್ಸಿನಂತೆ ಊರಿನ ಮಧ್ಯದಲ್ಲಿ ಒಂದು ನಾಲೆ, ಬೋಟಿನಲ್ಲಿ ಓಡಾಡಲೂಬಹುದು. ಹಳೆಯ ಹೊಸ ಕಟ್ಟಡಗಳು ಜೊತೆಜೊತೆಯಾಗಿ ನಿಂತಿವೆ. ಎಲ್ಲ ಊರುಗಳಲ್ಲೂ ಅವರದೇ ಸುಬ್ಬಮ್ಮನ ಅಂಗಡಿಯಿರುವಂತೆ, ಗೆಂಟ್ ನಲ್ಲೂ ಮಸ್ಟರ್ಡ್ ಸಾಸ್ ಕೊಳ್ಳಲು ಒಂದು ಪ್ರಖ್ಯಾತ ಜಾಗವಿದೆ. ಅಲ್ಲಿಗೆ ಹೋಗಿ ಸಾಸ್ ಕೊಂಡೆವು. ಅದನ್ನು ಹಾಕಲು ಒಂದು ಪ್ರತ್ಯೇಕ ಭರಣಿ, ಬಗೆಯಲು ಬೇರೆ ರೀತಿಯ ಚಮಚಾ. ಅಲ್ಲಿಂದ ಹ್ಯಾನ್ಸ್ ನನ್ನನ್ನು ಒಯ್ದದ್ದು ಗೆಂಟ್ ನ ಕೋಟೆಗೆ. ಅದರೊಳಕ್ಕೆ ಪ್ರವೇಶಮಾಡಲು ನನಗೆ ಐದು ಯೂರೋಗಳ ಟಿಕೆಟ್ಟು, ಹ್ಯಾನ್ಸ್ ನ ಹೊಸ ಐಡಿ ಕಾರ್ಡನ್ನು ತೋರಿಸಿದರೆ ಅವನಿಗೆ ಮುಫತ್ತು!

ಹಳೆಯ ಕೋಟೆಗಳನ್ನು ನೋಡಿದಾಗ ಹಿಂಸೆ ಎಷ್ಟು ಪ್ರಚಲಿತವಿತ್ತು ಎಂದು ನಮಗೆ ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ಗೆಂಟ್ ಕೋಟೆಯನ್ನು ಹಿಂಸಾಚಾರದ ಪ್ರದರ್ಶನಾಲಯ ಎಂದೇ ಹೇಳಬಹುದು. ಮೊದಲಿಗೆ ಅನೇಕ ಅಸ್ತ್ರಗಳ ದೊಡ್ಡ ದೊಡ್ಡ ಕತ್ತಿ ಗುರಾಣಿಗಳ, ಕವಚಗಳ ಪ್ರದರ್ಶನವಿತ್ತು. ಅದರಿಂದ ತಿಳಿದುಬಂದದ್ದೆಂದರೆ ಕವಚಗಳ ಸೈಜನ್ನು ನೋಡಿ ಆಗಿನ ಸಾಮಾನ್ಯ ಸೈನಿಕನ ಎತ್ತರ ಆಕಾರ ಎಷ್ಟಿದ್ದಿರಬಹುದೆಂದು ಊಹಿಸಬಹುದಿತ್ತು. ಕೋಟೆಯ ತುಂಬಾ ಗುಪ್ತ ಬಾಗಿಲುಗಳು, ಹೊರಗಿನಿಂದ ಬರುವ ವೈರಿಯನ್ನು ಮೊದಲೇ ಪತ್ತೆ ಹಚ್ಚುವ ಮಾರ್ಗಗಳೂ, ಬರುತ್ತಿರುವ ವೈರಿಯ ಮೇಲೆ ಕುದಿಯುತ್ತಿರುವ ಎಣ್ಣೆ ಸುರಿಯಲು ಗುಪ್ತ ಜಾಗಗಳು, ಕೈದಿಗಳನ್ನು ಹಿಂಸಿಸಲು ನಾನಾ ಪರಿಕರಗಳು – ಕೈಯನ್ನು ಅದುಮಿ ನೋವುಂಟುಮಾಡುವ ಇಕ್ಕಳದಂತಹ ಪರಿಕರ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರ ರುಂಡ ಮುಂಡಗಳನ್ನು ಬೇರ್ಪಡಿಸಲು ಗಿಲೋಟಿನ್. ಗಿಲೋಟಿನ್ ಡಿಜೈನು ಯಾವ ಯಂತ್ರಕ್ಕೂ ಕಡಿಮೆಯದ್ದಲ್ಲ. ಕತ್ತನ್ನು ತೂರಿಸಲು ಒಂದು ಗುಂಡಾದ ಆಕಾರ, ಬೇರ್ಪಟ್ಟ ರುಂಡವನ್ನು ಸಂಗ್ರಹಿಸಲು ಅದಕ್ಕೆ ಕಟ್ಟಿದ ಚೀಲ… ಯೋಜಿತ ಹಿಂಸಾಚಾರ ಅಂದರೆ ಇದೇ ಎನೋ!!

ಆದರೆ ಆ ಎಲ್ಲವನ್ನೂ ಚೆನ್ನಾಗಿ ಸಂಗ್ರಹಿಸಿ, ಟೂರಿಸ್ಟುಗಳಿಗೆ ಆಸಕ್ತಿಯುಂಟುಮಾಡುವ ರೀತಿಯಲ್ಲಿ ಯೋಜಿಸಲಾಗಿದೆ. ಕೋಟೆಯಲ್ಲಿ ಯಾವುದೇ ಹೊರಗಿನ ವಸ್ತುವನ್ನು ತಂದಿಟ್ಟಿಲ್ಲ. ಎಲ್ಲವೂ ಆ ಶತಮಾನಕ್ಕೆ ಸಂಬಂಧಿಸಿದ್ದೇ. ಒಂದು ಕುರ್ಚಿಯೂ ನಮ್ಮ ಕಾಲದ್ದಲ್ಲ. ಹೀಗಾಗಿ ಕೋಟೆಯನ್ನು ಪ್ರವೇಶಿಸಿದಾಗ ಕಾಲಯಾನ ಮಾಡಿದಂತೆ ಭಾಸವಾಗುತ್ತದೆ. ಎಲ್ಲೋ ಅಲ್ಲಿ-ಇಲ್ಲಿ ಈಗಿನ ಕಾಲದ ಬೆಳಕಿನ ಏರ್ಪಾಟು ಮಾಡಿದ್ದಾರಾಗಲೀ ಮಿಕ್ಕಂತೆ ಎಲ್ಲವೂ ಆಗಿನ ಕಾಲಕ್ಕೆ ಸಂಬಂಧಿಸಿದ್ದೇ. ಎಷ್ಟರಮಟ್ಟಿಗೆಂದರೆ ಎತ್ತರದ ಭಾಗಗಳಲ್ಲಿ ನಡೆಯುವಾಗ ಆಕಸ್ಮಿಕ ಅಪಘಾತಗಳಾಗಬಾರದೆಂದು ಹಾಕುವ ಪಕ್ಕದ ರೈಲಿಂಗನ್ನೂ ಹಾಕಿಲ್ಲ. ಹ್ಯಾನ್ಸ್ ಆ ಅಂಶವನ್ನು ನನಗೆ ತೋರಿಸಲು ಮರೆಯಲಿಲ್ಲ. “ನೋಡು, ಅಮೆರಿಕದಲ್ಲಾಗಿದ್ದರೆ, ಇದು ಸುರಕ್ಷಿತವಲ್ಲ ಅಂತ ಕೋರ್ಟಿಗೆ ಹೋಗಿ, ಎಲ್ಲೆಲ್ಲೂ ರೈಲಿಂಗು, ಚೈಲ್ಡ್ ಫ್ರೆಂಡ್ಲಿ ಅಂತ ಇಲ್ಲಿನ ಮೂಲಭೂತ ಅನುಭೂತಿಯನ್ನೇ ಇಲ್ಲದಂತೆ ಮಾಡಿಬಿಡುತ್ತಿದ್ದರು. ನಾವೇ ವಾಸಿ ಅಲ್ಲವಾ?” ಹೀಗೆ ಜೋರಾದ ದನಿಯಲ್ಲಿ ಪ್ರಶ್ನೆ ಕೇಳಿದ ಹ್ಯಾನ್ಸ್ ಇದ್ದಕ್ಕಿದ್ದ ಹಾಗೆ ಸುಮ್ಮನಾಗಿಬಿಟ್ಟ. ನಾನು ಅವಾಕ್ಕಾಗಿ ಯಾಕೆಂದು ನೋಡಿದೆ…. ಎದುರಿಗೆ, ದಟ್ಟಕೋಟೆಯ ಪ್ರಾಂಗಣದಲ್ಲಿ, ಹೊರಗಿನ ಒಂದು ಕುರ್ಚಿಯೂ ಬರದಂತಹ ಜಾಗದಲ್ಲಿ, ಮಕ್ಕಳಿಗೆ ರೈಲಿಂಗ್ ಹಾಕದೇ ತಮ್ಮ ಸಂಸ್ಕೃತಿಯನ್ನು ಕಾಯ್ದಿಟ್ಟ ಜಾಗದಲ್ಲಿ ನಮಗೆ ಕಂಡದ್ದೇನು? ಕೋಕಾಕೋಲಾ ಮಾರಾಟ ಯಂತ್ರ! ಅದೂ ಕೆಲಸ ಮಾಡದ ಕೆಟ್ಟು ನಿಂತ ಯಂತ್ರ. “ಪರವಾಗಿಲ್ಲ ಹ್ಯಾನ್ಸ್, ಇದೇನೂ ಹೊಸದಲ್ಲ, ಬಿಳಿಗಿರಿರಂಗನ ಬೆಟ್ಟದಲ್ಲಿ ಕುಡಿಯುವ ನೀರಿನ ನಲ್ಲಿಯಿದೆ. ಆ ನಲ್ಲಿಯ ಗೋಡೆಯ ಮೇಲೂ ಇಂಥದೇ ಕೋಕಾಕೋಲಾದ ಜಾಹೀರಾತು, ಪ್ಲಮಿಷ್, ಫ್ರೆಂಚ್, ಭಾರತೀಯ, ಪಾಕಿಸ್ತಾನಿ, ಕಾವೇರಿಯ ಮೇಲ್ದಂಡೆಯ ಜನ, ಕೆಳದಂಡೆಯ ಜನ.. ಬಹುಶಃ ಎಲ್ಲರನ್ನೂ ಒಂದುಗೂಡಿಸುವುದಕ್ಕೇ ಕೋಕ್ ಮತ್ತು ಪೆಪ್ಸಿ ಇರಬಹುದು. ಯೋಚನೆಮಾಡಿ ನೋಡು, ಜಗತ್ತು ಹೀಗೇ ಮುಂದುವರೆದರೆ ಎರಡೇ ಜಾತಿಯ ಜನ ಇರುತ್ತಾರೆ. ಕೋಲಾ ಪ್ರಿಯರು, ಕೋಲಾ ವಿರೋಧಿಗಳು.. ಅದೇ ಉತ್ತಮವಲ್ಲವೇ?” ಎಂದೆಲ್ಲಾ ಏನೇನೋ ಮಾತನಾಡಿದೆನಾದರೂ, ಹ್ಯಾನ್ಸ್ ಗೆ ತನ್ನ ಸರಕಾರದ ಬಗ್ಗೆ ಕೋಪ ಬಂದದ್ದು ವೇದ್ಯವಾಗಿತ್ತು.

ಈ ಎಲ್ಲವನ್ನೂ ನೋಡಿದ ನಂತರದ್ದು ನನ್ನ ಎಂದಿನ ಸಮಸ್ಯೆಯಾಗಿತ್ತು. ಊಟ ಮಾಡುವುದೆಲ್ಲಿ? ಹ್ಯಾನ್ಸ್ ನನ್ನನ್ನು ಶಾಖಾಹಾರಿ ಆಹಾರ ಸಿಗುವ ಕಡೆಗೆ ಕರೆದೊಯ್ಯುತ್ತೇನೆಂದ, ಒಂದೆರಡು ಕಡೆ ಸುತ್ತಾಡಿದೆವು. ಅವನು ಚೆನ್ನಾಗಿದೆ ಅಂದಿದ್ದ ಜಾಗಗಳೆಲ್ಲವೂ ಮುಚ್ಚಿದ್ದವು. ಅವುಗಳು ಸಂಜೆಯ ಊಟಕ್ಕೆ ಮಾತ್ರ ತೆರೆಯುತ್ತವೆಯಂತೆ. ಕಡೆಗೆ ಮೆಕ್ಸಿಕನ್ ಊಟ ಸಿಗುವ ಜಾಗಕ್ಕೆ ಹೋದೆವು. ಬೆಲ್ಜಿಯಂ ಚಾಕೊಲೇಟುಗಳಿಗಲ್ಲದೇ ಬಿಯರಿಗೂ ಬಹಳ ಪ್ರಖ್ಯಾತವಾದ ಜಾಗ. ಸಂಜೆ, ವಿವಿಧ ಬೆಲ್ಜಿಯನ್ ಬಿಯರುಗಳನ್ನು ರುಚಿ ನೋಡೋಣ ಅಂತ ಒಪ್ಪಿದ್ದಾಯಿತು. ಒಂದೊಂದು ಬಿಯರಿಗೂ ಅದರದೇ ಆದ ರೀತಿ ರಿವಾಜುಗಳಿವೆಯಂತೆ. ಪ್ರತಿ ಬಿಯರಿಗೂ ಅದಕ್ಕೇ ಸೀಮಿತವಾದ ಗ್ಲಾಸು ಇರುತ್ತದೆ. ಒಂದು ವೇಳೆ ನಿಮ್ಮ ಬ್ರಾಂಡಿನ ಬಿಯರಿಗೆ ತಕ್ಕ ಗ್ಲಾಸು ಇಲ್ಲದಲ್ಲಿ ಈ ಮಾತನ್ನು ಪರಿಚಾರಕ ಮೊದಲೇ ಹೇಳಿ ಬೇರೆ ಗ್ಲಾಸಿನಲ್ಲಿ ಕೊಡಬಹುದೇ ಎಂದು ನಿಮ್ಮ ಪರವಾನಗಿ ಪಡೆಯುತ್ತಾನೆ. ಯಾಕೆಂದರೆ ಪ್ರತಿ ಬಿಯರೂ ಒಂದು ಅನುಭವ. ಆ ಅನುಭವದ ಅವಿನಾಭಾವ ಭಾಗ ಗ್ಲಾಸು ಹಿಡಿಯುವ ರೀತಿ, ಗ್ಲಾಸಿನ ಅಂಚಿಗೆ ತುಟಿಯಿಟ್ಟಾಗ ಮೂಗಿಗೆ ಹೊಡೆಯವಹುದಾದ ಪರಿಮಳ ಅದನ್ನು ನಾಲಿಗೆಯ ಮೇಲೆ ಹೊರಳಿಸುವ ಸಮಯದಲ್ಲಿ ಆಗುವ ಅನುಭೂತಿ, ಇವೆಲ್ಲವೂ ಗುಂಡಿನ ಪ್ರಿಯಂ-ಒದೆಗೆ ಮುಂಚೆ ಬೇಕಾದ ಪೋರ್ಪ್ಲೇ! ಈ ಎಲ್ಲವೂ ಭಿನ್ನ ಅನುಭವವೇ ಸರಿ. ನಾವು ಹೋದ ಮೆಕ್ಸಿಕನ್ ರೆಸ್ಟುರಾದಲ್ಲಿ ಕೊರೋನಾ ಅನ್ನುವು ಬಿಯರನ್ನು ಕುಡಿದೆವು. ಇದರ ಬಾಟಲಿಯ ಬಾಯಿಗೆ ಒಂದು ಒಂದು ಪುಟ್ಟ ನಿಂಬೆ ತುಂಡನ್ನು ಸಿಕ್ಕಿಸಿರುತ್ತಾರೆ. ಅದನ್ನು ಒಳಕ್ಕೆ ತೂರಿಸಿ ಬಿಯರನ್ನು ಬಾಟಲಿಯಂದಲೇ ಕುಡಿಯಬೇಕು. ಸಂಜೆ ಒಂದಷ್ಟು ಬಿಯರುಗಳನ್ನು, ಭಿನ್ನ ಭಿನ್ನ ಆಕಾರದ ಗ್ಲಾಸುಗಳಲ್ಲಿ ಕುಡಿದೆವು. ಮಾರನೆಯ ದಿನ ಬ್ರೂಜ್ ಗೆ ಹೋದೆ, ಕೊಳ್ಳಬೇಕಾದ ಟೇಪೆಸ್ಟ್ರೀ, ಟೀ-ಷರ್ಟು, ಚಾಕೋಲೇಟು, ವೈನು, ಮತ್ತು ಬ್ರಸಲ್ಸ್, ಬ್ರೂಜ್ ಮತ್ತು ಗೆಂಟ್ ಗಳ ನೆನಪಿನ ಕಾಣಿಕೆಗಳನ್ನು ಕೊಂಡದ್ದಾಯಿತು. ಆ ವೇಳೆಗೆ ಮನಸ್ಸು ಚಟ್ನಿಪುಡಿ, ಉಪ್ಪನಕಾಯಿಗಾಗಿ ತಹತಹಿಸುತ್ತಿತ್ತು. ಭಾರತ ಬಿಟ್ಟು ವಾರಕಾಲವೂ ದೂರವಿರುವುದು ಕಷ್ಟ ಅನ್ನುವುದು ನನಗೆ ಮತ್ತೊಮ್ಮೆ ಮನವರಿಕೆಯಾಯಿತು.

About The Author

ಎಂ.ಎಸ್.ಶ್ರೀರಾಂ

ಶ್ರೀರಾಂ, ಎಂ. ಎಸ್. ಆಂಧ್ರಪ್ರದೇಶದ ನೆಲ್ಲೂರಿನವರು.  ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು ಮತ್ತು ನಡೆಯಲಾರದ ದೂರ – ಹಿಡಿಯಲಾರದ ಬಸ್ಸು (ಕಥಾ ಸಂಕಲನಗಳು), ಕನಸು ಕಟ್ಟುವ ಕಾಲ, ಶನಿವಾರ ಸಂತೆ, ಅರ್ಥಾರ್ಥ,  ಕಥನ ಕುತೂಹಲ (ಪ್ರಬಂಧ ಸಂಕಲನಗಳು) ಜೊತೆ ಇನ್ನೂ ಹಲವು ಕೃತಿಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ