Advertisement
ರಂಗನಬೆಟ್ಟದ ಕುಸುಮಾಲೆಯರ ಖುಷಿಗಳ ಕುರಿತು:ಮಧುರಾಣಿ ಅಂಕಣ

ರಂಗನಬೆಟ್ಟದ ಕುಸುಮಾಲೆಯರ ಖುಷಿಗಳ ಕುರಿತು:ಮಧುರಾಣಿ ಅಂಕಣ

ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ ಬದುಕಲ್ಲೂ ಹೀಗೆ ನೂರೆಂಟು ಕಟ್ಟುಪಾಡು ಇರುವುದು ಕಾಕತಾಳೀಯ ಅನಿಸಿತು.
ಮಧುರಾಣಿ ಬರೆಯುವ ಪಾಕ್ಷಿಕ ಅಂಕಣ ಇಂದಿನಿಂದ ಶುರು.

 

ಧಗಧಗದ ಮಧ್ಯಾಹ್ನವೊಂದು ಬೆಟ್ಟದ ಸೊಂಟ ಬಳಸುತ್ತಾ ಹತ್ತಿ, ಹಾಡಿ ತಲುಪಿದಾಗ ಮೋಡಕ್ಕೆ ಎಚ್ಚರವಾಗಿತ್ತು. ನಾನು ಅತೀವ ವ್ಯಾಮೋಹಿಯಂತೆ ನೀರಿನ ಬಾಟಲನ್ನು ತಬ್ಬಿ ಕೂತಿದ್ದೆ. ಕಿವಿಗೆ ಎರಕ ಕಾಸಿ ಹುಯ್ದಂತಹ ಹಾಡುಗಳು ಯಾವ ಅರ್ಥಕ್ಕೂ ನಿಲುಕದೇ ಅದ್ಯಾಕೋ ಉದ್ದ ಕುತ್ತಿಗೆಯ ಎಮು ಪಕ್ಷಿಗಳನ್ನು ನೆನಪಿಸುತ್ತಾ ಮುಜುಗರ ಹುಟ್ಟಿಸುತ್ತಿದ್ದವು. ಅಸಹನೆಯ ಮಡಿಲು ಹಡೆದ ಸಣ್ಣ ಸಹನೆಗೆ ಕಾರಣವಿತ್ತು. ರಂಗನ ಬೆಟ್ಟದ ಸೋಲಿಗರ ಹಾಡಿಯನ್ನು ನೋಡುವ ತವಕವಿತ್ತು. ಜಡೆಮಾದಮ್ಮನ ಹೆರಿಗೆ ಕಥೆಗಳನ್ನು ಕೇಳುವುದಿತ್ತು. ಅರ್ಧಂಬರ್ಧ ಮಾಡ್ರನಿಟಿಗೆ ಒಗ್ಗಿದ ಪಡ್ಡೆ ಹುಡುಗರ ದಂಡಿನ ಜೊತೆ ಹರಟೆ ಹೊಡೆಯಬೇಕಿತ್ತು. ಅವರ ಕೂದಲು ಕಂಡ ಹೊಸಬಣ್ಣಗಳು ಅವರ ಬದುಕಿಗೆ ಅಂಟಿರಬಹುದಾದ ಗಮಟು ಕೊಳೆ ಬಣ್ಣವನ್ನು ಸ್ವಲ್ಪವಾದರೂ ಮರೆಮಾಚಿದ ಖುಷಿಯಲ್ಲಿರುವಂತೆ ತೋರಿತು.

ಮಟಮಟ ಮಧ್ಯಾಹ್ನಕ್ಕೆ ಎರಕನಗದ್ದೆ ಕಾಲೋನಿ ಕಂಡಿತು. ಗದ್ದೆ ಪೋಡು ಇನ್ನೂ ಮುಂದಿತ್ತು. ಕಾರು ಹೋಗಿ ನಿಲ್ಲುತ್ತಲೇ ಹೋಯ್…. ಎಂಬ ಕೂಗಿನೊಂದಿಗೆ ಪುಟಾಣಿಗಳ ಬಳಗವೊಂದು ಓಡಿಬಂದು ನಮ್ಮನ್ನು ಮುತ್ತಿ ಹಿಡಿಯಿತು. ಸುಮ್ಮಗೆ ಮೌನದ ಗೊಂಬೆಗಳ ಹಾಗೆ ನಮ್ಮನ್ನೇ ನೋಡುತ್ತಾ ಬಾಯೊಳಗೊಂದು ಕೈ, ತಲೆಗೆ ಕೆರೆಯಲು ಹಚ್ಚಿದ ಇನ್ನೊಂದು ಕೈಗಳಿಗೆ ಪುರುಸೊತ್ತು ಕೊಡದೇ ನಮ್ಮನ್ನೇ ದಿಟ್ಟಿಸಿದವು. ನಾನು “ಓಯ್.. ಏನ್ರೋ ಸಮಾಚಾರ…” ಅನ್ನುವ ಹೊತ್ತಿಗಾಗಲೇ ಮೇಲ್ಭಾಗದಿಂದೊಂದು ದನಿ ‘ಅಕ್ಕಾ…’ ಅಂದಿತು. ಮೇಲೆ ನೋಡಿದರೆ ಸಂಗೀತಾ ಎಂಬ ಹದಿನಾಲ್ಕರ ಚೆಲುವೆಯೊಬ್ಬಳು ಅರ್ಧ ಹತ್ತಿದ ಮರದ ಮೇಲಿಂದ ನಗುತ್ತಿದ್ದಳು. ಹಾಡಿಯು ಕಂಡಿದ್ದ ಸಿಮೆಂಟು ಹಾದಿಗಳು ಅವರ ಗುಡಿಸಲುಗಳ ಭಾಗವೇ ಆಗಿಹೋಗಿದ್ದವು. ಮನೆಯ ಒಳಗಿಗಿಂತಲೂ ಬದುಕು ಸಿಮೆಂಟು ರಸ್ತೆಯ ಮೇಲೆಯೇ ಚಂದಗೆ ಅರಳಿತ್ತು. ಗೋಡೆಗಳಿಲ್ಲದ ಬದುಕಿಗೆ ಒಗ್ಗಿಕೊಂಡವರು ಇವರು ಎಂಬುದು ಸ್ಪಷ್ಟವಾಗಿ ತೋರುತ್ತಿತ್ತು.

ಎಲ್ಲ ಕಾಲೋನಿಗಳಂತೆ ಕೋಳಿಗಳಿಗೆ ಕೊರತೆಯಿಲ್ಲದೇ ಸಮೃದ್ಧವಾಗಿ ತಿಂದುಂಡು ನೆಮ್ಮದಿಯ ಓಡಾಟದಲ್ಲಿದ್ದವು. ದೊಡ್ಡ ಹೇಂಟೆಗಳು ತಲೆ ಮೇಲಿನ ಪೇಟದೊಂದಿಗೆ ಕುತ್ತಿಗೆ ಕುಣಿಸುತ್ತಾ ಸಮಸ್ತವೂ ತಮ್ಮ ಹಿಂದೆ ಬರುವುದು ಎಂಬ ನಂಬಿಕೆಯಲ್ಲಿ ಸುತ್ತಾಡುತ್ತಿದ್ದರೆ ನನಗ್ಯಾಕೋ ಜನನಾಯಕರ ನೆನಪಾಯಿತು. ಕೋಳಿಪಿಳ್ಳೆಗಳಿಗೆ ಹೊರತಲ್ಲದಂತೆ ನಲಿದಾಡಿಕೊಂಡಿದ್ದ ಮಕ್ಕಳು ಬೀದಿಯಲ್ಲೇ ಹೆಚ್ಚು ಇದ್ದವು. ಶಾಲೆಗೆ ಹೋಗೋದೆಂಬ ಕಾರ್ಪಣ್ಯ ಮುಗಿಸಿಕೊಂಡು ಓದಿನ ಹಂಗಿಲ್ಲದೇ ಸಿಕ್ಕಿದ್ದು ಬಾಯಿಗಿಡುತ್ತಾ ಹಾಯಾಗಿದ್ದವು. ಜಡೆಯಪ್ಪ, ಜಡೆಸಾಮಿ, ಸಾಮಿ, ಲಕ್ಷ್ಮೀ ಮುಂತಾಗಿ ಕತೆಯಲ್ಪಡುವ ಜಡೆಮಾದಮ್ಮನ ಮೊಮ್ಮಗನು ಮೊದಲ ನೋಟಕ್ಕೆ ಮೊಮ್ಮಗಳೆಂಬ ಭ್ರಮೆ ಮೂಡಿಸಿ ದೂರದಲ್ಲಿ ನಾಚುತ್ತಾ ಕೈಯುಗುರು ಕಡಿಯುತ್ತಾ ನಿಂತಿದ್ದನು. ಇವನು ಸಾಕ್ಷಾತ್ ಕೈಲಾಸವಾಸಿಯೇ ಎಂಬ ಭ್ರಮೆ ಹುಟ್ಟುವಷ್ಟು ಗಾಂಭೀರ್ಯ ತೋರುತ್ತಾ ನಿಂತಾಗ ಅವನ ನೋಡಿ ಹುಟ್ಟಿದ ಭಯ ಅರೆಕ್ಷಣದಲ್ಲಿ ಮಾಯವಾಯಿತು.

ನಾನು ಬ್ಯಾಗಿನಿಂದ ಹೊರತೆಗೆದು ತೋರಿಸಿದ ಉದ್ದನೆಯ ಚಾಕೊಲೇಟು ಕೈಲಾಸವಾಸಿಯಂತಿಪ್ಪ ಜಡೆ ಸಾಮಿಯ ಮನಸು ಕರಗಿಸುವಲ್ಲಿ ಯಶಸ್ವಿಯಾಯಿತು. ಮೆಲ್ಲಗೆ ಹೆಜ್ಜೆ ಹೆಜ್ಜೆ ಸೇರಿ ಜಡೆಮಾದನು ನನ್ನ ಬಳಿಸಾರಿದನು. ಅವನನ್ನೂ ಅವನ ಅಜ್ಜಿಯನ್ನೂ ಅವನ ಮನೆಯ ಕೋಳಿಪಿಳ್ಳೆಯನ್ನೂ ಒಟ್ಟಾಗಿ ಸೇರಿಸಿ ಫೋಟೋ ತೆಗೆದುಕೊಳ್ಳುವ ನನ್ನ ಆಸೆ ಕೈಗೂಡಲಿಲ್ಲವಾದರೂ ಜಡೆಸಾಮಿಯು ನನ್ನ ಪಕ್ಕ ನಿಂತು ಫೋಸು ಕೊಟ್ಟು ಕನಿಕರಿಸಿದನು.

ಸಂಗಡಿಗಳ ಜೊತೆ ಜಡೆ ಮಾದಮ್ಮ

ಸುಮಾರು ಎರಡೂವರೆ ಸಾವಿರ ಹೆರಿಗೆ ಮಾಡಿಸಿದ ಜಡೆಮಾದಮ್ಮನು ತನ್ನ ಗೌಡನನ್ನು ನೆನೆದು ಇನ್ನೂ ನಾಚುವ ಪರಿಗೆ ಬೆರಗಾಯಿತು. ಹಾಡಿಯಲ್ಲಿ ಬದುಕು ಸಾಕಷ್ಟು ಪ್ರಾಕ್ಟಿಕಲ್ ಆಗಿ ಹರಿದಾಡುತ್ತಿದೆ ಅನಿಸಿತು. ಯಾವುದೇ ಮೋಹೋದ್ರೇಕಗಳೂ ಇರದ ಬೆಣ್ಣೆ ನಗುವೊಂದು ಎಲ್ಲರ ಮುಖದ ಮೇಲೂ ಮನೆ ಮಾಡಿರುವಂತೆನಿಸಿ ನಿಜವಾಗಲೂ ಅವರ ನೆಮ್ಮದಿಯ ಬದುಕು ಕಂಡು ಹೊಟ್ಟೆ ಕಿಚ್ಚಾಯಿತು. ಅವರು ಪ್ರೀತಿಯಿಂದ ಕೊಡುವ ಬೆಲ್ಲದ ಟೀ ಸಖತ್ ಇಷ್ಟವಾಗಿ ‘ಒಂದೆರಡು ದಿನ ನಿಮ್ಮನೇಲೇ ಇರ್ಲಾ..?’ ಅಂತ ಕೇಳುವ ಆಸೆ ಹುಟ್ಟಿದ್ದಂತೂ ನಿಜ. ಪಾಪಿ ಜನುಮಗಳಿಗೆ ನಾವೇ ದುಡಿದು ನಾವೇ ತಿನ್ನುವ ಕರ್ಮ. ಯಾರಾದರೂ ಪ್ರೀತಿಯಿಂದ ಒಂದು ಲೋಟ ಕಾಫಿ ಕೊಟ್ಟರೆ ಇನ್ನಿಲ್ಲದಷ್ಟು ಪರಮಾನಂದವಾಗುವುದು. ಈ ಅನಾಥಪ್ರಜ್ಞೆ ಹಾಡಿಗಳಲ್ಲಿ ಕಾಡಿದಂತೆ ತೋರಲಿಲ್ಲ. ಅವರು ನಗುನಗುತ್ತಾ ಸುಖವಾಗಿದ್ದರು. ಕೈಗೆ ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನೇ ತಲೇಲಿ ಹೊತ್ತು ಮಾಡುತ್ತಾ ಸಿಕ್ಕಷ್ಟನ್ನು ನೆಮ್ಮದಿಯಲ್ಲಿ ತಿನ್ನುತ್ತಾ ಹಾಡಿಕೊಂಡು ಆರಾಮಾಗಿದ್ದರು.

ಎಲ್ಲ ಕಾಲೋನಿಗಳಂತೆ ಕೋಳಿಗಳಿಗೆ ಕೊರತೆಯಿಲ್ಲದೇ ಸಮೃದ್ಧವಾಗಿ ತಿಂದುಂಡು ನೆಮ್ಮದಿಯ ಓಡಾಟದಲ್ಲಿದ್ದವು. ದೊಡ್ಡ ಹೇಂಟೆಗಳು ತಲೆ ಮೇಲಿನ ಪೇಟದೊಂದಿಗೆ ಕುತ್ತಿಗೆ ಕುಣಿಸುತ್ತಾ ಸಮಸ್ತವೂ ತಮ್ಮ ಹಿಂದೆ ಬರುವುದು ಎಂಬ ನಂಬಿಕೆಯಲ್ಲಿ ಸುತ್ತಾಡುತ್ತಿದ್ದರೆ ನನಗ್ಯಾಕೋ ಜನನಾಯಕರ ನೆನಪಾಯಿತು.

ಹೈದರಂತೂ ತಲೆಕೂದಲಿಗೆ ಅದೇನೇನೋ ಬಣ್ಣಗಳನ್ನು ಬಳಿದುಕೊಂಡು ಸ್ಟೈಲಾಗಿ ಕಟಿಂಗ್ ಮಾಡಿಸಿಕೊಂಡು ತುಂಟನಗುವೊಂದನ್ನು ಆಗಾಗ ಹೂವಿನ ಪರಿಮಳ ಗಾಳಿಗೆ ಬೆರೆಯುವ ಹಾಗೆ ತೇಲಿಬಿಡುತ್ತಾ ಪಂಚರಂಗಿ ಗಿಳಿಗಳಂತೆ ಕಾಣುತ್ತಿದ್ದರು. ನಾನು ಅವರ ಪಕ್ಕ ಕೂತು ಮಾತಾಡಿಸಿದರೆ ತಾವೇ ನಾಚುತ್ತಾ ಅವರ ಫೋಟೋ ತೆಗೆದರೆ ತುಂಟನಗೆ ನಗುತ್ತಾ ಏನೋ ನಾಲ್ಕು ಸಾಲು ಹಾಡಿ ಎದ್ದುಹೋದರು.

ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ ಬದುಕಲ್ಲೂ ಹೀಗೆ ನೂರೆಂಟು ಕಟ್ಟುಪಾಡು ಇರುವುದು ಕಾಕತಾಳೀಯ ಅನಿಸಿತು. ಹೀಗೆ ಕಾಕತಾಳೀಯ ಅನಿಸಲು ಇನ್ನೂ ಒಂದು ಕಾರಣವಿದೆ. ಅದು ಇಲ್ಲಿನ ವಿವಾಹ ಪದ್ಧತಿ. ಇಷ್ಟಪಟ್ಟ ಗಂಡು ಹೆಣ್ಣು ನಮ್ಮ ಸೋ ಕಾಲ್ಡ್ ಸಾಮಾಜಿಕ ಕಟ್ಟಳೆಗಳ ಹಂಗಿಲ್ಲದೇ ಕಾಡಿಗೆ ಓಡಿ ಹೋಗುವ ಇವರ ಸಂಪ್ರದಾಯ.

ಇವರಿಗೆ ಮದುವೆಯೆಂದರೆ ಮನಸೊಪ್ಪಿದ ಇಬ್ಬರು ಮನಸೇ ದೈವವೆಂದು ಬಗೆದು ಕಾಡೇ ಗುಡಿಯೆಂದು ಒಪ್ಪಿ ಆ ಕಾಡಿನೊಳಗೆ ಐಕ್ಯವಾಗಿಬಿಡುವ ಸುಂದರ ಸಂಪ್ರದಾಯ. ಆಮೇಲೆ ಅವರಿಬ್ಬರನ್ನೂ ಹಿಡಿತಂದು ಊರಿನ ಯಜಮಾನರೂ ಹಿರಿಯರೂ (ಅವರಲ್ಲಿ ಹಲವರು ಹೀಗೇ ಮದುವೆಯಾದವರು. ಇಲ್ಲಿ ಹಿರಿಯರು ಒಪ್ಪಿ ಮಾಡುವ ಮದುವೆಗಳೇ ವಿರಳ.) ಸೇರಿ ಅವರ ಬಳಿ ಸ್ವಲ್ಪ ದಂಡ ಕಟ್ಟಿಸಿ ಗಂಡಹೆಂಡಿರೆಂದು ಘೋಷಿಸುವುದು. ಇದೇ ಇವರ ಮದುವೆ ಪದ್ಧತಿ. ಹಾಳುಮೂಳು ಕಾರ್ಯಕ್ರಮಗಳ ಸಾವಿರಾರು ಹಿಪ್ಪೋಕ್ರಾಟಿಕ್ ಮಿದುಳುಗಳ ಅನಗತ್ಯ ಲಕ್ಷಾಂತರ ಖರ್ಚು ಮಾಡಿ ಕಡೆಗೆ ಡಿವೋರ್ಸಿಗೆ ಬಂದು ನಿಲ್ಲುವ ಮದುವೆಗಳನ್ನೇ ಕಂಡು ಅಭ್ಯಾಸವಾಗಿಹೋದ ನಮಗೆ ಇಂತಹ ರೀತಿಯೇನೋ ಹೊಸತೆನಿಸಬಹುದು.. ಆದರೆ ಕೇಳಿ ನನಗೇನೋ ಹಿತವೆನಿಸಿತು. ಬೇಂದ್ರೆಯವರ ‘ಪೋರೀ ನೀನು.. ನಾನೂ ಪೋರಾ.. ಮಾರಿ ಕಣ್ಣಿಗ ಮರುಳಾರಾಗಿ ನಚ್ಚಿ ಮೆಚ್ಚಿ ಕೂಡಿದ್ದೇವ.. ಬೇರೆ ಇಲ್ಲಾ.. ಇದ್ದರೆ ಶಿವನೆ ಬಲ್ಲ..’ ಹಾಡು ನೆನಪಾಗಿ ಚಿಕ್ಕಂದಲ್ಲಿ ಹೇಳುತ್ತಿದ್ದಾಗ ಅರ್ಥದ ಅರಿವಿರಲ್ಲದೇ ಹಾಡಿದ್ದು ನೆನೆದು ನಗು ತರಿಸಿತು. ನಮ್ಮನ್ನೆಲ್ಲಾ ನಾವು ಯಾವ ಲೆಕ್ಕದಲ್ಲಿ ನಾಗರಿಕರು ಎಂದು ಕರೆದುಕೊಳ್ಳುವೆವೋ ಗೊತ್ತಾಗಲಿಲ್ಲ. ಮತ್ತು ಯಾಕಾಗಿ ಈ ಮೂಲನಿವಾಸಿಗಳನ್ನು ಆ ಪರಿ ಕಾಡಿ ನಾಗರಿಕರನ್ನಾಗಿಸಲು ಹೊರಟಿದ್ದೇವೋ ತಿಳಿಯಲಿಲ್ಲ.

ಹಿರಿಯ ಸ್ನೇಹಿತರೊಬ್ಬರು ಈ ಹಾಡಿ ಜನಗಳ ಮಾತು, ಭಾಷೆ, ವೇಷಭೂಷಣಗಳನ್ನು ಬದಲಾಯಿಸಿ ಹಾಡಿಗಳಿಗೆ ನಾಗರಿಕತೆ ಎಳತರಲು ಮಾಡಿದ ಹರಸಾಹಸ ನೆನೆದು ಈಗಲೂ ನಡುಗುತ್ತಾರೆ. ಅವರನ್ನು ಬರೀ ಸೀರೆಯಿಂದ ರವಿಕೆ ಹಾಕಬೇಕೆಂಬ ತನಕ ಬುದ್ಧಿ ಕಲಿಸಲು ಅವರು ಹೆಣಗಿದ ರೀತಿ ನೆನೆದು ಮಂದಹಸಿತರಾಗುತ್ತಾರೆ. ಅದಕ್ಕಾಗಿ ಕೆಲಸ ಮಾಡಿದ ಮೈರಾಡ ಹಾಗೂ ಇತರ ಎನ್.ಜಿ.ಓ.ಗಳ ಪಾಡು ಹೇಗಿತ್ತೆಂದು ಸಚಿತ್ರ ಊಹೆಗೆ ನಿಲುಕುವಂತೆ ವರ್ಣಿಸುತ್ತಾರೆ. ಆದರೆ ಹಾಡಿಗಳಿಗೆ ನಾಗರಿಕತೆ ಪರಿಚಯಿಸಲೆಂದು ತಿಂಗಳುಗಟ್ಟಲೇ ಹಾಡಿಗಳಲ್ಲಿ ನೆಲೆ ನಿಂತು ಅವರೊಟ್ಟಿಗೇ ಬೆರೆತ ನಾಡಿನ ಈ ಹುಡುಗರು ವಾಪಸಾಗುವ ಹೊತ್ತಿಗಾಗಲೇ ಹಾಡಿಯ ಜನದೊಂದಿಗೆ ಬಿಡಿಸಲಾಗದ ಬಾಂಧವ್ಯ ಬೆಸೆದುಕೊಂಡು ಈಗಲೂ ಅವರ ಗುಡಿಸಲಿನ ಜಾಗದ ಸೀಲಿಂಗ್ ಮನೆಗಳಿಗೆ ಎಡತಾಕುವ ಅಸಹಾಯಕ ಪ್ರೀತಿಯೊಂದರ ಎಳೆಗಳನ್ನು ಬಿಡಿಸಿಡುತ್ತಾರೆ.

ಹೀಗೆ ಹಾಡಿಯ ಬದುಕೊಂದು ಬಟಾಬಯಲಿನ ಆಲಯದಂತೆ ನೀರವವೂ ಉನ್ಮತ್ತವೂ ಆಗಿ ತನ್ನದೇ ರಾಗವೊಂದಕ್ಕೆ ಶೃತಿ ಹಿಡಿದು ತಲೆದೂಗುತ್ತಾ ಬೆಟ್ಟದ ರಂಗನ ಪಾದಗಳಿಗೆ ಅಂಟಿ ಕುಸುಮಾಲೆಯ ತವರೂರಾಗಿ ಮೆರೆಯುವ ಪರಿ ಚೆಂದ. ‘ಈ ಕುಸುಮಾಲೆಯೂ ನಿಮ್ಮಂಗೇ ಬೆಳ್ಳಗೆ ಕುಳ್ಳಗೆ ವೊಸಿ ದಪ್ಪಗಾಗಿ ಇದ್ದಿರಬೋದು. ಅದ್ಕೇಯ ರಂಗಪ್ಪ ಮನ್ಸು ಮಡಗವ್ನೆ..’ ಅನ್ನುವ ಆ ಎಂಭತ್ತರ ಚೆಲುವೆಯ ತುಂಬು ಬದುಕಿಗೂ ಹಾಡಿ ಕುಣಿಯುವ ಜೀವನೋತ್ಸಾಹಕ್ಕೂ ಈಗಲೂ ಗೌಡನ ಕೂಡಿ ಕಾಡಿಗೆ ಓಡಿದ್ದು ನೆನೆದು ನಾಚಿ ನೀರಾಗುವ ಅವಳ ಚಿರಯೌವ್ವನಕ್ಕೂ ಒಂದು ಸಲಾಮ್ ಕೊಟ್ಟು ಮೆಲ್ಲಗೆ ಪೋಡಿ ಇಳಿದು ರೋಡು ಹತ್ತಿದೆವು. ಯಾಕೋ ನನ್ನ ಮನಸೆಲ್ಲಾ ಒಂಟಿ ಕಾಲಲ್ಲಿ ನಿಂತಂತೆ ಗುಮ್ಮನಿದ್ದ ಬಸಪ್ಪನ ಗುಡಿಯ ಮುಂದಿನ ಇಚ್ಚಿಮರದಲ್ಲಿ ಗುಬ್ಬಿಯಾಗಿ ಮಾರ್ಪಟ್ಟು ಉಲಿಯುತ್ತಿತ್ತು. ನಾನು ಈ ಸೋಲಿಗರ ಕುಸುಮಾಲೆಯಲ್ಲ ಎಂಬುದೇ ಯಾಕೋ ದೊಡ್ಡ ನೋವಾಗಿತ್ತು. ಈಗ ರಂಗನು ನನ್ನ ಎದುರು ಹಾಯುವನೋ ಎಂಬಂತಹ ಹುಚ್ಚು ಖೋಡಿ ಭಾವವೊಂದು ಮಿಂಚಿನಂತೆ ಹರಿಯುತ್ತಿತ್ತು.

About The Author

ಮಧುರಾಣಿ

ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ