Advertisement
ಬಸರಿಮರ ಮತ್ತು ವಿಷಪೂರಿತ ಅಣಬೆ: ಮುನವ್ವರ್ ಬರೆಯುವ ಪರಿಸರ ಕಥನ

ಬಸರಿಮರ ಮತ್ತು ವಿಷಪೂರಿತ ಅಣಬೆ: ಮುನವ್ವರ್ ಬರೆಯುವ ಪರಿಸರ ಕಥನ

ಬಾಲ್ಯದಲ್ಲಿ ಚಾರೆ ಮರದಡಿಯಲ್ಲಿ ನಡೆಯಬಾರದೆಂಬ ಮೂಢನಂಬಿಕೆಯಿತ್ತು. ಅವುಗಳ ಹಣ್ಣುಗಳು ಮೈ ಮೇಲೆ ಬಿದ್ದರೆ ಚರ್ಮದಲ್ಲಿ ಬೊಕ್ಕೆಯೇಳುವ ಕಾರಣಕ್ಕಿರಬಹುದು. ಅವು ಭೂತದ ಮರವೆಂಬ ಹೆದರಿಕೆಯೂ ಬೇರೆ. ಸಾಲದಕ್ಕೆ ಅದರಲ್ಲಿ ಹಾವುಗಳು ವಾಸಿಸುತ್ತವೆಯೆಂದು ಹೆದರಿಸಿಬಿಟ್ಟಿದ್ದರು. ಒಮ್ಮೆ ಕಟ್ಟಿಗೆಗೆ ಹೋದಾಗ ಉಮ್ಮ ಅಲ್ಲೇ ಇದ್ದ ಎರಡು ದೊಡ್ಡ ಸೊಪ್ಪಿನ ಹೊರೆಯನ್ನು ಅಕ್ಕಂದಿರಿಗೆ ಹೊರಿಸಿದ್ದರು. ಅದೇನಾಯಿತೋ ಅವರು ಹೊತ್ತು ತಂದು ದನದ ದೊಡ್ಡಿಗೆ ಹಾಕಿ ಮನೆಗೆ ಬಂದರಷ್ಟೇ ಮೈ ಕೈಯೆಲ್ಲಾ ತುರಿಸಿಕೊಳ್ಳತೊಡಗಿದರು. ಯಾವುದೋ ಆಕಿರದ ಎಲೆಗಳು ಸ್ಪರ್ಶವಾಗಿರಬೇಕೆಂದು ಭಾವಿಸಿದರು. ಆದರೆ ಪರಿಸ್ಥಿತಿ ಕೈ ಮೀರಿತ್ತು. ಕಣ್ಣು ಮುಖ ಮೂತಿ ಎಲ್ಲಾ ಊದಿಕೊಳ್ಳತೊಡಗಿದವು.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ಅದೊಂದು ಭಾನುವಾರ. ಖುಷಿಯಾಗಿ ರಜೆ ಸವಿಯುತ್ತಾ ಹೊಸ ಆಟಕ್ಕೆ ಪೂರ್ವ ತಯ್ಯಾರಿ ನಡೆಸುತ್ತಿದ್ದೆ. ಊರ ಪರಿಸರದಲ್ಲಿ ಸರೊಳಿ, ತಬ್ಳುಕು, ಕುಂಟೋಲು, ನೇರಳೆ, ಪುನ್ನಾರ ಪುಳಿಗಳ ಪರ್ವ. ಕಾಡು ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡು ನವಿಲು ಪಾದೆಯಲ್ಲಿ ಕುಳಿತು ಗಾಳಿ ಪಟ ಬಿಡುವುದಾಗಿ ತೀರ್ಮಾನಿಸಿದೆ. ಮನೆಯಿಂದ ಹೊರಡುವಷ್ಟರಲ್ಲಿ “ಉಮ್ಮಾ.. ಉಮ್ಮಾ .. ಅಜ್ಜ ಬಂದರು” ಎಂದು ತಂಗಿ ರಾಗವಾಗಿ ಕರೆಯುವಾಗ ನಾನೂ ಮನೆಯ ಮೊಗಸಾಲೆಗೆ ಓಡಿ ಬಂದಿದ್ದೆ.

ಅಜ್ಜ ಅಂದರೆ ನಮ್ಮೂರಿನವರೇ, ಹೆಸರು ದಾಯಿದ ಪೊರ್ಬು. ಅಪ್ಪಟ ಕ್ಯಾಥೋಲಿಕ್ ಕ್ರಿಶ್ಚಿಯನ್. ಅಮ್ಮ “ಅಜ್ಜ” ಎಂದು ಕರೆಯಲು ಹೇಳಿಕೊಟ್ಟಂದಿನಿಂದ ಅವರ ಹೆಸರು ಹಾಗೆಯೇ ಬದಲಾಗಿತ್ತು. ಮನೆಗೆ ಬಂದರೆ ಅವರೇ ಬೆಳೆದ ಕಬ್ಬು, ಮುಳ್ಳು ಸೌತೆ ಇತರೆ ಏನಾದರೂ ಹಣ್ಣುಗಳನ್ನ ಅಥವಾ ತರಕಾರಿಯನ್ನು ತರುವರು. ಇಪ್ಪತ್ತೋ ಮೂವತ್ತೋ ಕೊಟ್ಟರೆ ಅದು ನಮ್ಮ ಪಾಲಾಗುತ್ತಿತ್ತು. ಕೆಲವೊಮ್ಮೆ ಮನೆಯ ಸುತ್ತಮುತ್ತಲಿನ ಕೂಲಿ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವವರು. ಆ ದಿನಗಳಲ್ಲಿ ತಂಗಿ ಅವರ ಜೊತೆಗೂಡಿ ಅಲ್ಪ ಸ್ವಲ್ಪ ಕೊಂಕಣಿಯೂ ಕಲಿಯುತ್ತಿದ್ದಳು. ಇಬ್ಬರೂ ಜೊತೆಗೂಡಿ ಮಾತನಾಡುವಾಗ ಮನೆಯವರೆಲ್ಲಾ “ಯಾವ ಅನ್ಯಗ್ರಹದ ಜೀವಗಳಪ್ಪಾ?” ಅಂತ ಛೇಡಿಸುತ್ತಿದ್ದೆವು.

ಹೀಗೆ ಬಂದವರೊಮ್ಮೆ ಅಣಬೆ ತಂದಿದ್ದರು. ಅಣಬೆ ಸಾಮಾನ್ಯವಾಗಿ ಮಳೆಗಾಲದ ಪ್ರಾರಂಭದಲ್ಲೇ ಸಿಗುವುದು. ಗುಡುಗಿನ ಶಬ್ದಕ್ಕೆ ಹುಟ್ಟಿಕೊಳ್ಳುವ ಈ ಅಣಬೆಗಳು ಪದಾರ್ಥಕ್ಕೆ ಬಹಳ ರುಚಿಕರ. ಹೀಗಂತ ಎಲ್ಲ ಅಣಬೆಯನ್ನು ಪದಾರ್ಥಕ್ಕೆ ಯೋಗ್ಯವೆಂದು ತಿಳಿಯುವುದು ಪ್ರಾಣಕ್ಕೆ ಸಂಚಕಾರ. ಆ ದಿನ ಅಜ್ಜ ಇದೊಂದು ಅನುಭವದ ಕಥೆಯನ್ನೊಮ್ಮೆ ನಮಗೆ ಹೇಳಿದರು.

ಒಮ್ಮೆ ಅವರ ಅಣ್ಣನ ಹೆಂಡತಿ ತೋಟದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಅಣಬೆ ಸಿಕ್ಕಿತಂತೆ. ಸಿಕ್ಕ ಅಣಬೆಯನ್ನು ತಂದು ಅವರ ಮನೆಯಲ್ಲಿ ಸಾರು ಮಾಡಿದ್ದರು. ಗಂಡನಿಗೆ ಉಣ್ಣಲು ಕೊಟ್ಟು ತಾನು ಮತ್ತೆ ಊಟ ಮಾಡುವೆ ಎಂದು ಹೊರಗೆಲ್ಲೊ ಕೆಲಸಕ್ಕೆ ಹಚ್ಚಿಕೊಂಡರಂತೆ. ಮನೆಯಲ್ಲಿ ಗಂಡನ ಆರ್ತನಾದ ಕೇಳಿಸಿದ್ದೇ, ಓಡಿ ಬಂದವರು ನೋಡಿದರೆ ಊಟಕ್ಕೆ ಕುಳಿತಲ್ಲೇ ಕುಸಿದು ಬಾಯಿಯಲ್ಲಿ ನೊರೆಯುಕ್ಕುತ್ತಿತ್ತಂತೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಪರೀಕ್ಷಿಸಿದ ವೈದ್ಯರು “ವಿಷಪೂರಿತ ಅಣಬೆ ಸೇವನೆ”ಯೇ ಮರಣಕ್ಕೆ ಹೇತುವೆಂದು ಹೇಳಿದರಂತೆ.

ಅಣಬೆಗಳಲ್ಲಿ ಸುಮಾರು ಜಾತಿಗಳಿವೆ. ಎಲ್ಲ ಅಣಬೆಗಳು ತಿನ್ನಲು ಯೋಗ್ಯವಲ್ಲ. ವಿವಿಧ ರೀತಿಯ ಆಕೃತಿಯ ಅಣಬೆಗಳಿದ್ದರೂ ತಿನ್ನಲಾಗುವುದು ಮೂರು ನಾಲ್ಕು ಪ್ರಬೇಧಗಳು ಮಾತ್ರ. ನಮ್ಮ ಪರಿಸರದಲ್ಲಿ ಅಣಬೆ ಸಿಕ್ಕರೆ ತಕ್ಷಣ ಉಮ್ಮನಿಗೊಂದು ಸ್ಯಾಂಪಲ್ ಕಳುಹಿಸಿ ಕೊಡುವುದಿದೆ. ಅವರು ಪರೀಕ್ಷಿಸಿ ವಿಷಯುಕ್ತವಲ್ಲವೆಂದು ಹೇಳಿದರೆ ಮತ್ತೆ ಸಾರು ಮಾಡುವುದು ರೂಢಿ. ಸಣ್ಣದರಲ್ಲೇ ಮರ ಗಿಡಗಳ ಬಗ್ಗೆ ಬಹಳಷ್ಟು ತಿಳಿದಿಕೊಂಡಿರುವುದಕ್ಕೆ ಉಮ್ಮನಿಗೆ ಈ ಎಲ್ಲಾ ವಿವರಗಳು ತಿಳಿದಿದೆ. ಹಾಗಂತ ಅವರಲ್ಲೇ ಕೇಳಿದರೆ “ಎಲ್ಲವೂ ಅಜ್ಜಿ ಹೇಳಿ ಕೊಟ್ಟ ವಿದ್ಯೆಗಳೆಂದು” ಮುಗ್ಧವಾಗಿ ನಗುತ್ತಾರೆ.

ಆ ದಿನಗಳಲ್ಲಿ ನಮ್ಮ ಅಜ್ಜಿಯ ಮನೆಯೆಂದರೆ ವಿಶೇಷ ಸಂತೋಷವನ್ನೀಯುವ ಪರಿಸರ, ಖುಷಿಯ ತಾಣ. ಅದೊಂದು ತುಂಬಿದ ಮನೆ, ಅವಿಭಕ್ತ ಕುಟುಂಬ. ಅಮ್ಮನ ತಮ್ಮಂದಿರೆಲ್ಲರೂ ಸುಮಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿದ್ದರು. ಅವರ ಮಕ್ಕಳು, ಹೆಂಡಿರು ಎಲ್ಲರೂ ಜೊತೆಯಾಗಿ ಒಂದೇ ಮನೆಯಲ್ಲಿದ್ದರಿಂದ ಆ ಮನೆಗೊಂದು ಸಂತೋಷದ ಕಳೆ. ಮನೆಯ ಪೂರ್ವ ದಿಕ್ಕಿಗೆ ದೊಡ್ಡ ದನದ ಹಟ್ಟಿ. ಅದರ ತುಂಬಾ ಹತ್ತಾರು ದನಗಳು. ಮನೆಯವರಿಂದ ಏನಾದರೂ ಜಗಳ ವೈಮನಸ್ಯ ಬಂದರೆ ದನಗಳಿಗೆ ಹುಲ್ಲು ತಿನ್ನಿಸುತ್ತಾ ಮರೆಯುತ್ತಿದ್ದುದು ರೂಢಿ. ಅದು ಹಾಗೆಯೇ, ಹಲವಾರು ಬಾರಿ ಮನುಷ್ಯನ ಮನಸ್ಸಿನಿಂದಾದ ನೋವುಗಳನ್ನು ನಾವು ಪ್ರಾಣಿಗಳ ಮುಗ್ಧ ಚಟುವಟಿಕೆಯಲ್ಲಿ ಮರೆತು ಬಿಡುವುದಿದೆ.

ಅದೊಂದು ಮಧ್ಯಾಹ್ನ. ಎಲ್ಲರೂ ಊಟ ಮಾಡಿ ಏನೋ ಮಾತುಕತೆಯಲ್ಲಿದ್ದರು. ಇದ್ದಕ್ಕಿದ್ದಂತೆ, ಮನೆಯವರು ಯಾರೋ “ಉಮ್ಮಾ… ದನಗಳೆಲ್ಲಾ ವಿಚಿತ್ರವಾಗಿ ವರ್ತಿಸುತ್ತಿವೆ, ಕಣ್ಣುಗುಡ್ಡೆ ಮೇಲಕ್ಕೆ ಹೋಗಿದೆ, ಬೇಗ ಬನ್ನಿ” ಎನ್ನುತ್ತಾ ಅಜ್ಜಿಯನ್ನು ಕರೆಯುತ್ತಾ ದಿಗಿಲಿಕ್ಕಿಸಿದ್ದರು. ಪರಿಸ್ಥಿತಿ ಕೈ ಮೀರಿದೆ ಎಂದು ಅರಿವಾದದ್ದು ಆಗಲೇ. ನಾವೆಲ್ಲರೂ ದನದ ಹಟ್ಟಿ ಇರುವ ಹಿತ್ತಿಲಿಗೆ ಓಡಿ ಬಂದೆವು. ಎಲ್ಲ ದನಗಳು ವಿಪರೀತ ಸುಸ್ತಾದಂತೆ ನರಳುತ್ತಿದೆ. ಕಣ್ಣುಗಳು ಮೇಲಕ್ಕೆ ಹೋಗಿದೆ. ಬಾಯಿ ತುಂಬಾ ನೊರೆ ಒಸರುತ್ತಿದೆ. ದುರಾದೃಷ್ಟಕ್ಕೆ ನಮ್ಮ ಮನೆಯಲ್ಲಿದ್ದ ದನ ಅಜ್ಜಿ ಮನೆಯಲ್ಲಿ ಪುಷ್ಟಿಯಾಗಲೆಂದು ನಾಲ್ಕುವಾರಕ್ಕೆ ನಾವು ಬಿಟ್ಟು ಕೊಟ್ಟಿದ್ದೆವು. ಆಗ ಅದು ತುಂಬು ಗರ್ಭಿಣಿ. ನೋಡ ನೋಡುತ್ತಿದ್ದಂತೆ ತಥಾಕಥಿತ ದನ ದೊಪ್ಪನೆ ನೆಲಕ್ಕೆ ಬಿತ್ತು. ನಾವು ದಿಙ್ಮೂಢರಾಗಿ ನೋಡುವುದಲ್ಲದೆ ಅನ್ಯ ದಾರಿಯಿರಲಿಲ್ಲ. ನೆಲಕ್ಕೆ ಬಿದ್ದ ದನ ಹೊರಳಾಡಲಾರಂಭಿಸಿತು. ಬಹುಶಃ ಗರ್ಭಪಾತವಾಗಿರಬೇಕು. ರಕ್ತದೋಕುಳಿಯಲ್ಲಿ ಮಿಂದೇಳುತ್ತಾ ಸುಮಾರು ಹೊತ್ತು ಕೊಸರಾಡುತ್ತಾ ತಣ್ಣಗಾಯಿತು. ಒಂದೊರ ಮೇಲೆ ಒಂದರಂತೆ ಎಲ್ಲಾ ದನಗಳು ಸರದಿ ಪ್ರಕಾರ ನೆಲಕ್ಕೊರಗತೊಡಗಿದವು. ಎಲ್ಲರ ಕಣ್ಣುಗಳು ಕೊಳವಾದವು.

ನಮ್ಮ ಪರಿಸರದಲ್ಲಿ ಅಣಬೆ ಸಿಕ್ಕರೆ ತಕ್ಷಣ ಉಮ್ಮನಿಗೊಂದು ಸ್ಯಾಂಪಲ್ ಕಳುಹಿಸಿ ಕೊಡುವುದಿದೆ. ಅವರು ಪರೀಕ್ಷಿಸಿ ವಿಷಯುಕ್ತವಲ್ಲವೆಂದು ಹೇಳಿದರೆ ಮತ್ತೆ ಸಾರು ಮಾಡುವುದು ರೂಢಿ. ಸಣ್ಣದರಲ್ಲೇ ಮರ ಗಿಡಗಳ ಬಗ್ಗೆ ಬಹಳಷ್ಟು ತಿಳಿದಿಕೊಂಡಿರುವುದಕ್ಕೆ ಉಮ್ಮನಿಗೆ ಈ ಎಲ್ಲಾ ವಿವರಗಳು ತಿಳಿದಿದೆ. ಹಾಗಂತ ಅವರಲ್ಲೇ ಕೇಳಿದರೆ “ಎಲ್ಲವೂ ಅಜ್ಜಿ ಹೇಳಿ ಕೊಟ್ಟ ವಿದ್ಯೆಗಳೆಂದು” ಮುಗ್ಧವಾಗಿ ನಗುತ್ತಾರೆ.

ಯಾರೊಬ್ಬರಿಗೂ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಸುಮ್ಮನೆ ಮೂಕ ಪ್ರೇಕ್ಷಕರಾಗಿ ಅವುಗಳ ಆರ್ತನಾದ ನೋಡುತ್ತಾ ನಿಂತೆವು. ಹತ್ತೇ ನಿಮಿಷದಲ್ಲಿ ದನದ ಹಟ್ಟಿ ತಣ್ಣಗಾಯಿತು. ನಮ್ಮ ಕಣ್ಣೆದುರಿಗೇ ಆರೇಳು ದನಗಳು ನಾಲಗೆ ಹೊರ ಹಾಕಿ ಪ್ರಾಣ ಬಿಟ್ಟವು. ಯಾರೊಬ್ಬರೂ ಆ ಅನಿರೀಕ್ಷಿತ ಹೊಡೆತದಿಂದ ಹೊರ ಬರಲಾಗಲಿಲ್ಲ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಹಿರಿಯರೊಬ್ಬರು, ಮೇವಿಗೆ ಹಾಕಿದ್ದ ಹುಲ್ಲಿನ ಕಂತೆ ನೋಡುತ್ತಾ “ಅಯ್ಯೋ, ಬಸರಿ ಮರದ ಸೊಪ್ಪನ್ನು ಕತ್ತಿಯಲ್ಲಿ ಕಡಿದು ಮೇವಿಗೆ ಹಾಕಿದ್ದಾ?” ಎಂದು ಬೇಸರಿಸಿದರು. ದನಗಳ ಸಾಮೂಹಿಕ ಮಾರಣ ಹೋಮ ನಮ್ಮೆಲ್ಲರನ್ನು ಕಂಗೆಡಿಸಿತ್ತು. ಮಾವ ಮತ್ತು ತೋಟದ ಐನಾತಿಗಳು ಸೇರಿ ದೊಡ್ಡ ಗುಂಡಿ ತೆಗೆದು ದನಗಳನ್ನು ಹೂತರು. ಅದು ಕಳೆದು ಸುಮಾರು ದಿನವಾದರೂ ಅವರು ಮಣ್ಣು ಮಾಡಿದ ಸ್ಥಳದಲ್ಲಿ ನಾವು ಹೋಗಿ ಬೇಸರಿಸುವುದು, ಒಮ್ಮೆಲೆ ಸತ್ತು ಹೋದ ದನಗಳು ಪ್ರತ್ಯಕ್ಷವಾದಂತನಿಸುವುದು ನಡೆಯುತ್ತಿತ್ತು.

ಬಸರಿ ಎಲೆಗಳು ಅವು ಪರಾವಲಂಬಿ ಸಸ್ಯಗಳು. ಇತರ ಮರಗಳ ಕಾಂಡದಲ್ಲಿ ಬೆಳೆಯುವ ಇವುಗಳು ಕೊನೆಗೊಮ್ಮೆ ಆ ಮರವನ್ನೇ ಬಲಿ ಪಡೆದುಕೊಳ್ಳುತ್ತವೆ. ವಿಶೇಷವೆಂದರೆ ಈ ಮರದಲ್ಲಿ ಹಲವಾರು ವಿಶೇಷ ಔಷಧೀಯ ಗುಣವಿದೆ. ಮಾತ್ರವಲ್ಲದೆ ಕಬ್ಬಿಣ ಸ್ಪರ್ಶವಾದಲ್ಲಿ ಅವುಗಳು ಮೇವಿನ ಪ್ರಾಣಿಗಳಿಗೆ ವಿಷವಾಗುವುದುಂಟು. ಅವು ಜೀವಕ್ಕೆ ಸಂಚಕಾರ. ಹೀಗಂತ ಹೇಳಿದ್ದು ಅದೇ ಹಿರಿಯ ವ್ಯಕ್ತಿ. ಕೆಲವೊಂದು ಸಸ್ಯಗಳೇ ಹಾಗೇ, ಮೇವಿನ ಪ್ರಾಣಿಗಳಿಗೆ ಅವಾಗಿಯೇ ತಿಂದರೆ ಯಾವುದೇ ಸಮಸ್ಯೆ ಇಲ್ಲ. ಅವುಗಳು ಕಬ್ಬಿಣ ಸ್ಪರ್ಶದಿಂದಾಗಿ ವಿಶೇಷವಾದ ರಸಾಯನಿಕ ಪ್ರಕ್ರಿಯೆ ಸಂಭವಿಸಿ ಅವುಗಳು ವಿಷವಾಗಿ ಪರಿಣಮಿಸುವುದುಂಟು.

ಕಳಿಲೆ ಕೂಡಾ ಇದೇ ಸ್ವಭಾವ ಹೊಂದಿರುವಂತದ್ದು. ಕಳಿಲೆಯೆಂದರೆ ಬಿದಿರಿನ ಮೊಳಕೆ, ಪದಾರ್ಥಕ್ಕೆ ಯೋಗ್ಯವಾಗದ ಕಳಿಲೆಯು ಕತ್ತಿಯಿಂದ ಕೊಚ್ಚಿ ಪಲ್ಯ ಮಾಡುವುದಿದೆ. ಆದರೆ ಹಾಗೆ ಮಾಡಿ ಉಳಿದ ಅವುಗಳ ಪಕಳೆಗಳನ್ನು ದನ ಕರುಗಳಿಗೆ ಹಾಕುವುದಿಲ್ಲ. ಅದಕ್ಕಿರುವ ಕಾರಣವೂ ಇಷ್ಟೇ, ಕಬ್ಬಿಣ ಸ್ಪರ್ಶಗೊಂಡ ಕಳಿಲೆಯು ನೀರಿನಿಂದ ತೊಳೆದು ಹೋಗದ ಹೊರತಾಗಿ ಪ್ರಾಣಿಗಳ ಮೇವಿಗೆ ಯೋಗ್ಯವಿಲ್ಲ. ಇಂತವೇ ಲಕ್ಷಣ ಹೊಂದಿದ ಹಲವಾರು ಗಿಡಗಳು ಎಷ್ಟೋ ಕಡೆ ಇರಬಹದು. ಅವುಗಳ ಬಗೆಗಿನ ಜ್ಞಾನದ ಕೊರತೆ, ಪರಿಸರದ ಮೇಲಿನ ನಿರ್ಲಕ್ಷ್ಯ ನಮ್ಮನ್ನು ಅಜ್ಞಾನಿಗಳನ್ನಾಗಿಸಿ ಬಿಡುತ್ತಿದೆಯಷ್ಟೇ.

ಮೂತ್ರದಲ್ಲಿ ಕಲ್ಲು, ಉರಿ ಮೂತ್ರವಿರುವವರು ಹಿಂಡಿ ಕುಡಿಯಬಹುದಾದ ಬಳ್ಳಿಯೊಂದಿದೆ. ಇವುಗಳು ದೇಹಕ್ಕೆ ತಂಪು. ಉಮ್ಮನ ಬಾಷೆಯಲ್ಲಿ “ಪಾಡಂತಾಳಿ” ಎಂಬ ಹೆಸರು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮುನ್ನಾ ದಿನ ಗೆಳೆಯನೊಬ್ಬ “ಈ ಎಲೆಯನ್ನು ಹಿಂಡಿ ತಲೆಗೆ ಹಾಕಿದರೆ ತಲೆ ತಂಪಾಗುತ್ತದೆ ಮತ್ತು ಓದುವುದಕ್ಕೂ ಖುಷಿ ಕೊಡುತ್ತದೆ” ಎಂಬ ಬಿಟ್ಟಿ ಸಲಹೆ ಕೊಟ್ಟಿದ್ದ. ಅದನ್ನೇ ನಂಬಿ ಹಾಸ್ಟೆಲ್ ನ ಕೈ ತೋಟದಲ್ಲಿ ಅರ್ಧಗಂಟೆಗೂ ಮೀರಿ ಹುಡುಕಿ ತಂದು ತಲೆಗೆ ಹಚ್ಚಿಕೊಂಡಿದ್ದೆ. ತಲೆಗೆ ತಂಪೇನೂ ಆಯಿತು, ಪರೀಕ್ಷೆ ಓದುವುದು ಬಿಟ್ಟು ಗಡದ್ದು ನಿದ್ದೆ ಮಾಡಿ ಅರ್ಧ ಓದಿನ ಸಮಯನ್ನೂ ಕಳೆದುಕೊಂಡು ಬಿಟ್ಟಿದ್ದೆ. ಮುಟ್ಟಿದರೆ ಮುನಿಯುವ ನಾಚಿಕೆ ಮುಳ್ಳು, ಸ್ಪರ್ಶಿಸಿದರೆ ತುರಿಕೆ ಉಂಟು ಮಾಡುವ ಸಸ್ಯ, ಕಿತ್ತರೆ ಹಾಲೂರುವ ಎಲೆಗಳು. ಎಷ್ಟೆಷ್ಟೋ ಕಣ್ಣ ಮುಂದಿದ್ದ ಸಸಿಗಳು ಈಗ ಹುಡುಕಿ ನಡೆದರೂ ಸಿಗದೆ ನೆನಪುಗಳೊಂದಿಗೆ ಅಂತರ್ಧಾನವಾಗಿರುವುದು ಮಾತ್ರ ಸ್ಪಷ್ಟ.

ಬಾಲ್ಯದಲ್ಲಿ ಚಾರೆ ಮರದಡಿಯಲ್ಲಿ ನಡೆಯಬಾರದೆಂಬ ಮೂಢನಂಬಿಕೆಯಿತ್ತು. ಅವುಗಳ ಹಣ್ಣುಗಳು ಮೈ ಮೇಲೆ ಬಿದ್ದರೆ ಚರ್ಮದಲ್ಲಿ ಬೊಕ್ಕೆಯೇಳುವ ಕಾರಣಕ್ಕಿರಬಹುದು. ಅವು ಭೂತದ ಮರವೆಂಬ ಹೆದರಿಕೆಯೂ ಬೇರೆ. ಸಾಲದಕ್ಕೆ ಅದರಲ್ಲಿ ಹಾವುಗಳು ವಾಸಿಸುತ್ತವೆಯೆಂದು ಹೆದರಿಸಿಬಿಟ್ಟಿದ್ದರು. ಒಮ್ಮೆ ಕಟ್ಟಿಗೆಗೆ ಹೋದಾಗ ಉಮ್ಮ ಅಲ್ಲೇ ಇದ್ದ ಎರಡು ದೊಡ್ಡ ಸೊಪ್ಪಿನ ಹೊರೆಯನ್ನು ಅಕ್ಕಂದಿರಿಗೆ ಹೊರಿಸಿದ್ದರು. ಅದೇನಾಯಿತೋ ಅವರು ಹೊತ್ತು ತಂದು ದನದ ದೊಡ್ಡಿಗೆ ಹಾಕಿ ಮನೆಗೆ ಬಂದರಷ್ಟೇ ಮೈ ಕೈಯೆಲ್ಲಾ ತುರಿಸಿಕೊಳ್ಳತೊಡಗಿದರು. ಯಾವುದೋ ಆಕಿರದ ಎಲೆಗಳು ಸ್ಪರ್ಶವಾಗಿರಬೇಕೆಂದು ಭಾವಿಸಿದರು. ಆದರೆ ಪರಿಸ್ಥಿತಿ ಕೈ ಮೀರಿತ್ತು. ಕಣ್ಣು ಮುಖ ಮೂತಿ ಎಲ್ಲಾ ಊದಿಕೊಳ್ಳತೊಡಗಿದವು.

ಆ ದಿನ ಉಮ್ಮ ಸೊಪ್ಪು ಕಡಿಯುವಾಗ “ಕಣಪಟೆ” ಎಂಬ ಹೆಸರಿನ ಹಾಲೂರುವ ಗಿಡದ ಸೊಪ್ಪು ಕಣ್ತಪ್ಪಿನಿಂದ ಕಡಿದಿದ್ದರು. ಹೊರೆಯಲ್ಲಿ ಅದೂ ಬಂದು ಸೇರಿದ್ದರಿಂದ ಅದರ ಪರಿಣಾಮವೆಂಬಂತೆ ಇಡೀ ಚರ್ಮ ಸುಟ್ಟು ಬರಲಾರಂಭಿಸಿದ್ದವು. ಕೊನೆಗೂ ತೆಂಗಿನ ಎಣ್ಣೆ, ನಾಟಿ ಮದ್ದು ಏನೇನೋ ಸವರಿ ಪರಿಸ್ಥಿತಿ ಹತೋಟಿಗೆ ಬಂತು. ಬೆಳಗಾಗುವುದರೊಳಗೆ ನೋವು, ತುರಿಕೆ, ಉರಿ ವಾಸಿಯಾಗಿತ್ತು. ಈಗ ಮತ್ತೆ ಅದೆಲ್ಲಾ ನೆನೆದು ಕಾಡಲ್ಲೆಲ್ಲಾ ಓಡಾಡುತ್ತೇನೆ. ಬೇಕು ಬೇಕೆಂದರೂ ಯಾವ ತುರಿಕೆ ಬರುವ ಎಲೆಯಾಗಲಿ, ಬಳ್ಳಿಯಾಗಲೀ ತಾಗುವುದೇ ಇಲ್ಲ. ನಾಲ್ಕಾರು ನುಸಿ ರಕ್ತ ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದು ಬಿಟ್ಟರೆ, ನನಗೆ ಅಂತಹ ಸಸ್ಯಗಳು ಸುಲಭದಲ್ಲಿ ಕಾಣಸಿಗುವುದೇ ಇಲ್ಲ.

ಮೊನ್ನೆ ಮೊನ್ನೆ ಹೀಗೆ ಹೊರಟವನಿಗೆ ಕಾಡ್ದಾರಿಯೇ ಕಾಣ ಸಿಗದೆ ಗಿಡಗಂಟಿಗಳು ತುಂಬಿ ಹೋಗಿ ಕಾಡು ಮತ್ತಷ್ಟು ಗಮ್ಯವಾದಂತೆ ಕಂಡಿತು. ಹತ್ತಿರದಲ್ಲೇ ಸಸಿಯೊಂದರಲ್ಲಿ ಹಕ್ಕಿಯ ಗೂಡೊಂದು ತಲೆ ಕೆಳಗಾಗಿ ಬಿದ್ದಿತ್ತು. ಮೊದಲಡಿಯ ಸಣ್ಣ ಜಲಪಾತಕ್ಕೆ ಹೋಗುವ ದಾರಿಯೂ ಮುಚ್ಚಿ ಹೋಗಿತ್ತು. ನಾಲ್ಕೈದು ಪಕ್ಷಿಗಳು ಅದರ ನೇರಕ್ಕೆ ಗಿರಕಿ ಹೊಡೆಯುವುದು ಕಾಣುತ್ತಿತ್ತು. ಹೋಗುವುದಕ್ಕೆ ಸಾಧ್ಯವೇ ಇಲ್ಲದಷ್ಟು ಗಿಡಗಳು ಒತ್ತೊತ್ತಾಗಿ ಬೆಳೆದಿದ್ದವು. ದೂರದ ಬೆಟ್ಟ ಹಸಿರು ಹೊದ್ದುಕೊಂಡು ಸುಂದರವಾಗಿ ಕಾಣುತ್ತಿತ್ತು. ಅಲ್ಲೇ ನಿಂತು ಮೊಬೈಲ್ ನಲ್ಲಿ ನಾಲ್ಕೈದು ಪಟ ಹೊಡೆದುಕೊಂಡು ಮನೆಯ ದಾರಿ ಹಿಡಿದೆ. ಅಲ್ಲಲ್ಲಿ ಗೀರಿದ ಗಾಯವೆಲ್ಲಾ ಸ್ನಾನದ ಮನೆಯಲ್ಲಿ ಉರಿಯೆಬ್ಬಿಸಿ ನೆನಪುಗಳನ್ನು ಹೊತ್ತು ತಂದವು.

About The Author

ಮುನವ್ವರ್, ಜೋಗಿಬೆಟ್ಟು

ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ