Advertisement
ಓಬೀರಾಯನ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು”

ಓಬೀರಾಯನ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು”

ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ. ನೀವಾದರೆ ಅಂಗಿ ಕೋಟು ತೊಟ್ಟು ಲಾಟು ಬೂಟು ಹೊಡೆಯುವವರಿಗೆ ನಿಮ್ಮ ಕೋಟಿನ ಒಳಗಡೆ ಇರುವ ಕೊಳೆ ಕಂಡೇ ಬರುವುದಿಲ್ಲ!”
ಡಾ.ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬೀರಾಯನಕಾಲದ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು” ನಿಮ್ಮ ಓದಿಗೆ

 

“ರಾಯರೇ ಈ ಜಾಗ ಮೆಟ್ಟಬೇಡಿರಿ. ಹತ್ತು ವರ್ಷಗಳ ಹಿಂದೆ ಇಲ್ಲೊಂದು ಹಾವು ತೀರಿಹೋಗಿದೆ. ಅದನ್ನಿಲ್ಲಿ ಸುಟ್ಟು ಅದರ ಗುರುತಿಗಾಗಿ ಇಲ್ಲಿ ಕಲ್ಲುರಾಶಿ ಹಾಕಿದ್ದೇವೆ. ಅಲ್ಲಿ ಕಾಲಿಡಬೇಡಿ. ಜಾಗ್ರತೆ! ಅದರ ನಂಜು ತಲೆಗೆ ಏರಿ ಹೋದೀತು!”

“ಅದೇನಪ್ಪ ಅಂತಹ ಭಾರೀ ಹಾವು?”

“ಹಾವೆಂದರೆ ಅದಕ್ಕೆ ಒಂದೇ ತಲೆ. ಎರಡೇ ಕಣ್ಣು. ಎರಡೆರಡೇ ಕೈಕಾಲು. ಎಂದರೆ ನೋಡಿ ಅದೊಂದು ಮನುಷ್ಯ ರೂಪದ ಹಾವು ಅಷ್ಟೆ!”

“ಅರೆ! ಬಹಳ ಸ್ವಾರಸ್ಯವಾಗಿದೆಯಲ್ಲ ಈ ಪ್ರಕರಣ.”

“ಅದರಲ್ಲಿ ಮತ್ತೂ ಸ್ವಾರಸ್ಯದ ಸಂಗತಿ ಏನೆಂದರೆ ಅದನ್ನು ಸುಟ್ಟಾಗ ಅದರ ಮೈಯೊಡೆದು ಹಾಲೇ ಹಾಲು ಹೊರಟು ಬಂದದೆ. ಅದರಲ್ಲಿ ಒಂದು ತೊಟ್ಟಾದರೂ ರಕ್ತ ಬೇಕೆ? ಅದು ಕಣ್ಣಿನಲ್ಲಿ ಕೂಡಾ ರಕ್ತವಿಲ್ಲದ ಪ್ರಾಣಿ!”

“ಏನಪ್ಪಾ! ಏನೋ ಒಂದು ದೊಡ್ಡ ಒಗಟು ಹೇಳಿದಂತಿದೆಯಲ್ಲ?” ಎಂದೆನು.

ಈಗ ಹಲವು ವರ್ಷಗಳಿಂದಲೂ ಹಳ್ಳಿಗರೊಡನೆ ಬಳಕೆಯನ್ನು ಇಟ್ಟುಕೊಂಡಿರುವ ನನಗೆ ಹಳ್ಳಿಯ ಕುರುಬನಾದರೂ ಒಂದು ಚೆಲೋ ಒಗಟನ್ನು ಸ್ವಾರಸ್ಯವಾಗಿ ಯಾರಿಗೂ ಸಂಶಯಬಾರದ ರೀತಿಯಲ್ಲಿ ಸಮರ್ಪಿಸಬಲ್ಲನೆಂಬುದು ಸುಸೂತ್ರವಾಗಿ ತಿಳಿದಿದೆ. ಇಂತಹ ಸಂಗತಿಗಳಲ್ಲಿ ಆತನು ಯಾವ ಪೇಟೆಯ ಪಟಾಕಿಯವನಿಗೂ ಹಿಂದೆ ಬೀಳಲಾರನೆಂಬುದು ತೀರಾ ಖಚಿತ. ಆದುದರಿಂದ ಅವರ ಸಂದರ್ಭವನ್ನು ವಿರಳವಾಗಿ ತಿಳಿಯಬೇಕೆಂಬ ಕುತೂಹಲದಿಂದ ಅಲ್ಲೇ ಕಿರುದಾರಿಯ ಪಕ್ಕದಲ್ಲಿ ಹುಲುಸಾಗಿ ಬೆಳೆದು ಬೇರುಬಿಟ್ಟಿದ್ದ ಆಲದ ಮರದಡಿ ಒಂದು ಶಿಲೆಯ ಮೇಲೆ ಕಾಲಿಟ್ಟು ಇರಲಿ, ಇಲ್ಲಿ ಕೊಂಚ ಕುಳಿತು ದಣಿವಾರಿಸಿಕೊಳ್ಳೋಣ. ನಮಗೆ ಪೇಟೆಯವರಿಗೆ ಇಂತಹ ಮಾರ್ಗಗಳಲ್ಲಿ ಕಾಲಿಡುವಾಗ ಊಧ್ರ್ವಶ್ವಾಸವೇ ಮೇಲೇಳುತ್ತದೆ. ಆದುದರಿಂದ ಆ ತನಕ ನಿನ್ನ ಒಗಟಿನ ಅರ್ಥವನ್ನು ತುಸು ಬಿಡಿಸಿಹೇಳು ನೋಡೋಣ ಎಂದೆನು.

ಅವನು ಮೊದಮೊದಲಿಗೆ ಸ್ವಲ್ಪ ಸಂಕೋಚದಿಂದ ಮತ್ತೆ ನನ್ನ ಒತ್ತಾಯದಿಂದ ಕೊನೆಗೆ ಆತ್ಮಸಂತೋಷದಿಂದ ತಲೆಗೆ ಸುತ್ತಿದ್ದ ರುಮಾಲೆಯನ್ನು ಅಂಗಿಗೆ ತುರುಕಿಕೊಂಡು ಕುಳಿತು ಕಿಸೆಯೊಳಗಣ ಚಂಚುವಿನಿಂದ ಎಲೆಯಡಿಕೆ ತೆಗೆದು ಪರಿಷ್ಕಾರವಾಗಿ ನೈಮಿಷಾರಣ್ಯದ ವೈಶಂಪಾಯರಂತೆ ಹೇಳತೊಡಗಿದನು. ಎಂದಮೇಲೆ ನಾನು ಕೂಡ ಒಂದು ಹೊಗೆಬತ್ತಿಯನ್ನು ಸೇದತೊಡಗಿ ಮಾಹರಿಯ ಶೌನಕರಾಯರಂತೆ ಕಾಲುನೀಡಿ ಸುಖಾಸೀನನಾಗಿ ಕೇಳತೊಡಗಿದೆನು.

“ರಾಯರೇ! ನೀವೀಗ ಹೋಗುವುದು ಗೋಪಾಲಕೃಷ್ಣಯ್ಯನವರಲ್ಲಿಗಲ್ಲವೆ?”

ನಾನು ಗಾಬರಿಯಿಂದ ಅವನನ್ನೇ ನೋಡುತ್ತ `ಏನೋ ಇದು? ಹುಚ್ಚಪ್ಪ! ಗೋಪಾಲಕೃಷ್ಣರಾಯರಲ್ಲಿಗೆ ಕರೆದುಕೊಂಡು ಹೋಗೆಂದು ಅಂದೇ ಹೇಳಿದ್ದೆ. ಈಗ ಮಧ್ಯೆ ಅರ್ಧದಾರಿಗೆ ಬಂದು ಹೋಗುವುದೆಲ್ಲಿಗೆ ಎಂದು ಕೇಳುತ್ತಾಯಿದ್ದಿ! ಹಾಗಾದರೆ ನಾವೀಗ ಯಾವ ಸುಡುಗಾಡಿಗೆ ಹೋಗುತ್ತಾಯಿದ್ದೇವೋ?’

“ಹಾಗಲ್ಲ ಸ್ವಾಮಿ. ನಾವಂತೂ ಈಗ ಹೋಗುವುದು ಅಲ್ಲಿಗೇನೇ. ಆದರೆ ನಾನು ಕೇಳಿದ ಸಂಗತಿ, ನೀವು ಅಲ್ಲಿಗೆ ಹೋಗುವುದಾದರೆ ನಿಮಗೆ ಅವರ ಪರಿಚಯ ತುಂಬಾಯಿರಬೇಕಲ್ಲ ಎಂತ ಅಭಿಪ್ರಾಯ ಅಷ್ಟೆ.”

“ಹೋ, ಹಾಗೋ! ಅವರ ಪರಿಚಯ ತುಂಬಾಯಿಲ್ಲ. ಆದರೆ ಅವರ ಮಗ ..”

“ಯಾರು? ವಕೀಲರೇ?”

“ಅಲ್ಲ. ಈಗ ಬೆಂಗಳೂರಲ್ಲಿ ಇದ್ದಾರಲ್ಲ.”

“ಹಾಂ. ಅವರ ಕಡೇ ಮಗ ಶೇಖರಯ್ಯ!”

“ಹೌದು. ನಾನೂ ಅವನೂ ಕ್ಲಾಸು ಮೇಟುಗಳು. ಆದುದರಿಂದ ಈ ರಾಜ್ಯಕ್ಕೆ ಬಂದಾಗ ಅವನನ್ನು ವಿಚಾರಿಸಿ ಹೋಗೋಣಾಂತ ಬಂದಿದ್ದೇನೆ.”

“ಹಾಗಾದರೆ ನಿಮಗೆ ರಾಯರ ಹಿರಿಯ ಮಗಳು ಅವರ ವಿಚಾರ ಗೊತ್ತಿರಬಹುದು.”

“ಇಲ್ಲ, ನಮಗೆ ಅವರ ಪೈಕಿ ಮತ್ತಾರ ವಿಚಾರವೂ ಗೊತ್ತಿಲ್ಲ.”

“ಸರಿ ಹಾಗಾದರೆ. ನಾನು ಈಗ ಹೇಳಲಿರುವುದು ಅವರ ಹಿರಿಯಮಗಳು ಚಂದ್ರಾವತಿಯಮ್ಮನ ವಿಷಯ. ಚಿಕ್ಕ ಕೂಸಾಗಿರುವಾಗ ನಾನೇ ಅವರನ್ನು ಹೆಗಲಮೇಲೆ ಕೂಡ್ರಿಸಿ ಸುತ್ತು ತೆಗೆಯುತಿದ್ದವ. ಪುತ್ತಳಿ ಬಂಗಾರದ ಗೊಂಬೆ ನೋಡಿ ಸ್ವಾಮಿ! ಆಹಾ – ಈಗಲೂ ಕಣ್ಣ ಮುಂದೆ ನೆನಪು ಬಂದಾಗ ಅಳು ಬರುತ್ತದೆ.”

ಮುದುಕ ಎರಡು ಹನಿ ಕಣ್ಣೀರು ಸುರಿಸಿ ತನ್ನ ಕಚ್ಚೆಯ ವಸ್ತ್ರದ ತುದಿಯಿಂದ ಒರೆಸಿಕೊಂಡು ಒಂದು ಕ್ಷಣದ ಮೇಲೆ ಮತ್ತೆ ಹೇಳತೊಡಗಿದನು.

“ನೋಡಿಕೊಳ್ಳಿ. ಓ ಅಲ್ಲಿ ಮಾವಿನ ತೋಪಿನ ಮಧ್ಯ ಮಾಡಿನ ತುದಿ ಕಾಣುತ್ತಿದೆಯಲ್ಲ. ಅದು ನಮ್ಮ ಊರಿನ ಶ್ಯಾನುಭಾಗರು ತಮ್ಮಣ್ಣಯ್ಯನವರ ಮನೆ. ನಿಜವಾಗಿಯಾದರೆ ಅದು ನಮ್ಮ ರಾಯರದೇ ಮನೆಜಾಗ. ಆದರೆ ಶ್ಯಾನುಭಾಗರು ಬದಲಿ ನೋಡಲಿಕ್ಕೆಂದು ಈ ಹಿಂದೆ ಬಂದಾಗ ಅವರ ವಾಸ್ತವ್ಯಕ್ಕಾಗಿ ಅದನ್ನು ಅವರಿಗೆ ಒಪ್ಪಿಸಿಬಿಟ್ಟಿದ್ದರು. ಆ ಮನೆಯಲ್ಲೇ ಒಂದು ಹಕ್ಕಿ ಮೊಟ್ಟೆಯಿಟ್ಟು ಒಂದು ಹಾವು ಹೊರಟುಬಂದದೆ!”

“ಹಾಂ! ಏನದು?”

“ಅದೇ ಹೇಳುತ್ತೇನೆ ಕೇಳಿ. ಈ ಶ್ಯಾನುಭಾಗರು ಇಲ್ಲಿಗೆ ಬಂದಾಗ ಅವರಿಗೆ ಯಾರೂ ದಾತಾರರಿರಲಿಲ್ಲ. ಮನೆಬಾಗಿಲು ಇರಲಿಲ್ಲ. ಕೈಯ್ಯಲ್ಲಿ ಕಾಸೂ ಇರಲಿಲ್ಲ. ಅವರು ಅವರ ಹೆಂಡತಿ – ಮತ್ತೊಂದು ವಿಧವೆ ತಂಗಿ ಈ ಮೂವರು ತಮ್ಮತಮ್ಮ ಮೈಕೈ ಮಾತ್ರ ಹಿಡಿದುಕೊಂಡು ಇಲ್ಲಿಗೆ ಬಂದವರು. ಇವರಿಗೆಲ್ಲಾ ನಮ್ಮ ಗೋಪಾಲಯ್ಯನವರೇ ಆಶ್ರಯಕೊಟ್ಟು ಉದ್ಧಾರ ಮಾಡಿದರು.”

“ಎಲ್ಲಿಯಾದರೂ ಶ್ಯಾನುಭಾಗರ ಬಗೆಯವರಿಗೆ ಬೇರುಬಿಡಲು ಕಷ್ಟವಿದೆಯೆ?”

“ಹಾಂ. ಇದು ಇನ್ನೂ ಸಾವಿರ ಸಾರಿ ಹೇಳಿರಿ. ಇಲ್ಲಿಗೆ ಮೊದಲು ಬಂದಾಗ ಶ್ಯಾನುಭಾಗರ ಹೆಂಡತಿ ಬಸುರಿ. ನಂತರ ಒಂದು ಗಂಡು ಕೂಸು ಇಲ್ಲೇ ಹುಟ್ಟಿತು. ಅದೇ ಸಮಯಕ್ಕೆ ನಮ್ಮೀ ರಾಯರಲ್ಲಿ ಹೆರುಗೆಯಾಗಿ ಮೊದಲಿನ ಮಗ ಈಗಿನ ವಕೀಲರು ಅವತಾರಮಾಡಿದರು.

ಮಕ್ಕಳಿಬ್ಬರೂ ಒಟ್ಟೊಟ್ಟಿಗೆ ಬೆಳೆಯತೊಡಗಿದರು. ಶ್ಯಾನುಭಾಗರ ಮಗ ಹುಟ್ಟಿದ್ದೇನೋ ಅವರಲ್ಲಿ ಯಾದರೂ ಅವರ ಆರೈಕೆ ಎಲ್ಲಾ ಇಲ್ಲೇ ನಡೆಯುತ್ತಿತ್ತು. ಬೆಳಿಗ್ಗಿನ ಹಾಲು ಕುಡಿಯಲಿಕ್ಕೆ ಮಗು ಸೀದಾ ಇವರಲ್ಲಿಗೇ ಓಡಿಬರುತಿತ್ತು. ಅದು ತನ್ನ ಮನೆಯಲ್ಲಿ ಕುಡಿದ ನೀರಿಗಿಂತ ಹೆಚ್ಚು ಹಾಲನ್ನು ಇವರಲ್ಲಿ ಕುಡಿದಿದೆ. ನಮ್ಮ ರಾಯರೆಂದರೆ ಧರ್ಮರಾಯ! ಅವರ ಹೆಂಡತಿ ಅನ್ನಪೂರ್ಣಾದೇವಿ!

ಈ ಎರಡು ಮಕ್ಕಳನ್ನೂ ಇಲ್ಲೆ ಒಂದು ಸಣ್ಣ ಶಾಲೆಯಲ್ಲಿ ಹಾಕುವವೇಳೆ ರಾಯರಿಗೆ ಮತ್ತೊಂದು ಹೆಣ್ಣು ಮಗು ಹುಟ್ಟಿತು. ಹೀಗೆ ಸಂಸಾರ ಸಾಗುತ್ತಿರುವಾಗ ಹಿರಿಮಕ್ಕಳು ಇಲ್ಲಿಯ ಶಾಲೆಯ ಪಾಠ ಮುಗಿದು ಪೇಟೆಗೆ ಹೋಗಬೇಕಾಯಿತು. ಆಗ ಪೇಟೆಯಲ್ಲಿ ಬಿಡಾರ ಇಟ್ಟಿದ್ದ ರಾಯರ ಭಾವನ ಮನೆಯಲ್ಲಿ ಈ ಇಬ್ಬರು ಹಾಡುಗರೂ ಬಿಡಾರ ಇಟ್ಟು ಕಲಿಯತೊಡಗಿದರು.

ಶ್ಯಾನುಭಾಗರ ಮಗನ ಅಭ್ಯಾಸದ ಖರ್ಚು ರಾಯರ ಕಿಸೆಯಿಂದಲೇ ಹೋಗುತಿತ್ತೆಂದು ಬೇರೆ ಹೇಳಬೇಕಾಗಿಲ್ಲ ತಾನೆ! ರಾಯರು ಅಂತಹ ಸಣ್ಣ ವಿಚಾರಗಳನ್ನೆಲ್ಲಾ ಲೆಕ್ಕಹಾಕಿ ಕೆಲಸಮಾಡುವವರಲ್ಲ. ಈ ಶ್ಯಾನುಭಾಗರು ಅವರ ಸಂಸಾರ ಬಂದಣಿಕೆಯಂತೆ ರಾಯರ ಮನೆಯನ್ನೇ ಹೊಂದಿ ಬೆಳೆಯುತ್ತಿದ್ದುದರಿಂದ ಅವುಗಳ ವಿಷಯ ಚರ್ಚೆಯೇ ಬರಲಿಲ್ಲ.

ಆಗ ರಾಯರ ಮಗಳು ಚಂದ್ರಾವತಿಯಮ್ಮನಿಗೂ ಹುಡುಗಾಟಿಕೆ ಕಳೆದು ಪೇಟೆಯಲ್ಲಿ ಓದಿಸಬೇಕಾಯಿತು. ಈ ಎಲ್ಲಾ ಜನರನ್ನು ತನ್ನ ಭಾವನ ಮನೆಯಲ್ಲಿ ಕೂಡಹಾಕುವುದು ಸರಿಯಲ್ಲವೆಂದು ಗೋಪಾಲಯ್ಯನವರು ತಾನೇ ಪೇಟೆಗೆ ಬಿಡಾರಸಾಗಿರುವ ಯೋಚನೆ ಮಾಡಿದರು.

ಅದೇ ನಮ್ಮ ಶ್ಯಾನುಭಾಗರ ಪ್ರಸನ್ನಕಾಲ! ಈ ಮನೆಗೆ ಬಿಡಾರ ಇಟ್ಟು ರಾಯರು ಪೇಟೆಗೆ ಹೋದಮೇಲೆ ಆಗಾಗ ಮಾತ್ರ ಇಲ್ಲಿಗೆ ಬಂದು ಹೋಗುತ್ತಿದ್ದರು. ಮತ್ತೆ ಅವರ ವಹಿವಾಟಿನ ಸುಧಾರಣೆಯ ಭಾರವೆಲ್ಲ ಶ್ಯಾನುಭಾಗರ ಹೆಗಲಮೇಲೆಯೇ ಬಂದಿತು. ಅದರಿಂದಾಗಿ ಶ್ಯಾನುಭಾಗರಿಗೇನೂ ನಷ್ಟ ಬರಲಿಲ್ಲ. ಅವರ ಕಿಸೆ ಚೆನ್ನಾಗಿ ತುಂಬಿತಿದ್ದಿತು. ಅಂದಿಗೂ ಮಗನ ವಿದ್ಯೆಯ ಖರ್ಚನ್ನು ರಾಯರೇ ಹೊತ್ತು ಇವರೊಡನೆ ಕೇಳದಿದ್ದುದರಿಂದ ಅವರ ಹಣವೆಲ್ಲಾ ಬಡ್ಡಿಯ ಮೇಲೆ ಊರಕಡೆ ತಿರುಗುತಿದ್ದಿತೇ ಹೊರತು ಅನ್ಯಥಾ ಆಗಲಿಲ್ಲ.

ಸ್ವಾಮಿ, ಪೇಟೆಯ ವಿಚಾರವೆಂದರೆ ಅದೇನು ಸಣ್ಣ ತಾಪತ್ರಯವೆ? ಕೂತದ್ದಕ್ಕೆ ಎದ್ದದ್ದಕ್ಕೆ ತಿರುಗಿದ್ದಕ್ಕೆ ಎಲ್ಲಾ ದುಡ್ಡು ಕೊಟ್ಟು ಹೆಜ್ಜೆ ಹೆಜ್ಜೆಗೂ ದುಡ್ಡು ಸುರಿಯಬೇಕು ತಾನೆ? ಅದರಲ್ಲೂ ಈಗಿನ ಹುಡುಗರೊ. ಮೇಲಾಗಿ ಏನೋ ಕೆಳಗಿನ ವಿದ್ಯೆ ಮುಗಿದು ಮುಂದೆ ಏನು ಕಲಿಯಬೇಕೂಂತ ಬಹಳ ಚರ್ಚೆ ಬಂದಿತಂತೆ. ನಂತರ ಎರಡು ಗಂಡುಗಳು ವಕಾಲತ್ತು ಪಾಸು ಮಾಡುವುದಂತ ನಿರ್ಣಯಿಸಿ ಹಾಗೆಯೇ ಮುಂದುವರಿಯುತ್ತಾ ಹೋಯಿತು.

ಆಗಲಾಗ ರಾಯರ ಮಗಳು ಚಂದ್ರಮ್ಮನವರೇನು ಚಿಕ್ಕವರೆ? ಅದೂ ಪೇಟೆ ಸೇರಿದ ಮೇಲೆ ಹೇಗೆ ಕಡಿಮೆಯಾದೀತು? ಈ ಮೂವರು ಸಿನೇಮಾ ನಾಟಕ ಹೊಟೇಲುಗಳೆಂತ ಯಾವುದನ್ನೂ ಬಿಡದಿರುವಾಗ ಪ್ರಾಯಕ್ಕೆ ಬರುತ್ತಿದ್ದ ಹುಡುಗಿ; ಅದರ ವಿಚಾರ ಮನೆಯವರಿಗೆ ಏನೂ ಗೋಚರವಿರದಿದ್ದರೂ ಊರವರ ಕಣ್ಣು ಅವರ ಮೇಲೇಯಿರುತ್ತದೆ ನೋಡಿ! ಊರವರಿಗೆ ಕಣ್ಣು ಇರುವುದು ಅವರವರ ಹಿಂದೆ ನೋಡಿಕೊಳ್ಳಲಿಕ್ಕಲ್ಲ. ಹಿಂದೆ ನೋಡಿಕೊಳ್ಳಲು ಸಾಧ್ಯವೇ ಇಲ್ಲ. ದೇವರೇ ಹಾಗೆ ಮಾಡಿದ್ದಾನೆ. ಆದರೆ ತನ್ನ ಮುಂದೆ ಹೋಗುವವರ ವಿಷಯ ಬೇಕಾದ ಹಾಗೆ ತಿಳಿದುಕೊಂಡು ಹಿಂದಿನಿಂದ ನಾಲಗೆ ಉದ್ದ ಬಿಡಲು ನಮಗೆಲ್ಲಾ ಕಣ್ಣು ಇರುವುದು. ಅದರ ಉಪಯೋಗವನ್ನು ಯಥೇಷ್ಟ ಮಾಡಿಕೊಳ್ಳುವುದರಲ್ಲಿ ಯಾರದ್ದೂ ಅಡ್ಡಿಯಿಲ್ಲ. ಹಾಗೇನೇ ಆ ಶ್ಯಾನುಭಾಗರ ಮಗ – ಆ ಸುಟ್ಟವನ ಹೆಸರು ಸಹ ಈಗ ನನಗೆ ಮರೆತುಹೋಗಿದೆ. ಅವನೊಡನೆ ಬೆಳೆದ ಹೆಣ್ಣು ಮಗಳು ಅಡ್ಡಾಡುವುದು ಸಿನೇಮಾ ಗಿನೇಮಾ ನೋಡುವುದು ಇದಕ್ಕೆಲ್ಲಾ ಏನು ಅರ್ಥ ಕಟ್ಟಬಹುದು. ತೊಂದರೆಯಿಲ್ಲ. ಇನ್ನು ಕೆಲವರು ಅದಕ್ಕಾಗಿಯೇ ರಾಯರು ಆ ಹುಡುಗನನ್ನು ಸಾಕಿ ಬೆಳೆಸಿದ್ದಾರೆ. ಹೇಗೂ ಆ ಹೆಣ್ಣು ಆ ಹುಡುಗನಿಗೇನೇ ಗಂಟು – ಎಂತ ನಾಲಗೆ ಬೀಸುತಿದ್ದರು. ನಾಯಿ ಬಾಲ ಬೀಸಿದ ಹಾಗೆ!

ಮೊದಮೊದಲಿಗೆ ರಾಯರು ಅವರ ಹೆಂಡತಿ ಸಹ ಇದರ ವಿಚಾರ ಹೆಚ್ಚು ಗಮನಕೊಡಲಿಲ್ಲ. ನಂತರ ಹಾಗೋ ಹೀಗೋ ಸಂದರ್ಭ ಬಂದಾಗ ಆ ಹುಡುಗ ಹುಡುಗಿ ತಾವೇ ತಾವೇ ಅಡ್ಡಾಡುತ್ತಾ ಗುಣುಗುಟ್ಟುತ್ತಿರುವಾಗ – “ಅದರಲ್ಲೇನೀಗ? ಎಲ್ಲಾ ದೇವರ ಇಷ್ಟದಂತೆ ನಡೆಯುತ್ತದೆ. ಹುಡುಗನಲ್ಲಿ ಏನೂ ಕೊರತೆಯಿಲ್ಲ. ಎಂದ ಮೇಲೆ ಆದರೂ ಆಗಬಹುದಲ್ಲಾ” ಎಂದುಕೊಂಡು ಸುಮ್ಮನಿರುತ್ತಿದ್ದರು. ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ. ನೀವಾದರೆ ಅಂಗಿ ಕೋಟು ತೊಟ್ಟು ಲಾಟು ಬೂಟು ಹೊಡೆಯುವವರಿಗೆ ನಿಮ್ಮ ಕೋಟಿನ ಒಳಗಡೆ ಇರುವ ಕೊಳೆ ಕಂಡೇ ಬರುವುದಿಲ್ಲ!”

ಆ ಹಳ್ಳಿಗನ ವೇದಾಂತಕ್ಕೆ ನಾನು ಬೆಚ್ಚುಬೆರಗಾದೆ. ಆದುದರಿಂದ ತುಸು ದೀರ್ಘವಾಗಿ ವಿಚಾರ ಮಾಡುತ್ತ ಮತ್ತೊಂದು ಸಿಗರೇಟು ಹೊತ್ತಿಸಿದೆನು.

“ಸರಿ, ಈ ಪ್ರಕರಣ ಎಷ್ಟು ಬೆಳೆಯಿತೆಂದರೆ ಮೈಬೆಳೆದ ಹುಡುಗಿ ಇದ್ದ ಮನೆಗೆ ಯಾರೂ ಹುಡುಗಿ ಕೇಳಲು ಸಂಭಾವಿತರು ಬರಲೇಯಿಲ್ಲ. ಅದು ಹೇಗೂ ನಿಶ್ಚಯವಾದ ಸಂಬಂಧ ಎಂದುಕೊಳ್ಳುತ್ತ ಅವರವರು ಆ ಕಡೆಯೇ ಸರಿದುಹೋಗುತಿದ್ದರು. ಅದನ್ನಾರು ಅಲ್ಲಗಳೆದವರಿಲ್ಲ. ನಮ್ಮ ಈ ಶ್ಯಾನುಭಾಗರಂತೂ ಅದನ್ನೆ ಹೌದೆಂದು ಸಾರುತ್ತ ತಮ್ಮ ಕಿಸೆಯನ್ನು ಚೆನ್ನಾಗಿ ತುಂಬಿಸಿಕೊಳ್ಳುತಿದ್ದರು. ಇದರಿಂದಾಗಿ ನೀವೇನೂ ನಮ್ಮ ಚಂದ್ರಮ್ಮ ಅಷ್ಟು ದಿಂಡೆ ಎಂತ ಭಾವಿಸಬಾರದು. ಅದು ಅಷ್ಟು ನಾಜೂಕಾದ ಹೆಣ್ಣು. ಯಾರಾದರೂ ಒಮ್ಮೆ ಅದನ್ನು ಕಂಡರೆ ಅದರ ಕಾಲ ಬುಡದಲ್ಲೆ ಕುಳಿತುಕೊಳ್ಳಬೇಕು. ಆದರೆ ದಿನ ನಿತ್ಯ ನೋಡುವ ಹುಡುಗನ ಕಡೆ ಪ್ರಾಯದ ಕಣ್ಣು ವಾಲುವುದು ಎಷ್ಟೆಂದರೂ ಸಹಜವೇ!

ಹೀಗಿರುವಾಗ ಆ ಎರಡು ಹುಡುಗರ ವಕೀಲಿ ಪರೀಕ್ಷೆ ಸಮ ಸಮವಾಗಿಯೇ ಮುಗಿಯಿತು. ಇಬ್ಬರೂ ಪಾಸುಮಾಡಿದರು. ಆಮೇಲೆ? ಇನ್ನಾದರೆ ನಮ್ಮ ಹುಡುಗಿಯ ಮದುವೆಯ ಪ್ರಸ್ತಾಪ ಮಾಡಬಹುದೆಂದು ರಾಯರು ಹೆಂಡತಿಯೊಡನೆ ಸೂಚಿಸಿದರು. ಅಂತೆಯೇ ಒಂದು ದಿನ ಶ್ಯಾನುಭಾಗರು ಬಂದಾಗ ಅದರ ಸೂಚನೆ ಬಂದಿತು. ಆದರೆ ಶ್ಯಾನುಭಾಗರ ಜಾತಿಗೂ ಗುಳ್ಳೆನರಿಗೂ ಏನೋ ಸಂಬಂದವಿದೆಯಂತೆ. ಆದುದರಿಂದ ಅವರು ಸಂದರ್ಭದ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ –“ ಈಗ ಸ್ವಲ್ಪ ಸಮಯ ಹೋಗಲಿ. ನಮ್ಮ ಹುಡುಗ ಒಂದು ಸ್ವಂತ ಆಫೀಸುಮಾಡಿ ನಾಲ್ಕು ಕೈಕೋಟು ಸಿಕ್ಕಿಸಿಕೊಂಡು ಕೋರ್ಟಿಗೆ ಹೋಗಿ ನಾಲ್ಕು ಕಾಸು ಹೊಡೆಯುವಷ್ಟು ತರಬೇತಾಗಲಿ. ಅಲ್ಲವಾದರೆ ಎಷ್ಟು ದಿನ ನಿಮ್ಮ ಉದಾರತೆಗೆ ನಾವು ಉಪದ್ರಕೊಡುವುದು?” ಎಂದರು.

ಬಹಳ ಚೊಕ್ಕವಾದ ಚೆಲೋ ಮಾತು! ಯಾರಾದರೂ ಸೈ ಎಂತಲೇ ತಲೆದೂಗಬೇಕು. ಆದುದರಿಂದ ರಾಯರ ಮನೆಯಲ್ಲಿ ಪರಮಾನ್ನ ತಿಂದು ಹೊಕ್ಕಿ ಹೊರಡುವುದಕ್ಕೆ ಶ್ಯಾನುಭಾಗರಿಗೇನೂ ತೊಂದರೆ ಬರಲಿಲ್ಲ.

ಹೊಸ ವಕೀಲರಿಬ್ಬರೂ ರಾಯರ ಮನೆ ವಾರ್ತೆಯ ಹೆಸರುವಾಸಿಯಾದ ಹಳೆ ವಕೀಲರಲ್ಲಿ ತರಬೇತು ಹೊಂದಬೇಕೆಂದು ಮೊದಲು ನಿರ್ಣಯವಾಯಿತು. ಅಂತೆಯೇ ಒಂದು ಅಥವಾ ಎರಡು ತಿಂಗಳು ಹೋಯಿತೋ ಇಲ್ಲವೊ ಒಂದು ದಿನ ಶ್ಯಾನುಭಾಗರು ಬೆಳಿಗ್ಗೆ ಉದಯವಾಗಿ `ನೋಡಿ ರಾಯರೆ! ನಮ್ಮ ಹುಡುಗನಿಗೆ ಸಿವಿಲ್ ಏನೂ ತಲೆಗೆ ಹತ್ತುವುದಿಲ್ಲವಂತೆ. ಆದುದರಿಂದ ಕ್ರಿಮಿನಲ್ಲಿನಲ್ಲೇ ಸ್ವಲ್ಪ ಮುಂದರಿಸೋಣ ಎಂತ ಹೇಳುತ್ತಾನೆ. ಆದುದರಿಂದ ನಮ್ಮ ಕ್ರಿಮಿನಲ್ ಲಾಯರು ಲಕ್ಷ್ಮಣ ರಾಯರಲ್ಲಿ ಸ್ವಲ್ಪಹೋಗಿ ಬರುತ್ತಾಯಿರಲೋ ಎಂತ ನಿಮ್ಮ ಕೂಡೆ ಕೇಳಲಿಕ್ಕೆ ಹೇಳಿದ್ದಾನೆ’.

ಈಗ ಹಲವು ವರ್ಷಗಳಿಂದಲೂ ಹಳ್ಳಿಗರೊಡನೆ ಬಳಕೆಯನ್ನು ಇಟ್ಟುಕೊಂಡಿರುವ ನನಗೆ ಹಳ್ಳಿಯ ಕುರುಬನಾದರೂ ಒಂದು ಚೆಲೋ ಒಗಟನ್ನು ಸ್ವಾರಸ್ಯವಾಗಿ ಯಾರಿಗೂ ಸಂಶಯಬಾರದ ರೀತಿಯಲ್ಲಿ ಸಮರ್ಪಿಸಬಲ್ಲನೆಂಬುದು ಸುಸೂತ್ರವಾಗಿ ತಿಳಿದಿದೆ. ಇಂತಹ ಸಂಗತಿಗಳಲ್ಲಿ ಆತನು ಯಾವ ಪೇಟೆಯ ಪಟಾಕಿಯವನಿಗೂ ಹಿಂದೆ ಬೀಳಲಾರನೆಂಬುದು ತೀರಾ ಖಚಿತ.

`ಏಕೆ? ಅವನಿಗೇ ಕೇಳಬಹುದಿತ್ತಲ್ಲ? ಅದಕ್ಕೇನಡ್ಡಿ. ಸಿವಿಲ್ ಆದರೇನು ಕ್ರಿಮಿನಲ್ ಆದರೇನು?’ ಎಂದರು ನಮ್ಮ ಬೋಳೆ ಸ್ವಭಾವದ ಧರ್ಮರಾಯರು.

`ನಮ್ಮ ಹುಡುಗನಿಗೆ ನಿಮ್ಮ ಎದುರು ನಿಂತು ಮುಖ ನೋಡುವುದೆಂದರೆ ಅಷ್ಟು ಭೀತಿ ನೋಡಿ! ಆದುದರಿಂದ ನಾನೇ ಬಂದೆ’ ಎಂದರು ವಿನಯವಾಗಿ ಶ್ಯಾನುಭಾಗರು.

ಈ ನಯದ ಪರಿಣಾಮವಾಗಿ ಶ್ಯಾನುಭಾಗರ ಮಗ ಲಕ್ಷ್ಮಣ ರಾಯರಲ್ಲಿಗೆ ಕಾಲಿಟ್ಟನು. ಇವರಲ್ಲಿಗೆ ಕೆಲವೊಮ್ಮೆ ಬಂದು ಹೋಗುವುದೂ ನಿಂತುಬಿಡುತಿದ್ದಿತು. ಕೆಲವು ರಾತ್ರಿಗಳನ್ನು ಆ ವಕೀಲರಲ್ಲೇ ಕಳೆಯುತ್ತಿದ್ದನು. ಹೀಗಿರುವಲ್ಲಿ ಒಂದು ದಿನ ರಾತ್ರಿ ರಾಯರ ಮಗ ತಂದೆಯೊಡನೆ ಕೇಳಿದರು – `ಪಪ್ಪಾ! ನಮ್ಮ ಕ್ರಿಮಿನಲ್ ವಕೀಲರೇನು ಇತ್ತೀಚೆಗೆ ಬರುವುದು ಬಹಳ ಕಡಿಮೆ?’

`ಅದು ನಿನಗೇ ಗೊತ್ತು ಮಗ! ನಿನ್ನ ದೋಸ್ತಿಯಲ್ಲವೆ?’

“ದೋಸ್ತಿ ಹೇಗೂ ಬೇಕಾದಂತೆ ತಿರುಗಬಹುದು. ಆದರೆ ಇವತ್ತು ಸಂಜೆ ಅವನನ್ನು ಲಕ್ಷ್ಮಣರಾಯರ ದೊಡ್ಡ ಮಗಳೊಡನೆ ಸಿನೇಮಾಕ್ಕೆ ಹೋಗುವುದನ್ನು ಕಂಡೆ…”

ರಾಯರು ದಿಗಿಲುಬಿದ್ದು ತನ್ನ ಹೆಂಡತಿಯ ಮುಖನೋಡಿದರು. ಆ ಪುಣ್ಯ ತಾಯಿ ಮನೆಯ ಮುಂದುಗಡೆಯ ಗೋಪಾಲಕೃಷ್ಣನ ಪಟದ ಕಡೆ ನೋಡಿ ದೇವರೇ ಗತಿ! – ಎಂದರು.

ಆದರೆ ಈ ಕಲಿಯುಗದಲ್ಲಿ ದೇವರು ಸಹ ಸತ್ಯಸಂಧರ ಕೈಬಿಡುತ್ತಾನೆ! ಶ್ಯಾನುಭಾಗರ ಮಗ ರಾಯರಲ್ಲಿಗೆ ಕಾಲಿಟ್ಟು ಬರುತ್ತಿರಲಿಲ್ಲ. ಊರವರ ಮಾತು ಹಲವು ಹನ್ನೆರಡಾಗಿ ಹಬ್ಬಿತು. ಅದರ ಹೊಗೆಯಲ್ಲಿ ಪಾಪ! ಆ ಹೆಣ್ಣುಮಗಳು ಕಣ್ಣುಬಿಟ್ಟು ಬೀದಿಗಿಳಿಯದಂತಾಯಿತು!

ಮೂರು ತಿಂಗಳ ನಂತರ ಒಂದು ರಾತ್ರಿ ಚಂದ್ರಮ್ಮ, ಆ ಮುದ್ದು ಚಂದ್ರಾವತಿಯಮ್ಮ, ಮಧ್ಯರಾತ್ರಿ ಕುಳಿತು ಕಿಟಿಕಿಟಿ ನಗುವುದರಲ್ಲಿ ಅಟ್ಟವೇ ಹಾರಿಹೋದಂತಾಯಿತು. ಅವಳ ಬಲಗೈಯಲ್ಲಿ ಎರಡು ತುಂಡು ಕಾಗದವಿತ್ತು. ಅದೇ ರಾಯರು ಹರಿದು ಬಿಸುಟ ಶ್ಯಾನುಭಾಗರ ಮಗನ ಮದುವೆಯ ಕಾಗದ!

‘ಅಯ್ಯೋ ಪಾಪ!’ ಎಂದು ಆ ಮುದುಕನು ಬಹಳಹೊತ್ತು ಮೌನವಾಗಿ ಕುಳಿತು ಕಣ್ಣೀರು ಸುರಿಸತೊಡಗಿದನು. ನಾನು ಸುಮ್ಮನಿದ್ದು ಕೊನೆಗೆ –
“ಮುಗಿಯಿತೇ?” ಎಂದೆನು.

“ಮುಗಿಯುವುದೇ? ಹೇಗೆ ಮುಗಿಯಬೇಕು? ಹಾಲುಕೊಟ್ಟ ಪಾತ್ರದಲ್ಲಿ ಹೇತ ಆ ದುರ್ಬುದ್ಧಿ” ಆ ಹಳಬನ ಕಣ್ಣು ಕೆಂಡದಂತೆ ಕಾದು ಕೆಂಪೇರಿದ್ದಿತು. ಅದುದರಿಂದ ತಡವರಿಸುತ್ತ “ರಾಯರೆ! ಕ್ಷಮಿಸಬೇಕು. ನಾವು ಹಳ್ಳಿಯವರು, ಈ ಪೇಟೆಯವರ ರೀತಿನೀತಿ ನಮಗೆ ತಿಳಿಯದು. ನಮ್ಮ ಮಾತು ಬಹಳ ಒರಟು. ಆದರೆ ನ್ಯಾಯಕ್ಕೆ ನಮ್ಮ ಎದೆ ಹಾಸುಕಲ್ಲಿನಂತೆ ಯಾವಾಗಲೂ ತೆರೆದಿದೆ! ಯಾರು ಏನು ಮಾಡಿದರೂ ನೋಡುವ ದೈವ ಉಂಟು. ಆ ಹೆಣ್ಣುಮಗಳ ಗೋಳಿನ ಶಾಪ ಆ ಪ್ರಾಣಿಗೆ ತಟ್ಟದಿರಲಿಲ್ಲ. ಹೇಳುತ್ತೇನೆ ಕೇಳಿ.

ಗೋಪಾಲಯ್ಯನವರು ಆರು ತಿಂಗಳು ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಹೋದರು. ಆದರೆ ಆ ಅಮ್ಮಣ್ಣಿ ತಲೆಗೆಟ್ಟಿದ್ದು ಸರಿಯಾಗಲಿಲ್ಲ. ಯಾವಾಗಲೂ ಮಂಕು ಕವಿದಂತಿತ್ತು. ಮತ್ತೆ ಬೇರೆ ಮದುವೆ ಮಾಡಿದರೆ ಸರಿಯಾದೀತೆಂದು ಭಾವಿಸಿ ಗಂಡು ಹುಡುಕಾಡತೊಡಗಿದರು. ಆದರೆ ಯಾರು ಬರಬೇಕು ಸ್ವಾಮಿ! ಆ ಹುಡುಗಿಯ ಗುಣ ಅವರಿಗೆ ಗೊತ್ತು – ನಮ್ಮೆಲ್ಲರಿಗೆ ಗೊತ್ತು. ದೇವರಾಣೆ! ಅದೇನೂ ಒಂದಿಷ್ಟೂ ಮಾನ ಮೀರಿ ಕೆಟ್ಟರಲಿಕ್ಕಿಲ್ಲ. ಆದರೆ ಈ ಮಾತನ್ನು ನಂಬುವವರಾರು? ಕಟ್ಟಕಡೆಗೆ ಪೇಟೆಯ ಮನೆಯಲ್ಲಿ ಮಗನನ್ನು ಇಟ್ಟು ಈ ಹಳ್ಳಿಯ ಮನೆಗೇ ಹೆಂಡತಿ ಮಗಳೊಂದಿಗೆ ಹೊರಟುಬಂದರು.

ಮೂರು ತಿಂಗಳ ಮೇಲೆ ದೊಡ್ಡ ಗಂಡಾಂತರ ಬಂದುಹೋಯಿತು. ರಾಯರ ಮಗಳು ಮಧ್ಯರಾತ್ರಿ ಎದ್ದು ಬಾವಿಗೆ ಹಾರಿ ತೀರಿಹೋದಳು. ಆ ರಾತ್ರಿ ನಾವೆಲ್ಲಾ ಆ ಕಡೆ ಓಡಿದ್ದೆವು. ಆದರೆ ಅಯ್ಯೋ! ಬಾವಿಯ ದಂಡೆ ತಲೆಗೆ ತಾಗಿ ಆ ಹುಡುಗಿ ಚಿನ್ನದಂತಹ ಹುಡುಗಿ ತೀರಿಯೇ ಹೋದಳು! ಅಯ್ಯೋ – ದೇವರೆ! ನಾನು ನನ್ನ ಇದೇ ಹೆಗಲಮೇಲೆ ಕೂಡ್ರಿಸಿ ಕುದುರೆಯಾಡಿಸಿದ ಮಗು – ನನ್ನನ್ನು ಕಂಡಾಗಲೆಲ್ಲ ಎಷ್ಟು ಪ್ರೀತಿ! ಸಲುಗೆ! ಅಯ್ಯೋ! ಹೋಯಿತು ಸ್ವಾಮಿ-ಹೋಯಿತು!
ಆ ಸಮಯ ಇದೇ ಶಾನುಭಾಗ ಹೆಣದ ಬಗ್ಗೆ ಏನೆಲ್ಲಾ ಪಿಕಲಾಟಮಾಡಿದ ಗೊತ್ತೆ? ಆದರೆ ಅದರ ಫಲ ಅವನ ತಲೆಯ ಮೇಲೆ ಬೀಳದೆ ಹೋಗಲಿಲ್ಲ. ಬೀಳುವಾಗ ಮಾತ್ರ ದೊಡ್ಡ ಬಂಡೆಕಲ್ಲಿಗಿಂತಲೂ ಭಾರವಾಗಿ ಬಿದ್ದೇಬಿಟ್ಟಿತು!

ಶ್ಯಾನುಭಾಗರ ಮಗನಿಗೆ ಕರುಳು ಬಾತುಹೋಯಿತು. ಹೊಟ್ಟೆನೋವು – ಹೊಟ್ಟೆನೋವು! ಯಾವಾಗಲೂ ಅದೇ ರೋಗ. ಏನುಮಾಡಿದರೂ ನಿಲ್ಲಲಿಲ್ಲ. ಕಡೆಗೆ ಅದರ ಒಳಗಿನ ಪಟತೆಗೆಸಿ ನೋಡಿದಾಗ ಬಾರಿ ಹುಣ್ಣು ಅದೇನೋ ಹೇಳುತ್ತಾರೆ ನೋಡಿ-

`ಕೆನ್ಸರಾ’-

ಹಾಂ, ಅದೇ ನೋಡಿ. ಅದಕ್ಕೆ ಇಲ್ಲಿ ಮದ್ದೇಯಿಲ್ಲವಂತೆ. ನಿಜವಾಗಿಯೂ ಅದು ನಮ್ಮ ಅಮ್ಮಣ್ಣಿಯ ಶಾಪ!

ಅಳಿಯನನ್ನು ಹಿಡಿದುಕೊಂಡು ವಕೀಲರು ಗಯನ ಹಾಗೆ ಮೂರು ಲೋಕ ಸುತ್ತಿ ಬಂದರು. ಆದರೆ ಇನ್ನೊಬ್ಬರಿಗೆ ಕೊಟ್ಟ ವಿಷ ತನ್ನ ಹೊಟ್ಟೆಯೊಳಗೇ ಎದ್ದು ಬಂದಿದೆ. ಆ ದ್ರೋಹ ಹೇಗೆ ಹೋಗಬೇಕು? ಕೊನೆಗೆ ಆಶೆ ಬಿಟ್ಟುಬಿಟ್ಟರು. ಹುಡುಗನನ್ನು ಇದೇ ಮನೆಗೆ ತಂದೆಯ ಬಳಿಗೆ ತಂದರು. ಮತ್ತೆ ಒಂದು ತಿಂಗಳಲ್ಲಿ ಅವ ನಾಯಿಯ ಹಾಗೆ ಕೂಗಿಕೂಗಿ ರಾಯರ ಕೈಕಾಲು ಹಿಡಿದು-

“ಏನು? ಯಾವ ರಾಯರು?”

ಇದೇ ರಾಯರು ಸ್ವಾಮಿ – ಧರ್ಮರಾಯರು! ‘ಎಲ್ಲವನ್ನೂ ನಾನು ಕ್ಷಮಿಸಿ ಬಿಟ್ಟಿದ್ದೇನೆ ಮಗ’ – ಎಂದುಬಿಟ್ಟರು ಇವರು. ಆದರೆ ಆ ಹೆಣ್ಣಿನ ಕಣ್ಣೀರು ಶಂಖ ಪಾಷಾಣವಾಗಿ ಅಲ್ಲಿ ಉಳಿದಿದೆಯಲ್ಲ? ಅದಕ್ಕೇನು ಮಾಡಬೇಕು?

ಈ ಕಿರುದಾರಿ 10 ವರ್ಷಗಳ ಮೊದಲ ಇಲ್ಲಿ ಹಾಯ್ದು ಹೋಗುತ್ತಿರಲಿಲ್ಲ. ಆ ಕಡೆ ಬಳಸಿ ಹೋಗುತಿತ್ತು. ಓ ಅಲ್ಲೇ ಆ ಹಾಲುತಿಂದು ವಿಷಕಕ್ಕಿದ ಹಾವನ್ನು ತಂದು ಬೂದಿಮಾಡಿದರು. ನೋಡಿ ಅಲ್ಲೇ – ಎಂದು ಚಿಕ್ಕ ಕಲ್ಲನ್ನು ತೆಗೆದು ಮುಂದಿನ ಕಲ್ಲಿನ ರಾಶಿಯ ಮೇಲೆ ಆ ಮುದುಕ ಒಗೆದು ತೋರಿಸಿದನು.
ಕಲ್ಲುತಾಗಿ ಅಲ್ಲಿ ಕಿಡುಹಾರಿತು. ಮುದುಕನು ಅದನ್ನೇ ನೋಡುತ್ತ – ‘ನೋಡಿ ಬೆಂಕಿ! – ಇನ್ನೂ ಅದರ ನಂಜು ತೀರಲಿಲ್ಲ!’ ಎಂದು ತಲೆದೂಗಿದನು.

“ಮತ್ತೆ?”

“ಮತ್ತೇನು? ಆ ಕೊಂಡಿ ಜಾತಿಯ ಶ್ಯಾನುಭಾಗ ನಂತರ ಒಂದೇ ತಿಂಗಳಲ್ಲಿ – ನೀವು ನಂಬಿದರೆ ನಂಬಿ ಸ್ವಾಮಿ – ಒಂದೇ ತಿಂಗಳಲ್ಲಿ ನಾಗರ ಹಾವು ಕಚ್ಚಿ ಸತ್ತು ಮಣ್ಣು ತಿಂದು ಹೋದ! ಅಬ್ಬಾ! ಹೆಣ್ಣಿನ ಕಣ್ಣೀರಿಗೆ ಯಾವುದು ಎಣೆಯುಂಟು ಸ್ವಾಮಿ? ಅದು ಈಶ್ವರನ ಪಾಶುಪತಾಸ್ತ್ರ! ಅಲ್ಲಿಗೆ ಸರ್ವನಾಶವಾಗಿ ಹೋಯಿತು. ಈ ಮನೆ ಖಾಲಿಯಾಯಿತು! ಆದರೆ..”

`ಆದರೇನು? ಹೇಳು.’

“ಅಲ್ಲ, ನಿಮಗೆ ಈ ವಿಚಾರ ತಿಳಿದೇಯಿಲ್ಲವೇನು?”

“ಇಲ್ಲ. ನನಗೂ ಶೇಖರನಿಗೂ ಇತ್ತೀಚಿನ ಬಳಕೆ. ಆದುದರಿಂದ..”

ಸಹಜ, ಈ ದುಃಖದ ಕತೆಯನ್ನು ಅವರು ಯಾರೊಡನೆಯೂ ಬಿಚ್ಚಿ ಹೇಳುವುದಿಲ್ಲ. ಅದು ಅವರ ಮನಸ್ಸಿನಲ್ಲೇ ಕುದಿಯುತ್ತಿದೆ. ಅಷ್ಟೆ.

ನಾನು ದೀರ್ಘವಾಗಿ ಉಸಿರುಬಿಟ್ಟು ಪಡುಗಡೆ ನೋಡಿದೆ. ಸಂಜೆಯು ಸಿಂಗಾರವಾಗಿ ಮೇಲೆದ್ದು ನಿಂತು ಯಾರನ್ನೋ ಅನುಸರಿಸಲು ಕಾದಂತೆ ಇದ್ದಿತು. ಇನ್ನು ಒಂದು ಗಳಿಗೆಯಲ್ಲಿ ಕತ್ತಲಾಗುವ ಸಂಭವವಿದೆಯೆಂದು ತಂಗಾಳಿ ಸಮೀಚೀನವಾಗಿ ಸಾರಿ ಹೇಳಿ ಸುಳಿಯತೊಡಗಿತು. ನಾನು ನೀರಿನೊಳಗೆ ಕಲ್ಲು ತುಂಬಿಸಿಕೊಂಡವನಂತೆ ಭಾರಭಾರವಾಗಿ ವಿಚಾರಗಳ ಸುಳಿಯಲ್ಲಿ ಮುಳುಗುತಿದ್ದೆನೆನ್ನುವಾಗ ಆ ಮುದುಕ ಮತ್ತೊಮ್ಮೆ `ಸ್ವಾಮೀ – ನಾವು ಗೋಪಾಲಯ್ಯನವರಲ್ಲಿಗೆ ತಾನೇ ಹೋಗುವುದು?’ ಎಂದನು.

ನಾನು ಹೌಹಾರಿ ಎದ್ದು ನಿಂತು `ಹೌದಯ್ಯ ತಾತ! ಹೌದು ಸಹಜವಾಗಿಯೂ ಹೌದು!’

ಆತನೂ ಎದ್ದು ನಿಂತು ನಿಧಾನವಾಗಿ `ರಾಯರೇ! ಈ ಪ್ರಸ್ತಾಪವನ್ನು ಅವರ ಮನೆಯಲ್ಲಿ ತರಬೇಡಿರಿ.’

“ನಾನೇಕೆ ತರಬೇಕು?”

“ಮತ್ತೆ ನೀವು ಶೇಖರಯ್ಯನವರ ತಂಗಿ ಆ ಚಲೋ ಹುಡುಗಿಯನ್ನು ಇನ್ನೂ ಕಂಡಿಲ್ಲವೇನು?”

“ಇಲ್ಲ ನೋಡು.”

“ಹಾಗಾದರೆ ಜಾಗ್ರತೆಯಾಗಿ ನೋಡಿರಿ. ಪಾಪ! ಆ ಮೊದಲಿನ ಸಂಗತಿ ನಡೆದಂದಿನಿಂದ ನಮ್ಮ ರಾಯರು ಹೆದರಿ ಹಪ್ಪಳವಾಗಿ ಹೋಗಿದ್ದಾರೆ. ಮದುವೆಯೆಂದರೆ ಮೂರು ಗಾವುದ ಹಾರುತ್ತಾರೆ! ಮತ್ತೆ ನಿಮಗೆ ಮದುವೆಯಾಗಿಲ್ಲ ತಾನೆ?”

ನಾನು ಮಾತಾಡದೆ ಸುಮ್ಮನಿದ್ದೆ.

“ಇಲ್ಲ ಸ್ವಾಮಿ! ಹೇಳಿಬಿಡಿ. ನಮಗೆ ಹಳ್ಳಿಯವರಿಗೆ ಅದರಲ್ಲೇನೂ ದಾಕ್ಷಿಣ್ಯವಿಲ್ಲ. ನಾವು ಹಾಗೆಲ್ಲ ಚಿಕ್ಕದರಲ್ಲಿ ಸಿಕ್ಕಿ ಬೀಳುವಂತೆಯೂ ಇಲ್ಲ. ಇನ್ನೂ ನಿಮಗೆ ಮದುವೆಯಾಗಿರದಿದ್ದರೆ ಸರಿಯಾಯಿತು. ಆಗಿದ್ದರೆ ಆ ಹುಡುಗಿ ನಿಮ್ಮ ತಂಗಿ ನನ್ನಾಣೆ!”

ನನಗೆ ಅವನ ಮಾತು ಕೇಳಿ ಹಿಡಿಸಲಾರದಷ್ಟು ನಗೆಬಂದಿತು. ಅವನು ಕೊಂಚ ವ್ಯಸ್ತನಾಗಿ `ನೀವೆಲ್ಲ ಪ್ರಾಯದ ಹುಡುಗರು ನಗಬಹುದು. ಹೀಗೆಲ್ಲ ನಕ್ಕು ನಕ್ಕು ಒಡನಾಡಿದವರು ನಂತರ ಹೊಗೆಯಾದುದನ್ನೇ ನಾನೇ ನನ್ನ ಕಣ್ಣಾರೆ ಇಲ್ಲಿ ಕಂಡಿದ್ದೇನೆ. ಅಂತಹ ಅನುಭವದ ಮೇಲಿಂದ ನಾನು ಈ ಮಾತು ಹೇಳುತ್ತಿದ್ದೇನೆ ಸ್ವಾಮಿ. ಬೇಸರಮಾಡಬೇಡಿ.’ ಎಂದು ಮತ್ತೊಂದು ಗುಂಡುಕಲ್ಲನ್ನು ಆ ಕಲ್ಲು ರಾಶಿಯ ಮೇಲೆ ಎಸೆದು ಬಿಟ್ಟನು.

ಕತ್ತಲಾಗುತ್ತ ಬರುತ್ತಿದ್ದ ಆ ವೇಳೆಯಲ್ಲಿ ಅದರ ಕಿಡಿಯು ಮತ್ತಷ್ಟು ಜ್ವಲಂತವಾಗಿ ಕಂಡಿತು!

***
(ರಾಯಭಾರಿ 23-6-1954)

About The Author

ಡಾ. ಬಿ. ಜನಾರ್ದನ ಭಟ್

ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ