Advertisement
ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ. ಪುಡಿರೌಡಿಯೊಬ್ಬ ದಿನ ಬೆಳಗಾಗುವಷ್ಟರಲ್ಲೇ ಡಾನ್ ಆಗುತ್ತಾನೆ. ಹೀಗೆ ಇಂತಹ ಪವಾಡಗಳು ನಮ್ಮ ನಿಮ್ಮ ಮನಸುಗಳಲ್ಲಿ ಸುಪ್ತವಾಗಿ ಅಡಗಿ ಕೆಲಸ ಮಾಡುತ್ತಿರುತ್ತವೆ. ಹಾಗಾಗಿ ಭಾರತೀಯ ಸಿನೇಮಾ ಎಂಬುದು ಭಾರತೀಯರ ಭಾವಕೋಶ ಪೋಷಿಸುವ ನಿಜವಾದ “ಮಾ”. 
ಡಾ.ಲಕ್ಷ್ಮಣ ವಿ.ಎ. ಅಂಕಣ

 

ರಾನು ಮೊಂಡಲ್ ಹೆಸರು ಕೇಳಿರಬೇಕಲ್ಲ? ಸಧ್ಯದ ಭಾರತೀಯ ಮೀಡಿಯಾ ಡಾರ್ಲಿಂಗ್ ಈಕೆ. ದೇಶದ ಯಾವ ಟಿ.ವಿ ಚ್ಯಾನೆಲ್ ಹಾಕಿದರೂ ತೇರಿ ಮೇರಿ, ತೇರಿ ಮೇರಿ ಕಂಹಾನಿ…. ಪ್ರತಿಷ್ಠಿತ ರೆಕಾರ್ಡಿಂಗ್ ರೂಮಿನಲ್ಲಿ ಹಿಮೇಶ ರೇಶಮಿಯಾಯೆಂಬ ಬಾಲಿವುಡ್ ತಾರೆಯೆದುರು ಆರ್ತವಾಗಿ ಹಾಡುವ ಐವತ್ತರ ಆಸುಪಾಸಿನ ಕಲ್ಕತ್ತೆಯ ಯಾವುದೋ ಹಳ್ಳಿಯಿಂದ ಬಂದು ರಾತ್ರೋ ರಾತ್ರಿ ತನ್ನ ದನಿಯಿಂದ ಇಡೀ ಬಾಲಿವುಡ್ ನ ಗಮನ ಸೆಳೆದವಳು.

ಈ ಮೊದಲು ಮುಂಬಯಿಯ ಚರ್ಚ್ ಗೇಟುಗಳ ಜನಸಂದಣಿಯಲ್ಲಿ ರೇಲ್ವೇ ಸ್ಟೇಷನ್ನುಗಳ ನಿಬಿಡತೆಯಲ್ಲಿ ಇಂಡಿಯಾ ಗೇಟಿನ ಮೊರೆವ ಕಡಲು ಅಲೆಗಳಂತೆ ಯಾರು ಕೇಳದಿದ್ದರೂ ಹಾಡು ಹಾಡಿದವಳು ಮುದ್ದಾಂ ಎಲ್ಲ ಕೇಳಲಿ ಎಂದೇ ಹಾಡಿದವಳು, ಆ ಮೂಲಕ ತನ್ನ ಹೊಟ್ಟೆಪಾಡು ನೋಡಿಕೊಂಡವಳು… ಯಾವಾಗ ಇವಳ ಗಂಡ ನಿಧನರಾಗುತ್ತಾರೋ ಆಗ ವಿಧಿಯಿಲ್ಲದೇ ಮತ್ತೆ ತನ್ನೂರ ಕಡೆಗೆ ಕಾಲು ಕಿತ್ತು ಕಲಕತ್ತಾದ ರೈಲ್ವೆ ಸ್ಟೇಷನ್ನಿನಲಿ ಹಾಡುತ್ತಾ ಯಾವುದೋ ಲೋಕಲ್ ರೈಲು ಹತ್ತಿ ಬೋಗಿ ಬೋಗಿಗಳಲ್ಲಿ ಹಾಡಿ ಕೈ ಸಂಪಾದನೆ ಮಾಡಿದವಳು.

ಅದೊಂದು ಬೆಳಗು, ರಾನು ಮೊಂಡಲ್ ಳ ಪಾಲಿನ ಅದೃಷ್ಟದ ಬೆಳಗು ತನ್ನನ್ನು ಬಾಲಿವುಡ್ ತನಕ ಸೆಳೆದೊಯ್ಯುತ್ತದೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡವಳಲ್ಲ. ಆದಿನ ಹೀಗೆಯೇ ಎಂದಿನಂತೆ ತನ್ನ ಎದೆಯನ್ನು ಬಗೆದು ಆಶಾಜೀಯ “ಏಕ ಪ್ಯಾರ ಕಾ ನಗ್ಮಾ ಹೈ” ಹಾಡುವಾಗ ಅದನ್ನು ಅತೀಂದ್ರ ಚಕ್ರವರ್ತಿ ಎಂಬ ಸಾಫ್ಟವೇರ್ ಎಂಜಿನೀಯರೊಬ್ಬರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡು ತಮ್ಮ ಟ್ವಿಟ್ಟರ್ ಅಕೌಂಟಿನಲ್ಲಿ ಹಾಕುತ್ತಾರೆ. ಹಾಡು ಕೆಲವೇ ಗಂಟೆಗಳಲ್ಲಿ ಸಾವಿರಾರು ಶೇರು ಪಡೆದು ಲಕ್ಷಾಂತರ ಲೈಕುಗಳ ಗಿಟ್ಟಿಸಿ ಕೊನೆಗೆ ಬಾಲಿವುಡ್ ನ ಕಿವಿಗೂ ತಾಕಿ ….. ಮುಂದೆ ಇತಿಹಾಸ ಸೃಷ್ಟಿಸುತ್ತದೆ!! ಉಹುಂ ಕೇವಲ ಇತಿಹಾಸವಲ್ಲ, ರಾನು ಮೊಂಡಲಳ ಭವಿಷ್ಯವಾಗುತ್ತದೆಯೇ? ಎನ್ನುವ ಅನುಮಾನ ಬಲವಾಗಿ ಕಾಡುತ್ತದೆ.

ರಾನು ಮೊಂಡಲ್ ಳ ದನಿ ಕೇಳಿದವರಿಗೆ ಇವಳು ಆಶಾಜೀಯಷ್ಟೇ ಚೆನ್ನಾಗಿ ಹಾಡುತ್ತಾರೆ ಎಂದರೆ, ಮೊದಲ ಸಲ ಕೇಳಿಸಿಕೊಂಡಿವರಿಗೆ ಸಹಜವಾಗಿ ಹೌದೆನ್ನಿಸುತ್ತದೆ, ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಇವರು ಭಿಕ್ಷುಕಿ ಎನ್ನುವುದು ಹಾಗು ಹೊಟ್ಟೆ ಪಾಡಿಗಾಗಿ ಬೀದಿಯಲ್ಲಿ ಹಾಡು ಹೇಳುತ್ತಾಳೆ ಎಂಬ ಸೆಂಟಿಮೆಂಟ್ ಬಹಳ ಮುಖ್ಯವಾಗುತ್ತದೆ. ಆಶಾಜೀಯಷ್ಟೇ ಚೆನ್ನಾಗಿ ಹಾಡುವ ಸಾವಿರಾರು ಗಾಯಕಿಯರು ಇಲ್ಲಿ ಇದ್ದಿರಲೂಬಹುದೆಂಬುದನ್ನು ನಾವು ಗಮನಿಸಬೇಕಾಗುತ್ತದೆ.

ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ. ಪುಡಿರೌಡಿಯೊಬ್ಬ ದಿನ ಬೆಳಗಾಗುವಷ್ಟರಲ್ಲೇ ಡಾನ್ ಆಗುತ್ತಾನೆ. ಹಾಗಾಗಿ ಭಾರತೀಯ ಸಿನೇಮಾ ಎಂಬುದು ಭಾರತೀಯರ ಭಾವಕೋಶ ಪೋಷಿಸುವ ನಿಜವಾದ “ಮಾ”.

ಹಳ್ಳಿಯಿಂದ ಬಂದ ಮುತ್ತಣ್ಣನೆಂಬ ಅಮಾಯಕ ತನ್ನ ಪರಿಶ್ರಮ, ಶ್ರದ್ಧೆಯಿಂದ ಒಂದು ಮಹಾನಗರವನ್ನೇ ಆಳುವ ಮೇಯರ್ ಮುತ್ತಣ್ಣನಾಗುವುದು… ಅನಾಥ ಬಾಲಕನೊಬ್ಬ ತನ್ನ ಅವಿರತ ಪರಿಶ್ರಮದಿಂದ ಓಡುತ್ತ ಓಡುತ್ತ ಚಿನ್ನಾರಿ ಮುತ್ತನಾಗಿದ್ದು. .ಹೀಗೆ ಇಂತಹ ಪವಾಡಗಳು ನಮ್ಮ ನಿಮ್ಮ ಮನಸುಗಳಲ್ಲಿ ಸುಪ್ತವಾಗಿ ಅಡಗಿ ಕೆಲಸ ಮಾಡುತ್ತಿರುತ್ತವೆ.

ರಾನು ಮೊಂಡಲ್ ಳ ದನಿ ಕೇಳಿದವರಿಗೆ ಇವಳು ಆಶಾಜೀಯಷ್ಟೇ ಚೆನ್ನಾಗಿ ಹಾಡುತ್ತಾರೆ ಎಂದರೆ, ಮೊದಲ ಸಲ ಕೇಳಿಸಿಕೊಂಡಿವರಿಗೆ ಸಹಜವಾಗಿ ಹೌದೆನ್ನಿಸುತ್ತದೆ, ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಇವರು ಭಿಕ್ಷುಕಿ ಎನ್ನುವುದು ಹಾಗು ಹೊಟ್ಟೆ ಪಾಡಿಗಾಗಿ ಬೀದಿಯಲ್ಲಿ ಹಾಡು ಹೇಳುತ್ತಾಳೆ ಎಂಬ ಸೆಂಟಿಮೆಂಟ್ ಬಹಳ ಮುಖ್ಯವಾಗುತ್ತದೆ.

ರಾನು ಮೊಂಡಲ್ ಚೆನ್ನಾಗಿ ಹಾಡುತ್ತಾಳೆ. ಅವಳ ದನಿಯಲ್ಲಿ ಆರ್ತತೆಯಿದೆ, ಹೀಗಾಗಿ ಹಿಮೇಶ್ ತನ್ನ ಸಿನೇಮಾದಲ್ಲಿ ಹಾಡಲು ಅವಕಾಶ ಕೊಟ್ಟು ಕೈ ತುಂಬ ಸಂಭಾವನೆಯನ್ನೂ ಕೊಟ್ಟಿದ್ದಾನೆ. ಅನೇಕ ರಿಯಾಲಿಟಿ ಶೋಗಳಿಂದ ಅವಕಾಶಗಳು ಹುಡುಕಿ ಬರುತ್ತಿವೆ. ಸಲ್ಮಾನ್ ಖಾನ್ ಅವರಿಗೊಂದು ಬೆಲೆಬಾಳುವ ಫ್ಯ್ಲಾಟು ಕೊಟ್ಟು ಔದಾರ್ಯ ಮೆರೆದಿದ್ದಾನೆ. ಈಗ ಎಲ್ಲವೂ ಸರಿಯಿದೆ.. ಮುಂದೆ?

(ಅತೀಂದ್ರ ಚಕ್ರವರ್ತಿ ಮತ್ತು ರಾನು ಮೊಂಡಲ್)

ಮಾಧ್ಯಮಗಳಿಗೆ ಅವಸರ ಜಾಸ್ತಿ. ನಮ್ಮಲ್ಲೇ ಮೊದಲು ಎಂದು ತೋರ್ಪಡಿಸುವುದಕ್ಕಾಗಿ, ಒಬ್ಬ ಮುಳುಗುವ ವ್ಯಕ್ತಿಯನ್ನು ಅವನನ್ನು ರಕ್ಷಿಸುವ ಬದಲಾಗಿ ಅದನ್ನು ಶೂಟ್ ಮಾಡಿ ಬಿತ್ತರಿಸಬಲ್ಲವು. ಸಾವಿನ ಮನೆಯಲ್ಲಿ ಸೂತಕದ ಗಳಿಗೆಯಲ್ಲಿ ಅವರ ಮನೆಯವರ ಬಾಯಿಗೆ ಮೈಕು ಹಿಡಿದು “ಈಗ ನಿಮಗೇನನ್ನಿಸುತ್ತಿದೆ?” ಎಂದು ಕೇಳಬಲ್ಲಷ್ಟು ನಿರ್ದಯಿಗಳು. ಬೆರಳೆಣಿಕೆಯಷ್ಟು ದಿನಗಳು ಕಳೆಯಲಿ, ಈಗ ತಲೆ ಮೇಲೆ ಹೊತ್ತು ಕುಣಿಸುತ್ತಿರುವ ರಾನು ಮೊಂಡಲ್ ಎಂಬ ಗಾಯಕಿಯ ಹೆಸರು ಇವರಿಗೆ ನೆನಪಿರುವುದಿಲ್ಲ.

ಯಾಕೆ ಅಂತೀರ?
ಇಪ್ಪತ್ತನೆಯ ಶತಮಾನದಲ್ಲಿ ಎಲ್ಲರೂ ಇಲ್ಲಿ “ಫೈವ್ ಮಿನಿಟ್ಸ ಹೀರೋ” ಇರುತ್ತಾರೆಂದು ಐವತ್ತು ಅರವತ್ತು ವರ್ಷಗಳ ಹಿಂದೆಯೇ ಅಮೇರಿಕಾದ ಕಾದಂಬರೀಕಾರ ಜಾರ್ಜ್ ಆರ್ವೆಲ್ ಭವಿಷ್ಯ ನುಡಿದಿದ್ದು ಸತ್ಯವಾಗುತ್ತಿದೆ. ಇಂದು ನಾವೆಲ್ಲಾ ಈ ಮಾಹಿತಿ ತಂದೊಡ್ಡುವ ಮಹಾಪೂರಗಳಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎನ್ನುವುದನ್ನು ಹುಡುಕಲೂ ನಮಲ್ಲಿ ಸಮಯವಿಲ್ಲ ಮತ್ತು ಪುರುಸೊತ್ತೂ ಇಲ್ಲ. ಕರ್ನಾಟಕದಲ್ಲಿ ವಾರಕ್ಕೆ ಕನಿಷ್ಠ ಇಲ್ಲವೆಂದರೂ ಹತ್ತಾರು ಹೊಸ ಲೇಖಕರ ಪುಸ್ತಕಗಳು ಬಿಡುಗಡೆಯಾಗಿ ಹೇಳಹೆಸರಿಲ್ಲದೆ ಮರೆಯಾಗುತ್ತಿವೆ.(ಇದಕ್ಕೆ ಕೆಲವೊಂದು ಅಪವಾದ ಹೊರತುಪಡಿಸಿ) ವಾರಕ್ಕೆ ಕನಿಷ್ಠ ಎರಡು ಮೂರು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತವೆ. ಆದರೂ ನಮಗೆ ಒಂದು ವಾರದ ನಂತರ ಬಿಡುಗಡೆಯಾದ ಪುಸ್ತಕದ ಹೆಸರೂ ಸಿನೇಮಾದ ಹಾಡೂ ನೆನಪಿನಲ್ಲುಳಿಯುತ್ತಿಲ್ಲ.

(ರಾಜೇಶ)

ರಾನು ಮೊಂಡಲ್ ಪ್ರತಿಭಾನ್ವಿತೆ ನಿಜ. ಆದರೆ ಒಬ್ಬ ಕಲಾವಿದನಿಗೆ ನಿರಂತರೆಯನ್ನು ಕಾಪಾಡಿಕೊಳ್ಳುವುದು ಎಲ್ಲದಕ್ಕಿಂತ ಮುಖ್ಯವಾಗುತ್ತದೆ. ಈ ಟಿ.ಆರ್.ಪಿ ಯ ಅವಸರಕ್ಕೆ ಬಿದ್ದ ಮಾಧ್ಯಮಗಳು ಅವಳ ಬಗ್ಗೆ ನಿಜವಾದ ಕಾಳಜಿಯಿದ್ದಲ್ಲಿ, ಅವಳಿಗೆ ಶಾಸ್ತ್ರೀಯ ಸಂಗೀತ ತರಬೇತಿ ಕೊಡಿಸಿ, ಈ ಕಣ್ಣು ಕುಕ್ಕಿಸುವ ಬೆಳಕಿನಲ್ಲಿ ಅವಳ ನಾಜೂಕು ಕಣ್ಣುಗಳು ಹಾಳಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಬೆಳಕು ಅವಳಲ್ಲಿ ಭ್ರಮೆಗಳನ್ನು ಸೃಷ್ಟಿಸದಂತೆ ಎಚ್ಚರವಹಿಸಬೇಕಾದದ್ದೂ ಅವಶ್ಯಕವಾಗುತ್ತದೆ. ಅವಳ ಈಗಿನ ಉತ್ಪ್ರೇಕ್ಷೆ ಹದವಿಲ್ಲದಿದ್ದಾಗ ಹುಸಿಯಾಗುವ ಅಪಾಯವಿದೆ.

ಯಾಕೆಂದರೆ ನನ್ನ ಕಣ್ಣುಗಳ ಮುಂದೆ ‘ಹಳ್ಳಿ ಹುಡುಗ ಪ್ಯಾಟೆಗೆ ಬಂದ’ ಎಂಬ ಅಮಾಯಕ ರಾಜೇಶ ಕಾಡು ಬಿಟ್ಟು ನಾಡು ಸೇರಿ, ದುರ್ಗತಿಯನ್ನು ತಂದುಕೊಂಡ ಉದಾಹರಣೆ ಇದೆ. ಹಾಗೇ ಮತ್ತೀಗ ಸರಿಗಮಪದ ಹನುಮಂತನನ್ನೂ ದಾರಿ ತಪ್ಪಿಸಲಾಗುತ್ತಿದೆಯೆ?

ಗೊತ್ತಿಲ್ಲ …. ಆದರೆ ರಾನು ಎಂಬ ಕಾಡುಕೋಗಿಲೆ ನಗರದ ಬೆಳಕಿಗೆ ಬೆಚ್ಚದಿರಲಿ.

About The Author

ಡಾ. ಲಕ್ಷ್ಮಣ ವಿ.ಎ

ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2 Comments

  1. Dastgeersab Nadaf

    ಬೇರು ಚಿಗುರು
    ===÷÷÷÷======÷÷÷÷===÷÷÷
    ಬೇರಾದರೆ ಸಾಕೇ ಸಮಾಜದ ಗುರು
    ನೀರು ಗೊಬ್ಬರ ಹೀರಿ ಮಾಗಬೇಕು ಚಿಗುರು

    ಹೊತ್ತು ಹೊತ್ತಿಗೆ ಪ್ರಕೃತಿ ಇತ್ತ
    ತುತ್ತನುಂಡು ಚಿತ್ತ ವಿಸ್ತರಿಸಬೇಕು
    ಸತ್ತು ಹೋದ ಮೌಲ್ಯಗಳ ಮೂಲೆಗೆಸೆದು
    ನಿತ್ಯ ನೂತನ ಸವಾಲುಗಳಿಗೆ
    ಜವಾಬು ಕೊಡಬೇಕು.

    ಹತ್ತು ಹಳವಂಡಗಳ ನಡುವೆ
    ಹೊಟ್ಟೆ ಪಾಡು ನಡೆವುದು
    ನಿನ್ನೆ ನಾಳೆಗಳ ಧ್ಯಾನದಲಿ ಹೊತ್ತು ಕಳೆದರೆ
    ನಾಡನಾಳುವ ನಂದಕಿಶೋರರ
    ಭವಿಷ್ಯ ಮುರುಟುವದು.

    ಆಳುವವರು ಅಧಿಕಾರಿಗಳು
    ನೀರ ಮೇಲೆ ಬೆಣ್ಣೆ ತೆಗೆದರು
    ಆಡುವವರು ಕಾಡುವವರು
    ಕುಂಟು ನೆಪದಿ ಕತ್ತು ಕುಯ್ದರೂ
    ಅವರೂ ಒಮ್ಮೆ ಮಕ್ಕಳಾಗಿದ್ದವರು.

    ನಿತ್ಯ ಹೊರಡುವ ಹತ್ತು ನಿಯಮಗಳು
    ಸುತ್ತಲಿನ ಅರೆ ಸತ್ಯದ ನಮೂನೆಗಳು
    ಎಲ್ಲ ಮರೆತು ಮನಕಂಜಬೇಕು
    ಗೊತ್ತು ಗುರಿಯ ಮುಟ್ಟಲು
    ಅದುವೇ ಸಾಧನೆಯ ಮೆಟ್ಟಿಲು.

    ಎತ್ತು ಈ ದುಡಿಮೆ ಗಾಣದೆತ್ತು
    ಎಂಬುದು ಎಲ್ಲರಿಗೂ ಗೊತ್ತು
    ಎಣ್ಣೆ ಬಂದಾಗ ಕಣ್ಮುಚ್ಚದೇ
    ಎಚ್ಚರದಿ ಗೇಯ್ದರೆ
    ಲಿಂಗ ಮೆಚ್ಚಬೇಕು

    ಬೇರಾದರೆ ಸಾಕೇ ಸಮಾಜದ ಗುರು
    ನೀರು ಗೊಬ್ಬರ ಹೀರಿ
    ಮೂಡಬೇಕು ಚಿಗುರು.
                         *ಡಿ.ಎಮ್. ನದಾಫ್.
                             ಅಫಜಲಪುರ.

                             9980858560

    Reply
  2. Dastgeersab Nadaf

    ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಗುರುವೃಂದದ ಸಮಕಾಲೀನ ಕರ್ತವ್ಯ & ಸಮಸ್ಯೆಗಳನ್ನು ಬಿಂಬಿಸುವ
    ಕವನ.
    ಅಪೂರ್ವ ನದಾಫ್,
    ಕಲಬುರಗಿ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ