Advertisement
ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು. ತಮ್ಮ ಕೃತಿಯ ಉದ್ದಕ್ಕೂ ಅವರಿಬ್ಬರ ಅಗಲಿಕೆಯ ನಂತರ ಅವರು ಬಿಟ್ಟು ಹೋಗಿರುವ ನೆನಪುಗಳು ಈ ಕಾಲ ದೇಶವನ್ನು ಆವರಿಸಿರುವುದು ಹುಳಿಯಾರ್ ಅವರ ಈ ನಿರೂಪಣೆಯಲ್ಲಿ ನೋಡಬಹುದು.
ನಟರಾಜ್ ಹುಳಿಯಾರ್ ಅವರ ‘ಇಂತಿ ನಮಸ್ಕಾರಗಳು’ ಪುಸ್ತಕದ ಕುರಿತು ಹೆಚ್ ಆರ್ ರಮೇಶ್ ಬರಹ

 

‘ಇಂತಿ ನಮಸ್ಕಾರಗಳು’ ಕನ್ನಡದ ಅಪರೂಪದ ಪುಸ್ತಕಗಳಲ್ಲೊಂದು. ನನ್ನ ಮತ್ತು ಕೊಂಚ ನನ್ನ ಹಿರಿಯ ತಲೆಮಾರಿನ ಸಂವೇದನೆಯ ಭಾಗವಾಗಿದ್ದ ಲಂಕೇಶ್ ಮತ್ತು ಡಿ.ಆರ್. ಬಗೆಗೆ ಹುಳಿಯಾರ್ ಅವರು ತಾವು ಅವರೊಟ್ಟಿಗೆ ಒಡನಾಡಿದ ಕ್ಷಣಗಳನ್ನು ಬಹಳ ಆಪ್ತಾವಾಗಿ ಸ್ಪಂದಿಸಿ, ಅವರ ಜೊತೆಗಿನ ಕ್ಷಣಗಳನ್ನು ಮರೆಯುವುದಕ್ಕೆ ಆಗುವುದೇ ಇಲ್ಲ ಎನ್ನುವ ಸಂದರ್ಭದಲ್ಲಿ ಹುಟ್ಟಿದಂತಹ ಬರಹ ಈ ಪುಸ್ತಕ. ಕೇವಲ ಅಭಿಪ್ರಾಯ, ಅನಿಸಿಕೆ, ಹಳವಂಡಗಳನ್ನು ಹೇಳಿಕೊಳ್ಳದೆ ತಮ್ಮ ಪ್ರಜ್ಞೆಯನ್ನು ಲಂಕೇಶ್ ಮತ್ತು ಡಿ.ಆರ್ ಅವರು ಆವರಿಸಿ ವಿಸ್ತರಿಸಿದ್ದನ್ನು ಕುರಿತು ಪರ್ಸನಲ್ ಆಗಿದ್ದರೂನು ಎಲ್ಲಿಯೂ ಅಹಂ ಆಗಿ ತೋರದೆ ತುಂಬಾ ಲವ್ಲಿಯಾಗಿ ಬಿಚ್ಚಿಟ್ಟಿದ್ದಾರೆ.

(ಪಿ. ಲಂಕೇಶ್)

ಇದು ಕೇವಲ ಇಬ್ಬರು ವ್ಯಕ್ತಿಗಳ ಚಿತ್ರಣವಾಗಿರದೆ ಅನೇಕ ಆಯಾಮಗಳಿರುವ ಒಂದು ವಂಡರ್ ಫುಲ್ ಕಥನವಾಗಿ ರೂಪಗೊಂಡಿದೆ. ಇಲ್ಲಿ ಲಂಕೇಶ್ ಮತ್ತು ಡಿ.ಆರ್ ಅವರ ಬರಹಗಳು ರೂಪುಗೊಂಡ ಸಂದರ್ಭ ಮತ್ತು ಅವುಗಳು ಕನ್ನಡದ ಪ್ರಜ್ಞಾವಲಯದಲ್ಲಿ ಮೂಡಿಸಿದ ಸಂಚಲಗಳನ್ನು ತುಂಬಾ ಸ್ವಾರಸ್ಯವಾಗಿ ಬಿಚ್ಚಿಡುತ್ತಾರೆ. ಅವರಿಬ್ಬರ ಬದುಕನ್ನಷ್ಟೇ ಅಲ್ಲದೆ ಅವರ ಬರಹಗಳನ್ನು ಕುರಿತ ಒಂದು ವಿಶಿಷ್ಟ ವಿಮರ್ಶೆಯೂ ಈ ಬರಹದಲ್ಲಿ ಮೂಡಿಬಂದಿರುವುದು ಕನ್ನಡಕ್ಕೆ ಸಿಕ್ಕಿದ ಹೊಸ ವಿಮರ್ಶಾ ಕಥನ.

ಲಂಕೇಶ್ ಮತ್ತು ಡಿ.ಆರ್ ಅವರ ಸಂಕೀರ್ಣ ವ್ಯಕ್ತಿತ್ವವವನ್ನು ಅರ್ಥಮಾಡಿಕೊಳ್ಳುತ್ತ ತಾವು ಬೆಳೆದುದನ್ನು ಇಲ್ಲಿ ನಿರೂಪಿಸುವ ಹುಳಿಯಾರ್ ಅವರು ಒಂದು ರೀತಿಯಲ್ಲಿ ಅಲ್ಪಸ್ವಲ್ಪ ತಮ್ಮ ಆತ್ಮಕಥನವನ್ನೇ ಬರೆದಂತಿದೆ.

ಅನೇಕರಿಗೆ ಗೊತ್ತಿಲ್ಲದ ಅನೇಕ ಸ್ವಾರಸ್ಯಕರ ಸಂಗತಿ, ಕ್ಷಣಗಳನ್ನು ಹೇಳುತ್ತ ಅವರು ಅವರಿಬ್ಬರ ಒಳಗನ್ನು ಮತ್ತು ಹೊರಗನ್ನು ಬಿಚ್ಚಿಡುವ ಈ ನಿರೂಪಣೆಯನ್ನು ಓದುವುದು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯನ್ನು ಓದುತ್ತಿದ್ದೇವೇನೋ ಎಂಬ ರೀತಿಯಲ್ಲಿ ತೀವ್ರತೆ ಮತ್ತು ಕುತೂಹಲ ಓದುಗರಲ್ಲಿ ಮೂಡುತ್ತದೆ.

ನ್ಯಾಷನಲ್ ಮತ್ತು ಇಂಟರ್ ನ್ಯಾಷನಲ್ ಮಟ್ಟದಲ್ಲಿ ಖ್ಯಾತಿ ಗಳಿಸುತ್ತ ಅಪಾರ ಓದು, ಹೊಳಹು, ಪಾಂಡಿತ್ಯಗಳಿದ್ದಂತಹ ಡಿ.ಆರ್ ಅಂಥಾ ಡಿ.ಆರ್ ಅವರೇ ತಮ್ಮ ಪ್ರತಿ ಬರಹದಲ್ಲು ಮತ್ತು ಪ್ರತಿಕ್ರಿಯೆಯಲ್ಲೂ ಲಂಕೇಶ್ ಯಾವರೀತಿ ರೆಸ್ಪಾಂಡ್ ಮಾಡುತ್ತಾರೆ ಎನ್ನುವ ಎಚ್ಚರ ಇಟ್ಟುಕೊಂಡಿದ್ದರು ಎಂಬುದನ್ನು ಹುಳಿಯಾರ್ ಅವರು ತಮ್ಮ ಇಡೀ ನಿರೂಪಣೆಯಲ್ಲಿ ತುಂಬಾ ಸೊಗಸಾಗಿ ಹಿಡಿದಿಟ್ಟಿದ್ದಾರೆ. ಎಲ್ಲೂ ಸಹ ಹುಳಿಯಾರ್ ಅವರು ಇವರಿಬ್ಬರ ಬಗ್ಗೆ ಬರೆಯುವಾಗ ಯಾವುದೇ ವ್ಯಕ್ತಿಪೂಜೆಯನ್ನು ಮಾಡದೆ ಲಂಕೇಶರಿಂದಲೇ ಕಲಿತಿರುವ ವ್ಯಂಗ್ಯ, ಟೀಕೆಗಳನ್ನು ಹಾಗು ಡಿ.ಆರ್ ಅವರಿಂದ ಇಂಟಲೆಕ್ಚುಯಲ್ ಕನೆಕ್ಷನ್ ಗಳನ್ನು ಬಳಸಿಕೊಂಡು ಅವರಿಬ್ಬರ ವ್ಯಕ್ತಿತ್ವಗಳನ್ನು ತೆರೆದಿಡುತ್ತಾರೆ.

(ಡಿ.ಆರ್. ನಾಗರಾಜ್)

ಇಡೀ ಪುಸ್ತಕದ ಹಿಂದೆ ಪ್ರೀತಿ ಮತ್ತು ಪ್ರೀತಿ ಮಾತ್ರ. ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು. ತಮ್ಮ ಕೃತಿಯ ಉದ್ದಕ್ಕೂ ಅವರಿಬ್ಬರ ಅಗಲಿಕೆಯ ನಂತರ ಅವರು ಬಿಟ್ಟು ಹೋಗಿರುವ ನೆನಪುಗಳು ಈ ಕಾಲ ದೇಶವನ್ನು ಆವರಿಸಿರುವುದು ಹುಳಿಯಾರ್ ಅವರ ಈ ನಿರೂಪಣೆಯಲ್ಲಿ ನೋಡಬಹುದು. ಈ ‘ಇಂತಿ ನಮಸ್ಕಾರಗಳು’ ಎನ್ನುವ ನೆನಪಿನ ನಿರೂಪಣಾ ಕಥನವು ಒಂದು ಕಾಲ ಘಟ್ಟದ ಕನ್ನಡದ ಸಾಂಸ್ಕೃತಿಕ, ರಾಜಕೀಯ ಹಾಗು ಸಾಹಿತ್ಯಕ ಚರಿತ್ರೆಯಂತೆ ತೋರುತ್ತದೆ.

ಈ ಪುಸ್ತಕದಲ್ಲಿ ಈ ಹಿಂದೆ ಎಂದೂ ಕೇಳಿರದಂತಹ ಮತ್ತು ಲಂಕೇಶ್ ಮಾತ್ರ ಹೇಳಬಹುದಾದಂತಹ ಮಾತುಗಳು ಇಲ್ಲಿ ದಾಖಲಾಗಿರುವುದು ಮನಸ್ಸಿಗೆ ಖುಷಿ, ಅಚ್ಚರಿ ಆಗುವುದರ ಜೊತೆಗೆ ಲಂಕೇಶರ ಸಂಕೀರ್ಣ ವ್ಯಕ್ತಿತ್ವ ಗೊತ್ತಾಗುತ್ತದೆ.

ಅನೇಕರಿಗೆ ಗೊತ್ತಿಲ್ಲದ ಅನೇಕ ಸ್ವಾರಸ್ಯಕರ ಸಂಗತಿ, ಕ್ಷಣಗಳನ್ನು ಹೇಳುತ್ತ ಅವರು ಅವರಿಬ್ಬರ ಒಳಗನ್ನು ಮತ್ತು ಹೊರಗನ್ನು ಬಿಚ್ಚಿಡುವ ಈ ನಿರೂಪಣೆಯನ್ನು ಓದುವುದು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯನ್ನು ಓದುತ್ತಿದ್ದೇವೇನೋ ಎಂಬ ರೀತಿಯಲ್ಲಿ ತೀವ್ರತೆ ಮತ್ತು ಕುತೂಹಲ ಓದುಗರಲ್ಲಿ ಮೂಡುತ್ತದೆ.

ಇಡೀ ಲಂಕೇಶರ ಬರಹಗಳನ್ನು, ಒಂದು ಮಿನಿ ಥೀಸಿಸ್ ಆಗುವ ನಿಟ್ಟಿನಲ್ಲಿ, ಕೇಡಿನ ಕಲ್ಪನೆಯನ್ನು ಇಟ್ಟುಕೊಂಡು ಗ್ರಹಿಸಿರುವುದು ಕನ್ನಡ ವಿಮರ್ಶಾ ಲೋಕಕ್ಕೆ ಸಿಕ್ಕಿರುವ ಹೊಸ ದೃಷ್ಟಿಕೋನ. ಮುಂದೆ ಯಾರಾದರು ಇದನ್ನು ತುಂಬಾ ವಿಸ್ತೃತವಾಗಿ ಅಧ್ಯಯನ ಮಾಡಬಹುದು. ಮುಖ್ಯವಾಗಿ ಅವರ ‘ಗುಣಮುಖ’ ಕೃತಿ, ಸ್ವಲ್ಪ ಮಟ್ಟಿಗೆ, ಸಮಗ್ರ ವ್ಯಕ್ತಿತ್ವವನ್ನು ಚಿತ್ರಿಸುವುದನ್ನು ತುಂಬಾ ವಿವರವಾಗಿಯೇ ಹುಳಿಯಾರ್ ಅವರು ಚರ್ಚಿಸಿದ್ದಾರೆ.

ಲಂಕೇಶ್ ಅವರದ್ದು ತುಂಬಾ ನಿಷ್ಠುರದ ಮತ್ತು ಖಡಕ್ ಆದಂತಹ ವ್ಯಕ್ತಿತ್ವವೆನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಎಂಬತ್ತು ಮತ್ತು ತೊಂಬತ್ತನೇ ದಶಕಗಳಲ್ಲಿ ಯಾವೊಬ್ಬ ರಾಜಕಾರಣಿಯೂ ಸಹ ಅವರಿಂದ ಟೀಕೆಗೊಳಗಾಗದೆ ಪಾರಾಗಿಯೇ ಇಲ್ಲವೆಂಬುದನ್ನು ಯಾರಾದರೂ ಸಹ ಹೇಳುತ್ತಾರೆ. ಅದೇ ರೀತಿ ಸಾಹಿತ್ಯವಲಯದಲ್ಲಿಯೂ ಸಹ. ಅವರು ಎಷ್ಟು ಪ್ರಖರ ಖಚಿತ ಮತ್ತು ಖಂಡಿತವಾದಿ ಎನ್ನವುದನ್ನು, ತೇಜಸ್ವಿ ಅವರ ‘ಅಣ್ಣನ ನೆನಪು’ ಮತ್ತು ‘ಜುಗಾರಿ ಕ್ರಾಸ್’ ಪ್ರಕಟಣೆಗೊಂಡ ಸಂದರ್ಭದಲ್ಲಿ ನಡೆದಂತಹ ವಾಗ್ವಾದಗಳನ್ನು ನೆನಪಿಸಿಕೊಳ್ಳಬಹುದು. ಅದೇ ರೀತಿ ಹುಳಿಯಾರ್ ಅವರೇ ಲಂಕೇಶ್ ಪತ್ರಿಕೆಯ ‘ಬರೆವ ಬದುಕು’ ಅಂಕಣದಲ್ಲಿ ಡಿ.ಆರ್ ಬಗ್ಗೆ ಬರೆದುದಕ್ಕೆ ಪ್ರತಿಕ್ರಿಯೆಯಾಗಿ ನಡೆದ ಡಿ.ಆರ್, ಲಂಕೇಶ್ ಹಾಗು ಹುಳಿಯಾರ್ ನಡುವೆ ನಡೆದ ವಾಗ್ವಾದಗಳನ್ನು ಇಲ್ಲಿ ನೋಡಬಹುದು.

ಒಮ್ಮೆ ಲಂಕೇಶರ ಬಳಿ ಅವರ ಅಭಿಮಾನಿಯೊಬ್ಬ ಪತ್ರಿಕೆಯ ಅಂಕಣಗಳನ್ನು, ಮತ್ತಿತರ ಬರಹಗಳನ್ನು ಹೊಗಳುತ್ತಾನೆ. ಅವರು ಮರಳಿದ ಬಳಿಕ, ಹುಳಿಯಾರ್ ಅವರಿಗೆ, ಆ ವ್ಯಕ್ತಿಯ ಮತ್ತು ಆ ಹೊಗಳಿಕೆಯನ್ನು ಕುರಿತು ಹೀಗೆ ಹೇಳುತ್ತಾರೆ: ನಾಯಿಗಳು ಎಷ್ಟು ಲವ್ಲಿ ಎಂದರೆ, ಅವಕ್ಕೆ ಅಫೆಕ್ಷನೇಟ್ ಆಗಿ ಇರೋದು ಮಾತ್ರ ಗೊತ್ತಿರುತ್ತದೆ. ಭಟ್ಟಂಗಿತನ ಗೊತ್ತಿರಲ್ಲ.

(ನಟರಾಜ್ ಹುಳಿಯಾರ್)

ಮತ್ತೊಂದು ಸನ್ನಿವೇಶದಲ್ಲಿ, ಡಿ.ಆರ್. ಅವರ ಸುತ್ತಾಟ ಮತ್ತು ವಿದೇಶಿ ಪ್ರವಾಸಗಳನ್ನು ಕುರಿತು ‘ಅಮೇರಿಕಾದ ಒಬ್ಬ ಅಡಿಗೆಯವನು ಕೂಡ ಇಲ್ಲಿಗೆ ಬರಲು ಇಷ್ಟಪಡದೆ ಇರುವಾಗ ಇಲ್ಲಿಯ ಜಗದ್ಗುರುಗಳು, ಪ್ರಧಾನಿ, ಅಧ್ಯಕ್ಷರು ಅಲ್ಲಿಗೆ ಹೋಗಲು ಕ್ಯೂ ನಿಂತಿರುತ್ತಾರೆ. ಭಾರತೀಯರು ಹೋಗಬೇಕಾದಾಗ, ಹೋಗಬೇಕಾದ ಕಾರಣಕ್ಕೆ ವಿದೇಶಕ್ಕೆ ಹೋಗಲಿಲ್ಲ; ಅಲ್ಲಿಯ ವಿಜ್ಞಾನವನ್ನು ತರಲಿಲ್ಲ. ಜಾತಿವಾದಿಗಳ ಕೈಯಲ್ಲಿ ಈ ದೇಶ ಗಬ್ಬೆದ್ದು ಹೋಯಿತು; ಆದರೆ ನಿನ್ನಂಥವರು ಅಲ್ಲಿಗೆ ಹೋಗಿ ಉಜ್ವಲ ಭಾರತೀಯ ಪರಂಪರೆ, ಸಂಸ್ಕೃತಿಯ ಬಗ್ಗೆ ಸುಳ್ಳು ಹೇಳುತ್ತೀರಿ; ಆ ಬಗ್ಗೆ ಭಾಷಣ ಮಾಡಿ ಹೆಮ್ಮೆ ಪಡುತ್ತೀರಿ. ಮೊನ್ನೆ ಮೊನ್ನೆಯವರೆಗೂ ತಾಳೆಗರಿಯ ಮೇಲೆ ಬರೆಯುತ್ತಿದ್ದ, ಪ್ರಯೋಗಶಾಲೆ ಎಂದರೇನೆಂದು ಅರಿಯದ, ಮೌಢ್ಯದಲ್ಲಿ ಹೂತುಹೋಗಿದ್ದ ಈ ನಾಡಿನ ಬಗ್ಗೆ ಭ್ರಮೆಗಳನ್ನು ಬೆಳೆಸುತ್ತೀರಿ’ ಎಂದು ಹೇಳುತ್ತಾ ಟೀಕೆಯನ್ನು ಮಾಡುತ್ತಾರೆ. ಇದನ್ನೆಲ್ಲಾ ಹುಳಿಯಾರ್ ಅವರು ತುಂಬಾ ಸೂಕ್ಷ್ಮವಾಗಿ ಗ್ರಹಿಸಿ ಇಲ್ಲಿ ದಾಖಲುಮಾಡುವುದರ ಮೂಲಕ ಲೇಖಕನೊಬ್ಬನ ‘ಆಫ್ ದ ರೆಕಾರ್ಡ್’ ಎನ್ನಬಹುದಾದ ಮಾತುಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತಾರೆ.

ಡಿ.ಆರ್ ಕನ್ನಡ ಕಂಡ ಅತ್ಯಂತ ವಿಶಿಷ್ಟ ಚಿಂತಕ. ಅವರ ಅಲ್ಲಮಪ್ರಭುವಿನ ಮೇಲಿನ ಪುಸ್ತಕದ ಬಗ್ಗೆ ಅಷ್ಟಾಗಿ ವಿಸ್ತೃತವಾಗಿ ಚರ್ಚೆಯಾಗಿಲ್ಲ. ಆದರೆ ಮೊದಲಬಾರಿಗೆ ಎಂಬಂತೆ ತುಂಬಾ ಸುದೀರ್ಘವಾಗಿ ಅದರ ಬಗ್ಗೆ ಮತ್ತು ಅದು ಹುಟ್ಟಿದ ಸಂದರ್ಭವನ್ನು ಹುಳಿಯಾರ್ ಅವರು ಬಿಚ್ಚಿಡುತ್ತಾರೆ.

ಲಂಕೇಶ್ ಅಗಲಿದ ಬಳಿಕ ಪತ್ರಿಕೆಯಲ್ಲಿ ಹುಳಿಯಾರ್ ಅವರು ಸ್ವರಕ ಎನ್ನುವ ಬರಹದಲ್ಲಿ ಈ ಇಬ್ಬರನ್ನು ಮುಖಾಮುಖಿಯಾಗಿಸಿ ಕಾಲ್ಪನಿಕ ಕಥನಬರೆಯುತ್ತಾರೆ. ಇದರ ನಿರೂಪಣಾ ತಂತ್ರವನ್ನು ಹುಳಿಯಾರ್ ಅವರು ತಮ್ಮ ಗುರು ಡಿ.ಆರ್ ಅವರ ಗಾಂಧಿ ಮತ್ತು ಅಂಬೇಡ್ಕರ್ ಒಂದು ಸ್ವರ್ಗೀಯ ಕಥನದಿಂದ ನೇರವಾಗಿ ಕಾಪಿ ಮಾಡಿದ್ದಾರೆ ಎಂದು ಹೇಳುವುದು ಟೀಕೆಯಲ್ಲ. ಹಾಗೂ ಲಂಕೇಶ್ ಬಗ್ಗೆ ಎಮೋಷನಲ್ ಆಗಿ ಬರೆಯುವ ಹುಳಿಯಾರ್ ಅವರ ಪೆನ್ನು ಡಿ.ಆರ್ ಬಗ್ಗೆ ಬರೆಯುವಾಗ ತುಸು ಡ್ರೈ ಆಗಿಬಿಡುತ್ತೆ!

ಈ ಕೃತಿಯ ಮೂಲಕ ಮತ್ತೊಮ್ಮೆ ಲಂಕೇಶ್ ದಿನಗಳನ್ನು ನೆನಪಿಸಿದ್ದಕ್ಕೆ ಹುಳಿಯಾರ್ ಸರ್ ಗೆ ಒಂದು ಪ್ರೀತಿಯ ಕೃತಜ್ಞತೆ.

About The Author

ಎಚ್ ಆರ್ ರಮೇಶ್

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.

1 Comment

  1. ಗಣಪತಿ ಬಾಳೆಗದ್ದೆ

    ganapatibalegadde@gmail.com.com

    ಎಚ್.ಆರ್.ರಮೇಶರ ಬರಹ ಇಷ್ಟವಾಯಿತು.

    ವಂದನೆಗಳೊಂದಿಗೆ,
    -ಗಣಪತಿ ಬಾಳೆಗದ್ದೆ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ