Advertisement
ಬಳ್ಳಿಗಾವೆಯ ತ್ರಿಪುರಾಂತಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಬಳ್ಳಿಗಾವೆಯ ತ್ರಿಪುರಾಂತಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಒಳಗುಡಿಯ ಮಂಟಪದಲ್ಲಿ ಗರ್ಭಗುಡಿಯ ಶಿವಲಿಂಗದತ್ತ ಮುಖಮಾಡಿ ಕುಳಿತ ನಂದಿ ಆಕರ್ಷಕ. ಬಾಲ, ಗೊರಸು, ಗಂಗೆದೊಗಲು ಮೊದಲಾಗಿ ಸುಸ್ಥಿತಿಯಲ್ಲಿರುವ ಈ ನಂದಿಯ ಶಿಲ್ಪ ನಮ್ಮ ನಾಡಿನಲ್ಲಿರುವ ಈ ಮಾದರಿಯ ಅತ್ಯಾಕರ್ಷಕ ವಿಗ್ರಹಗಳಲ್ಲೊಂದೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಡುಮಂಟಪದ ಕಂಬಗಳ ಬುಡದ ಚೌಕದಲ್ಲಿ ಕೀರ್ತಿಮುಖಗಳೊಳಗೆ ದೇವತೆಯರ ಶಿಲ್ಪಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಬಾಗಿಲಲ್ಲಿ ಆಚೀಚೆಗೆ ಕಂಡುಬರುವ ಸುಂದರಿಯರ ಶಿಲ್ಪಗಳು ಮನಸೆಳೆಯುತ್ತವೆ. ಕಲ್ಯಾಣ ಚಾಲುಕ್ಯರ ಉಳಿದ ನಿರ್ಮಾಣಗಳಲ್ಲಿ ಕಂಡುಬರದ ಈ ಅಪೂರ್ವಶಿಲ್ಪಗಳನ್ನು ವನಸುಂದರಿಯರೆಂದು ಕರೆಯಲಾಗಿದೆ. ಈ ಆಳೆತ್ತರದ ಸುಂದರ ವಿಗ್ರಹಗಳಿಗೂ ಒಳಗುಡಿಯ ತೋರಣದ ಕಂಬಕ್ಕೂ ನಡುವೆ ಹೆಣೆದುಕೊಂಡ ನಾಗನಾಗಿಣಿಯರ ಮೋಹಕ ಶಿಲ್ಪಗಳು ಜಾಲಂದ್ರವನ್ನು ರೂಪಿಸಿರುವ ಬಗೆ ಅದ್ಭುತವಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತೈದನೇಯ ಕಂತು

 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿಗೆ ಸೇರಿದ ಬಳ್ಳಿಗಾವೆ ಶಿರಾಳಕೊಪ್ಪದಿಂದ ಎರಡು ಕಿ.ಮೀ. ದೂರದಲ್ಲಿದೆ. ನಾಟ್ಯರಾಣಿ ಶಾಂತಲೆ ಹಾಗೂ ಸಿದ್ಧಪುರುಷ ಅಲ್ಲಮಪ್ರಭು ಇದೇ ಬಳ್ಳಿಗಾವೆಯಲ್ಲಿ ಜನಿಸಿದವರು. ವಲ್ಲಿಗ್ರಾಮ, ಬಲಿಪುರ, ವೀರಬಳಂಜಪಟ್ಟಣ ಎಂಬಿವೇ ಮೊದಲಾದ ಹೆಸರುಗಳಿಂದ ಖ್ಯಾತಿ ಪಡೆದಿದ್ದ ಬಳ್ಳಿಗಾವೆ ಶೈವ ಕಾಳಾಮುಖಪಂಥದ ಮೂಲಸ್ಥಾನ ಎಂಬ ಹಿರಿಮೆಯನ್ನೂ ಪಡೆದಿದೆ. ಹೊಯ್ಸಳ ದೇವಾಲಯಗಳ ನಿರ್ಮಾಣದಲ್ಲಿ ಇಲ್ಲಿನ ಅನೇಕ ಪ್ರಸಿದ್ಧ ಶಿಲ್ಪಿಗಳೂ ಪಾಲ್ಗೊಂಡಿದ್ದರಂತೆ. ಇಷ್ಟೆಲ್ಲ ಹೆಸರುಪಡೆದ ಬಳ್ಳಿಗಾವೆಯಲ್ಲಿ ಅನೇಕ ಗುಡಿಗಳಿರುವುದರಲ್ಲಿ ಅಚ್ಚರಿಯೇನೂ ಇಲ್ಲ.

ಕೇದಾರೇಶ್ವರ, ತ್ರಿಪುರಾಂತಕೇಶ್ವರ, ಗಂಡಭೇರುಂಡೇಶ್ವರ, ವೀರಭದ್ರ, ಸೋಮೇಶ್ವರ ಮೊದಲಾಗಿ ಅನೇಕ ದೇವಾಲಯಗಳು ಈ ಗ್ರಾಮದಲ್ಲಿದ್ದು ಪುರಾತತ್ವ ಇಲಾಖೆಯ ಸುಪರ್ದಿನಲ್ಲಿ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿವೆ.

ಶಾಂತಲಾದೇವಿಯು ಹೊಯ್ಸಳ ಅರಸುಕುವರ ವಿಷ್ಣುವರ್ಧನನ ಕೈಹಿಡಿದಿದ್ದು ತ್ರಿಪುರಾಂತೇಶ್ವರ ಗುಡಿಯ ಮಂಟಪದಲ್ಲೇ ಅಂತೆ. ಗ್ರಾಮದ ಒಂದು ಮೂಲೆಯಲ್ಲಿರುವ ಗುಡಿ. ಬಲಬದಿಯಲ್ಲಿ ಕಾಳಾಮುಖ ಮಠದ ಅವಶೇಷಗಳು ಕಾಣುತ್ತವೆ. ತ್ರಿಪುರಾಂತೇಶ್ವರ ದೇವಾಲಯ ಹೊರನೋಟಕ್ಕೆ ತೀರಾ ಸರಳವಾದ ದೊಡ್ಡ ಕಟ್ಟಡ. ಚತುಷ್ಕೂಟವೆಂದು ಹೇಳಲಾಗಿರುವ, ಆದರೆ, ಗೋಪುರಗಳಿಲ್ಲದ ದೇಗುಲ. ಎತ್ತರದ ಜಗಲಿ. ಸುತ್ತ ವಿಶಾಲ ಪ್ರದಕ್ಷಿಣಾಪಥ. ದೇಗುಲದ ಬಲಬದಿಗೆ ಮಂಟಪದ ಕುರುಹು. ದೊಡ್ಡ ವೇದಿಕೆಯಿದ್ದು ಶಾಂತಲೆಯ ವಿವಾಹ ಇಲ್ಲೇ ನಡೆದಿರಬೇಕು.

ಮಹಿಷಮರ್ದಿನಿಯ ಭಗ್ನರೂಪವುಳ್ಳ ಜಾಲಂದ್ರದ ಕೆತ್ತನೆಯೊಂದನ್ನು ಬಿಟ್ಟಂತೆ ಇಡೀ ಕಟ್ಟಡದ ಭಿತ್ತಿಯ ಮೇಲೆಲ್ಲೂ ಶಿಲ್ಪಗಳ ಕುರುಹಿಲ್ಲ. ಆದರೆ ಮುಂದಿನ ಪ್ರವೇಶಮಂಟಪದ ಮೆಟ್ಟಿಲುಗಳನ್ನು ಏರುವೆಡೆ ಮೂರೂ ಕಡೆಯ ಕೆಳಭಾಗದ ಪಟ್ಟಿಕೆಗಳ ಮೇಲೆ ಮಿಥುನಶಿಲ್ಪಗಳೂ, ಪಂಚತಂತ್ರದ ಕಥೆಗಳೂ, ರಾಮಾಯಣದ ದೃಶ್ಯಾವಳಿಯೂ ಚಿತ್ರಿತವಾಗಿವೆ. ಸೋಪಾನಗಳ ಬದಿಯ ವ್ಯಾಳಿಗಳ ಕೆತ್ತನೆಯೂ ಸುಂದರವಾಗಿದೆ.

ಮುಖಮಂಟಪದ ಸುತ್ತ ಅಂಚಿನಲ್ಲಿ ಕಕ್ಷಾಸನಗಳು. ಮಂಟಪದ ಕಂಬಗಳು ತಮ್ಮ ವಿಶಿಷ್ಟ ಕೆತ್ತನೆಯ ವಿನ್ಯಾಸದಿಂದ ಗಮನಸೆಳೆಯುತ್ತವೆ. ಮಂಟಪದ ನಡುಭಾಗದ ನಾಲ್ಕು ಕಂಬಗಳ ನಡುಭಾಗ ಉಬ್ಬಿಕೊಂಡಿದ್ದು ಅವುಗಳ ಮೇಲೆ ನಾಲ್ಕೂ ದಿಕ್ಕುಗಳಲ್ಲಿ ಕೈಗಳನ್ನು ಮೇಲೆತ್ತಿ ಹಿಡಿದ ಕುಬ್ಜ ಯಕ್ಷರನ್ನು ಚಿತ್ರಿಸಿದೆ. ಒಳಗುಡಿಯ ಬಾಗಿಲತ್ತ ಕಣ್ಣುಹೊರಳಿಸಿದರೆ ಎದುರಾಗುವ ಜಾಲಂದ್ರ (ಕಿಟಕಿ)ಗಳೂ ದ್ವಾರಪಾಲಕರ ಶಿಲ್ಪಗಳೂ ಬೆರಗುಮೂಡಿಸುತ್ತವೆ. ಜಾಲಂದ್ರಗಳ ಮೇಲೆ ಹೂಬಳ್ಳಿಗಳೊಳಗೆ ನರ್ತಕ-ನರ್ತಕಿಯರನ್ನು ಚಿತ್ರಿಸಿರುವ ಬಗೆ ಅತಿಶಯವಾಗಿದೆ. ದ್ವಾರಬಂಧದಲ್ಲಿ ಕೆತ್ತಲಾಗಿರುವ ನಾಗ-ನಾಗಿಣಿಯರ ಹೆಣಿಗೆಯನ್ನು ಜಾಲಂದ್ರದ ರಂಧ್ರಗಳೋಪಾದಿಯಲ್ಲಿ ತೆರವುಗಳನ್ನಿಟ್ಟು ರೂಪಿಸಿರುವ ರೀತಿ ಅಸಾಧಾರಣವಾಗಿದೆ.

ದ್ವಾರಪಾಲಕರ ಶಿಲ್ಪಗಳು ಸಾಕಷ್ಟು ಭಗ್ನಗೊಂಡಿದ್ದರೂ ಶಿಲ್ಪಿಯ ಅನನ್ಯ ಪ್ರತಿಭೆಯನ್ನು ಮಿಗಿಲಾಗಿ ತೋರ್ಪಡಿಸುತ್ತವೆ. ಶಿರಸ್ತ್ರಾಣದಂತಹ ಕಿರೀಟಗಳನ್ನು ಧರಿಸಿ ಸರ್ವಾಭರಣ ಶೋಭಿತರಾದ ಈ ದ್ವಾರಪಾಲಕರ ತೊಡುಗೆಗಳಲ್ಲಿ ಅಲ್ಲಲ್ಲಿ ಕಂಡರಿಸಿರುವ ಕಪಾಲಗಳು, ಕಿರೀಟ, ಆಭರಣಪಟ್ಟಿಕೆಗಳೊಳಗೆ ತೆಳುವಾದ ಕಡ್ಡಿಯನ್ನೂ ತೋರಿಸಬಹುದಾದಷ್ಟು ಸೂಕ್ಷ್ಮಕೆತ್ತನೆ ಅಚ್ಚರಿ ಹುಟ್ಟಿಸುತ್ತದೆ. ಭಟರ ಪಾದದೆಡೆಯಲ್ಲಿ ಹೆಡೆಯೆತ್ತಿ ನಿಂತ ಸರ್ಪವನ್ನು ಕೆತ್ತಿರುವ ಪರಿಯೂ ಸೊಗಸಾಗಿದೆ.

ದ್ವಾರಬಂಧದ ತೋರಣದಲ್ಲೂ ಈ ಶಿಲ್ಪಕಲಾಚಾತುರ್ಯವು ಮುಂದುವರೆದಿದ್ದು ಗಜಲಕ್ಷ್ಮಿಯ ಕೆತ್ತನೆ, ನಾಗನಾಗಿಣಿಯರು, ನರ್ತಕಿಯರು ಮೊದಲಾದವುಗಳ ಕೆತ್ತನೆಯಲ್ಲಿ ಅಲ್ಲಲ್ಲಿ ಟೊಳ್ಳಿನ ತೆರವುಗಳನ್ನು ಬಿಟ್ಟಿರುವುದರಿಂದ ಮೂರು ಆಯಾಮಗಳ ನೋಟ ಲಭ್ಯವಾಗಿದೆ. ಒಳಛಾವಣಿ ಎಂದರೆ ಭುವನೇಶ್ವರಿಯಲ್ಲಿ ಈಗ ನೋಡಲು ಲಭ್ಯವಿರುವ ಕೆತ್ತನೆ ಸ್ವಲ್ಪವೇ ಆದರೂ ವಿಶೇಷವಾದುದೇ. ಅಷ್ಟದಿಕ್ಪಾಲಕರು ತಮ್ಮ ವಾಹನಗಳನ್ನೇರಿ ಪರಿವಾರದೊಡನಿರುವ ದೃಶ್ಯಾವಳಿ ಇಲ್ಲಿ ಚಿತ್ರಿತವಾಗಿದೆ.

ಒಳಗುಡಿಯ ಮಂಟಪದಲ್ಲಿ ಗರ್ಭಗುಡಿಯ ಶಿವಲಿಂಗದತ್ತ ಮುಖಮಾಡಿ ಕುಳಿತ ನಂದಿ ಆಕರ್ಷಕ. ಬಾಲ, ಗೊರಸು, ಗಂಗೆದೊಗಲು ಮೊದಲಾಗಿ ಸುಸ್ಥಿತಿಯಲ್ಲಿರುವ ಈ ನಂದಿಯ ಶಿಲ್ಪ ನಮ್ಮ ನಾಡಿನಲ್ಲಿರುವ ಈ ಮಾದರಿಯ ಅತ್ಯಾಕರ್ಷಕ ವಿಗ್ರಹಗಳಲ್ಲೊಂದೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಡುಮಂಟಪದ ಕಂಬಗಳ ಬುಡದ ಚೌಕದಲ್ಲಿ ಕೀರ್ತಿಮುಖಗಳೊಳಗೆ ದೇವತೆಯರ ಶಿಲ್ಪಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಬಾಗಿಲಲ್ಲಿ ಆಚೀಚೆಗೆ ಕಂಡುಬರುವ ಸುಂದರಿಯರ ಶಿಲ್ಪಗಳು ಮನಸೆಳೆಯುತ್ತವೆ. ಕಲ್ಯಾಣ ಚಾಲುಕ್ಯರ ಉಳಿದ ನಿರ್ಮಾಣಗಳಲ್ಲಿ ಕಂಡುಬರದ ಈ ಅಪೂರ್ವಶಿಲ್ಪಗಳನ್ನು ವನಸುಂದರಿಯರೆಂದು ಕರೆಯಲಾಗಿದೆ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಈ ಆಳೆತ್ತರದ ಸುಂದರ ವಿಗ್ರಹಗಳಿಗೂ ಒಳಗುಡಿಯ ತೋರಣದ ಕಂಬಕ್ಕೂ ನಡುವೆ ಹೆಣೆದುಕೊಂಡ ನಾಗನಾಗಿಣಿಯರ ಮೋಹಕ ಶಿಲ್ಪಗಳು ಜಾಲಂದ್ರವನ್ನು ರೂಪಿಸಿರುವ ಬಗೆ ಅದ್ಭುತವಾಗಿದೆ. ಒಳ ಅಂಚಿಗೆ ನಿಂತ ಕಂಬಗಳ ಮೇಲೆ ಕುಂಭಾಕೃತಿಗಳೂ ವಜ್ರ, ಹೂಬಳ್ಳಿ ಮತ್ತಿತರ ವಿವಿಧ ವಿನ್ಯಾಸಗಳೂ ಕಂಡುಬರುತ್ತವೆ. ಬುಡದ ಚೌಕದಲ್ಲಿ ರತಿ-ಮನ್ಮಥರನ್ನು ಚಿತ್ರಿಸಿದೆ. ದ್ವಾರಲಲಾಟ ಎಂದರೆ ಬಾಗಿಲಚೌಕಟ್ಟಿನ ಮೇಲುಭಾಗದಲ್ಲಿ ನಡುವೆ ಗಜಾಸುರ ಸಂಹಾರಿ ಶಿವನನ್ನೂ ಆಚೀಚೆಗೆ ದೇವಗಣಗಳೊಡನೆ ಬ್ರಹ್ಮವಿಷ್ಣುಗಳನ್ನೂ ಚಿತ್ರಿಸಿದೆ.

ಕಲ್ಯಾಣ ಚಾಲುಕ್ಯರ ಶಿಲ್ಪಕಲೆಯ ಅತಿಸೊಬಗಿನ ಮಾದರಿಗಳಲ್ಲಿ ಇದೂ ಒಂದು. ಗುಡಿಯ ನಡುಮಂಟಪದಲ್ಲಿ ಪದ್ಮಾಸನದಲ್ಲಿ ಕುಳಿತ ಸರಸ್ವತಿ, ಗಣಪತಿ, ಸಪ್ತಮಾತೃಕೆಯರು ಹಾಗೂ ವಿಷ್ಣುವಿನ ದೊಡ್ಡಶಿಲ್ಪವೊಂದಿದ್ದು ಎಲ್ಲವೂ ಭಗ್ನಸ್ಥಿತಿಯಲ್ಲಿವೆ.

About The Author

ಟಿ.ಎಸ್. ಗೋಪಾಲ್

ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ