Advertisement
ನಟ ರಾಜ್‌ಕುಮಾರ್ ಕೇಳಿದ ಭೂಮಿ ತೂಕದ ಕ್ಷಮೆ

ನಟ ರಾಜ್‌ಕುಮಾರ್ ಕೇಳಿದ ಭೂಮಿ ತೂಕದ ಕ್ಷಮೆ

ಅವರ ಈ ಹಾಡು ನನ್ನನ್ನು ಯಾವ ಪರಿ ಹಿಂಬಾಲಿಸೋಕೆ ಶುರುಮಾಡಿತೆಂದರೆ, ಕ್ಲಾಸಿಗೆ ಹೋಗುವ ಮುಂಚೆ ದಿನವೂ ಕೇಳಿ-ಕೇಳಿ, ಪ್ಲೇ ಲಿಸ್ಟ್‌ನಲ್ಲಿ ಮೊದಲ ಪಟ್ಟಕ್ಕೇರಿ ಕುಂತಿತ್ತು. ಅದಕ್ಕೆ ಹಲವು ಕಾರಣಗಳಿದ್ದವು. ತುಂಬಾ ಬೇಸರಾದಾಗ ರಫಿ ಹಾಡು ಕೇಳುವ ಅಭ್ಯಾಸ ಇದ್ದುದುಂಟು. ದುಃಖದಲ್ಲಿ ಅದ್ದಿ ತೆಗೆದೂ, ಆ ದುಃಖದಿಂದ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವ ಆಪ್ತ ದನಿಯದು. ಆದರೆ, ರಾಜ್‌ಕುಮಾರ್ ಈ ಹಾಡಿನಲ್ಲಿ ದುಃಖವನ್ನು ಯಾವ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆಂದರೆ, ಬಹುಶಃ ದುಃಖದ ತುತ್ತತುದಿ ಅಂತೇನಾದರೂ ಇದ್ದರೆ, ಅದು ಈ ಹಾಡೇ.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ ಇಂದಿನಿಂದ, ಹದಿನೈದು ದಿನಗಳಿಗೊಮ್ಮೆ

 

ಓಲ್ಡ್ ಬಾಯ್ಸ್ ಹಾಸ್ಟೆಲ್‌ನಿಂದ ಹೊರಬಿದ್ದು, ಮೊಬೈಲ್ ಪ್ಲೇ ಲಿಸ್ಟ್ ಒತ್ತಿದೆ. ‘ಸಿ ಎ ಟಿ ಕ್ಯಾಟ್, ಕ್ಯಾಟ್ ಮಾನೆ ಬಿಲ್ಲಿ…’ ಶುರುವಾಯ್ತು. ಪಲ್ಲವಿ ಕೊನೆಯಲ್ಲಿನ ಆಲಾಪ ಕೇಳಿ ಕಿಸಕ್ಕನೆ ನಗು. ಥೋ… ಈ ಮನುಷ್ಯ ಕಿಶೋರ್ ನಮ್ ಥರಾನೇ ಮಳ್ಳು ಅನ್ನಿಸಿ ಒಳಗೊಳಗೇ ಹಿಗ್ಗು. ವಾಚು ನೋಡಿಕೊಂಡೆ. ಹೆಜ್ಜೆ ಬಿರುಸಾದವು.

ಕುವೆಂಪು ಯುನಿವರ್ಸಿಟಿಯ ಹಳೆಯ ಹುಡುಗರ ಹಾಸ್ಟೆಲ್‌ನಿಂದ ನಮ್ಮ ಜರ್ನಲಿಸಂ ಡಿಪಾರ್ಟ್‌ಮೆಂಟ್‌ಗೆ ಎಷ್ಟೇ ನಿಧಾನ ನಡೆದರೂ ನಾಲ್ಕು ನಿಮಿಷ. ಕಂಡದ್ದನ್ನೆಲ್ಲ ನಿಂತು ದಿಟ್ಟಿಸುತ್ತ ತಲುಪಿದರೂ ಎಂಟು ನಿಮಿಷ, ಅಷ್ಟೆ. ಆದರೆ, ನನಗೆ ಮಾತ್ರ, ಅದೆಷ್ಟೇ ಹೆಣಗಿದರೂ ಹನ್ನೆರಡರಿಂದ ಹದಿನೈದು ನಿಮಿಷ ಬೇಕಿತ್ತು. ಬೆಳಗ್ಗೆಯೇ ಬೇಗ ಎದ್ದು, ವಾಕು ಮುಗಿಸಿ ವಾಪಸು ಬಂದು, ಹೊಂದಾಣಿಕೆ ಮೇಲೆ ಹೇಗೋ ಮೈಗೆ ನೀರು ತಾಗಿಸಿಕೊಂಡು, ಬಟ್ಟೆ ಹಾಕಿಕೊಳ್ಳುತ್ತಲೇ ತಲೆಗೂದಲ ಮೇಲೆ ಅತ್ತಿಂದಿತ್ತ ಬಾಚಣಿಕೆ ಹಾರಿಸಿ, ಊಟದ ಹಾಲ್‌ಗೆ ಓಡಿ, ಟೀವಿಯಲ್ಲಿ ಗಂಟಲು ಶೋಷಣೆ ಮಾಡಿಕೊಳ್ಳುವ ಹೊಸ ಡಿಗಿಡ್‌ಡಿಚ್ ಹಾಡು ಕಿವಿಗೇರಿಸಿಕೊಂಡು, ರೂಮಿಗೆ ವಾಪಸಾಗುತ್ತ ಆ ಹಾಡನ್ನು ಅಲ್ಲಿಯೇ ಕಾರಿಡಾರಿನಲ್ಲಿ ಕೊಡವಿ, ನೋಟ್‌ಬುಕ್ ಎತ್ತಿಕೊಂಡು, ರೂಮ್‌ಗೆ ಬೀಗ ಹಾಕಿ, ಗೇಟು ದಾಟಿದ ತಕ್ಷಣ ಮೊಬೈಲಿನಲ್ಲಿ ಹಾಡು ಶುರು. ಆಹ್… ಬೇಸಿಗೆಯ ಮಧ್ಯಾಹ್ನ ಯದ್ವಾತದ್ವಾ ಓಡಿ ಓಡೋಡಿ ಹೋಗಿ ನದಿಯಲ್ಲಿ ತಣ್ಣಗೆ ಮುಳುಗಿದಷ್ಟು ನೆಮ್ಮದಿ. ಕನಿಷ್ಠ ಮೂರಾದರೂ ಹಾಡು ತಲೆಗೇರಿಸಿಕೊಂಡು ಹೋಗಿ ಕ್ಲಾಸಲ್ಲಿ ಕುಂತರೆ ದಿನವೆಲ್ಲ ಹಸನು.

ಅವತ್ತು, ‘ಸಿ ಎ ಟಿ ಕ್ಯಾಟ್, ಕ್ಯಾಟ್ ಮಾನೆ ಬಿಲ್ಲಿ…’ ಮುಗಿದ ನಂತರ ಬಂದದ್ದು, ‘ಹೂವಿಂದ ಬರೆವ ಕತೆಯ.‘  ರಾಜ್‌ಕುಮಾರ್ ಅಭಿನಯದ ‘ಹಾವಿನ ಹೆಡೆ’ ಸಿನಿಮಾದ್ದು. “ಓಯ್… ಓಯ್… ಓಯ್… ಒಂದು ನಿಮಿಷ…” ಅಂತ ನನಗೆ ನಾನೇ ಹೇಳಿಕೊಂಡು, ಗಕ್ಕನೆ ನಿಂತು, ಪ್ಲೇ ಲಿಸ್ಟ್ ಮೇಲೆ ಕಣ್ಣಾಡಿಸಿದೆ. ಈ ಶೋಕಗೀತೆ ನನ್ನ ಹಾಡಿನ ಪಟ್ಟಿಗೆ ಸೇರಿದ್ದು ಹೇಗೆ? ಹಾಸ್ಟೆಲಿನಲ್ಲಿ, ಕ್ಯಾಂಪಸ್‌ನಲ್ಲಿ, ಊರಿನಲ್ಲಿ, ಮನೆಯಲ್ಲಿ ನನಗೆ ಗೊತ್ತಿರುವ ಯಾರೇ ಆದರೂ ಶೋಕಗೀತೆ ಹಾಕಿದರೆ, ಖುದ್ದಾಗಿ ನಿಂತು ಅದನ್ನು ಬಂದ್ ಮಾಡಿಸಿ, “ಎಂಥ ಮಾರ್ರೆ ನೀವು…! ಪ್ಯಾಥೋ ಸಾಂಗೆಲ್ಲ ಕೇಳ್ತಾರಾ?” ಅಂತೊಂದು ಡೈಲಾಗು ಹೊಡೆದು, ಬೇರೆ ಹಾಡು ಹಾಕುವಂತೆ ತಾಕೀತು ಮಾಡುತ್ತಿದ್ದವನ ಬಳಿ ಈ ಹಾಡು!

ಹಾಡು ಶುರುವಾದರೆ ಮುಗಿಯುವ ತನಕ ಕೇಳಿಸಿಕೊಳ್ಳುವ ರೂಢಿ ಇತ್ತಲ್ಲ? ‘ಹೂವಿಂದ ಬರೆವ ಕತೆಯ…’ ಮುಂದುವರಿಯಿತು. ಪಲ್ಲವಿ ಮುಗಿಯುತ್ತಲೇ, ‘ಸ್ಸಾರಿ… ಐ ಆಮ್ ವೆರಿ ಸ್ಸಾರಿ…’ ಅಂತೊಂದು ಸಾಲು. ಅಕ್ಷರಶಃ ಮೈ ಕಂಪಿಸಿತು. ನಡೆಯಲು ಶುರುಮಾಡಿದ್ದವ ಮತ್ತೆ ನಿಂತೆ. ಆಗಿನ ಕ್ಯಾಂಪಸ್ ಕ್ಲಿನಿಕ್ ಬಿಲ್ಡಿಂಗ್ ಎದುರು ಫುಟ್‌ಪಾತಿನಲ್ಲಿ ಕುಂತು, ರಿವೈಂಡ್ ಮಾಡಿ ಮತ್ತೆ-ಮತ್ತೆ ಕೇಳಿಸಿಕೊಂಡೆ. ಎರಡನೇ ಚರಣದ, ‘ನಿನ್ನಂತೆ ನೊಂದೆ ನಾನೂ…’ ಕಿವಿಗೆ ಬಿದ್ದಾಕ್ಷಣ ಕಣ್ಣಾಲಿ ತುಂಬಿದವು. ಇಡೀ ದಿನ ಅದೇ ಹಾಡಿನ ಗುಂಗು. ಸಂಜೆ ಹೋಗಿ ಮತ್ತೆ ಕೇಳಿಸಿಕೊಂಡೆ. ಹಾಸ್ಟೆಲ್‌ನ ಗೆಳೆಯರಿಗೆಲ್ಲ, “ರಾಜ್ಕುಮಾರ್ ಸ್ಸಾರಿ ಹೇಳಿರೋದು ಕೇಳಿಸ್ಕಳ್ರೋ, ಎಷ್ಟ್ ಚಂದಿದೆ,” ಅಂತ ಪ್ರೀತಿಯಿಂದ ಕೇಳಿಸಿದೆ. ಪ್ರೇಮದಲ್ಲಿ ಮುಳುಗಿದ್ದ ಅವರೆಲ್ಲ ದೊಡ್ಡ ನಿಧಿ ಸಿಕ್ಕಂತೆ ಸಂಭ್ರಮಿಸಿದರು.

ಆಹ್… ಬೇಸಿಗೆಯ ಮಧ್ಯಾಹ್ನ ಯದ್ವಾತದ್ವಾ ಓಡಿ ಓಡೋಡಿ ಹೋಗಿ ನದಿಯಲ್ಲಿ ತಣ್ಣಗೆ ಮುಳುಗಿದಷ್ಟು ನೆಮ್ಮದಿ. ಕನಿಷ್ಠ ಮೂರಾದರೂ ಹಾಡು ತಲೆಗೇರಿಸಿಕೊಂಡು ಹೋಗಿ ಕ್ಲಾಸಲ್ಲಿ ಕುಂತರೆ ದಿನವೆಲ್ಲ ಹಸನು.

ನಂತರದಲ್ಲಿ ನನ್ನೊಳಗೆ ಲೆಕ್ಕಾಚಾರವೊಂದು ಶುರುವಾಯಿತು. ನಾನು ಅದುವರೆಗೂ ಕೇಳಿಸಿಕೊಂಡಿದ್ದ, ಓದಿದ್ದ, ನೋಡಿದ್ದ, ಹೇಳಿದ್ದ ಕ್ಷಮೆಯ ಪ್ರಸಂಗಗಳೆಲ್ಲವೂ ಒಂದೊಂದೇ ತೆರೆದುಕೊಂಡವು. ಅಸಲಿಗೆ, ಪ್ರೀತಿಗಿಂತಲೂ ಕ್ಷಮೆಯೇ ಹೆಚ್ಚು ಆಚರಣೆಯಲ್ಲಿರುವ ದೇಶ ನಮ್ಮದು. ಇಂಡಿಯಾದ ಎಲ್ಲ ಹೆಣ್ಣುಮಕ್ಕಳಿಗೂ ಅವರ ಸುತ್ತಮುತ್ತಲ ಗಂಡಸರನ್ನು ಕ್ಷಮಿಸಲೆಂದು ಬಾಲ್ಯದಿಂದಲೇ ವಿಶೇಷ ತರಬೇತಿ ಕೊಡಲಾಗುತ್ತದೆ. ಅದೂ ಎಂಥ ಅದ್ಭುತ ಕ್ಷಮೆ ಅಂದರೆ, ಗಂಡಸು ಅದಕ್ಕಾಗಿ ತನ್ನನ್ನು ಕ್ಷಮಿಸೆಂದು ಬಾಯಿ ಬಿಟ್ಟು ಕೇಳುವ ಪ್ರಮೇಯವೇ ಇಲ್ಲ. ಸುಮ್ಮನೆ, ಮನಸ್ಸಿನಲ್ಲೇ ಕ್ಷಮಿಸುತ್ತ ಮುಂದಕ್ಕೆ ಹೋಗಬೇಕಷ್ಟೆ!

ಗಂಡನನ್ನು, ದೇವರನ್ನು, ದೊಡ್ಡವರು ಎನಿಸಿಕೊಂಡವರನ್ನು, ಅಧಿಕಾರದಲ್ಲಿ ಇರುವವರನ್ನು, ನ್ಯಾಯಮೂರ್ತಿಗಳನ್ನು, ಅಧಿಕಾರಿಗಳನ್ನು, ವಿಶೇಷವಾಗಿ ಪೊಲೀಸರನ್ನು, ಹಣವಂತರನ್ನು, ಮೇಲ್ಜಾತಿ ಮಂದಿಯನ್ನು, ಬಹುಸಂಖ್ಯಾತರನ್ನು… ಹೀಗೆ ಯಾರ್ಯಾರನ್ನು ಪ್ರಶ್ನಿಸುವುದು ಅಪರಾಧವೋ ಅಂಥವರನ್ನೆಲ್ಲ ಆಗಾಗ್ಗೆ ಮನಸ್ಸಲ್ಲೇ ಕ್ಷಮಿಸುತ್ತ, ಅವರ ಬಗೆಗಿನ ತಕರಾರುಗಳನ್ನು ಎದೆಯೊಳಗೆ ಹುಗಿದುಕೊಳ್ಳುತ್ತ ನಡೆಯಬೇಕು. ಇದಕ್ಕಾಗಿ ದೊಡ್ಡ-ದೊಡ್ಡ ಗುರುಗಳ ತರಬೇತಿ ಕೇಂದ್ರಗಳುಂಟು. ಅದ್ಭುತ ಅಲ್ಲವೇ? ಆದರೆ, ಕ್ಷಮಿಸುವುದನ್ನು ಈ ಪರಿ ಟ್ಯೂನ್ ಮಾಡಿದ ಈ ದೇಶದ ಸಾಮಾಜಿಕ ವ್ಯವಸ್ಥೆಗೆ, ಕನಿಷ್ಠಪಕ್ಷ ಎದೆಯಾಳದಿಂದ ಸರಳವಾಗಿ ಕ್ಷಮೆ ಕೇಳುವುದು ಹೇಗೆಂದು, ನಿಜವಾದ ಕ್ಷಮೆ ಹೇಗಿರುತ್ತದೆಂದು ಯಾರೂ ಹೇಳಿಕೊಡಲಿಲ್ಲವೇ ಎಂಬ ಕೇಳ್ವಿ ಡಿಕ್ಕಿ ಹೊಡೆಯಿತು. ಈ ಎಲ್ಲ ಬೇಗುದಿಗೂ ಮತ್ತೆ ಉತ್ತರವಾಗಿದ್ದು, ರಾಜ್‌ಕುಮಾರ್ ಕೇಳಿದ ಭೂಮಿ ತೂಕದ ಆ ಕ್ಷಮೆ.

ನಂತರದಲ್ಲಿ ರಾಜ್‌ಕುಮಾರ್ ಅವರ ಈ ಹಾಡು ನನ್ನನ್ನು ಯಾವ ಪರಿ ಹಿಂಬಾಲಿಸೋಕೆ ಶುರುಮಾಡಿತೆಂದರೆ, ಕ್ಲಾಸಿಗೆ ಹೋಗುವ ಮುಂಚೆ ದಿನವೂ ಕೇಳಿ-ಕೇಳಿ, ಪ್ಲೇ ಲಿಸ್ಟ್‌ನಲ್ಲಿ ಮೊದಲ ಪಟ್ಟಕ್ಕೇರಿ ಕುಂತಿತ್ತು. ಅದಕ್ಕೆ ಹಲವು ಕಾರಣಗಳಿದ್ದವು. ತುಂಬಾ ಬೇಸರಾದಾಗ ರಫಿ ಹಾಡು ಕೇಳುವ ಅಭ್ಯಾಸ ಇದ್ದುದುಂಟು. ದುಃಖದಲ್ಲಿ ಅದ್ದಿ ತೆಗೆದೂ, ಆ ದುಃಖದಿಂದ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವ ಆಪ್ತ ದನಿಯದು. ಆದರೆ, ರಾಜ್‌ಕುಮಾರ್ ಈ ಹಾಡಿನಲ್ಲಿ ದುಃಖವನ್ನು ಯಾವ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆಂದರೆ, ಬಹುಶಃ ದುಃಖದ ತುತ್ತತುದಿ ಅಂತೇನಾದರೂ ಇದ್ದರೆ, ಅದು ಈ ಹಾಡೇ.

ಕ್ಷಮೆ ಕೇಳುವುದು ತುಂಬಾನೇ ಕಷ್ಟದ ಕೆಲಸ. ಆ ಕೆಲಸ ಕಡುಕಷ್ಟವಾಗಿ ಬದಲಾಗುವುದು, ಕ್ಷಮೆಯನ್ನು ಎದುರಾಬದುರು ನಿಂತು ಮಾತಿನಲ್ಲಿ ಕೇಳಬೇಕಾದಾಗ. ‘ಮೌನ ಬಂಗಾರ’ ಎಂದು ಹಣೆಪಟ್ಟಿ ಕಟ್ಟಿದ ಈ ಲೋಕಕ್ಕೆ, ತಾನೇ ರೂಪಿಸಿಕೊಂಡ ಮಾತಿನ ಮೇಲೆ, ಅಕ್ಷರಗಳ ಮೇಲೆ ನಂಬಿಕೆ ಎಷ್ಟರ ಮಟ್ಟಿಗಿದೆ ಎಂಬುದು ಸ್ಯಾರಸ್ಯಕರ. ಅಸಲಿಗೆ, ‘ಮಾತು ಬೆಳ್ಳಿ’ ಆಗಿದ್ದು ಏಕೆ ಗೊತ್ತೇ? ಅದು ಅತ್ಯಂತ ಸವಾಲಿನದಾದ ಕಾರಣಕ್ಕೆ. ಯಾವುದೇ ಸಂಗತಿ ಮಾತಿಗೆ ರೂಪಾಂತರಗೊಂಡ ತಕ್ಷಣ ತೂಕ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು; ಹಾಗಾಗುವುದು ಮಾತು ಸೋತಾಗ ಮಾತ್ರ. ಆದರೆ, ಈ ಹಾಡಿನ ವಿಷಯದಲ್ಲಿ ರಾಜ್‌ಕುಮಾರ್ ಅವರ ದನಿ ಮಾತನ್ನು ಸಲೀಸಾಗಿ ಗೆಲ್ಲಿಸಿದೆ, ಆ ಮೂಲಕ ಒಂದು ಚಂದದ ಕ್ಷಮೆಯನ್ನೂ.

ದುಃಖದ ದನಿಗೆ ಸಹಜವಾಗಿಯೇ ಭಾರ ಪ್ರಾಪ್ತವಾಗುತ್ತದೆ. ದನಿಯಲ್ಲಿ ಎದೆಯ ಕಂಪನ ಕಾಣಿಸುತ್ತದೆ. ಉಸಿರುಗಟ್ಟಿದ ಮನಸ್ಥಿತಿ ಇರುತ್ತದೆ. ಅಪರಾಧಿ ಭಾವವೊಂದು ಕಾಡುತ್ತಿರುತ್ತದೆ. ಅನಾಥಪ್ರಜ್ಞೆ ಸುಡುತ್ತಿರುತ್ತದೆ. ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಎಲ್ಲ ಸಂಗತಿಗಳೂ, ದುಃಖದ ಹೊತ್ತಿನಲ್ಲಿ ವ್ಯಕ್ತಿಯೊಬ್ಬ ಕೇಳಬಹುದಾದ ಕ್ಷಮೆಯಲ್ಲಿ ಮಿಳಿತವಾಗಿರುತ್ತವೆ. ಈ ಹಾಡಿನಲ್ಲಿ ರಾಜ್‌ಕುಮಾರ್ ಕೇಳುವ ಕ್ಷಮೆ ಈ ಎಲ್ಲವನ್ನೂ ಹೊತ್ತುಕೊಂಡಿದೆ. ಹಾಗಾಗಿಯೇ, ಆ ಕ್ಷಮೆಗೊಂದು ಸಹಜತೆಯೂ, ಸುಡುವ ನಿಷ್ಕಲ್ಮಶ ಗುಣವೂ, ಮಿತಿಮೀರಿದ ಪ್ರಾಮಾಣಿಕತೆಯೂ, ಹೃದಯಕ್ಕೆ ನೇರ ತಾಗುವಂಥ ನಿರ್ಭಿಡೆಯೂ, ಎದುರಿರುವ ವ್ಯಕ್ತಿಯನ್ನು ಕರಗಿಸಿಯೇ ತೀರುವ ಅಪೂರ್ವ ಚೈತನ್ಯವೂ, ಭೂಮಿ ತೂಕದ ಭಾರವೂ ದಕ್ಕಿದೆ. ಇಂಥದ್ದೊಂದು ಅತ್ಯಪರೂಪದ ಕ್ಷಮೆಗೆ ನಮಸ್ಕಾರ.

About The Author

ಸಹ್ಯಾದ್ರಿ ನಾಗರಾಜ್

ಊರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಂದಿ. ಓದಿದ್ದೆಲ್ಲ ಶಿವಮೊಗ್ಗ. ಬದುಕು ಕಟ್ಟಿಕೊಂಡದ್ದು ಬೆಂಗಳೂರಿನಲ್ಲಿ. ಒಂದಷ್ಟು ಕಾಲ ಪತ್ರಕರ್ತ. ಸದ್ಯ, ಗಿಡ-ಮರ, ಹೂವಿನೊಟ್ಟಿಗೆ ಸರಾಗ ಉಸಿರಾಡುತ್ತಿರುವ ಗಾರ್ಡನ್ ಡಿಸೈನರ್. ಪ್ರವಾಸ, ಗಾರೆ ಕೆಲಸ, ಸಿನಿಮಾ, ಫೋಟೊಗ್ರಫಿ ಹುಚ್ಚು. ಕ್ರೈಸ್ಟ್ ಕಾಲೇಜು ಕನ್ನಡ ಸಂಘದಿಂದ ಐದು ಬಾರಿ ಕವಿತೆಗೆ, ಎರಡು ಬಾರಿ ಕತೆಗೆ ಬಹುಮಾನ.

6 Comments

  1. Vasu

    ಕವನದ ಮಾದರಿ ಇದೆ…!! ಒಂದೇ ಒಂದು ಶಬ್ದ ಎಷ್ಟೆಲ್ಲಾ ಕಾಡಿಸಿಬಿಡುತ್ತೆ..?

    Reply
    • ಸಹ್ಯಾದ್ರಿ ನಾಗರಾಜ್

      ನನ್ನಿ 🙂

      Reply
  2. Dr Sho ha rani

    ಸೊಗದೆ ಬೇರಿನಷ್ಟೇ ಪರಿಮಳ . ❤️

    Reply
    • ಸಹ್ಯಾದ್ರಿ ನಾಗರಾಜ್

      ನನ್ನಿ 🙂

      Reply
  3. Poorvi

    Eshtu chendada baraha Nagaraj avre bahala ishta aythu, pratiyondu vakyavu matte matte odabeknisuvashtu ishtavaythu, adarallu e keligina mathugalu eshtu arthagarbitavagide.

    ಅಸಲಿಗೆ, ಪ್ರೀತಿಗಿಂತಲೂ ಕ್ಷಮೆಯೇ ಹೆಚ್ಚು ಆಚರಣೆಯಲ್ಲಿರುವ ದೇಶ ನಮ್ಮದು. ಇಂಡಿಯಾದ ಎಲ್ಲ ಹೆಣ್ಣುಮಕ್ಕಳಿಗೂ ಅವರ ಸುತ್ತಮುತ್ತಲ ಗಂಡಸರನ್ನು ಕ್ಷಮಿಸಲೆಂದು ಬಾಲ್ಯದಿಂದಲೇ ವಿಶೇಷ ತರಬೇತಿ ಕೊಡಲಾಗುತ್ತದೆ. ಅದೂ ಎಂಥ ಅದ್ಭುತ ಕ್ಷಮೆ ಅಂದರೆ, ಗಂಡಸು ಅದಕ್ಕಾಗಿ ತನ್ನನ್ನು ಕ್ಷಮಿಸೆಂದು ಬಾಯಿ ಬಿಟ್ಟು ಕೇಳುವ ಪ್ರಮೇಯವೇ ಇಲ್ಲ. ಸುಮ್ಮನೆ, ಮನಸ್ಸಿನಲ್ಲೇ ಕ್ಷಮಿಸುತ್ತ ಮುಂದಕ್ಕೆ ಹೋಗಬೇಕಷ್ಟೆ!

    Reply
    • Sahyadri Nagaraj

      ನಿಮ್ಮ ಅಕ್ಕರೆಗೆ ನನ್ನಿ ?

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ