Advertisement
ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?

ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?

ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿಯ ಮೇಲೇ ಇರುತ್ತಿದ್ದರು. ಧೋತರ ಮೇಲೆ ಅಂಗಿ ಹಾಕಿಕೊಂಡು ರುಮಾಲು ಸುತ್ತಿಕೊಂಡು ಹೊರಟರೆ ಯಾರಿಗೋ ಹೆಣ್ಣುನೋಡಲು ಅಥವಾ ಯಾವುದೋ ಶುಭ ಕಾರ್ಯಕ್ಕೆ ಹೊರಟರೆಂದು ಜನ ಭಾವಿಸುತ್ತಿದ್ದರು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಮೂರನೆಯ ಕಂತು

 

ಸ್ವಾತಂತ್ರ್ಯಪೂರ್ವದಲ್ಲೇ ಶವರ್‍ಲೆಟ್, ಡಾಜ್, ಫೋರ್ಡ್ ಮುಂತಾದ ದೊಡ್ಡ ಕಾರುಗಾಡಿಗಳಿದ್ದವು. ಅವುಗಳ ಸಾಮರ್ಥ್ಯ ಬಹಳವಿದ್ದುದರಿಂದ ಜನರು ಅವುಗಳಿಗೆ ಹಾಫ್‌ಟನ್ ಗಾಡಿಗಳೆಂದು ಕರೆಯುತ್ತಿದ್ದರು. ಅವುಗಳನ್ನು ಚಾಲು ಮಾಡಬೇಕೆಂದರೆ ಗಾಡಿಯ ಮುಂದೆ ಬಂದು ಕಾರಿನೊಳಗಿನ ಎಂಜಿನ್‌ಗೆ ತಲಪುವ ಹಾಗೆ ಇರುವ ರಂಧ್ರದ ಮೂಲಕ ಹ್ಯಾಂಡಲ್ ತುರುಕಿ ಜೋರಿನಿಂದ ಹ್ಯಾಂಡಲ್ ಹೊಡೆದು ಕಾರು ಚಾಲು ಮಾಡುತ್ತಿದ್ದರು.

ಅಂಥ ಗಾಡಿಗಳನ್ನು ದೊಡ್ಡ ಮತ್ತು ಉಳ್ಳವರು ಹೆಚ್ಚಾಗಿರುವ ಹಳ್ಳಿಗಳಿಂದ ನಗರಕ್ಕೆ, ನಗರದಿಂದ ಹಳ್ಳಿಗೆ ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸಲಾಗುತ್ತಿತ್ತು. ಇಂಥ ದೊಡ್ಡ ಕಾರುಗಳು ಕಳೆದ ಎಪ್ಪತ್ತರ ದಶಕದವರೆಗೂ ಕೆಲವು ಕಡೆ ಚಾಲ್ತಿಯಲ್ಲಿದ್ದವು. ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ತೆರೆದ ಕಾರುಗಳನ್ನು ಬಳಸಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಸೈಕಲ್ ಸವಾರಿ ಮಾಡುವುದನ್ನು ಕೂಡ ಜನ ಆಶ್ಚರ್ಯಕರವಾಗಿ ನೋಡುತ್ತಿದ್ದರು. ಅಂಥ ಸಂದರ್ಭದಲ್ಲಿ ಕಾರು ಓಡಿಸುವುದು ಮಹಾ ವಿದ್ಯೆಯೆ ಆಗಿತ್ತು. ಚಾಲಕರು ಹೆಚ್ಚಾಗಿ ಮುಸ್ಲಿಮರು ಇಲ್ಲವೆ ಮರಾಠರು ಇರುತ್ತಿದ್ದರು. ಈ ಸಮಾಜಗಳ ಜನರು ಬ್ರಿಟಿಷ್ ಮಿಲಿಟರಿಯಲ್ಲಿನ ವರ್ಕ್‌ಶಾಪ್‌ನಲ್ಲಿ ಯಂತ್ರಗಳ ಜೊತೆ ಕೆಲಸ ಮಾಡಿ ಅನುಭವವಿದ್ದುದರಿಂದ ಇದು ಅವರಿಗೆ ಸಾಧ್ಯವಾಯಿತು. ಜನಸಾಮಾನ್ಯರ ದೃಷ್ಟಿಯಲ್ಲಿ ಇವರು ಆಶ್ಚರ್ಯಕರವಾಗಿ ಕಾಣುತ್ತಿರಬಹುದು.

ಈ ಗಾಡಿಗಳಿಗೆ ಸಂಬಂಧಿಸಿದಂತೆ ಅಜ್ಜಿ ಸಮೀಪದ ಹಳ್ಳಿಯಲ್ಲಿ ನಡೆದ ಒಂದು ಘಟನೆ ಕುರಿತು ಹೇಳಿದ್ದಳು. ಇಂಥ ಹಾಫ್‌ಟನ್‌ ಗಾಡಿಯನ್ನು ಹಳ್ಳಿಗೆ ತರುವ ಡ್ರೈವರ್‌ನ ಪ್ರತಿಭೆಯ ಬಗ್ಗೆ ಮೋಹಗೊಂಡು ಆ ಹಳ್ಳಿಯ ಗೌಡನ ಹೆಂಡತಿ ಆತನ ಜೊತೆ ಓಡಿ ಹೋದಳಂತೆ.

ರಸ್ತೆ ಮೇಲೆ ಕಲ್ಲುಗಳನ್ನಿಟ್ಟು ಕಾರು ನೋಡಿದ ಮೇಲೆ ಹಳ್ಳಿಗೆ ಯಾವಾಗಲಾದರೊಮ್ಮೆ ಕಾರುಗಳು ಬರುತ್ತಿದ್ದವು. ಹೀಗಾಗಿ ಅವುಗಳನ್ನು ನೋಡುವ ಬಯಕೆ ಇಲ್ಲವಾಯಿತು. ಒಂದು ಸಲ ಯಾವುದೋ ಚುನಾವಣೆಗೆ ನಿಂತ ಉಮೇದುವಾರನೊಬ್ಬ ತನ್ನ ಪಟಾಲಂ ಜೊತೆ ಬಂದಾಗ ಕಾರುಗಳ ಸಂಖ್ಯೆ ಜಾಸ್ತಿ ಇತ್ತು. ಅವನ ಶುಭ್ರ ವಸ್ತ್ರಗಳಿಂದಾಗಿ ಆತ ನಗರದ ಶ್ರೀಮಂತ ವರ್ಗಕ್ಕೆ ಸಂಬಂಧಿಸಿದವನ ಹಾಗೆ ಕಾಣುತ್ತಿದ್ದ. ಅದು 1954-55 ರ ಸಂದರ್ಭ. ಯಾವುದೋ ಚುನಾವಣೆ ಇರಬಹುದು. ಅವರೆಲ್ಲ ಬೀರಪ್ಪನ ಗುಡಿಯ ಪೌಳಿಗೆ ಬಂದರು. ಊರ ಹಿರಿಯರು ಅವರಿಗಾಗಿ ಮೊದಲೇ ಕಾಯುತ್ತ ಕುಳಿತಿದ್ದರು. ಹೀಗೆ ಜನ ಸೇರಿದಾಗ ನನ್ನ ಮತ್ತು ಓರಿಗೆಯ ಗೆಳೆಯರ ಕುತೂಹಲ ತೀವ್ರವಾಗುತ್ತಿತ್ತು. ನಾವೆಲ್ಲ ಹೋಗಿ ದೂರ ನಿಂತೆವು. ಅಲ್ಲಿ ಸೇರಿದವರು ಊರಿನ ವಿಚಾರದಲ್ಲಿ ಏನೇನೋ ಹೇಳುತ್ತಿದ್ದರು. ಗುಡಿ ಮತ್ತು ಪೌಳಿಯನ್ನು ನವೀಕರಿಸುವುದಾಗಿ ಆ ಉಮೇದುವಾರ ಭರವಸೆ ನೀಡಿದ. ಊರಿನ ಹಿರಿಯರೆಲ್ಲ ಸಂತೃಪ್ತರಾದಂತೆ ಕಂಡರು. ಅವನಿಗೇ ಓಟು ಹಾಕುವುದಾಗಿ ಬೀರಪ್ಪದೇವರ ಹೆಸರಿನಲ್ಲಿ ಆಣೆ ಮಾಡಿದರು.

(ದೂರದಿಂದ ಕಾಣುವ ಗೋಲಗುಮ್ಮಟ)

ಹೀಗೆ ನಮ್ಮ ದೇಶದಲ್ಲಿ ಚುನಾವಣಾ ಭ್ರಷ್ಟಾಚಾರ ಶುರುವಾಯಿತು. ಮುಂದೆ ಜಾತಿಗಳಲ್ಲಿ ವಿಭಜನೆಗೊಂಡಿತು. ಜಾತಿಗಳು ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸತೊಡಗಿದವು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಜಾತಿಪ್ರಭುತ್ವ ಪ್ರಾರಂಭವಾಯಿತು. ನಂತರ ಮನೆಮನೆಗೆ, ಈಗ ಪ್ರತಿವ್ಯಕ್ತಿಗೆ ಹಣ ಹಂಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿಪ್ರಭುತ್ವ ಆರಂಭವಾದರೂ ಕೆಳಜಾತಿ ಮತ್ತು ಕೆಳವರ್ಗದವರ ಮನೆ ಬಾಗಿಲಿಗೆ ಮೇಲ್ಜಾತಿಯವರು ಚುನಾವಣಾ ಸಂದರ್ಭದಲ್ಲಿ ಬಂದು ನಿಲ್ಲುವಂತಾಯಿತು.

ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿಯ ಮೇಲೇ ಇರುತ್ತಿದ್ದರು. ಧೋತರ ಮೇಲೆ ಅಂಗಿ ಹಾಕಿಕೊಂಡು ರುಮಾಲು ಸುತ್ತಿಕೊಂಡು ಹೊರಟರೆ ಯಾರಿಗೋ ಹೆಣ್ಣುನೋಡಲು ಅಥವಾ ಯಾವುದೋ ಶುಭ ಕಾರ್ಯಕ್ಕೆ ಹೊರಟರೆಂದು ಜನ ಭಾವಿಸುತ್ತಿದ್ದರು. ಆದರೆ ಇಲ್ಲಿ ನೋಡಿದಾಗ ಎಲ್ಲರೂ ಶುಭಕಾರ್ಯಕ್ಕೆ ಹೊರಟವರ ಹಾಗೆಯೆ ಕಾಣುತ್ತಿದ್ದರು.

ನಂತರ ನಾನು ಪ್ರತಿ ರವಿವಾರ ಸಂತೆಗೆ ಅಜ್ಜಿಯ ಜೊತೆ ವಿಜಾಪುರಕ್ಕೆ ಹೋಗತೊಡಗಿದೆ. ವಿಜಾಪುರದ ಮಾರುಕಟ್ಟೆ ಶತಮಾನಗಳಷ್ಟು ಹಳೆಯದಾಗಿತ್ತು. ವಿಚಿತ್ರವೆಂದರೆ ಅದಕ್ಕೆ ನ್ಯೂ ಮಾರ್ಕೇಟ್ ಎಂದು ಕರೆಯುತ್ತಿದ್ದರು. ಇಡೀ ಮಾರುಕಟ್ಟೆ ಭೂಮಿ ಮುನಸಿಪಾಲಿಟಿಯ ಮಾಲೀಕತ್ವದಲ್ಲಿ ಇತ್ತು. ವ್ಯಾಪಾರಸ್ಥರು ತಮ್ಮ ಅಂಗಡಿಯ ಸೈಜಿನ ಪ್ರಕಾರ ಭೂಬಾಡಿಗೆ ಕೊಡುತ್ತಿದ್ದರು.

ಇಡೀ ಮಾರುಕಟ್ಟೆ ಕಟ್ಟಿಗೆಗಳಿಂದ ನಿರ್ಮಾಣವಾಗಿತ್ತು. ಅಂಗಡಿಗಳು ಸಾಗವಾನಿ ಕಟ್ಟಿಗೆ ಕಂಭಗಳಿಂದ ಕೂಡಿದ್ದು ಫಳಿ (ಕಟ್ಟಿಗೆ ಹಲಗೆ)ಗಳಿಂದ ಆವರಿಸಲ್ಪಟ್ಟಿದ್ದವು. ಬಾಗಿಲುಗಳು ಕೂಡ ಫಳಿಗಳಿಂದಲೇ ನಿರ್ಮಾಣವಾಗಿದ್ದವು. ಮೇಲೆ ಮಂಗಳೂರು ಹಂಚುಗಳನ್ನು ಹಾಕಲಾಗಿತ್ತು. ಅವುಗಳ ಕೆಳಗೆ ಮತ್ತೆ ಫಳಿ ಬಡಿಯುತ್ತಿದ್ದರು. ಈ ಮಾರುಕಟ್ಟೆ ಬದುಕಿನ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತಿತ್ತು. ಈ ಚಚ್ಚೌಕಾದ ವಿಶಾಲ ಮಾರುಕಟ್ಟೆಯಲ್ಲಿ ಎದುರು ಬದುರು ಅಂಗಡಿಗಳ ಸಾಲುಗಳಿದ್ದವು. ವಿವಿಧ ಪ್ರಕಾರದ ಅಂಗಡಿಗಳು, ವಿವಿಧ ಪ್ರಕಾರದ ವಸ್ತುಗಳು ಮತ್ತು ಸೇವೆಗಳು ಅಲ್ಲಿ ಲಭ್ಯವಿದ್ದವು.

(ವಿಜಾಪುರ ಬಜಾರ ಪ್ರದೇಶ)

ಕಿರಾಣಿ ಅಂಗಡಿ, ಅರಿಷಿನ, ಕುಂಕುಮ, ಲೋಬಾನ ಮುಂತಾದ ಸಾಂಬ್ರಾಣಿ ಪದಾರ್ಥಗಳು, ಊದು, ಊದುಬತ್ತಿ, ಸುಗಂಧ ದ್ರವ್ಯ, ನೆಗಡಿ, ಕೆಮ್ಮು, ತಲೆನೋವು ಮುಂತಾದ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಆಯುರ್ವೇದ, ಯುನಾನಿಯಂಥ ಔಷಧಗಳು ಮುಂತಾದ ವಸ್ತುಗಳನ್ನು ಮಾರುವ ಬುಕಿಟಗಾರ (ಗ್ರಂಧಿಗೆ) ಅಂಗಡಿ, ಮುಸ್ಲಿಮರ ಅತ್ತರ ಅಂಗಡಿ, ಹೂವಿನ ಅಂಗಡಿ, ಸೂಜಿ, ಕೀಲಿ, ಕ್ಯಾರ, ಸಾಣಿಗೆ, ಹಣಿಗೆ, ಸಣ್ಣ ಕನ್ನಡಿ, ಕರಿಮಣಿ, ಹೆಣ್ಣುಮಕ್ಕಳು ಹಲ್ಲುಜ್ಜಲು ಬಳಸುವ ಜಾಚೇಲಿ ಮುಂತಾದವುಗಳನ್ನು ಮಾರುವ ಜೋಗೇರ ರಸ್ತೆಬದಿ ಅಂಗಡಿ, ಫೋಟೋಗಳಿಗೆ ಕಟ್ ಹಾಕುವ ಅಂಗಡಿ, ಡಬ್ಬಿ ಬೆಸೆಯುವ ಅಂಗಡಿ, ಔಷಧಿ ಅಂಗಡಿ, ಬಟ್ಟೆ ಅಂಗಡಿ, ಗುಳೇದಗುಡ್ಡ ಖಣಗಳನ್ನು ಮಾರುವ ಅಂಗಡಿ, ಸೀರೆ ಅಂಗಡಿ, ಕೇವಲ ಚಹಾಪುಡಿ, ಸಕ್ಕರೆ, ಉಪ್ಪು, ಮೆಣಸಿನಕಾಯಿ, ಎಲೆ, ತಂಬಾಕು, ನಾಶಿಪುಡಿ, ಹುರಿದ ಸೇಂಗಾ ಮುಂತಾದವುಗಳನ್ನು ಮಾರುವ ಅಂಗಡಿಗಳು, ಹಣ್ಣಿನ ಅಂಗಡಿ, ಎತ್ತುಗಳನ್ನು ಸಿಂಗಾರ ಮಾಡುವ ಬಣ್ಣ ಬಣ್ಣದ ಕಣ್ಣಿ, ಅವುಗಳ ಕೊರಳಿಗೆ ಕಟ್ಟುವ ಗೆಜ್ಜಿಗಳಿಂದ ಸಿಂಗರಿಸಿದ ಬೆಲ್ಟು, ಕೊರಳ ಗಂಟಿ, ಕೊಂಬಿಗೆ ಹಾಕುವ ಹಿತ್ತಾಳೆಯ ಕೊಮ್ಮಣಸು, ಮಕ್ಕಳ ಸಿದ್ಧಪಡಿಸಿದ ಬಟ್ಟೆ ಅಂಗಡಿ, ಪಕ್ಕದಲ್ಲೇ ಇರುವ ಪಾತ್ರೆಗಳ ಅಂಗಡಿ, ಕಬ್ಬಿಣ ಸಾಮಾನುಗಳ ಅಂಗಡಿ, ಬಣ್ಣದ ಅಂಗಡಿ, ಎತ್ತಿನಿಂದ ತಿರುಗಿಸುವ ಕಟ್ಟಿಗೆಯ ಕಬ್ಬಿನ ಗಾನ, ಚಹಾದ ಅಂಗಡಿ, ಒಂದೇ ಎರಡೇ ನನಗದು ಮಾಯಾಲೋಕದಂತೆ ಕಾಣಿಸುತ್ತಿತ್ತು.

ರವಿವಾರಕ್ಕೊಮ್ಮೆ ಆ ಮಾರುಕಟ್ಟೆಯಲ್ಲಿ ಅಜ್ಜಿ ಸಾಮಾನುಗಳನ್ನು ಖರೀದಿ ಮಾಡುವಾಗ ಬಜಾರ ತುಂಬ ಬೆರಗುಗಣ್ಣಿನಿಂದ ನೋಡುತ್ತ ನಿಲ್ಲುತ್ತಿದ್ದೆ. ವಿಚಿತ್ರವೆಂದರೆ ಅತಿ ಹಳೆಯದಾದ ಆ ಮಾರುಕಟ್ಟೆಗೆ “ನ್ಯೂ ಮಾರ್ಕೆಟ್” ಎಂದು ಕರೆಯುತ್ತಿದ್ದರು.

ಅಂಗಡಿಕಾರರು ದೀಪಾವಳಿ ಸಂದರ್ಭದಲ್ಲಿ ಸಿಂಗರಿಸುವುದನ್ನು ನೋಡುವುದೇ ಒಂದು ಆನಂದ. ವ್ಯಾಪಾರಸ್ಥರು ಅಂಗಡಿಗಳನ್ನು ಸುಣ್ಣ ಬಣ್ಣದಿಂದ ಸಿಂಗರಿಸುತ್ತಿದ್ದರು. ಕಂಬಗಳಿಗೆ ಪೇಂಟ್ ಬಳಸುತ್ತಿದ್ದರು. ಬಣ್ಣ ಬಣ್ಣದ ಬೇಗಡೆಗಳನ್ನು ಕತ್ತರಿಸಿ ವಿವಿಧ ಪ್ರಕಾರದ ಹಕ್ಕಿಗಳ ಮತ್ತು ಹೂಗಳನ್ನು ಸೃಷ್ಟಿಸಿ ಕಂಭಗಳಿಗೆ ಅಂಟಿಸುತ್ತಿದ್ದರಿಂದ ಕಂಭಗಳು ಆಕರ್ಷಕವಾಗಿ ಕಾಣುವಂತೆ ಮಾಡುತ್ತಿದ್ದರು. ಅವು ಬರುವ ದೀಪಾವಳಿಯವರೆಗೆ ಹಾಗೇ ಇರುತ್ತಿದ್ದವು. ಬೇಗಡೆ ಕಲೆಗಾರರಿಂದ ಇವುಗಳನ್ನು ತಮಗೆ ಬೇಕಾದ ಡಿಸೈನ್‌ನಲ್ಲಿ ಅಂಗಡಿಕಾರರು ತಯಾರಿಸಿಕೊಳ್ಳುತ್ತಿದ್ದರು. ಅವುಗಳ ಸೌಂದರ್ಯವನ್ನು ಸವಿಯುವುದರಲ್ಲಿ ನಾನು ಮಗ್ನನಾಗುತ್ತಿದ್ದೆ. ಆ ಹಕ್ಕಿಗಳು ನಮ್ಮ ಹಳ್ಳಿಯಿಂದ ಬಂದು ಇಲ್ಲಿ ಕುಳಿತಿರುವಂತೆ ಅನಿಸುತ್ತಿತ್ತು. ನಾನು ಹೀಗೆಲ್ಲ ಕಲ್ಪಿಸುವ ವೇಳೆ ಅಜ್ಜಿ ಸಾಮಾನು ಖರೀದಿಸುವಲ್ಲಿ ಮಗ್ನಳಾಗಿರುತ್ತಿದ್ದಳು.

(1983 ರ ಸುಮಾರಿಗೆ ಈ ಕಟ್ಟಿಗೆಯ ಮಾರುಕಟ್ಟೆ ಕೋಮುವಾದಿಗಳ ಕೆಂಗಣ್ಣಿಗೆ ಬಲಿಯಾಗಿ ಅಗ್ನಿಗೆ ಆಹುತಿಯಾಯಿತು. ಆ ಬೆಂಕಿ ಎಷ್ಟು ಭಯಂಕರವಾಗಿತ್ತೆಂದರೆ ಅಂಗಡಿಗಳಲ್ಲಿ ತಿಜೋರಿಗಳು ಕರಗಿ ಲಾವಾರಸದಂತೆ ಹರಿದಿದ್ದವು. ನೋಟಿನ ಕಟ್ಟುಗಳು ಬೂದಿಯಾಗಿದ್ದವು. ಈ ಅನಾಹುತದಿಂದಾಗಿ ಎಲ್ಲ ಜಾತಿ ಧರ್ಮಗಳ ವ್ಯಾಪಾರಸ್ಥರು ಕಷ್ಟನಷ್ಟಗಳನ್ನು ಅನುಭವಿಸಿದರು. ಮುಂದೆ ಅಲ್ಲಿ ಕಾಂಕ್ರೀಟಿನ ಶಾಸ್ತ್ರಿ ಮಾರ್ಕೆಟ್ ಸಿದ್ಧವಾಗುವವರೆಗೆ, ಅಂದರೆ ಹದಿನೈದು ವರ್ಷಗಳ ಕಾಲ ಗೋಳಾಡಿದರು. ಅದಾಗಲೆ ಅದೆಷ್ಟೋ ವ್ಯಾಪಾರಿಗಳು ನಿಧನ ಹೊಂದಿದ್ದರು. ಆ ಅಂಗಡಿಗಳನ್ನು ಪಡೆಯುವುದಕ್ಕಾಗಿ ನಗರಸಭೆಗೆ ಸಾಲಶೂಲ ಮಾಡಿ ಹಣ ತುಂಬಿದರು. ಹೀಗೆ ಆ ಗತವೈಭವ ನಾಶವಾಗಿ ಹೋಯಿತು.)

(ವಿಜಾಪುರ ಲಾಲಬಹದ್ದೂರ ಶಾಸ್ತ್ರಿ ಮಾರ್ಕೆಟ್)

ಅಲ್ಲಿ ಸೇರಿದವರು ಊರಿನ ವಿಚಾರದಲ್ಲಿ ಏನೇನೋ ಹೇಳುತ್ತಿದ್ದರು. ಗುಡಿ ಮತ್ತು ಪೌಳಿಯನ್ನು ನವೀಕರಿಸುವುದಾಗಿ ಆ ಉಮೇದುವಾರ ಭರವಸೆ ನೀಡಿದ. ಊರಿನ ಹಿರಿಯರೆಲ್ಲ ಸಂತೃಪ್ತರಾದಂತೆ ಕಂಡರು.

ಅಜ್ಜಿ ಬಹಳ ಗಟ್ಟಿ ಹೆಂಗಸು. ರೇಲ್ವೆ ಹಳಿಗುಂಟ ಆರಿಸಿದ ಆ ಕಲ್ಲಿದ್ದಲು ಭಾರವನ್ನು ಹೊತ್ತುಕೊಂಡು ಹತ್ತು ಕಿಲೊಮೀಟರ್ ದೂರದ ವಿಜಾಪುರಕ್ಕೆ ತಂದು, ಇದ್ದಿಲ ಅಂಗಡಿಯಲ್ಲಿ ಮಾರಿ ಬಂದ ಹಣದಿಂದ ಸಂತೆ ಮಾಡಿ ಅದನ್ನು ಹೊತ್ತುಕೊಂಡು ಬರುತ್ತಿದ್ದಳು. ಬಡ ಹೆಣ್ಣುಮಕ್ಕಳ ಧೈರ್ಯವೇ ಧೈರ್ಯ. ಅವಳ ಧೈರ್ಯಕ್ಕೆ ಇನ್ನೊಂದು ಪ್ರಸಂಗ ನೆನಪಾಯಿತು. ಅವಳು ಒಮ್ಮೆ ಹೇಳಿದ್ದಳು, ತನಗೆ ದೆವ್ವ ಬಡಿದಿತ್ತು ಎಂದು. ನಾನು ಗಾಬರಿಯಿಂದ ಕೇಳಿದ್ದೆ ‘ಅದೇನು ಮಾಡಿತು’ ಎಂದು. ಆಗ ಅವಳು ‘ಅದೇನ ಮಾಡತೈತಿ. ಒಂದು ಪಟ್ಟ (12 ವರ್ಷ) ಮುಗಿದ ಮ್ಯಾಲ ತಾನೇ ಹೋಯ್ತು’ ಎಂದಳು! ದೆವ್ವ ಇದೆ ಎಂದು ನಂಬಿ ಅದರ ಜೊತೆ ಹನ್ನೆರೆಡು ವರ್ಷ ಬದುಕುವುದೆಂದರೆ?

ನನಗೆ ಅಜ್ಜಿ ಮತ್ತು ಬಾಬು ಮಾಮಾ ಬಿಟ್ಟರೆ ನನ್ನ ತಾಯಿ ತಂದೆ ಸಮೇತ ಯಾವ ಸಂಬಂಧಿಕರೂ ಗೊತ್ತಿರಲಿಲ್ಲ. ಬಹಳ ಚಿಕ್ಕವನಿದ್ದಾಗಲೇ ಅಜ್ಜಿಯ ಜೊತೆ ಇದ್ದುದರಿಂದ ತಾಯಿ ತಂದೆಯ ನೆನಪು ಮರೆತೇ ಹೋಗಿತ್ತು. ಸಂತೆಗಾಗಿ ವಿಜಾಪುರಕ್ಕೆ ಹೋದರೂ ತಾಯಿಯ ಮನೆಗೆ ಹೋಗುವುದು ಕಡಿಮೆ. ಏಕೆಂದರೆ ಹತ್ತು ಕಿಲೋಮೀಟರ್ ನಡೆಯುತ್ತ ಹೋಗಿ ಸಂತೆ ಮಾಡಿ ಅದನ್ನು ಹೊತ್ತುಕೊಂಡು ಹಳ್ಳಿ ತಲುಪುವುದರಲ್ಲೇ ಸಮಯ ಹೋಗುತ್ತಿತ್ತು. ಯಾವಾಗೋ ಒಮ್ಮೆ ಹೋಗುವುದಿತ್ತು. ಆದರೆ ಅವರು ನನ್ನ ತಾಯಿ ತಂದೆ ಎಂಬುದರ ಕಡೆ ಲಕ್ಷ್ಯವಿರಲಿಲ್ಲ.

ಒಂದು ಸಲ ಅವರು ನನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ನಾನು ಅಜ್ಜಿಯನ್ನು ಬಿಟ್ಟು ಅಗಲಲಿಲ್ಲ. ಅಜ್ಜಿ ಕೊಸರಿಕೊಂಡು ಹೋದಳು. ನಾನು ತಾಯಿಯ ಮನೆಯಿಂದ ಹೊರಗೆ ಓಡಿ ಬಂದು ಬೀದಿಯಲ್ಲಿ ಬಿದ್ದು ಕಾಲು ಹೊಸೆಯುತ್ತ, ಜೋರಾಗಿ ಅಳುತ್ತ ರಂಪಾಟ ಮಾಡಿದೆ. ಮುಂದೆ ಹೋಗಿದ್ದ ಅಜ್ಜಿ ವಾಪಸ್ ಬಂದು ಎತ್ತಿಕೊಂಡು ಹೊರಟಳು. ಆ ಅಪರಿಚಿತರ ಮಧ್ಯೆ ನನಗೇಕೆ ಬಿಟ್ಟು ಹೋಗುತ್ತಾಳೆ ಎಂಬುದೇ ನನಗೆ ದಿಗಿಲಾಗಿತ್ತು.

(ರೇಲ್ವೆ ಕ್ರಾಸ್ ಮಹಾಲಕ್ಷ್ಮಿ ಗುಡಿ)

ಒಂದೊಂದು ಸಲ ರವಿವಾರ ಸಂತೆಗಾಗಿ ಅಜ್ಜಿಯ ಜೊತೆ ವಿಜಾಪುರಕ್ಕೆ ಹೋಗಲು ನಿರಾಕರಿಸುತ್ತಿದ್ದೆ. ಎಲ್ಲಿ ಆ “ಅಪರಿಚಿತರ” ಮನೆಯಲ್ಲಿ ಬಿಟ್ಟು ಬರುತ್ತಾಳೋ ಎಂಬ ಭಯದಿಂದ ಹಾಗೆ ಮಾಡುತ್ತಿದ್ದೆ. ಅವಳು ಅನಿವಾರ್ಯವಾಗಿ ನನ್ನನ್ನು ಅಲ್ಲೇ ಬಿಟ್ಟು ಸಂತೆಗಾಗಿ ಶಹರಕ್ಕೆ ಬರಬೇಕಾಗಿತ್ತು. ಆದರೆ ಅವಳನ್ನು ಬಿಟ್ಟಿರುವುದು ಸಾಧ್ಯವಿಲ್ಲವಾದ್ದರಿಂದ ಅವಳ ಬರವನ್ನು ಕಾಯುತ್ತಿದ್ದೆ. ಸಾಯಂಕಾಲ ಅವಳು ಬರುವುದು ತಡವಾದರೆ ಹಳ್ಳಿಯ ಪಕ್ಕದ ರಸ್ತೆಗೆ ಹೊಂದಿಕೊಂಡಿದ್ದ ದಿನ್ನಿ ಮೇಲೆ ನಿಂತು ಶಹರ ಕಡೆಯಿಂದ ಬರುವ ರಸ್ತೆಯುದ್ದಕ್ಕೂ ಕಣ್ಣು ಹಾಯಿಸುತ್ತಿದ್ದೆ. ಅವಳು ಕಾಣಿಸುತ್ತಿರಲಿಲ್ಲ. ಆಗ ಕಲ್ಪಿಸುತ್ತಿದ್ದೆ.

ಅವಳೀಗ ಸಂತೆಯಲ್ಲಿ ಬೇಕಾದ ಸಾಮಾನುಗಳನ್ನು ಭರಭರ ಖರೀದಿಸಿದಳು. ಚಹಾದ ಅಂಗಡಿಯಲ್ಲಿ ನನಗಾಗಿ ಭಜಿ ಮತ್ತು ಉಂಡಿ ಕೊಂಡಳು.

ನನ್ನ ನೆನಪು ಹೆಚ್ಚಾಗಿದ್ದರಿಂದ ಹಳ್ಳಿಯ ಕಡೆಗೆ ಬರಬರ ನಡೆದಳು.
ವಿಜಾಪುರದ ಬಂಬಾಳ ಅಗಸಿಯನ್ನು ದಾಟಿದಳು.
ಈಗ ಶಹರದಿಂದ ಹೊರಬಂದಂತಾಯಿತು.
ರೇಲ್ವೆ ಕ್ರಾಸಿಂಗ್ ಚೌಕಿಯನ್ನು ದಾಟಿದಳು.
ಇನ್ನೇನು ಗೌಡರ ತೋಟ ದಾಟುವುದೊಂದೇ ಉಳಿದಿದೆ.

(ವಿಜಾಪುರ ಬಂಬಾಳ ಅಗಸಿ)

ತೋಟ ದಾಟಿದ ಮೇಲೆ ಅವಳು ನನಗೆ ಕಂಡೇ ಕಾಣುವಳು. ಎಂಬ ಭ್ರಮೆಯಿಂದ ದಿಟ್ಟಿಸಿ ನೋಡುತ್ತಿದ್ದೆ. ಅದೇ ಕ್ಷಣಕ್ಕೆ ಹೆಂಗಸರ ಮತ್ತು ಗಂಡಸರ ಗುಂಪು ಬರುತ್ತಿದ್ದರೆ ಅವಳೂ ಇದ್ದಿರಬಹುದೆಂದು ತಿಳಿದು ಸಮೀಪ ಬರುವವರೆಗೂ ನೋಡುತ್ತಲೆ ಇದ್ದೆ. ಆ ಗುಂಪಿನಲ್ಲಿ ಇಲ್ಲವೆಂಬುದು ತಿಳಿದಾಗ ಭ್ರಮನಿರಸನವಾಗುತ್ತಿತ್ತು. ಮತ್ತೆ ಮೊದಲಿನಂತೆ ಕಲ್ಪಿಸಿ, ಕಲ್ಪಿಸಿ ಅವಳು ಬರುವುದನ್ನು ಕಾಣದೆ ಸೋಲುತ್ತಿದ್ದೆ. ಹೀಗೆ ಕಲ್ಪಿಸುತ್ತಿರುವಾಗಲೇ ಸೂರ್ಯ ಬರಿ ಕೆಂಪು ಗೋಲವಾಗಿ ಬಿಡುತ್ತಿದ್ದ. ಆಗ ಮುಂದೆ ಕತ್ತಲಾಗುವುದೆಂದು ತಿಳಿದು ತೀವ್ರತೆ ಇನ್ನಷ್ಟು ಹೆಚ್ಚುತ್ತಿತ್ತು.

ನನ್ನ ತಮ್ಮನ ಜೊತೆ ನನ್ನ ತಂದೆ ತಾಯಿ ನನ್ನನ್ನು ನೋಡಲು ಬಂದಾಗ ಅವರು ತಂದ ಬಿಸ್ಕಿಟ್ ತೆಗೆದುಕೊಂಡು ಹೊರಗೆ ಓಡಿಹೋಗುತ್ತಿದ್ದೆ. ಏಕೆಂದರೆ ಎಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತಾರೋ ಎಂಬ ಆತಂಕ ಕಾಡುತ್ತಿತ್ತು.

ಅಪರಂಜಿಯಂಥ ಹಿರಿಯ ಮಗನನ್ನು ಕಳೆದುಕೊಂಡ ಅಜ್ಜಿ ದುಃಖಿಯಾಗಿದ್ದರೂ ಅದನ್ನು ವ್ಯಕ್ತಪಡಿಸುತ್ತಿದ್ದಿಲ್ಲ. ತನ್ನ ಕಷ್ಟವನ್ನು ಯಾರಮುಂದೆಯೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಎಲ್ಲರ ಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿ ಸಮಾಧಾನಪಡಿಸುತ್ತಿದ್ದಳು. ಕಿರಿಯ ಮಗ ಬಾಬು ಮಾಮಾ ಒಂದು ರೀತಿಯ ಮೈಗಳ್ಳನಾಗಿದ್ದ. ಎಲ್ಲಿ ದಾರಿ ತಪ್ಪುವನೋ ಎಂಬ ಚಿಂತೆ ಅವಳದಾಗಿತ್ತು. ಆತ ರಾತ್ರಿ ಬಹಳ ಹೊತ್ತಿನವರೆಗೆ ಓರಿಗೆಯವರ ಜೊತೆ ಹರಟೆ ಹೊಡೆಯುತ್ತ ಕೂಡುತ್ತಿದ್ದ. ಆತ ಬರುವವರೆಗೆ ಕಾಯುತ್ತಿದ್ದಳು. ರಾತ್ರಿ ಹೊರಗೆ ಹೋಗುವಾಗ ಕನ್ನಡಿ ನೋಡಲು ಬಿಡುತ್ತಿರಲಿಲ್ಲ. ‘ಮುಖಕ್ಕೆ ಭಂಗ ಬಂದು ಅಂದಗೇಡಿ ಆಗುವಿ’ ಎಂದು ಅಂಜಿಸುತ್ತಿದ್ದಳು. ಆತ ಸಿಂಗರಿಸಿಕೊಂಡು ಎಲ್ಲಿಗೆ ಹೋಗುತ್ತಾನೆ ಎಂಬ ತಲ್ಲಣ ಅವಳಿಗೆ.

(ಅಲ್ಲೀಬಾದಿಯ ಒಂದು ರಸ್ತೆ)

ಹಳ್ಳಿಯಲ್ಲಿ ಆಗ ವಿದ್ಯುಚ್ಛಕ್ತಿ ಬಂದಿರಲಿಲ್ಲ. ಅಂಥ ಬೆಳಕಿನ ಬಗ್ಗೆ ನನಗೆ ಗೊತ್ತೂ ಇರಲಿಲ್ಲ. ರಾತ್ರಿಯಲ್ಲಿ ಪಂಚಾಯ್ತಿಯವರು ಎಲ್ಲೋ ಒಂದೊಂದು ಕಡೆ ಬೀದಿ ಕಂದೀಲುಗಳನ್ನು ಹಚ್ಚುತ್ತಿದ್ದ ನೆನಪು. ಅದರ ಸುತ್ತ ಒಂದಿಷ್ಟು ಬೆಳಕು ಬಿದ್ದರೆ ದೊಡ್ಡಮಾತು. ಮನೆಯಲ್ಲಿ ಗಾಸ್ಲೇಟ್ (ಸೀಮೆ ಎಣ್ಣೆ) ಚಿಮಣಿ ಇರುತ್ತಿದ್ದವು. ಊದಬತ್ತಿ ಹಚ್ಚಲು ಕಡ್ಡಿ ಕೊರೆದಾಗ ಬರುವ ಬೆಳಕಿನ ಹಾಗೆ ಚಿಮಣಿಯ ಬೆಳಕು ಇರುತ್ತಿತ್ತು.

ಹಳ್ಳಿಗರು ಬಹಳ ಜಾಗರೂಕತೆಯಿಂದ ಗಾಸ್ಲೇಟ್ ಎಣ್ಣೆ ಬಳಸುತ್ತಿದ್ದರು. ಸಂಜೆಗಪ್ಪು ಆದಾಗ ಚಿಮಣಿ ಹಚ್ಚುತ್ತಿದ್ದರು. ಊಟವಾದ ಕೂಡಲೆ ಚಿಮಣಿ ಆರಿಸಿ ಮಲಗುತ್ತಿದ್ದರು. ಹಾಗೆ ಮಲಗಲು ಎರಡು ಕಾರಣಗಳಿದ್ದವು. ಎಣ್ಣೆ ಉಳಿಸುವುದು ಮತ್ತು ಬೆಳಿಗ್ಗೆ ಬೇಗ ಎದ್ದು ಹೆಂಡಿಕಸ ಮಾಡುವುದು. ಅಂದರೆ ದನಗಳ ಕೊಟ್ಟಿಗೆಯಲ್ಲಿ ಸೆಗಣಿ ತೆಗೆದು ಸ್ವಚ್ಛಗೊಳಿಸುವುದು. ಯಾರಾದರೂ ರಾತ್ರಿ 10 ಗಂಟೆಯವರೆಗೆ ಹರಟೆ ಹೊಡೆಯುತ್ತ ಕುಳಿತರೆ ಅಂಥವರನ್ನು ಹಳ್ಳಿಗರು ಮೈಗಳ್ಳರೆಂದು ಪರಿಗಣಿಸುತ್ತಿದ್ದರು.

ರಾತ್ರಿವೇಳೆ ಹಳ್ಳಿ ಕಾಣುವುದು ಬೆಳದಿಂಗಳಲ್ಲಿ ಮಾತ್ರ. ಪ್ರತಿ ಹುಣ್ಣಿಮೆಯ ರಾತ್ರಿ ಮಕ್ಕಳಿಗೆ ಹಬ್ಬ ಇದ್ದಂತೆ. ಆ ಹಳ್ಳಿಯ ಒರಟು ಹಾದಿಯಲ್ಲಿ ನಾವು ಓಡಾಡುತ್ತಿದ್ದೆವು. ಆಗ ನನಗೆ ಒಂದು ಆಶ್ಚರ್ಯ ಕಾದಿತ್ತು. ನಾವು ಮುಂದೆ ಓಡುವಾಗ ಚಂದ್ರ ದೂರ ಹೋದ ಹಾಗೆ ಅನಿಸುವುದು. ಹಿಂದೆ ಓಡುವಾಗ ಬೆನ್ನುಹತ್ತಿದಂತಾಗುವುದು. ಇದೆಲ್ಲ ನಮಗೆ ಬಹಳ ತಮಾಷೆಯ ಓಟವಾಗಿತ್ತು. ಒಂದು ಸಲ ಹಾಗೆ ಹಿಂದಕ್ಕೆ ಓಡುತ್ತ ಹೊರಳಿ ಚಂದ್ರನನ್ನು ನೋಡುವ ಭರದಲ್ಲಿ ಮುಗ್ಗರಿಸಿದಾಗ ಮೊಣಕಾಲು ತಲೆಗೆಲ್ಲ ಪೆಟ್ಟು ಬಿದ್ದಿತ್ತು.

(ರೇಲ್ವೆ ಕ್ರಾಸ್)

ಹಳ್ಳಿಯ ಕೆಲ ಯುವಕರು ರಸ್ತೆ ಕೆಲಸಕ್ಕೆ ಹೋಗುತ್ತಿದ್ದರು. ಕೆಲಸಗಾರರು ರಸ್ತೆ ಮಾಡುವಾಗ ಕಡಿ ಹಾಕಿದ್ದನ್ನು ಸಮತಟ್ಟಾಗಿಸಲು ರೋಡ್ ರೋಲರ್ ಬರುತ್ತಿತ್ತು. ಉಗಿಬಂಡಿಯ ಎಂಜಿನ್ ಹಾಗೆ ಕರ್ರಗೆ ಇದ್ದ ಅದು ಕೂಡ ಸ್ಟೀಂ ಎಂಜಿನನ್ನೇ ಹೊಂದಿತ್ತು. ಅದು ದೊಡ್ಡ ಮತ್ತು ಅಗಲವಾದ ಕಬ್ಬಿಣದ ಗಾಲಿಗಳ ಮೂಲಕ ಆಮೆಗತಿಯಲ್ಲಿ ಸಾಗುವುದನ್ನು ನೋಡಬೇಕು ಎನಿಸುತ್ತಿತ್ತು. ಡಾಂಬರಿನ ಮತ್ತು ಎಂಜಿನಿನ ಎಣ್ಣೆಯ ವಾಸನೆ ಮನಸ್ಸಿಗೆ ಮುದ ನೀಡುತ್ತಿದ್ದವು. (ಸದಾ ಶುದ್ಧ ಹವೆ ಸೇವಿಸಿದವರ ಮನಸ್ಥಿತಿ ಇದು! ಇಂದು ಅಂಥ ವಾಸನೆಯಿಂದ ಗಾವುದ ದೂರ ಹೋಗಬೇಕೆನಿಸುತ್ತದೆ. ಆದರೆ ಅಂಥದ್ದರಲ್ಲೇ ಬದುಕುತ್ತಿದ್ದೇವೆ.)

ಇಂದು ಇಷ್ಟೆಲ್ಲ ಸಮಸ್ಯೆಗಳಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಾದ ಕ್ರಾಂತಿಯಿಂದಾಗಿ ಆಯುಷ್ಯ ಹೆಚ್ಚಾಗಿದೆ. ಆದರೆ ಆ ಕಾಲದಲ್ಲಿ ಹಾಗಿರಲಿಲ್ಲ. ಯಾವುದಾದರೂ ಭಯಂಕರ ರೋಗ ಬಂದರೆ ಸತ್ತಂತೆಯೆ. ಒಂದು ಸಲ ನೆರಮನೆಯ ಒಬ್ಬ ಮನುಷ್ಯ ನನ್ನ ಅಜ್ಜಿಯ ಬಳಿ ಬಂದು ‘ನನಗೂ ಚಾಳೀಸ್ ಆತ್ರೀ’ ಅಂದ. ನಲವತ್ತು ವರ್ಷ ಆಯಿತೆಂದರೆ ವೃದ್ಧಾಪ್ಯ ಆರಂಭವಾಯಿತು ಎಂದು ಆಗಿನ ಜನ ತಿಳಿದುಕೊಳ್ಳುತ್ತಿದ್ದರು. ಅವರು ಕನ್ನಡಕಕ್ಕೆ ಚಾಳೀಸ್(40) ಎಂದೇ ಕರೆಯುತ್ತಾರೆ. ಅದು ವೃದ್ಧಾಪ್ಯದ ಮೊದಲ ಸಂಕೇತ.

(ಚಿತ್ರಗಳು: ಸುನೀಲಕುಮಾರ ಸುಧಾಕರ)

About The Author

ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

1 Comment

  1. ಫಕೀರ್ ಮುಹಮ್ಮದ್ ಕಟ್ಪಾಡಿ

    ದರ್ಗಾ ನೀವು ನಿಮ್ಮ ನೆನಪುಗಳನ್ನು ಮಾತ್ರ ಹಂಚಿಕೊಳ್ಳುತ್ತಿಲ್ಲ. ಜೊತೆಗೆ ಅಂದಿನ ಸಮಾಜ, ಪರಿಸರ, ಆಚರಣೆ, ನಂಬಿಕೆಗಳು, ಪ್ರಕ್ರತಿಯನ್ನು, ಕಣ್ಣಿಗೆ ಕಟ್ಟುವಂತೆ ಮಾಡುತ್ತೀರಿ. ಇದು ನನಗೆ ಬಹಳ ಇಷ್ಟವಾಯಿತು. ಬರೆಯಿರಿ, ಅಭಿನಂದನೆಗಳು.
    ಫಕೀರ್ ಮುಹಮ್ಮದ್ ಕಟ್ಫಾಡಿ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ