Advertisement
ಅಲ್ಲೀಬಾದಿಯ ಋಣ ತೀರಿತು

ಅಲ್ಲೀಬಾದಿಯ ಋಣ ತೀರಿತು

ಹಳ್ಳಿಯ ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚಿಗೆ ದುಡಿಯುತ್ತಿದ್ದರು. ಅವರು ಹೊಲದ ಕೆಲಸದ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗಿತ್ತು. ತುರಿಸಿಕೊಳ್ಳಲೂ ಸಮಯವಿಲ್ಲದ ಬದುಕು ಅವರದು. ರಾತ್ರಿಯಲ್ಲಿ ಅವರು ಬೇರೆ ಹೆಂಗಸರ ಜೊತೆಗೂಡಿ ಬಯಲುಕಡೆಗೆ ಹೊರಟಾಗ ಮಾತ್ರ ಊರ ಸುದ್ದಿ ಮಾಡನಾಡಲು ಅವಕಾಶ ಸಿಗುತ್ತಿತ್ತು! ಜೊತೆಗೂಡಿ ಗುಡಿಗೆ ಇಲ್ಲವೆ ದರ್ಗಾಕ್ಕೆ ಹೋಗುವುದು ಅವರ ಖಾಸಗಿತನಕ್ಕೆ ಪೂರಕವಾಗಿತ್ತು. ಮನೆಯಲ್ಲಿನ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ಮನೆ ಮನೆಗೆ ‘ಅರಿಷಿಣ ಕುಂಕುಮ’ ಕೊಡಲು ಹೋಗುವ ಸಂದರ್ಭದಲಿ ಅವರು ತಮ್ಮ ಓರಿಗೆಯ ಹೆಣ್ಣುಮಕ್ಕಳನ್ನು ಭೇಟಿಯಾಗಿ ಉಭಯ ಕುಶಲೋಪರಿಯಲ್ಲಿ ತೊಡಗುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಎಂಟನೆಯ ಕಂತು.

 

ಇಷ್ಟೊಂದು ಜಾತಿಗಳಿದ್ದರೂ ಮೂಢನಂಬಿಕೆ ಎಂಬುದು ಜಾತ್ಯತೀತವಾಗಿದೆ. ಅದು ಎಲ್ಲ ಧರ್ಮ, ವರ್ಣ ಮತ್ತು ಜಾತಿಗಳನ್ನು ಆವರಿಸಿದೆ. ಇದಕ್ಕೆ ಅಲ್ಲೀಬಾದಿ ಜನ ಕೂಡ ಹೊರತಲ್ಲ.

ರಾತ್ರಿ ಗೂಗಿ ಕೂಗಿದಾಗ ಬೆಳಗಾಗುವುದರೊಳಗಾಗಿ ಜನ ಗುಂಪುಗೂಡುತ್ತಿದ್ದರು. ಯಾವ ಕಡೆಯಿಂದ ಕೂಗು ಕೇಳಿಸಿತು, ಯಾರ ಮನೆಯ ಮೇಲಿಂದ ಕೂಗಿತು. ಯಾವ ಅನಾಹುತ ಕಾಯ್ದಿದೆ ಮುಂತಾದ ಪ್ರಶ್ನೆಗಳು ಚರ್ಚೆಯ ವಿಷಯವಾಗುತ್ತಿದ್ದವು. ಒಂದು ಗೂಬೆಯ ಕೂಗು ಎಂಥ ಧೀರರನ್ನೂ ಅಧೀರರನ್ನಾಗಿ ಮಾಡುತ್ತಿತ್ತು. ಒಂದು ಸಲ ಮನೆಯೊಂದರ ಮೇಲಿಂದ ರಾತ್ರಿ ಗೂಬೆ ಕೂಗಿದ್ದು ಹಳ್ಳಿ ತುಂಬ ಗುಸುಗುಸು ಆಯಿತು. ಹೆಂಡತಿಯ ಊರಿಗೆ ಹೋಗಿದ್ದ ಆ ಮನೆಯೊಡೆಯನ ಮಗ ಸತ್ತ ಸುದ್ದಿ ಕೆಲ ದಿನಗಳ ನಂತರ ಬಂದಿತು. ಗೂಗಿ ಕೂಗಿದ್ದು ಖರೆ ಆಯಿತು ಎಂದು ಜನ ಅಂದುಕೊಂಡರು. ‘ಹೆಂಡತಿ ಮನೆಯವರು ಮಾಯ ಮಾಟ ಮಾಡಿಸಿ ಮಗನನ್ನು ಕೊಂದರು’ ಎಂದು ಆತನ ತಂದೆ ಗೋಳಾಡಿದ.

(ಗೂಗಿ)

ಎಣ್ಣೆ ಮತ್ತು ಉಪ್ಪನ್ನು ಜೊತೆಯಾಗಿ ಖರೀದಿ ಮಾಡಬಾರದು, ರಾತ್ರಿ ಉಪ್ಪಿಗೆ ಸಕ್ಕರೆ ಅನ್ನಬೇಕು, “ದೀಪ ಆರಿಸು” ಎನ್ನಬಾರದು. “ದೀಪ ಶಾಂತ ಮಾಡು” ಎನ್ನಬೇಕು. ಹೆಂಡತಿ ಗಂಡನ ಜೊತೆ ಜೊತೆ ಸಾಗದೆ ಹಿಂಬಾಲಿಸಬೇಕು, ಕೂಡುವಾಗ ಗಂಡನ ಎಡಕ್ಕೇ ಕೂಡಬೇಕು. ವಿಧವೆಯರು ಶುಭ ಕಾರ್ಯದಲ್ಲಿ ಪಾಲ್ಗೊಳ್ಳಬಾರದು. ಹೆಣ್ಣುಮಕ್ಕಳು ಮಂಗಳವಾರ ತವರುಮನೆಯಿಂದ ಗಂಡನ ಮನೆಗೆ ಹೋಗಬಾರದು. ಬೇನೆ ಬಿದ್ದರೆ ಮಠಕ್ಕೆ ಇಲ್ಲವೆ ದರ್ಗಾಕ್ಕೆ ಹೋಗಿ ರಕ್ಷಾಮಂತ್ರ ಒಳಗೊಂಡ ತಾಯತ ಕಟ್ಟಿಕೊಳ್ಳಬೇಕು. ಅಂಟುಜಾಡ್ಯ ಉಂಟಾದರೆ ದುರ್ಗವ್ವ ದ್ಯಾಮವ್ವಗೆ ಶಾಖಾಹಾರಿಗಳು ಕೂಡ ಕೋಳಿ ಬಲಿ ಕೊಡಬೇಕು. ಎಡಗೈಯಿಂದ ಹಣ ಕೊಡಬಾರದು. ಗಂಡಂದಿರು ಉಂಡ ಗಂಗಾಳ ತೊಳೆಯಬಾರದು. ಶುಭಕಾರ್ಯಕ್ಕೆ ಹೋಗುವಾಗ “ಎಲ್ಲಿಗೆ ಹೊರಟಿರಿ” ಎಂದು ಕೇಳಬಾರದು. ಸತ್ತವರ ‘ದಿನ’ (ಶಿವಗಣಾರಾಧನೆ) ಮಾಡುವಾಗ ಅಲ್ಲಿಗೆ ಹೋಗಿ ತಿಂದ ಮೇಲೆ ತಿರುಗಿ ಬರುವಾಗ, “ಹೋಗಿ ಬರುತ್ತೇವೆ” ಎಂದು ಹೇಳಬಾರದು. ಹೇಳದೆ ಬರಬೇಕು. ಖಾಲಿ ಕೊಡ ತೆಗೆದುಕೊಂಡು ಬೇರೆಯವರ ಮನೆಗೆ ಹೋಗಬಾರದು. ಊರಿಗೆ ಹೋಗುವಾಗ ತುಂಬಿದ ಕೊಡ ಹೊತ್ತುಕೊಂಡು ಎದುರಿಗೆ ಬಂದರೆ ಶುಭ ಸೂಚನೆ. ಆದರೆ ಬೆಕ್ಕು ಅಡ್ಡಬರಬಾರದು. ಮನೆಯ ಮೇಲೆ ಗುಡಿಯ ನೆರಳು ಬೀಳಬಾರದು. ಮನೆಯ ಮುಂದೆ ನುಗ್ಗಿಗಿಡ ಬೆಳೆದರೆ ಮನೆತನ ನುಗ್ಗಾಗುವುದು ಮುಂತಾದ ನೂರಾರು ತೆರನಾದ ಮೂಢನಂಬಿಕೆಗಳು ಜನರಲ್ಲಿ ಮನೆಮಾಡಿಕೊಂಡಿದ್ದವು.

ಇಂಥ ಮೂಢನಂಬಿಕೆಗಳ ಜೊತೆಗೆ ಕೆಲ ಗುಪ್ತ ಮೂಢನಂಬಿಕೆಗಳೂ ಇದ್ದವು. ಮಕ್ಕಳಾಗದ ಮಹಿಳೆಯರು ಕ್ಯಾರಿಗೆ ಚುಚ್ಚಿದ ಸೂಜಿಯಿಂದ ಬೇರೆಯವರ ಕೂಸಿನ ಬೆನ್ನಿಗೆ ಎಳೆದು ಆ ಕೂಸಿನ ಚರ್ಮದ ಮೇಲೆ ಕಲೆ ಬೀಳಿಸಿದರೆ ಮಕ್ಕಳಾಗುತ್ತವೆ ಎಂಬ ಮೂಢ ನಂಬಿಕೆ ಇತ್ತು. ಈ ಕಾರಣದಿಂದಾಗಿ ಮಕ್ಕಳಾಗದವರು ಬೇರೆಯವರ ಕೂಸುಗಳನ್ನು ಎತ್ತಿಕೊಳ್ಳಲು ಭಯ ಪಡುತ್ತಿದ್ದರು. ಒಂದು ಸಲ ಒಬ್ಬರ ಮನೆಯ ಕೂಸಿನ ಬೆನ್ನಲ್ಲಿ ಕ್ಯಾರು ಹಾಕಿದ್ದು ದೊಡ್ಡ ರಾದ್ಧಾಂತವಾಯಿತು. ಆಜುಬಾಜು ಎಲ್ಲರಿಗೂ ಮಕ್ಕಳಾಗಿದ್ದರಿಂದ ಕ್ಯಾರು ಹಾಕಿದವರು ಯಾರು ಎಂಬುದು ಕೊನೆಗೂ ಗೊತ್ತಾಗದೆ ಹೋಯಿತು.

ಅಮಾವಾಸ್ಯೆ ರಾತ್ರಿ ಅರಿಸಿನ ಕುಂಕುಮ ಲಿಂಬೆಕಾಯಿ ಸೂಜಿ ಮುಂತಾದವುಗಳನ್ನು ಇಡುವುದು ಸಾಮಾನ್ಯವಾಗಿತ್ತು. ತಮ್ಮ ಮೇಲಿನ ಪೀಡಾ ಅವುಗಳನ್ನು ತುಳಿದವರ ಇಲ್ಲವೆ ದಾಟಿದವರ ಮೇಲೆ ಹೋಗುತ್ತದೆ ಎಂಬ ಮೂಢನಂಬಿಕೆ ಅವರಿಗೆ.

ನಮ್ಮ ಅಜ್ಜಿಗೂ ಕೆಲ ಮೂಢನಂಬಿಕೆಗಳು ಇದ್ದಿರಬಹುದು. ಆದರೆ ಆಕೆಗೆ ಒಂದಿಷ್ಟು ತರ್ಕಗಳಿದ್ದವು. ಮನೆಯಲ್ಲಿ ಸದಾ ವಿಭೂತಿ ಗಟ್ಟಿಯನ್ನು ಇಟ್ಟುಕೊಂಡಿರುತ್ತಿದ್ದಳು. ಅವಳ ದೃಷ್ಟಿಯಲ್ಲಿ ವಿಭೂತಿಯು ವಿವಿಧ ರೋಗಗಳಿಗೆ ರಾಮಬಾಣವಾಗಿತ್ತು.

ಕಳ್ಳಿಗಿಡಗಳ ಗುಂಪಿನಲ್ಲಿ ನಾವು ಹುಡುಗರು ಕಳ್ಳಾಟ ಆಡುವ ಸಂದರ್ಭದಲ್ಲಿ ನನ್ನ ಕಣ್ಣಲ್ಲಿ ಕಳ್ಳಿಯ ಹಾಲು ಬಿದ್ದಿತು. ನಾನು ಅಳುತ್ತ ಮನೆಗೆ ಓಡಿಬಂದೆ. ಆಕೆ ಹಾಲು ಬಿದ್ದ ಕಣ್ಣಲ್ಲಿ ವಿಭೂತಿ ಪುಡಿ ಹಾಕಿದಳು. ಆಗ ಆ ಪುಡಿ ಕಳ್ಳಿಯ ಹಾಲನ್ನು ಹೀರಿಕೊಂಡಿತು. ನಂತರ ಪಾತ್ರೆಯಲ್ಲಿ ನೀರು ತುಂಬಿಕೊಟ್ಟು ಮುಖ ಮುಳುಗಿಸಿ ಕಣ್ಣು ಪಿಳುಕಿಸಲು ಹೇಳಿದಳು. ಹಾಗೆ ಮಾಡಿದ ನಂತರ ಖುಷಿಯಿಂದ ಓಡುತ್ತ ಮತ್ತೆ ಆಡಲು ಹೋದೆ.

ಬಾಯಿ ಬಂದಾಗ ಅಂದರೆ ಬಾಯಿಯಲ್ಲಿ (ಬಿ ಕಾಂಪ್ಲೆಕ್ಸ್ ಕೊರತೆಯಿಂದಾಗಿ) ಗುಳ್ಳೆಗಳಾದಾಗ ಉರಿತದಿಂದಾಗಿ ತಿನ್ನಲು ಬಹಳ ಕಿರಿಕಿರಿಯಾಗುತ್ತಿತ್ತು. ಆಗ ಬಾಯಿಯೊಳಗೆ ವಿಭೂತಿ ಪುಡಿ ಸವರುತ್ತಿದ್ದಳು. ಜ್ವರ ಬಂದಾಗ ಹುರುಳಿ ಅಂಬಲಿಯನ್ನು ಕುಡಿಸಿದ ನಂತರ ಮೈತುಂಬ ವಿಭೂತಿ ಹಚ್ಚಿ ಮಲಗಿಸುತ್ತಿದ್ದಳು. ಕೆಮ್ಮು ಹತ್ತಿದಾಗ ಬೆಳ್ಳುಳ್ಳಿ ಪಕಳೆಗಳನ್ನು ಸುಲಿದು ಸರ ಮಾಡಿ ಕೊರಳಲ್ಲಿ ಕಟ್ಟುತ್ತಿದ್ದಳು. ಹೊಟ್ಟೆಗೆ ಅದೇನೋ ಮಾಡಿ ಹಾಕುತ್ತಿದ್ದಳು. ಹೊಟ್ಟೆಯ ಗಂಟು ಸರಿದಾಗ ಅಂಗಾತ ಮಲಗಿಸಿ ಹೊಟ್ಟೆಯ ಮೇಲೆ ದೀಪವನ್ನು ಇರಿಸಿ ಮೇಲೆ ಬೋಗುಣಿ ಮುಚ್ಚುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲೇ ದೀಪ ಆರಿ ಬೋಗುನಿ ಹೊಟ್ಟೆಗೆ ಗಟ್ಟಿಯಾಗಿ ಅಂಟಿಕೊಂಡಾಗ ಹೊಟ್ಟೆಯ ಗಂಟು ಸರಿಯಾಗುತ್ತಿತ್ತು. ಗುಡುಗು ಸಿಡಿಲಿನ ಮಳೆ ಬಂದಾಗ ಉಕ್ಕಿನ ಕುರ್ಪಿಯನ್ನು ಅಂಗಳಕ್ಕೆ ಎಸೆಯುತ್ತಿದ್ದಳು.

(ಹಾರುವ ಕೀಟ)

ರಾತ್ರಿ ಹೊನ್ನಿಹುಳ(ಮಿಂಚುಹುಳ)ಗಳು ತಿಳಿಹಸಿರುಬಣ್ಣದ ಬೆಳಕು ಸೂಸುತ್ತ ಬರುವಾಗ ಅವುಗಳನ್ನು ಹಿಡಿದು ಅರಳಿಯಲ್ಲಿ ಬಂಧಿಸಿ ಆ ಕತ್ತಲಲ್ಲಿ ನೋಡುವುದು ಬಹಳ ಖುಷಿ ಕೊಡುತ್ತಿತ್ತು. ಅದೇ ರೀತಿ ಹಚ್ಚಹಸಿರಿನ ಹೊಳಪುಳ್ಳ ಬೌರಂಗಿ ಹಾಗೂ ಇಟ್ಟಿಗೆ ಬಣ್ಣದ ರೆಕ್ಕೆಗಳುಳ್ಳ ನಗಾರಿ ಬೌರಂಗಿಗಳನ್ನು ಹಿಡಿಯುವುದರಲ್ಲಿ ಬಹಳ ಆಸಕ್ತಿ ಇತ್ತು. ನಗಾರಿ ಬೌರಂಗಿಗಳು ಕಡಿಮೆ. ಆದರೆ ಹಸಿರು ಬೌರಂಗಿಗಳು ರಾಶಿರಾಶಿಯಾಗಿ ಸಿಗುತ್ತಿದ್ದವು. ಜಾಲಿಗಿಡದಿಂದ ಅಂಟು ತೆಗೆಯಲು ಹೋದಾಗ ಬೌರಂಗಿಗಳು ಅದಕ್ಕೆ ಮರಕತ (ಹಸಿರು ಬಣ್ಣದ ರತ್ನ)ದಂತೆ ಅಂಟಿಕೊಂಡಂತೆ ಭಾಸವಾಗುತ್ತಿತ್ತು. ಅವುಗಳಲ್ಲಿ ಮೂರ್ನಾಲ್ಕು ಹಿಡಿದು ಕಡ್ಡಿಪೆಟ್ಟಿಗೆಯಲ್ಲಿಟ್ಟು ತಿನ್ನಲು ಜಾಲಿ ತೊಪ್ಪಲನ್ನು ಹಾಕುತ್ತಿದ್ದೆ. ಅವುಗಳ ಕತ್ತಿಗೆ ದಾರಕಟ್ಟಿ ಹಾರಿಸುತ್ತಿದ್ದೆ. ಕಡ್ಡಿಪೆಟ್ಟಿಗೆಯಲ್ಲಿ ಬೌರಂಗಿಗಳು ತತ್ತಿ ಇಡುತ್ತಿದ್ದವು. ಅವು ಸುಸ್ತಾದಾಗ ಅವುಗಳ ಕಾಲುಗಳನ್ನು ಒತ್ತಿ ಮುಂದೆ ಚಲಿಸುವಂತೆ ಮಾಡುತ್ತಿದ್ದೆ. ಹೀಗೆಲ್ಲ ಮಾಡುವುದು ಹಿಂಸೆ ಎಂಬ ಅರಿವು ಆಗಿರಲಿಲ್ಲ.

ಮಳೆ ಬರುವ ವೇಳೆ ಮಳೆಹುಳುಗಳು ಬರುತ್ತಿದ್ದವು. ಕೆಲವೊಂದರ ಆಯುಷ್ಯ ಬಹಳ ಕಡಿಮೆ ಇರುತ್ತಿತ್ತು. ಅವು ಬೆಳಕಿಗೆ ಆಕರ್ಷಿತವಾಗುತ್ತಿದ್ದವು. ಹಾರಾಡಿ ಹಾರಾಡಿ ರೆಕ್ಕೆ ಮುರಿದುಕೊಂಡು ಬೀಳುತ್ತಿದ್ದವು. ಹಗಲು ಹೊತ್ತಿನಲ್ಲಿ ಕೆಲವೊಂದು ಕೀಟಗಳು ಹೆಲಿಕಾಪ್ಟರ್ ಹಾಗೆ ಕಾಣುತ್ತಿದ್ದವು. ಎರಡೂ ಕಡೆ ಎರಡೆರಡು ರೆಕ್ಕೆಗಳಿದ್ದು ಅವು ಬಹಳ ವೇಗವಾಗಿ ಬಡಿಯುತ್ತಿದ್ದವು. ಅವುಗಳನ್ನು ಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದೆ. ಕೆಲವೊಂದು ಸಲ ತರಹೇವಾರಿ ಪಾತರಗಿತ್ತಿಗಳು ಗಿಡದ ರೆಂಬೆಗಳಿಗೆ ಮುತ್ತಿಕೊಂಡಿರುತ್ತಿದ್ದವು. ಕೆಲವೊಂದು ಪಾತರಗಿತ್ತಿಗಳನ್ನು ಹಿಡಿಯಲು ಸಾಧ್ಯವಾಗುತ್ತಿತ್ತು. ಆದರೆ ಅವುಗಳ ಹುಡಿ ಕೈಗೆ ಮೆತ್ತಿಕೊಳ್ಳುತ್ತಿತ್ತು.

(ಬೆಂಡಿನ ಆಟಿಕೆ ಗಾಡಿ)

ಜೋಳದ ದಂಟು ಹಸಿಯಾಗಿದ್ದಾಗ ನಮಗೆ ಕಬ್ಬಾಗುತ್ತಿತ್ತು. ಅದು ಒಣಗಿದಾಗ ಅದನ್ನು ಸುಲಿದು ಒಳಗಿನ ಬೆಂಡನ್ನು ಬೇಕಾದ ರೀತಿಯಲ್ಲಿ ತುಂಡರಿಸಿ ಎತ್ತಿನ ಗಾಡಿ ಮತ್ತು ಎತ್ತುಗಳನ್ನು ಮಾಡುತ್ತಿದ್ದೆವು. ಮಳೆ ಬಂದು ನಿಂತಾಗ ಕಾಲಿನ ಮೇಲೆ ಮಣ್ಣಿನ ಗುಂಪಿ ಹಾಕಿ ಮೆತ್ತಗೆ ಕಾಲು ಹೊರಗೆ ತೆಗೆದು ಗುಬ್ಬಿ ಮನಿ ಮಾಡುತ್ತಿದ್ದೆವು.

ಹಳ್ಳಿಯ ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚಿಗೆ ದುಡಿಯುತ್ತಿದ್ದರು. ಅವರು ಹೊಲದ ಕೆಲಸದ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗಿತ್ತು. ತುರಿಸಿಕೊಳ್ಳಲೂ ಸಮಯವಿಲ್ಲದ ಬದುಕು ಅವರದು. ರಾತ್ರಿಯಲ್ಲಿ ಅವರು ಬೇರೆ ಹೆಂಗಸರ ಜೊತೆಗೂಡಿ ಬಯಲುಕಡೆಗೆ ಹೊರಟಾಗ ಮಾತ್ರ ಊರ ಸುದ್ದಿ ಮಾಡನಾಡಲು ಅವಕಾಶ ಸಿಗುತ್ತಿತ್ತು! ಜೊತೆಗೂಡಿ ಗುಡಿಗೆ ಇಲ್ಲವೆ ದರ್ಗಾಕ್ಕೆ ಹೋಗುವುದು ಅವರ ಖಾಸಗಿತನಕ್ಕೆ ಪೂರಕವಾಗಿತ್ತು. ಮನೆಯಲ್ಲಿನ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ಮನೆ ಮನೆಗೆ ‘ಅರಿಷಿಣ ಕುಂಕುಮ’ ಕೊಡಲು ಹೋಗುವ ಸಂದರ್ಭದಲಿ ಅವರು ತಮ್ಮ ಓರಿಗೆಯ ಹೆಣ್ಣುಮಕ್ಕಳನ್ನು ಭೇಟಿಯಾಗಿ ಉಭಯ ಕುಶಲೋಪರಿಯಲ್ಲಿ ತೊಡಗುತ್ತಿದ್ದರು. ನಾಗರಪಂಚಮಿಯಲ್ಲಿ ಗಂಡನ ಮನೆಯಿಂದ ಬಂದ ಹೆಣ್ಣುಮಕ್ಕಳು ಗೆಳತಿಯರೊಡನೆ ಜೋಕಾಲಿ ಆಡುತ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರು.

(ಗೋಧೂಳಿ ಸಮಯ)

ಜ್ವರ ಬಂದಾಗ ಹುರುಳಿ ಅಂಬಲಿಯನ್ನು ಕುಡಿಸಿದ ನಂತರ ಮೈತುಂಬ ವಿಭೂತಿ ಹಚ್ಚಿ ಮಲಗಿಸುತ್ತಿದ್ದಳು. ಕೆಮ್ಮು ಹತ್ತಿದಾಗ ಬೆಳ್ಳುಳ್ಳಿ ಪಕಳೆಗಳನ್ನು ಸುಲಿದು ಸರ ಮಾಡಿ ಕೊರಳಲ್ಲಿ ಕಟ್ಟುತ್ತಿದ್ದಳು. ಹೊಟ್ಟೆಗೆ ಅದೇನೋ ಮಾಡಿ ಹಾಕುತ್ತಿದ್ದಳು.

ಗಂಡಸರಿಗೆ ಹರಟೆ ಹೊಡೆಯಲು ಜಾಗಗಳಿದ್ದವು. ವಿಜಾಪುರದಿಂದ ಇಂಡಿಗೆ ಹೋಗುವ ದಾರಿಯಲ್ಲಿ 10 ಕಿಲೊಮೀಟರ್ ಸಾಗಿದ ಮೇಲೆ ಎಡಗಡೆ ಅರ್ಧ ಕಿಲೊಮೀಟರ್‌ನಷ್ಟು ಒಳಗೆ ಅಲ್ಲೀಬಾದಿ ಇರುವುದು. ಅನೇಕ ಗಂಡಸರು ಆ ಕ್ರಾಸಿಗೆ ಹೋಗಿ ಅಲ್ಲಿಯ ದೊಡ್ಡ ಗುಡಿಸಲಿನಂಥ ಹೊಟೆಲಲ್ಲಿ ಚೂಡಾ, ಭಜಿ ತಿನ್ನುತ್ತ ಚಹಾ ಕುಡಿಯುತ್ತ ಚುಟ್ಟಾ ಇಲ್ಲವೆ ಚಿಲಮಿ ಸೇದುತ್ತ ರಾತ್ರಿ ಊಟದವರೆಗೆ ದೇಶಾವರಿ ಮಾತನಾಡುತ್ತ ಹರಟೆ ಹೊಡೆಯುತ್ತಿದ್ದರು.

(ಚಿಲಮಿ ಸೇದುವ ಸ್ಟೈಲ್)

ಚಿಲಮಿಗಳನ್ನು ಕುಂಬಾರರು ತಯಾರಿಸುತ್ತಿದ್ದರು. ಚಿಲಮಿಯಲ್ಲಿ ಅದಕ್ಕೆಂದೇ ತಯಾರಿಸಿ ಕಬ್ಬಿಣದ ತುಂಡೊಂದನ್ನು ಅದರ ತಳದಲ್ಲಿ ತಂಬಾಕು ಹೊರಬರದ ಹಾಗೆ ಇಟ್ಟ ನಂತರ ತಂಬಾಕು ತುಂಬುತ್ತಿದ್ದರು. ನಂತರ ದೂದಿ ಅರಳಿಯೊಂದಿಗೆ ಬೆಣಚುಕಲ್ಲಿನ ತುಕಡಿಗೆ ಕಿರುಬೆರಳಿನಷ್ಟು ಉದ್ದದ ಉಕ್ಕಿನ ಚಕಮಕಿಯಿಂದ ಹೊಡೆಯುತ್ತಿದ್ದರು. ಆಗ ಕಿಡಿ ಹಾರಿ ದೂದಿ ಅರಳಿಗೆ ಬೆಂಕಿ ಹತ್ತುತ್ತಿತ್ತು. ನಂತರ ಚಿಲಮಿಯಲ್ಲಿ ತುಂಬಿದ ತಂಬಾಕಿನ ಮೇಲೆ ಆ ದೂದಿಯನ್ನು ಇಟ್ಟು ಚಿಲಮಿ ಸೇದುತ್ತಿದ್ದರು. ಹಾಗೆ ಸೇದುವಾಗ ಚಿಲಮಿಯ ಕೆಳಗಡೆ ಬಟ್ಟೆಯ ತುಂಡನ್ನು ಫಿಲ್ಟರ್ ಹಾಗೆ ಇಡುತ್ತಿದ್ದರು. ಚಿಲಮಿ ಇಲ್ಲದವರು ಸುತ್ತಿದ ಎಕ್ಕಿ ಎಲೆಯೊಳಗೆ ತಂಬಾಕು ತುಂಬಿ ಸೇದುತ್ತಿದ್ದರು.

ಬೆಣಚು ಕಲ್ಲಿಗೆ ಚಕಮಕಿಯಿಂದ ಹೊಡೆದು ದೂದಿ ಅಳ್ಳಿಗೆ ಬೆಂಕಿ ಹಚ್ಚುವುದು ನನಗೆ ಆಶ್ಚರ್ಯವೆನಿಸುತ್ತಿತ್ತು.

ವಿಧುರ ಮತ್ತು ವಿಧವೆಯರ ಮದುವೆಗಳೂ ಆಗುತ್ತಿದ್ದವು. ಅದಕ್ಕೆ ಉಡಕಿ (ಕೂಡಾವಳಿ) ಎಂದು ಕರೆಯುತ್ತಾರೆ. ಅಂಥ ಮದುವೆಗಳು ಬಹಳ ಸರಳವಾಗಿರುತ್ತಿದ್ದವು. ಎರಡೂ ಕಡೆಯವರ ಸಂಬಂಧಿಕರು ಮತ್ತು ಅವರ ಕುಟುಂಬಗಳ ಕೆಲ ಆಪ್ತರು ಮಾತ್ರ ಪಾಲ್ಗೊಳ್ಳುತ್ತಿದ್ದರು. ಆ ಉಡುಕಿ ಮದುವೆಯಲ್ಲಿ ವಧುವಿಗೆ ವರ ತಾಳಿಯ ಬದಲು ಅರಿಷಿಣ ಕೊಂಬು ಕಟ್ಟುತ್ತಿದ್ದುದು ನೆನಪಾಗುತ್ತಿದೆ. ಅವಳಿಗೆ ಹೊಸ ಇಳಕಲ್ ಸೀರೆ ಉಡಿಸುತ್ತಿದ್ದರು. ಒಂದರ್ಧ ಗಂಟೆಯಲ್ಲಿ ಮದುವೆ ಮುಗಿದು ಹೋಗುತ್ತಿತ್ತು.

ಬಾಲ್ಯವಿವಾಹಗಳು ಸಾಮಾನ್ಯವಾಗಿದ್ದವು. ಒಂದು ಹೆಣ್ಣು ಹುಟ್ಟಿದರೆ, ಸಂಬಂಧದಲ್ಲಿ ಅದಕ್ಕೆ ಮದುವೆ ಗಂಡನ್ನು ಫಿಕ್ಸ್ ಮಾಡುತ್ತಿದ್ದ ಉದಾಹರಣೆಗಳೂ ಇವೆ. ಕಳ್ಳುಬಳ್ಳಿಯಲ್ಲಿ ಹೆಣ್ಣು ಕೊಡುವ ಬಗ್ಗೆ ಆಸಕ್ತಿ ತೋರುತ್ತಿದ್ದರು. ಹುಡುಗರು ಹೆಚ್ಚಾಗಿ ನಾಲ್ಕಾರು ವರ್ಷ ದೊಡ್ಡವರಾಗಿರುತ್ತಿದ್ದರು. ತಮ್ಮನಿಗೆ ಮಗಳನ್ನು ಕೊಡುವ ಬಗ್ಗೆ ಅಕ್ಕ ಆಸಕ್ತಿ ತೋರುತ್ತಿದ್ದಳು. ಮಗಳು ತನ್ನ ತವರುಮನೆಯಲ್ಲಿ ಸುಖವಾಗಿರುತ್ತಾಳೆ ಎಂಬ ತರ್ಕವೂ ಇದರಲ್ಲಿ ಸೇರಿತ್ತು. ಸೋದರಮಾವ ದೊಡ್ಡವನಿದ್ದರೆ ಆತನ ಮಗನಿಗೆ ಕೊಡುವ ಪದ್ಧತಿ ಇಂದಿಗೂ ಮುಂದುವರಿದಿದೆ. ಸೋದರಮಾವನ ಮಗಳನ್ನು ಮದುವೆಯಾಗುವುದು ಕೂಡ ಸಾಮಾನ್ಯವಾಗಿದೆ.

ಸರಿಯಾಗಿ ಹೊಂದಾಣಿಕೆಯಾದರೆ ದೊಡ್ಡವರ ಮದುವೆಯಲ್ಲಿ ಖರ್ಚಿಲ್ಲದೆ ಬಾಲ್ಯವಿವಾಹಗಳು ಕೂಡ ನಡೆಯುತ್ತಿದ್ದವು. ತೊಟ್ಟಿಲಲ್ಲಿ ಇರುವ ಹೆಂಗೂಸಿಗೆ ಮೂರು ವರ್ಷದ ಬಾಲಕನ ಜೊತೆ ವಿವಾಹ ಮಾಡಲು ಕೂಡ ಜನರು ಹಿಂದೆಮುಂದೆ ನೋಡುತ್ತಿರಲಿಲ್ಲ. ಒಬ್ಬ ಹುಡುಗ ನನಗಿಂತ ಚಿಕ್ಕವನಾಗಿದ್ದ. ಸಂಬಂಧಿಕರ ಹೆಂಗೂಸಿನ ಜೊತೆ ಆತನ ಮದುವೆ ನಿಶ್ಚಯವಾಯಿತು. ತನಗೆ ಬಂದೂಕು ಕೊಟ್ಟರೆ ಮದುವೆಯಾಗುವುದಾಗಿ ಆತ ಹಟ ಮಾಡಿದ್ದುಂಟು!

(ಎಡಿ ಹೊಡೆಯುವುದು)

ಹಳ್ಳಿಗಳಲ್ಲಿ ಮದುವೆಯ ರಿಹರ್ಸಲ್ ನಡೆಯುತ್ತಿದ್ದವು. ಬಾಲಕ ಬಾಲಕಿಯನ್ನು ವರ ವಧುವಾಗಿಸಿ ಕೂಡಿಸುತ್ತಿದ್ದರು. ಮಕ್ಕಳನ್ನೆಲ್ಲ ಸೇರಿಸಿ ಎರಡು ಗುಂಪು ಮಾಡುತ್ತಿದ್ದರು. ಒಂದು ಗುಂಪು ಹೆಣ್ಣಿನ ಕಡೆಯದು. ಇನ್ನೊಂದು ಗುಂಪು ಗಂಡಿನ ಕಡೆಯದು. ವರ ಮತ್ತು ವಧುವಿನ ತಾಯಿ ತಂದೆಯರನ್ನಾಗಿ ಬಾಲಕ ಬಾಲಕಿಯರನ್ನು ಆಯ್ಕೆ ಮಾಡಿ ಆಯಾ ಗುಂಪಿನಲ್ಲಿ ನಿಲ್ಲಿಸುತ್ತಿದ್ದರು. ಮದುವೆಯ ಎಲ್ಲ ಸಂಪ್ರದಾಯಗಳ ಪ್ರಯೋಗವಾಗುತ್ತಿತ್ತು. ಲಗ್ನದ ರಿಹರ್ಸಲ್ ಮುಗಿದ ನಂತರ ಅವರು ಈ ರಿಹರ್ಸಲ್‌ನಲ್ಲಿ ಗಂಡ ಹೆಂಡಿರಾಗುತ್ತಿದ್ದರು. ಹೆಂಡತಿ ಗಂಡನ ಹೆಸರು ಹೇಳುವಾಗ ಒಗಟಿನ ರೂಪದಲ್ಲಿ ಹೇಳುವುದು. ಗಂಡ ಹೆಂಡತಿಯ ಹೆಸರು ಹೇಳುವಾಗ ಅದೇರೀತಿ ಒಗಟಿನ ಮೂಲಕ ಹೇಳುವುದು ನಡೆಯುತ್ತಿತ್ತು. ಇವನ್ನೆಲ್ಲ ಆ ಮಕ್ಕಳಿಗೆ ಮೊದಲೇ ಕಲಿಸುತ್ತಿದ್ದರು. ಹೀಗೆ ಹಾಸ್ಯ ಚಟಾಕಿಗಳು ಇಂಥ ಆಟದ ಮದುವೆಯ ಸಂಭ್ರಮವನ್ನು ಹೆಚ್ಚಿಸುತ್ತಿದ್ದವು.

ಜೀವನವೆಂದರೆ ದುಡಿಯುವುದು, ಮದುವೆ ಆಗುವುದು ಮಕ್ಕಳ ಹಡೆಯುವುದು. ಮಕ್ಕಳ ಸಂಭ್ರಮವನ್ನು ನೋಡುವುದು. ವಯಸ್ಸಾದ ಮೇಲೆ ಮೊಮ್ಮಕ್ಕಳ ಬಗ್ಗೆ ಚಿಂತಿಸುವುದು. ಮತ್ತೆ ಕೆಲವರು ವಯೋವೃದ್ಧರಾದ ಮೇಲೂ ಮರಿಮೊಮ್ಮಕ್ಕಳನ್ನು ನೋಡುವ ಕನಸು ಕಾಣುವುದು ನಡೆದೆ ಇರುತ್ತಿತ್ತು. ಇಂಥ ಕನಸುಗಳು ಅವರ ಜೀವನಪ್ರೇಮದ ದ್ಯೋತಕವಾಗಿದ್ದವು.

ಎಷ್ಟೇ ಕಷ್ಟಗಳು ಬಂದರೂ ಅವರ ಬದುಕಿನಲ್ಲಿ ನಿರಾಶೆಯ ಕ್ಷಣಗಳು ಬಹಳ ಕಡಿಮೆ. ಅವರು ಬದುಕನ್ನು ಸವಿಯುವ ರೀತಿ ಅನನ್ಯವಾಗಿತ್ತು. ಸಾವು ನೋವು, ಮದುವೆ ಮುಂಜಿ, ಹಬ್ಬ ಹರಿದಿನಗಳು, ಜಾತ್ರೆಗಳು ಉರುಸ್‌ಗಳು, ಹಳ್ಳಿಯ ಸ್ಪರ್ಧೆಗಳು, ಗ್ರಾಮೀಣ ಕಲೆಗಳು, ಹಾಡು ಕುಣಿತ, ಸಣ್ಣಾಟ ದೊಡ್ಡಾಟ ಮುಂತಾದ ಬಯಲಾಟಗಳು, ಹರದೇಶಿ ನಾಗೇಶಿ ಹಾಡುಗಳ ಸ್ಪರ್ಧೆಗಳು, ಸವಾಲ್ ಜವಾಬ್ ಮುಂತಾದ ತತ್ವಪದಗಳು, ಪ್ರವಚನಗಳು ಮುಂತಾದವುಗಳು ಅವರ ಬದುಕಿಗೆ ಮೆರುಗು ನೀಡಿದ್ದವು.

ಜಾತಕಾರರು ಎಮ್ಮೆ ಬೋಳಿಸಲು ಹೆಂಡಂದಿರ ಜೊತೆಗೆ ಹಳ್ಳಿಗೆ ಬರುತ್ತಿದ್ದರು. ಕೆಲವರು ಜಾತಕಾರ ಮಹಿಳೆಯರಿಗೆ ಇವನ್ನೆಲ್ಲ ಹೊಲಿಯಲು ಕೊಡುತ್ತಿದ್ದರು. ಅವರು ಕೂಡ ಹೀಗೆ ಬರುವ ವಿವಿಧ ಕಸಬುಗಾರರಂತೆ ಊರ ಹೊರಗೆ ಟೆಂಟ್ ಹಾಕಿಕೊಂಡು ಇರುತ್ತಿದ್ದರು. ಇದೇ ರೀತಿ ಅಲ್ಯುಮಿನಿಯಂ ಪಾತ್ರೆಗಳನ್ನು ಮಾರುವವರು, ಕಸಬರಿಗೆ ಮತ್ತು ಸೇಂದಿ ಗರಿಗಳಿಂದ ತಯಾರಿಸಿದ ಚಾಪೆ ಮಾರುವ ಕೊರವರು ಮುಂತಾದವರು ಬರುತ್ತಿದ್ದರು.

(ಎಮ್ಮೆ ಬೋಳಿಸುವುದು)

ಇವರಲ್ಲದೆ ಸಿಂಗರಿಸಿದ ಎಕ್ಕಾಗಾಡಿಯಲ್ಲಿ ತುಳಜಾಭವಾನಿಯ ಮೂರ್ತಿಯನ್ನೋ ತೈಲಚಿತ್ರವನ್ನೋ ಇಟ್ಟುಕೊಂಡು ಕುಟುಂಬ ಸಮೇತ ಬಂದು ದವಸಧಾನ್ಯಗಳನ್ನು ಬೇಡಿಕೊಂಡು ಹೋಗುವವರೂ ಬರುತ್ತಿದ್ದರು. ಹೀಗೆ ವಿವಿಧ ದೇವರುಗಳು ನಮ್ಮ ಹಳ್ಳಿಗೆ ಭೇಟಿ ನೀಡುತ್ತಿದ್ದವು.
ಹಳ್ಳಿಗಳಲ್ಲಿ ಕೌದಿಯದೇ ಒಂದು ಕಥೆ. ಹಳೆಯ ಸೀರೆ, ಲಂಗ, ದಾವಣಿ, ಧೋತರ, ಅಂಗಿ, ಮುಂತಾದವುಗಳಿಂದ ಕೌದಿಯನ್ನು ಹೊಲಿಯುತ್ತಿದ್ದರು. ಕೌದಿ ಹೊಲಿಯುವುದು ಕೂಡ ಗ್ರಾಮೀಣ ಕಲೆಗಳಲ್ಲಿ ಒಂದು. ಕೌದಿಯ ನಾಲ್ಕೂ ಮೂಲೆಗೆ ಕಲಾತ್ಮಕವಾದ ಚುಂಗ ಬಿಡುತ್ತಿದ್ದರು. ಸ್ವಲ್ಪ ದೊಡ್ಡ ಸೂಜಿಯಿಂದ ಕೌದಿ ಹೊಲಿಯುವಾಗ ಬಟ್ಟೆಗಳ ವಿವಿಧ ಬಣ್ಣಗಳು ಕೌದಿಯಲ್ಲಿ ಮೇಳೈಸುವ ಹಾಗೆ ಮಾಡುತ್ತಿದ್ದರು. ಒಳಗೆ ಚೌಕು ಚೌಕಾದ ಹೊಲಿಗೆ ಎದ್ದು ಕಾಣುತ್ತಿತ್ತು. ಮಧ್ಯೆ ಮಧ್ಯೆ ಹೂಗಳ, ಮತ್ತು ಪಕ್ಷಿಗಳ ಚಿತ್ತಾರ ಇರುತ್ತಿದ್ದವು. ಹೀಗೆ ಹಳೆಯ ಬಟ್ಟೆಯಿಂದ ಕಲಾತ್ಮಕವಾದ ಹೊಸ ಕೌದಿಗಳು ತಯಾರಾಗುತ್ತಿದ್ದವು.

ಕೌದಿ ಹೊಲಿದು ತಂದು ಕೊಟ್ಟ ನಂತರ, ಅದರೊಳಗಿನ ಬಟ್ಟೆಯ ತುಂಡುಗಳು ಯಾರ ಯಾರ ಬಟ್ಟೆಗಳಿಗೆ ಸಂಬಂಧಿಸಿದುವು ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಅಜ್ಜನ ಖಗ್ಗ ಧೋತರ, ಅಪ್ಪನ ಮೆತ್ತನೆ ಧೋತರ, ಅಜ್ಜಿಯ ಇಳಕಲ್ ಸೀರೆ, ಅಮ್ಮನ ಚಂದ್ರಕಾಳಿ ಸೀರೆ, ತಮ್ಮನ ಚಡ್ಡಿ, ಅಣ್ಣನ ಅಂಗಿ, ತಂಗಿಯ ಲಂಗ, ಅಕ್ಕನ ದಾವಣಿ ಮುಂತಾದವುಗಳ ತುಣುಕುಗಳನ್ನು ಗುರುತಿಸುತ್ತಿದ್ದರು. ಅಕ್ಕ ಮದುವೆಯಾಗಿ ಹೋಗಿದ್ದರಿಂದ ಅವಳ ಬಟ್ಟೆಯ ತುಣುಕುಗಳ ಗುರುತು ಹಿಡಿಯುವಾಗ ಮನೆಯವರ ಮುಖದ ಮೇಲೆ ನೋವಿನ ಎಳೆಯೊಂದು ಹಾದು ಹೋಗುತ್ತಿತ್ತು.

(ಕೌದಿ ಕಲೆ)

ಕೌದಿ ಕೆಲ ವರ್ಷಗಳ ನಂತರ ಹಳೆಯದಾದಾಗ ಹೊದಿಕೆ ಹೋಗಿ ಹಾಸಿಗೆಯಾಗುತ್ತಿತ್ತು. ನಂತರ ಹರಿಯತೊಡಗಿದಾಗ ಅದನ್ನು ಸುಡುತ್ತಿದ್ದರು. ತದನಂತರ ಅದರ ಬೂದಿಯನ್ನು ಎಣ್ಣೆಯಲ್ಲಿ ಕಲಿಸಿ ಹೊಸ ಮೊರಕ್ಕೆ ಸವರಿ ಗಟ್ಟಿಗೊಳಿಸುವ ಮೂಲಕ ಚೆನ್ನಾಗಿ ಕೇರಲು ಬರುವಂತೆ ಮಾಡುತ್ತಿದ್ದರು. ಮುಂದೆ ಆ ಮೊರ ಹಳೆಯದಾದಾಗ ತಿಪ್ಪೆಗೆ ಎಸೆಯುತ್ತಿದ್ದರು. ನಂತರ ಅದು ಗೊಬ್ಬರದಲ್ಲಿ ಸೇರಿ ಗೊಬ್ಬರಾಗುತ್ತಿತ್ತು. ಹೀಗೆ ಹಳೆ ಬಟ್ಟೆ ವಿವಿಧ ಅವತಾರಗಳನ್ನು ತಾಳಿ ಕೊನೆಗೆ ಗೊಬ್ಬರವಾಗಿ ಹೊಲದಲ್ಲಿ ಬೆಳೆ ಬರಲು ಸಹಾಯಕವಾಗುತ್ತಿತ್ತು.

ನನಗಂತೂ ಕೌದಿ ಬಹಳ ಇಷ್ಟವಾಗುತ್ತಿತ್ತು. ಅದು ಬೇಸಗೆಯಲ್ಲಿ ತಂಪಾಗಿದ್ದು ಚಳಿಯಲ್ಲಿ ಬೆಚ್ಚಗೆ ಇರುತ್ತಿತ್ತು. ವಿಜಾಪುರದಂಥ ಪ್ರದೇಶಗಳಲ್ಲಿ ಮಳೆ ಕಡಿಮೆ. ಆದರೆ ಒಂದೊಂದು ಸಲ ಭಾರಿ ಗುಡುಗು ಮಿಂಚುಗಳೊಂದಿಗೆ ಬರುತ್ತಿತ್ತು. ಆಗ ಎಲ್ಲೆಡೆ ತಂಪಾಗಿ ಮೈ ನಡಗುವ ವೇಳೆ ಕೌದಿ ಆಸರೆಯಾಗುತ್ತಿತ್ತು. ಒಂದೊಂದು ಸಲ ರಾತ್ರಿಯಿಡೀ ಮಳೆ ಹತ್ತಿದಾಗ ಅನೇಕ ಮೇಲ್ಮುದ್ದೆ ಮನೆಗಳ ಮಣ್ಣಿನ ಗೋಡೆಗಳು ಬೀಳುತ್ತಿದ್ದವು. ಅಂಥ ಸಂದರ್ಭಗಳಲ್ಲಿ ಬಡವರ ಕಷ್ಟ ಹೇಳತೀರದು. ಕೆಲವರು ಇಂಥ ಬಿದ್ದ ಮನೆಗಳಲ್ಲಿ ಸಿಕ್ಕಿ ಗಾಯಗೊಂಡದ್ದುಂಟು. ಮತ್ತೆ ಕೆಲವರು ಸತ್ತದ್ದೂ ಉಂಟು.

(ಹಳ್ಳಿಯ ಬಡವರ ಮನೆಯ ಒಳನೋಟ)

ಹಳ್ಳಿಯ ಜೀವನದ ಗತಿಯೇ ಬೇರೆ. ಜನರು ಬೆಳಗಾದ ಕೂಡಲೆ ಎದುರಿಗೆ ಬಂದ ಪರಿಚಿತರಿಗೆ ‘ನಮಸ್ಕಾರ್ರಿ, ಎದ್ರಿ?’ ಎಂದು ಕೇಳುತ್ತಿದ್ದರು. ‘ನಾವು ಎದ್ದೇವ್ರಿ, ನೀವು ಎದ್ರಿ?’ ಎಂದು ಎದುರಿಗೆ ಬಂದವರು ಕೇಳುತ್ತಿದ್ದರು. ಮಧ್ಯಾಹ್ನ ಸಿಕ್ಕಾಗ ಊಟ ಆಯತ್ರೀ ಎಂದು ಕೇಳಿದಾಗ, ‘ನಮ್ದು ಆಯತ್ರಿ, ನಿಮ್ದು ಆಯತ್ರೀʼ ಎಂದು ಕೇಳುತ್ತಿದ್ದರು. ‘ಆರಾಮದೀರಿ?’ ಎಂದು ಕೇಳಿದಾಗ. “ನಾವು ಆರಾಮದೇವ್ರಿ, ನೀವು ಆರಾಮದೀರಿ?’ ಎಂದು ಕೇಳುತ್ತಿದ್ದರು. (ಆಗ ಇದೆಲ್ಲ ನನಗೆ ಆಶ್ಚರ್ಯವೆನಿಸುತ್ತಿತ್ತು. ದೊಡ್ಡವನಾದಮೇಲೆ ಈ ಪ್ರಶ್ನೆಗಳ ಅರ್ಥವಾಯಿತು. ಈ ನಮ್ಮ ಹಳ್ಳಿಗರ ಪ್ರಶ್ನೆಗಳು ನಮ್ಮ ಸಮಾಜದ ಔನ್ನತ್ಯದ ಸಂಕೇತಗಳಾಗಿವೆ. ಇವುಗಳ ಹಿಂದೆ ಮಾನವ ಸಂಬಂಧಗಳ ಕಾಳಜಿ ಇದೆ. ಮಾನವರು ಸಮಾಜದ ಭಾಗವಾಗಿದ್ದು ಸಮಾಜದ ಬಗ್ಗೆ ಕಾಳಜಿ ಹೊಂದುವುದು ಅವರ ಕರ್ತವ್ಯವಾಗಿದೆ. ‘ಬೆಳಿಗ್ಗೆ ಎದುರಾದವರಿಗೆ ‘ಎದ್ದಿರಾ’ ಎಂದು ಕೇಳಿದರೆ ‘ರಾತ್ರಿಯ ಮರೆವು ಎಂಬ ಕತ್ತಲೆಯಿಂದ ಎದ್ದು ಅರಿವಿನ ಬೆಳಕಿಗೆ ಬಂದಿರಾ’ ಎಂದು ಕೇಳಿದ ಹಾಗೆ. ಊಟ ಆಯತ್ರೀ ಎಂದು ನಿಮಗೆ ಕೇಳಿದರೆ, ‘ನಿಮ್ಮ ಊಟ ಆಗಿರದಿದ್ದರೆ ಊಟ ಮಾಡಿಸುವ ಜವಾಬ್ದಾರಿ ನನ್ನದು’ ಎಂದ ಹಾಗೆ. ಆರಾಮದೀರಿ ಎಂದು ಕೇಳುವ ಉದ್ದೇಶ: ಆರಾಮ ಇಲ್ಲದಿದ್ದರೆ ನಿಮ್ಮ ಆರೋಗ್ಯಕ್ಕಾಗಿ ಯತ್ನಿಸುವುದು ನನ್ನ ಕರ್ತವ್ಯ ಎಂದು ಮುಂತಾದ ಕಾಳಜಿಯ ಪ್ರಶ್ನೆಗಳು ಅವಾಗಿದ್ದವು.)

(ಅಲ್ಲೀಬಾದಿಯ ಋಣ ತೀರಿತು)

ನಾನು ಐದಾರು ವರ್ಷದವನಿದ್ದಾಗ ಅಲ್ಲೀಬಾದಿಯಲ್ಲಿ ಕಾಲರಾ ರೋಗ ಹಬ್ಬಿತು. ಜನ ಕಾಲರಾಗೆ ಬಲಿಯಾಗತೊಡಗಿದರು. ನನ್ನ ಅಜ್ಜಿಗೂ ಕಾಲರಾ ಬಂದಿತು. ವಿಜಾಪುರದಿಂದ ನನ್ನ ತಂದೆ ಎತ್ತಿನ ಗಾಡಿ ಮಾಡಿಕೊಂಡು ಬಂದರು. ಎಲ್ಲ ಸಾಮಾನುಗಳನ್ನು ಹೇರಿಕೊಂಡು, ಅಜ್ಜಿ ಮತ್ತು ನನ್ನನ್ನು ಕರೆದುಕೊಂಡು ಹೋದರು. ದನಗಳು ಇದ್ದುದರಿಂದ ಬಾಬು ಮಾಮಾ ಅಲ್ಲೇ ಉಳಿದ. ಆತ ಸ್ವಲ್ಪ ದಿನ ಅಲ್ಲೇ ಇದ್ದು ಕೈಗೆ ಬಂದ ಬೆಲೆಯಲ್ಲಿ ದನಗಳನ್ನು ಮಾರಿ ಜೊತೆಯಲ್ಲಿ ಆಕಳು ಗಂಗಾಗೆ ಮಾತ್ರ ಕರೆದುಕೊಂಡು ಬಂದ.

ವೈದ್ಯರ ಚಿಕಿತ್ಸೆಯಿಂದ ಅಜ್ಜಿ ಆರಾಮಾದಳು. ನಾವೆಲ್ಲ ವಿಜಾಪುರದಲ್ಲೇ ಜೊತೆಯಾಗಿ ಉಳಿದೆವು. ಅಲ್ಲಿಗೆ ಅಲ್ಲೀಬಾದಿಯ ಋಣ ತೀರಿತು!

(ಚಿತ್ರಗಳು: ಸುನೀಲಕುಮಾರ ಸುಧಾಕರ)

About The Author

ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ