Advertisement
ಹಸಿವಿನ ವಿಕಾರದ ಮುಂದೆ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿ?

ಹಸಿವಿನ ವಿಕಾರದ ಮುಂದೆ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿ?

ಕರೀಂ ಸಾಹೇಬರ ಮನೆಯಿಂದ ಇದಿನಬ್ಬ ಓಡಿ ಬಂದಿದ್ದ. ಓಡಿ ಓಡಿ ದಣಿವಾಗಿ ಒಂದೆಡೆ ಕುಳಿತಾಗಲೇ ಅವನಿಗೆ ಹಸಿವಿನ ನೆನಪಾಯಿತು. ಜೊತೆಗೆ ಮನೆಯವರ ನೆನಪೂ ಕಾಡತೊಡಗಿತು. ಭಯಂಕರ ಕ್ಷಾಮವು ಆ ಊರನ್ನು ಅಡರಿಕೊಂಡಿದ್ದರಿಂದ, ತಿನ್ನಲು, ಕುಡಿಯಲು ಏನೂ ಸಿಗುತ್ತಿರಲಿಲ್ಲ. ಹಸಿವಿನ ಹಿಂಸೆ ರುದ್ರನರ್ತನ ಮಾಡುತ್ತಿತ್ತು. ಇದಿನಬ್ಬ ಮೊದಲ ಬಾರಿಗೆ ತನ್ನನ್ನೇ ತಾನು ಮಾರಿಕೊಳ್ಳಲು ನಿರ್ಧರಿಸಿದ. ಮತ್ತೊಂದು ಮಾಲೀಕತ್ವವು ಇದಿನಬ್ಬನನ್ನು ಎಲ್ಲಿಗೆ ಕರೆದೊಯ್ದಿತು ?
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಏಳನೇ ಕಂತು ಇಲ್ಲಿದೆ.

ಈ ಮಧ್ಯೆ ಊರಿನಲ್ಲಿ ಕಳ್ಳತನ ಅಧಿಕವಾಗತೊಡಗಿತು. ಆಹಾರ ಧಾನ್ಯಕ್ಕೂ ಹಾಹಾಕಾರವಿದ್ದುದರಿಂದ ಆಗಾಗ ತೆಗೆದಿರಿಸಿದ್ದ ಬಾಳೆಹಣ್ಣು, ಅಕ್ಕಿ ಮತ್ತು ಇತರೆ ಧವಸ ಧಾನ್ಯಗಳು ಕಣ್ಮರೆಯಾಗುತ್ತಿದ್ದವು. ಹತ್ತಿರದ ಮನೆಯ ಖದೀಮ ಯುವಕನೊಬ್ಬ ಕರೀಂ ಸಾಹೇಬರ ಮನೆಯಲ್ಲಿ ಕಳ್ಳತನ ಆರಂಭಿಸಿದ. ಒಮ್ಮೆ ಏನೋ ಕದ್ದು ತರುವ ದಾರಿಯಲ್ಲಿ ಇದಿನಬ್ಬನಿಗೆ ಈ ಕಳ್ಳ ಮಾಲು ಸಮೇತ ಸಿಕ್ಕಿ ಬಿದ್ದ. ಇದಿನಬ್ಬನೇ ಬುದ್ಧಿ ಹೇಳಿ ಕಳುಹಿಸಿದ್ದ. ಆ ಸಂದರ್ಭಕ್ಕೆ ಆತ ಅದನ್ನು ಒಪ್ಪಿಕೊಂಡಿದ್ದನಾದರೂ ಇದಿನಬ್ಬನ ಮೇಲೆ ಅವನು ಸೇಡಿನಿಂದ ಒಳಗೊಳಗೆ ಕುದಿಯುತ್ತಿದ್ದ. ಇನ್ನು ತನ್ನ ಬೇಳೆ ಬೇಯುವುದಿಲ್ಲವೆಂದು ಅರಿತ ಆತ ಸ್ವತಃ ತನ್ನ ಮನೆಯ ಕೋಳಿಯೊಂದನ್ನು ತಂದು ಕರೀಂ ಸಾಹೇಬರ ಮನೆಗೆ ಬಿಟ್ಟ. ಆ ದಿನ ಸಂಜೆ ಕೋಳಿಗಳನ್ನು ಇದಿನಬ್ಬ ಗೂಡಿಗೆ ಸೇರಿಸಿದ. ಅಲ್ಪ ಸಮಯದ ತರುವಾಯ, ಕೋಳಿ ಕಳ್ಳತನವಾದುದನ್ನು ವಿಚಾರಿಸುತ್ತಾ ಯುವಕ ಕರೀಂ ಸಾಹೇಬರ‌ ಮನೆಗೆ ಬಂದ. ತನ್ನ ಮನೆಯ ಕೋಳಿ ಕಳ್ಳತನವಾಗಿದೆಯೆಂದೂ ಇದಿನಬ್ಬ ಅದನ್ನು ಕದ್ದಿದ್ದಾನೆಂದು ದೂರು ಹೇಳಿಕೊಂಡ. ಇದಿನಬ್ಬನಿಗೆ ಇದ್ಯಾವುದರ ಪರಿವೆಯೇ ಇಲ್ಲದೆ
‘ಇಲ್ಲ, ನಾನೇನನ್ನೂ ಕದ್ದಿಲ್ಲ. ಬೇಕಾದರೆ ಕೋಳಿ ಗೂಡನ್ನು ಪರೀಕ್ಷಿಸಿ’ ಎಂದು ಪ್ರತಿಭಟಿಸಿದ.

‘ಸರಿ ನಾನಾಗಿಯೇ ನೋಡುತ್ತೇನೆಂದು’ ಯುವಕ ಕೋಳಿ ಗೂಡಿನ ಬಾಗಿಲು ತೆರೆದ. ಒಂದೊಂದು ಕೋಳಿಯನ್ನೂ ಬಿಟ್ಟು ಕೊನೆಗೆ
‘ನೋಡಿ, ಇದೇ ನನ್ನ ಕೋಳಿ’ ಎನ್ನುತ್ತ ತನ್ನ ಕೋಳಿಯನ್ನು ತೋರಿಸಿ ಇದಿನಬ್ಬನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ. ಇದೇ ಅವಕಾಶವೆಂಬಂತೆ ಸಾಹೇಬರ ಹೆಂಡತಿಯೂ ಕಳ್ಳನ ಪರ ಕೂಡಿಕೊಂಡಿದ್ದಳು.ಇದಾದ‌ ಕೆಲವು ದಿನಗಳಲ್ಲಿ ಬಾಳೆಗೊನೆಗೂ ಇದೇ ರೀತಿಯ ರಂಪ ನಡೆಯಿತು. ಆಗಲೂ ಇದಿನಬ್ಬ ಕಳ್ಳತನದ ಆರೋಪ ಎದುರಿಸಬೇಕಾಯಿತು.ಈ ಎರಡೂ ಘಟನೆಗಳಿಂದ ಕರೀಮ್ ಸಾಹೇಬರಿಗೂ ಇದಿನಬ್ಬನ ಮೇಲೆ ಸಂದೇಹ ಬರಲಾರಂಭಿಸಿತು. ಅದಕ್ಕೆ ಪೂರಕವಾಗಿ ಹೆಂಡತಿಯ ತಲೆದಿಂಬು ಮಂತ್ರವೂ ಫಲಿಸತೊಡಗಿದವು.ಆ ಬಳಿಕ ಇದಿನಬ್ಬನನ್ನು ಸಂಶಯ ದೃಷ್ಟಿಯಿಂದ ಬೈಯ್ಯಲಾರಂಭಿಸಿದ್ದರು. ಒಂದು ದಿನ ನೀರಿಗೆ ಹೋದ ಇದಿನಬ್ಬ ಇದ್ದಕ್ಕಿದ್ದಂತೆ ಕಾಣೆಯಾದ. ಊರಿಡೀ ಅವನನ್ನು ಹುಡುಕಿದರೂ ಎಲ್ಲೂ ಆತನ ಪತ್ತೆಯಿಲ್ಲ. ಅದೇ ಸಮಯಕ್ಕೆ ಊರಲ್ಲಿ ವಿಚಿತ್ರವೊಂದು ನಡೆಯಿತು. ಎಲ್ಲರ ಮನೆಯಿಂದ ವಸ್ತುಗಳನ್ನು ಕದಿಯುತ್ತಿದ್ದ ಖದೀಮನನ್ನು ಊರವರು ಹಿಡಿದಿದ್ದರು.

‘ಕರೀಂ ಸಾಹೇಬರ ಪಕ್ಕದ ಮನೆಯ ಆ ಯುವಕನೇ ಕಳ್ಳ!’ ಕರೀಂ ಸಾಹೇಬರು ಅವನನ್ನು ನೋಡಿ ದಿಗಿಲಾದರು. ಆತ ತಾನು ಕದ್ದು ಇದಿನಬ್ಬನಿಗೆ ದೂರು ಹಾಕಿದ್ದನ್ನೂ ಬಾಯಿ ಬಿಟ್ಟಾಗ ಕರೀಂ ಸಾಹೇಬರಿಗೆ ತುಂಬಾ ಬೇಸರವಾಯಿತು. ತಲೆಯ ಮೇಲೆ ಕೈಹೊತ್ತು ಕುಳಿತರು.ಇದಿನಬ್ಬನನ್ನು ಹಳಿದದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಕರೀಂ ಸಾಹೇಬರ ಕುಟುಂಬಕ್ಕೆ ಇದಿನಬ್ಬನ ಅಮಾಯಕತೆ ತಡವಾಗಿ ಅರಿವಾಗಿತ್ತು. ಕಾಲ ಅದಾಗಲೇ ಮಿಂಚಿತ್ತು. ಕರೀಂ ದಂಪತಿಗಳು ‘ಪಾಪ ಹುಡುಗನಿಗೆ ಬೈಯ್ಯಬಾರದಿತ್ತಲ್ಲ’ ಎಂದು ಹಲುಬತೊಡಗಿದ್ದರು. ಸಾಹೇಬರ ಹೆಂಡತಿ ಒಳಗೊಳಗೆ ಆಸ್ತಿಯ ಪಾಲು ಉಳಿಯಿತೆಂದು ಸಂತೋಷಪಟ್ಟರು. ಆದರೆ ಇದಿನಬ್ಬ ಆ ಊರು ಬಿಟ್ಟು ಬೇರೆಲ್ಲಿಗೋ ಹೊರಟಾಗಿತ್ತು.

*****

ಆ ದಿನ ಬೆಳಗ್ಗೆ ಬೇಗನೆ ಎದ್ದಿದ್ದ ಇದಿನಬ್ಬ ನೀರು ಹೊತ್ತು ತರಲು ಬೇಕಾಗುವ ಕೊಡಪಾನಗಳನ್ನು ಕಟ್ಟಿಕೊಂಡು ನದಿಯ ದಾರಿಯಲ್ಲಿ ಹೋಗುವುದನ್ನು ಕರೀಂ ಸಾಹೇಬರು ನೋಡಿದ್ದರು. ಸಾಮಾನ್ಯವಾಗಿ ಮಧ್ಯಾಹ್ನ ಊಟಕ್ಕೆ ತಪ್ಪದೆ ಹಾಜರಾಗುತ್ತಿದ್ದ ಇದಿನಬ್ಬನ ಸುಳಿವಿಲ್ಲದೆ ಸಾಹೇಬರು ಒಬ್ಬರೇ ಊಟ ಮಾಡಿದ್ದರು.

‘ಹುಡುಗ ಎಲ್ಲಿ, ಬೈದದ್ದಕ್ಕೆ ಬೇಸರವಾಗಿರಬಹುದೋ ಏನೋ?” ಹೆಂಡತಿ ಜೊತೆ ಹೇಳಿಕೊಂಡಂತೆ ಕಣ್ಣ ಹನಿಯೊಂದು ಗಲ್ಲಕ್ಕೆ ಬಿದ್ದು ಗಡ್ಡದೊಳಗೆ ಮಾಯವಾಯಿತು. ಪತ್ನಿಯೂ ಸೆರಗಿನಂಚು ಒದ್ದೆಯಾದಂತೆ ನಟಿಸಿದಳು. ಸಂಜೆಯಾದರೂ ಇದಿನಬ್ಬನ ಸುಳಿವಿಲ್ಲದಿದ್ದಾಗ ಸಾಹೇಬರು ಸ್ವತಃ ತಾವೇ ನದಿಯ ಹತ್ತಿರ ಹೋದರು. ಕೊಡಪಾನಗಳು ಹಾಗೇ ಇವೆ. ಇದಿನಬ್ಬನ ಪತ್ತೆಯಿಲ್ಲ.

ಅಷ್ಟರಲ್ಲಾಗಲೇ ಇದಿನಬ್ಬ ನಾಲ್ಕು ಊರು ದಾಟಿ ನಾಲ್ಕು ಬೆಟ್ಟ ಏರಿಳಿದಿದ್ದ. ಓಡಿ, ನಡೆದು ದಣಿದು ಏದುಸಿರು ಬಿಡುತ್ತಿದ್ದ. ಬರಗಾಲದ ದಟ್ಟ ದಾರಿದ್ರ್ಯದ ಕಾರಣ ಯಾವ ಮನೆಯಲ್ಲೂ ಒಂದು ಚೂರು ತಿನ್ನಲು ಸಿಗಲಿಲ್ಲ. ಕುಡಿಯಲು ನೀರು ಸಿಗಲಿಲ್ಲ. ‘ಸತ್ತರೂ ಪರವಾಗಿಲ್ಲ ಈ ಊರಲ್ಲಿ ನಿಲ್ಲಲಾರೆ’ ಎಂಬ ಅಚಲ ನಿರ್ಧಾರದಿಂದ ಇದಿನಬ್ಬ ದೂರ ಹೊರಟು ಬಂದಿದ್ದ. ದಣಿದಾಗ ಕುಳಿತು ವಿಶ್ರಾಂತಿ ಪಡೆದ. ಮತ್ತೆ ನಡೆದ. ಹೀಗೆ ಇಡೀ ದಿನ ನಡೆದ. ಅಂದು ರಾತ್ರಿ ಕೈಕಾಲು ನೋವು ತಡೆಯಲಾಗದೆ ಒಂದು ಮರದಡಿಯಲ್ಲಿ ಬಿದ್ದುಕೊಂಡ. ನಡೆದ ಆಯಾಸಕ್ಕೆ ಚೆನ್ನಾಗಿ ನಿದ್ರೆಯ ಜೊಂಪು ಹತ್ತಿತು.

ಎಚ್ಚರವಾಗುವ ಹೊತ್ತಿಗೆ, ಸೂರ್ಯನ ಬೆಳಕು ಕಣ್ಣು ಕುಕ್ಕುತ್ತಿದ್ದವು.ಹಕ್ಕಿಗಳ ಚಿಲಿಪಿಲಿ ಮರುದಿನ ಏಳುವಾಗ ಹೊಟ್ಟೆ ಚುರುಗುಟ್ಟುತ್ತಿತ್ತು. ಕೈಕಾಲುಗಳಲ್ಲಿ ಅಸಾಧ್ಯ ನೋವಿತ್ತು. ಆದರೂ ಕುಂಟುತ್ತ ನಡೆದ. ಹೆಜ್ಜೆ ಹೆಜ್ಜೆಗೆ ಮನೆಯವರ ನೆನಪಾಯಿತು. ಅಮ್ಮನ ಮುಖ ಕಣ್ಣ ಮುಂದೆ ತೇಲಿ ಬಂತು. ‘ಇಲ್ಲಿಂದ ಊರಿಗೆ ಹೋಗುವುದು ಹೇಗೆ’ ಎಂದು ಚಿಂತಿಸತೊಡಗಿದ.ಎಲ್ಲಿ ಹೋಗಬೇಕೆನ್ನುವ ದಿಕ್ಕು – ದೆಸೆಯೇ ಗೊತ್ತಿರಲಿಲ್ಲ. ತನ್ನ ದುರದೃಷ್ಟಕ್ಕೆ ತಾನೇ ಹಳಿದುಕೊಂಡ. ಕಾಲುಗಳು ಭಾರವಾಗುತ್ತಿದ್ದವು. ಕಣ್ಣೀರಿನಿಂದಾಗಿ ಕಣ್ಣುಗಳು ಮಂಜಾಗುತ್ತಿದ್ದವು. ಬಟಾ ಬಯಲು, ಬಿಸಿಲು ಮತ್ತು ರುದ್ರ ಕ್ಷಾಮದಿಂದಾಗಿ ಗಿಡ ಮರಗಳಲೆಲ್ಲಾ ಒಣಗಿ ಹೋಗಿದ್ದವು. ಇದಿನಬ್ಬ ಮುಂದುವರಿದಂತೆ ನೂರಾರು ಚಿಂತೆಗಳು ಅವನನ್ನು ಕೊರೆಯುತ್ತಲೇ ಇದ್ದವು.”ಈ ದಟ್ಟ ಕ್ಷಾಮದಲ್ಲೆ ಸಿಲುಕಿ ಅನಾಥ ಶವವಾಗುವೆ” ಎಂದೆಲ್ಲ ನೆನಪಿಗೆ ಬಂದು ಅವನ ಮನಸ್ಸು ಚಡಪಡಿಸತೊಡಗಿತು.

*****

ಕಾಲುಗಳು ತುಂಬಾ ನೋಯುತ್ತಿದ್ದವು. ನಡೆದು ನಡೆದು ಸುಸ್ತಾಗಿ ದಣಿವಾರಿಸಿಕೊಳ್ಳಲು ಇದಿನಬ್ಬ ಒಂದು ಕಡೆ ಕುಳಿತುಕೊಂಡ. “ಇನ್ನು ನಡೆಯಲಾರೆ , ಸಾಯುವುದು ಖಚಿತ. ಇಲ್ಲೇ ಯಾರೂ ಸಿಗದೂರಿನಲ್ಲಿ ನನ್ನ ಅನಾಥ ಶವ ಬೀಳಲಿದೆ. ಅದನ್ನು ನಾಯಿಯೋ ನರಿಯೋ‌ ತಿಂದು ಬದುಕಲಿದೆ” ಎಂಬಷ್ಟು ದಣಿವಾಗಿ ಹೆಜ್ಜೆ ಸಡಿಲಗೊಳಿಸಿದ. ಯಾರಾದರೂ ಸಿಕ್ಕಿದರೆ ಹೊಟ್ಟೆ ತಣಿಸಲು ಏನಾದರೂ ಕೇಳಬಹುದಿತ್ತು ಎಂದನಿಸಿ ಇದಿನಬ್ಬ ದಾರಿಯ ಬದಿಯಲ್ಲಿ ಕುಳಿತ. ಅಷ್ಟರಲ್ಲೇ ಅದೇ ದಾರಿಯಲ್ಲಿ ಗಾಡಿಯೊಂದು ಬರುವ ಸದ್ದಾಯಿತು. ಇದಿನಬ್ಬನ ಕಿವಿ ನೆಟ್ಟಗಾಯಿತು. ನರಗಳು ಸೆಟೆದುಕೊಂಡವು. ಹೊಟ್ಟೆ ತಾಳ ಹಾಕತೊಡಗಿತು. ಗಾಡಿ ಹತ್ತಿರವಾದಂತೆ ದಾರಿಗೆ ಅಡ್ಡ ನಿಂತು ನಿಲ್ಲಿಸುವಂತೆ ಇದಿನಬ್ಬ ಸನ್ನೆ ಮಾಡಿದ. ಇದಿನಬ್ಬನನ್ನು ನೋಡಿದ ಗಾಡಿಯವನು ಏನು ಬೇಕೆಂದ ಕೇಳಿದ. ನಡೆದ ವೃತ್ತಾಂತಗಳನ್ನು ಸ್ಥೂಲವಾಗಿ ವಿವರಿಸಿದ ಬಳಿಕ, “ತಾನು ತನ್ನನ್ನೇ ಮಾರಿಕೊಳ್ಳಲು ಸಿದ್ಧನಿದ್ದೇನೆ, ಈ ಪಟ್ಟಣದಿಂದ ಬೇರೆಡೆಗೆ ಕರೆದುಕೊಂಡು ಹೋಗುತ್ತಿಯಾ?” ಎಂದು ಅಂಗಾಲಾಚಿದ. ‘ರೋಗಿ ಬಯಸಿದ್ದು ಹಾಲು, ವೈದ್ಯ ಹೇಳಿದ್ದು ಹಾಲು’ ಎಂಬ ಭಾವದಿಂದ ಮೊದಲೇ ಹಣದ ಅವಶ್ಯಕತೆ ಇದ್ದ ಗಾಡಿಯವನು ಬಹಳ ಖುಷಿಯಾಗಿ ಗಾಡಿ ಹತ್ತಿಸಿ ಕುಡಿಯಲು ನೀರು ಕೊಟ್ಟು ಇದಿನಬ್ಬನನ್ನು ಕರೆದುಕೊಂಡು ಪಾಂಡಿಚೇರಿ ಕಡೆಗೆ ಗಾಡಿ ತಿರುಗಿಸಿದ. ಒಂದು ರಾತ್ರಿ ಹಗಲಾಗುವುದರೊಳಗೆ ಇಬ್ಬರೂ ಪಾಂಡಿಚೇರಿ ಬಂದರು ತಲುಪಿದ್ದರು. ದಾರಿ ಮಧ್ಯೆ ಆಹಾರ ಸಾಮಾಗ್ರಿಗಳನ್ನೆಲ್ಲಾ ಗಾಡಿಯವನೇ ಖರೀದಿಸಿ ಕೊಟ್ಟಿದ್ದ. ಥೇಟ್ ಚೆನ್ನೈ ಬಂದರಿನಂತಿದ್ದ ಪಾಂಡಿಚೇರಿ ಬಂದರಿನಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಬದಲಾವಣೆ ಎದ್ದು ಕಾಣುತ್ತಿತ್ತು. ಇಲ್ಲಿ ಬ್ರಿಟಿಷರ ಪ್ರಾಬಲ್ಯ ಹೆಚ್ಚಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ನಿರ್ವಹಣಾ ಕಟ್ಟಡಗಳು‌ ಈ ಬಂದರಿನ ಬದಿಯಲ್ಲಿ ಕಾರ್ಯಚರಿಸುತ್ತಿದ್ದವು. ಭಾರತ ಶ್ರೀಲಂಕಾ ವಹಿವಾಟು ಸುಲಭವಾಗಿರುವ ಕಾರಣದಿಂದಲೇ ಬ್ರಿಟಿಷರು ಈ ಬಂದರನ್ನು ಪ್ರಮುಖ ಸ್ಥಳವಾಗಿ ಗುರ್ತಿಸಿದ್ದರು. ಅಲ್ಲಿಗೆ ಇದಿನಬ್ಬ ತಮಿಳುನಾಡಿಗೆ ತಲುಪಿ ಮೂರು ವರ್ಷಗಳೇ ಆಗಿ ಹೋಗಿತ್ತು. ತಮಿಳು ಚೆನ್ನಾಗಿ ಬರುತ್ತಿತ್ತು.

ಬೇಸಿಗೆ ಕಾಲದ ಕೊನೆಯ ದಿನಗಳವು. ಬಿಸಿಲು ಪ್ರಖರವಾಗಿತ್ತು.ಪಾಂಡಿಚೇರಿಯ ಪೇಟೆಯಲ್ಲಿ ಗಾಡಿಯವನು ಇದಿನಬ್ಬನನ್ನು ಮಾರಲು ಬಂದಿದ್ದ. ಮಂಗಳೂರಿನಲ್ಲಿ ಕಂಡಂತೆಯೇ ಇಲ್ಲಿಯೂ ಕಿಕ್ಕಿರಿದ ಜನಸ್ತೋಮ. ಗಲಭೆ ಗದ್ದಲಗಳ ಮಧ್ಯೆ ಜಾನುವಾರುಗಳ ಮಾರಾಟವೂ ಜೋರಾಗಿತ್ತು. ತಮಿಳರ ಚೌಕಾಸಿ ಮಾತುಗಳು ಅನಾಗರಿಕ ಜನರು ಮಾತನಾಡುವಷ್ಟೇ ವ್ಯಂಗ್ಯವಾಗಿ ಕೇಳುತ್ತಿತ್ತು. ಈಗ ಕೈ ಕೈ ಮಿಲಾಯಿಸುತ್ತಾರೆ ಎಂಬಷ್ಟು ತೀವ್ರತೆಗೆ ವ್ಯಾಪಾರದ ಚರ್ಚೆ ನಡೆಯುತ್ತಿದ್ದರೆ, ಮರುಕ್ಷಣಕ್ಕೆ ಒಮ್ಮೆಲೆ ತಣ್ಣಗಾಗಿ ವ್ಯಾಪಾರ ಮುಂದುವರಿಯುತ್ತಿತ್ತು.

“ಹೇ, ಊಂಗಲ್ಕ್ ಎನ್ನ ವೇನಂ(ನಿಮಗೇನು ಬೇಕು)’

ಹಿಂದಿನಿಂದ ಕೂಗಿ ಕರೆದಂತೆ ಕೇಳಿತು.ಹಿಂತಿರುಗಿ‌ ನೋಡಿದರೆ ಬೆಳ್ಳಗಿನ ಟೊಣಪನೊಬ್ಬ ನಿಂತಿದ್ದ. ಅವನ ಜನಿವಾರ ಎದ್ದು ಕಾಣುತ್ತಿತ್ತು. ಅವನನ್ನು‌ ಕಂಡೊಡನೆಯೇ ಗಾಡಿಯವನ ಮುಖ ಊರಗಲವಾಯಿತು. ಕಡಲ ದೃಷ್ಟಿಯನ್ನು ಬಲವಂತದಿಂದ ಕಿತ್ತುಕೊಂಡು ಇದಿನಬ್ಬ ಮತ್ತು ಗಾಡಿಯವನು ಪ್ರಶ್ನೆ ಕೇಳಿದವನ ಬಳಿ ನಡೆದರು.

ಹೀಗೆ ಇಡೀ ದಿನ ನಡೆದ. ಅಂದು ರಾತ್ರಿ ಕೈಕಾಲು ನೋವು ತಡೆಯಲಾಗದೆ ಒಂದು ಮರದಡಿಯಲ್ಲಿ ಬಿದ್ದುಕೊಂಡ. ನಡೆದ ಆಯಾಸಕ್ಕೆ ಚೆನ್ನಾಗಿ ನಿದ್ರೆಯ ಜೊಂಪು ಹತ್ತಿತು.

“ಕೂಲಿಗೆ ಕೊಡುವುದಕ್ಕೆ ಬಂದಿದ್ದು ನಾನು.ಗಿರಾಕಿ ಇದುವೇ” ಎಂದು‌ ವ್ಯಪಾರಕ್ಕಿಳಿದ.

ಇದೇ ಮಾತು ಆಗ ಬಾಳಿಕೆಯಲ್ಲಿದ್ದುದು. ‘ಮನುಷ್ಯನನ್ನು ಮಾರಲಿದೆ’ ಎಂಬ ಪ್ರಯೋಗ ಕಾನೂನು ಬಾಹಿರ. ಸ್ವಲ್ಪ ಹೊತ್ತು ಇದಿನಬ್ಬನನ್ನೇ‌ ನೋಡಿದ ಆಗಂತುಕ.

‘ಎಷ್ಟು ಕೊಡಬೇಕು?’ ಎಂದು ತಿರುಗಿ ಕೇಳಿದ. ಬಂದ ದೂರ, ಆಹಾರ, ಎಲ್ಲಾ ಖರ್ಚುಗಳಿಗೆ ಕೂಡಿಸಿ, ಗುಣಿಸಿ ಗಾಡಿಯವನು ದೊಡ್ಡ ಮೊತ್ತವೇನೋ ಹೇಳಿದ. ಆಶ್ಚರ್ಯವೆಂಬಂತೆ ಸಣ್ಣ ಚೌಕಾಸಿಯೂ ಇಲ್ಲದೆ ಸೊಂಟಕ್ಕೆ ಸಿಕ್ಕಿಸಿಟ್ಟ ಹಣದ ಥೈಲಿಯಿಂದ ಅಷ್ಟೂ ನಾಣ್ಯವನ್ನು ಆ ಟೊಣಪ ನೆಲಕ್ಕೆ ಸುರುವಿದ. ಗಾಡಿಯವನು ಶೂದ್ರನಾಗಿದ್ದರಿಂದ ಮರಳಲ್ಲಿ ತಡಕಾಡಿ ಎಲ್ಲ ನಾಣ್ಯವನ್ನು ಹೆಕ್ಕಿಕೊಂಡು ಇದಿನಬ್ಬನನ್ನು ಒಪ್ಪಿಸಿ ಮತ್ತೆ ಗಾಡಿ ಹೊಡೆಯತೊಡಗಿದ.

ಗಾಡಿ ಪಾಂಡಿಚೇರಿಯ ಬೀದಿಗಳಲ್ಲಿ ಮರೆಯಾಯಿತು.

ಹೊಸ ಮಾಲೀಕನ ವಿಚಾರಣೆ ಆರಂಭವಾಯಿತು.

‘ಉನ್ ಪೇರೆ ಎನ್ನಪ್ಪಾ, ಊರೆಂಗಪ್ಪಾ (ನಿನ್ನ ಹೆಸರೇನು, ಊರು ಯಾವುದು’ ಎಂದು ಪ್ರಶ್ನಿಸಿದ.
ತಮಿಳು ಈಗ ಸರಿಯಾಗಿ ಬರುತ್ತಿದ್ದರಿಂದ ಇದಿನಬ್ಬ ಸ್ಪಷ್ಟವಾಗಿ ಉತ್ತರಿಸಿದ.

ಎಲ್ಲವನ್ನೂ ಆಲಿಸಿದ ಆತನನ್ನು ಹಿಂಬಾಲಿಸುವಂತೆ ಹೇಳಿ ಆ ಟೊಣಪ ಬಂದರಿನ ಕಚೇರಿ ಕಡೆ ನಡೆದ. ಪ್ರಶಾಂತವಾದ ಕಡಲು. ಆಗಾಗ ಭೂಮಿಯ ಪಾದಗಳನ್ನು ತೊಳೆಯುತ್ತ ಬೀಸಿ ಒಗೆಯುವ ಸಾಧಾರಣ ಮಟ್ಟದ ಅಲೆಗಳು.

“ವಾಹ್, ಕಡಲೆಂದರೆ ಸ್ವತಂತ್ರ ಜಗತ್ತು” ಇದಿನಬ್ಬನಿಗೆ ಹೀಗೊಮ್ಮೆ ತೋಚಿತು. ಕಚೇರಿಯ ಇಕ್ಕೆಲಗಳಲ್ಲಿ ಭಾರೀ ಜನೋಸ್ತಮ. ಅವರೆಲ್ಲ ಯಾವುದೋ ಊರಿಗೆ ರಫ್ತಾಗುತ್ತಿರುವ ಗುಲಾಮರು. ಕೆಲವರು ಅಳುತ್ತಿದ್ದರು, ಇನ್ನು ಕೆಲವರು ಬೈಯ್ದಾಟ, ಕಿರುಚಾಟಗಳಿಗೆ ಸೇರಿಕೊಂಡರು. ಒಟ್ಟಾರೆ ಇಡೀ ಬಂದರೇ ವ್ಯಾಪಾರ, ವಹಿವಾಟು,ಮೋಸ, ಗಲಭೆ ಗದ್ದಲಗಳಲ್ಲೇ ಮೀಯುತ್ತಿತ್ತು.

“ಸಿಲೋನ್ಕ್ ಅಣಪುರೆದಾ( ಸಿಲೋನ್ಗೆ ಕಳುಹಿಸುವುದಾ?) ”

ಎಂದು ಟೊಣಪ ಮತ್ತು ಇಬ್ಬರು ಪರಸ್ಪರ ಮಾತಾಡುವುದು ಇದಿನಬ್ಬನ ಕಿವಿಗೆ ಬಿತ್ತು. ಸ್ವಲ್ಪ ಹೆಚ್ಚಿಗೆ ಹಣ ಪಡೆದ ಕೂಲಿಯವರ ಗುಂಪಿನ ಮಧ್ಯೆ ಕುಳಿತುಕೊಳ್ಳಲು ಹೇಳುತ್ತಾ ಟೊಣಪ‌ ವಿಮುಖನಾದ. ಇದಿನಬ್ಬನಿಗೆ ಅಕ್ಷರ, ಓದು ಬಾರದು.ಅಲ್ಲಿ ಬಂದಿದ್ದವರ ಪಾಡು ಅಂಥದ್ದೇ. ಸುಮಾರು ಹೊತ್ತಿನ ಬಳಿಕ ಬಿಳಿಯನೊಬ್ಬ ಪೋಲೀಸ್ ದಿರಿಸಿನಲ್ಲಿ ಕಚೇರಿಯೊಳಗೆ ಬಂದ. ಕೈಯಲ್ಲಿ ಬಂದೂಕು, ತಲೆಯಲ್ಲಿ ಅಧಿಕಾರ ಸೂಚಿಸುವ ಕಂದು ಟೋಪಿ. ಇಡೀ ಬಂದರೇ ಒಂದು ಸಮಯ ಸ್ಥಬ್ಧಗೊಂಡಿತು. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನವೇ ಆತನ ಘನ ಗಾಂಭೀರ್ಯತೆಯನ್ನು ತಿಳಿಸುತ್ತಿತ್ತು. ಬಿರ ಬಿರನೆ ನಡೆದವನೇ ದೊಡ್ಡ ಕಾಗದದಲ್ಲಿ ಬರೆದ ಪಟ್ಟಿಯೊಂದನ್ನು ಆಫೀಸಿನಿಂದ‌ ಪಡಕೊಂಡು ಉಳಿದವರಲ್ಲಿ ಸ್ವಲ್ಪ ಮಾತಾನಾಡಿ ಕೂಲಿಗಳಿದ್ದ ಸ್ಥಳಕ್ಕೆ ಮಧ್ಯೆ ಬಂದು ನಿಂತ. ಉಸಿರಾಡಲೂ ಹೆದರುವ ಗಳಿಗೆಯದು. ಎಲ್ಲರ ಹೆಸರು ಒಂದೊಂದಾಗಿಯೇ ಓದತೊಡಗಿದ. ಭಾರತೀಯರ ಹೆಸರಿನ ಉಚ್ಫಾರಣೆ ಯುರೋಪಿನವನಿಗೆ ಹೇಗೆ ದಕ್ಕೀತು‌. ಕೆಲವೊಂದು ಹೆಸರುಗಳನ್ನು ನಗು ಬರಿಸುವಷ್ಟು ವಿಕಾರವಾಗಿ ಕರೆಯುತ್ತಿದ್ದ. ಹೆಸರು ಕರೆದಂತೆ ಒಬ್ಬೊಬ್ಬರಾಗಿ ಒಂದು ಬದಿಗೆ ನಿಲ್ಲಬೇಕಿತ್ತು. ಇದ್ದಕ್ಕಿದ್ದಂತೆ ಕಿಟಾರನೆ ಕಿರುಚಿದ ಶಬ್ದ! ನೆರೆದಿದ್ದ ಅಷ್ಟೂ ಮಂದಿ ಆ‌ ಕಡೆಗೊಮ್ಮೆ‌ ತಿರುಗಿದರು.

“ನಾ ಪೋವ ಮಾಟೆ…ನಾ ಎಂಗೆಯುಂ ಪೋಗ ಮಾಟೆ(ನಾನು ಹೋಗೋದಿಲ್ಲ. ಎಲ್ಲಿಯೂ ಹೋಗೋದಿಲ್ಲ)” ಸಣ್ಣ ಬಾಲಕನೊಬ್ಬ ಮಾರಲು ಬಂದ ತಾಯಿಯನ್ನು ನೋಡಿ ಅಳುತ್ತಿದ್ದ.

“ಶಟ್ ಯುವರ್ ಮೌತ್ ಡಾಗ್( ಮುಚ್ಚು ಬಾಯಿ ನಾಯಿ)”

ಎಂದು ಬಿಳಿಯ ಜೋರಾಗಿ ಘರ್ಜಿಸಿದ. ಒಮ್ಮೆ ಮೌನವಾದ ಬಾಲಕನ ಅಳು ಮತ್ತೆ ಪ್ರಾರಂಭಗೊಳ್ಳುವುದರಲ್ಲಿತ್ತು. ಬೆದರಿಕೆಗಳಿಗೆ ಪ್ರೀತಿಯೆದೆರು ಬೆಲೆಯುಂಟೇ? ಹುಡುಗ ಮತ್ತೆ ಅಳ ಹತ್ತಿದ. ಈ ಬಾರಿ ಬಿಳಿಯ ಪೋಲೀಸ್ ಬಂದೂಕನ್ನು ನೇರ ಗುರಿಯಿಟ್ಟು ಟ್ರಿಗ್ಗರ್ ಒತ್ತಿದ. ಹುಡುಗನ ಸದ್ದುನಿಂತಿತು! ದೂರ ನಿಂತಿದ್ದ ತಾಯಿ ಎದೆ ಬಿರಿದು ಜೋರಾಗಿ ಅಳುತ್ತ ಮಗನ ರಕ್ತ ಸಿಕ್ತ ಶವದ ಬಳಿ ಓಡಿ ಬಂದಳು. ಮತ್ತೊಮ್ಮೆ ಬಂದೂಕು ಗುಡುಗಿತು. ಎರಡೂ ಸಂಬಂಧಗಳು ನಿಶ್ಯಬ್ಧಕ್ಕೆ ತಿರುಗಿತು.

“ಬ್ಲೇಡ್ಡೀ ಬ್ಲಾಕ್ ಇಂಡಿಯನ್ಸ್ (ಥತ್ ಕಪ್ಪು ಭಾರತೀಯರು)”

ಆತನ ಅಸಹನೆ ನೆರೆದ ಎಲ್ಲರಿಗೂ ಕೇಳಿಸುಷ್ಟು ಜೋರಾಗಿತ್ತು. ಶವವನ್ನು ನೋಡಲಾಗಲೀ ಕರುಣೆ ತೋರಿಸಲಾಗಲಿ ಯಾರು ಮುಂದೆ ಬರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಯಾರೋ ಆಳುಗಳು ಬಂದು ಶವದ ಕಾಲು ಹಿಡಿದು ಎಳೆಯುತ್ತಾ ಕಚೇರಿಯ ಹೊರಗಿದ್ದ ಕೈಗಾಡಿಗೆ ತುಂಬಿದರು. ರಕ್ತದ ಕಲೆಗಳು ಕೂಲಿಯವರ ಹೆದರಿಕೆಗೆಳೆದ ಲಕ್ಷ್ಮಣ ರೇಖೆಯಂತೆ ಭೀಕರವಾಗಿ ಕಾಣುತ್ತಿತ್ತು.

“ಐ…ದೆನೆಬ್ಬಾ”

ವಿಕಾರವಾಗಿ ಹೆಸರು ಕರೆದು ಬಿಳಿಯನೇ ನಗುತ್ತಾ ಪಟ್ಟಿ ಓದಿ ಮುಗಿಸಿದ. ಹತ್ತಿರದಲ್ಲಿದ್ದ ಇನ್ನೊಬ್ಬ ಅಧಿಕಾರಿಗೆ ಚಟಪಟನೆ ಇಂಗ್ಲೀಷಿನಲ್ಲಿ ಏನೋ ಹೇಳಿ ಬಂದೂಕಿನ ನಲಿಗೆ ಉಜ್ಜುತ್ತಾ ಮೀಸೆ ತಿರುವಿಕೊಂಡು ಹೊರಟು ಹೋದ.

” ಎಲ್ಲಾರುಂ ಇಂಗೆ ವಾಂಗೊ “( ಎಲ್ಲರೂ ಈ‌ ಕಡೆ ಬನ್ನಿ)

ಎಂದು ಅಧಿಕಾರಿ ಕೂಲಿಗಳನ್ನು ಕುರಿ ಹಿಂಡಿನಂತೆ ಅಟ್ಟಿಕೊಂಡು ಬಂದರಿನಲ್ಲಿ ತೊಯ್ದಾಡುತ್ತಿದ್ದ ಸಣ್ಣ ಹಡಗಿನ ಬಳಿ ಕರೆದುಕೊಂಡು ಬಂದ. ಮಂಗಳೂರಿನಿಂದ ಮದರಾಸಿಗೆ ಬಂದ ಹಡಗಿನಷ್ಟು ಅದು ದೊಡ್ಡದಾಗಿರಲಿಲ್ಲ . ಒಂದೇ ಮಹಡಿಯನ್ನು ಹೊಂದಿದ್ದ ಸಣ್ಣ ಹಡಗಿನಲ್ಲಿ ೧೦೦ ಮಂದಿ ನೆಲದಲ್ಲಿ ಕುಳಿತುಕೊಳ್ಳುವಷ್ಟು ಜಾಗವಿತ್ತು. ಅಧಿಕಾರಿ ಎಲ್ಲರನ್ನೂ ಹಡಗಿಗೆ ಹತ್ತಲು ಹೇಳಿದ. ನುಗ್ಗು ನುರಿಯೊಂದಿಗೆ ಆಳುಗಳು ಹತ್ತತೊಡಗಿದರು. ಸುಮಾರು ಮುನ್ನೂರು ಜನರಷ್ಟು ಆಳುಗಳನ್ನು ಹಡಗಿನಲ್ಲಿ ತುಂಬಲಾಯಿತು. ಉಸಿರಾಡಲು ಪಾಡು ಪಡುವಷ್ಟು ಜನರನ್ನು ಹೊತ್ತಿದ್ದ ಹಡಗು ಬಂದರು ಬಿಟ್ಟು ದೂರವಾಗತೊಡಗಿತು. ಹಡಗಿನಲ್ಲಿ ಇದಿನಬ್ಬ ಹತ್ತಿರದಲ್ಲಿ ಕುಳಿತಿದ್ದವರೆಲ್ಲಾ ಚರ್ಚೆಗೆ ಶುರುವಿಟ್ಟರು‌.

“ಎಲ್ಲಿಗೆ ಹೋಗಬೇಕಿರುವುದು” ಒಬ್ಬಾತ ಕೇಳಿದ.

“ಸಿಲೋನ್, ಅಂತ ಹೇಳುವುದು ಕೇಳಿದ್ದೇನೆ” ಮತ್ತೊಬ್ಬ ಕೂಲಿಯಾಳು ಉತ್ತರಿಸಿದ.

“ಸಿಲೋನ್?!”

ಮುದುಕನೊಬ್ಬ ಅಚ್ಚರಿಯಿಂದ ಉದ್ಗಾರವೆತ್ತಿದವನೇ ಮೂರ್ಛೆ ಹೋದ. ಆ ಹೊತ್ತಿಗೆ ಇತರ ಕೂಲಿಗಳ ಮುಖದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಹತ್ತಿರದಲ್ಲೇ ಕುಳಿತಿದ್ದವನೊಬ್ಬ ನೀರು ಚಿಮುಕಿಸಿ ಮುದುಕನನ್ನು ಕೈ ಕಾಲುಗಳನ್ನು ತಿಕ್ಕಿ ಎಬ್ಬಿಸಿದ.

“ಯಾಕೆ, ಸಿಲೋನ್ ತುಂಬಾ ದೂರನಾ?”

ನೆರೆದ ಉಳಿದವರು‌ ಕುತೂಹಲ ಹುಟ್ಟಿಸತೊಡಗಿದರು‌. ಯಥಾರ್ಥದಲ್ಲಿ ಮುದುಕನಿಗೆ ಸಿಲೋನ್ ಯಾವೂರೆಂದೇ ಗೊತ್ತಿರಲಿಲ್ಲ. ಹೆಸರು ಇದುವರೆಗೂ ಕೇಳದ್ದಾಗಿದ್ದರಿಂದ ಹೆದರಿಕೊಂಡಿದ್ದ ಮತ್ತು ಇತರರಿಗೂ ಹೆದರಿಕೆ ಹುಟ್ಟಿಸಿದ್ದ.

ಅದಾಗಲೇ ತೀರ ಸಣ್ಣಗೆ ಮಾಸುವಷ್ಟು ದೂರ ಹಡಗು ಬಂದರು ಬಿಟ್ಟು ಬಂದಿತ್ತು.ಅಷ್ಟರಲ್ಲೇ ಇದಿನಬ್ಬನ ಜೊತೆಗಿದ್ದ‌ ಯುವಕನೊಬ್ಬ ಹಡಗಿನಿಂದ ಹಾರಿ ದಡಕ್ಕೆ ಈಜಿ ಪಾರಾಗುವ ಸೂಚನೆಯನ್ನು ಕೊಟ್ಟ. ಆ ಕೂಡಲೇ ಇನ್ನಿಬ್ಬರು ಗೆಳೆಯರು ಆತನನ್ನು ಹಿಂಬಾಲಿಸಿ ಬರುವುದಾಗಿ ಧೈರ್ಯ ತುಂಬಿದರು. ಯುವಕ ಮೆಲ್ಲಗೆ ಕೂಲಿಗಳ ಮಧ್ಯೆ ಸರಿಯುತ್ತಾ ಹಡಗಿನ ಒಂದು ಬದಿಗೆ ತಲುಪಿದ. ಇದಿನಬ್ಬ ಕೂಡ ಕುತೂಹಲದಿಂದ ಸಾಹಸಿ ಯುವಕನ ಹಿಂದೆ ಹೆಜ್ಜೆ ಹಾಕುತ್ತಿದ್ದ. ಐದು ನಿಮಿಷದಲ್ಲಿ ನೀರಿಗೆ ಹಾರಿದ ಸದ್ದು ಕೇಳಿತು. ಕಾವಲಿಗಿದ್ದ ಅಧಿಕಾರಿಗಳು ಕಾರ್ಯೋನ್ಮುಖರಾದರು‌. ನೀರು ನೊರೆಯೇಳುತ್ತಿದ್ದ ಸ್ಥಳಕ್ಕೆ ಗುರಿ ಇಟ್ಟು ಗುಂಡು ಹೊಡೆಯಲಾರಂಭಿಸಿದರು. ಒಂದು ಕ್ಷಣಕ್ಕೆ ಸಮುದ್ರದಲ್ಲಿ ಕೆಂಪು ನೀರು ಮೇಲೆದ್ದಿತು. ರಕ್ತ ಸಿಕ್ತ ಮಾನಾವಾಕೃತಿ ನೀರ ಮೇಲೆ ತೇಲಿ ಮತ್ತೆ ಮುಳುಗಿತು. ಹಿಂಬಾಲಿಸಲು ಹೊರಟ ಇಬ್ಬರು ಯುವಕರು ಕಿಂಕರ್ತವ್ಯಮೂಢರಂತೆ ಮುಖ ಮುಖ ನೋಡುತ್ತಾ ಹಡಗಿನಲ್ಲಿಯೇ ಉಳಿದರು. ಯಥಾವತ್ ಪ್ರಾಣ ಕಳೆದುಕೊಳ್ಳುವುದು ಯಾರಿಗೂ ಇಷ್ಟವಿರಲಿಲ್ಲ.ಇದಿನಬ್ಬ‌ ಬದುಕುಳಿದವರನ್ನು ಸಮಾಧಾನ ಪಡಿಸಿ ಧೈರ್ಯ ತುಂಬಿದ. ಇನ್ನಷ್ಟು ಯುವಕರು ಇದಿನಬ್ಬನೊಂದಿಗೆ ಕೂಡಿಕೊಂಡರು. ಮಾರಿ, ಮುತ್ತು ಮತ್ತು ಶಿವಂ ಹೆಸರಿನ ಒಂದಷ್ಟು ಹುಡುಗರು ಬೇಗನೆ ಇದಿನಬ್ಬನಿಗೆ ಹತ್ತಿರವಾದರು. ಅವರವರ ಬಾಲ್ಯ ಕಥೆ , ಸಾಹಸ ಚರಿತ್ರೆಗಳು ಕಥೆ ಕಾದಂಬರಿಗಳಾದಾವು. ಒಬ್ಬರಿಗೊಬ್ಬರು ಕಥೆ ಹೇಳತೊಡಗಿದ್ದರು. ಮಧ್ಯರಾತ್ರಿ ನಂತರ ನಿದ್ರೆ. ತಿನ್ನಲು ಒಂದು ಬಾರಿ ಬರುತ್ತಿದ್ದ ಗೆಣಸು ಮತ್ತು ಕುಡಿಯುವ ನೀರು ಹಡಗಿನ ದಿನಚರಿಯಾಯಿತು.

ಹಡಗು ಚಲಿಸುತ್ತಲೇ ಇದೆ. ಕಡಲ ಮೇಲಿನ ಪ್ರಯಾಣ, ಓಲಾಟ, ಕುಲುಕಾಟ, ನೀರವತೆ, ಬೇಸರಗಳೆಲ್ಲ ಇದಿನಬ್ಬನಿಗೆ ಅಭ್ಯಾಸವಾಗಿದೆ. ದಿನವೂ ಬರುವ ಗೆಣಸನ್ನು ತಿಂದು ನಾಲಗೆಯ ರುಚಿಯೇ ಕೆಟ್ಟು ಹೋಗುವಷ್ಟು ಸಾಕಾಗಿದೆ. ಆ ದಿನ ರಾತ್ರಿ ಆಕಾಶ ನೋಡುತ್ತಿದ್ದ ಇದಿನಬ್ಬನಿಗೆ ನಕ್ಷತ್ರಗಳ ಮೇಲೆ ವಿಶೇಷ ಕುತೂಹಲ ಹುಟ್ಟ ತೊಡಗಿತು. ಆ ರಾತ್ರಿ ಅವುಗಳ ಅಂದವನ್ನೇ ಚಿತ್ರಿಸುತ್ತಿದ್ದಂತೆ ಹೆಣ್ಣೊಬ್ಬಳ ಜೋರಾಗಿ ಅಳುವ ಸದ್ದು! “ಯಾರದು?” ಹತ್ತಿರ ಮಲಗಿದ್ದವರೆಲ್ಲಾ ದಡಕ್ಕನೆ ಎದ್ದು ಕುಳಿತರು. ” ಯಂಕಿ ಗೆ ಹೆರಿಗೆ ನೋವಂತೆ” ಎಲ್ಲರ ಕಿವಿಗೂ ತಲುಪಿತು‌. ಇದಿನಬ್ಬ ಕುಡಿಯುವ ನೀರಿನ ಹೂಜಿಯನ್ನು ಕೊಂಡು ಹೋಗಿ ಅವಳ ಬಳಿ ಹೋಗಿ ಇಟ್ಟ. ಅವರಲ್ಲಿ ಯಾರೋ ಒಬ್ಬಳು ಹೆಣ್ಣು ಕೂಲಿಯವಳು ಸೂಲಗಿತ್ತಿಯಾದಳು. ನಿಶ್ಯಬ್ಧ ರಾತ್ರಿಯಲ್ಲಿ ಉಸಿರು ಬಿಗಿ ಹಿಡಿದು ಅಬಲೆಯೊಬ್ಬಳ ಸುಃಖ ಪ್ರಸವಕ್ಕಾಗಿ ಇಡೀ ಹಡಗೇ ಪ್ರಾರ್ಥಿಸುತ್ತಿದೆ. ಪ್ರಸೂತಿಯಾಯಿತು. ದಿನಗಳು ಕಳೆಯಿತು, ಆ ದಿನಕ್ಕೆ ಕಡಲಲ್ಲಿ ಏಳನೇ ದಿನ. ಹಡಗಿನ ಹಿರಿಯ ಮುದುಕನೊಬ್ಬನ ಪ್ರಕಾರ ಹೆಣ್ಣು ಮಗುವಿಗೆ “ಕಡಲ್ಕೊಳಂದೆ” ಎಂಬ ಹೆಸರಿಟ್ಟದ್ದೂ ಆಯಿತು. ಆ ಬಳಿಕ ತಮಗೆ ಬರುತ್ತಿದ್ದ ಗೆಣಸಿನಲ್ಲಿ ಸಣ್ಣ ಪಾಲನ್ನು ಕಡಲ್ಕೊಳಂದೆಯ ತಾಯಿಗೆ ನೀಡುವ ಸಂಪ್ರದಾಯ ಇದಿನಬ್ಬ ಮತ್ತು ಗೆಳೆಯರು ರೂಢಿಸಿಕೊಂಡರು. ಹದಿನೈದನೇ ದಿನಕ್ಕೆ ಹಡಗು ಶ್ರೀಲಂಕಾದ ಬಂದರು ತಲುಪಿತು. ತಮಿಳು ಭಾಷೆಯನ್ನು ಹೋಲುವ ಸಿಂಹಳೀಸ್ ಭಾಷೆ ಸಿಲೋನ್ ದೇಶದ್ದು‌. ಹಾಗಂತ ಅಲ್ಲಿರುವವರಿಗೆ ತಮಿಳು ಅರ್ಥವಾಗುವುದಿಲ್ಲವೆಂದಲ್ಲ. ಹೆಚ್ಚಿನವರು ತಮಿಳು ಭಾಷೆ ವ್ಯಾವಹಾರಿಕವಾಗಿ ಬಳಸದಿದ್ದರೂ ಅರ್ಥವಾಗುವಷ್ಟು ಚಂದ ಉತ್ತರ ನೀಡುವವರು.

ಬಂದರಿನಲ್ಲಿ ಹಲವಾರು ಸಣ್ಣ ಸಣ್ಣ ದೋಣಿಗಳು ಬಿಟ್ಟರೆ ಅಲ್ಪ‌ಸ್ವಲ್ಪ ಮೀನುಗಾರರ ಗೌಜಿ. ಒಂದೇ ಸಮನೆ ಬೀಸುವ ತಂಗಾಳಿಗೆ ಹೊಸ ಚೈತನ್ಯದೊಂದಿಗೆ ಮೀನಿನ ಗಮಲು. ಮರಳ ಬದಿಯಲ್ಲೇ ಟಿಕಾಣಿ ಹೂಡಿರುವ ಕಡಲಾಮೆಗಳು. ಮನುಷ್ಯರ ಹಸ್ತಕ್ಷೇಪ ತೀರ ಕಡಿಮೆ ಎಂಬುವುದಕ್ಕೆ ಕಡಲಪ್ರಾಣಿಗಳ ಸ್ವಚ್ಛಂದ ವಿಹಾರವೇ ಕೈಗನ್ನಡಿ. ಇದಿನಬ್ಬ ಇಳಿದ ಹಡಗಿನಷ್ಟು ದೊಡ್ಡ ಹಡಗೇನೂ ಬಂದಿರಿನಲ್ಲಿರಲಿಲ್ಲ. ಎಲ್ಲರೂ ಹಡಗಿನಿಂದಿಳಿದಂತೆ ಮತ್ತೆ ಪಟ್ಟಿ ಓದುವ ಪ್ರಕ್ರಿಯೆ ಆರಂಭಗೊಂಡಿತು. ಇಬ್ಬರು ನಾಪತ್ತೆ! ಒಬ್ಬ ಕಡಲಿನಿಂದ ಹಾರಿ ಪೋಲೀಸರ ಗುಂಡಿಗೆ ಬಲಿಯಾದವನು, ಇನ್ನೊಬ್ಬ ಯಾರು? ಮತ್ತೆ ಒಂದು ಸುತ್ತು ಹುಡುಕಾಟ ನಡೆಸಲಾಯಿತು. ಹೌದು, ಆ ಗುಂಪಿನಲ್ಲಿದ್ದ ಮುದುಕ ನಾಪತ್ತೆಯಾಗಿದ್ದ. ಎಲ್ಲಿ, ಹೇಗೆ? ಮತ್ತೆ ಹುಡುಕಾಡಿದರು. ಕೊನೆಗೂ ಮುದುಕನ ಶವ ಪತ್ತೆಯಾಯಿತು. ಕಡಲಿನ ತೊಳಲಾಟ, ಚಳಿಗಾಳಿಗೆ ದೇಹವನ್ನು ಸಮತೋಲನದಲ್ಲಿ ಇಡಲಾಗದೆ ಆತ ಪ್ರಾಣಬಿಟ್ಟಿದ್ದ. ಕಡಲಲ್ಲಿ ಪ್ರಾಣ ಬಿಟ್ಟವನನ್ನು ಕಡಲ ದೇವರಿಗೆ ಕೊಡುವುದು ಸಂಸ್ಕೃತಿ. ಹಾಗೆಯೇ ಮುದುಕನ ಕಳೇಬರವನ್ನು ಅವನದೇ ಕಂಬಳಿಯಲ್ಲಿ ಕಟ್ಟಿ ಒಂದು ಪೆಟ್ಟಿಗೆಯೊಳಗೆ ಭದ್ರವಾಗಿ ಅದೇ ಹಡಗಲ್ಲಿ ಇರಿಸಿದರು. ಎಲ್ಲಾದರೂ ದಾರಿ ಮಧ್ಯೆ ಕಡಲಿಗೆ ಎಸೆದರೆ ಮುಗಿಯಿತು. ಹಡಗಿನಿಂದ ಇಳಿದ ಅಷ್ಟೂ ಜನ ಕೂಲಿಗಳಲ್ಲಿ ಮುದುಕನ ಜತೆಗಿದ್ದವರು ಮತ್ತು ಇತರರು ಸೇರಿ ಅವನಿಗಾಗಿ ಮರುಗಿದರು. ಅವರನ್ನೆಲ್ಲ ಒಂದು ಕಡೆ ಸೇರಿಸಲಾಯಿತು. ನೆರೆದ ಕೂಲಿಗಳನ್ನು ಕರೆದೊಯ್ಯಲು ಟ್ರಕ್ ಗಳು ಬಂದವು. ಈಸ್ಟ್ ಇಂಡಿಯಾ ಕಂಪೆನಿಯ ಲಾಂಛನವಿರುವ ೧೦ ಕ್ಕೂ ಹೆಚ್ಚು ವಾಹನಗಳು. ಆಯ್ಕೆ ಮಾಡಿ ಯುವಕರನ್ನೆಲ್ಲಾ ರೈಲ್ವೆ ರಸ್ತೆ ನಿರ್ಮಾಣಕ್ಕೂ, ಮಧ್ಯ ವಯಸ್ಕರನ್ನು ಕಾಫಿ ತೋಟಗಳಿಗೂ ವಿಭಾಗಿಸಲಾಯಿತು. ಆಚಾನಕ್ಕಾಗಿ ಇದಿನಬ್ಬನನ್ನು ನೋಡಿದ ಅಧಿಕಾರಿಯೊಬ್ಬ, ಈತನನ್ನು ನಮ್ಮ ಕಾಫಿ ಎಸ್ಟೇಟ್ನಲ್ಲಿ ಭದ್ರತಾ ಸಹಾಯಕನನ್ನಾಗಿ ಇಡೋಣ ಎನ್ನುತ್ತಾ ಕಾಫಿ ತೋಟಕ್ಕೆ ಹೋಗುವ ಟ್ರಕ್ಕಿಗೆ ಹತ್ತಿಸಿದ.

ಜೊತೆಗಿದ್ದ ಗೆಳೆಯರಾದ ಮಾರಿ,ಮುತ್ತು, ಶಿವು ಎಲ್ಲರೂ ಬೇರೆ ಟ್ರಕ್ಕುಗಳಿಗೇರಿದರು. ವಿರಹದ ನೋವುಗಳು ಅವರೆಲ್ಲರ ಮನದಲ್ಲೂ ಮಿಂಚಿ ಮಾಯಾವಾಯಿತು. ಟ್ರಕ್ಕುಗಳು ರಸ್ತೆ ಬದಲಿಸುತ್ತಾ ಅಷ್ಟ ದಿಕ್ಕುಗಳಿಗೆ ತಿರುಗಿ ಒಂದೊಂದು ರಸ್ತೆಗೆ ಸೇರಿ ಮಾಯವಾದವು. ಕಿಕ್ಕಿರಿದ ಟ್ರಕ್ಕ್ ಜಾನುವಾರುಗಳನ್ನು ಸಾಗಿಸುವ ವಾಹನಗಳಂತೆ ಭಾಸವಾಗುತ್ತವೆ. ವಾಹನ ನಿಲ್ಲಿಸುವಲ್ಲಿ ವಿಸರ್ಜಿಸಲು ಸಮಯ ಕೇಳುವ ಕೂಲಿಗಳಲ್ಲಿ ಹತ್ತಾರು ಮಕ್ಕಳೂ ಇದ್ದದ್ದರಿಂದ, ಅವರಿಗೆ ಅದಕ್ಕೆ ಸಮಯ ಕೇಳಲಾಗದೆ ಟ್ರಕ್ಕಿನಲ್ಲಿಯೇ ಮಾಡಿ ಬಿಟ್ಟಿದ್ದರು. ಉಚ್ಚೆ , ಹೇಲು ವಾಸನೆಯೊಂದಿಗೆ ಬೆವರಿನ ಕಮಟಿಗೂ ಅಸಹ್ಯ ವಾಸನೆ ಉಸಿರಾಡಲು ಅಡ್ಡಿಪಡಿಸುತ್ತಿದ್ದವು. ವಾಹನ ಜಗ್ಗುತ್ತಾ ಕುಗ್ಗುತ್ತಾ ಢಬ ಢಬ ಶಬ್ದದೊಂದಿಗೆ ಎರಡು ದಿನಗಳ ತರುವಾಯ ಕಾಫಿ ತೋಟದ ಮುಂದೆ ಬಂದು ನಿಂತಿತು. ಅದು ಸರಕಾರಿ ಕಾಫಿ ತೋಟ. ಪಹರೆ ಕಾಯಲು ಹತ್ತಾರು ಜನ. ಕಾಫಿಯ ಘಮ ವಾಸನೆಯನ್ನು ಬೆನ್ನಿಗೆ ಕಟ್ಟಿಕೊಂಡಿದ್ದ ಕೂಲಿಗಳಿಗೆ ವಿಶೇಷ ಅನುಭೂತಿಯನ್ನು ನೀಡತೊಡಗಿತ್ತು. ಮಳೆ ಬಿಸಿಲು ಚಳಿ ಗಾಳಿಯನ್ನು ಲೆಕ್ಕಿಸದೆ ಅವರು ದುಡಿಯತೊಡಗಿದರು. ಹೊಟ್ಟೆಗೂ ಸರಿಯಾಗಿ ಸಿಗದೆ ಪ್ರಕೃತಿಯ ಘೋರ ಪರಿಣಾಮಗಳಿಗೆ ಅವರಲ್ಲಿ ಕೆಲವರು ಕಾಯಿಲೆ ಬಿದ್ದವರು ಚೇತರಿಸಿಕೊಳ್ಳಲೇ ಇಲ್ಲ. ನಿತ್ಯವೂ ಅವರಲ್ಲಿ ಕೆಲವರು ಕಣ್ಮರೆಯಾಗುತ್ತಿದ್ದರು.

ಆಗ ಬೇಸಿಗೆ ಮುಗಿದು ಮಳೆ ಪ್ರಾರಂಭ ಗೊಳ್ಳುತ್ತಿತ್ತು. ಮುಂಗಾರು ಸ್ವಲ್ಪ ಬೇಗನೆ ದಾಪುಗಾಲಿಟ್ಟಿತ್ತು. ಕಾಫಿಯನ್ನು ಜತನದಿಂದ ಕಾಪಿಡಬೇಕಾದ ದಿನಗಳವು. ಕೆಲಸ ಸುಮಾರಿತ್ತು. ಪ್ರತಿಯೊಬ್ಬರಿಗೂ ಹೊಸ ಹೊಸ ಕೆಲಸಗಳನ್ನು ವಿಂಗಡಿಸಲಾಯಿತು. ಕಳೆ ಕೀಳುವುದು, ಕಟ್ಟೆ ಕಟ್ಟುವುದು, ಹಳೆಯ ಬೀಜಗಳನ್ನು ಪ್ರತ್ಯೇಕಿಸುವುದು, ಪ್ಯಾಕಿಂಗ್ ಮಾಡುವುದು ಇತ್ಯಾದಿ. ಅದು ಬಹಳ ವಿಶಾಲವಾದ ಎಸ್ಟೇಟ್. ಕೂಲಿಗಳ ಮೇಲುಸ್ತುವಾರಿ ನೋಡುವ ಕಚೇರಿಗಳು ಅಲ್ಲಿದ್ದವು‌. ಇದಿನಬ್ಬನಿಗೆ ರಕ್ಷಣಾ ಸಿಬ್ಬಂದಿಯಾಗಿ ಕೆಲಸ ನೇಮಿಸಲಾಯಿತು‌. ಹೆಸರಿಗೆ ಸಮವಸ್ತ್ರ ಧರಿಸಿ ಇರಬೇಕು. ಎಸ್ಟೇಟ್ ಬದಿಗಳ ಸಸ್ಯಗಳನ್ನು ಚೆನ್ನಾಗಿ ಕತ್ತರಿಸಿ ರೂಪ ಕೊಡುವುದು. ಎಲ್ಲಾ ಕೆಲಸಗಾರರು ಬರುವುದನ್ನು ಖಾತ್ರಿ ಪಡಿಸುವುದು. ಸಂಜೆಯಾದರೆ ರಾತ್ರಿ ಹನ್ನೆರಡರ ವರೆಗೂ ತೋಟದ ಕೆಲಸ.

ಇದಿನಬ್ಬನಿಗೆ ಪ್ರಾರ್ಥನೆಗೂ ಸಮಯ ಸಿಗದೆ ಯಾಂತ್ರಿಕ ಬದುಕು ರೇಜಿಗೆ ಹುಟ್ಟತೊಡಗಿತ್ತು.

ಒಂದು ತಿಂಗಳು ಸಂದಿತು.ಒಂದು ದಿನ ಬೆಳಗ್ಗೆ ಆಕಾಶ ಕಪ್ಪಿಟ್ಟು ಭಾರೀ ಮಳೆಯಾಗುವ ಲಕ್ಷಣವಿತ್ತು. ತಲೆಗೆ ಪ್ಲಾಸ್ಟಿಕ್‌ ಹೊದ್ದು ಇದಿನಬ್ಬ ಪಹರೆ ಕಾಯುತ್ತಿದ್ದಾನೆ. ದೂರದಿಂದ ಕಾರೊಂದು ಬರುತ್ತಿರುವುದು ಕಂಡಿತು. ಅದರ ಹಿಂದೆಯೇ ಎತ್ತಿನ ಗಾಡಿ. ಸೀದಾ ಎಸ್ಟೇಟ್ನ ಬಾಗಿಲಲ್ಲಿ ಬಂದು ನಿಂತಿತು. ಎತ್ತಿನ ಗಾಡಿಯಲ್ಲಿ ಒಂದಿಬ್ಬರು ಕೆಲಸಗಾರರಿದ್ದಾರೆ. ಗಾಡಿ ಹತ್ತಿರ ಬಂತು, ಅಷ್ಟಕ್ಕೆ ಹೊದ್ದುಕೊಂಡ ಪ್ಲಾಸ್ಟಿಕಿನ ಮೇಲೆ‌ ಮಳೆ ಹನಿಗಳು ಜೋರಾಗಿ ಕುಕ್ಕ ತೊಡಗಿದವು. ಆಲಿ ಕಲ್ಲಿನಂತೆ ಭಾರವಾದ ನೀರ ಹನಿಗಳು ಮೈಯ ಮೇಲೆಲ್ಲಾ ಬೀಳುವಾಗ ನೋವಿನ ಅರಿವಾಗುತ್ತಿತ್ತು. ಕಾರಿಗೆ ಎಸ್ಟೇಟ್ ಬಾಗಿಲು ತೆರೆದುಕೊಟ್ಟ ಇದಿನಬ್ಬ ನೋಡುವುದೇನು; “ಮಾರಿ ಮತ್ತು ಮುತ್ತು” ಇಬ್ಬರನ್ನೂ ಕಂಡದ್ದೇ ಇದಿನಬ್ಬನ ಮೊಗ ಊರಗಲವಾಯಿತು. ಖುಷಿಯಿಂದ ಅವರಲ್ಲಿ ಮಾತನಾಡಲು ಬಳಿ ಬಂದರೆ ಅವರಿಬ್ಬರೂ ಮುಖ ಸಣ್ಣದು ಮಾಡಿಕೊಂಡು ನಿಂತಿದ್ದಾರೆ. “ಏಂಡಾ,ಒನ್ನು ಪೇಸಾದೆ ನಿಕ್ಕಿರಿಂಗೆ (ಯಾಕ್ರೋ ಮೌನವಾಗಿ ನಿಂತಿದ್ದೀರಿ)”

ಎಂದು ಇದಿನಬ್ಬ ಹೇಳಿದ್ದೇ ತಡ, ಗಾಡಿಯು ನಿಂತಿತು. ಗಾಡಿಯಿಂದಿಳಿದವರೇ ಅವರಿಬ್ಬರೂ ಇದಿನಬ್ಬನನ್ನು ನೋಡಿ ಜೋರಾಗಿ ಅಳತೊಡಗಿದರು. ಇಬ್ಬರೂ ಓಡಿ ಬಂದು ಇದಿನಬ್ಬನನ್ನು ಅಪ್ಪಿಕೊಂಡು ಜೋರಾಗಿ ಅಳ ಹತ್ತಿದರು. ಮೂವರು ಮಳೆಯಲ್ಲಿ ಸಂಪೂರ್ಣ ತೋಯ್ದು ಹೋಗಿದ್ದರು. ಮಾರಿ ಅಳುತ್ತಾ ಹೇಳಿದ:

“ನಮ್ಮ ಶಿವಂ ತೀರಿ ಬಿಟ್ಟ, ರೈಲ್ವೇ ರಸ್ತೆ ಅಗೆಯುತ್ತಿದ್ದಂತೆ ಅಚಾನಕ್ಕಾಗಿ ಬೆಟ್ಟ ಜರಿದು ಆಧಾರ ಸ್ಥಂಭದ ಅಡಿಯಲ್ಲಿ ಸಿಲುಕಿ ಮೃತಪಟ್ಟ, ಅವನ ಶವವನ್ನು ತಂದಿದ್ದೇವೆ”.

ಇದಿನಬ್ಬನ ಕಂಠವೊಮ್ಮೆ ನಡುಗಿತು.

(ಈ ಕಾದಂಬರಿಯ ಮುಂದಿನ ಕಂತು, ಮುಂದಿನ ಭಾನುವಾರ ಪ್ರಕಟವಾಗುವುದು)

About The Author

ಮುನವ್ವರ್, ಜೋಗಿಬೆಟ್ಟು

ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..

1 Comment

  1. somashekar v

    good morning mr. jogibettu
    nicely written article.
    small correction , was there plastic available at the time of british rule. I doubt so…
    can correct as bamboo hat, old rug or something.
    thank you

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ