Advertisement
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ ಸರಣಿ ಇಂದಿನಿಂದ ಶುರು

ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ ಸರಣಿ ಇಂದಿನಿಂದ ಶುರು

ಹಾಸ್ಟೆಲ್ ಜೀವನವೆಂದರೆ ಬದುಕನ್ನು ಸ್ವಯಂ ಅನ್ವೇಷಿಸುವ ಮೊದಲ ಹೆಜ್ಜೆಯಂತೆ.  ಸಮವಯಸ್ಕರ ಜೊತೆಗೆ ಬದುಕುವ ಅವಕಾಶ ಸಿಗುವುದರಿಂದ ಅಲ್ಲಿನ ನೋವು ನಲಿವುಗಳೊಡನೆ ನವಿರು ಭಾವವೊಂದು ಸೇರಿಕೊಂಡಿರುತ್ತದೆ. ಕಥೆಗಾರ ಗುರುಪ್ರಸಾದ್ ಕಂಟಲಗೆರೆ ತೀರಾ ಎಳವೆಯಲ್ಲಿಯೇ ಹಾಸ್ಟೆಲ್ ಬದುಕನ್ನು ಕಂಡವರು. ಬಾಲ್ಯದ ಮುಗ್ಧ ಕಂಗಳಲ್ಲಿ ಒರಟು ಚಿತ್ರಗಳನ್ನು ಕಂಡವರೂ ಹೌದು.  ಆ ನೆನಪುಗಳನ್ನು ಅವರು ಪ್ರತಿವಾರ ‘ಟ್ರಂಕು ತಟ್ಟೆ’ ಎಂಬ ಸರಣಿಯಲ್ಲಿ ಬರೆಯಲಿದ್ದಾರೆ. ಈ ಬರಹಗಳು ಅಕ್ಷರಗಳನ್ನು ಮೀರಿದ ಕಥೆಯೊಂದನ್ನು ಹೇಳುತ್ತವೆಯೆನಿಸುತ್ತದೆ. ಮೊದಲ ಬರಹ ನಿಮ್ಮ ಓದಿಗಾಗಿ ಇಲ್ಲಿದೆ:

ನಾನು ಮತ್ತು ನನ್ನ ತಮ್ಮ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಐದನೇ ಕ್ಲಾಸ್ ಮುಗಿಸಿದ ತಕ್ಷಣವೇ ಮಿಡ್ಲಿಸ್ಕೂಲ್ ಓದಲು ತಿಪಟೂರಿನ ಎಸ್‌ಸಿ ಎಸ್‌ಟಿ ಹಾಸ್ಟೆಲ್‌ಗೆ ಹೋಗಬೇಕಾಗಿ ಬಂತು. ಅದಕ್ಕೆ ಒಂದು ಬಲವಾದ ಕಾರಣವೂ ಇತ್ತು. ನಮ್ಮ ಚಿಕ್ಕಮ್ಮನ(ಅಮ್ಮನ ತಂಗಿ) ಮೂರು ಜನ ಮಕ್ಕಳೂ ಅಲ್ಲೇ ಓದುತ್ತಿದ್ದರು. ಚಿಕ್ಕಪ್ಪನೆಂದರೆ ಅಂತಿಂಥ ಚಿಕ್ಕಪ್ಪನಲ್ಲ! ನಮ್ಮ ಕುಟುಂಬದ ಪ್ರಥಮ ಸರ್ಕಾರಿ ನೌಕರರಾಗಿದ್ದವರು. ತಿಪಟೂರಿನ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಇಲಾಖೆ ಮತ್ತು ಕುಟುಂಬದ ಒಳಗೂ ಗೌರವಾನ್ವಿತರಾಗಿದ್ದು, ಅದರಂತೆ ನಡೆದುಕೊಳ್ಳುತ್ತಿದ್ದರು. ಅಂಥವರ ಮೂರುಜನ ಗಂಡು ಮಕ್ಕಳು ಹಾಸ್ಟೆಲ್‌ನಲ್ಲಿ ಓದುತ್ತಿದುದರ ಜೊತೆಗೆ ಓದಿನಲ್ಲೂ ಮುಂದಿದ್ದರು. ಇದು ಸಾಮಾನ್ಯವಾಗೇ ಕುಟುಂಬದ ಇತರರಿಗೂ ಹಾಸ್ಟೆಲ್ ಓದಿನ ಬಗೆಗೆ ಆಸಕ್ತಿ ಮೂಡಿಸಿತ್ತು. ಆ ದಿನಗಳಲ್ಲಿ ತುಮಕೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿದ್ದ ನಮ್ಮ ಅಮ್ಮನ ಅಣ್ಣ (ಮಾವ)ಕುಂದೂರು ತಿಮ್ಮಯ್ಯ ತಮ್ಮ ಮಕ್ಕಳಿಬ್ಬರನ್ನೂ ಅಲ್ಲಿಗೇ ಸೇರಿಸಿದ್ದರು. ಇನ್ನು ಮೂರನೆಯದಾಗಿ ಆರ್ಥಿಕವಾಗಿ ಅಷ್ಟೇನು ಸದೃಢವಲ್ಲದ ರೈತಾಪಿ ಹಿನ್ನೆಲೆಯ ನಮ್ಮ ಅಪ್ಪ-ಅಮ್ಮನಿಗೆ ಕುಟುಂಬದೊಳಗೆ ವಿದ್ಯಾವಂತರೆನಿಸಿದ್ದ ಮಾವ ಮತ್ತು ಚಿಕ್ಕಪ್ಪನವರನ್ನು ಅನುಸರಿಸುವುದ ಬಿಟ್ಟು ಬೇರೆ ದಾರಿ ಇರಲಿಲ್ಲ.

ಅಪ್ಪ ಒಂದು ದಿನ ನನ್ನನ್ನೂ ಮತ್ತು ನನ್ನ ತಮ್ಮ ಜೇಪಿಯನ್ನು ಎಡಕ್ಕೆ ಬಲಕ್ಕೆ ಹಾಕಿಕೊಂಡು, ತಂದಿದ್ದ ಬಟ್ಟೆ ಬರೆಯ ಲಗೇಜನ್ನು ಹೊತ್ತುಕೊಂಡು ತಿಪಟೂರು ಬಸ್‌ಸ್ಟಾಂಡ್‌ನಲ್ಲಿ ಇಳಿದು, ರೈಲ್ವೆ ಸ್ಟೇಷನ್ ರೋಡಿನಲ್ಲಿದ್ದ ಹಾಸ್ಟೆಲ್ ಕಡೆಗೆ ಮುಖ ಮಾಡಿತು. ಅದಾಗಲೇ ಶಾಲಾ ಸಮಯವಾಗಿದ್ದರಿಂದ ರೈಲ್ವೆಸ್ಟೇಷನ್ ರೋಡಿನ ಎಡಗಡೆಗಿದ್ದ ಸರ್ಕಾರಿ ಶಾಲೆಗೆ ಹೋಗಿ, ಊರ ಶಾಲೆಯಿಂದ ಪಡೆದು ತಂದಿದ್ದ ಟೀಸಿಯನ್ನು ಕೊಟ್ಟು ನನ್ನನ್ನು ಏಳನೇ ತರಗತಿಗೆ, ತಮ್ಮನನ್ನು ಐದನೇ ತರಗತಿಗೆ ಅಡ್ಮಿಷನ್ ಮಾಡಿಸಿತು. ನಂತರ ಹಾಸ್ಟೆಲ್‌ಗೆ ಸೇರಿಸಿ ಬರುವುದಾಗಿ ತರಗತಿ ಶಿಕ್ಷಕರಿಗೆ ಹೇಳಿ ಮಾವಿನ ತೋಪಿನಲ್ಲಿದ್ದ ಹಾಸ್ಟೆಲ್ ದಿಕ್ಕಿಗೆ ಕರೆದುಕೊಂಡು ಹೊರಟಿತು. ದಾರಿಯ ಎರಡೂ ಪಕ್ಕೆಯಲ್ಲಿ ಶೇಟುಗಳ ಭವ್ಯವಾದ ಬಂಗಲೆಗಳಿದ್ದವು. ಅವುಗಳನ್ನು ದಾಟಿದಾಗ ಮಾವಿನತೋಪು ಸಿಗುತ್ತಿತ್ತು. ಮಾವಿನತೋಪು ಎಂಬ ಹೆಸರು ಏಕೆ ಬಂತೋ? ಆಗಂತೂ ಅಲ್ಲಿ ಯಾವ ಮಾವು ಇರಲಿಲ್ಲ. ಮಾಜಿ ಎಮ್‌ಎಲ್‌ಎ ಗಂಗಾಧರಪ್ಪನವರ ಹಳೆಯ ದನದ ಕೊಟ್ಟಿಗೆಯನ್ನ ಸಮಾಜ ಕಲ್ಯಾಣ ಇಲಾಖೆಯವರು ಬಾಡಿಗೆಗೆ ಪಡೆದು ಅದರಲ್ಲಿ ಸುಮಾರು ಐವತ್ತು ಮೆಟ್ರಿಕ್ ಪೂರ್ವ ಎಸ್‍ಸಿ ಎಸ್‌ಟಿ ಮಕ್ಕಳನ್ನು ಸಾಕುತ್ತಿದ್ದರು. ಇದನ್ನು ಸೋಸಿಯಲ್ ಹಾಸ್ಟೆಲ್ ಎಂದೂ, ಪಕ್ಕದ ಇನ್ನೊಂದು ಗೋಡೌನಿನಲ್ಲಿದ್ದವರನ್ನ ಬಿಸಿಎಮ್ ಹಾಸ್ಟೆಲ್‌ನವರೆಂದು ಕರೆಯುತ್ತಿದ್ದರು.

ಹೈಸ್ಕೂಲ್ ಹಾಸ್ಟೆಲ್‌ಗಳು ಸಿಗುವ ಮುನ್ನವೆ ಬಿಸಿಎಮ್ ಕಾಲೇಜ್ ಹಾಸ್ಟೆಲ್ ಹುಡುಗರ ರೂಮುಗಳು ಸಿಗುತ್ತಿದ್ದವು. ಎದುರು ಬದುರಿಗಿದ್ದ ಹತ್ತಾರು ರೂಮುಗಳಿಂದಾಗಿ ಮಧ್ಯದಲ್ಲಿ ಸೊಂಪಲು ಉಂಟಾಗಿತ್ತು. ಆ ಸೊಂಪಲ ಹಾದಿಯಲ್ಲಿ ಮುಂದೆ ಸಾಗಿದರೆ ಅಲ್ಲಿ ಮೊದಲು ಸಿಗುತ್ತಿದುದ್ದೇ ಸೋಷಿಯಲ್ ಹಾಸ್ಟೆಲ್. ಹಳೆಯ ಸಿನಿಮಾ ಟೆಂಟಿನಂತೆ ಉದ್ದವಾಗಿದ್ದ ಮಾಜಿ ದನದ ಕೊಟ್ಟಿಗೆಯ ಬೃಹತ್ ಬಾಗಿಲಿನ ಮೇಲೆ ಅರೆ ಬರೆ ಅಳಿಸಿಹೋದ ಅಕ್ಷರಗಳಿಂದ ವಕ್ರವಾಗಿ ಸಮಾಜ ಕಲ್ಯಾಣ ಇಲಾಖೆಯ ಬೋರ್ಡ್ ನೇತಾಡುತ್ತಿತ್ತು. ಅದನ್ನು ನೋಡಿ ಇದೇ ಇರಬೇಕೆಂದು ಅಪ್ಪ ನಮ್ಮನ್ನು ಮೆಟ್ಟಿಲು ಹತ್ತಿಸಿಕೊಂಡು ಒಳಗೆ ಕರೆದುಕೊಂಡು ಹೋಯಿತು.

ಒಳಗಡೆ ಪ್ರವೇಶ ಪಡೆಯುತ್ತಿದ್ದಂತೆ ಸುಮಾರು ಐವತ್ತು ಅಡಿ ದೂರದಷ್ಟು ವ್ಯಾಪಿಸಿದ್ದ ಕೋಣೆಯ ಒಳಗೆ ಗವ್‌ಗತ್ತಲು ಕವಿದಿತ್ತು. ಎರಡು ಕಡೆ ಗೋಡೆಗೆ ಆತುಕೊಂಡಂತೆ ಇದ್ದ ಒಂದೇ ಅಳತೆಯ ಸಿಲ್ವರ್ ಟ್ರಂಕ್‌ಗಳು ಅಸ್ಪಷ್ಟವಾಗಿ ಕಾಣುತ್ತಿದ್ದವು. ಆ ಕಡೆ ಈ ಕಡೆ ನೋಡಿಕೊಂಡು ಮುಂದೆ ಸಾಗಲಾಗಿ ಕೊಠಡಿ ಅಂತ್ಯಗೊಂಡಂತ್ತಿದ್ದ ಗೋಡೆಗಿದ್ದ ಪುಟ್ಟ ಬಾಗಿಲು ತೆರೆದಿತ್ತು. ಆ ಬಾಗಿಲ ಒಳಗೊಂದು ರೂಮು, ಆ ರೂಮಿನ ಆಚೆಬದಿಗಿದ್ದ ಕಿಟಕಿಯಿಂದ ಬರುತ್ತಿದ್ದ ಬೆಳಕು ಬಾಗಿಲಿನಿಂದ ಹೊರಕ್ಕೆ ಬಿದ್ದಿತ್ತು. ರೂಮಿನ ತುಂಬ ಹೊಗೆ ಕವಿದುಕೊಂಡು ಬುಸುಗುಡುತ್ತಿತ್ತು. ಕಿಟಕಿಯಿಂದ ಬರುತ್ತಿದ್ದ ಬೆಳಕಿನೊಳಗೆ ಬೆರೆತಿದ್ದ ಹೊಗೆ ಸುರುಳಿಯಂತೆ ಮೇಲೇರುತ್ತಿತ್ತು. ಅಪ್ಪನು ಆ ಹೊಗೆ ಕವಿದಿದ್ದ ಆಫೀಸು ರೂಮಿನೊಳಗೆ ಹೋಗುವ ಮುಂಚೆ ಎತ್ತಿ ಕಟ್ಟಿದ್ದ ಬಿಳಿ ಲುಂಗಿಯನ್ನು ಕೆಳಗಿಳಿಸಿಕೊಂಡು ಒಳನಡೆಯಿತು. ನಾವು ಅಪ್ಪನ ಕೈ ಬೆರಳನ್ನು ಹಿಡಿದುಕೊಂಡೇ ಅಳುಕಿನಿಂದ ಹಿಂಬಾಲಿಸಿ ಲುಂಗಿ ಸಂದಿಯಲ್ಲಿ ಮುಖ ಇಟ್ಟು ಹೊಗೆ ಬಿಡುತ್ತಿದ್ದ ವ್ಯಕ್ತಿಯನ್ನು ನೋಡಿದೆವು.

ಅಲ್ಲಿ ಎಣ್ಣೆಗೆಂಪು ಬಣ್ಣದ ದುಂಡು ಮುಖದ ವ್ಯಕ್ತಿಯೊಂದು ಕೂತಿದ್ದು ಅದು ಕೂದಲುದುರಿದ ತಲೆಗೆ ಕ್ರಾಪ್ ತೆಗೆದಿತ್ತು. ತನ್ನ ಅಜಾನುಬಾಹು ದೇಹ ತೋರಲೇನೋ ಎಂಬಂತೆ ಸಫಾರಿ ಅಂಗಿಯ ಮೊದಲೆರೆಡು ಗುಂಡಿ ಬಿಚ್ಚಿಕೊಂಡು ತೀಕ್ಷ್ಣ ಕಣ್ಣಿನಿಂದಲೂ ತಿವಿಯುವ ಮೂಗಿನಿಂದಲೂ ಬೀಡಿ ಹೊಗೆ ಬಿಡುತ್ತಿತ್ತು. ವೈರಿನ ಕುರ್ಚಿಯ ಮೇಲೆ ಕೂತು ನಮ್ಮನ್ನು ಸೀರಿಯಸ್ಸಾಗಿ ನೋಡಿದ ಆ ವ್ಯಕ್ತಿ ರಿಟೈರ್‌ಗೆ ಇನ್ನ ನಾಲ್ಕೈದು ವರ್ಷ ಮಾತ್ರ ಬಾಕಿ ಉಳಿಸಿಕೊಂಡಿದ್ದ ವಾರ್ಡನ್ ನಾಗರಾಜಪ್ಪನವರು.

ಆ ದಿನಗಳಲ್ಲಿ ಈಗಿನಂತೆ ಹಾಸ್ಟೆಲ್ ಸೀಟ್‌ಗಾಗಿ ಅರ್ಜಿ ಹಾಕುವುದು ಸೀಟ್ ಅನೌನ್ಸ್ ಮಾಡುವುದು ಇನ್ನಿತರ ಪದ್ಧತಿಗಳು ಇರಲಿಲ್ಲ ಅನ್ನಿಸುತ್ತೆ. ವಾರ್ಡನ್‌ರೇ ಇಲಾಖೆ ನಿಗಧಿಪಡಿಸಿದ ಸಂಖ್ಯೆಯನ್ನು ತಮ್ಮ ವಿವೇಚನೆಯನುಸಾರ ಭರ್ತಿಮಾಡಿಕೊಂಡು, ಅದಕ್ಕೆ ಸ್ಕಾಲರ್ ಸ್ಯಾಂಕ್ಷನ್ ಮಾಡಿಸಿಕೊಳ್ಳುತ್ತಿದ್ದರು. ಅಪ್ಪ ತನ್ನ ಪರಂಪರೆಯನ್ನೆಲ್ಲ ಬಿಚ್ಚಿಟ್ಟ ನಂತರದಲ್ಲಿ ನಾಗರಾಜಪ್ಪನವರಿಗೆ ನಮಗೆ ಸೀಟು ನಿರಾಕರಿಸಲು ಕಾರಣವಿರಲಿಲ್ಲ. ಜಿ.ಹೆಚ್.ಪಿ.ಎಸ್ ಸ್ಕೂಲಿನಲ್ಲಿ ದಾಖಲಾಗಿರುವುದನ್ನು ಖಾತ್ರಿ ಮಾಡಿಕೊಂಡ ನಂತರ ನಮ್ಮ ಹೆಸರುಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸಿಕೊಂಡರು.

ಆಫೀಸ್ ರೂಮಿನ ಒಂದು ಮೂಲೆಯಲ್ಲಿ ನಜ್ಜುಗುಜ್ಜಾಗಿ ಹೋಗಿದ್ದ ಟ್ರಂಕ್‌ಗಳು ಒಂದರ ಮೇಲೊಂದು ಸಾಕಾದವರಂತೆ ಬಿದ್ದುಕೊಂಡಿದ್ದವು. ಅದರ ಪಕ್ಕದಲ್ಲಿ ಮಾಸಿ ಚುಮ್ಟವಾಗಿದ್ದ ಕಾರ್ಪೆಟ್, ಬೆಡ್‌ಶೀಟ್‌ಗಳು ಮುದುಡಿಕೊಂಡು ಮಲಗಿದ್ದವು. ಅವು ಎಸ್‌ಎಸ್‌ಎಲ್‌ಸಿ ಪಾಸಾಗಿಯೋ ಅಥವಾ ಫೇಲಾಗಿಯೋ ಹಾಸ್ಟೆಲ್ ತ್ಯಜಿಸಿ ಹೋಗಿದ್ದ ಸೀನಿಯರ್ ವಿದ್ಯಾರ್ಥಿಗಳು ತಾವು ಬಳಸಿದ ನಂತರ ವಾರ್ಡನ್‌ಗೆ ಸರೆಂಡರ್ ಮಾಡಿದ್ದ ಟ್ರಂಕು, ಕಾರ್ಪೆಟ್‌ಗಳು. ಅವುಗಳಲ್ಲಿ ಉತ್ತಮವಾದವುಗಳನ್ನು ಹಾಲಿ ಸೀನಿಯರ್ ವಿದ್ಯಾರ್ಥಿಗಳು ವರ್ಗಾಯಿಸಿಕೊಂಡು, ಯಾತಕ್ಕೂ ಬಾರದ ಕಟ್ಟ ಕಡೆಯವುಗಳನ್ನು ಹೊಸಬರಿಗಾಗಿ ಮೂಲೆಯಲ್ಲಿ ಜೋಡಿಸಿದ್ದರು.

ಅದಾಗಲೇ ಶಾಲಾ ಸಮಯವಾಗಿದ್ದರಿಂದ ರೈಲ್ವೆಸ್ಟೇಷನ್ ರೋಡಿನ ಎಡಗಡೆಗಿದ್ದ ಸರ್ಕಾರಿ ಶಾಲೆಗೆ ಹೋಗಿ, ಊರ ಶಾಲೆಯಿಂದ ಪಡೆದು ತಂದಿದ್ದ ಟೀಸಿಯನ್ನು ಕೊಟ್ಟು ನನ್ನನ್ನು ಏಳನೇ ತರಗತಿಗೆ, ತಮ್ಮನನ್ನು ಐದನೇ ತರಗತಿಗೆ ಅಡ್ಮಿಷನ್ ಮಾಡಿಸಿತು.

ವಾರ್ಡನ್ ನಾಗರಾಜಪ್ಪನವರು ಅಪ್ಪನನ್ನು ಕುರಿತು ಅಲ್ಲಿರುವ ಎರಡು ಟ್ರಂಕ್‌ಗಳನ್ನು ಎಳೆದುಕೊಳ್ಳಯ್ಯ ಎಂದರು. ಅಪ್ಪ ಅದರಲ್ಲೆ ಪರವಾಗಿಲ್ಲ ಎನ್ನಬಹುದಾದ ಎರಡು ಟ್ರಂಕ್‌ಗಳನ್ನು ಹುಡುಕಿ ತೆಗೆಯಿತು. ಕಾರ್ಪೆಟ್, ಬೆಡ್‌ಶೀಟ್‌ಗಳು ನಾಗರಾಜಪ್ಪನವರು ಕೂತಿದ್ದ ಕುರ್ಚಿಗೆ ನೆಟಕುತ್ತಿದ್ದುದರಿಂದ ಅವುಗಳಲ್ಲಿ ಎರಡನ್ನು ತೆಗೆದು ಅವರೇ ಕೊಟ್ಟು ‘ನೋಡಯ್ಯಾ ಟ್ರಂಕ್‌ಗಳು ಹಾಳಾಗಿ ಹೋಗಿವೆ, ಅರಳಿಕಟ್ಟೆತಕೆ ಹೋಗಿ ಎರಡನ್ನೂ ರಿಪೇರಿ ಮಾಡಿಸಿಕೊಂಡು ಬರಬೇಕು, ಬೆಡ್‌ಶೀಟ್‌ಳನ್ನು ಚೆನ್ನಾಗಿ ಒಗೆಸಿ ಕೊಡಬೇಕು’ ಎಂದು ಅಪ್ಪನಿಗೆ ತಾಕೀತು ಮಾಡಿ, ಈಗ ಹುಡುಗರು ಶಾಲೆಗೆ ಹೋಗ್ಲಿ, ಸಂಜೆ ಬಂದಾಗ ಊಟಕ್ಕೆ ತಟ್ಟೆ ಕೊಡುವುದಾಗಿ ಹೇಳಿ ಕಳುಹಿಸಿದರು. ಅಪ್ಪ ಕೊಳೆತಂತಿದ್ದ ಎರಡು ಜೊತೆ ಬೆಡ್‌ಶೀಟ್ ಮತ್ತು ಕಾರ್ಪೆಟ್‌ಗಳನ್ನು ಟ್ರಂಕಿನ ಬಾಯಿ ತೆಗೆದು ಅದರೊಳಗಾಕಿಕೊಂಡು, ಒಂದರ ಮೇಲೊಂದರಂತೆ ಎರಡೂ ಟ್ರಂಕುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಅರಳಿಕಟ್ಟೆಯ ದಾರಿ ಹಿಡಿಯಿತು. ನಾವು ಅಪ್ಪನನ್ನು ಹಿಂಬಾಲಿಸಿದೆವು.

ಅರಳಿಕಟ್ಟೆಯ ಬೀಗ ರಿಪೇರಿ ಮಾಡುವ ಬೀದಿಯಲ್ಲಿ ಅಪ್ಪ ಚೌಕಾಸಿ ಮಾಡಿ ಎರಡೂ ಟ್ರಂಕುಗಳನ್ನು ರಿಪೇರಿ ಮಾಡಿಕೊಡಲು ಒಬ್ಬನನ್ನು ಒಪ್ಪಿಸಿತು. ಆತ ತಗ್ಗಿ ಹೋಗಿದ್ದ ಟ್ರಂಕನ್ನು ಕೆಚ್ಚಿ ಬಡಿದು ನೆಟ್ಟಗೆ ಮಾಡುವಾಗ ನಾವು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದೆವು. ಅಪ್ಪ ಅದಕ್ಕೊಂದು ಚಿಲಕವನ್ನೂ ಹಾಕಿಸಿತು. ತಮ್ಮನದು ಹೊಸ ಚಿಲಕ, ನನಗೆ ಹಳೆಯದನ್ನೆ ರಿಪೇರಿ ಮಾಡಿಸಿತು. ಕೊನೆಗೆ ಸುಣ್ಣ ಕಾಯಿ ಡಬ್ಬಿಯಂತಹ ಎರಡು ಸಣ್ಣ ಬೀಗಗಳನ್ನು ಕೊಡಿಸಿತು. ಎರಡೂ ಟ್ರಂಕಿನ ಬೀಗವನ್ನು ಹಾಕಿ, ನೋಡಲು ಆನಂದವಾಗುತ್ತಿದ್ದ ಬೀಗದ ಸಿಬಿರುಗಳನ್ನು ಕೆಂಪುದಾರದಿಂದ ಏರಿಸಿ ನಮ್ಮ ಕರಿ ಉಡುದಾರಕ್ಕೆ ಕಟ್ಟಿ ಚಡ್ಡಿಯ ಮುಂಭಾಗಕ್ಕೆ ಇಳಿ ಬಿಟ್ಟಿತು. ಪುನಃ ಅಪ್ಪ ಎರಡೂ ಟ್ರಂಕುಗಳನ್ನು ತಲೆ ಮೇಲೆ ಹೊತ್ತುಕೊಂಡು ಹಾಸ್ಟೆಲ್ ದಾರಿಯಲ್ಲಿ ಹೋಗುವಾಗ ನಾವು ನಮ್ಮ ಚಡ್ಡಿಯ ಮುಂದೆ ಬೀಗದ ಸಿಬಿರು ಆ ಕಡೆ ಈ ಕಡೆ ಲೋಲಾಕಿನಂತೆ ಗಂಟೆ ಬಾರಿಸುವುದನ್ನು ನೋಡಿಕೊಂಡು ಅಪ್ಪನನ್ನು ಹಿಂಬಾಲಿಸಿದೆವು. ಹಾಸ್ಟೆಲ್ ದಾರಿಯಲ್ಲೇ ಸ್ಕೂಲ್ ಸಿಕ್ಕಾಗ ಗಂಟೆ ಅದಾಗಲೇ ಮೂರು ದಾಟಿತ್ತಾದ್ದರಿಂದ ಅಪ್ಪ ನಮ್ಮನ್ನು ಸ್ಕೂಲ್ ಮುಗಿಸಿಕೊಂಡು ಬರಲು ತಿಳಿಸಿ ಹಾಸ್ಟೆಲ್ ದಾರಿ ಹಿಡಿಯಿತು.

ನಾಲ್ಕುವರೆಗೆ ಸ್ಕೂಲ್ ಬೆಲ್ ಹೊಡೆಯಿತು. ನಾವು ಇತರೆ ಮಕ್ಕಳೊಂದಿಗೆ ಬ್ಯಾಗ್ ನೇತಾಕಿಕೊಂಡು ಹೊರಬಂದಾಗ ಅಪ್ಪ ಸ್ಕೂಲ್ ಕಾಂಪೌಂಡಿನಲ್ಲೇ ನಮಗಾಗಿ ಕಾಯುತ್ತ ನಿಂತಿತ್ತು. ನಾವು ಅಪ್ಪನ ಬಳಿ ಹೋದೆವು. ಬೆಳಗ್ಗೆ ಮನೆಯಿಂದ ಬರುವಾಗ ಇದ್ದ ಹರ್ಷ ಈಗ ಇಲ್ಲದಾಗಿತ್ತು. ಮತ್ತೆ ಅಪ್ಪನ ಕೈಹಿಡಿದುಕೊಂಡು ಹಾಸ್ಟೆಲ್‌ಗೆ ಹೋದೆವು. ಹಾಸ್ಟೆಲ್ ಬಾಗಿಲು ತೆರೆದೆ ಇತ್ತು. ಆಗತಾನೆ ಎಲ್ಲ ವಿದ್ಯಾರ್ಥಿಗಳು ಅವರವರ ಸ್ಕೂಲು ಮುಗಿಸಿಕೊಂಡು ಪುಸ್ತಕದ ಚೀಲ ನೇತಾಕಿಕೊಂಡು ಒಳಬರುತ್ತಿದ್ದರು. ವಿಧವಿಧವಾದ ಯೂನಿಫಾರ್ಮ್ ಹಾಕಿಕೊಂಡು ಆಡುತ್ತ, ಕುಣಿಯುತ್ತ ಬರುತ್ತಿರುವುದನ್ನು ಕಂಡು ಅವರೆಲ್ಲಾ ಜಾಲಿಯಾಗಿದ್ದಾರೆನಿಸಿತು. ಬಂದವರೇ ಆ ಕಡೆ ಈ ಕಡೆ ಗೋಡೆ ಪಕ್ಕದಲ್ಲಿ ಸಾಲಾಗಿ ಅಲುಗಾಡದಂತೆ ಜೋಡಿಸಿದ್ದ ಟ್ರಂಕುಗಳ ಮುಂದೆ ಕುಳಿತುಕೊಳ್ಳುತ್ತಿದ್ದರು. ನಮ್ಮನ್ನು ಕಂಡವರೇ ಅಲ್ಲೇ ಎಲ್ಲೋ ಇದ್ದ ನಮ್ಮ ಚಿಕ್ಕಪ್ಪನ ಮಕ್ಕಳಾದ ಕಿರಣ್, ರೋಹಿತ್ ಮಾವನ ಮಕ್ಕಳಾದ ಭಗತ್‌ಸಿಂಗ್, ಮುರಳಿ ಓಡಿ ಬಂದರು. ಊರಿನ ಹಬ್ಬ, ಜಾತ್ರೆಗಳಲ್ಲಿ ಮಾತ್ರ ಭೇಟಿಯಾಗಿ ಸ್ವಚ್ಛಂದವಾಗಿ ಆಡಿಕೊಳ್ಳುತ್ತಿದ್ದ ನಾವು ಈಗ ಹಾಸ್ಟೆಲ್‍ನಲ್ಲಿ ಸಂದಿಸಿದ್ದರಿಂದಾಗಿ ನಮಗೆ ಒಳಗೊಳಗೆ ಖುಷಿಯಾಗುತ್ತಿತ್ತು. ಪರಸ್ಪರ ಮುಟ್ಟಿಕೊಂಡು ರಮಿಸಿಕೊಂಡೆವು. ನನ್ನ ಮತ್ತು ತಮ್ಮನ ಟ್ರಂಕುಗಳಿಗೆ ಅವರ ಮಧ್ಯದಲ್ಲೇ ಜಾಗ ಮಾಡಿಕೊಟ್ಟರು. ನಾವು ನಮ್ಮ ನೆಂಟರ ಹುಡುಗರ ಜೊತೆ ಹೊಂದಿಕೊಂಡದ್ದನ್ನು ಕಂಡು ಅಪ್ಪನಿಗೆ ಸಮಾಧಾನವಾಯಿತೇನೊ! ಇನ್ನು ಮುಂದೆ ನಿರಾಳವಾಗಿ ಊರ ದಾರಿ ಹಿಡಿಯಬಹುದೆಂದುಕೊಂಡು ಶನಿವಾರ ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಊರಿಗೆ ಬರುವಾಗ ಬೆಡ್‍ಶೀಟ್ ಕಾರ್ಪೆಟ್‌ಗಳನ್ನು ತರಬೇಕಾಗಿ, ಅಲ್ಲಿ ಒಗೆಸಿಕೊಡುವುದಾಗಿ, ಮಾಸಿರುವ ಅವುಗಳನ್ನೇ ಹೊದ್ದುಕೊಂಡು ಬೆಚ್ಚಗೆ ಮಲಗಬೇಕಾಗಿ ತಿಳಿಸಿತು. ನಮ್ಮ ಸಂಬಂಧಿ ಹುಡುಗರಿಗೆ ಕ್ಯಾತೆ ಆಡದಂತೆ ಚೆನ್ನಾಗಿ ನೋಡಿಕೊಳ್ಳಲು ಹೇಳಿ ಇಬ್ಬರಿಗೂ ತಲಾ ಐದೈದು ರೂಪಾಯಿ ಕೊಟ್ಟು ಬಸ್ ಚಾರ್ಜ್ ಮಾಡಿಕೊಂಡು ಬರಲು ಹೇಳಿ ಹೊರಟಿತು. ನಾವೆಲ್ಲರೂ ಅಪ್ಪನನ್ನು ಕಳಿಸಿ ಬರಲು ಹಿಂದಿಂದೆ ಹೊರೆಟೆವು.

ಮದುವೆಯಾಗಿ ಮಕ್ಕಳಿಲ್ಲದ ಹನ್ನೆರೆಡು ವರ್ಷಗಳ ನಂತರ ಹುಟ್ಟಿದ್ದ ನಮ್ಮನ್ನು, ಅಪರೂಪಕ್ಕೆ ದೂರದ ಬಸ್ಸು-ಲಾರಿಗಳು ಓಡಾಡುವ ನಗರದಲ್ಲಿ ಬಿಟ್ಟು ಹೋಗಿ ಜೀರ್ಣಿಸಿಕೊಳ್ಳುವುದು ಅಪ್ಪನಿಗೆ ಕಷ್ಟವಾಗಿತ್ತು. ಅಪ್ಪನ ಕಾಲುಗಳು ಬಾರವಾಗಿದ್ದವು. ನಾವಿಬ್ಬರೂ ಅಪ್ಪನ ಕೈಗಳನ್ನು ಬಿಟ್ಟಿರಲಿಲ್ಲ. ಹಾಸ್ಟೆಲ್‌ನಿಂದ ಸ್ವಲ್ಪ ದೂರದವರೆಗೆ ಅಪ್ಪನ ಜೊತೆ ಹೆಜ್ಜೆಹಾಕಿದ ನಾವು ಈಗ ಅಪ್ಪನ ಬೆರಳುಗಳನ್ನು ಬಿಡಬೇಕಾಗಿ ಬಂತು. ನಾವು ಅಲ್ಲೇ ನಿಂತೆವು. ಅಪ್ಪನ ಹೆಜ್ಜೆಗಳು ಮುಂದುವರಿದವು. ಆಡಲು ನಮಗೆ ಸ್ನೇಹಿತರು ಸಿಕ್ಕಿದ್ದರಿಂದ ಅಪ್ಪ ಬಿಟ್ಟು ಹೋದದ್ದರ ಘಾಸಿ ಸ್ವಲ್ಪ ಕಡಿಮೆಯಾದಂತಿತ್ತು. ಅಪ್ಪ ಹಿಂದೆ ತಿರುಗಿ ತಿರುಗಿ ನೊಡುತ್ತಾ ಹೆಜ್ಜೆ ಕಿತ್ತಿಡುತ್ತಿತ್ತು. ಅಪ್ಪನ ಕಣ್ಣಿನಲ್ಲಿ ಕಣ್ಣೀರು ಜಿನುಗುತ್ತಿರುವಂತೆ ಭಾಸವಾಗುತಿತ್ತು. ಜನ, ಆಟೋ, ಬಸ್ಸು, ಲಾರಿಗಳ ಮಧ್ಯದಲ್ಲಿ ಪರಸ್ಪರರು ಮರೆಯಾಗುತ್ತಿದ್ದೆವು. ಅಪ್ಪ ಕಾಣದಾಯಿತು, ನಾವು ಹಾಸ್ಟೆಲ್ ದಾರಿ ಹಿಡಿದೆವು.

ನವಿರಾಗಿ ಕಳೆದ ಮೊದಲ ದಿನ

ಸುಮಾರು ಐವತ್ತು ಅಪರಿಚಿತ ಸಮಾನ ವಯಸ್ಕ ವಿದ್ಯಾರ್ಥಿಗಳಿದ್ದ ಹಾಸ್ಟೆಲ್‌ನಲ್ಲಿ ಇಷ್ಟದ ನೆಂಟರ ಹುಡುಗರು ಜೊತೆಯಾದ್ದರಿಂದ ಅಪ್ಪನ ನೆನಪು ಕಾಡಲೆ ಇಲ್ಲ. ಆ ರಾತ್ರಿ ಬಂದದ್ದು ಹೋದದ್ದು ಒಂದೂ ಗೊತ್ತಾಗಲಿಲ್ಲ. ಎಲ್ಲವೂ ನವಿರಾಗಿ ಕಾಣುತಿತ್ತು ಅಷ್ಟೆ. ಊರನಲ್ಲಿದ್ದಾಗ ಬೆಳಗ್ಗೆ ಎದ್ದ ಕೂಡಲೆ ಸಗಣಿ ಬಾಚುವುದು, ಸಂಜೆಯಾದ ತಕ್ಷಣ ಕೋಳಿ ಕವುಚುವ ಕೆಲಸವನ್ನು ಊಟ ತಿಂಡಿಯಷ್ಟೇ ಪ್ರಾಮುಖ್ಯತೆ ವಹಿಸ ಮಾಡಬೇಕಾಗಿದ್ದ ನಮಗೆ ಹಾಸ್ಟಲ್‌ನಲ್ಲಿ ಇದಾವುದರ ಗೊಡವೆಯೂ ಇರದಿದ್ದುದರಿಂದ ನಮ್ಮ ಸಂತೋಷಕ್ಕೆ ಪಾರವೆ ಇಲ್ಲದಂತಾಗಿತ್ತು. ಮುಂದಿನ ದಿನ ಎಚ್ಚರಾಗುವುದಕ್ಕೂ ಮುನ್ನ ಕಾರ್ಪೆಟ್‌ಗಳು ಒಂದೆ ಸಮನೆ ಪಟ್ ಪಟ್ ಎಂದು ಸದ್ದು ಮಾಡುತ್ತಿದ್ದರೆ ಟ್ರಂಕುಗಳು ಜರ್ ಬರ್ ಎಂದು ಎಳೆದಾಡುತಿದ್ದವು. ರಾತ್ರಿ ಮಲಗುವಾಗ ಟ್ರಂಕುಗಳನ್ನು ಹಿಂದಕ್ಕೆ ಸರಿಸಿ ಅವುಗಳ ಸಂದಿಯಲ್ಲಿ ಸಾಲಾಗಿ ಮಲಗುತ್ತಿದ್ದ ನಾವು ಬೆಳಗ್ಗೆ ಆರು ಗಂಟೆಗೆ ನಡೆಯುವ ಪ್ರೇಯರ್‌ನಲ್ಲಿ ಭಾಗವಹಿಸುವುದಕ್ಕಾಗಿ ಅವಸರಕ್ಕೆ ಬಿದ್ದವರಂತೆ ಬೆಡ್‍ಶೀಟ್ ಕಾರ್ಪೆಟ್‌ಗಳನ್ನು ಮಡುಚಿಟ್ಟು, ಕಂದು ಕಾಗದದ ಪಾಕೆಟ್‌ನಲ್ಲಿದ್ದ ನಂಜನಗೂಡು ಹಲ್ಲುಪುಡಿಯನ್ನು ಅಂಗೈಗೆ ಸುರಿದುಕೊಂಡು ಹಲ್ಲುಜ್ಜಿ ಮುಖ ತೊಳೆಯಲು ಹೊರಗೆ ನಡೆದೆವು.

ಗಂಗಾಧರಪ್ಪನವರ ತೋಟದ ಮನೆಯ ಮಹಡಿ ಮೇಲಿನ ಸಿಂಟೆಕ್ಸ್‌ನಿಂದ ಒಮ್ಮೊಮ್ಮೆ ನೀರು ಹೆಚ್ಚಾಗಿ ಕೆಳಕ್ಕೆ ಧುಮುಕುತಿತ್ತು. ಅವರು ಆಫ್ ಮಾಡುವುದರೊಳಗಾಗಿ ನಾವು ಎಲ್ಲರೂ ಹಲ್ಲುಜ್ಜಿ ಮುಖ ತೊಳೆದುಕೊಳ್ಳುತ್ತಿದ್ದೆವು. ಮೇಲಿಂದ ಬೀಳುವ ನೀರಿಗೆ ಕಾಲು ಅಡ್ಡ ಕೊಟ್ಟರೆ ಕಲ್ಲಲ್ಲಿ ಹೊಡೆದಂತಾಗುತಿತ್ತು. ಮೊದಲ ದಿನ ಅಲ್ಲೇ ಮುಖತೊಳೆಯುವ ಶಾಸ್ತ್ರ ಮುಗಿಸಿಕೊಂಡು ಅವಸರವಸರವಾಗಿ ಬಂದು ಹಾಸ್ಟೆಲ್ ಒಳಗೆ ನಡೆಯುತ್ತಿದ್ದ ಪ್ರೇಯರ್‌ನಲ್ಲಿ ಪಾಲ್ಗೊಂಡೆವು. ಅಷ್ಟೊತ್ತಿಗಾಗಲೆ ವಾರ್ಡನ್ ನಾಗರಾಜಪ್ಪನವರು ಸಿದ್ದರಿದ್ದು, ಪ್ರೇಯರ್‌ಗೆ ಲೇಟಾಗಿ ಬಂದವರನ್ನು ಮತ್ತು ಇನ್ನೂ ಗ್ಯಾನಗೆಟ್ಟು ಮಲಗಿರುವವರನ್ನು ಕೋಲಿನಿಂದ ವಿಚಾರಿಸಿಕೊಳ್ಳುತ್ತಿದ್ದರು.

ನಾಗರಾಜಪ್ಪನವರು ಹುಡುಗರ ಹೆಸರು ಕೂಗಿ ಅಟೆಂಡೆನ್ಸ್ ಹಾಕಿಕೊಂಡು ಆಫೀಸ್ ರೂಮಿನೊಳಗೆ ಕುಳಿತು ಹೊಗೆ ಬಿಡತೊಡಗಿದ ಸ್ವಲ್ಪ ಹೊತ್ತಿನಲ್ಲೆ ಹೊಸಬರಾದ ನಮಗೆ ಕರೆ ಬಂತು. ನಾವು ಒಬ್ಬೊಬ್ಬರೆ ಒಳಗೋದಾಗ ತುಸು ಅಗಲವೂ, ಭಾರವೂ ಆಗಿದ್ದ ಕಂಟ ಚೂಪಾಗಿರುವ ತಟ್ಟೆಯನ್ನು ನಮಗಾಗಿ ಕೊಟ್ಟರು. ಹಾಸ್ಟೆಲ್‌ನಲ್ಲಿ ಕೊಟ್ಟ ಎಲ್ಲ ವಸ್ತುಗಳೂ ಬಳಕೆಯಾದವುಗಳಾಗಿದ್ದರೂ ಅದು ಹೇಗೋ ಕಾಣೆ ತಟ್ಟೆ ಮಾತ್ರ ಹೊಸದಾಗಿದ್ದವು. ಅದನ್ನು ತಂದು ಟ್ರಂಕಿನ ಹಿಂದಿನ ನಮ್ಮ ಜಾಗದಲ್ಲಿ ಕೂತು ಅದರೊಳಗೆ ಕಾಣುತಿದ್ದ ನಮ್ಮ ಮುಖ ನೋಡಿಕೊಂಡೆವು. ಕನ್ನಡಿಯ ಸುದ್ದಿಯಿಲ್ಲದ ಆ ಹಾಸ್ಟೆಲ್‌ನಲ್ಲಿ ಎಲ್ಲರೂ ಅವರವರ ತಟ್ಟೆಗಳಲ್ಲೇ ಕಾಣುವಷ್ಟು ಮುಖ ನೋಡಿಕೊಂಡು ತಲೆ ಬಾಚಿಕೊಂಡು ಸ್ಕೂಲಿಗೆ ಹೋಗುತ್ತಿದ್ದೆವು. ನಮ್ಮ ತಟ್ಟೆಗಳು ಹೊಸದಾಗಿದ್ದುದ್ದರಿಂದ ಇನ್ನೂ ಚೆನ್ನಾಗಿ ಕಾಣುತಿತ್ತು. ಹುಡುಗರೆಲ್ಲ ತಟ್ಟೆಯ ಗುರುತಿಗಾಗಿ, ಮೊಳೆಯಿಂದ ಮೆಲ್ಲಗೆ ಕೆತ್ತಿ ತಟ್ಟೆಯ ಹಿಂಭಾಗದಲ್ಲಿ ತಮ್ಮ ತಮ್ಮ ಇನ್ಶಿಯಲ್‌ಗಳು ಮೂಡುವಂತೆ ಮಾಡಿಕೊಳ್ಳುತ್ತಿದ್ದರು. ಆ ದಿನ ಸಂಜೆ ನಾವು ಶಾಲೆ ಮುಗಿಸಿಕೊಂಡು ಬಂದಾಗ ಮೊದಲು ಮಾಡಿದ ಕೆಲಸ ಅದೇ ಆಗಿತ್ತು. ನಮ್ಮ ತಟ್ಟೆಯ ಹಿಂಭಾಗದಲ್ಲಿ ಕೆ.ಸಿ. ಎಂದು ಕೆತ್ತಿಕೊಂಡೆವು. ಅದು ಗುಳ್ಳೆಗಳಲ್ಲಿ ಮೂಡಿತ್ತು.

(ಫೋಟೋ: ವೇಣುಪ್ರವೀಣ್ ಕಂಟಲಗೆರೆ; ಇಲ್ಲಸ್ಟ್ರೇಶನ್: ಸಂಘಮಿತ್ರೆ)

About The Author

ಗುರುಪ್ರಸಾದ್ ಕಂಟಲಗೆರೆ

ಗುರುಪ್ರಸಾದ್ ಕಂಟಲಗೆರೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನವರು. ವೃತ್ತಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ. ಕಪ್ಪುಕೋಣಗಳು (ಕವನ ಸಂಕಲನ), ಗೋವಿನ ಜಾಡು (ಕಥಾ ಸಂಕಲನ), ಕೆಂಡದ ಬೆಳುದಿಂಗಳು (ಕಥಾ ಸಂಕಲನ), ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ (ಸಂಶೋಧನೆ) ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾ ಪ್ರಶಸ್ತಿ 2019, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ ಬಹುಮಾನ, ಗೋವಿನಜಾಡು ಕೃತಿಗೆ ಕೆ.ಸಾಂಬಶಿವಪ್ಪ ಸ್ಮರಣ ರಾಜ್ಯ ಪ್ರಶಸ್ತಿ ದೊರೆತಿದೆ.

8 Comments

  1. ಎಂ.ಜವರಾಜ್

    ಆಪ್ತವಾಗಿದೆ.

    Reply
  2. Shivappa

    ನಮ್ಮ ಜನರ ಬದುಕು ಬವಣೆಗಳ ನೈಜ ಚಿತ್ರೀಕರಣ!
    ತುಂಬಾ ಚೆನ್ನಾಗಿ ಮೂಡಿಬಂದಿದೆ. ಹೀಗೆಯೇ ಮುಂದುವರಿಸಿ.

    Reply
  3. ಡಾ. ಪವನಗಂಗಾಧರ.

    ಚೆನ್ನಾಗಿದೆ ನರೇಷನ್. ಕಣ್ ಮುಂದೆ ಹಾದು ಹೋಗ್ತಾವೆ‌ ಹಾಸ್ಟೆಲ್ ದೃಶ್ಯ ಗಳು.

    Reply
  4. ಸಿದ್ದಣ್ಣ. ಗದಗ

    ಅತ್ಯಂತ ಪ್ರೀತಿಯಿಂದ ಮತ್ತು ಜವಾಬ್ದಾರಿಯಿಂದ ಸಣ್ಣ ವಯಸ್ಸಿನಲ್ಲಿ ನಿಮ್ಮಿಬ್ಬರಿಗೂ ಹಾಸ್ಟೆಲ್ ಸೇರಿಸಿ ಒಳ್ಲೆಯ ಶಿಕ್ಷಣ ಕೊಡಿಸಿದ ತಂದೆಯ ಪಾತ್ರ ಮೆಚ್ಚುವಂತದ್ದು. ಹಾಸ್ಟೆಲ್ ಜೀವನಕ್ಕೆ ನೀವು ಹೊಂದಿಕೊಂಡದ್ದು ನಿಮ್ಮ ಬದುಕಿನ ಒಂದು ದೊಡ್ದ ತಿರವು. ಈ ನೆನಪುಗಳನ್ನು ಹೆಕ್ಕಿದಷ್ಟು ಖುಷಿ.

    Reply
  5. ಶಂಕರ್ ಬರಕನಹಾಲ್

    ನಮ್ಮ ಹಾಸ್ಟೆಲ್ ದಿನಗಳನ್ನು ನೆನಪಿಸಿದಂತೆ ಆಯಿತು..
    ಕೈಹಿಡಿದು ಶಿಕ್ಷಣದ ದಾರಿತೋರಿಸಿದ ತಂದೆಯ ಜವಾಬ್ದಾರಿ ಹೆಚ್ಚು..

    Reply
  6. Guruprasad kantalagere

    ಧನ್ಯವಾದ ಸರ್

    Reply
  7. Sunanda

    ಒಳ್ಳೆಯ ಬರಹ, ಸೂಕ್ಷ್ಮವಾಗಿದೆ.

    Reply
  8. Narendra Nayak

    good narration,

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ