Advertisement
ಮಹಾದೇವರ ನೋವಿಗೆ ತಿರುಮಲೇಶ್ ಸಾಂತ್ವನ

ಮಹಾದೇವರ ನೋವಿಗೆ ತಿರುಮಲೇಶ್ ಸಾಂತ್ವನ

ದೇವನೂರ ಮಹಾದೇವ ಕೆಂಡಸಂಪಿಗೆಗೆ ಬರೆದ ಪತ್ರ ಓದಿ ನನ್ನ ಮನಸ್ಸಿಗೆ ಅನಿಸಿದ್ದನ್ನು ಎಲ್ಲರ ಜತೆ, ಮುಖ್ಯವಾಗಿ ಮಹಾದೇವರ ಜತೆ, ಹಂಚಿಕೊಳ್ಳಲು ಈ ಟಿಪ್ಪಣಿ ಬರೆಯುತ್ತಿದ್ದೇನೆ. ಸಂಪಾದಕರೊಂದಿಗೆ  ಈಮೇಲ್ ವಿನಿಮಯ ಮಾಡುತ್ತಿದ್ದಾಗ ಅವರೂ ಬರೆಯಿರಿ ಎಂದು ನನಗೆ ಸೂಚಿಸಿದರು. ಕೆಂಡಸಂಪಿಗೆ ಒಂದು ಉತ್ತಮ ವಿದ್ಯುನ್ಮಾನ ಪತ್ರಿಕೆ. ಮಹಾದೇವ ಈ ಪತ್ರಿಕೆಯಿಂದ ಯಾವ ಕಾರಣಕ್ಕೂ ದೂರವಾಗಬಾರದು ಎನ್ನುವುದು ನನ್ನ ಮನಸ್ಸಿನಲ್ಲಿದೆ.

ಮೊತ್ತ ಮೊದಲಾಗಿ ಹೇಳಬೇಕಾದ್ದೆಂದರೆ ಮಹಾದೇವ ತಮ್ಮ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳಿಂದ ಬೇಸರಗೊಂಡಿದ್ದಾರೆ ಎನ್ನುವುದು. ಇದಕ್ಕೆ ಕಾರಣ ಅವು ವ್ಯಕ್ತಿಗತ ನಿಂದೆಗಳಂತೆ ಇರುವುದು; ಲೇಖಕರ ತೇಜೋವಧೆ ಇವುಗಳ ಉದ್ದೇಶದಂತಿದೆ, ವೈಚಾರಿಕ ವಿಮರ್ಶೆಯಲ್ಲ. ಬರೆದವರು ಯಾರೆನ್ನುವುದೇ ಗೊತ್ತಾಗುವುದಿಲ್ಲ. ಈ-ಮೇಲ್ ನ ಬೇನಾಮಿತನ ಒಂದು ತರದ ಬೇಜವಾಬ್ದಾರಿಗೆ ಎಡೆಮಾಡುತ್ತದೆ. ಇದು `ವಿನಾಶಕಾರಿ’ ಎನ್ನುತ್ತಾರೆ ಮಹಾದೇವ. ಇದರ ಅರ್ಥ ಯಾವುದೇ ಲೇಖನ ಸವಾಲುರಹಿತವಾಗಿ ಸ್ವೀಕೃತಗೊಳ್ಳಬೇಕು ಎಂದಲ್ಲ. ಜವಾಬ್ದಾರಿಯುತವಾದ ಮಾತುಕತೆಯನ್ನು ಮಹಾದೇವ ಬಯಸುತ್ತಾರೆ ಎಂದು ಅರ್ಥ.

ಆದ್ದರಿಂದ ಹೆಸರು, ವಿಳಾಸ, ಚಿತ್ರ ಇಲ್ಲದ ಇಂಥ `ವಿನಾಶಕಾರಿ’ ಪ್ರತಿಕ್ರಿಯೆಗಳನ್ನು ಪ್ರಕಟಿಸಬಾರದು, ಪ್ರಕಟಿಸಿದರೆ ತಾನು ಈ ಪತ್ರಿಕೆಗೆ ಬರೆಯುವುದಿಲ್ಲ ಎನ್ನುವುದು ಅವರ ಶರತ್ತು. ಆದರೆ ಕೆಂಡಸಂಪಿಗೆಯ ಸಂಪಾದಕರ ಮೇಲೆ ಮಹಾದೇವ ವಿಧಿಸಿದ ಈ ಶರತ್ತು ಸಾಧುವೆಂದು ನನಗೆ ಅನಿಸುವುದಿಲ್ಲ. ಇದು ಬಹುಶಃ ಅವರು ಭಾವುಕರಾಗಿ ಆಡಿದ ಮಾತು ಇರಬಹುದು. ಲೇಖಕರೂ ಸಹಾ ಮನುಷ್ಯರೇ; ಆಕ್ರಮಣಗಳಿಗೆ ಒಳಗಾದಾಗ ಲೇಖಕರು ತೀರ ವೈಚಾರಿಕವಾಗಿ ಪ್ರತಿಕ್ರಿಯಿಸಬೇಕು ಎಂದು ಆಶಿಸುವುದು ಸರಿಯಲ್ಲ. ಆದರೂ ಮಹಾದೇವ ಈ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು: ಅವರು ವಿಧಿಸಿದ ಶರತ್ತು ಪ್ರಾಯೋಗಿಕವೂ ಅಲ್ಲ ಮುಕ್ತ ಅಭಿವ್ಯಕ್ತಿಗೆ ಸಹಕಾರಿಯೂ ಅಲ್ಲ. ಲೇಖಕನಿಗೆ ಅಭಿಪ್ರಾಯ ಮುಖ್ಯವೇ ಹೊರತು ಅದನ್ನು ಯಾರು ಹೇಳಿದರು ಎನ್ನುವುದು ಆಗಿರಬಾರದು. ಮಾತ್ರವಲ್ಲ, ಹೀಗೆ ಒತ್ತಾಯಿಸಿದರೆ ಒಂದು ತರದ ಸೆನ್ಸರ್ ಶಿಪ್ ಇಟ್ಟುಕೊಂಡಂತಾಗುತ್ತದೆ. ಓದುಗರ ಆಶುವಿಚಾರ ಹೇಗಿರುತ್ತದೆ ಎನ್ನುವುದು ಲೇಖಕನಿಗೆ ಗೊತ್ತಾಗುವುದೇ ಇಲ್ಲ. ಹೆಸರು ವಿಳಾಸ ನೀಡಿ ಬರೆಯುವವರೂ ಕೂಡ ಒಂದು ತರದ ಸ್ವಯಂನಿಯಂತ್ರಣಕ್ಕೆ ಒಳಗಾಗಬಹುದು; ಎಂದರೆ ಅವರೂ ಸಹಾ ಮಾತನ್ನು ತೂಗಿ ಅಳೆದು ಹೇಳಬೇಕಾಗುತ್ತದೆ.

ಲೇಖಕ ಎಲ್ಲರಿಂದಲೂ ಕೇಳಿಸಿಕೊಳ್ಳಬೇಕಾಗುತ್ತದೆ, ಇಂದಲ್ಲದಿದ್ದರೆ ನಾಳೆ. ಕೆಲವರು ಥಟ್ಟನೆ ಏನೋ ಹೇಳಿಬಿಡುತ್ತಾರೆ; ನಂತರ ತಿದ್ದಿಕೊಳ್ಳುತ್ತಾರೆ. ನಾನೇ ಇಂಥ ಹಲವು ಉದ್ವೇಗದ ಮಾತುಗಳನ್ನು ಆಡಿ ಮತ್ತೆ ಪಶ್ಚಾತ್ತಾಪಿಸಿದ್ದಿದೆ. ಯಾರು ಏನುಬೇಕಾದರೂ ಮುಕ್ತ ಹೃದಯದಿಂದ ಹೇಳಲಿ; ಅದನ್ನು ಸ್ವಾಗತಿಸಬೇಕು. ಕನಿಷ್ಠ ಅವರು ಓದುತ್ತಾರೆ ಎನ್ನುವುದಕ್ಕಾದರೂ. ಅಥವಾ ಅವರ ಮಾತುಗಳಲ್ಲೂ ಸ್ವಲ್ಪ ಸತ್ಯ ಇದ್ದರೂ ಇರಬಹುದು ಎನ್ನುವುದಕ್ಕೆ. (ಈ ಮಾತನ್ನು ನಾನು ಸದ್ಯದ ಸಂದರ್ಭಕ್ಕೆ ಸಂಬಂಧಿಸಿ ಹೇಳುವುದಲ್ಲ, ಸಾರ್ವಕಾಲಿಕವಾಗಿ.) ಆ ಅನುಮಾನ ಇಟ್ಟುಕೊಳ್ಳೋಣ; ಅದು ಆರೋಗ್ಯಕರವಾದ್ದು. ಇತರರು ಮಾದರಿಯಾಗಬೇಕು ಎನ್ನುವುದಕ್ಕಿಂತ ನಾವೇ ಮಾದರಿಯಾಗಿರುವುದು ಒಳ್ಳೆಯದು.

ಕೆಲವರು ಕೆಟ್ಟದಾಗಿ ಮಾತಾಡುತ್ತಾರೆ. ಹಾಗೆ ಆಡಿದವರೇನೂ ಪಾರಾಗಲಾರರು. ಯಾಕೆಂದರೆ ಅವರ ಮಾತು ತನಗೆ ತಾನೇ ನಾಚಿಕೆ ಹುಟ್ಟಿಸುವಂಥದು. ಬಹುಶಃ ಬರೆದವರಿಗೇ ಯಾಕಾದರೂ ಬರೆದೆನೋ ಎನ್ನಿಸುವಂಥದು. ಕೊನೆಗೂ ಮನುಷ್ಯನಿಗೆ ಸ್ವಯಂ ಬೋಧೆ ಬರಬೇಕು. ಜನ ಯಾಕೆ ಹೀಗೆ ಬರೆಯುತ್ತಾರೆ ಎಂದು ನಾನು ಕೆಲವೊಮ್ಮೆ ಯೋಚಿಸಿದ್ದಿದೆ: ಮುಖ್ಯ ಅವರಿಗೆ ಚಿಂತಿಸಲು, ಬರೆಯಲು ತಾಳ್ಮೆಯೇ ಇಲ್ಲ. ಸರಿಯಾದ ಮಾತು ಹೇಗೆ ಆಡುವುದೆಂದು ಗೊತ್ತಿರದಿದ್ದಾಗ ಮನುಷ್ಯ ತಪ್ಪಾಗಿ ಆಡುತ್ತಾನೆ. ಅದು ಕ್ಷಮಾರ್ಹ.

ಭಿನ್ನಾಭಿಪ್ರಾಯ, ವಾಗ್ವಾದ, ವಿವಾದ ಜೀವಂತಿಕೆಯ ಲಕ್ಷಣ. ಕೆಂಡಸಂಪಿಗೆಯಲ್ಲಿ ಬರುವ ಪ್ರತಿಕ್ರಿಯೆಗಳನ್ನು ನಾನು ಕುತೂಹಲದಿಂದ ನೋಡುವುದಿದೆ. ಪ್ರತಿಯೊಂದರಲ್ಲೂ ನನಗೆ ಜೀವ ಸತ್ವ ಕಾಣಿಸುತ್ತದೆ. ಕತೆ, ಕವಿತೆ, ಲೇಖನ ಓದುತ್ತಾರಲ್ಲ, ಖುದ್ದಾಗಿ ಬರೆಯುತ್ತಾರಲ್ಲ, ಪ್ರತಿಕ್ರಿಯಿಸುತ್ತಾರಲ್ಲ ಎಂದು ಸಂತೋಷವಾಗುತ್ತದೆ. ಕೆಂಡಸಂಪಿಗೆಯಂಥ ಮಾಧ್ಯಮಗಳು ಇದಕ್ಕೆಲ್ಲ ಒಂದು ವೇದಿಕೆಯೊದಗಿಸುತ್ತದೆ. ಮಹಾದೇವ ಇವನ್ನು ಅಂತೆಯೇ ಸ್ವೀಕರಿಸುತ್ತಾರೆ ಎಂದು ಆಶಿಸುತ್ತೇನೆ. ನಾವು ಮಂದಿಯ ಜತೆ ಸಿಟ್ಟಾಗಬಹುದು, ಆದರೆ ಅವರಿಂದ ವಿಮುಖವಾಗುವಂತಿಲ್ಲ. ಅವರಲ್ಲದಿದ್ದರೆ ಇನ್ನು ಯಾರಿದ್ದಾರೆ?

About The Author

ಕೆ.ವಿ. ತಿರುಮಲೇಶ್

ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ