Advertisement
ಸಿನೆಮಾ ನೋಡುವ ಖುಷಿಯ ಹಿಂದಿದೆ ಸುಖದುಃಖಗಳು

ಸಿನೆಮಾ ನೋಡುವ ಖುಷಿಯ ಹಿಂದಿದೆ ಸುಖದುಃಖಗಳು

ಆಗ ಲಾಸ್ಟ್ ಶೋ  ರಾತ್ರಿ ಒಂಬತ್ತು ಗಂಟೆಗೆ ಇರುತ್ತಿತ್ತು; ಆಗಿನ ಕಾಲದಲ್ಲಿ ಒಂಬತ್ತು ಗಂಟೆ ಅಂದರೆ ಒಂಥರ ಅಪರಾತ್ರಿ ಇದ್ದಂತೆ, ಬರೀ ಗೂರ್ಖಾಗಳು, ಕುಡುಕರು, ನಾಯಿಗಳು ಮಾತ್ರ ರಸ್ತೆ ಮೇಲೆ ಕಾಣಸಿಗುತ್ತಿದ್ದರು. ಸಿನೆಮಾ ಬಿಡುತ್ತಿದುದು ರಾತ್ರಿ ಹನ್ನೆರೆಡೋ ಹನ್ನೆರೆಡುವರೆಯೋ ಆಗುತ್ತಿತ್ತು. ಆಗ ಗವ್ ಎನ್ನುವ ಕತ್ತಲೆಯಲ್ಲಿ ಸೋದರ ಮಾವಂದಿರ ಕೈಹಿಡಿದು ನಾಯಿಗಳನ್ನು, ಕಡುಕರನ್ನು ದೂರದಿಂದಲೇ ಗಮನಿಸುತ್ತ, ನೋಡಿರುವ ರಾಜಕುಮಾರನ ಸಿನೆಮಾದ ಬಗ್ಗೆ ಭಯಂಕರ ಚರ್ಚೆ ಮಾಡಿಕೊಂಡು ಬರುತ್ತಿದ್ದೆವು. ಈ ಬಾರಿಯ ಇಂಗ್ಲೆಂಡ್ ಪತ್ರದಲ್ಲಿ, ತಮಗೆ ಇಂಗ್ಲೆಂಡ್ ನಲ್ಲಿ ಸಿನಿಮಾ ನೋಡಲು ಲಭ್ಯವಾಗುವ ಅವಕಾಶಗಳ ಕುರಿತು ನೆನಪುಗಳನ್ನು ಮೆಲುಕು ಹಾಕಿದ್ದಾರೆ ಡಾ.ಕೇಶವ ಕುಲಕರ್ಣಿ. 

 

ಈ ಇಂಗ್ಲೆಂಡ್ ದೇಶಕ್ಕೆ ಹೊಸದಾಗಿ ಬಂದಾಗ (2004) ಹಿಂದಿಭಾಷೆಯ ದೊಡ್ಡ ಬಜೆಟ್ಟಿನ ಚಲನಚಿತ್ರಗಳು ಮಾತ್ರ ಟಾಕೀಜುಗಳಲ್ಲಿ ಅಥವಾ ಮಲ್ಟಿಪ್ಲೆಕ್ಸುಗಳಲ್ಲಿ ನೋಡಲು ಸಿಗುತ್ತಿದ್ದವು. ಆ ಸಿನೆಮಾಹಾಲು-ಮಲ್ಟಿಪ್ಲೆಕ್ಸುಗಳೋ, ನಾವಿರುವ ಮನೆಯಿಂದ ಇಪ್ಪತ್ತರಿಂದ ನಲವತ್ತು ಮೈಲಿ ದೂರದ ನೆರೆಯ ಊರುಗಳಲ್ಲಿ ಬರುತ್ತಿದ್ದವು. ಅಷ್ಟು ದೂರ ಕಾರೋಡಿಸಿಕೊಂಡು, ಸಿನೆಮಾ ನೋಡಿ, ದೂರ ವಾಪಸ್ ಬರುವಷ್ಟರಲ್ಲಿ ತಲೆ ನೋವು, ಸುಸ್ತು, ನಿದ್ದೆ.

ಟಿವಿಯಲ್ಲಿ ಆಗಲೇ ಹಿಂದಿಯ ಚಾನೆಲ್ಗಳು ಬರುತ್ತಿದ್ದವು, ಆದರೆ ಅವಕ್ಕೆ ಸಾಕಷ್ಟು ದುಡ್ಡು ಸುರಿಯಬೇಕಿತ್ತು. ಪ್ರತಿ ಹಿಂದಿ ಚಾನೆಲ್ಗೆ ಐದಾರು ಪೌಂಡು ಕೊಡಬೇಕಾಗುತ್ತಿತ್ತು. ಅಷ್ಟು ಕೊಟ್ಟರೂ ನೋಡಲು ಸಿಗುತ್ತಿದುದು ಈಗಾಗಲೇ ಹತ್ತಾರು ಬಾರಿ ನೋಡಿದ ಶಾರೂಖ್ ಖಾನ್ ಸಿನೆಮಾಗಳೋ ಇಲ್ಲ ಸೂಪರ್ ಹಿಟ್ ಆದ ಸಿನೆಮಾಗಳೋ ಮಾತ್ರ. ಹಿಂದಿ ಭಾಷೆಯಲ್ಲಿ ತಯಾರಾಗುವ ಸೂಕ್ಷ್ಮಸಂವೇದನೆಯ ಸಿನೆಮಾಗಳು ಟಾಕೀಜುಗಳಲ್ಲಿ ಅಥವಾ ಟಿವಿ ಚಾನೆಲ್ಲುಗಳಲ್ಲಿ ಬರುತ್ತಿರಲಿಲ್ಲ.

ಹಿಂದಿಗಿಂತ ಹೆಚ್ಚಾಗಿ ಕನ್ನಡ ಸಿನೆಮಾಗಳನ್ನು ನೋಡುತ್ತ ಬಾಲ್ಯ ಕಳೆದವನು ನಾನು. ರಾಜಕುಮಾರ್ ಎಂದರೆ ಪಂಚಪ್ರಾಣ, ಎಷ್ಟೆಂದರೂ ಅವನು ನಮ್ಮ ತಾಯಿಯ ಕಡೆಯ ಕುಟುಂಬದ ಆರಾಧ್ಯದೈವವಾಗಿದ್ದವನು (ನನಗೆ ಅದೇಕೋ ರಾಜಕುಮಾರನನ್ನು ‘ಡಾ.ರಾಜ್ಕುಮಾರ್ ಅವರು’ ಎಂದು ಬಹುವಚನದಲ್ಲಿ ಬರೆದರೆ ತುಂಬ ಕೃತಕವೆನಿಸುತ್ತದೆ, ಕ್ಷಮಿಸಿ). ನನ್ನ ಅಜ್ಜಿಗಂತೂ (ತಾಯಿಯ ತಾಯಿ) ರಾಜಕುಮಾರನೆಂದರೆ ಪ್ರಾಣ. ರಾಜಕುಮಾರ್ ಗುಬ್ಬಿಕಂಪನಿಯಲ್ಲಿದ್ದ ಸಮಯದಲ್ಲಿ ನಾಟಕ ಮಾಡಲು ಹುಬ್ಬಳ್ಳಿಗೆ ಬಂದಾಗ ನನ್ನ ಅಜ್ಜಿಯ ಮನೆಯ ಹತ್ತಿರವೇ ಇದ್ದನಂತೆ! ನನ್ನ ಅಜ್ಜಿಗೆ ರಾಜಕುಮಾರನು ರಾಜಕುಮಾರನಾಗುವ ಮೊದಲಿನಿಂದಲೂ ಗೊತ್ತು!!

ರಾಜಕುಮಾರನ ಯಾವುದೇ ಸಿನೆಮಾ ಬಂದರೂ ನನ್ನ ಸೋದರಮಾವಂದಿರು ಫಸ್ಟ್ ಡೇ ಲಾಸ್ಟ್  ಶೋಗೆ ಅದೆಲ್ಲಿಂದಲೋ ಟಿಕೆಟ್ಟುಗಳನ್ನು ದಕ್ಕಿಸಿಕೊಂಡು (ರಾಜಕುಮಾರನ ಸಿನೆಮಾಗೆ ಮೊದಲದಿನದ ಟಿಕೇಟ್ ಸಿಗಲು ಪುರ್ವಜನ್ಮದಲ್ಲಿ ಪುಣ್ಯಮಾಡಿರಬೇಕು, ಹಾಗಿತ್ತು ಆಗ) ಮನೆಮಂದಿಯನ್ನೆಲ್ಲ (ನನ್ನ ಅಜ್ಜಿಯನ್ನೂ ಸೇರಿಸಿ), ಅಜ್ಜಿಮನೆಗೆ ರಜೆಗೆ ಬಂದ ನಮ್ಮಂಥ ಪುಟ್ಟಮಕ್ಕಳನ್ನೆಲ್ಲ ಕಟ್ಟಿಕೊಂಡು ಹೊರಡುತ್ತಿದ್ದರು (ಒಟ್ಟು ಇಪ್ಪತ್ತು ಮೂವತ್ತು ಜನ ಇರುತ್ತಿದ್ದೆವು!). ಆಗ ಲಾಸ್ಟ್ ಶೋ  ರಾತ್ರಿ ಒಂಬತ್ತು ಗಂಟೆಗೆ ಇರುತ್ತಿತ್ತು; ಆಗಿನ ಕಾಲದಲ್ಲಿ ಒಂಬತ್ತು ಗಂಟೆ ಅಂದರೆ ಒಂಥರ ಅಪರಾತ್ರಿ ಇದ್ದಂತೆ, ಬರೀ ಗೂರ್ಖಾಗಳು, ಕುಡುಕರು, ನಾಯಿಗಳು ಮಾತ್ರ ರಸ್ತೆ ಮೇಲೆ ಕಾಣಸಿಗುತ್ತಿದ್ದರು.ಸಿನೆಮಾ ಬಿಡುತ್ತಿದುದು ರಾತ್ರಿ ಹನ್ನೆರೆಡೋ ಹನ್ನೆರೆಡುವರೆಯೋ ಆಗುತ್ತಿತ್ತು. ಆಗ ಗವ್ ಎನ್ನುವ ಕತ್ತಲೆಯಲ್ಲಿ ಸೋದರ ಮಾವಂದಿರ ಕೈಹಿಡಿದು ನಾಯಿಗಳನ್ನು, ಕಡುಕರನ್ನು ದೂರದಿಂದಲೇ ಗಮನಿಸುತ್ತ, ನೋಡಿರುವ ರಾಜಕುಮಾರನ ಸಿನೆಮಾದ ಬಗ್ಗೆ ಭಯಂಕರ ಚರ್ಚೆ ಮಾಡಿಕೊಂಡು ಬರುತ್ತಿದ್ದೆವು. ಜೊತೆಗೆ ಆಗಾಗ ವಿಷ್ಣುವರ್ಧನ, ಅನಂತನಾಗ, ಶಂಕರನಾಗ, ಅಂಬರೀಷರ ಸಿನೆಮಾಗಳನ್ನೂ ನೋಡುತ್ತಿದ್ದೆವು. ಹುಬ್ಬಳ್ಳಿಯಲ್ಲಿ ಕನ್ನಡ ಸಿನೆಮಾಗಳಷ್ಟೇ ಹಿಂದಿ ಸಿನೆಮಾಗಳೂ ಸಿನೆಮಾಹಾಲುಗಳಿಗೆ ಬರುತ್ತಿದ್ದವು. ಹೀಗಾಗಿ ಅಮಿತಾಭ್, ಜಿತೇಂದ್ರರ ಹಿಂದಿ ಸಿನೆಮಾಗಳನ್ನೂ ಎಗ್ಗಿಲ್ಲದೇ ನೋಡುತ್ತಿದ್ದೆವು.

ರಾಜಕುಮಾರ್ ಗುಬ್ಬಿಕಂಪನಿಯಲ್ಲಿದ್ದ ಸಮಯದಲ್ಲಿ ನಾಟಕ ಮಾಡಲು ಹುಬ್ಬಳ್ಳಿಗೆ ಬಂದಾಗ ನನ್ನ ಅಜ್ಜಿಯ ಮನೆಯ ಹತ್ತಿರವೇ ಇದ್ದನಂತೆ! ನನ್ನ ಅಜ್ಜಿಗೆ ರಾಜಕುಮಾರನು ರಾಜಕುಮಾರನಾಗುವ ಮೊದಲಿನಿಂದಲೂ ಗೊತ್ತು!!

ಮುಂದೆ ಎಂಬಿಬಿಎಸ್ ಮಾಡಲು ಹುಬ್ಬಳ್ಳಿಗೇ ಬಂದಾಗ ನನಗೆ ಸಿನೆಮಾ ಲೋಕಕ್ಕೇ ಬಂದಂತಾಯಿತು. ಕಾಲೇಜಿನ ಹತ್ತಿರವೇ ಇದ್ದ ಅಮೃತ ಥೇಟರಿನಲ್ಲಿ ಇಂಗ್ಲೀಷ್ ಸಿನೆಮಾ, ಸುಜಾತದಲ್ಲಿ ರಾಜಕುಮಾರನ ಸಿನೆಮಾ, ಚಂದ್ರಕಲಾದಲ್ಲಿ ರಾಜಕುಮಾರನ ಹಳೆಯ ಸಿನೆಮಾ, ಅಪ್ಸರಾ-ಸುಧಾ-ರೂಪಂನಲ್ಲಿ ಹಿಂದಿ ಸಿನೆಮಾ, ಮೋಹನ-ಮಲ್ಲಿಕಾರ್ಜುನದಲ್ಲಿ ಆರ್ಟ್ ಸಿನೆಮಾ, ಸಂಗೀತದಲ್ಲಿ ತೆಲುಗು ಸಿನೆಮಾ…ಒಟ್ಟಿನಲ್ಲಿ ಸಿನೆಮಾ ಸುಗ್ಗಿ. ಇಂಥದೇ ಸಿನೆಮಾ ಆಗಿರಬೇಕಿತ್ತು ಎಂದೇನೂ ಇರಲಿಲ್ಲ. ಒಂದಿನಿತೂ ಕಲೆಯಿಲ್ಲದ ಶುದ್ಧ ವ್ಯಾಪಾರಿಚಿತ್ರದಿಂದ ಹಿಡಿದು ಪ್ರಶಸ್ತಿಗೋಸ್ಕರವಾಗಿಯೇ ಮಾಡಿದ ಕಲಾತ್ಮಕ ಚಿತ್ರಗಳವರೆಗೆ ಯಾವುದಾದರೂ ನಡೆಯುತ್ತಿತ್ತು. ಧಾರವಾಡದಲ್ಲಿ ವರ್ಷಕ್ಕೊಮ್ಮೆ ಉತ್ತಮ ಕಲಾತ್ಮಕ ಚಿತ್ರಗಳ ಉತ್ಸವವನ್ನು ಮಾಡುತ್ತಿದ್ದರು. ಎಲ್ಲ ಸಿನೆಮಾ ಟಾಕೀಜುಗಳ ಮ್ಯಾಟ್ನಿಶೋದಲ್ಲಿ ಈ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದರು. ಸಮಯ ಮಾಡಕೊಂಡು ಅವನ್ನೂ ನೋಡುತ್ತಿದ್ದೆ.

ವಯಸ್ಸಾದಂತೆ ಸಿನೆಮಾ ಹುಚ್ಚು ಕಡಿಮೆಯಾಗುತ್ತದಂತೆ, ಆದರೆ ಪಿಜಿ ಮಾಡಲು ಮೈಸೂರಿಗೆ ಬಂದಾಗ ಈ ಸಿನೆಮಾ ಹುಚ್ಚು ಕಡಿಮೆಯಾಗುವ ಬದಲು ಇನ್ನೂ ಹೆಚ್ಚೇ ಆಯಿತು. ಅದರಲ್ಲೂ ಕನ್ನಡ ಸಿನೆಮಾಗಳನ್ನು ನೋಡುವ ಹುಚ್ಚು ಇನ್ನೂ ಹೆಚ್ಚಾಯಿತು. ಎಷ್ಟೇ ಕೆಟ್ಟ ಕನ್ನಡ ಸಿನೆಮಾಗಳನ್ನು ನೋಡಿದರೂ ಛಲ ಬಿಡದ ತ್ರಿವಿಕ್ರಮನಂತೆ ಈ ಸಲವಾದರೂ ಒಳ್ಳೆಯ ಸಿನೆಮಾ ನೋಡಲು ಸಿಗುತ್ತದೆ ಎನ್ನುವ ಭ್ರಮೆಯಿಂದ ಇರುವ ಬರುವ ಕನ್ನಡ ಸಿನೆಮಾಗಳನ್ನು ನೋಡುತ್ತಿದ್ದೆ. ಹಳೆಯ ತಲೆಮಾರೆಲ್ಲ ಖಾಲಿಯಾಗಿ ಶಿವರಾಜಕುಮಾರ, ಉಪೇಂದ್ರ, ರಮೇಶ, ಸುದೀಪರೆಲ್ಲ ಬಂದಿದ್ದರು. ಹಿಂದಿಯನ್ನು ಖಾನ್ಗಳು ಆಳುತ್ತಿದ್ದರು. ಮೈಸೂರಿಗೆ ಎಲ್ಲ ಹಿಂದಿ ಸಿನೆಮಾಗಳು ಬರುತ್ತಿರಲಿಲ್ಲ, ಆದರೆ ಬರುವ ಸಿನೆಮಾ ಬಿಡುತ್ತಿರಲಿಲ್ಲ. ಸ್ಟರ್ಲಿಂಗ್ನಲ್ಲಿ ಬರುವ ಇಂಗ್ಲೀಷ್ ಸಿನೆಮಾಗಳನ್ನೂ ಬಿಡುತ್ತಿರಲಿಲ್ಲ. ಆದರೂ ಒಲವು ಮಾತ್ರ ಕನ್ನಡ ಮತ್ತು ಹಿಂದಿ ಸಿನೆಮಾಗಳದ್ದೇ.

ಇಷ್ಟೊಂದು ಕನ್ನಡ ಮತ್ತು ಹಿಂದಿ ಸಿನೆಮಾ ಹುಚ್ಚಿರುವ ನಾನು ಇಂಗ್ಲೆಂಡಿಗೆ ಬಂದಾಗ ನೀರಿನಿಂದ ಆಚೆ ತೆಗೆದ ಮೀನಿನಂತೆ ಆಗಿದ್ದೆ. ಆಗಾಗ ಹಿಂದಿ ಸಿನೆಮಾಗಳನ್ನು ಥೇಟರಿನಲ್ಲಿ ನೋಡುವುದನ್ನು ಬಿಟ್ಟರೆ ಭಾರತದ ಯಾವ ಭಾಷೆಯ ಸಿನೆಮಾಗಳೂ ನೋಡಲು ಸಿಗುತ್ತಿರಲಿಲ್ಲ. ಕನ್ನಡ ಸಿನೆಮಾಗಳೊಂದೂ ಟಾಕೀಜಿಗೆ ಬರುತ್ತಿರಲಿಲ್ಲ. ಕನ್ನಡದ ಟಿವಿ ಚಾನೆಲ್ಗಳು ಇರಲಿಲ್ಲ. ಈ ಸಿನೆಮಾ ತಲುಬನ್ನು ನಿವಾರಿಸಿಕೊಳ್ಳುವ ಉಪಾಯಗಳೆಂದರೆ, ಭಾರತಕ್ಕೆ ರಜೆಗೆ ಹೋದಾಗ ಒಂದಿಪ್ಪತ್ತು ಕನ್ನಡ ಸಿನೆಮಾಗಳ ವಿಸಿಡಿ (ನಂತರ ಡಿವಿಡಿ)ಗಳನ್ನು ಹೊತ್ತು ತರುವುದು ಮತ್ತು ಗೆಳೆಯರ ಮನೆಗೆ ಹೋದಾಗ ವಿಸಿಡಿ, ಡಿವಿಡಿಗಳನ್ನು ವಿನಿಮಯಮಾಡಿಕೊಳ್ಳುವುದು. ಈ ವಿಸಿಡಿ, ಡಿವಿಡಿಗಳು 90% ಪೈರೇಟೆಡ್ ಆಗಿರುತ್ತಿದ್ದವಾದ್ದರಿಂದ ಸಿನೆಮಾಗಳ ಪ್ರಿಂಟ್ ಕ್ವಾಲಿಟಿ ತುಂಬ ಕೆಟ್ಟದಾಗಿರುತ್ತಿದ್ದವು, ಅರ್ಧ ಮುಕ್ಕಾಲು ಆದ ಮೇಲೆ ಮುಂದೆ ಹೋಗಲು ತುಂಬ ಕಷ್ಟ ಪಡುತ್ತಿದ್ದವು, ಕೆಲವಂತೂ ಏನೆಲ್ಲ ಮಾಡಿದರೂ ಕರ್ ಕರ್ ಎಂದು ಸದ್ದು ಮಾಡುತ್ತ ನಿಂತುಬಿಡುತ್ತಿದ್ದವು. ಎಲ್ಲ ಸಿನೆಮಾ ಕತೆಗಳೂ ಒಂದೇ ತರಹ ಇರುವುದರಿಂದ ಮುಂದೆ ಏನಾಯಿತು, ಸಿನೆಮಾ ಹೇಗೆ ಅಂತ್ಯವಾಯಿತು ಎಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಅದು ಬೇರೆ ಮಾತು.

ಹೀಗಿರುವಾಗ ಕನ್ನಡದ ಕೆಲವು ಸಂಘಗಳು ಕನ್ನಡ ಚಲನಚಿತ್ರಗಳನ್ನು ತರಿಸಿ, ಕನ್ನಡದ ಸಿನೆಮಾಗಳನ್ನು ಇಂಗ್ಲೆಂಡಿನ ಸಿನಿಮಾಹಾಲುಗಲಲ್ಲಿ ಬಿಡುಗಡೆ ಮಾಡಿದರು. ‘ರಾಮ, ಶ್ಯಾಮ, ಭಾಮ‘, ನಾನು ಇಂಗ್ಲೆಂಡಿನಲ್ಲಿ ಸಿನೆಮಾಹಾಲಿನಲ್ಲಿ ನೋಡಿದ ಮೊದಲ ಕನ್ನಡ ಸಿನೆಮಾ, ಆ ಚಿತ್ರ ಲಂಡನ್ನಿನ ಸಿನೆಮಾ ಟಾಕೀಜಿನಲ್ಲಿ ಹೌಸ್ಫುಲ್ ಆಗಿತ್ತು. ಕನ್ನಡದ ಯಾವುದೋ ಸಾಂಸ್ಕೃತಿಕ  ಕಾರ್ಯಕ್ರಮ ನಡೆಯುತ್ತಿರುವಂತೆ ಸಡಗರವಿತ್ತು. ಕರ್ನಾಟಕದಿಂದ ಸಿನೆಮಾ ತರಿಸಿ, ಅದಕ್ಕೆ ಇಂಗ್ಲೆಂಡಿನ ಸೆನ್ಸಾರ್ ಸರ್ಟಿಫಿಕೇಟ್ (ಆಗ ಇಂಗ್ಲೀಷ್ ಸಬ್ಟೈಟಲ್ಗಳು ಇರಲಿಲ್ಲ) ಕೊಡಿಸಿ, ಟಿಕೆಟ್ ಮಾರಿ, ಸಿನೆಮಾಹಾಲಿನ ಬಾಡಿಗೆಕೊಟ್ಟ ಮೇಲೆ, ಸಿನೆಮಾ ತರಿಸಿದವರಿಗೆ ಕೈಗೆ ಎಷ್ಟು ಮಿಕ್ಕುತ್ತಿತ್ತೋ ಅಥವಾ ಕೈಯಿಂದ ಅವರೇ ದುಡ್ಡು ಹಾಕಬೇಕಿತ್ತೋ ನನಗಂತೂ ಗೊತ್ತಿಲ್ಲ. ಆದರೆ ಕನ್ನಡ ಸಿನೆಮಾಗಳನ್ನು ನೋಡುವ ಅವಕಾಶ ಮಾತ್ರ ಹೆಚ್ಚುತ್ತ ಹೋಯಿತು. ಎಷ್ಟರ ಮಟ್ಟಿಗೆ ಎಂದರೆ ನೋಡಲು ಪುರುಸೊತ್ತು ಸಿಗುತ್ತಿರಲಿಲ್ಲ. ಆನಂತರ ಕನ್ನಡ ಸಿನೆಮಾಗಳು ಇಂಗ್ಲೀಷ್ ಸಬ್ಟೈಟಲ್ನೊಂದಿಗೆ ಹಾಲಿವುಡ್ ಮತ್ತು ಹಿಂದಿ ಸಿನೆಮಾಗಳಂತೆ ಮಲ್ಟಿಪ್ಲೆಕ್ಸುಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗತೊಡಗಿದವು. ಗಣೇಶ, ದರ್ಶನ್, ಯಶ್ ಅವರ  ಸಿನೆಮಾಗಳು ಇಲ್ಲೂ ವಿಜೃಂಭಿಸತೊಡಗಿದವು (ಈಗ ಕೊರೊನಾ ದೆಸೆಯಿಂದಾಗಿ ಇದೆಲ್ಲ ನಿಂತುಹೋಗಿದೆ, ಮತ್ತೆ ಪ್ರಾರಂಭವಾಗುವುದೇ? ಕಾದುನೋಡಬೇಕು).

ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಓಟಿಟಿಗಳು ಆರಂಭವಾದಾಗ ಅದರಲ್ಲಿ ಭಾರತೀಯ ಭಾಷೆಯ ಸಿನೆಮಾಗಳು ಇರಲಿಲ್ಲ, ಕನ್ನಡ ಸಿನೆಮಾಗಳಂತೂ ಇರಲೇ ಇಲ್ಲ. ಆದರೆ ಕೆಲವು ವೆಬ್ಸೈಟುಗಳು ಎಚ್.ಡಿ. ಗುಣಮಟ್ಟದ ಕನ್ನಡ ಸಿನೆಮಾಗಳನ್ನು ಅವು ಕರ್ನಾಟಕದಲ್ಲಿ ಬಿಡುಗಡೆಯಾದ ಕೆಲವು ತಿಂಗಳುಗಳಲ್ಲೇ ತಮ್ಮ ತಾಣಗಳಲ್ಲಿ ಬಿಡುಗಡೆ ಮಾಡತೊಡಗಿದವು, ಅದೂ ಪುಗಸಟ್ಟೆಯಾಗಿ ಅಥವಾ ತುಂಬ ಕಡಿಮೆ ದುಡ್ಡಿಗೆ. ಮನೆಯಲ್ಲೇ ಕೂತುಕೊಂಡು ಉತ್ತಮ ಪ್ರಿಂಟಿನ ಸಿನೆಮಾಗಳನ್ನು ನೋಡುವ ಅವಕಾಶ ಶುರುವಾಯಿತು. ಆದರೂ ಈ ವೆಬ್ಸೈಟುಗಳು ಎಲ್ಲಿ ವೈರಸ್ಸುಗಳನ್ನು, ವರ್ಮ್ಗಳನ್ನು ನಮ್ಮ ಕಂಪ್ಯೂಟರಿಗೆ ಬಿಡುತ್ತಾರೋ ಎಂದು ಹೆದರಿಕೆಯಾಗುತ್ತಿತ್ತು. ಅಲ್ಲದೇ ಕಂಪ್ಯೂಟರಿನಿಂದ ಟಿವಿಯ ಅಥವಾ ಹೋಮ್ ಸಿನೆಮಾದ ಪರದೆಗೆ ಇವನ್ನು ಎಳೆದು ತರುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗುತ್ತಿತ್ತು.

ಭಾರತೀಯ ಸಿನೆಮಾ ಮಾರುಕಟ್ಟೆಯ ಮೇಲೆ ನೆಟ್ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ಗಳ ಕಣ್ಣು ಬೀಳಲು ತುಂಬ ಸಮಯವೇನೂ ಬೇಕಾಗಲಿಲ್ಲ. ಈಗ ಬಹುತೇಕ ಎಲ್ಲ ಹಿಂದಿ ಸಿನೆಮಾಗಳು ಓಟಿಟಿಯಲ್ಲಿ ನೋಡಲು ಸಿಗುತ್ತವೆ. ಹೊಸ ಕನ್ನಡ ಸಿನೆಮಾಗಳೂ ಪ್ರೈಮ್ನಲ್ಲಿ (ನೆಟ್ ಫ್ಲಿಕ್ಸ್ ನಲ್ಲಿ  ತುಂಬ ಕಡಿಮೆ) ನೋಡಲು ಸಿಗುತ್ತವೆ. ಬರೀ ಹಿಂದಿ ಮತ್ತು ಕನ್ನಡ ಭಾಷೆಯ ಸಿನೆಮಾಗಳಲ್ಲದೇ ತೆಲುಗು, ತಮಿಳು, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ ಸಿನೆಮಾಗಳನ್ನೂ ಮನೆಯಲ್ಲೇ ಕೂತು, ಭಾಷೆ ಅರ್ಥವಾಗದಿದ್ದರೂ ಸಬ್ ಟೈಟಲ್ ಓದಿಕೊಂಡು ನೋಡಬಹುದಾಗಿದೆ. ಶುದ್ಧ ವ್ಯಾಪಾರಿ ಸಿನೆಮಾಗಳಾದ ರಾಬರ್ಟ್, ಕೆಜಿಎಫ್ನಂಥ ಸಿನೆಮಾಗಳ ಜೊತೆಗೆ ನಾತಿಚರಾಮಿ, ಕಿರಗೂರಿನ ಗಯ್ಯಾಳಿಗಳಂಥ ಸೂಕ್ಷ್ಮಸಂವೇದನೆಯ ಸಿನೆಮಾಗಳನ್ನು ನಮಗೆ ಬೇಕಾದ ಹೊತ್ತು, ಎಲ್ಲಿ ಬೇಕಾದರೂ, ಫೋನಿನಿಂದ ಹಿಡಿದು ಹೋಮ್ ಸಿನಿಮಾ ಪರದೆಯ ಮೇಲೆ ನೋಡಬಹುದಾಗಿದೆ.

About The Author

ಕೇಶವ ಕುಲಕರ್ಣಿ

ಹುಟ್ಟಿ ಬೆಳೆದು ಓದಿದ್ದು ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಮೈಸೂರು. ವೃತ್ತಿಯಿಂದ ವೈದ್ಯ - ರೇಡಿಯಾಲಾಜಿ. ಸಾಹಿತ್ಯ, ಸಂಗೀತ ಮತ್ತು ಸಿನೆಮಾಗಳಲ್ಲಿ ಆಸಕ್ತಿ. ೨೦೦೪ರಿಂದ ಇಂಗ್ಲೆಂಡ್ ನಿವಾಸಿ, ವಾಸ ಇಂಗ್ಲೆಂಡಿನ ಬರ್ಮಿಂಗ್-ಹ್ಯಾಮ್ ನಗರ. ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಇಂಗ್ಲೆಂಡ್ ಕನ್ನಡಿಗರ `ಅನಿವಾಸಿ` ಎಂಬ ಜಾಲತಾಣದಲ್ಲಿ ಸಕ್ರಿಯ.

8 Comments

  1. gurunath mujumdar

    ಬಹಳ ಚೆನ್ನಾಗಿದೆ. ನಮ್ಮ ಹಳೆಯ ದಿನಗಳು ನೆನಪಿಪಿಗೆ ಬಂದವು. ಡಾ.ರಾಜ್ ಹೋದ ನಂತರ ಕನ್ನಡ ಸಿನಿಮಾ ಗಳನ್ನು ನೋಡಿದ್ದು ತುಂಬಾ ಕಡಿಮೆ. ಇತ್ತೀಚೆಗೆ ಟಾಕೀಜ್ ನಲ್ಲಿ 2-3 ಗಂಟೆ ಕಳೆಯುವದು ಯಾತನೆ ಅನ್ನಿಸುತ್ತೆ. ಆದ್ರೆ ನಾನು ಕೂಡ ಕನ್ನಡ ಚಲನಚಿತ್ರ ಅಭಿಮಾನಿ. ಆದ್ರೆ ಯಾಕೋ ಎನೋ ಇತ್ತೀಚಿನ ಚಿತ್ರಗಳು ಹಿಡಿಸುವದಿಲ್ಲ.

    Reply
  2. gurunath mujumdar

    Very nice article.

    Reply
  3. Shrikanth hegde

    ?? ಚೆನ್ನಾಗಿದೆ , ನಾನು ಸಣ್ಣವನಿದ್ದಾಗ ನಮ್ಮ ಊರಿನಲ್ಲಿ ಟೂರಿಂಗ್ ಟಾಕೀಸ್ ಅಂತ ಇರ್ತಿತ್ತು , ಎಲ್ಲೂ ಟೂರ್ ಮಾಡದಿದ್ದರೂ ಹೆಸರಿಗೆ ಹಾಗೆ( ಬಹುಶ ಕಟ್ಟಡ ಕಟ್ಟದೆ ಹಾಗೆ ತಗಡು ಕವರ್ ಮಾಡಿದ ಸಿನಿಮಾ ಟಾಕೀಸ್ ಎಲ್ಲ ಟೂರಿಂಗ್ ಟಾಕೀಸ್ ! ಹೊಸ ಸಿನಿಮಾ ಯಾವುದೂ ಬರುತ್ತಿರಲಿಲ್ಲ ಅದಕ್ಕೆ ಅಪರೂಪಕ್ಕೆ taluk ಕೇಂದ್ರಕ್ಕೆ ಹೋಗಿ ನೋಡಬೇಕಿತ್ತು . ಸರಿಯಾಗಿ ಸಿನಿಮಾ ನೋಡಲು ಪ್ರಾರಂಭಿಸಿದ್ದು ಹುಬ್ಬಳ್ಳಿಯಲ್ಲೇ ! ನಿಮ್ಮದೇ ಅನುಭವ ಪೂರ್ತಿ ಹತ್ತು ವರ್ಷ ( UG , PG ಸೇರಿ ) , ನಂತರ 94 ರಲ್ಲಿ ಮುಂಬೈ ಯಲ್ಲಿ SR ಇದ್ದಾಗ ರಿಲೀಸ್ ಎಡಿಎ ಯಾವ ಹಿಂದಿ ಸಿನಿಮಾ ನೋಡದೇ ಬಿಟ್ಟಿಲ್ಲ , ಶಿವಮೊಗ್ಗದಲ್ಲಿ ಪ್ರಾಕ್ಟೀಸ್ ಸುರು ಮಾಡಿದ ಮೇಲೆ ಕಡಿಮೆಯಾಗಿ ನಿಂತೇ ಹೋಗಿತ್ತು , ಮೂರು ವರ್ಷದ ಹಿಂದೆ ಇಲ್ಲಿ ಮಲ್ಟಿಪ್ಲೆಕ್ಸ್ ಪ್ರಾರಂಭವಾದ ಮೇಲೆ ಮತ್ತೆ ಆಗೊಮ್ಮೆ ಈಗೊಮ್ಮೆ ನೋಡ್ತಿದ್ದೆ ,
    ಲೇಖನ ಹಳೆ ದಿನಗಳನ್ನು ನೆನಪಿಸಿತು ??

    Reply
  4. Ramasharan Laxminarayan

    ಸಿನಿಮಾ ಪ್ರಿಯರಿಗೆಲ್ಲ ಅನ್ವಯವಾಗುವ ಲೇಖನ. ಸೆಕೆಂಡ್ ಶೋ ನಂತರ ನಿರ್ಜನವಾದ ಹುಬ್ಬಳ್ಳಿಯ ರಸ್ತೆಗಳು ತೇಜಾಬ್ ಸಿನೆಮಾದ ‘ಸೋ ಗಯಾ ರಾಸತಾ’ ಹಾಡನ್ನು ನೆನಪಿಸುತ್ತಿತ್ತು. ವಿದ್ಯಾರ್ಥಿ ದಿನಗಳ ಸಿನೆಮಾ ಬೇಟೆಯನ್ನು ಮೆಲುಕಿಸಿದ್ದಕ್ಕೆ ಧನ್ಯವಾದಗಳು.

    Reply
  5. ಆನಂದ ಕೆ

    ಕೇಶವ, ತುಂಬಾ ಛೆನ್ನಾಗಿ ನಿನ್ನ ಸಿನೆನಾ ಗೀಳನ್ನ ವರ್ಣಿಸಿದ್ದೀಯ.
    ನನ್ನ ಬಾಲ್ಯದಲ್ಲಿ ವರ್ಷಕ್ಕೆ ಒಂದು ಸಿನೆನಾ ನೋಡಿದ್ದಿರಬಹುದು. ಯಾಕೆ ಅಂದರೆ ನಮ್ಮಮ್ಮನಿಗೆ ಇಷ್ಟ ಇರಲಿಲ್ಲ. ಆದರೆ ಇಂಜಿನಿಯರಿಂಗೆ ದಾವಣಗೆರೆ ಬಂದಮೇಲೆ ಬಹಳ ನೋಡಿದೇನೆ.

    Reply
  6. GOPALKRISHNA HeGDE

    ಮನದಿಂದ ಮರೆಯಾಗುತ್ತಿರುವ ಚಲನಚಿತ್ರ ನೋಡುತ್ತಿದ್ದ ನಮ್ಮ ನಮ್ಮ ವೈಯಕ್ತಿಕ ಅನುಭವಗಳಲ್ಲಿ ಸಾಮೂಹಿಕವಾದ ಹಲವಾರು ಹಳೆಯ ನೆನೆಪುಗಳನ್ನು, ಸವಿಯಾಗಿ ಮತ್ತೆ ಮೆಲಕುಹಾಕಲು ನಿಮ್ಮ ಪತ್ರ ತುಂಬಾ ಯಶಸ್ವಿಯಾಗಿದೆ ಅನಿಸಿತು ಕೇಶವ ಅವರೆ ??

    Reply
  7. Laxminarayan Gudur

    ಓದಿ ಮಜಾ ಬಂತು ಕೇಶವ. ನಾನು ಗಂಗಾವತಿ, ಕಂಪ್ಲಿ, ಮಸ್ಕಿ, ದೇವದುರ್ಗಗಳಲ್ಲಿ ಕಳೆದ ಬಾಲ್ಯದ ದಿನಗಳ ಸಿನಿಮಾ ಹುಚ್ಚಿನ ನೆನಪಾಯಿತು. 75ಪೈಸೆಯ ಟಿಕೆಟ್ಟಿನ ಎಲ್ಲಕ್ಕೂ ಮುಂದಿನ ನೆಲವೋ, ಬೆಂಚೋ ಸರಿಯೇ ಎಂದು ಹೋಗುವ ಸಿನಿಮಾಗಳು, ಒಂದು ರೀತಿಯ ಪಿಕ್ನಿಕ್ಕುಗಳೇ ಸರಿ. ಝಮಖಾನ, ತಿಂಡಿ, ನೀರು, ಹಣ್ಣು ಇತ್ಯಾದಿಗಳೊಂದಿಗೆ ಅಲೆಕ್ಸಾನ್ಡರ್ ನ ದಂಡಯಾತ್ರೆಯಂತೆ ಹೋಗುತ್ತಿದ್ದೆವು. ಹೀರೊ ಬಂದೊಡನೆ ಶಿಳ್ಳೆ ಹಾಕುವ, ಎದ್ದು ಪರದೆಯ ಮುಂದೆ ಕುಣಿಯುವ, ಹಿಂದಿನ ಸೀಟಿನವರು ಎಸೆದ ಚಿಲ್ಲರೆ ಆರಿಸಿಕೊಳ್ಳಲು ಓಡುವ ತಂಡಗಳ ಮಧ್ಯ ನಮ್ಮ ಪಿಕ್ನಿಕ್ಕು! ಹೀರೊಇನ್ನಿಗೆ ಅಥವಾ ಹೀರೊನ ತಂಗಿಗೊ, ಅಮ್ಮನಿಗೋ ವಿಲ್ಲನ್ನು ಕಾಟಕೊಡುತ್ತಿದ್ದರೆ, ಅವನಿಗೆ ಶಾಪ ಹಾಕುವ, ಗೋಳಾಡಿ ಅಳುವವರು ಬೇರೆ ನಮ್ಮ ಸುತ್ತಮುತ್ತ. ಆ ಮಜಾ ಮತ್ತೆ ಬಾರದು. ಮನೆಗೆ ಬರುವಾಗ ಎಲ್ಲ ಹುಡುಗರೂ ವಿಷ್ಣುವರ್ಧನೋ, ಶಂಕರ್ನಾಗೋ, ನಾಗಾರ್ಜುನನೊ ಆಗಿಯೇ ರೋಡಿನಲ್ಲಿ ನಡೆಯುತ್ತಿದ್ದುದು.
    ಆದರೆ ಈಗೀಗ ಆರಿಸಿ, ಕೇಳಿ, ಓದಿಯೇ ಸಿನಿಮಾ ನೋಡೋದು. ಥೇಟರಿನಲ್ಲಿ ಕಡಿಮೆಯೇ, ಹೋದರೆ ಇಂಗ್ಲಿಷ್ ಸಿನಿಮಾಗಳ ಸ್ಪೆಷಲ್ ಎಫ್ಫೆಕ್ಟ್ಸ್ ನೋಡಲು ಮಾತ್ರ. ಕನ್ನಡದ ಸಿನಿಮಾಗಳ ನಟನೆ, ಕಥೆ, ಹಾಡು-ಕುಣಿತ, ಸಾಹಿತ್ಯ ಯಾವುದೂ ತಡಕೊಳ್ಳಲಿಕ್ಕಾಗದು, ಎಷ್ಟೋ ಸಿನಿಮಾಗಳಲ್ಲಿ. ಒಂದೊಂದು ಅಲ್ಲಲ್ಲಿ ಮುತ್ತಿನಂತಿರುತ್ತವೆ ಅಷ್ಟೇ. ಬೇರೆ ಭಾಷೆಯವರಿಗೆ ಸಿಗುವ ಕಥೆಗಳು ಕನ್ನಡ ಸಿನಿಮಾದವರಿಗೆ ಯಾಕೆ ಸಿಗೋದಿಲ್ಲವೋ!

    Reply
  8. ಸತೀಶ ಎಸ್.ಹುಲಸೋಗಿ,ಹರಿಹರ

    ಸರ್,ಬರಹ ದೊಡ್ಡದಾದರೂ ಓದಿಸಿಕೊಂಡು ಹೋಗುತ್ತದೆ.ನಮ್ಮ ತಾಯಿಯ(ದೊಡ್ಡ ವೈನಿ)ನೆನಪು ಹಸಿರಾಯಿತು.ಅವಳನ್ನು ರಾಜ್ ಮನೆಗೆ ಕರೆದುಕೊಂಡು ಹೋದಾಗ,ಅವರಿಬ್ಬರ ಮಧ್ಯೆ ಸುಮಾರು ಎರಡೂವರೆ ತಾಸು ನಡೆದ ಮಾತುಕತೆಯ ಕ್ಷಣಗಳು ಅವರಿಬ್ಬರೂ ನಮ್ಮೊಂದಿಗಿಯೇ ಇದ್ದಾರೆ ಎಂದು ಅರ್ಥೈಸಿದವು.ಮಾಮರವೆಲ್ಲೋ,ಕೊಗಿಲೆಯಲ್ಲೋ ಎಂಬ ತಲೆಬರಹದೊಂದಿಗೆ ಪ್ರಕಟವಾದ (ತಾಯಿ/ಮಗ)ಲೇಖನ ಫೋಟೊ ಕಾಪಿ ಕಳುಹಿಸಿ ಕೊಡುತ್ತೇನೆ.Keep writing.ಸತೀಶ ಮಾಮಾ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ