Advertisement
ಮಲ್ಲಪ್ಪ ಫ ಕರೇಣ್ಣನವರ ಪುಸ್ತಕದ ಕುರಿತು ಪ.ನಾ.ಹಳ್ಳಿ. ಹರೀಶ್ ಕುಮಾರ್ ಬರಹ

ಮಲ್ಲಪ್ಪ ಫ ಕರೇಣ್ಣನವರ ಪುಸ್ತಕದ ಕುರಿತು ಪ.ನಾ.ಹಳ್ಳಿ. ಹರೀಶ್ ಕುಮಾರ್ ಬರಹ

ಸದಾಕಾಲ ಹೆತ್ತಮ್ಮನ ಸೆರಗಿಡಿದು ಓಡಾಡುತ್ತಿದ್ದ ಲೇಖಕನಿಗೆ ತನ್ನ ಆತ್ಮವಿಶ್ವಾಸ ಹೆಚ್ಚಿಸಿ ಧೈರ್ಯ ತುಂಬಿದ ಮೊದಲ ಕಿರುಪ್ರವಾಸದ ನೆನಪಿನಿಂದ ಪ್ರಾರಂಭವಾಗಿ, ಕ್ರಿಕೆಟ್ ಹುಚ್ಚನ್ನು ಹತ್ತಿಸಿಕೊಂಡು ಸುಲಭಕ್ಕೆ ಸಿಗುವ ತೆಂಗಿನ ಮಟ್ಟಿಯನ್ನೇ ಸಚಿನ್ನನ ಎಂ ಆರ್ ಎಫ್ ಬ್ಯಾಟಾಗಿಸಿಕೊಂಡದ್ದು, ಕ್ರೀಡಾಕೂಟವನ್ನು ಆಯೋಜಿಸಿ ಸಂಗ್ರಹಿಸಿದ್ದ ಬಹುಮಾನದ ಹಣದೊಂದಿಗೆ ಗೆಳೆಯರು ಪರಾರಿಯಾದಾಗ ಬಹುಮಾನಿತ ತಂಡಕ್ಕೆ ಕೂಡಿಟ್ಟಿದ್ದ ಸಗಣಿಯನ್ನೇ ಹರಾಜು ಹಾಕಿ ಹಣ ಹೊಂದಿಸಿ ಊರಿನ ಮರ್ಯಾದೆ ಕಾಪಾಡಿಕೊಂಡಿದ್ದು… ಸೈಕಲ್ ತುಳಿಯುವ ಆಸೆಯಿಂದ ತುಳಿಯಲು ಸೈಕಲ್ ಕೊಡಲು ನಿರಾಕರಿಸಿದ ಸ್ನೇಹಿತನ ಸೈಕಲ್ಲನ್ನು ಕಿಡ್ನಾಪ್ ಮಾಡಿದ ಪ್ರಸಂಗಗಳು ಓದುಗರಲ್ಲಿ ಮಂದಹಾಸವನ್ನು ಮೂಡಿಸುತ್ತವೆ.
ಮಲ್ಲಪ್ಪ ಫ ಕರೇಣ್ಣನವರ “ನಮ್ಮೂರ ಅಗಸ್ಯಾಗ” ಕೃತಿಯ ಕುರಿತು ಪ.ನಾ.ಹಳ್ಳಿ. ಹರೀಶ್ ಕುಮಾರ್ ಬರಹ

ನಮ್ಮೂರ ಅಗಸ್ಯಾಗ ಎಂಬುದು ಸುಮಾರು ಮೂವತ್ತು ಮತ್ತೊಂದಿಷ್ಟು ಲೇಖನಗಳನ್ನು ಒಳಗೊಂಡ ಸಂಕಲನ ಕೃತಿ. ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ, ಶಿಕ್ಷಕ ಮಿತ್ರ ಮಲ್ಲಪ್ಪ ಕರೇಣ್ಣನವರ ಅವರ ಚೊಚ್ಚಲ ಸಂಕಲನವಾದ ಇದರಲ್ಲಿ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಲಲಿತ ಪ್ರಬಂಧ ಹಾಗೂ ಲಹರಿಗಳ ಮಾದರಿಗಳಂತಹ ಬರಹಗಳಿವೆ.

ಓದುತ್ತಾ ಹೋದಂತೆ ಇಲ್ಲಿನ ಬರಹಗಳು ಲೇಖಕರ ವೈಯಕ್ತಿಕ ವಿಷಯಗಳಂತೆ ಕಂಡರೂ ಸಹ ಅವುಗಳು ಸಾಮಾಜಿಕವಾಗಿ ತೆರೆದುಕೊಳ್ಳುತ್ತಾ ಸಾರ್ವತ್ರಿಕ ಚರ್ಚೆಗೆ ದಾರಿ ಮಾಡಿಕೊಡುತ್ತವೆ. ಲೇಖಕರು ತಾವು ಕಂಡುಂಡ ಬಾಲ್ಯದ ತಾಕಲಾಟಗಳು, ಬಡತನದ ಬೇಗೆ, ಹಸಿವು ನೀಗಿಸಲು ಪಟ್ಟ ಪಡಿಪಾಟಲುಗಳು ನಮ್ಮವೇ ಏನೋ ಎನ್ನಿಸುವಷ್ಟು ಹತ್ತಿರವಾಗುವ ಬರಹಗಳು ಇಲ್ಲಿವೆ.

(ಮಲ್ಲಪ್ಪ ಕರೇಣ್ಣನವರ)

ನಾಡೋಜ ಡಾಕ್ಟರ್ ಬರಗೂರರಂತೆ ತನ್ನೂರಿನ ಕೆರೆಯನ್ನೇ ಈಡನ್ ಗಾರ್ಡನ್ ಅಂದುಕೊಂಡು ಗೊಬ್ಬರದ ಚೀಲವನ್ನೇ ರೈನ್ಕೋಟ್ ಎಂದು ಭಾವಿಸಿ ತೃಪ್ತಿಸುವ ಲೇಖಕರ ಭಾವ ಓದುಗರನ್ನು ಆಕರ್ಷಿಸುತ್ತದೆ. ಪ್ರಬಂಧಗಳಂತೆ ಕಂಡರೂ ವ್ಯಂಗ್ಯ ಪೂರಿತ ಶೀರ್ಷಿಕೆಗಳಿಂದಾಗಿ ಹರಟೆಗಳಂತೆ ಗೋಚರಿಸುವ ಸಂಗ್ರಹಿತ ಬರಹಗಳು ಲೇಖಕರ ಬಾಲ್ಯದ ಮಣ್ಣಿನಾಟದಿಂದ ಪ್ರಾರಂಭವಾಗಿ ಕಾಲೇಜಿನ ತುಂಟಾಟಗಳು ಮತ್ತು ಸಂಸಾರಿಯಾದಾಗಿನ ಜೀವನಾನುಭವದ ಸಸಾರಗಳನ್ನು ಬರಹ ರೂಪಕ್ಕಿಳಿಸಿ ಕೇವಲ ವೈಯಕ್ತಿಕ ಡೈರಿ ಆಗಬಹುದಾಗಿದ್ದ ಹಸ್ತಪ್ರತಿಯನ್ನು ಸಾರ್ವತ್ರಿಕವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

ಹೆತ್ತು ಮುದ್ದಾಡಿದ ತಾಯಿಗೊಂದು ಹೊಸ ಸೀರೆ ಕೊಡಿಸಬೇಕೆಂಬ ಹಂಬಲ ಈಡೇರಿ ಪ್ರತೀ ವರ್ಷವೂ ಒಂದೊಂದು ರೇಷ್ಮೆ ಸೀರೆ ಕೊಡಿಸುವ ಖುಷಿಯನ್ನು ಹಂಚಿಕೊಳ್ಳುವ ಲೇಖಕರ ಸಂತೋಷ ಎಲ್ಲರದ್ದೂ ಆಗುವಷ್ಟು ಆಪ್ತ ಭಾವ ಇಲ್ಲಿ ವ್ಯಕ್ತವಾಗಿದೆ. ಸದಾಕಾಲ ಹೆತ್ತಮ್ಮನ ಸೆರಗಿಡಿದು ಓಡಾಡುತ್ತಿದ್ದ ಲೇಖಕನಿಗೆ ತನ್ನ ಆತ್ಮವಿಶ್ವಾಸ ಹೆಚ್ಚಿಸಿ ಧೈರ್ಯ ತುಂಬಿದ ಮೊದಲ ಕಿರುಪ್ರವಾಸದ ನೆನಪಿನಿಂದ ಪ್ರಾರಂಭವಾಗಿ, ಕ್ರಿಕೆಟ್ ಹುಚ್ಚನ್ನು ಹತ್ತಿಸಿಕೊಂಡು ಸುಲಭಕ್ಕೆ ಸಿಗುವ ತೆಂಗಿನ ಮಟ್ಟಿಯನ್ನೇ ಸಚಿನ್ನನ ಎಂ ಆರ್ ಎಫ್ ಬ್ಯಾಟಾಗಿಸಿಕೊಂಡದ್ದು, ಕ್ರೀಡಾಕೂಟವನ್ನು ಆಯೋಜಿಸಿ ಸಂಗ್ರಹಿಸಿದ್ದ ಬಹುಮಾನದ ಹಣದೊಂದಿಗೆ ಗೆಳೆಯರು ಪರಾರಿಯಾದಾಗ ಬಹುಮಾನಿತ ತಂಡಕ್ಕೆ ಕೂಡಿಟ್ಟಿದ್ದ ಸಗಣಿಯನ್ನೇ ಹರಾಜು ಹಾಕಿ ಹಣ ಹೊಂದಿಸಿ ಊರಿನ ಮರ್ಯಾದೆ ಕಾಪಾಡಿಕೊಂಡಿದ್ದು… ಸೈಕಲ್ ತುಳಿಯುವ ಆಸೆಯಿಂದ ತುಳಿಯಲು ಸೈಕಲ್ ಕೊಡಲು ನಿರಾಕರಿಸಿದ ಸ್ನೇಹಿತನ ಸೈಕಲ್ಲನ್ನು ಕಿಡ್ನಾಪ್ ಮಾಡಿದ ಪ್ರಸಂಗಗಳು ಓದುಗರಲ್ಲಿ ಮಂದಹಾಸವನ್ನು ಮೂಡಿಸುತ್ತವೆ.

ಕೇವಲ ಹಾಸ್ಯಕ್ಕೆ ಅಷ್ಟೇ ಸೀಮಿತವಾಗದೆ ‘ಮತ ಮಾರಿಕೊಂಡರೆ ಪ್ರಶ್ನಿಸುವ ಹಕ್ಕು ಒತ್ತೆಯಿಟ್ಟಂತೆ’ ಎಂಬ ಲೇಖನದಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಸಿದ್ದಾರೆ. ಜಾತಿ ಮೀಸಲಾತಿ, ಹಣ-ಹೆಂಡ ಹಂಚುವಿಕೆ ಮುಂತಾದ ಗಂಭೀರ ವಿಷಯಗಳ ಬಗ್ಗೆಯೂ ಲೇಖನಗಳು ಇಲ್ಲಿವೆ.
ತನಗೇನಾದರೂ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ನಿರ್ಮೂಲನೆಯ ಕನಸು ಹೊಂದಿರುವ ಲೇಖಕರು ಸಮಾಜದಲ್ಲಿ ತಾವು ಕಂಡ ಕೆಲವು ನಿಸ್ವಾರ್ಥ ಸೇವಕರ ಪರಿಚಯವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರಲ್ಲಿ ಸಂಬಂಧಿಕರೇ ಕೈಚೆಲ್ಲಿ ಕೂತಿರುವಾಗ ಸತ್ತವರ ಸಮಾಧಿಗಳನ್ನು ಸ್ವಚ್ಛಗೊಳಿಸಿ ಸ್ಮಶಾನವನ್ನು ಸಮೃದ್ಧಿಯನ್ನಾಗಿಸುವ ಕಾಯಕದಲ್ಲಿ ನಿರತರಾಗಿರುವ ಆಧುನಿಕ ಹರಿಶ್ಚಂದ್ರನೆಂದೇ ಹೆಸರಾದ ಅಡಿವೆಪ್ಪ ರವರ ಪರಿಚಯ ಮನಮುಟ್ಟುವಂತಿದೆ. ಕೆಲವು ಕೃಷಿ ಕಾಳಜಿಯ ಲೇಖನಗಳೂ ಈ ಪುಸ್ತಕದಲ್ಲಿದ್ದು ಬಹುತೇಕ ಲೇಖನಗಳು ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳ ಸಂಪಾದಕೀಯ ಕಾಲಂಗಳಲ್ಲಿ ಪ್ರಕಟಗೊಂಡಿರುವುದು ಲೇಖನಗಳಲ್ಲಿನ ಚರ್ಚಾ ವಿಷಯಗಳ ಗಾಂಭೀರ್ಯವನ್ನು ಎತ್ತಿ ತೋರಿಸುತ್ತವೆ.


“ಓದುತ್ತಾ ಓದುತ್ತಾ ಏನಾದರೂ ನೆನಪಾಗಿ ಬರೆಯಬೇಕೆನಿಸಿದೆ ಮಾತ್ರ ಬರೆಯುತ್ತಿದ್ದೆ” ಎಂದು ಹೇಳಿಕೊಂಡಿರುವ ತಮ್ಮ ಮನೋಧೋರಣೆಯನ್ನು ಲೇಖಕರು ಬದಲಾಯಿಸಿಕೊಂಡು ಬರವಣಿಗೆಯನ್ನೇ ಪ್ರವೃತ್ತಿಯಾಗಿಸಿಕೊಂಡು ಗಂಭೀರವಾಗಿ ಬರೆಯತೊಡಗಿದರೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಬೀಜವಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.

(ಕೃತಿ: ನಮ್ಮೂರ ಅಗಸ್ಯಾಗ, ಲೇಖಕರು: ಮಲ್ಲಪ್ಪ ಫ ಕರೇಣ್ಣನವರ, ಪ್ರಕಾಶಕರು : ಅವಿರತ ಪ್ರಕಾಶನ, ಪುಟಗಳು :144, ಬೆಲೆ : 125/-)

About The Author

ಪ.ನಾ.ಹಳ್ಳಿ ಹರೀಶ್ ಕುಮಾರ್

ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ