Advertisement
ಕನ್ನಡ ಕಾವ್ಯಮಾಲೆಯ ಕುಸುಮ: ಈರೆಳೆಯ ಕಿನ್ನರಿಯ

ಕನ್ನಡ ಕಾವ್ಯಮಾಲೆಯ ಕುಸುಮ: ಈರೆಳೆಯ ಕಿನ್ನರಿಯ

ಮಂಜೇಶ್ವರ ಗೋವಿಂದ ಪೈ ಅವರು 1883ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು. ಅವರ ತಂದೆ ಸಾಹುಕಾರ ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮ.   ಅವರು ಬಹುಭಾಷಾ ಕೋವಿದರು.  ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್, ಸಂಸ್ಕ್ಕತ, ಪಾಳಿ, ಬಂಗಾಲಿ, ಭಾಷೆಗಳ ನ್ನು ಅಭ್ಯಸಿಸಿದ್ದರು.  ಇವರ ಗ್ರಂಥಾಲಯದಲ್ಲಿ ೪೩ ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು. ಇವರ ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ. ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳ ಮತ್ತು ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ,  ಗುಜರಾತಿ, ಜರ್ಮನ್,  ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು.

‘ಗಿಳಿವಿಂಡು’, ‘ನಂದಾದೀಪ’ ಎಂಬ ಕಾವ್ಯ ಸಂಕಲನಗಳು,  ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ  ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. ‘ತಾಯಿ‘, ‘ಕಾಯಾಯ್ ಕೊಮಾಜಿ’ ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  
ಗಿಳಿವಿಂಡು, ನಂದದೀಪ, ಹೃದಯ ರಂಗ, ವಿಟಂಕ, ಇಂಗಡಲು (ಆಯ್ದ ಕವನಗಳು).  ಸಂಶೋಧಕರಾಗಿ, ಜಿಜ್ಞಾಸುವಾಗಿದ್ದ ಅವರು  ಅವರು ಕನ್ನಡದ ಪ್ರಥಮ ರಾಷ್ಟ್ರಕವಿ.  ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ,  ಅವರು ಬರೆದ ‘ಈರೆಳೆಯ ಕಿನ್ನರಿಯ’ ಕವನ  ಇಂದಿನ ಓದಿಗಾಗಿ. 

 

ಈರೆಳೆಯ ಕಿನ್ನರಿಯ

ಈರೆಳೆಯ ಕಿನ್ನರಿಯ
ನಿದನೆತ್ತಿ ನೀನೆರೆಯ
ನುಡಿಸುವಂದಂದಿಗೆನ್ನ
ಸಿಹಿವೋದು
ದಕಟ! ಜತೆಯೆಳೆಯದನ್ನ
ಸಂದಿಸದೆ,
ಇದನೆ ಮಿಡಿವೇಕೆ ಮುನ್ನ?

ಈರೆಳೆಯಿನಳವಳಿಸ
ಬಲ್ಲ ದನಿ ತಳಮಳಿಸ
ದಿಹುದೆ ಓರೆಳೆಗೆ ಸೆಳೆಯೆ?
ಅಮ್ಮುವುದೆ
ಇಮ್ಮಡಿಯ ನರಕೆ ತಳೆಯೆ?
ಮೇಣೊಂದೆ
ಕರೆಯಿಂದ ಹರಿವ ಹೊಳೆಯೆ?

ಇಂತೊಂದೆ ತಂತಿಯಿಂ
ಕಿರಿಚು ಅಶಾಂತಿಯಿಂ
ವಿಷಯಲಾಲಸೆಯಲ್ಲದೆ,
ಸುಸ್ವರಂ
ಮಿಸುಕಲಿದರಿಂ ಬಲ್ಲುದೆ?
ನಿನ್ನ ನಲಿ
ಗಾನಕಿನ್ನಿದು ಸಲ್ವುದೆ?

ಅಂತಾದೊಡೀ ಸರಿಯ
ನಿನಿಸು ತಳುವದೆ ತರಿಯ!
ಒಂದಿಸಿದನದರೊಂದಿಗೆ
ಕ್ರಂದಿಪುದು
ಸಂದುದರ ಮರುಸಂದಿಗೆ
ಬಂಧನವ
ಬಾರಿಸೆರೆಯಾ ಬಂದಿಗೆ!

ಅಲ್ಲದೊಡೆ, ಈ ತಂತಿ
ನೀಚಗತಿಯಿಂ ಕಂತಿ
ಕಿರಿಸ್ವರಕೆ ಕೊಸರದಂತೆ
ಸಂಯಮದ ಏಕತಾನತೆಗಿದಂ ತೇ
ರೈಸೊಡೆಯ-
ನೀ ಎಂದೆ ನಿನದಿಪಂತೆ!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ