Advertisement
ಪಂಜಾಬಿಗೆ ಹೋಗಿ ಲಸ್ಸಿ ಕುಡಿಯದಿರೆ ಮೆಚ್ಚನಾ ಪರಮಾತ್ಮನು

ಪಂಜಾಬಿಗೆ ಹೋಗಿ ಲಸ್ಸಿ ಕುಡಿಯದಿರೆ ಮೆಚ್ಚನಾ ಪರಮಾತ್ಮನು

ಅಮೃತಸರ ಸಿಖ್ಖರ ಮುಖ್ಯ ಸ್ಥಳವಾದರೂ ಇಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಇದೆ ಲವ-ಕುಶರ ಜನ್ಮಸ್ಥಾನ. ಈಗ ಅದನ್ನು ರಾಮತೀರ್ಥ ಮಂದಿರ ಎಂದು ಗುರುತಿಸಲಾಗಿದೆ. ಅಲ್ಲೊಂದು ಸಣ್ಣ ಗುಡಿ ಇದೆ. ಅದರ ಮುಂದೆ ಕುಳಿತಿದ್ದ ಹಿರಿಯರೊಬ್ಬರು ‘ಇಲ್ಲಿಗೆ ಯಾರೂ ಬರುವುದೇ ಇಲ್ಲ ಅದಕ್ಕೇ ನಿತ್ಯ ಪೂಜೆಯೂ ಇಲ್ಲ’ ಎಂದರು. ಸಲಾಕೆಯಿಂದ ಮಾಡಿದ್ದ ಬಾಗಿಲಿಗೆ ಬೀಗ ಹಾಕಿತ್ತು. ಒಳಗಿನ ಕತ್ತಲೆ ಲವ, ಕುಶ, ರಾಮ, ಸೀತೆ ಯಾರೊಬ್ಬರ ಮೂರ್ತಿಯನ್ನೂ ತೋರಗೊಡಲಿಲ್ಲ. ಆದರೂ ನಂಬಿಕೆಗೆ ನಮಸ್ಕಾರ ಮಾಡುವ ಸಂಸ್ಕಾರವನ್ನು ಬಿಡಲಾಗಲಿಲ್ಲ.
ಅಂಜಲಿ ರಾಮಣ್ಣ ಬರೆಯುವ “ಕಂಡಷ್ಟು ಪ್ರಪಂಚ” ಪ್ರವಾಸ ಅಂಕಣ

ಪ್ರವಾಸದಲ್ಲಿ ಆಸಕ್ತಿಯಿದೆ ಎನ್ನುವವರ ಖಚಿತ ಭೇಟಿ ತಾಣ ಅಮೃತಸರ. ನಾನೂ ಹೋದೆ. ಚಂದದ ಊರು. ಒಂದು ರೀತಿ ತವರೂರಿನ ಕಡೆಗೆ ಇರುವ ಸೆಳೆತ ಹೊತ್ತು ನಿಂತ ಸಿಖ್ಖರ ನಗರ. ಅಲ್ಲಿಗೆ ಹೋದವರು ಮೊದಲು ನೋಡ ಹೋಗುವುದು ಸ್ವರ್ಣ ಮಂದಿರವನ್ನು. ಒಮ್ಮೆಗೆ 10 ಲಕ್ಷ ಜನರನ್ನು ತನ್ನೊಳಗೆ ಇರಲು ಜಾಗ ಕೊಡಬಲ್ಲ ಪವಿತ್ರ ತಾಣ. ನಿಘಂಟಿನಲ್ಲಿ ನಿರುಮ್ಮಳತೆ ಎನ್ನುವ ಪದಕ್ಕೆ ಅರ್ಥ ಕೊಟ್ಟಿದ್ದೇ ಇಲ್ಲಿನ ವಾತಾವರಣವೇನೋ! ಸ್ವಚ್ಛತೆಯೇ ಮೂರ್ತಿವೆತ್ತಂತಹಾ ನೋಟ-ಮಾಟ. ಸಣ್ಣ ದನಿಯಲ್ಲಿ ಹೃದಯಕ್ಕೆ ನೇರವಾಗಿ ತಾಕುವ ಮಟ್ಟದಲ್ಲಿ ಕೇಳಿಸುವ ಗುರ್ಬಾನಿ (ಗುರುವಾಣಿ). ಬೊಗಸೆಯಲ್ಲೂ ಭಕ್ತಿಯ ಭಾವ ಜಾಗೃತಗೊಳಿಸುವ ‘ಕಡಾ ಪ್ರಸಾದ’ (ಬೆಲ್ಲದಲ್ಲಿ ಮಾಡಿದ ಸಜ್ಜಿಗೆ). ಊಹೆಗಿಂತಲೂ ಸುಂದರ ಎನಿಸುವ ಒಂದೇ ವಾಸ್ತವ ಸ್ವರ್ಣ ಮಂದಿರ.

ಹಬ್ಬವಿಲ್ಲದ ಮಾಮೂಲಿ ದಿನದಲ್ಲಿ 24 ಗಂಟೆಗಳ ಕಾಲ ಕನಿಷ್ಠ 2 ಲಕ್ಷ ಜನಕ್ಕೆ ಲಂಗರು (ದಾಸೋಹ) ನಡೆಸುವ ದೇವಸ್ಥಾನದ ಸಮಸ್ತ ಕಾರ್ಯವೂ ಸ್ವಂಸೇವಕರಿಂದ ನಡೆಯುತ್ತದೆ. ತರಕಾರಿ ಹೆಚ್ಚಿ, ರೊಟ್ಟಿ ತಟ್ಟಿ, ಅಡುಗೆ ಮಾಡಿ, ಪಾತ್ರೆ ತೊಳೆದು, ತಟ್ಟೆ ಹಾಕಿ, ಬಡಿಸಿ, ಬಚ್ಚಲು ತೊಳೆದು, ಚಪ್ಪಲಿ ಕಾದು, ಗುಡಿಸಿ, ಒರೆಸಿ, ವೃದ್ಧರ ಊರುಗೋಲಾಗಿ, ಧೂಳು ತೆಗೆದು ಪುಣ್ಯದ ಚೀಲವನ್ನು ತುಂಬಿಸಿಕೊಳ್ಳಬೇಕೆನ್ನುವ ಆಕಾಂಕ್ಷಿಗಳು ತಮ್ಮ ಸರದಿಯನ್ನು ಮೊದಲೇ ಕಾದಿರಿಸಬೇಕು. ಅಡುಗೆ ಮನೆಯಲ್ಲಿನ ಯಾವುದೇ ಕೆಲಸಕ್ಕೂ 2 ರಿಂದ 3 ವರ್ಷಗಳ ಕಾಲ ಮೊದಲೇ ನೊಂದಾಯಿಸಿಕೊಂಡಿರಬೇಕು. ಸ್ವರ್ಣ ಮಂದಿರದ ಅಡುಗೆಮನೆಯ ಕಾರ್ಯವೈಖರಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅಧ್ಯಯನ ವಿಷಯವಾಗಿದೆ. ಪ್ರವಾಸಿಗರಿಗೆ ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ. ಒಳಗೆ ಹೋಗಬೇಕೆಂದರೆ ಸಕಾರಣ ನೀಡಿ ಜಿಲ್ಲಾಧಿಕಾರಿಗಳಿಂದ ಲಿಖಿತ ಒಪ್ಪಿಗೆ ಪಡೆದಿರಬೇಕು.

ಅಂತಹ ಪತ್ರ ಕೈಯಲ್ಲಿ ಹಿಡಿದೇ ಅಡುಗೆ ಕೋಣೆ ಪ್ರವೇಶಿಸಿದೆ. ಫೋಟೊ ತೆಗೆದುಕೊಳ್ಳುತ್ತಾ, ಅಲ್ಲಿದ್ದವರ ಜೊತೆ ಮಾತನಾಡುತ್ತಾ ಮುಂದ್ಮುಂದೆ ಹೋಗುತ್ತಿದ್ದಾಗ ಪರಿಚಯ ಆಗಿದ್ದು ಮನ್ದೀಪ್ ಎನ್ನುವ ಮಧ್ಯ ವಯಸ್ಸಿನ ಮಹಿಳೆ. ಚಪಾತಿ ಒತ್ತುತ್ತಿದ್ದಾಕೆ ಹೆಚ್ಚೇ ಮೌನಿ, ಮಾತು ಆಡಿದ್ದು ಮಾತ್ರ ಮಂದ್ರ ಸ್ಥಾಯಿಯಲ್ಲಿ. “ನಾನು ಒತ್ತಲೇ?” ಎಂದು ಹಿಂಜರಿಕೆಯಲ್ಲಿಯೇ ಕೇಳಿದೆ. ಅದು ಯಾವ ಜನ್ಮದ ಋಣಕ್ಕೋ ಆಕೆ ಲಟ್ಟಣಿಗೆಯನ್ನು ಕೊಟ್ಟರು. ಪಾಪ ಕಳೆದುಕೊಂಡೆನೋ, ಪುಣ್ಯ ಗಳಿಸಿಕೊಂಡೆನೋ ಗೊತ್ತಿಲ್ಲ, ಮೂರು ಸಣ್ಣ ಚಪಾತಿ ಒತ್ತಿ ಆ ಘಳಿಗೆಯನ್ನು ಗೆದ್ದಿದ್ದಂತೂ ನಿಜ. ಸಂಕೋಚದ ಸುರಳಿಯಂತಿದ್ದಾಕೆ ತಮ್ಮ ಕೆಲಸ ಮುಂದುವರೆಸಿದರು.

ಅಮೃತಸರ ಎಂದರೆ ಖಂಡಿತವಾಗಿ ಭೇಟಿಯಾಗುವ ಮತ್ತೊಂದು ಜಾಗ ‘ವಾಘಾ ಬಾರ್ಡರ್’, ನೋಡಿಯೇ ನೋಡುವುದು ಅಲ್ಲಿ ನಡೆಯುವ ಭಾರತ-ಪಾಕಿಸ್ತಾನಗಳ ಸಂಜೆಯ ಪೆರೇಡ್. ಬಹುತೇಕ ವಾಘಾ ಬಾರ್ಡರ್ ಎಂದೇ ಪ್ರಚಾರ ಪಡೆದಿರುವ ಸ್ಥಳ ಇರುವುದು ಪಾಕಿಸ್ತಾನದಲ್ಲಿ. ವಾಘ ಅವರ ಹಳ್ಳಿಯಾದರೆ, ಇತ್ತಕಡೆ ನಮ್ಮದು ಅಠಾರಾ ಎನ್ನುವ ಗ್ರಾಮ. ನಮ್ಮಲ್ಲಿಂದ ಅಲ್ಲಿಗೆ ವ್ಯಾಪಾರಕ್ಕೆ ಹೋಗುವ ಟ್ರಕ್‌ಗಳು ಸಂಜೆ 6 ಗಂಟೆಯ ನಂತರ ಪ್ರಯಾಣ ಸ್ಥಗಿತವಾದಾಗ ತಂಗುವ ಹಳ್ಳಿ ಅಠಾರ. ಮರಗೆಲಸಕ್ಕೆ ಹೆಸರುವಾಸಿಯಾದ ಹಳ್ಳಿಗೆ ಪ್ರವಾಸಿಗರು ಹೋಗುವುದು ಎರಡು ದೇಶಗಳ ನಡುವೆ ನಾಟಕೀಯವಾಗಿ ನಡೆಯುವ ಪೆರೇಡ್ ನೋಡಲು ಮಾತ್ರ. ಗೂಗಲ್‌ನಲ್ಲಿ ಇದರ ಬಗ್ಗೆ ಬೇಕಾದ, ಬೇಡವಾದ, ನಿಜದ, ಅತಿರಂಜನೀಯವಾದ ಮಾಹಿತಿ ಲಭ್ಯವಿದೆ. ಆದರೆ ನನ್ನ ಉತ್ಸಾಹ ಹೆಚ್ಚಿಸಿದ್ದು ಅಠಾರ ಹಳ್ಳಿ ಸುತ್ತುತ್ತಿದ್ದಾಗ ಕಂಡ ಸರ್ದಾರ್ ಶಾಮ್‌ಸಿಂಘ್ ಅಠಾರಿವಾಲ ಮೆಮೋರಿಯಲ್.

ಲಾಹೋರ್ ಮತ್ತು ಅಮೃತಸರದ ನಟ್ಟನಡುವೆ ಇರುವ ಅಠಾರ ಹಳ್ಳಿಯಲ್ಲಿ ಹುಟ್ಟಿ ಬೆಳೆಯುತ್ತಿದ್ದ ಶಾಮ್‌ಸಿಂಘ್ ಎನ್ನುವ ಯುವಕ ತನ್ನ ಧೈರ್ಯ ಸಾಹಸ ಪ್ರವೃತ್ತಿಯಿಂದ ಮಹಾರಾಜ ರಂಜಿತ್‌ಸಿಂಘ್‍ನ ಗಮನ ಸೆಳೆದಿದ್ದನಂತೆ. ಅದಕ್ಕೇ ಮಹಾರಾಜ ತನ್ನ ಸೇನೆಯಲ್ಲಿ ಆತನಿಗೆ ಜೆನೆರಲ್ ಸ್ಥಾನ ನೀಡಿದ್ದನಂತೆ. 1846ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಶಾಮ್‌ಸಿಂಘ್ ಬಗ್ಗೆ ಅಠಾರದಲ್ಲಿ ಒಂದು ಮ್ಯೂಸಿಯಮ್ ಇದೆ. ಆತನ ಸಮಾಧಿಯೂ ಅಲ್ಲಿದೆ. ಇವತ್ತಿಗೂ ಸರ್ಕಾರ ಆತನ ಹೆಸರಿನ ಟ್ರಸ್ಟ್‌ಗೆ ಬಜೆಟ್‌ನಲ್ಲಿ ಸಹಾಯಧನ ಘೋಷಿಸುತ್ತದೆ. ಆತನ ಹೆಸರಿನಲ್ಲಿ ಆ ಹಳ್ಳಿಯಲ್ಲಿ ಆಸ್ಪತ್ರೆ ಶಾಲೆಗಳು ನಡೆಯುತ್ತಿವೆ.

(ರಾಮತೀರ್ಥ ಮಂದಿರ)

ಅಮೃತಸರ ಸಿಖ್ಖರ ಮುಖ್ಯ ಸ್ಥಳವಾದರೂ ಇಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಇದೆ ಲವ-ಕುಶರ ಜನ್ಮಸ್ಥಾನ. ಈಗ ಅದನ್ನು ರಾಮತೀರ್ಥ ಮಂದಿರ ಎಂದು ಗುರುತಿಸಲಾಗಿದೆ. ಅಲ್ಲೊಂದು ಸಣ್ಣ ಗುಡಿ ಇದೆ. ಅದರ ಮುಂದೆ ಕುಳಿತಿದ್ದ ಹಿರಿಯರೊಬ್ಬರು ‘ಇಲ್ಲಿಗೆ ಯಾರೂ ಬರುವುದೇ ಇಲ್ಲ ಅದಕ್ಕೇ ನಿತ್ಯ ಪೂಜೆಯೂ ಇಲ್ಲ’ ಎಂದರು. ಸಲಾಕೆಯಿಂದ ಮಾಡಿದ್ದ ಬಾಗಿಲಿಗೆ ಬೀಗ ಹಾಕಿತ್ತು. ಒಳಗಿನ ಕತ್ತಲೆ ಲವ, ಕುಶ, ರಾಮ, ಸೀತೆ ಯಾರೊಬ್ಬರ ಮೂರ್ತಿಯನ್ನೂ ತೋರಗೊಡಲಿಲ್ಲ. ಆದರೂ ನಂಬಿಕೆಗೆ ನಮಸ್ಕಾರ ಮಾಡುವ ಸಂಸ್ಕಾರವನ್ನು ಬಿಡಲಾಗಲಿಲ್ಲ.

ಸ್ವರ್ಣಮಂದಿರದಂತೆಯೇ ಕಾಣುವ ಒಂದು ದೇವಸ್ಥಾನ ದುರ್ಗಿಯಾನ ಮಂದಿರ. ಇದರೊಳಗಿನ ಕಲ್ಯಾಣಿಯಲ್ಲಿ ಲಕ್ಷ್ಮಿ ನಾರಾಯಣರು ತಮ್ಮ ಹಸನಾದ ಸಮಯದಲ್ಲಿ ಮುಳುಗೆದ್ದಿದ್ದರು ಎನ್ನುವ ಪೌರಾಣಿಕ ಹಿನ್ನಲೆಯೂ ಇದಕ್ಕಿದೆ. ತೀರಾ ಇತ್ತೀಚೆಗೆ ಅಂದರೆ 1989ರಲ್ಲಿ ಸಂತೆ ಲಾಲ್ ದೇವಿಯವರ ನೆನಪಿನಲ್ಲಿ ನಿರ್ಮಾಣವಾಗಿರುವ ಲಾಲ್ ದೇವಿ ಮಂದಿರದ ದೇವಿಯನ್ನು ವೈಷ್ಣೋ ದೇವಿಯ ಅವತಾರ ಎನ್ನಲಾಗುತ್ತದೆ. ಶಕ್ತಿ ಸಿದ್ಧ ಪೀಠಗಳಲ್ಲಿ ಇದೂ ಒಂದು ನಂಬುತ್ತಾರೆ ಭಕ್ತಾದಿಗಳು. ಗುಹೆಯೊಳಗೆ ಇಳಿದಿಳಿದು ಹೋಗಬೇಕು. ಅಕ್ಕ ಪಕ್ಕ ಸರಿಸುಮಾರು ಎಲ್ಲಾ ದೇವರಿನ ವಿಗ್ರಹಗಳನ್ನೂ ಇರಿಸಲಾಗಿದೆ. ಸ್ಥಳೀಯರಿಗೆ ವಾರಾಂತ್ಯದ ಮನೋರಂಜನೆಯ ಜಾಗವೇನೋ ಎನಿಸಿಬಿಡುತ್ತದೆ.

ಅಡುಗೆ ಮನೆಯಲ್ಲಿನ ಯಾವುದೇ ಕೆಲಸಕ್ಕೂ 2 ರಿಂದ 3 ವರ್ಷಗಳ ಕಾಲ ಮೊದಲೇ ನೊಂದಾಯಿಸಿಕೊಂಡಿರಬೇಕು. ಸ್ವರ್ಣ ಮಂದಿರದ ಅಡುಗೆಮನೆಯ ಕಾರ್ಯವೈಖರಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅಧ್ಯಯನ ವಿಷಯವಾಗಿದೆ. ಪ್ರವಾಸಿಗರಿಗೆ ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ.

ಪಂಜಾಬಿನ ಯಾವುದೇ ಊರಿಗೆ ಹೋದರೂ ಲಸ್ಸಿ ಕುಡಿಯದೆ ಬಂದರೆ ಮೆಚ್ಚನಾ ಗುರು ಗೋಬಿಂದನು. ಅದಕ್ಕೇ ನನ್ನ ಮಾರ್ಗದರ್ಶಿ ಗೌತಮ್ ಕರೆದುಕೊಂಡು ಹೋಗಿದ್ದು, ಗ್ಯಾನ್ ಚಂದ್ ಲಸ್ಸಿವಾಲೆ ಅಂಗಡಿಗೆ. ಆಹಾ, ಎಷ್ಟೂಂತ ಹೇಳಲಿ ಅಲ್ಲಿನ ಲಸ್ಸಿ ರುಚಿಯನ್ನು! ಊಟ ಎಲ್ಲಿ ಮಾಡೋದು ಎಂದು ಕೇಳುತ್ತಿದ್ದಂತೆ ‘ನಡೀರಿ ಸೀದಾ ‘ಭರ್ವಾನ್ ಕಾ ಢಾಬಾ’ಗೆ’ ಎಂದನವ. ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿದ್ದ ಈ ಢಾಭಾ ಈಗ ಅಣ್ಣ ತಮ್ಮನ ನಡುವೆ ಆಸ್ತಿಯಾಗಿ ಪಾಲಾಗಿದೆ. ಅದಕ್ಕೇ ಇದರ ಪಕ್ಕದ ಗೋಡೆಯಲ್ಲಿಯೇ ಹಿರಿಯ ಸಹೋದರ ನಡೆಸುತ್ತಿದ್ದಾರೆ ‘ಬ್ರದರ್ಸ್ ಢಾಭಾ’. ಊಟಪ್ರೇಮಿಗಳ ಸ್ವರ್ಗ, ಇಂದ್ರಲೋಕ ಎಲ್ಲವೂ ಇಲ್ಲೇ.

ಇದು ಜಲಿಯನ್‌ವಾಲಾ ಭಾಗ್. ಅಗಾಧ ಸಾರ್ವಜನಿಕ ಸಭೆ ನಡೆದ ಈ ಸ್ಥಳಕ್ಕೆ ಇರುವ ಮುಖ್ಯದ್ವಾರ ಮಾತ್ರ ಒಂದು ಓಣಿಯಂತೆ. ಅಕ್ಕಪಕ್ಕದಲ್ಲಿ ಇಬ್ಬರು ಗೆಳೆಯರು ಕೈ ಹಿಡಿದು ಹೋಗಲೂ ಆಗದಷ್ಟು ಕಿರಿದಾದದ್ದು. ಅಮೃತಸರದ ಸ್ವರ್ಣ ಮಂದಿರದಿಂದ ಕೈಯಳತೆಯಲ್ಲಿರುವ ಅದೊಂದು ಆರುವರೆ ಎಕರೆ ಅಳತೆಯ ಮೈದಾನ. ಅದರ ಎಡಕ್ಕೆ ಆತುಕೊಂಡಿದೆ ನೂರಕ್ಕೂ ಹೆಚ್ಚಿನಡಿ ಆಳ ಇರೋ ಒಂದು ಬಾವಿ. 1919 ಏಪ್ರಿಲ್ 13 ಆ ದಿನ. ಪಂಜಾಬಿನ ಸಂಕ್ರಾಂತಿ ಎನಿಸಿಕೊಳ್ಳೋ ಬೈಸಾಖಿ ಹಬ್ಬ. 1699ರಲ್ಲಿ ಈ ದಿನದಂದೇ ಗುರು ಗೋಬಿಂದ್ ಸಿಂಗರು “ಗುರುವಿನ ಗುಲಾಮನಾಗುವ ತನಕ ನಿಲ್ಲದಿರಿ ತ್ಯಾಗಕ್ಕೆ ಸನದ್ಧರಾಗಿ” ಎಂದು ಸಿಖ್ಖರಿಗೆ ಕರೆಕೊಟ್ಟಿದ್ದು. ಪ್ರತೀ ಸಿಕ್ಖರ ಮನೆಯಲ್ಲೂ ಸಂಭ್ರಮ. ಬ್ರಿಟೀಷ್ ಆಡಳಿತದ ದೌರ್ಜನ್ಯದ ತುಟ್ಟತುದಿಯ ಕಾಲ. ಆದರೂ ಸಡಗರಕ್ಕೇನಿರಲಿಲ್ಲ ಕೊರತೆ ಯಾಕೆಂದರೆ ಅಲ್ಲಿದ್ದ ಪ್ರತಿಯೊಬ್ಬನೂ ಸ್ವಾತಂತ್ರ್ಯ ಸೇನಾನಿ.

ಬಿಸಿಲು ಇಳಿಮುಖವಾದಮೇಲೆ ಸುಮಾರು ಹದಿನೈದಿಪ್ಪತ್ತು ಸಾವಿರ ಸೇನಾನಿಗಳು ಈ ಮೈದಾನದಲ್ಲಿ ಸೇರಿ ಸ್ವಾತಂತ್ರ್ಯದೆಡೆಗೆ ಮುಂದಿನ ನಡೆಯ ಬಗ್ಗೆ ತಮ್ಮ ನಾಯಕರುಗಳಿಂದ ಮಾರ್ಗದರ್ಶನ ಪಡೆಯೋದಿತ್ತು. ಆಗತಾನೆ ಮಹಾತ್ಮ ಗಾಂಧಿಯವರು ದೇಶಕ್ಕೆಲ್ಲಾ ಸತ್ಯಾಗ್ರಹದ ಕರೆಕೊಟ್ಟಿದ್ದರು, ಬೆಂಬಲ ಸೂಚಿಸಲು ವೇದಿಕೆ ಸಜ್ಜಾಗಿತ್ತು. ಸಂಜೆ 4 ಗಂಟೆಗೆ ಪಂಜಾಬ್ ಪ್ರಾಂತ್ಯದ ಪ್ರಭಾವಿ ನಾಯಕರು ವೇದಿಕೆಯನ್ನೇರಿದ್ದರು. ಭಾರೀ ಸಂಖ್ಯೆಯ ಸ್ವಾತಂತ್ರ್ಯ ಪ್ರೇಮಿಗಳು ಯುವಕರು, ಮಕ್ಕಳು, ಮಹಿಳೆಯರು ಹೀಗೆ ವಯಸ್ಸಿನ ಬೇಧವಿಲ್ಲದೆ ಪ್ರೇಕ್ಷಕರಾಗಿದ್ದರು.

ಸಭೆ ಆರಂಭವಾಗಿ ಕೆಲ ನಿಮಿಷಗಳಷ್ಟೇ ಆಗಿತ್ತು. ಜೆನೆರಲ್ ಡೈರ್ ತನ್ನ 150 ಜನ ಸೇವಕರು ಮತ್ತು ಮದ್ದು ಗುಂಡನ್ನೊಳಗೊಂಡ ತುಪಾಕಿಗಳೊಂದಿಗೆ ಅಲ್ಲಿ ಬಂದೇಬಿಟ್ಟ. ಅರೆಕ್ಷಣವೂ ತಾಳದೆ ಹಿಂದೆ ಮುಂದೆ ನೋಡದೆ “ಫೈರ್..” ಎಂದು ಆಜ್ಞಾಪಿಸಿದ. ಮಾರಣಹೋಮದ ಜ್ವಾಲೆ ಕಾಡ್ಗಿಚ್ಚಿನಂತೆ ಹರಿಹರಿದು ಸರಿದು ಇಡೀ ಮೈದಾನವನ್ನು ಆಕ್ರಮಿಸಿಕೊಂಡಿತು. ಕಾಲ್ತುಳಿತ, ಕೂಗು, ಕಿರುಚಾಟ, ಅರುಚಾಟ, ಗೋಳು ಮುಗಿಲು ಮುಟ್ಟಿ ಆಕ್ರಂದನವಾಗಿ ಭೂಮಿಗೆ ಅಪ್ಪಳಿಸುತ್ತಿತ್ತು. 1650 ಸುತ್ತಿನ ಮೃಗೀಯ ಫೈರಿಂಗ್. ಕಣ್ಣ್ರೆಪ್ಪೆ ಅಲುಗುವುದರಲ್ಲಿ ಪರಲೋಕದ ಬಾಗಿಲು ಬಡಿದವರೆಷ್ಟೋ. ಸಿಕ್ಕಿರುವ ಲೆಕ್ಕದಂತೆ 3370 ಜನರು ಶವವಾಗಿದ್ದು ಕ್ಷಣ ಮಾತ್ರದಲ್ಲಿ. ಪ್ರಾಣ ರಕ್ಷಣೆ ಮಾಡಿಕೊಂಡು ದೇಶ ಸಂರಕ್ಷಣೆಗಾಗಿ ಹೋರಾಡಬೇಕೆನ್ನುವ ಆಸೆಯಲ್ಲಿ ಸರಿ ಸುಮಾರು 120 ಜನರು ಹೋಗಿ ಧುಮುಕಿದ್ದು ಈ ಬಾವಿಗೆ. ವಿಧಿಯ ಗೆಲುವಿಗೆ ರಕ್ತವಾದ ಬಾವಿ ನೀರು ಇಂದು ಈ ದೇಶದ ಎಂದೂ ಮರೆಯಲಾಗದ ಕಥೆಗೆ ಸಾಕ್ಷಿ ಹೇಳುತ್ತಿದೆ.

(ಉದಮ್ ಸಿಂಘ್)

000ದ ನವೆಂಬರ್ 25ರಂದು ಭಾರತೀಯ ತೈಲ ನಿಗಮ ಅಮರ್ ಜ್ಯೋತಿಯನ್ನು ಆರಂಭಿಸಿದ್ದು ಈ ದಿನದವೆರೆಗೂ ಅಹರ್ನಿಶೆ ಉರಿಯುವಂತೆ ನೋಡಿಕೊಳ್ಳುತ್ತಿದೆ. ಒಂದು ಮ್ಯೂಸಿಯಮ್ ಕೂಡ ಅಲ್ಲಿದೆ. ಆ ದಿನ ಭಾಗವಹಿಸಿದ್ದ ಸ್ವಾತಂತ್ರ್ಯಾಕಾಂಕ್ಷಿಗಳಿಗೆ ನಾಯಕರುಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಮತ್ತೊಬ್ಬ ಯುವಕ ಉದಮ್ ಸಿಂಘ್. ಬಾಲ್ಯದಲ್ಲೇ ಅನಾಥನಾಗಿ ಸಿಖ್ಖರ ಆಶ್ರಮದಲ್ಲಿ ಬೆಳೆದು ದೇಹದ ಕಣ ಕಣದಲ್ಲೂ ಸ್ವಾತಂತ್ರ್ಯದ ತುಡಿತ ತುಂಬಿಕೊಂಡಿದ್ದವ. ಕಣ್ಮುಂದೆಯೇ ನಡೆದ ಬ್ರಿಟೀಷರ ದೌರ್ಜನ್ಯಕ್ಕೆ ಸೇಡಿನ ಕುದಿಯನ್ನು ತನ್ನೊಳಗೇ ಅಡಗಿಸಿಟ್ಟುಕೊಂಡು ಅಧಿಕಾರಿಗಳ ಕಣ್ತಪ್ಪಿಸಿ ಇಂಗ್ಲೆಂಡಿಗೆ ಓಡಿಹೋಗಿ ಅಲ್ಲಿ ಬಂಧಿಯಾಗಿ ಮತ್ತೆ ಭಾರತಕ್ಕೆ ಕರೆತರಲ್ಪಟ್ಟ ಸ್ವಾತಂತ್ರ್ಯ ಸೇನಾನಿ. ಕಾರಗೃಹದಿಂದ ಪರಾರಿಯಾಗಿ ಲಂಡನ್ ಸೇರಿ 1940ರ ಮಾರ್ಚ್ 13ರಂದು ಮೈಕಲ್ ಡೈರ್ನ್‌ ಮೇಲೆ ಗುಂಡು ಹಾರಿಸಿ ಅವನ ಸಾವಿಗೆ ಕಾರಣವಾಗಿ ಸೇಡು ತೀರಿಸಿಕೊಂಡ ಈತನನ್ನು ಅದೇ ವರ್ಷದ ಜುಲೈ 31ರಂದು ಲಂಡನ್ನಿನಲ್ಲೇ ಗಲ್ಲಿಗೇರಿಸಲಾಯ್ತು. 34 ವರ್ಷಗಳ ಬಳಿಕ ಉದಮ್ ಸಿಂಘ್‌ನ ಅಸ್ಥಿಯನ್ನು ಭಾರತಕ್ಕೆ ತಂದು ಸಕಲ ಗೌರವಗಳೊಂದಿಗೆ ವಿಸರ್ಜಿಸಲಾಯ್ತು.

ಅತ್ತರ್ ಕೌರಳನ್ನು ಸ್ಮರಿಸದಿದ್ದರೆ ಸ್ವಾತಂತ್ರ್ಯ ಸಂಗ್ರಾಮದ ಪ್ರಯಾಣ ಅಪೂರ್ಣವೇ ಸರಿ. ಸಂಗ್ರಾಮದಲ್ಲಿ ನಿಸ್ವಾರ್ಥದಿಂದ ತೊಡಗಿಕೊಂಡಿದ್ದ ಭಾಗ್ಮಲ್ ಭಾಟಿಯ ಎನ್ನುವ ವ್ಯಾಪಾರಿಯ ಹೆಂಡತಿ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನ ಎರಡು ಮಕ್ಕಳ ತಾಯಿ ಈಕೆ ಮೂರನೇ ಕೂಸನ್ನು ಗರ್ಭದಲ್ಲಿ ಹೊತ್ತಿದ್ದಳು. ಹಬ್ಬದ ಸಡಗರದಲ್ಲಿದ್ದವಳಿಗೆ ಗರಬಡಿದಂತೆ ಬಂದ ಸುದ್ಧಿ ಗುಂಡು ತಾಗಿ ಗಂಡ ಮರಣಿಸಿದ್ದಾನೆಂದು. ಭಾಟಿಯಾರ ದೇಹದಲ್ಲಿ ಕೊನೆಯುಸಿರಿರುವವರೆಗೂ ಉಳಿಸಿಕೊಳ್ಳಲು ಪ್ರಯತ್ನ ಪಟ್ಟು ಸೋತಾಗ ಧೃತಿಗೆಡದೆ ಮೂರು ಮಕ್ಕಳನ್ನು ಸಲುಹಿ ಸ್ವಾತಂತ್ರ್ಯಯೋಧರನ್ನಾಗಿಸಿದ ಮಹಾತಾಯಿ ಅತ್ತರ್ ಕೌರ್. ಬ್ರಿಟೀಷ್ ಸರ್ಕಾರ ನೀಡ ಬಯಸಿದ್ದ ಪರಿಹಾರ ಧನವನ್ನು ನಿರಾಕರಿಸಿ, ಸ್ವಾತಂತ್ರ್ಯ ಯೋಧರ ಕುಟುಂಬಕ್ಕೆ ಬರುವ ಪಿಂಚಣಿಯನ್ನೂ ತಿರಸ್ಕರಿಸಿದ್ದ ಸ್ವಾಭಿಮಾನಿ ಮಹಿಳೆ.

(ಅತ್ತರ್ ಕೌರ್‌)

ಈ ನರಮೇಧದ ಪ್ರತ್ಯಕ್ಷ ಸಾಕ್ಷಿ ಡಾ. ಯು.ಎನ್.ಮುಖರ್ಜಿ. ವೃತ್ತಿಯಿಂದ ವೈದ್ಯರಾಗಿದ್ದ ಇವರು ಬಾಲ್ಯದಿಂದಲೇ ಸ್ವಾತಂತ್ರ್ಯ ಸಂಗ್ರಾಮದ ಗೀಳು ಹಚ್ಚಿಸಿಕೊಂಡಿದ್ದವರು. ಕಲ್ಕತ್ತೆಯಿಂದ ಸ್ವಾತಂತ್ರ್ಯ ಸೇನಾನಿಗಳ ಸೇವೆಗಾಗಿಯೇ ಅಮೃತಸರಕ್ಕೆ ಬಂದು ನೆಲೆಸಿದ್ದವರು. ಆ ದಿನ ಜನಜಂಗುಳಿಯಲ್ಲಿ ಬಾಯಾರಿ ಬೇಯುವ ಜನಗಳಿಗೆ ನೀರುಣಿಸುತ್ತಿದ್ದ ಇವರು ಜೆನೆರಲ್ ಡೈರ್ನ್‌ ರೌದ್ರಾವತಾರದಿಂದ ಹೇಗೋ ತಪ್ಪಿಸಿಕೊಂಡು ಬದುಕುಳಿದವರು. ಹತ್ಯಾಕಾಂಡದ ಈ ಮೈದಾನವನ್ನು ರಾಷ್ಟ್ರೀಯ ಸ್ಮಾರಕವಾಗಿ ರೂಪಿಸಬೇಕೆಂದು ಗಾಂಧಿಜಿಯವರಿಗೆ ಮನವಿಮಾಡಿಕೊಂಡು ಒಪ್ಪಿಗೆ ಪಡೆದು, ಮನೆಮನೆಗೂ ಕಾಲ್ನಡಿಗೆಯಲ್ಲಿ ತಿರುಗಾಡಿ 11000 ರೂಪಾಯಿಗಳ ಚಂದಾ ಸಂಗ್ರಹಿಸಿ 5000 ರೂಪಾಯಿಗಳಿಗೆ ಈ ಮೈದಾನವನ್ನು ಸರ್ಕಾರದಿಂದ ಹರಾಜಿಗೆ ಪಡೆದು ಉಳಿದ ಹಣದಲ್ಲಿ ಸ್ಮಾರಕ ನಿರ್ಮಿಸಿದ ಮಹನೀಯರು ಡಾ.ಯು.ಎನ್.ಮುಖರ್ಜಿ.

ಈ ದಿನ ಅಲ್ಲಿ ಒಂದು ಟ್ರಸ್ಟ್ ಇದೆ. ಪಂಜಾಬಿನ ಗೃಹ ಮಂತ್ರಿಯವರು ಇಲ್ಲಿನ ಖಾಯಂ ಟ್ರಸ್ಟಿಗಳಲ್ಲೊಬ್ಬರು. ಮುಖರ್ಜಿಯವರ ಮೊಮ್ಮಗ ಸುಕುಮಾರ್ ಮುಖರ್ಜಿಯವರು ಇದರ ಉಸ್ತುವಾರಿ ಟ್ರಸ್ಟಿಗಳು. ಬಾಲ್ಯ ಮತ್ತು ಹದಿಹರೆಯವನ್ನು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಮ್ಮ ತಾತನವರ ಜೊತೆಯಲ್ಲಿಯೇ ಕಳೆಯುತ್ತಾ ನಿತ್ಯವೂ ತಮ್ಮ ತಾತನವರ ಹುಮ್ಮಸ್ಸು, ಹಟ ಮತ್ತು ಶ್ರಮದಿಂದ ಜಲಿಯನ್‌ವಾಲಾ ಬಾಗ್ ಇಂಚಿಂಚೇ ಬೆಳೆಯುವುದನ್ನು ಕಂಡಿರುವ ಸುಕುಮಾರ್ ಈಗ ತಮ್ಮ ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಜಲಿಯನ್‌ವಾಲಾ ಬಾಗ್‌ನ ಒಂದು ತುದಿಯಲ್ಲೇ ವಾಸವಿದ್ದಾರೆ. ನಾನು ಅವರನ್ನು ಭೇಟಿಯಾದ ದಿನ ಅವರ ತಾಯಿಗೆ ಅನಾರೋಗ್ಯವಿತ್ತು. ಅಲ್ಲಿಯೇ ಮೇಜಿನ ಹಿಂದೆ ಚಾರುಪಾಯಿ ಮಂಚದಲ್ಲಿ ಮಲಗಿದ್ದರು. ಸುಕುಮಾರ್ ಅವರ ಮಗಳು ಬೆಂಗಳೂರಿನಲ್ಲಿ ಎಮ್‌ಬಿಏ ಓದುತ್ತಿದ್ದರು. ತಾತನವರ ಆದರ್ಶವನ್ನು ಮೈಗೂಡಿಸಿಕೊಂಡಿರುವ ಸುಕುಮಾರ್ ಅವರಿಗೆ ಇಂದಿನ ಪೀಳಿಗೆ ಜಲಿಯನ್‌ವಾಲಾ ಭಾಗ್‌ಅನ್ನು ಭಾವನಾತ್ಮಕ ಸಂಕೇತವಾಗಿ ನೋಡದೆ ಪ್ರವಾಸೀ ತಾಣವಾಗಿ ಮಾತ್ರ ನೋಡುತ್ತಿರುವುದರ ಬಗ್ಗೆ ಅಸಮಾಧಾನವಿದೆ. ನೋವಿದೆ.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ನೆನಪಿನಲ್ಲಿ ಮರುಗುವ ಮನಸ್ಸನ್ನು ಅಲ್ಲಿಯೇ ಇರುವ 170 ವರ್ಷ ವಯಸ್ಸಿನ ಆಲದಂತಹ ಮರದ ನೆರಳಿಗೆ ಒಪ್ಪಿಸಿದರೆ ಕೇಳಿಸುತ್ತೆ ಅಲ್ಲಿನ ಕಣ್ಣೀರ ಚರಿತ್ರೆ ಪಿಸುಮಾತಿನಲ್ಲಿ, ಮೌನದಲ್ಲಿ. ಇಲ್ಲಿಂದ ಹೊರಟಿದ್ದು ಇಲ್ಲಿಂದ 4 ಗಂಟೆಗಳ ಪ್ರಯಾಣದ ದೂರದಲ್ಲಿ ಡಾಲ್ ಹೌಸಿ ಗಿರಿಧಾಮಕ್ಕೆ. ಒಂದಷ್ಟು ಪ್ಯಾರ ಗ್ಲೈಡಿಂಗ್ ಮಾಡಿ, ಪಹಾಡಿ ಜನರನ್ನು ಮಾತನಾಡಿಸಿಕೊಂಡು, ಅಲ್ಲೇ ಇರುವ ಭಗತ್ ಸಿಂಘ್‌ನ ಸೋದರಮಾವ ಸರ್ದಾರ್ ಅಜಿತ್ ಸಿಂಘ್‌ನ ಮೆಮೋರಿಯಲ್‌ಗೆ ಹೋಗಿ ಆತನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದನ್ನು ತಿಳಿದ ಕಾಲುಗಳು ನಡೆದದ್ದು ಹೊರಟಿದ್ದು ಮತ್ತದೇ ಮನೆಯ ಕಡೆಗೆ, ಎಲ್ಲಿ ಸ್ವಾತಂತ್ರ್ಯದ ನಿಜದ ಅರಿವು ಮೂಡುವುದೋ ಅಲ್ಲಿಗೆ.

About The Author

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.  ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.

5 Comments

  1. ಪಂಡಿತಾರಾಧ್ಯ

    ನಾನು ನೋಡಬಯಸಿರುವ ಸ್ಥಳಗಳಲ್ಲಿ‌‌ ಜಲಿಯನ್‌ವಾಲಾಬಾಗ್ ಒಂದು. ನಾನೇ ಹೋಗಿಬಂದ ಅನುಭವವಾದಷ್ಟು.ಸಂತೋಷವಾಯಿತು.

    Reply
    • Anjali Ramanna

      ಧನ್ಯವಾದಗಳು
      ಅಂಜಲಿ ರಾಮಣ್ಣ

      Reply
  2. ವಾಸುದೇವ ಶರ್ಮಾ

    ಬಹಳ ಸೊಗಸಾಗಿದೆ ನಿರೂಪಣೆ. ಅಮೃತಸರಕ್ಕೆ ಜೀವನದಲ್ಲೊಮ್ಮೆ ಹೋಗಲೇಬೇಕೆನ್ನುವ ತುಡಿತಕ್ಕೆ ಇಂಬು ಕೊಟ್ಟಿತು.

    Reply
    • Anjali Ramanna

      ಧನ್ಯವಾದಗಳು
      ಅಂಜಲಿ ರಾಮಣ್ಣ

      Reply
  3. ಜಯಂತಿ

    ಅತ್ತರ್‌ ಕೌರ್‌ ಮತ್ತು ಮುಖರ್ಜಿ ಅವರ ವಿಷಯ ತಿಳಿದಿರಲಿಲ್ಲ. ಎಂದಿನಂತೆ ಸೊಗಸಾದ ನಿರೂಪಣೆ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ