Advertisement
ಅನಿವಾಸಿ ಆಸ್ಟ್ರೇಲಿಯಾ ಪತ್ರ

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಪ್ರತಿಯೊಬ್ಬ ಪ್ರಜೆಗೂ ಒಂದು ಓಟು. ಅತಿ ಹೆಚ್ಚು ಓಟು ಬಂದ ಅಭ್ಯರ್ಥಿ ಗೆಲ್ಲುವುದು ಇಂಡಿಯಾದ ಓಟಿನ ಪದ್ಧತಿಯಲ್ಲವೆ? ಇಲ್ಲಿ ಅತಿ ಹೆಚ್ಚು ಓಟು ಪಡೆದವರು ಶೇಕಡಾವಾರು ಅಲ್ಪಸಂಖ್ಯೆಯ ಓಟು ಪಡೆದಿರಬಹುದು. ಎಷ್ಟು ಜನ ಕಣದಲ್ಲಿದ್ದಾರೆ ಎಂಬುದರ ಮೇಲೆ ಅತಿ ಸಣ್ಣ ಪ್ರಮಾಣದ ಓಟು ಬಂದವರೂ ಗೆಲ್ಲಬಹುದು. ಶೇಖಡಾ 40ರಷ್ಟು ಜನ ಓಟು ಹಾಕಿದ ಒಂದು ಚುನಾವಣೆಯಲ್ಲಿ 10 ಅಭ್ಯರ್ಥಿಗಳು ಇದ್ದರೆ, ಎಲ್ಲರಿಗೂ ಸಮನಾಗಿ ಓಟು ಹಂಚಿಕೆಯಾಗಿದ್ದರೆ, ಶೇಖಡ 10ರ ಮೇಲೆ ಒಂದು ಓಟು ಬಂದವರೇ ಗೆಲ್ಲಬಹುದು. ಅಂದರೆ ಒಟ್ಟು ಓಟುಗರಲ್ಲಿ ಶೇಖಡಾ ೪ರಷ್ಟು ಓಟು ಗೆಲ್ಲಲು ಸಾಕಾಗುವ ಸಾಧ್ಯತೆ ಇದೆ. ಮತ್ತು ‘ಓಟು ಬ್ಯಾಂಕನ್ನು’ ತನ್ನೆಡೆಗೆ ತಿರುಗಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಇವನ್ನು ತಪ್ಪಿಸಲೋಸುಗ ಆಸ್ಟ್ರೇಲಿಯಾದ ಓಟಿನಲ್ಲಿ ಎರಡು ಅಂಶಗಳು ಇವೆ. ಮೊದಲನೆಯದು ಖಡ್ಡಾಯ ಓಟು (ಸರಿಯೋ ತಪ್ಪೋ ವಿವಾದವಿದೆ, ಅದು ಇಲ್ಲಿ ಅಪ್ರಸ್ತುತ). ಎರಡನೆಯದು ಪ್ರಿಫರೆನ್ಶಿಯಲ್ ಓಟಿಂಗ್ ಎಂಬ ಪದ್ಧತಿ. ಈ ಪದ್ಧತಿ ಆಸ್ಟ್ರೇಲಿಯಾ ಒಂದೇ ಕಡೆ ಅಲ್ಲದೆ ಬೇರೆಡೆಗಳಲ್ಲೂ ಇದೆ.

ಆಸ್ಟ್ರೇಲಿಯಾದಲ್ಲಿ ಚಾಲನೆಯಲ್ಲಿರುವ ಈ ಪ್ರಿಫರೆನ್ಶಿಯಲ್ ಪದ್ಧತಿಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಒಟ್ಟು ಬಿದ್ದ ಓಟಿನ ಶೇಖಡ 50ರ ಮೇಲೆ ಒಂದು ಓಟು ಬರಲೇ ಬೇಕು. ಅದು ಸಾಧ್ಯವಾಗುವುದು ಹೀಗೆ. ಓಟು ಹಾಕುವಾಗ ನಾವು ಒಬ್ಬರಿಗೆ ಮಾತ್ರ ಓಟು ಹಾಕುವುದಿಲ್ಲ. ಎಲ್ಲರಿಗೂ ಓಟು ಹಾಕುತ್ತೇವೆ. ಅಂದರೆ ನನ್ನ ಆಯ್ಕೆಯ ಅಭ್ಯರ್ಥಿಗೆ ಒಂದನೇ ಅಂಕಿ ಹಾಕುತ್ತೇವೆ. ಎರಡನೇ ಆಯ್ಕೆಯ ಅಭ್ಯರ್ಥಿಗೆ ಎರಡನೇ ಅಂಕಿ. ಹೀಗೆ ಇಷ್ಟವಿಲ್ಲದವರಿಗೆ ಕಡೆಯ ಅಂಕಿ. ಅಂದರೆ, ಇಷ್ಟವಿರುವವರನ್ನು ಆಯುವುದಷ್ಟೇ ಅಲ್ಲ. ಇಷ್ಟವಿಲ್ಲದವರನ್ನು ನಮ್ಮ ಓಟಿನಲ್ಲಿ ಕಡೆಯಲ್ಲಿ ಇಡವುದು. ಅವರು ಗೆಲ್ಲಬಾರದು ಎಂಬ ಇಚ್ಛೆಯನ್ನು ಹೇಳಿದಂತೆ ಅದು. ಮತ್ತು ನನ್ನ ಮೊದಲ ಓಟು ಪಡೆದವರು ಗೆಲ್ಲದಿದ್ದರೆ, ಇವರಾಗಬಹುದು ಎಂಬ ಇಚ್ಛೆ ಹೇಳಿದಂತೆ. ಆ ಇಚ್ಛೆ ಹೇಗೆ ಪರಿಗಣಿಸಲಾಗುತ್ತದೆ ಎಂಬುದೂ ಮುಖ್ಯ.

ಓಟು ಹಾಕುವಾಗ ಕೊಟ್ಟ ಅಂಕಿಗಳನ್ನು ಹೇಗೆ ಎಣಿಸುತ್ತಾರೆಂದು ನೋಡಿ. ಮೊದಲಿಗೆ ಮೊದಲ ಅಂಕಿ ಪಡೆದವರ ಓಟನ್ನೆಲ್ಲಾ ಎಣಿಸುತ್ತಾರೆ. ಆಗಲೇ ಯಾರಿಗಾದರೂ ಶೇಖಡಾ 50ರ ಮೇಲೆ ಒಂದು ಓಟು ಬಂದಿದೆ ಅಂತಿಟ್ಟುಕೊಳ್ಳಿ. ಅವರು ಗೆಲ್ಲುತ್ತಾರೆ. ಆಗ ಉಳಿದ ಆಯ್ಕೆಯನ್ನು ನೋಡುವ ಪ್ರಮೇಯ ಬರುವುದಿಲ್ಲ. ಇದನ್ನು ಪ್ರೈಮರಿ ಓಟಲ್ಲಿ ಗೆದ್ದವರು ಎನ್ನುತ್ತಾರೆ ಮತ್ತು ಈ ಬಗೆಯ ಗೆಲುವು ತುಂಬಾ ಗೌರವಯುತವಾದ್ದು.

ಯಾರಿಗೂ ಶೇಖಡಾ 50ರಷ್ಟು ಮತ ಬರಲಿಲ್ಲ ಅಂತಿಟ್ಟುಕೊಳ್ಳಿ. ಆಗ ಅತಿ ಕಡಿಮೆ ಒಂದನೇ ಅಂಕಿ ಓಟು ಪಡೆದವರನ್ನು ಡ್ರಾಪ್ ಮಾಡುತ್ತಾರೆ. ಡ್ರಾಪ್ ಮಾಡಿದ ಅಭ್ಯರ್ಥಿಯ ಓಟಿನ ಚೀಟಿಯಲ್ಲಿ ಎರಡನೇ ಸ್ಥಾನ ಪಡೆದವರಿಗೆ ಅವರ ಮತವನ್ನು ಹಂಚುತ್ತಾರೆ. ಈಗಲೂ ಶೇಖಡಾ 50ರಷ್ಟು ಮತ ಯಾರಿಗೂ ಬರದಿದ್ದರೆ, ಅತಿ ಕಡಿಮೆ ಬಂದ ಎರಡನೆಯವರನ್ನು ಡ್ರಾಪ್ ಮಾಡಿ ಅವರ ಚೀಟಿಯಲ್ಲಿ ಎರಡನೇ ಸ್ಥಾನ ಪಡೆದವರಿಗೆ ಅವರ ಓಟನ್ನು ಹಂಚುತ್ತಾರೆ. ಎರಡನೆಯ ಸ್ಥಾನದ ಹಂಚಿಕಯಾದ ಮೇಲೂ ಯಾರಿಗೂ ಶೇಖಡಾ ೫೦ರ ಮೇಲೆ ಒಂದು ಓಟು ಬರದಿದ್ದರೆ, ಮೂರನೇ ಸ್ಥಾನದ ಓಟುಗಳನ್ನು ಮೊದಲಿನಂತೇ ಹಂಚುತ್ತಾರೆ. ಹೀಗೆ ಮಾಡುತ್ತಾ ಒಬ್ಬರಿಗಾದರೂ ಶೇಖಡಾ ೫೦ರ ಮೇಲೆ ಒಂದು ಓಟು ಬರುವುದು ಖಾತ್ರಿಯಾದಂತೆ ಆಗುತ್ತದೆ. ಇಷ್ಟೆಲ್ಲಾ ಹಂಚಿಕೆಯಾಗಿ ಕೊನೆಯಲ್ಲಿ, ಇಬ್ಬರಿಗೆ ಸಮ ಓಟು ಬಂದ ನಿದರ್ಶನವಿಲ್ಲ. ಬಹುಶಃ ಹಾಗಾಗುವ ಪ್ರಾಬಬಲಿಟಿಯೇ ತುಂಬ ಸಣ್ಣದಿರಬೇಕು. ಈ ಪದ್ಧತಿಯನ್ವಯ ಮೊದಲ ಸುತ್ತಿನ ಎಣಿಕೆಯಲ್ಲಿ ಎರಡನೆಯದೋ, ಮೂರನೆಯದೋ ಸ್ಥಾನದಲ್ಲಿದ್ದೂ ಅಭ್ಯರ್ಥಿ ಕಡೆಯಲ್ಲಿ ಗೆಲ್ಲುವುದು ಸಾಧ್ಯವಿದೆ.

5 ಜನ ಕಣದಲ್ಲಿರುವ 100 ಓಟಿರುವ ಚುನಾವಣೆಯ ಒಂದು ನಿದರ್ಶನ:

ಹೀಗಾಗಿ, ಓಟು ಹಾಕುವವರ ಇಷ್ಟದ ಜತೆಗೆ ಅವರ ಅನಿಷ್ಟವನ್ನೂ ಗಣನೆಗೆ ತೆಕ್ಕೊಂಡಂತೆ ಆಗುತ್ತದೆ. ಯಾಕೆಂದರೆ ಅತಿ ಹೆಚ್ಚು ಜನರು ತಮಗೆ ಇಷ್ಟವಿಲ್ಲದ ಯಾರಿಗಾದರೂ ಕಡೆಯ ಸ್ಥಾನವನ್ನು ಕೊಟ್ಟಿದ್ದರೆ, ಅವರಿಗೆ ಕಡೆಯ ಸುತ್ತಿನವರೆಗೂ ಓಟಿನ ಹಂಚಿಕೆಯಲ್ಲಿ ಯಾವುದೇ ಲಾಭವಿಲ್ಲ. ಅವರು ಗೆಲ್ಲುವ ಸಾಧ್ಯತೆ ಇಲ್ಲವೆಂದೇ ಹೇಳಬೇಕು. ನಮ್ಮ ಓಟು ಗೆಲ್ಲಿಸುವುದಷ್ಟೇ ಅಲ್ಲ ಸೋಲನ್ನೂ ಈ ಮೂಲಕ ಖಾತ್ರಿ ಮಾಡಬಹುದು. ಅಷ್ಟೇ ಅಲ್ಲ, ‘ಒಬ್ಬರಿಗೆ ಒಂದೇ ಓಟು’ ಹುಟ್ಟು ಹಾಕುವ ‘ಓಟು ಬ್ಯಾಂಕು’ ಇಲ್ಲಿ ರಾಜಕಾರಣಿಗಳಿಗೆ ಕೈಗೆಟುಕುವುದು ಸ್ವಲ್ಪ ಕಷ್ಟವಾಗುಬಹುದು.
ಹಾಗೆಯೇ ಈ ಪದ್ಧತಿಯ ತೊಂದರೆ, ಅತಿ ಹೆಚ್ಚು ಜನರು ಕಣದಲ್ಲಿದ್ದರೆ ಎಲ್ಲರಿಗೂ ಅಂಕಿ ಹಾಕುವುದು ಸುಲಭವಲ್ಲ. ಆಗ ಅಭ್ಯರ್ಥಿಗಳು ತಾವೇ ನಿರ್ಧರಿಸಿಕೊಂಡು ಮೊದಲೇ ಪ್ರಚುರಪಡಿಸಿದ ಪ್ರಿಫರೆನ್ಸಸ್ ಬಳಸಬಹುದು. ಅಂದರೆ, ನಾನು ಓಟು ಹಾಕಿದ ಅಭ್ಯರ್ಥಿ ತನ್ನ ಓಟಿನ ಹಂಚಿಕೆಯ ಸರದಿಯನ್ನು ಮೊದಲೇ ನಮಗೆ ಹೇಳುವುದು. ಅದನ್ನು ನಾವು ಅನುಸರಿಸಬೇಕೆಂಬ ತಾಕೀತೇನೂ ಇಲ್ಲ.
ಇಂಥ ಓಟಿನ ಪದ್ಧತಿಯಲ್ಲಿ ಗೆದ್ದವರು ಸರ್ಕಾರ ಕಟ್ಟುತ್ತಾರೆ. ಆದರೆ, ವೆಸ್ಟ್‌ಮಿನ್ಸ್‌ಟರ್‍ ಪದ್ಧತಿಯನ್ನು ಇಂಗ್ಲೆಂಡಿನಿಂದ ಬಳುವಳಿ ಪಡೆದ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಸರ್ಕಾರದ ಸಂರಚನೆಯಲ್ಲಿ ಇರುವ ನನ್ನ ಒಂದೆರಡು ಅನುಮಾನ ಮತ್ತು ಆತಂಕವನ್ನು ಬೇರೊಮ್ಮೆ ಹಂಚಿಕೊಳ್ಳುತ್ತೇನೆ.

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ